ಇಂದಿನ ‘The so called busy’ ಬದುಕಿನಲ್ಲಿ ಆಗಸದ ನಕ್ಷತ್ರಗಳನ್ನು ನೋಡುವುದಕ್ಕೂ ಸಮಯವಿರುವುದಿಲ್ಲ. ದಿನವೂ ಕೆಲಸ ಮುಗಿಸಿ ಬರುವಾಗ ರಾತ್ರಿಯೇ ಆಗಿರುತ್ತದೆ, ಹೆಚ್ಚಿನ ದಿನ ನಕ್ಷತ್ರಗಳೂ ಇರುತ್ತವೆ, ಆದರೆ ತಲೆಯೆತ್ತಿ ನೋಡಲು ಸಹ ಮನಸಿಲ್ಲದ ಮನಸ್ಥಿತಿಗೆ ಇಂದಿನ ಜೀವನ ಶೈಲಿ ನಮ್ಮನ್ನು ತಂದು ನಿಲ್ಲಿಸಿದೆ. ಇತ್ತೀಚೆಗೆ ಒಂದು ದಿನ ಅದೇಕೋ ಆ ಚುಕ್ಕಿಗಳತ್ತ ದೃಷ್ಟಿ ಹಾಯಿಸುವ ಮನಸಾಗಿ ಮನೆಯಿಂದ ಹೊರ ಬಂದು ಹಾಗೆ ಸುಮ್ಮನೆ ಆ ಹೊಳೆಯುವ ಸುಂದರಿಯರನ್ನು ನೋಡುತ್ತ ನಿಂತೆ. ಈ ಧರಣಿಯ ಪಯಣ ಮುಗಿಸಿ ನಮ್ಮನ್ನಗಲಿದವರು ನಕ್ಷತ್ರಗಳಾಗಿ ಸೆಟಲ್ ಆಗುತ್ತಾರೆ ಎಂದು ಕೆಲವೊಂದು ಕಡೆ ಕೇಳಿದ ನೆನಪೊಂದು ಹಾಗೆ ಸುಮ್ಮನೆ ಸುಳಿದು ಹೋಯಿತು. ಈ ಯೋಚನೆ ಹಾಗೆ ಮುಂದುವರಿದು, ನಮ್ಮ ಆಪ್ತರಾಗಿದ್ದು ನಮ್ಮಿಂದ ದೂರವಾದವರೆಲ್ಲರೂ ನಿಜವಾಗಿಯೂ ಅಲ್ಲಿರುವರೇ? ಎಂಬ ಪ್ರಶ್ನೆ ಮೂಡಿತು. ಒಬ್ಬ ಇಂಜಿನಿಯರ್ ಆಗಿ, ಅಥವಾ ಒಬ್ಬ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿ ಅದೆಲ್ಲ ಸುಮ್ಮನೆ ಹೇಳುವುದು ಎಂದು ಸ್ಪಶ್ಟವಾಗಿ ತಿಳಿದಿದ್ದರೂ, ನಮ್ಮೆಲ್ಲರಲ್ಲೂ ಇನ್ನೊಂದು ಮುಗ್ಧ ಹುಚ್ಚು ಮನಸಿರುತ್ತದೆ. ಅದಕ್ಕೆ ಕಥೆ ಕೇಳುವುದೆಂದರೆ ಬಹಳ ಇಷ್ಟ. ಕಲ್ಪನೆಗಳಲ್ಲಿಯಾದರೂ ಸರಿ, ಸಂತೋಷವನ್ನು ಹುಡುಕುವುದು ಆ ಮುಗ್ಧ ಮನಸಿನ ಜಾಯಮಾನ. ಆ ಮನಸಿಗೋಸ್ಕರ ಅದನ್ನು ನಿಜ ಎಂದು ಒಪ್ಪುವ ಅನಿಸಿತು. ಹಾಗಾಗಿ ಒಪ್ಪಿದೆ.
ಆ ನಕ್ಷತ್ರಗಳಲ್ಲಿ ನಮ್ಮನ್ನಗಲಿದವರಿದ್ದಾರೆ ಎಂದುಕೊಂಡು ನಕ್ಷತ್ರಗಳತ್ತ ದಿಟ್ಟಿಸಿದಾಗ ಒಂದಷ್ಟು ಚಿತ್ರಣಗಳು ಮನದ ಪರದೆಯಲ್ಲಿ ಹಾದು ಹೋದವು. ಜೀವನದ ಕೆಲವು ಕೆಟ್ಟ ಘಳಿಗೆಗಳಲ್ಲಿ ನಡೆಯುವ ಅವಘಡಗಳು ಬದುಕಿನ ದಿಕ್ಕನ್ನು ಅದೆಷ್ಟು ಬದಲಿಸಿ ಬಿಡಬಹುದು ಅನ್ನಿಸಿತು. ಒಂದು ಪುಟ್ಟ ಮಗು “ಪಪ್ಪಾ, ಇವತ್ತು ಸಂಜೆ ಪಾರ್ಕಿಗೆ ಹೋಗುವ” ಎನ್ನುತ್ತಾ ಅಪ್ಪನನ್ನು ಬೀಳ್ಕೊಟ್ಟು ಅರ್ಧ ಗಂಟೆಯಲ್ಲಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಅಪ್ಪನ ದೇಹ ಮನೆಗೆ ಬಂದರೆ ಆ ಪರಿಸ್ಥಿತಿಯ ಭೀಕರತೆ ಊಹಿಸಲು ಸಾಧ್ಯವೇ. ಅಲ್ಲಿ ಅಪ್ಪ ಎನ್ನುವ ಭರವಸೆಯ ಕೊಲೆಯಾಗಿ, ಅದೆಷ್ಟೋ ಸಾವಿರ ಕನಸುಗಳು ಚೂರಾಗಿರಬಹುದಲ್ಲವೇ? ಇನ್ನೆಲ್ಲೊ ಒಂದು ಕಡೆ ರಾತ್ರಿಯಷ್ಟೆ ಮಗನ ಜೊತೆ ದೂರವಾಣಿಯಲ್ಲಿ ಮಾತಾಡಿ ಮಗ ಮುಂದಿನ ವಾರ ಬರುತ್ತಾನೆ ಎಂಬ ಸಂತಸದ ಅಲೆಯಲ್ಲಿ ತೇಲಿದ ಯೋಧನೊಬ್ಬನ ತಾಯಿ ಮರು ದಿನ ಬೆಳಿಗ್ಗೆ ವೈರಿಗಳಿಂದ ಹತನಾದ ಸುಪುತ್ರನ ಮೃತ ದೇಹ ಕಂಡಾಗ ಅಲ್ಲಿ ಚೂರಾಗುವ ಕನಸುಗಳನ್ನು ಎಣಿಸಲು ಸಾಧ್ಯವೇ? ೨೫ರ ಹರೆಯದಲ್ಲಿ ಹುಡುಗನೊಬ್ಬ ಕನಸು ಮನಸಲ್ಲೂ ಎಣಿಸಿರದ ಹೃದಯಾಘಾತಕ್ಕೊಳಗಾದರೆ ಅಲ್ಲಿ ಮಣ್ಣು ಪಾಲಾಗುವ ಹುಡುಗನ ಹಾಗೂ ಅವನ ಮನೆಯವರ ಕನಸುಗಳಿಗೆ ಬೆಲೆ ಕಟ್ಟಲಾದೀತೇ. ಇತ್ತೀಚೆಗಷ್ಟೇ ನಮ್ಮ ಕುಂದಾಪುರದ ಸಮೀಪ ನಡೆದ ಶಾಲಾ ವಾಹನ ಅಪಘಾತಕ್ಕೊಳಗಾದ ಘಟನೆಯನ್ನೇ ಪರಿಗಣಿಸಿ; ಆ ಮಕ್ಕಳ ಅದೆಷ್ಟು ಪುಟ್ಟ ಪುಟ್ಟ ಕನಸುಗಳು, ಅವರ ಪೋಷಕರ ಅದೆಷ್ಟು ಆಸೆಗಳು ಕಣ್ಣೀರಿನಲ್ಲಿ ಕರಗಿ ಹೋಗಿರಬಹುದಲ್ಲವೇ? ಇಂತಹ ಅದೆಷ್ಟೋ ಸಂದರ್ಭಗಳು ನಮ್ಮ ಬದುಕಿನಲ್ಲಿ ಅಥವಾ ಸಮಾಜದಲ್ಲಿ ನಡೆಯುತ್ತಿರುತ್ತದೆ.
ಇಂತಹ ದುರಂತಗಳು ನಡೆದಾಗ, ಅವರ ಮನೆಯವರ ಭವಿಷ್ಯ ಜೀವನದ ಅಗತ್ಯತೆಗಳ ಪೂರೈಕೆ, ಮನೆಯ ಜವಾಬ್ದಾರಿ ಎಂಬ ದೊಡ್ಡ ದೊಡ್ಡ ಸಮಸ್ಯೆಗಳಂತೂ ಇದ್ದೇ ಇರುತ್ತದೆ. ಇದ್ದಕ್ಕಿದ್ದಂತೆ ಎರಗುವ ಈ ಆಘಾತಗಳಿಂದ ಸಾಂಗವಾಗಿ ಸಾಗುವ ದಿನಚರಿ ಇನ್ನಿಲ್ಲದಂತೆ ಏರುಪೇರಾಗುತ್ತದೆ. ಅಂತೂ ಕೊನೆಗೆ ಒಂದಷ್ಟು ಕಷ್ಟ ಪಟ್ಟಾದರೂ ಈ ಎಲ್ಲ ಸಮಸ್ಯೆಗಳಿಂದ ಹೊರ ಬಂದು ಬದುಕು ನಡೆಸುವಷ್ಟರ ಮಟ್ಟಿಗೆ ಎಲ್ಲರೂ ತಯಾರಾಗಬಹುದು. ಆದರೆ ಒಮ್ಮೆ ಯೋಚಿಸಿ ಗೆಳೆಯರೇ, ಈ ಎಲ್ಲ ಮೂಲಭೂತ ಸಮಸ್ಯೆಗಳ ಹೊರತಾಗಿರುವ ಒಂದಷ್ಟು ಭಾವನಾತ್ಮಕ ವಿಷಯಗಳು ನಮ್ಮನ್ನು ಪದೇ ಪದೇ ಕಾಡುತ್ತವೆ ಅಲ್ಲವೇ? ನಮ್ಮ ಆಪ್ತರಾದವರ ಅಕಾಲಿಕ ಅಗಲಿಕೆಯಿಂದ ಚೂರಾಗುವ ಸಣ್ಣ ಸಣ್ಣ ಪುಟಾಣಿ ಕನಸುಗಳು ಸಾವಿರ ಸಾವಿರ ಇರಬಹುದಲ್ಲವೇ? ಅಪ್ಪನೊಂದಿಗೆ ಕೂಸುಮರಿ ಆಡುವ ಪುಟ್ಟ ಮಗಳ ಆಸೆ; ಅವಳ ಶಾಲೆಯಲ್ಲಿ ಪೋಷಕರ ದಿನದಂದು ಎಲ್ಲರಂತೆ ತನ್ನ ಅಪ್ಪನೂ ಬರಬೇಕೆಂಬ ಕನಸು; ತನ್ನ ಪುಟ್ಟ ಕಂದಮ್ಮನ ನಗುವನ್ನು ಒಮ್ಮೆ ನೋಡಿ ಅಪ್ಪಿ ಮುದ್ದಾಡುವ ಯೋಧನ ಒಂದು ಚಿಕ್ಕ ಬಯಕೆ; ಶಾಲೆಯಿಂದ ಬಂದ ಮಗ ಶಾಲೆಯಲ್ಲಿ ಇದ್ದಬದ್ದವರ ಮೇಲೆಲ್ಲ ಹೇಳುವ ದೂರುಗಳನ್ನು ನಗುನಗುತ್ತ ಆಲಿಸಿ ಅವನ ಹಣೆಗೊಂದು ಮುತ್ತಿಡುವ ತಾಯಿಯ ದಿನಚರಿಯ ಒಂದು ಪುಟ್ಟ ಕನಸು; ಇನ್ನೇನು ಮೊದಲ ಸಂಬಳ ಬರಲಿದೆ, ಅಪ್ಪನಿಗೊಂದು ಅಂಗಿ, ಅಮ್ಮನಿಗೊಂದು ಸೀರೆ, ತಂಗಿಗೊಂದು ಕಾಲ್ಗೆಜ್ಜೆ ತರಬೇಕೆಂದುಕೊಂಡಿದ್ದ ೨೫ರ ಹರೆಯದ ಹುಡುಗನ ಹಸಿ ಹಸಿ ಕನಸು…ಹೀಗೆ ಎಣಿಸುತ್ತ ಹೋದರೆ ಮುಗಿಯದ ಎಣಿಕೆ ಅದು. ಇವೆಲ್ಲವನ್ನು ಆಲೋಚಿಸಿದಾಗ ನನಗೆ ಆ ನಕ್ಷತ್ರಗಳೆಲ್ಲ ಕಂಡದ್ದು ನಮ್ಮ ಪೂರ್ವಜರಂತೆ ಅಲ್ಲ, ಬದಲಾಗಿ ನಮ್ಮ ಬದುಕಿನ ಒಡೆದುಹೋದ ಕನಸುಗಳ ಚೂರುಗಳಂತೆ.
ಪ್ರತಿ ಕನಸಿನ ಚೂರುಗಳೊಂದಿಗೂ ಒಂದೊಂದು ಕಥೆಯಿರುತ್ತದೆ. ಪ್ರತಿ ಕಥೆಯೊಂದಿಗೂ ಕಣ್ಣಿಂದ ಜಾರಲು ತವಕಿಸುವ ಒಂದು ಕಣ್ಣೀರಿನ ಹನಿ ಇರುತ್ತದೆ. ಬಹುಷಃ ಆ ಕನಸಿನ ಚೂರುಗಳನ್ನು ಕಂಡಾಗೆಲ್ಲ ಒಂದು ಸುಪ್ತ ನೋವು ಜಾಗೃತವಾಗುತ್ತದೆ. ಜೀವನದ ಜಂಜಾಟದಲ್ಲಿ ಮರೆತು ಹೋದ ಮಾಸದ ಗಾಯ ಒಂದಷ್ಟು ಹೊತ್ತಿನ ಮಟ್ಟಿಗೆ ಮತ್ತೆ ಹಸಿಯಾಗುತ್ತದೆ.
ಹಾಗಾದರೆ ಆ ಚಂದದ ಚುಕ್ಕಿಗಳು ಅಥವಾ ನಾ ಕರೆದಂಥ ಕನಸಿನ ಚೂರುಗಳು ನಮಗೆ ಕೊಡುವುದು ಕೇವಲ ನೋವನ್ನು ಮಾತ್ರವೇ? ಖಂಡಿತ ಇಲ್ಲ. ಬದುಕು ದಿನೇ ದಿನೇ ಬದಲಾಗುತ್ತದೆ. ಇಂದು ನಾವು ಪಡುವ ಕಷ್ಟಗಳು ಮುಂದೆ ನಮಗೆ ಜೀವನಾನುಭವವಾಗುತ್ತವೆ. ಇಂದಿನ ಕಣ್ಣೀರಿನ ಹನಿಗಳು ಮುಂದೊಂದು ದಿನ ನೆನಪುಗಳಾಗಿ ನೋವುಗಳನ್ನೆಲ್ಲ ಎದುರಿಸಿ ಗೆದ್ದು ಬಂದ ನಮ್ಮ ಬದುಕಿನ ಮೇಲೆ ನಮಗೇ ಹೆಮ್ಮೆಯಾಗುವಂತೆ ಮಾಡುತ್ತವೆ. ನಮ್ಮ ವ್ಯಕ್ತಿತ್ವ ಅನುಭವಗಳಿಂದ ಪಕ್ವವಾಗುತ್ತ ಹೋದಂತೆ, ಬದುಕಿನಲ್ಲಿ ನಡೆದ ಪ್ರತಿ ಘಟನೆಗೂ ಕಾರಣವಿದೆ; ಯಾವುದೂ ಸುಮ್ಮನೆ ನಡೆದುದಲ್ಲ ಎಂಬ ಅರಿವು ಮೂಡುತ್ತದೆ. ದುರಂತಗಳು ಸಂಭವಿಸಿದಾಗ ನೋವಿನ ಚೀರಾಟದ ಭರದಲ್ಲಿ ಉಕ್ಕುವ ಕಣ್ಣೀರಿನ ಹನಿಗಳಿಂದ ಮಂಜಾಗಿ ಕಾಣುವ ಕನಸಿನ ಚೂರುಗಳು ದಿನ ಕಳೆದಂತೆ ಮಿನುಗಲಾರಂಭಿಸುತ್ತವೆ. ಮತ್ತೆ ಆ ಕನಸುಗಳಿಗೆ ಜೀವ ಬರುತ್ತವೆ. ಕೆಲವೊಂದು ಕನಸುಗಳು ಅಗಲಿದ ಜೀವಗಳಿರದೇ ಅಪೂರ್ಣವಾಗಬಹುದು. ಆದರೆ ಆ ಅಗಲಿದ ಜೀವಗಳು ನಮಗಾಗಿ ಕಂಡ ಕೆಲ ಕನಸುಗಳು ನಮ್ಮ ಬದುಕಿಗೆ ಸ್ಪೂರ್ತಿಯಾಗುತ್ತವೆ. ಮತ್ತೆ ಜೀವನ ಪ್ರೀತಿ ಹುಟ್ಟು ಹಾಕುತ್ತವೆ. ದಿಕ್ಕು ತಪ್ಪಿದ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಈ ಕನಸಿನ ಚೂರುಗಳು ಪ್ರೇರಕ ಶಕ್ತಿಯಾಗುತ್ತವೆ. ಎಲ್ಲ ಅಡೆತಡೆಗಳನ್ನು ಮೀರಿ ಕಂಡ ಕನಸುಗಳನ್ನು ಸಾಕಾರಗೊಳಿಸಿ ಆಕಾಶದ ಆ ಕನಸಿನ ಚೂರಿನತ್ತ ಮತ್ತೆ ದಿಟ್ಟಿಸಿದಾಗ ಸಣ್ಣಗೆ ಕಣ್ಣು ಮಿಟುಕಿಸುವ ಆ ಕನಸಿನ ಚೂರುಗಳನ್ನು ನೋಡಿ ಮೊಗದಲ್ಲೊಂದು ಮಂದಹಾಸ ಬರದೇ ಇರದು.
ಹೀಗೆ, ಬದುಕಿನಲ್ಲಿ ನಡೆಯುವ ಅನಾಹುತಗಳಲ್ಲಿ ಕಳೆದುಕೊಂಡ, ಹೃದಯಕ್ಕೆ ಹತ್ತಿರವಾದ ಜೀವಗಳು ಇಲ್ಲೇ ನಮ್ಮ ಸಮೀಪದಲ್ಲೇ ಇವೆ ಎನ್ನುವ ಸಿಹಿಯಾದ ಭ್ರಮೆ ಹುಟ್ಟಿಸುವ, ಆ ಮೂಲಕ ಒಂದಷ್ಟು ಈಡೇರದ ಕನಸುಗಳ ಬೆನ್ನು ಹತ್ತಿ ಜೀವನದ ಸಾರ್ಥಕ್ಯಕ್ಕಾಗಿ ಹಂಬಲಿಸುವಂತೆ ಮಾಡುವ ಈ ಮಿನುಗುವ ಕನಸಿನ ಚೂರುಗಳಿಗೂ ಒಂದು ಧನ್ಯವಾದ ಹೇಳಲೇಬೇಕು ಅನ್ನಿಸಿತು. ಅವು ಮರೆತ ನೋವುಗಳನ್ನು ಕೆಣಕಿ ದುಃಖವನ್ನೂ ತರುತ್ತವೆ. ಅಂತೆಯೇ ಬಣ್ಣ ಮಾಸಿದ ಕನಸುಗಳಿಗೆ ಮತ್ತೆ ಬಣ್ಣ ತುಂಬಿ ಬದುಕನ್ನು ರಂಗೇರಿಸುತ್ತವೆ ಕೂಡ. ಒಮ್ಮೆ ಅವುಗಳತ್ತ ದಿಟ್ಟಿಸಿ ಗೆಳೆಯರೇ ಸಾವಿರ ಸಾವಿರ ಕನಸುಗಳ ರಾಶಿ ಅಲ್ಲಿದೆ. ನಾವು ಆ ನಕ್ಷತ್ರಗಳ ಸಾಲು ಸೇರುವ ಮುನ್ನ ಆದಷ್ಟು ಕೈಗೆಟಕುವ ಕನಸಿನ ಚೂರುಗಳನ್ನು ನಮ್ಮದಾಗಿಸಿಕೊಳ್ಳೋಣ ಅಲ್ಲವೇ?
“ನೀಲಾಕಾಶದಲಿ ರಾಶಿಬಿದ್ದಿವೆ ನೋಡಿ,
ಬದುಕ ಕಹಿಘಳಿಗೆಯಲಿ ಸಿಡಿದ ಕನಸ ಚೂರುಗಳು.
ಬಾನೆತ್ತರಕೆ ಹಾರಿ ತಿರುಗಿ ಪಡೆಯುವ ಮತ್ತೆ;
ನಮ್ಮದಾಗಲಿ ಕಳೆದ ಹಲವು ಖುಷಿ ಕ್ಷಣಗಳು.”