ಅಂಕಣ

‘ಯೋಗ’ ಬರೇ ಆಸನಕ್ಕಷ್ಟೇ ಸೀಮಿತವಾಯಿತೇ?

ದೇಹವನ್ನು ವಿಶ್ರಾಂತ ಸ್ಥಿತಿಗೆ ತಂದು, ನಿಧಾನವಾಗಿ ಕಣ್ಣ ರೆಪ್ಪೆಗಳನ್ನು ಆಳಕ್ಕೆಳೆದುಕೊಂಡು ಬ್ಯಾಹ್ಯ ಪ್ರಪಂಚವನ್ನು ಮರೆಯುತ್ತಾ…ಮರೆಯುತ್ತಾ… ಅಂತರ್ ದೃಷ್ಟಿಯನ್ನು ಎರಡು ಕಣ್ಣುಗಳ ಮಧ್ಯೆಗಿನ ಆಜ್ಞಾ ಚಕ್ರದ ಮೇಲೆ ನೆಟ್ಟು ಹಾಗೇ ಸುಮ್ಮನೆ ಕುಳಿತುಕೊಳ್ಳುವುದು. ಇಹದ ಇರುವನ್ನು ಮರೆಯುತ್ತಾ ತನ್ನ ಅಂತರ್ಯದ ದಿವ್ಯತೆಯನ್ನು ಅರಿತುಕೊಳ್ಳಲು ನೆರವಾಗುವ ಈ ಸಾಧನಾ ಮಾರ್ಗವನ್ನು ಧ್ಯಾನವಾಸ್ಥೆಯ ಪ್ರಮುಖ ಹಾಗೂ ಹೆಚ್ಚು ಪ್ರಚಲಿತ ವಿಧಾನವೆನ್ನುತ್ತಾರೆ. ವ್ಯಕ್ತಿಯು ಈ ರೀತಿಯಾಗಿ ಧ್ಯಾನಿಸುತ್ತಾ ಸತತವಾಗಿ ಪ್ರಯತ್ನಶೀಲನಾದರೆ ಮುಂದೊಂದು ದಿನ ಆತನ ಮನಸ್ಸು ಪ್ರಪುಲ್ಲವಾಗಿ, ಏಕಾಗ್ರತೆಯ ತುತ್ತ ತುದಿಯನ್ನು ಪಡೆದು ಪರಮ ಯೋಗಿಯಾಗಿಯೇ ಆತ ಬದಲಾಗಬಲ್ಲ. ಆವಾಗ ಆತ ತನ್ನ ‘ಆಜ್ಞಾ’ಚಕ್ರದಲ್ಲಿ ಸೌರಮಂಡಲದ ತೇಜಸ್ಸನ್ನೇ ಕಂಡು ಆದ್ಯಾತ್ಮದ ಗೌಪ್ಯತೆಯನ್ನೆಲ್ಲಾ ಛೇದಿಸುತ್ತಾ ಮುನ್ನಡೆಯಬಲ್ಲ. ಬ್ರಹ್ಮಾಂಡ ಹಾಗೂ ಪಿಂಡಾಡದಲ್ಲಿ ಬೇಧವಿಲ್ಲ,  ಆತ್ಮ ಪರಮಾತ್ಮನಿಗೆ ವ್ಯತ್ಯಾಸವಿಲ್ಲ ಎಂಬಿತ್ಯಾದಿ ನಿಗೂಢ ಸತ್ಯಗಳ ಅನುಭವವೇದ್ಯವಾಗುವುದು ಕೂಡ ಇದೇ ಸ್ತರದಲ್ಲಿ. ಒಟ್ಟಿನಲ್ಲಿ ಅವನೋರ್ವ ಅನುಭಾವಿಯಾಗಬಲ್ಲ. ಆತ ನಡೆದಾಡುವಲೆಲ್ಲಾ ಆತನಿಗೆ ಸತ್ಯವೊಂದೇ ಗೋಚರಿಸುತ್ತಿರುತ್ತದೆ. ಪ್ರಾಣವಾಯುವನ್ನು ‘ಇಡಾ- ಪಿಂಗಳ’ ಎಂಬ ಜೋಡಿ ನಾಡಿಗಳ ಸಹಾಯದಿಂದ ಉಚ್ವಾಸ ನಿಸ್ವಾಶಗಳ ಮೂಲಕ ನಿಯಂತ್ರಿಸುತ್ತಾ-ಬಂಧಿಸುತ್ತಾ ‘ಮೂಲಾಧಾರದ’ ಪಕ್ಕದಲ್ಲೇ ಬೆನ್ನು ಮೂಳೆಗೆ ಅಂಟಿಕೊಂಡಂತಿರುವ ಸುಪ್ತ‘ಕುಂಡಲಿನಿ’ಯನ್ನು ಮರ್ಧಿಸಿ ಆ ಶಕ್ತಿಯನ್ನು ಮೆಲ್ಲ ಮೆಲ್ಲನೆ ಬೆನ್ನು ಹುರಿಯ ಮಧ್ಯದ ಸುಷುಮ್ನ ನಾಳದ ಮೂಲಕ ಮೇಲೇರಿಸಿಕೊಂಡು ನೆತ್ತಿಯ ಮಧ್ಯೆ ಇರುವ ತುರ್ಯದ ಮೂಲಕ ಭೇಧಿಸಿಕೊಂಡು ಆಧ್ಯಾತ್ಮದ ದಿವ್ಯ ತೇಜಸ್ಸನ್ನು ಪಡೆಯಬಲ್ಲ ಮಹಾನ್ ಯೋಗಿಯೇ ಆತನಾಗಬಲ್ಲ. ಆತನನ್ನೇ ನಮ್ಮ ಶಾಸ್ತ್ರಗ್ರಂಥಗಳು ‘ಸಿದ್ಧ’ನೆಂದು ಕರೆದಿರುವುದು. ಬುದ್ಧನೆಂದು ಕರೆದಿರುವುದು ಕೂಡ ಇದೇ ಸ್ಥಿತಿಯನ್ನು. ಪರಮೇಶ್ವರ, ಪರಬ್ರಹ್ಮನೆಂದರೂ ಕೂಡ ಇದೇ ಸ್ಥಿತಿ.

‘ಯೋಗ’ದ ಬಗ್ಗೆ ಕೆದಕುತ್ತಾ ಮುನ್ನಡಿಯಿಟ್ಟರೆ ನಮಗೆ ಕಾಣುವ ಅದರ ಕಟ್ಟಕಡೆಯ ಹಂತ ಇದೇ ಬುದ್ಧ ಸ್ಥಿತಿ. ಈ ‘ಸಮಾಧಿ’ ಸ್ಥಿತಿಯನ್ನೇ ಪತಂಜಲಿ ತನ್ನ‘ಅಷ್ಟಾಂಗ ಯೋಗದ’ದಲ್ಲಿ ವಿವರಿಸಿದ್ದು. ಹೌದು,ಯೋಗವೆಂದರೆ ಕೇವಲ ಶಾರೀರಿಕ ಕಸರತ್ತೂ ಅಲ್ಲ,ಕೇವಲ ಧ್ಯಾನವೂ ಅಲ್ಲ. ಬದಲಾಗಿ ಯೋಗವೆಂದರೆ ಅವರೆಡರ ಸಮ್ಮಿಲನ. ಶಾಬ್ದಿಕ ರೂಪದಲ್ಲಿ ಹುಡುಕಿದರೆ ‘ಯೋಗ’ಕ್ಕೆ  ‘ಒಂದಾಗು’ ಎಂಬ ಅರ್ಥ ಸಿಗುತ್ತದೆ.  ಇದರ ಅರ್ಥವೂ ಸ್ಪಷ್ಟವಿದೆ. ಇಲ್ಲಿ‘ಒಂದಾಗುವುದೆಂದರೆ’ ಭಗವಂತನಲ್ಲಿ ಐಕ್ಯವಾಗುವುದು ಎಂದರ್ಥ. ಅಂದರೆ ಯೋಗವನ್ನು ಸಾಧಿಸುತ್ತಾ ತಾನೇ ಪರಮೇಶ್ವರನಾಗುವುದು ಎಂದರ್ಥ. ಶಂಕರಾಚಾರ್ಯರು ಹೇಳಿದ ‘ಅಹಂ ಬ್ರಹ್ಮಾಸ್ಮಿ’ಯ ಅಂತರಾರ್ಥವೂ ಇದೇ. ಒಟ್ಟಿನಲ್ಲಿ ಯೋಗದ ಮುಖ್ಯ ಉದ್ದೇಶವೇನೆಂದರೆ ಅದು ಮೋಕ್ಷ ಸಂಪಾದನೆ.  ಮನಸ್ಸು ದೇಹಗಳೆರಡನ್ನೂ ತಹಬಂದಿಗೆ ತಂದುಕೊಂಡು ಅವೆರಡನ್ನೂ‘ಒಂದಾಗಿಸುತ್ತಾ’ ಹಂತ ಹಂತವಾಗಿ ಆಧ್ಯಾತ್ಮದ ಸಾಧನೆಗೈಯುತ್ತಾ ಮುಂದಕ್ಕೆ ಸಾಗುವ ಸನಾತನ ಮಾರ್ಗಕ್ಕಷ್ಟೇ ಯೋಗವೆನ್ನಬೇಕು. ಭಾರತಿಯೇತರ ಅದ್ಯಾವ ಅನ್ಯ ಧರ್ಮದಲ್ಲೂ ‘ಆಧ್ಯಾತ್ಮ’ದ ಬಗ್ಗೆ ಈ ಪರಿಯ ವಿವರಣೆಗಳು ದೊರೆಯದು. ಹೆಚ್ಚೆಂದರೆ ಅಲ್ಲಿ ನಾನು ಹೇಳಿದ್ದನ್ನಷ್ಟೇ ಕೇಳು, ನಾನು ಹೇಳಿದ್ದನಷ್ಟೇ ಅನುಸರಿಸು, ನಾನೇ ನಿನ್ನನ್ನು ಮೋಕ್ಷದೆಡೆಗೆ ಕರೆದೊಯ್ಯುತ್ತೇನೆ ಎಂಬ ವಿವರಣೆಯಷ್ಟೇ!

ವೇದಗಳನ್ನು ಅರಿಯುವ ಮೊದಲು ನಿನ್ನನ್ನು ನೀನೇ ಅರಿತುಕೋ ಎಂಬ ಪುಟ್ಟ ಎಚ್ಚರಿಕೆಯೊಂದಿದೆ ಭಾರತೀಯರಲ್ಲಿ. ಈ ಎಚ್ಚರಿಕೆ ಕೂಡ ಪ್ರೇರೇಪಿಸುವುದು ಯೋಗವನ್ನೇ. ಈ ವಿಶಾಲ ಅರ್ಥದ ಯೋಗವನ್ನು ಭಕ್ತಿಯೋಗ, ರಾಜಯೋಗ,ಜ್ಞಾನ ಯೋಗವೆಂಬುದಾಗಿ ವಿಂಗಡಿಸಲಾಗಿದೆ. ಯಮ, ನಿಯಮ, ಆಸನ, ಪ್ರಾಣಾಯಾಮ,ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಪತಂಜಲಿಯ ಅಷ್ಟಾಂಗ ಯೋಗವು ರಾಜಯೋಗದ ಮೂಲ ತಿರುಳು. ದೇಹ ಮನಸುಗಳರೆಡೂ ನಮ್ಮ ನಮ್ಮ ಮಿತಿಯಲ್ಲೇ ಇರಬೇಕು. ಸಾಧನೆಯ ಹಾದಿಯಲ್ಲಿ ಇವೆರಡರಲ್ಲಿ ಯಾವುದಾದರೂ ಒಂದು ದಾರಿ ತಪ್ಪಿದರೂ ಅಥವಾ ನಿಯಂತ್ರಣ ಮೀರಿದರು ಆಧ್ಯಾತ್ಮದ ಕಂಪನ್ನು ಸವಿಯುವುದು ಕಷ್ಟ. ಇದಕ್ಕಾಗಿಯೇ ಅಷ್ಟಾಂಗ ಯೋಗದ ಸಾಧನೆಯ ಹಾದಿಯಲ್ಲಿ ಮೊದಲಾಗಿಯೇ ಆಸನ’ವನ್ನು ಸೇರಿಸಲಾಗಿದೆ. ನಿಲ್ಲುವ ಭಂಗಿ, ಕೂರುವ ಭಂಗಿಗಳೆಲ್ಲವನ್ನು ವ್ಯವಸ್ಥಿತಗೊಳಿಸಿಕೊಂಡು ಸಾಧಕನಿಗೆ ಮೊದಲಾಗಿ ದೇಹವನ್ನು ತಹಬಂದಿಗೆ ತರಲು ವಿವಿಧ ಯೋಗಾಸನಗಳನ್ನು ಹೇಳಿಕೊಡಲಾಗಿದೆ. ಅದಕ್ಕೂ ಮುನ್ನ ‘ಯಮ’ ‘ನಿಯಮಗಳನ್ನು’ ಅಭ್ಯಸಿಸಿ ಕಾರ್ಯಾಚರಣೆಗೊಳಿಸಬೇಕು ಆ ಸಾಧಕ.  ಅಂದರೆ ಶಿಸ್ತಿನ ಜೀವನವನ್ನು ಹೊಂದಬೇಕು ಎಂದರ್ಥ. ಅಷ್ಟಾಂಗ ಯೋಗದ ಎಲ್ಲಾ ಮೆಟ್ಟಿಲುಗಳನ್ನು ಪ್ರತೀಯೋರ್ವರು ನಿಷ್ಟೆಯಿಂದ ಕೈಗೊಂಡರೆ ಆವಾಗ ಸಂಪೂರ್ಣ ಸಮಾಜವೇ ಸ್ವಾಸ್ಥ್ಯಗೊಳ್ಳಬಲ್ಲುದು. ರೋಗ ರುಜಿನಗಳಿಂದ, ಮಾನಸಿಕ ತುಮುಲಗಳಿಂದ ಸಮಾಜವೇ ವಿಮುಕ್ತಿ ಪಡೆಯಬಲ್ಲುದು.

ಆದ್ದರಿಂದಲೇ ಯೋಗದಲ್ಲಿ ‘ರಾಜಯೋಗಕ್ಕೆ’ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ.  ಉಳಿದಂತೆ ಭಕ್ತಿಯೋಗ ಹಾಗೂ ಜ್ಞಾನ ಯೋಗ. ಇವುಗಳು ಕೂಡ ಸಾಧಕನಿಗೆ ಮೋಕ್ಷ ಸಾಧನೆಯ ಪಥವನ್ನು ವಿವರಿಸಬಲ್ಲುದು. ವೇದ ಉಪನಿಷತ್ತುಗಳ ಆಳವನ್ನು ಕೆದಕಿ. ವಿಮರ್ಶಿಸಿ ಆಧ್ಯಾತದ ತಿರುಳನ್ನು ಅರಿಯುವುದು,ಆ ಮೂಲಕ ಮೋಕ್ಷ ಸಂಪಾದನೆಯ ಮಾರ್ಗ ಹಿಡಿಯುವುದು ಜ್ಞಾನ ಯೋಗವಾದ ಪಥವಾಗಿದೆ. ಇನ್ನು ಭಕ್ತಿಯೋಗದಲ್ಲಿ ಭಕ್ತಿಯೇ ಪ್ರಾಧಾನ್ಯವಾದುದು. ಒಟ್ಟಿನಲ್ಲಿ ಎಲ್ಲಾ ಯೋಗಗಳೂ ದೇವರ ಇರುವನ್ನು ನಂಬುತ್ತಾ ತಾನೇ ದೇವರಾಗಬಹುದಾದ ದಿಕ್ಕನ್ನು ತೋರಿಸುತ್ತದೆ ಎಂಬುದು ಸತ್ಯ.

ಮೊನ್ನೆ ಜೂನ್ 21 ಹೊರಳಿದಾಗ ಯೋಗದ ಬಗ್ಗೆ ಇಷ್ಟೆಲ್ಲಾ ಬರೆಯಲು ಮನಸಾಯಿತು. ವಿಶ್ವಯೋಗದ ದಿನವಾದ ಜೂನ್ 21 ಭಾರತೀಯರಿಗೊಂದು ಹೆಮ್ಮೆಯ ದಿನವೂ ಹೌದು. ‘ಅರೆ ಯೋಗವಂತೆ’ಎಂದು ವಿಶ್ವವೇ ಒಂದು ಕ್ಷಣ ಭಾರತದತ್ತ ತಿರುಗಿ ನೋಡುವ ದಿನವದು. ಆದೆರೆ, ಮೊನ್ನೆ ನಡೆದ ವಿಶ್ವ ಯೋಗಕ್ಕೂ ನಿಜವಾಗಿಯೂ ಇರುವ ಯೋಗದ ಉದ್ದೇಶಕ್ಕೂ ಎಲ್ಲಾದರೂ ತಾಳೆಯಾಗಿದೆ ಎಂದೆನ್ನಿಸುತ್ತಾ!? ಖಂಡಿತಾ ಇಲ್ಲ. ಅಂದು ವಿಶ್ವಯೋಗದ ದಿನ ನಮ್ಮ ಗಣ್ಯ ಅತಿಗಣ್ಯರುಗಳೆಲ್ಲಾ ಸೇರಿಕೊಂಡು ಒಂದಷ್ಟು ಪೂರ್ವ ತಯಾರಿ ಮೂಲಕ ವೇದಿಯ ಮುಂದೆ ಜಮಾಯಿಸಿ ನಿಂತು ಕೊಂಡು,ಮಲಗಿಕೊಂಡು, ಕುಳಿತು ಕೊಂಡು ನಾನಾ ವಿಧದ ದೈಹಿಕ ಕಸರತ್ತನ್ನು ಮಾಡಿದ್ದು ಬಿಟ್ಟರೆ ಬೇರೇನು ನಡೆದಿಲ್ಲ! ನಿಜವಾಗಿಯೂ ಅಂದು ಯೋಗದ ಹೆಸರಲ್ಲಿ ನಡೆದಿರುವುದು  ಕೇವಲ‘ಯೋಗಾಸನ’ವಷ್ಟೇ! ಕೆಲವಡೆ ‘ಓಂ’ ಕಾರದಿಂದಲೇ ಈ ಯೋಗಾಸನಗಳು ಪ್ರಾರಂಭಗೊಂಡಿದ್ದರೆ ಇನ್ನು ಹಲವೆಡೆಗಳಲ್ಲಿ ಅನ್ಯ ಧರ್ಮೀಯರಿಗೆ ಎಲ್ಲಿ ಮುಜುಗರ ಆಗುತ್ತೋ ಎಂದುಕೊಂಡು ಪರಿಶುದ್ಧ ರೂಪಿ ಪವಿತ್ರ ‘ಪ್ರಣವ’ ಮಂತ್ರವನ್ನೂ ತಡೆ ಹಿಡಿದು ಬರೇ ದೈಹಿಕ ವ್ಯಾಯಮಗಳನ್ನಷ್ಟೇ ಮಾಡಿಕೊಂಡು ನಾವೂ ಯೋಗ ಮಾಡಿದೆವು ಎಂದು ಬೀಗಲಾಯಿತು! ಯೋಗಾಸನಗಳ ಬಳಿಕ ಶವಾಸನದ ಮೂಲಕವೋ ಇಲ್ಲ ಪದ್ಮಾಸನ,ಸಿದ್ಧಾಸನದ ಮೂಲಕವೋ ಧ್ಯಾನ ಮಾಡುವುದು ಪರಂಪರೆ. ಆದರೆ ಕೆಲವಡೆ ಇದಕ್ಕೂ ಕತ್ತರಿ ಬಿದ್ದಂತಿದೆ! ಉಚ್ಚರಿಸುವ ಮಂತ್ರದಲ್ಲೂ‘ಆರ್‍ಎಸ್‍ಎಸ್’ನ ಛಾಯೆಯನ್ನು ಕಂಡು ವಿರೋಧಿಸಲಾಗಿದೆ! ವಿದೇಶಿಯರು ಕೂಡ ನಾವು ಮಾಡಿ ತೋರಿಸಿದನ್ನಷ್ಟೇ ಮಾಡಿಕೊಂಡು ಇದು‘ಭಾರತೀಯ ಯೋಗವೆಂದು ಪರಿಭಾವಿಸಿಕೊಂಡರೋ ಏನೋ! ಒಟ್ಟಿನಲ್ಲಿ ಯೋಗ ದಿನವು ‘ಯೋಗಾಸನದ’ ದಿನವೆನ್ನುವ ಹಾಗೇ ಆಚರಿಸಲಾಗಿದೆ ಎಂಬುದು ನಿರ್ವಿವಾದ! ಎಂಥಾ ದುರಂತವಲ್ಲವೇ? ಯೋಗಕ್ಕೆ ನಾವು ಸಲ್ಲಿಸಿದ ಗೌರವವೇ ಇದು!?

ಯೋಗವನ್ನು ಜಗತ್ತಿಗೆ ಅರ್ಪಿಸಿದ ನಾವುಗಳೇ ಇಂದು ಯೋಗದ ಮಹತ್ವವನ್ನು ಅರಿಯದಾಗಿದ್ದೇವೆ! ಯೋಗವೆಂದರೆ ಯೋಗಾಸನವಷ್ಟೇ ಅಲ್ಲ ಬದಲಾಗಿ‘ಧಾರಣ’ ‘ಧ್ಯಾನಗಳ’ ಮೂಲಕ ಅಂತರ್ಯವನ್ನು ಅರಿಯ ಬೇಕಿದೆ ಎಂಬ ಸತ್ಯವನ್ನು ಮರೆತಿದ್ದೇವೆ. ನಿಜಕ್ಕೂ ವಿಶ್ವಯೋಗದ ದಿನವು ಈ ನಿಟ್ಟಿನಲ್ಲಿ ತರ್ಕಿಸಲು ಇರುವ ದಿನವಾಗಿದೆ. ಜೊತೆಗೆ ಅಂದು ವಿಶ್ವದೆಲ್ಲೆಡೆ ಜನ  ನಿತ್ಯ ನಿರಂತರವಾಗಿ ಧ್ಯಾನವನ್ನು ನಡೆಸುವಂತೆ ಪ್ರೇರೇಪಣೆ ನೀಡುವ ಕೆಲಸ ನಡೆಯಬೇಕಿದೆ. ಅದಕ್ಕಾಗಿ ಧ್ಯಾನ ಕೇಂದ್ರಗಳನ್ನು,ಅಧ್ಯಯನ ಕೇಂದ್ರಗಳನ್ನು ನಿರ್ಮಿಸಿಕೊಂಡು ಜಗತ್ತು ಯೋಗ ಜ್ಞಾನಕ್ಕೆ ಭಾರತವನ್ನು ನೋಡುವಂತೆ ಮಾಡಬೇಕು. ಈ ಹಿಂದೆ ನಳಂದ, ತಕ್ಷಶಿಲೆಯಂತ ವಿಶ್ವವಿದ್ಯಾಲಯಕ್ಕೆ ಅದೇಗೆ ಜ್ಞಾನವನ್ನರಸುತ್ತಾ ಇಲ್ಲಿಗೆ ವಿದೇಶಿಯರು ಬರುತ್ತಿದ್ದರೋ ಅದೇ ರೀತಿಯಲ್ಲಿ ಯೋಗದ ಮಹತ್ವವನ್ನು ಅರಿತು ಅನುಷ್ಠಾನಗೊಳಿಸಲು ಜನ ನಮ್ಮ ರಾಷ್ಟ್ರಕ್ಕೆ ಸರತಿ ಸಾಲಿನಲ್ಲಿ ಧಾವಿಸಬೇಕು. ಆವಾಗಲೇ ಜೂನ್ 21ರ ದಿನಕ್ಕೆ ಮಹತ್ವ ದೊರೆಯುವುದು. ಯೋಗವೆಂಬುದಕ್ಕೆ ಧಾರ್ಮಿಕತೆಯ ಲೇಪನ ಸಲ್ಲದು ಎನ್ನುವ ಮಾತಿನಲ್ಲಿ ಅರ್ಥವೇ ಇಲ್ಲ. ಯೋಗಕ್ಕೆ ಧರ್ಮ ಬೇಧವಿಲ್ಲದಿದ್ದರೂ ಯೋಗವೆಂಬುದು ಸನಾತನ ಧರ್ಮದ ಕೊಡುಗೆ ಎಂಬುದನ್ನು ಮರೆಯಕ್ಕಾಗುತ್ತದೆಯೇ? ಕೇರಳದಲ್ಲಿ ಮಾಡಿದಂತೆ ಯಾರನ್ನೋ ಮೆಚ್ಚಿಸಲು ಸೂರ್ಯ ನಮಸ್ಕಾರ ಮಾಡುವ ಜೀಸಸ್ ಕ್ರೈಸ್ತನ ಚಿತ್ರವನ್ನು ಅಚ್ಚು ಹಾಕಿಸಿದರೆ ಅದು ನಮಗೆ ನಾವೇ ಮಾಡುವ ಅವಮರ್ಯಾದಯಲ್ಲವೇ?  ಅಲ್ಪಸಂಖ್ಯಾತರಿಗೆ ಅಥವಾ ಇನ್ನಾರಿಗೋ ಮುಜುಗರವಾಗಬಲ್ಲುದು ಎನ್ನುತ್ತಾ ಯೋಗದಿಂದ ಓಂ ಕಾರವನ್ನು,ಸೂರ್ಯನಮಸ್ಕಾರವನ್ನು ಕೀಳುತ್ತಾ ನವೀಕರಿಸಿಕೊಂಡರೆ ಅದು ಖಂಡಿತಾ ಯೋಗಕ್ಕೆ ಮಾಡುವ ಅಪಮಾನ. ಯೋಗ ಮಾಡದೇ ಹೋದರೆ ಅದು ಅದು ಮನುಷ್ಯನಿಗಷ್ಟೇ ನಷ್ಟ ಹೊರತು ಯೋಗಕ್ಕಲ್ಲ ಎಂಬುದನ್ನು ಪ್ರತೀ ಭಾರತೀಯನು ಅರ್ಥೈಸಿಕೊಂಡರೆ ಈ ರೀತಿಯ ನವೀಕರಣದ ಆಟದ ಅಗತ್ಯವಿಲ್ಲ ಎಂಬುದು ಮನದಟ್ಟಾಗಬಹುದು.

ಕೊನೆ ಮಾತು: ‘ಯೋಗ’ವನ್ನು ಹಿಡಿದು ಸಾಧಿಸಿದರೆ ಆತ ‘ಯೋಗಿ’, ಬಿಟ್ಟು ಬಿಟ್ಟರೆ ಆತ ‘ರೋಗಿ’

 

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!