ಅಂಕಣ

ಕಲ್ಪನೆಗೆ ಮೀರಿದ ಜಗತ್ತಿನತ್ತ ಒಂದು ಪಯಣ…!

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಪ್ರಸಿದ್ಧವಾದ ಗಾದೆ ನಿಮಗೆ ತಿಳಿದಿದೆ. ಲೋಕ ಜ್ಞಾನವನ್ನು ಪಡೆಯಲು ಇವೆರಡರಲ್ಲಿ ಯಾವುದಾದರು ಒಂದನ್ನು ರೂಢಿ ಮಾಡಿಕೊಳ್ಳಬೇಕು. ಪುಸ್ತಕಗಳು ಜೀವನಕ್ಕೆ ಬೇಕಾದ ಹಲವಾರು ಸಾರವನ್ನು ತಿಳಿಸಿದರೆಜಗತ್ತನ್ನು ಸುತ್ತುವುದರಿಂದ ಬದುಕು ಏನೆಂದು ಅರ್ಥವಾಗುತ್ತದೆ. ಆದರೆ ಈ ಗಾದೆಯ ಮಿತಿಯಾದರು ಎಷ್ಟು ಎಂದು ಯೋಚನೆ ಮಾಡಿದರೆದೇಶ ಎಂದರೆ ಬರೀ ಭೂಮಿ ಅಷ್ಟೇನಾ ಅಥವಾ ಈ ನಮ್ಮ ಬೃಹತ್ ಬ್ರಂಹಾಂಡವೇ?. ಹೌದು ಮನುಕುಲ ಭೂಮಿಯನ್ನು ಬಿಟ್ಟು ಹೊರ ಪ್ರಪಂಚಕ್ಕೆ ಕಾಲಿಟ್ಟಿದ್ದೇನೋ ಆಗಿದೆ.ಅಗಾಧವಾದ ಬ್ರಂಹಾಂಡದಲ್ಲಿ ಅದೆಷ್ಟೋ ವಿಧ ವಿಧವಾದ ಪ್ರಪಂಚಗಳಿವೆಯಂತೆ. ನಾವಿನ್ನೂ‌ ನಮ್ಮ ಪಕ್ಕದ ರಾಜ್ಯವನ್ನೇ ಸರಿಯಾಗಿ ನೋಡಿಲ್ಲ. ಪಕ್ಕದ ರಾಜ್ಯದ ಮಾತು ಬಿಡಿಕೆಲವರು ತಮ್ಮ ಪಕ್ಕದ ಊರನ್ನೇ ಸರಿಯಾಗಿ ನೋಡಿಲ್ಲಇನ್ನು ಈ ಬ್ರಂಹಾಂಡವನ್ನು ಸುತ್ತುವ ಮಾತೆಲ್ಲಿ.

ಖಗೋಳ ಶಾಸ್ತ್ರ ಹಾಗೂ ಖಗೋಳ ವಿಜ್ಞಾನ ಬಹಳ ರೋಮಾಂಚನವನ್ನು ನೀಡುವ ವಿಷಯಗಳು. ಆಳವಾಗಿ ಹೋದರೆ ಬಿಡಿಸಲಾಗದಷ್ಟು ಸಮಸ್ಯೆ ಹಾಗೂ ಪ್ರಶ್ನೆಗಳು ನಮ್ಮನ್ನು ಆವರಿಸಿಬಿಡುತ್ತವೆ. ಆದರೂ ಒಮ್ಮೆ ನೀವು ಈ ವಿಷಯಗಳ ಒಳಗೆ ಪ್ರವೇಶಿಸಿದರೆ ಖಂಡಿತ ಹೊರ ಬರಲು ಇಷ್ಟಪಡುವುದಿಲ್ಲ. ಅಗಾಧವಾದ ಪ್ರಪಂಚದಲ್ಲಿ ಮನುಷ್ಯನ ಇರುವಿಕೆಯೇ ವಿಚಿತ್ರವಾದ ಸಂಗತಿ. ಆದಿ ಅಂತ್ಯ ತಿಳಿಯಲಾರದೆ ಮನುಷ್ಯ ಎಷ್ಟೋ ವರ್ಷಗಳಿಂದ ಚಡಪಡಿಸುತ್ತಿದ್ದಾನೆ. ನೀವೆಂದಾದರು ನಿಮ್ಮ ತಲೆಯನ್ನೆತ್ತಿ ಕತ್ತಲೆ ತುಂಬಿದ ಆಕಾಶದತ್ತ ನಿಮ್ಮ ಕಣ್ಣು ಹಾಯಿಸಿದ್ದೀರಾ. ಇಲ್ಲವಾದರೆ ಇನ್ನು ತಡ ಮಾಡಬೇಡಿ ರಾತ್ರಿ ವೇಳೆ ಮನೆಯಿಂದ  ಹೊರ ಬಂದು ಒಮ್ಮೆ ಆಕಾಶದತ್ತ ನಿಮ್ಮ ಕಣ್ಣು ಹಾಯಿಸಿ‌ ನೋಡಿ. ಈ ಜಗತ್ತಿನ‌ ಮುಂದೆ ನಾವೆಲ್ಲ ಅದೆಷ್ಟು ಚಿಕ್ಕವರು ಅಂತ ಅನಿಸುತ್ತದೆ. ಹಾಗಂತ ಅಮಾವಾಸ್ಯೆ ದಿನ ನೋಡಿ ಬರೀ ಕತ್ತಲೆ ಅಂತಾ ನನ್ನನ್ನು ದೂರಬೇಡಿ.

ನೀವು ಎಲ್ಲಿಯಾದರು ಸುತ್ತಬೇಕು ಅಥವಾ ಪ್ರವಾಸ ಹೋಗಬೇಕು ಅಂದರೆ ಎಲ್ಲಿಗೆ ಹೋಗುತ್ತೀರಿ. ಹೆಚ್ಚೆಂದರೆ ಒಂದು ಸಾವಿರಎರಡು ಸಾವಿರ,ಮೂರುಐದು ಸಾವಿರ ಕಿಲೋಮೀಟರ್ ದೂರ ?. ಒಂದು ವೇಳೆ ಈ ಬ್ರಂಹಾಂಡವನ್ನು ಒಮ್ಮೆ ಸುತ್ತಿ ಬರಬೇಕು ಅಂತ ನಿಮ್ಮ ಮನಸ್ಸೇನಾದರು ಆಸೆ ಪಟ್ಟರೆ ಅದೆಷ್ಟು ಕೋಟಿ ಲಕ್ಷ ಸಾವಿರ ಕಿಲೋಮೀಟರ್ ನೀವು ಪ್ರಯಾಣ ಮಾಡಬೇಕೆಂದು ನಿಮಗೆ ತಿಳಿದಿದೆಯೇ ?  ಒಂದು ವೇಳೆ ಪ್ರಯಾಣ ಪ್ರಾರಂಭಮಾಡಿದರೆ ಎಷ್ಟು ದಿನಗಳು ಬೇಕಾಗಬಹುದು ಎಂಬುದು ನಿಮಗೆ ತಿಳಿದಿದೆಯೇ ಇದನ್ನು ಯೋಚನೆ ಮಡಲೂ ಅಸಾಧ್ಯ. ಮನುಷ್ಯನ ಜೀವಿತಾವದಿಯಲ್ಲಿ ಇದು ಅಸಾಧ್ಯ. ಎಸ್ ಎಲ್ ಭೈರಪ್ಪನವರು ಯಾನ ಕಾದಂಬರಿಯಲ್ಲಿ ಮನುಷ್ಯನ ಬ್ರಂಹಾಂಡ ಯಾನದ ಕಲ್ಪನೆಯನ್ನು ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ‌. ಚಂದ್ರನ ಮೇಲೆ ಕಾಲಿಟ್ಟಿರುವ ಮನುಷ್ಯ ಈಗ ಮಂಗಳನತ್ತ ಸಾಗಲು ತುದಿಗಾಲಲ್ಲಿ ನಿಂತಿದ್ದಾನೆ. ಹೀಗೇ ನಾವು ಮುಂದುವರಿದು ನಮ್ಮ ಸೌರಮಂಡಲವನ್ನು ಯಾವಾಗ ಬಿಟ್ಟು ಹೊರ ನಡೆಯುತ್ತೇವೆಯೋ ಆ ದೇವರೇ ಬಲ್ಲ. ಕೆಲವರಿಗೆ ಭೂಮಿ ಸದಾ ತಿರುಗುತ್ತಿದೆ ಅನ್ನೋ ವಿಷಯವನ್ನು ಅರಗಿಸಿಕೊಳ್ಳಲು ಇನ್ನೂ ಅಸಾಧ್ಯದ ವಿಷಯ. ಇನ್ನು ಈ ತೆರನಾದ ಬ್ರಂಹಾಂಡ ಸುತ್ತುವ ಆಸೆ ಎಲ್ಲಿಂದ ಬಂದೀತು. ಬೆಳಗ್ಗೆ ಎದ್ದು ತಯಾರಾಗಿಕೆಲಸಕ್ಕೆ ಹೋಗಿ ಕಷ್ಟ ಪಟ್ಟು ಕೆಲಸ ಮುಗಿಸಿ ಮತ್ತೆ ಮನೆಗೆ ಬಂದು ಊಟ ಮುಗಿಸಿ ಮಲಗಿದರೆ ಜೀವನದ ಒಂದು ದಿನ ಮುಗೀತು. ಹೀಗೇ‌ ನಮಗೇ ತಿಳಿಯದಂತೆ ಎಷ್ಟೋ ದಿನಗಳು ಕಳೆದು ಹೋಗಿ ಬಿಡುತ್ತವೆ. ಈ ಮಧ್ಯೆ ನಮ್ಮ ಭೂಮಿಯಿಂದ ಆಚೆ ಏನಿದೆ ಅನ್ನುವುದನ್ನು ತಿಳಿದುಕೊಂಡು ಏನಾಗಬೇಕು ಹೇಳಿ ಅನ್ನೋದು ಕೆಲವರ ಅಭಿಪ್ರಾಯ. ಅದೇನೇ ಇರಲಿ‌ ಕಡೇ ಪಕ್ಷ ನಮ್ಮ ಮನಸ್ಸಿನ‌ ಮೂಲೆಯಲ್ಲಿ  ಅಡಗಿರುವ ಕೆಲವೊಂದು ಪ್ರಶ್ನೆಗಳಿಗೆ ನಾವು ಸಾಯುವ ಮುನ್ನವಾದರು ಉತ್ತರ ಹುಡುಕಲು ಪ್ರಯತ್ನ ಮಾಡಿದರೆ ಒಂದು ರೀತಿಯ ನೆಮ್ಮದಿ ಸಿಗಬಹುದೇನೋ. ನಮ್ಮ ಬ್ರಂಹಾಂಡದ ಬಗ್ಗೆ ಒಂದಷ್ಟು ವಿಷಯವನ್ನು ತಿಳಿದುಕೊಳ್ಳುವ ಒಂದು ಸಣ್ಣ ಪ್ರಯಾಣ ಮಾಡಿ ಬರೋಣ.

ಈ ಜಗತ್ತು ಹೇಗೆ ಸೃಷ್ಟಿಯಾಯಿತು ಎಂಬ ಪ್ರಶ್ನೆಗೆ ಹಲವಾರು ಉತ್ತರಗಳಿವೆ‌. ಜಗತ್ತಿನ ಸೃಷ್ಟಿಯ ಹಿಂದೆ ಹಲವಾರು ಸಿದ್ಧಾಂತಗಳಿವೆ. ಅದರಲ್ಲಿ ಬಹುಮುಖ್ಯವಾಗಿರುವ ಹಾಗೂ ವಿಜ್ಞಾನಿಗಳು ಒಕ್ಕೊರಳಿನಿಂದ ಒಪ್ಪಿಕೊಂಡಿರುವ ಸಿದ್ಧಾಂತವೇ ಬಿಗ್ ಬ್ಯಾಂಗ್(ಮಹಾಸ್ಫೋಟ) ಸಿದ್ಧಾಂತ. ೧೩.೮ ಬಿಲಿಯನ್ ವರ್ಷಗಳ ಹಿಂದೆ ಒಂದು ಸಣ್ಣ ಕಣದಿಂದ  ಅಂದರೆ ಒಂದು ಸಣ್ಣ ಚೆಂಡಿನ ಆಕೃತಿಯಲ್ಲಿ ಅಡಗಿದ್ದ ಅಪಾರವಾದ ಶಕ್ತಿಯಿಂದ ಈ ಜಗತ್ತು ಸೃಷ್ಟಿಯಾಯಿತಂತೆ. ಅಂತೆಯೇ ಕಾಲ ಕ್ರಮೇಣ ನಕ್ಷತ್ರಗಳುಗ್ರಹಗಳುಧೂಮಕೇತುಗಳುಉಲ್ಕೆಗಳು ಹೀಗೆ‌ ಹತ್ತು ಹಲವಾರು ಬ್ರಂಹಾಂಡದ ಸದಸ್ಯರ ಸೃಷ್ಟಿಯಾಯಿತಂತೆ. ಈ ಜಗತ್ತಿನ ಸೃಷ್ಟಿ ಹೇಗಾಯಿತು ಅಂತ ಕಲ್ಪನೆಯ ಸಿದ್ಧಾಂತವನ್ನು ನೀಡಬಹುದೇ ಹೊರತು ಯಾರೂ ಹೋಗಿ ಪ್ರತ್ಯಕ್ಷವಾಗಿ ನೋಡಿಕೊಂಡು ಬಂದಿಲ್ಲ. ನಮ್ಮ ಕಲ್ಪನೆಯ ಆಧಾರದ ಮೇಲೆ ಹಲವಾರು ಸಿದ್ಧಾಂತಗಳು ಹುಟ್ಟಿಕೊಂಡಿವೆ. ಕೆಲವೊಂದು ಸಿದ್ಧಾಂತಗಳಿಗೆ ಪುರಾವೆಯೇ ಇಲ್ಲ. ಈ‌ ಬ್ರಹ್ಮಾಂಡದಲ್ಲಿ ಎಣಿಸಲು ಅಸಾಧ್ಯವಾದಷ್ಟು ನಕ್ಷತ್ರಗಳಿವೆ. ನಮ್ಮಂತೆಯೇ ಹಲವಾರು ವಿಚಿತ್ರವಾದ ಜೀವ ಸಂಕುಲಗಳಿವೆ.

ಈ ಬ್ರಂಹಾಂಡ ಅದೆಷ್ಟು ದೊಡ್ಡದೆಂದರೆಜಗತ್ತಿನಲ್ಲಿ ಅತೀ ವೇಗವಾಗಿ ಚಲಿಸುವ ಬೆಳಕಿಗೇ ಇನ್ನೂ ಈ ಬ್ರಂಹಾಂಡವನ್ನು ಸಂಪೂರ್ಣವಾಗಿ ಆವರಿಸಲು ಸಾಧ್ಯವಾಗಿಲ್ಲವಂತೆ. ನಮ್ಮ ಮೆದುಳಿಗೆ ಈ ಬ್ರಂಹಾಂಡ ಎಷ್ಟು ದೊಡ್ಡದಾಗಿದೆ ಎಂದು ಕಲ್ಪಿಸಿಕೊಳ್ಳಲು ಕಷ್ಟವಾಗಿದೆ ಯಾಕೆಂದರೆ ನಮಗೆ ಭೂಮಂಡಲವೇ ದೊಡ್ಡ ಪ್ರಪಂಚ. ಭೂಮಿಗೆ ಹತ್ತಿರವಿರುವ ಎರಡನೇ ನಕ್ಷತ್ರ ಪ್ರಾಕ್ಸಿಮಾ ಸೆಂಟೌರಿ(Proxima Centauri) ಯಿಂದ ಹೊರಟ ಬೆಳಕು ನಮ್ಮ ಭೂಮಂಡಲವನ್ನು ತಲುಪಲು ನಾಲ್ಕು ವರ್ಷಗಳು ಬೇಕು. ಇದರರ್ಥ ನಾವು ನೋಡುತ್ತಿರುವ ಪ್ರಾಕ್ಸಿಮಾ ಸೆಂಟೌರಿ ನಕ್ಷತ್ರ ನಾಲ್ಕು‌ ವರ್ಷಗಳ ಹಿಂದಿನದ್ದು. ಇದೆಂತಾ ವಿಚಿತ್ರ ಅನ್ನಿಸಬಹುದು. ಹೌದು ನಮಗೆ ಕಾಣುವ ಹಲವಾರು ನಕ್ಷತ್ರಗಳ ಕಥೆಯೂ ಇದೆ. ಎಷ್ಟೋ ವರ್ಷಗಳ ಹಿಂದೆ ಹೊರಟ ಬೆಳಕು ನಮ್ಮ ಭೂಮಂಡಲವನ್ನು ಇಂದು ತಲುಪುತ್ತಿದೆ. ಹಾಗಾದರೆ ನಾವು ನೋಡುತ್ತಿರುವ ನಕ್ಷತ್ರಗಳು ಈಗ ಹೇಗಿರಬಹುದು ಈಗಲು ಅವುಗಳು ಅದೇ ಜಾಗದಲ್ಲೇ ಕುಳಿತಿವೆಯೇ ಇದನ್ನು ತಿಳಿಯಲು ನಾವು ಹಲವಾರು ವರ್ಷ ಕಾಯಬೇಕು. ಹಾಗಾದರೆ ನಾವು ನೋಡುತ್ತಿರುವ ಬ್ರಂಹಾಂಡ ವರ್ತಮಾನದ್ದಲ್ಲ ಬದಲಾಗಿ ಭೂತಕಾಲದ್ದು.

೨೦ನೇ ಶತಮಾನದ ವರೆಗೂ ನಮಗೆ ಈ ಬ್ರಂಹಾಂಡದ ಬಗ್ಗೆ ನಿಖರವಾದ ಮಾಹಿತಿಯೇ ಇರಲಿಲ್ಲ. ಪುರಾವೆಗಳೇ ಇಲ್ಲದಿದ್ದಾಗ ಹಳೆಯ ಸಿದ್ಧಾಂತವನ್ನೇ ನಂಬಿಕೊಂಡು ಸಾಗಬೇಕು. ೨೦ ನೇ ಶತಮಾನದವರೆಗೂ ಈ ಬ್ರಂಹಾಂಡ ಸ್ಥಿರವಾಗಿದೆವಿಸ್ತಾರವಾಗುತ್ತಿಲ್ಲ ಎಂದೇ ನಂಬಿದ್ದ ಜಗತ್ತಿಗೆ ಹಾಗೂ ವಿಜ್ಞಾನಿಗಳಿಗೆ ಹೊಸ ಸಿದ್ಧಾಂತವನ್ನು ಮುಂದಿಟ್ಟು ನಿಮ್ಮ ನಂಬಿಕೆ ಸರಿಯಲ್ಲ ಎಂದು ಸಾಬೀತು ಮಾಡಿದವನೇ ಎಡ್ವಿನ್ ಹಬಲ್ (Edwin Hubble).  ೧೯೨೬ ರಲ್ಲಿ ಹಬಲ್ ಜಗತ್ತಿನ ಮುಂದೆ ಹೊಸತೊಂದು ಸಿದ್ಧಾಂತವನ್ನು ಪ್ರಸ್ತುತಪಡಿಸುತ್ತಾನೆ. ಆತನ ಆ ಸಿದ್ಧಾಂತದ ಪ್ರಕಾರ ಜಗತ್ತು ಸ್ಥಿರವಾಗಿಲ್ಲ ಬದಲಾಗಿ ಜಗತ್ತು ವಿಸ್ತಾರವಾಗುತ್ತಿದೆ. ಅದರೆ ಈ ವಿಸ್ತಾರದ ಪ್ರಮಾಣ ಕಡಿಮೆ ಇರಬಹುದು ಹಾಗೂ ಅದರ ಪ್ರಮಾಣ ನಮಗೆ ತಿಳಿಯುತ್ತಿಲ್ಲ ಅಷ್ಟೇ. ಈ ಸಿದ್ಧಾಂತ ಖಗೋಳ ಶಾಸ್ತ್ರದ ದಿಕ್ಕನ್ನೇ ಬದಲಾಯಿಸಿತು. ವಿಜ್ಞಾನಿಗಳಿಗೆ ಇನ್ನಷ್ಟು ಹೊಸಾ ಆಲೋಚನೆಗಳು ಬರಲಾರಂಭಿಸಿದವು.

ಸ್ಟೀಫನ್ ಹಾಕಿಂಗ್ನ “ದಿ ತಿಯರಿ ಆಫ್ ಎವರಿತಿಂಗ್(The Theory of Everything)” ಎಂಬ ಪುಸ್ತಕದಲ್ಲಿ ಈ ಎಲ್ಲ ವಿಷಯಗಳ ಸುಂದರವಾದ ವಿಶ್ಲೇಷಣೆ ಇದೆ. ಜಗತ್ತಿನ ಸೃಷ್ಟಿಯ ಹಿಂದಿರುವ ಸಿದ್ಧಾಂತಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಕುತೂಹಲವಿದ್ದರೆ ಈ ಪುಸ್ತಕವನ್ನು ಒಮ್ಮೆ ಓದಿನೋಡಿ.

ಈಗ ಹೇಳಿ ಅತ್ಯಂತ ವೇಗವಾಗಿ ಚಲಿಸುವ ಬೆಳಕಿಗೆ ಬ್ರಂಹಾಂಡದ ಒಂದು ತುದಿಯಿಂದ ಇನ್ನೊಂದು ತುದಿಗೆ ಸಂಚರಿಸಲು ಹಲವು ಬಿಲಿಯನ್ ವರ್ಷಗಳು ಬೇಕು. ಇನ್ನು ಸಾಮಾನ್ಯ ಮನುಷ್ಯ ಬ್ರಂಹಾಂಡ ಸುತ್ತಲು ಹೊರಟರೆ !. ಮುಂದೊಂದು ದಿನ ಈ ಆಸೆಗಳೆಲ್ಲ ನನಸಾಗುವ ಕಾಲ ಬಂದರೂ ಬಂದೀತು. ಆದರೆ ನಾವು ಆಗ ಈ ಜಗತ್ತಿನಲ್ಲೇ ಇರುವುದಿಲ್ಲ. ಈ ಬ್ರಂಹಾಂಡದ ಕಲ್ಪನೆಯೇ ವಿಚಿತ್ರ. ಯೋಚನೆ ಮಾಡಿದಷ್ಟು ಕಲ್ಪನೆಗೇ ಮೀರಿದಷ್ಟು ವಿಷಯಗಳು ನಮ್ಮನ್ನು ಆವರಿಸಿ ಮೈ ರೋಮಾಂಚನಗೊಳಿಸುತ್ತವೆ. ಅಂತೆಯೇ ಈ ಬ್ರಂಹಾಂಡದ ಮುಂದೆ ನಾವು ಹಾಗೂ ನಮ್ಮ ಸಮಸ್ಯೆಗಳೆಲ್ಲ ಬಹಳಾ ಬಹಳಾ ಚಿಕ್ಕದು ಅನಿಸುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Madhyasta

ಹೆಸರು ಮಂಜುನಾಥ್ ಮಧ್ಯಸ್ಥ. ಓದಿದ್ದು ವಿಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ. ಬರೆಯೋದು ನೆಚ್ಚಿನ ಹವ್ಯಾಸ. ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ನನ್ನ ನೆಚ್ಚಿನ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!