ಅಂಕಣ

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೪

_________________________________

ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು |

ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು ||

ಒಂದೆ ಗಾಳಿಯನುಸಿರ್ವ ನರ ಜಾತಿಯೊಳಗೆಂತು |

ಬಂದುದೀ ವೈಷಮ್ಯ ? – ಮಂಕುತಿಮ್ಮ ||

ಮಾನವರೆಲ್ಲರು ವಾಸಿಸುತ್ತಿರುವುದೊಂದೆ ಭೂಮಿಯ ಮೇಲೆ. ಅಂತಾಗಿ ಎಲ್ಲ ನೋಡುತ್ತಿರುವ ತಾಣ, ದಿಕ್ಕುಗಳು ಬೇರೆಬೇರೆಯಾದರೂ, ಎಲ್ಲರೂ ಕಾಣುತ್ತಿರುವುದು ಮಾತ್ರ ಒಂದೆ ಆಕಾಶ. ಹೆಜ್ಜೆಯಿಕ್ಕಿ ನಡೆದಾಡುವ ಅಸಂಖ್ಯಾತ ಹಾದಿಗಳಿದ್ದರು ಅದೆಲ್ಲವು ಒಂದೆ ಭೂಮಿಯ ಮಡಿಲಿಗಂಟಿದ ವಿಸ್ತೃತ ರೂಪಗಳಾದ ಕಾರಣ, ನಡೆವ ಉದ್ದೇಶದಿಂದ ತುಳಿಯುವ ನೆಲವೂ ಒಂದೆ ಆಗುತ್ತದೆ – ಭೂಮಿಯ ಯಾವುದೇ ಮೂಲೆಯಲ್ಲಿ ನೆಲೆಸಿದ್ದರು.

ಇನ್ನು ಅದೇ ನೆಲದಲ್ಲಿ ಬೆಳೆಯುವ ಧಾನ್ಯವಾದರೂ ಬೇರೆಯೆನ್ನಲಾದೀತೆ ? ಏನೆ ಬೆಳೆದುಂಡರೂ ಅದು ಬರುವುದು ಒಟ್ಟಾರೆ ಭುವಿಯ ಬಸಿರನ್ನೊಡೆದ ಹಸಿರಿನ ರೂಪಾಗಿಯೆ. ಆದರಲ್ಲೂ ಆಹಾರದ ಸರಪಳಿಯ ಕೊಂಡಿಯಿಡಿದು ಹೊರಟರೆ ಎಲ್ಲದರ ಆದಿ ಮೂಲವೂ ಒಂದೆ ಆಗಿಬಿಡುತ್ತದೆ.

ಇನ್ನು ಆಹಾರವೆ ಹಾಗೆಂದಮೇಲೆ ನೀರಿನ ವಿಷಯದಲ್ಲಂತೂ ಮಾತನಾಡುವಂತೆಯೆ ಇಲ್ಲ – ಎಲ್ಲರೂ ಕುಡಿವ ನೀರು ಆ ಭೂಮಿಯ ಮೂಲದಿಂದಲೆ ಬರಬೇಕು, ತಾನು ಬರುವಾಗ ಬೆರೆತ ಲವಣಾದಿಗಳಿಂದ ಯಾವುದೆ ರುಚಿಯನ್ನು ಆರೋಪಿಸಿಕೊಂಡರೂ. ಕಡೆಗೆ ಮಳೆಯಾಗುವ ನೀರು ಕೂಡ ಇಲ್ಲಿಂದಲೆ ಆವಿಯಾಗಿ ಮೇಲೇರಿ, ಮೋಡವಾಗಿ ನುಲಿದು ಮತ್ತೆ ಮಳೆಯಾಗಿ ಇಳೆ ಸೇರಬೇಕು.

ಇನ್ನು ಎಲ್ಲರೂ ಉಸಿರಾಡುವ ಗಾಳಿ ? ಬೇರೆಲ್ಲದರ ವಿಷಯದಲ್ಲಿ ಸ್ವಲ್ಪ ತಾರತಮ್ಯ, ರೂಪ ಬೇಧಗಳನ್ನು ಕಾಣಬಹುದೊ ಏನೊ – ಆದರೆ ಗಾಳಿಯ ವಿಷಯದಲ್ಲಿ ಹಾಗೆನ್ನುವಂತೆಯೆ ಇಲ್ಲ, ಅದರಲ್ಲೂ ಪ್ರಾಣವಾಯುವಿನ ವಿಷಯದಲ್ಲಿ. ಎಲ್ಲೆ ಇದ್ದರೂ ಎಲ್ಲರೂ ಕುಡಿಯುವುದು, ಉಸಿರಾಡುವುದು ಅದೊಂದೇ ಗಾಳಿಯ ರೂಪವನ್ನು. ಜತೆಗೇನೇ ಕಲ್ಮಷಗಳ ಮಿಶ್ರಣವನ್ನು ಒಳಗೆಳೆದುಕೊಳ್ಳಬೇಕಾಗಿ ಬಂದರು ಬದುಕಿನ, ಜೀವದ ಉಳಿವಿಗೆ ಪ್ರಾಣವಾಯು ಮಾತ್ರವಷ್ಟೆ ಸಚೇತಕ ಪ್ರತಿಯೊಬ್ಬನಲ್ಲು.

ಹೀಗೆ ಇಡೀ ನರ ಜಾತಿಯ ಮೂಲಭೂತ ವಿಶ್ಲೇಷಣೆಗಿಳಿದರೆ ಎಷ್ಟೊಂದು ಸಾಮ್ಯತೆಗಳು ಎದ್ದು ಕಾಣುತ್ತವೆ – ಅದರಲ್ಲು ಪ್ರತಿಯೊಬ್ಬರಲ್ಲು ಸಮಾನವಾಗಿರುವ ಸಾಮ್ಯತೆಗಳು?! ಆದರೂ ರಾಗದ್ವೇಷ ಪ್ರೇರಿತವಾದ ಮಾನವ ಹೃದಯಗಳು ಪರಸ್ಪರರತ್ತ ವೈಷಮ್ಯ ಸಾಧಿಸುತ್ತ, ನಾನು ಬೇರೆ, ನೀನು ಬೇರೆ ಎಂದು ನೂರಾರು ಜಾತಿ, ಕುಲ, ಮತಗಳ ಹಂಗಿನಲ್ಲಿ ಹೊಟ್ಟೆಕಿಚ್ಚು, ಸ್ವಾರ್ಥಲಾಲಸೆಯ ಲೆಕ್ಕಾಚಾರಕ್ಕೆ ಸಿಕ್ಕಿ ನರಳುವುದೇಕೊ ? ಎನ್ನುವುದು ಮಂಕುತಿಮ್ಮನ ಸಂದೇಹ. ಎಲ್ಲರನ್ನು ಮಾಡಿದವನೊಬ್ಬನೆ, ಎಲ್ಲರ ವಾಸ, ಆಹಾರ, ದಾಹಾದಿಗಳ ಸ್ವರೂಪವು ಒಂದೆ. ಅಂದ ಮೇಲೆ ಕಾದಾಡದೆ ಒಗ್ಗಟ್ಟಾಗಿರಲೇನು ಅಡ್ಡಿ ? ಎನ್ನುವ ಕವಿ ಹೃದಯ ಅದೇ ಮನೋಭಾವದ ಎಲ್ಲರಿಗು ಸುಲಭದಲ್ಲಿ ಅರ್ಥವಾಗುತ್ತದೆ. ಇಲ್ಲಿ ಪ್ರಸ್ತಾಪವಾಗುವ ವೈಷಮ್ಯ ಭಾವ ಯಾವುದೇ ಇಬ್ಬರು ವ್ಯಕ್ತಿಗಳ ನಡುವೆ ಇರಬಹುದಾದ ಸಂಕೀರ್ಣವಾದರೂ, ಈ ಪದ್ಯಕ್ಕೆ ಈಗಿನ ಹಾಗೆ ಆ ಕಾಲದಲ್ಲಿಯೂ ಪ್ರಚಲಿತವಿದ್ದ ನಮ್ಮ ಜಾತಿಮತ ಪದ್ದತಿಗಳೆ ಪ್ರಬಲ, ಪೂರಕ ಹಿನ್ನಲೆಯಾಗಿದ್ದಿರಬೇಕು. ಆದರೆ ಆ ಹಿನ್ನಲೆಯಿರದೆಯೂ  ಪ್ರಸ್ತುತವಾಗುತ್ತ, ಇಡೀ ಜಗತ್ತಿನ ನಿಲುಕಿನಲ್ಲಿ ಈಗಲೂ ಅನ್ವಯವಾಗುವ ಈ ಸಾಲುಗಳು ಅದರ ನಿರಂತರತೆಗೆ ಪ್ರತ್ಯಕ್ಷ ಸಾಕ್ಷಿ ಎನ್ನಬಹುದು.

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!