ಅಂಕಣ

“ಯಾನ”ದ ಜೊತೆ ಮಳೆಗಾಲದ ಸಂಜೆ…

ಶ್ರೀ ಎಸ್ ಎಲ್ ಭೈರಪ್ಪನವರಿಂದ ರೂಪುಗೊಂಡಂತಹ ಕಾದಂಬರಿ ‘ಯಾನ’.. ನನ್ನ ಬುದ್ಧಿಮಟ್ಟಕ್ಕೆ ನಿಲುಕಿದಷ್ಟನ್ನು ತಮ್ಮೊಂದಿಗೆ ಹಂಚಿಕೊಳ್ಳುವಾಸೆ, ಅದಕ್ಕಾಗಿಯೇ ಈ ಲೇಖನ..

ಬರೆಯುವಿಕೆಯನ್ನ ತಪಸ್ಸಂತೆ ಸ್ವೀಕರಿಸಿದವರಲ್ಲಿ ಶ್ರೀಯುತರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಬಹುಶಃ ಇಂಥದ್ದೊಂದು ವಸ್ತುವನ್ನು ಇಷ್ಟು ಸಮರ್ಥವಾಗಿ ಇವರು ಮಾತ್ರವೇ ಬರೆಯಲಿಕ್ಕೆ ಸಾಧ್ಯ ಅನಿಸುತ್ತದೆ. ವಿಭಿನ್ನ ದೃಷ್ಟಿಕೋನದಲ್ಲಿ ಎಲ್ಲಿಯೂ ಲಯ ತಪ್ಪದಂತೆ ಒಂದು ವಿಷಯವನ್ನು ಮಂಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಕಾದಂಬರಿಯಲ್ಲಿ ಎಲ್ಲವುಗಳ ಸಮಾಗಮವಿದೆ. ಅವರೇ ಹೇಳಿರುವಂತೆ, ಇದು ಕೇವಲ ವಿಜ್ಞಾನದ ಕತೆಯಲ್ಲ; ಯಾವುದೇ ವರ್ಗಕ್ಕೂ ಸೇರುವುದಿಲ್ಲ. ಮನುಷ್ಯನ ಅನುಭವಗಳ ಶೋಧದ ಗುಚ್ಛ ಇದು, ಅಸ್ತಿತ್ವದ ಹುಡುಕಾಟ ಇದು. ಒಂದಷ್ಟು ನಂಬಿಕೆಗಳನ್ನ ಪ್ರಶ್ನಿಸುತ್ತಲೇ ಅದರಾಳಕ್ಕೆ ನಮ್ಮನ್ನೂ ಇಳಿಸಿ, ಮತ್ತೆ ಅಲ್ಲೇ ಉತ್ತರವನ್ನೂ ದೊರಕಿಸುವ ಅವರ ಪಾಂಡಿತ್ಯಕ್ಕೆ ಯಾರಾದರೂ ಶರಣಾಗಲೇಬೇಕು. ಒಂದು ಕಾದಂಬರಿ ಬರೆಯುವಾಗ ಪೂರ್ವಭಾವಿಯಾಗಿ ಒಂದಷ್ಟು ಸಂಶೋಧನೆಗಳಿರುತ್ತವಲ್ಲಾ, ಬಹುಶಃ ಮತ್ತ್ಯಾರೂ ಒಂದು ಕಾದಂಬರಿಗಾಗಿ ಇಷ್ಟು ಆಳಕ್ಕಿಳಿಯುವುದಿಲ್ಲವೇನೋ; ಕೇವಲ ಆಳವಲ್ಲ, ವಿಸ್ತಾರಕ್ಕೂ ಕೂಡ…

ಅಸ್ತಿತ್ವದ ಹುಡುಕಾಟದ ಈ ಕತೆ ಒಂದು ವಿಶಿಷ್ಟ ವಿಷಯದೊಂದಿಗೆ ಶುರುವಾಗುತ್ತದೆ. ಅಕ್ಕ ಮತ್ತು ತಮ್ಮನ ನಡುವಿನ ಮದುವೆ..! ಅಲ್ಲಿಂದಲೇ ಕಾದಂಬರಿ ನನ್ನನ್ನ ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿತು. ಮೇಲ್ನೋಟಕ್ಕೆ ನಮ್ಮ ನಂಬಿಕೆಗಳಿಗೆ ವಿರುದ್ಧವಾಗಿರುವಂತೆ ತೋರಿದರೂ ಕೊನೆಯಲ್ಲಿ ಇದಕ್ಕೆ ನ್ಯಾಯ ಒದಗಿಸುತ್ತಾರೆ. ನಮ್ಮೆಲ್ಲರ ಮನಸುಗಳ ಪಾವಿತ್ರ್ಯವನ್ನ ಎತ್ತಿ ಹಿಡಿಯುತ್ತಾ ಭಾರತೀಯತೆಯನ್ನ ಮತ್ತೆ ಮತ್ತೆ ಪ್ರತಿಬಿಂಬಿಸುತ್ತಾರೆ. ಕರ್ತವ್ಯ ಮತ್ತು ನೈತಿಕತೆಯ ವಿಷಯ ಬಂದಾಗ ಕರ್ತವ್ಯವನ್ನೇ ಮೊದಲಾಗಿಸಿ, “ಕ್ಷೇತ್ರೇ ಕ್ಷೇತ್ರೇ ಧರ್ಮಂ ಕುರು” ಎಂಬ ತತ್ತ್ವಕ್ಕೆ ಒತ್ತು ಕೊಡುತ್ತಾರೆ. ಒಂದು ವಿಶಿಷ್ಟ ಕರ್ತವ್ಯವನ್ನು ಪೂರೈಸಬೇಕಾದ ಹೆಣ್ಣೊಬ್ಬಳಿಗೆ ನೈತಿಕತೆ ಮತ್ತು ಕರ್ತವ್ಯದ ಬಗೆಗಿನ ದ್ವಂದ್ವಕ್ಕೆ ಸಮರ್ಥ ಧ್ವನಿ ಈ ಕಾದಂಬರಿಯಲ್ಲಿದೆ. ಕೇದಾರನಾಥನನ್ನು ಬಣ್ಣಿಸುತ್ತಾ ಒಂದಷ್ಟು ವರ್ಷಗಳ ಹಿಂದಿನ ಭಾರತದ ಭೌಗೋಳಿಕ ಸ್ಥಿತಿ ಮತ್ತು ಇಂದಿನ ಭಾರತದ ಪರಿಸ್ಥಿತಿಯನ್ನ ಹೇಳುತ್ತಾರೆ. ವಾಣಿಜ್ಯೀಕರಣದ ಸ್ಪರ್ಶದಿಂದ ಪವಿತ್ರ ಕ್ಷೇತ್ರಗಳಲ್ಲಾಗುವ ಬದಲಾವಣೆಗೆ ಮನಸ್ಸು ದುಃಖಿಸುತ್ತದೆ. ಜೊತೆಗೆ ವೈಜ್ಞಾನಿಕತೆಯ ಇಂದಿನ ಯುಗದಲ್ಲೂ ಅಪ್ಪಟ ಭಾರತೀಯ ನಾರಿಯೋರ್ವಳ ಮನಃಸ್ಥಿತಿ ಹೇಗಿರುತ್ತದೆ ಅನ್ನುವುದನ್ನ ಕತೆಯುದ್ದಕ್ಕೂ ಹೇಳುತ್ತಾ ಸಾಗುತ್ತಾರೆ; ಅದು ಭಾರತದ ಪೂಜನೀಯ ಸ್ಥಾನಕ್ಕೆ ಪುಷ್ಟಿ ಕೊಡುತ್ತದೆ. ಇಲ್ಲಿನ ನಾರಿ ಎಂದಿಗೂ ಪ್ರಬುದ್ಧಳು, ಮಾನಸಿಕವಾಗಿ ಹಾಗೇ ದೈಹಿಕವಾಗಿ ಅಷ್ಟೇ ಗಟ್ಟಿಗಳು ಅನ್ನುತ್ತಾ ಅವಳ ಮಹತ್ತತೆಯನ್ನ ಗಹನತೆಯನ್ನ ಪಾವಿತ್ರ್ಯತೆಯನ್ನ ಪ್ರತಿಧ್ವನಿಸುತ್ತಾರೆ.
ಜಗತ್ತಿನಲ್ಲಿ ಅದೆಷ್ಟೇ ಧರ್ಮಗಳಿದ್ದರೂ, ಎಲ್ಲ ನಂಬಿಕೆಗಳೂ ಆಯಾ ಕಾಲಘಟ್ಟಕ್ಕೆ, ಆಯಾ ಪರಿಸ್ಥಿತಿಗೆ ತಕ್ಕಂತೆ ಪುನರ್ರಚನೆಗೊಳ್ಳುತ್ತವೆ. ಆ ಧರ್ಮಗಳ ಹೊರತಾಗಿಯೂ ಕೆಲವೊಮ್ಮೆ ನಂಬಿಕೆಗಳು ಅಸ್ತಿತ್ವ ಪಡೆಯುತ್ತವೆ. ಪರಿಸ್ಥಿತಿಗೆ ತಕ್ಕಂತೆ, ಮನಃಸ್ಥಿತಿಗೆ ತಕ್ಕಂತೆ ಒಂದು ವಿಷಯ/ವಸ್ತು ವಿಭಿನ್ನ ಅರ್ಥವನ್ನು, ವಿಭಿನ್ನ ದೃಷ್ಟಿಕೋನವನ್ನು ಪಡೆಯುತ್ತದೆ. ಅದಕ್ಕೆ ಉದಾಹರಣೆಯೆಂಬಂತೆ ಅರಳು ಮಲ್ಲಿಗೆಯಂತೆ ಕಂಡ ನಕ್ಷತ್ರ ಇನ್ನೊಮ್ಮೆ ಉರಿವ ಜ್ವಾಲೆಯಾಗಿ ಕಾಣುವಿಕೆಯನ್ನ ಹೇಳಿದ್ದಾರೆ. ಇದು ಒಂದೇ ವ್ಯಕ್ತಿಯ ಬೇರೆ ಬೇರೆ ಮನಃಸ್ಥಿತಿ ಮತ್ತು ಸನ್ನಿವೇಶಗಳಲ್ಲಿನ ಎರಡು ವಿಭಿನ್ನ ದೃಷ್ಟಿಕೋನಗಳು. ಅನಂತದ ಬಗೆಗಿನ ಆಸಕ್ತಿ, ಅನಂತತೆಯಲ್ಲೇ ಕೊನೆಗೊಳ್ಳುತ್ತದೆ. ಆಸಕ್ತಿ ಅಥವಾ ಮಗ್ನತೆ ಕೊನೆಯಲ್ಲಿ ನಮ್ಮನ್ನೇ ತಾನಾಗಿಸಿಕೊಳ್ಳುತ್ತದೆ. ಅದಕ್ಕಾಗಿಯೇ ಇಲ್ಲಿನ ಪ್ರತಿ ಪಾತ್ರವೂ ಒಂದೊಂದು ಭಾವವಾಗಿ ರೂಪುಗೊಂಡಿದ್ದು.. ವೈಜ್ಞಾನಿಕತೆ ಅನ್ನುವುದು ಅನಂತದ ಹೊರತಾಗಿಲ್ಲ; ಅದೂ ಕೂಡ ಪೂರ್ಣತೆ ಮತ್ತು ಶೂನ್ಯತೆಗಳ ಹುಡುಕಾಟದಲ್ಲಿದೆ..

ಭೂಮಿಯಿಂದ ಆಚೆ ಬಂದಾಗ, ಹಿಮಾಲಯದಲ್ಲಿನ ಅವಘಡಗಳು ಬೆಂಗಳೂರಿನ ಸ್ವಂತ ಮನೆಯಲ್ಲಾಗುವ ಅವಘಡದಂತೆ ಏಕರೂಪವಾಗುತ್ತದೆ. ಒಂದು ಪರಿಧಿಯಿಂದಾಚೆಗೆ ಎಲ್ಲವೂ ಏಕತ್ವದಲ್ಲಿ ಸಂಗಮಿಸುತ್ತವೆ. ಪ್ರಜ್ಞೆ ಮತ್ತು ನೋವು ಒಂದಕ್ಕೊಂದು ಸಂಬಂಧಿಸಿದವುಗಳು.. ಇಲ್ಲಿ ಎಲ್ಲವೂ ನಮ್ಮ ಮನಃಸ್ಥಿತಿಗೆ ಸಂಬಂಧಿಸಿದ್ದು.. ನಮ್ಮ ಮನಃಸ್ಥಿತಿಗೆ ತಕ್ಕಂತೆ ಬದಲಾಗುತ್ತವೆ; ರೂಪುಗೊಳ್ಳುತ್ತವೆ.. ಒಂದಕ್ಕೊಂದು ಪರೋಕ್ಷವಾಗಿಯೋ ಅಪರೋಕ್ಷವಾಗಿಯೋ, ಆದರೆ ಪೂರಕವಾಗಿ.. ! ಎಲ್ಲಕ್ಕೂ ಒಂದು ಅಂತ್ಯ ಅನ್ನುವುದು ಇದ್ದೇ ಇದೆ; ಅದೇ ತರ ವೈಭವ ಅನ್ನುವುದು ಒಂದು ಸಲ ನೇಪಥ್ಯಕ್ಕೆ ಸರಿದ ಮೇಲೆ ಜನರ ಮನಸ್ಸಿನಿಂದಲೂ ಕ್ರಮೇಣ ಅದು ಮರೆಯಾಗುತ್ತದೆ, ಅದೇ ತರ ನಮ್ಮೆಲ್ಲರ ಬೇರೆ ಬೇರೆ ಸ್ತರಗಳ ಸ್ಥಿತಿಗಳು..

ಸೂರ್ಯನನ್ನು ಸತ್ಯದ ನೆಲೆಯಾಗಿರಿಸಿಕೊಂಡು ಅದರ ಮೂಲವನ್ನು ಹುಡುಕುತ್ತಾ, ಕಪ್ಪು ರಂಧ್ರದಲ್ಲಿನ ವಿಸ್ಮಯವನ್ನ ಹೆಣ್ಣೊಳಗಿನ ಭಾವಕ್ಕೆ ಏಕೀರ್ಭವಿಸುತ್ತಾ, ತತ್ತ್ವಜ್ಞಾನ ಮತ್ತು ಭೌತವಿಜ್ಞಾನಗಳೊಂದಿಗೆ ಸಮೀಕರಿಸಿಕೊಂಡು ಹೋಗುವಿಕೆಯ ಚೆಂದವನ್ನ ನಾವಾಗೇ ಅನುಭವಿಸಬೇಕು. ನನ್ನೊಳಗೇ ನಾನಾಗಿ, ನಾನೇ ನನ್ನೊಳಗಾಗುವ ಪ್ರಕ್ರಿಯೆ, ಹಾಗೆಯೇ ಮೆದುಳು ಭೌತ ವಸ್ತುವೇ ಅಥವಾ ಭೌತ ವಸ್ತು ಎನ್ನುವುದು ಬುದ್ಧಿಯ ರೂಪವೇ ಎನ್ನುವಂತಹ ಸಿದ್ಧಾಂತ.. ಸತ್ಯವೆಂದರೇ ಬರಿ ಭಾವವೇ? ಅಂತ ಪ್ರಶ್ನಿಸುತ್ತಾ, ಸಾರ್ವಕಾಲಿಕ ಮತ್ತು ಸಾರ್ವದೇಶಿಕ ಸತ್ಯವೆಂಬುದಿಲ್ಲ ಅನ್ನುವುದನ್ನ ಅನಾವರಣಗೊಳಿಸುತ್ತಾರೆ. ಅರಿವಿನ ಅರಿವಿಲ್ಲದೇ ಅಪೂರ್ಣ ಎಲ್ಲಾ, ಒಲಿಯದ ಪ್ರಕೃತಿಯಿಂದ ವಿಮುಖನಾದಾಗ ಮಾತ್ರವೇ ಅಧ್ಯಾತ್ಮದ ಅಗತ್ಯ ಕಾಣುವುದು ಅನ್ನುತ್ತಾ, ನಾವು ಭಾರತೀಯರು ಗಂಡು ಹೆಣ್ಣಿನ ಮಿಲನವನ್ನು ಕೇವಲ ಭೌತಿಕ ಕ್ರಿಯೆಯಾಗಿ ಕಾಣುವುದಿಲ್ಲ, ಅದು ಕೇವಲದ ಭೌತಿಕತೆ ಅಲ್ಲಾ, ಅದು ಆತ್ಮಗಳಿಗೆ ಸಂಬಂಧಿಸಿದ್ದು ಅನ್ನುವುದನ್ನ ಸೂಚ್ಯವಾಗಿ ಹೇಳಿದ್ದಾರೆ.. ಹೀಗೇ ಭೌತವಿಜ್ಞಾನ, ತತ್ತ್ವಜ್ಞಾನ, ಖಗೋಳ, ಭೂಗೋಳ, ಮನಃಶ್ಶಾಸ್ತ್ರ ಹೀಗೆ ಹತ್ತು ಹಲವು ಮಜಲುಗಳ ಪ್ರಬುದ್ಧ ಅಂಶಗಳನ್ನು ಒಂದೇ ಕಡೆ ಕಲೆ ಹಾಕಿದ್ದು ಈ ಕಾದಂಬರಿಯಲ್ಲಿ ಕಂಡು ಬರುತ್ತದೆ..

Facebook ಕಾಮೆಂಟ್ಸ್

ಲೇಖಕರ ಕುರಿತು

ಶ್ರೀ ತಲಗೇರಿ

ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸ,ಆಗಾಗ ಲೇಖನಿ,ಕುಂಚಗಳ ಸಹವಾಸ..ಬದುಕಿನ ಬಣ್ಣಗಳಲ್ಲಿ ಪ್ರೀತಿಯ ಚಿತ್ರ ಬಿಡಿಸಿ ಖುಷಿಪಡುತ್ತ,ಶಬ್ದಗಳಿಗೆ ಜೀವ ಕೊಡುವ ಪ್ರಯತ್ನದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿರುವ ಕನಸು ಕಂಗಳ ಹುಡುಗ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!