“ಇನ್ನೂ ಸ್ವಲ್ಪ ಕಾಲ ಬದುಕಿರಲು ಏನು ಮಾಡಬೇಕೋ ಅದೆಲ್ಲವನ್ನೂ ಮಾಡತ್ತೇನೆ..” ಕ್ಲಿನಿಕಲ್ ಟ್ರಯಲ್’ಗೆ ಒಳಗಾಗಿರುವ ಒಬ್ಬ ಕ್ಯಾನ್ಸರ್ ಪೇಷಂಟ್ ಹೇಳಿದ ಮಾತಿದು. ಜ್ಯೂನೋ ಥೆರಪೆಟಿಕ್ ಎಂಬ ಕಂಪನಿಯೊಂದು ಕ್ಯಾನ್ಸರ್’ಗೆ ಒಂದು ಹೊಸ ಔಷಧಿಯನ್ನು ಕಂಡು ಹಿಡಿದಿದೆ. ಅದರ ಮೇಲೆ ಸಾಕಷ್ಟು ಪ್ರಯೋಗಗಳು ನಡೆಯುತ್ತಿದ್ದು, ಹಲವು ಕ್ಯಾನ್ಸರ್ ಪೇಷಂಟ್’ಗಳಿಗೆ ಅದನ್ನ ನೀಡಿ ಪರೀಕ್ಷಿಸಲಾಗುತ್ತಿದೆ. ಕೆಲ ದಿನಗಳ ಹಿಂದೆ ಅಷ್ಟೇ, ಈ ಎಕ್ಸ್’ಪೆರಿಮೆಂಟಲ್ ಡ್ರಗ್’ನ್ನು ಬಳಸುತ್ತಿರುವ ನಾಲ್ಕು ಲ್ಯುಕೇಮಿಯಾ ರೋಗಿಗಳ ಸಾವುಂಟಾಗಿದೆ. “ಇದು ಭಯವನ್ನುಂಟು ಮಾಡಿದರೂ ಕೂಡ, ನಾವು ಇಂತಹ ಚಾನ್ಸ್ ತೆಗೆದುಕೊಳ್ಳಲೇ ಬೇಕು” ಎನ್ನುತ್ತಾರೆ ಹಲವರು.
ಜ್ಯೂನೋ ಥೆರಪೆಟಿಕ್ ಕಂಪನಿ ಇಮ್ಯುನೋಥೆರಪಿಯ ಈ ಹೊಸ ಡ್ರಗ್’ನ್ನು CAR-T ಎಂದು ಕರೆದಿದೆ. ನಾಲ್ಕು ಜನರ ಸಾವನ್ನಪ್ಪಿದ್ದು ನಿಜವೇ ಆಗಿದ್ದರೂ, ಅದು ಪರಿಣಾಮಕಾರಿಯೇ ಅಲ್ಲ ಎಂದು ಕೂಡ ಹೇಳುವಂತಿಲ್ಲ. ಸಾಕಷ್ಟು ಕ್ಯಾನ್ಸರ್ ರೋಗಿಗಳ ಮೇಲೆ ಪರಿಣಾಮಕಾರಿಯಾದ ಪ್ರಭಾವ ಬೀರಿದೆ. ನಿಕೋಲಸ್ ವಿಲ್ಕಿನ್ಸ್ ಎಂಬ ೧೮ ವರ್ಷದ ಹುಡುಗ ಲ್ಯುಕೇಮಿಯಾದಿಂದ ಬಳಲುತ್ತಿದ್ದು, ಇದೇ ಡ್ರಗ್’ನಿಂದ ಈಗ ಗುಣಮುಖನಾಗುತ್ತಿದ್ದಾನೆ. ಮತ್ತೆ ಕಾಲೇಜಿಗೆ ಹೋಗುವ ತಯಾರಿಯಲ್ಲಿದ್ದಾನೆ. ಹಾಗಾಗಿ ಈ ಎಕ್ಸ್’ಪೆರಿಮೆಂಟಲ್ ಡ್ರಗ್’ಗಳು ಹೇಗೆ ಪ್ರಭಾವ ಬೀರುತ್ತವೆ ಎಂಬುದು ಹೇಳುವುದು ಕಷ್ಟ. ಅಲ್ಲದೇ, ಇದು ಅಧಿಕೃತವಾದ ಔಷಧಿ ಎನಿಸಿಕೊಳ್ಳಲು ಸಾಕಷ್ಟು ಸಮಯ ಬೇಕು. ಸಾಕಷ್ಟು ಪ್ರಯೋಗಗಳಿಗೆ ಒಳ ಪಡಬೇಕು.
ಸುಮಾರು ನಾಲ್ಕೈದು ವರ್ಷಗಳ ಹಿಂದೆ ನನ್ನ ಗೆಳತಿಯೊಬ್ಬಳು ಆಂಟಿ ಕ್ಯಾನ್ಸರಸ್ ಸಸ್ಯಗಳ ಮೇಲೆ ಪ್ರಾಜೆಕ್ಟ್ ಒಂದನ್ನು ಮಾಡುತ್ತಿದ್ದಳು. ಆಕೆಯ ಮನೆಗೆ ಹೋದಾಗ ಹೀಗೆ ಮಾತನಾಡುತ್ತಾ, “ಪ್ರಕೃತಿಯಲ್ಲಿ ಕ್ಯಾನ್ಸರ್’ನ್ನು ಗುಣಪಡಿಸುವ ಗುಣವುಳ್ಳ ಸಾಕಷ್ಟು ಸಸ್ಯಗಳಿದ್ದರೂ ಕೂಡ, ಕೀಮೋಗಿಂತ ಕಡಿಮೆ ಸೈಡ್ ಎಫೆಕ್ಟ್ ಇರುವಂತಹ ಒಂದು ಔಷಧಿಯನ್ನು ಕಂಡು ಹಿಡಿಯುವುದು ಕಷ್ಟವಾ?” ಎಂದು ಕೇಳಿದ್ದೆ. ಆಗ ಅವಳು ಹೇಳಿದ್ದು, “ಹೊಸ ಔಷಧಿಯನ್ನು ಕಂಡು ಹಿಡಿಯುವುದು ಅಷ್ಟೊಂದು ಕಷ್ಟ ಆಗದೇ ಇರಬಹುದು. ಆದರೆ ಅದನ್ನ ಅಧಿಕೃತಗೊಳಿಸುವುದು ಮಾತ್ರ ಸುಲಭದ ಮಾತಲ್ಲ. ಸ್ಪಾನ್ಸರ್ ಬೇಕು, ಮಿಲಿಯನ್, ಬಿಲಿಯನ್’ಗಳಷ್ಟು ಹಣ ಬೇಕು. ಜೊತೆಗೆ ಪ್ರಯೋಗಕ್ಕೆ ಒಳಗಾಗಲು ಜನರು ಬೇಕು. ಆ ಪ್ರಯೋಗಗಳು ಕೂಡ ಸಾಕಷ್ಟು ಹಂತಗಳಲ್ಲಿ ನಡೆಯುತ್ತೆ. ಮೊದಲು ಕಡಿಮೆ ಡೋಸ್’ನಿಂದ ಶುರು ಮಾಡಿ ನಂತರ ಅದನ್ನ ಹೆಚ್ಚಿಸುತ್ತಾ ಅದರ ಪರಿಣಾಮವನ್ನು ನೋಡುತ್ತಾರೆ. ಎಲ್ಲಾ ಕ್ಯಾನ್ಸರ್ ಪೇಷಂಟ್’ಗಳು ಇದಕ್ಕೆ ಒಪ್ಪುತ್ತಾರೆ ಅಂತ ಹೇಳಲಾಗುವುದಿಲ್ಲ. ಎಷ್ಟೋ ವರ್ಷಗಳೇ ಕಳೆದು ಹೋಗುತ್ತದೆ ಇದೆಲ್ಲಾ ಆಗಲು..” ಎಂದಳು. ಆಗಲೇ ಅರ್ಥವಾಗಿದ್ದು ಈ ಕಾರ್ಯಗಳೆಲ್ಲಾ ಎಷ್ಟು ಕಷ್ಟಕರವಾಗಿರುತ್ತದೆ ಅಂತ.
ಒಂದೆರಡು ವರ್ಷಗಳ ಹಿಂದೆ “ಸ್ಯಾನ್ ಡಿಯಾಗೋನ ಬಯೋಟೆಕ್ ಫರ್ಮ್ ಬಳಿ ಕ್ಯಾನ್ಸರ್’ಗೆ ಚಿಕಿತ್ಸೆ ಇದೆಯೆ?” ಎಂಬ ಶೀರ್ಷಿಕೆಯಡಿ ಒಂದು ಲೇಖನವನ್ನ ಓದಿದ್ದೆ. ಜೆನೆಲಕ್ಸ್ ಕಾರ್ಪೋರೇಷನ್ ಎಂಬ ಬಯೋಟೆಕ್ ಕಂಪನಿ ಕೂಡ ಹಲವು ವರ್ಷಗಳಿಂದ ಕ್ಯಾನ್ಸರ್’ಗೆ ಉತ್ತಮ ಔಷಧಿ ಕಂಡು ಹಿಡಿಯುವ ಪ್ರಯತ್ನದಲ್ಲಿದೆ. ಅವರ ಬಳಿ ವೈರಸ್ ಆಧರಿತ ಚಿಕಿತ್ಸೆಯೊಂದಿದೆ. ಆ ವೈರಸ್’ನ್ನು GL-ONC1 ಎಂದು ಹೆಸರಿಸಿದ್ದಾರೆ. ಈ ವೈರಸ್ ಆರೋಗ್ಯಕರ ಜೀವಕೋಶಗಳಿಗೆ ಯಾವುದೇ ಹಾನಿ ಮಾಡದೇ ಕೇವಲ ಕ್ಯಾನ್ಸರ್ ಸೆಲ್’ಗಳನ್ನ ಮಾತ್ರ ನಾಶಪಡಿಸುತ್ತದೆ. ಸಾಮಾನ್ಯವಾಗಿ ಕೆಲವು ಔಷಧಿಗಳು ಇಲಿಗಳ ಮೇಲೆ ಪ್ರಯೋಗಿಸಿದಾಗ ಪರಿಣಾಮಕಾರಿ ಎನಿಸಿದ್ದರೂ, ಮನುಷ್ಯನಲ್ಲಿ ಅಷ್ಟೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಆದರೆ ಈ ವೈರಸ್ ಆಧಾರಿತ ಚಿಕಿತ್ಸೆ ಈಗಾಗಲೇ ಧನಾತ್ಮಕ ಫಲಿತಾಂಶವನ್ನು ನೀಡಲಾರಂಭಿಸಿದೆ.
ಜೇಮ್ಸ್ ಎಲ್ಡ್ರಿಡ್ಜ್ ಎಂಬ ೫೬ ವರ್ಷದ ಕ್ಯಾನ್ಸರ್ ರೋಗಿಯೊಬ್ಬ ಈ ವೈರಸ್ ಆಧಾರಿತ ಚಿಕಿತ್ಸೆಯಿಂದ ಗುಣುಮುಖನಾಗಿದ್ದಾನೆ. “ನಾನು ಈ ಟ್ರಯಲ್’ನ ಭಾಗವಾಗಿದ್ದಕ್ಕೆ ಸಂತಸ ಪಡುತ್ತೇನೆ. ಜೆನೆಲಕ್ಸ್ ನಿಜಕ್ಕೂ ನನ್ನ ಜೀವ ಉಳಿಸಿದೆ ಎಂದಿದ್ದಾನೆ.” ಈ ವೈರಸ್’ನ್ನು ಇಂಟ್ರಾವಿನಸ್’ನೊಂದಿಗೆ ಇಂಜೆಕ್ಟ್ ಮಾಡಲಾಗುತ್ತದೆ. ಈ ವೈರಸ್ ಕ್ಯಾನ್ಸರ್ ಸೆಲ್ಸ್’ನ್ನು ಹುಡುಕಿ ಅವುಗಳನ್ನ ಕೊಲ್ಲಲಾರಂಭಿಸಿಸುತ್ತದೆ. ಜೆನೆಟಿಕ್ ಇಂಜಿನಿಯರಿಂಗ್ ಮೂಲಕ ಈ ವೈರಸ್’ನ್ನು ಬೆಳಕು ಸೂಸುವಂತೆ ಮಾಡಲಾಗಿದೆ. ಇದರಿಂದ ಅದರ ಪ್ರಗತಿಯನ್ನು ಸರಿಯಾಗಿ ಗಮನಿಸಬಹುದು ಎನ್ನಲಾಗಿದೆ. ಇನ್ನೊಂದು ಮುಖ್ಯ ಅಂಶ ಇದರಲ್ಲಿ ಕೀಮೋವಿನಷ್ಟು ಸೈಡ್ ಎಫೆಕ್ಟ್ ಇಲ್ಲದಿರುವುದು. ವೈರಸ್ ದೇಹದಲ್ಲಿರುವಾಗ ಜ್ವರ ಕಾಣಿಸುಕೊಳ್ಳುವುದು ಅಷ್ಟು ಬಿಟ್ಟರೆ ಬೇರೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇರುವುದಿಲ್ಲ. ಜೆನೆಲಕ್ಸ್’ನ ಈ ಚಿಕಿತ್ಸೆ ಸಾಕಷ್ಟು ಪರಿಣಾಮಕಾರಿಯಾಗಿದ್ದರೂ ಅಧಿಕೃತಗೊಳ್ಳಲು ಇನ್ನೂ ಕೆಲ ವರ್ಷ ತೆಗೆದುಕೊಳ್ಳಬಹುದು.
ಹಾಗೆ ಈಗೊಂದು ತಿಂಗಳ ಹಿಂದೆ ಮೋನೋಕ್ಲೋನಲ್ ಆಂಟಿಬಾಡಿ (monoclonal antibody) ಬಗ್ಗೆ ಓದಿದ್ದೆ. ಆಂಟಿಬಾಡಿ, ಆಂಟಿಜೆನ್ ನಮ್ಮ ದೇಹದಲ್ಲಿ ಸಹಜವಾಗಿಯೇ ಇರುವಂತದ್ದು. ಆದರೆ ಈ monoclonal antibody’ನ್ನು ಪ್ರಯೋಗಾಲಯದಲ್ಲಿ ವಿಶೇಷವಾಗಿ ತಯಾರು ಮಾಡಲಾಗುತ್ತದೆ. ಕ್ಯಾನ್ಸರ್ ಸೆಲ್’ಗಳಲ್ಲಿ ಇರುವ ಕೆಲವು ಡಿಫೆಕ್ಟ್’ಗಳಿಗೆ ಹೋಗಿ ಅಂಟಿಕೊಳ್ಳುವಂತೆ ಇವುಗಳನ್ನು ಜೆನೆಟಿಕ್ ಇಂಜಿನಿಯರಿಂಗ್ ಮೂಲಕ ಹಲವು ವಿಶೇಷ ಬದಲಾವಣೆಗಳನ್ನ ಮಾಡಲಾಗಿದೆ. ಇದನ್ನ ಹೊರತಾಗಿ ನಮ್ಮ ದೇಹದಲ್ಲಿ ಸಹಜವಾಗಿರುವ ಆಂಟಿಬಾಡಿಗಳಂತಯೇ ಇದೆ.
ಸಾಮಾನ್ಯವಾಗಿ ನಮ್ಮ ರೋಗ ನಿರೋಧಕ ಶಕ್ತಿ ಹೊರಗಿನಿಂದ ಬಂದಿರುವ ಆಕ್ರಮಣಕಾರಿ ಜೀವಿ ಅಥವಾ ವಸ್ತುಗಳನ್ನ ತಡೆಗಟ್ಟುತ್ತದೆ. ಆದರೆ ಕ್ಯಾನ್ಸರ್ ಸೆಲ್’ನ್ನು ಶತ್ರು ಎಂದು ಗುರುತಿಸುವುದಿಲ್ಲ. ಆದರೆ ಈ monoclonal antibody’ಗಳು ಕ್ಯಾನ್ಸರ್ ಸೆಲ್’ಗೆ ಅಂಟಿಕೊಂಡು ಮಾರ್ಕ್ ಮಾಡುತ್ತದೆ. ಇದರಿಂದ ನಮ್ಮ ರೋಗ ನಿರೋಧಕ ಶಕ್ತಿ ಇದನ್ನ ಸುಲಭವಾಗಿ ಗುರುತಿಸುವಂತಾಗುತ್ತದೆ.
ಗ್ರೋತ್ ಫ್ಯಾಕ್ಟರ್ ಎಂಬ ರಾಸಾಯನಿಕವು ಜೀವಕೋಶದ ರೆಸೆಪ್ಟರ್’ಗೆ ಬಂದು ಸೇರಿಕೊಂಡು ಅವು ವಿಭಜಿಸುವಂತೆ ಸಿಗ್ನಲ್ ನೀಡುತ್ತದೆ. ಆದರೆ ಕ್ಯಾನ್ಸರ್ ಸೆಲ್’ಗಳು ತನ್ನ ಮೇಲ್ಮೈಯಲ್ಲಿ ಅತಿ ಹೆಚ್ಚು ರೆಸೆಪ್ಟರ್’ಗಳನ್ನ ಮಾಡಿಕೊಳ್ಳುವುದರಿಂದ ಸಾಮಾನ್ಯ ಜೀವಕೋಶಗಳಿಗಿಂತ ಹೆಚ್ಚು ವಿಭಜನೆಗೊಳಗಾಗುತ್ತದೆ. ಆದರೆ ಈ monoclonal antibody’ಗಳು ಇವುಗಳನ್ನ ಬ್ಲಾಕ್ ಮಾಡುತ್ತವೆ. ಅಲ್ಲದೇ ಇವುಗಳಿಂದ ಇತರ ಆರೋಗ್ಯಕರ ಜೀವಕೋಶಗಳಿಗೆ ಹಾನಿಯೂ ಇಲ್ಲ. ಹಾಗಂತ ಇವುಗಳಿಂತ ಸೈಡ್ ಎಫೆಕ್ಟ್ ಇಲ್ಲ ಅಂತೇನಲ್ಲ. ಕೀಮೋಗೆ ಹೋಲಿಸಿದರೆ ಕಡಿಮೆ ಎಂದು ಹೇಳಬಹುದು ಅಷ್ಟೆ. ಇದೂ ಕೂಡ ಅಧಿಕೃತವಾಗಿ ಎಲ್ಲ ಕಡೆ ಸಿಗಲು ಇನ್ನೂ ಎಷ್ಟು ವರ್ಷಗಳು ಬೇಕಾಗುವುದೋ ಗೊತ್ತಿಲ್ಲ.
ಕ್ಯಾನ್ಸರ್ ಎಷ್ಟೋ ಬಗೆಯ ಹೊಸ-ಹೊಸ ಚಿಕಿತ್ಸೆ, ಔಷಧಿಗಳನ್ನ ಕಂಡು ಹಿಡಿಯಲಾಗುತ್ತಲೇ ಇದೆ. ಆದರೆ ಅವುಗಳ ಕ್ಲಿನಿಕಲ್ ಟ್ರಯಲ್ ಮುಗಿದು, ಅಧಿಕೃತವಾಗಲು ಹಲವು ವರ್ಷಗಳೇ ಬೇಕು. ಕೀಮೋಥೆರಪಿ ಕೂಡ ಅಧಿಕೃತಗೊಳ್ಳಲು ಎಷ್ಟು ವರ್ಷಗಳನ್ನ ತೆಗೆದುಕೊಂಡಿದೆಯೋ ಏನೋ..?! ಎಷ್ಟು ಜನ ಕ್ಯಾನ್ಸರ್ ರೋಗಿಗಳು ತಮ್ಮೆಲ್ಲಾ ಗೊಂದಲಗಳ, ತಳಮಳಗಳ ನಡುವೆಯೂ ಈ ಟ್ರಯಲ್’ನಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರೋ ಅವರೆಲ್ಲರಿಂದಾಗಿಯೇ ಇಂದು ಕೀಮೋಥೆರಪಿ ಇದೆ. ಹೀಗೆ ಹಲವಾರು ಟ್ರಯಲ್’ಗೆ ಒಳಪಡುವವರಿಂದಲೇ ಮುಂದೆ ಕಡಿಮೆ ಸೈಡ್ ಎಫೆಕ್ಟ್ ಇರುವ ಚಿಕಿತ್ಸೆ ಕೂಡ ಬರಬಹುದು. ಕೀಮೋವಿನಿಂದ ಆಗದಿದ್ದಾಗ ಇದೂ ಒಂದು ಇರಲಿ ಅಂತ ಕ್ಲಿನಿಕಲ್ ಟ್ರಯಲ್’ಗೆ ಒಳಪಡುತ್ತಾರೆ ಎಂದು ನಾವು ಯೋಚಿಸಬಾರದು. ಅದೆಲ್ಲ ಏನೇ ಇದ್ದರೂ ಅಧಿಕೃತವಾಗದ ಒಂದು ಔಷಧಿಯನ್ನ, ತಮ್ಮ ದೇಹದ ಮೇಲೆ ಪ್ರಯೋಗ ನಡೆಸಲು ಅವಕಾಶ ಕೊಡುವುದಕ್ಕೂ ಧೈರ್ಯ ಬೇಕು. ಅಂಥವರಿಂದಲೇ ನಮಗೆ ಹೊಸ ಹೊಸ ಔಷಧಿಗಳು ಸಿಗುತ್ತಿರುವುದು ಎಂಬುದನ್ನ ಮರೆಯಬಾರದು. ಅಂಥವರಿಗಾಗಿ ನಾವೇನು ಮಾಡಬಹುದು? ಅಂತಹ ಟ್ರಯಲ್’ಗೊಳಪಟ್ಟ ಎಲ್ಲರಿಗೂ ಮನದಲ್ಲೇ ಒಂದು ಥ್ಯಾಂಕ್ಸ್ ಹೇಳಬಹುದು ಅಷ್ಟೇ.