ಅಂಕಣ

ಬ್ಲ್ಯೂಟೂತ್ ಎಂಬ ನೀಲಿ ಹಲ್ಲಿನ ಮಾಂತ್ರಿಕ….!

ಇಂದು ನಾನು ಹೇಳ ಹೊರಟಿರುವುದು ಒಂದಾನೊಂದು ಕಾಲದಲ್ಲಿ ಮೊಬೈಲ್ ಫೋನ್’ಗಳಲ್ಲಿ ರಾಜನಾಗಿ ಮೆರೆದು ಇಂದು ತನ್ನ ಅಧಿಕಾರ ಹಾಗೂ ಅಸ್ತಿತ್ವವನ್ನು ಕಳೆದುಕೊಂಡಿರುವ ನೀಲಿ ಹಲ್ಲಿನ ಮಾಂತ್ರಿಕನ ಬಗ್ಗೆ. ಸೆಲ್ ಫೋನ್ ಯುಗವನ್ನು ಒಂದು ದಶಕಕ್ಕೂ ಹೆಚ್ಚುಕಾಲ ಆಳಿದ ದೊರೆ ನೋಕಿಯ ಇಂದು ಮರೆಯಾಗಿದೆ. ಹೌದು ಬದಲಾಗುತ್ತಿರುವ ಜಗತ್ತಿಗೆ ಹೊಸ ಐಡಿಯಾಗಳ ಅವಶ್ಯಕತೆ ಹೆಚ್ಚಾಗೆಯೇ ಇದೆ. ಬದಲಾವಣೆ ಜಗದ ನಿಯಮ. ಬದಲಾಗದಿದ್ದರೇ ೨೧ನೇ ಶತಮಾನದಲ್ಲಿ ಅದುವೆ ಸಮಾಜದಲ್ಲಿ ಯಾವ ಹಳೇ ಐಡಿಯಾಗಳಿಗೂ ಜಾಗವಿಲ್ಲ. ಅದೂ ಅಲ್ಲದೇ ಹೇಳೀ ಕೇಳೀ ಇದು ಐಫೋನ್ ಯುಗ. ಕೇವಲ ನಾಲ್ಕೈದು ವರ್ಷಗಳ ಹಿಂದೆ ಐಫೋನ್ ಭಾರತದ ಎಲ್ಲಾ ವರ್ಗದ ಜನತೆಗೆ ಎಟುಕದ ವಸ್ತುವಾಗಿತ್ತು. ಆದರೇ ಇಂದು ಐಫೋನ್ ಎಲ್ಲರ ಕೈಯಲ್ಲೂ ಸರ್ವೇಸಾಮಾನ್ಯವಾಗಿದೆ. ಹಾಗಂತ ಭಾರತ ಮೊಬೈಲ್ ಮಾರುಕಟ್ಟೆಯಲ್ಲಿ ಹಿಂದುಳಿದಿಲ್ಲ. ಕಳೆದ ಅರ್ಧ ದಶಕದಲ್ಲಿ ಹಲವಾರು ಸ್ಮಾರ್ಟ್ ಫೋನ್ ಕಂಪೆನಿಗಳು ಭಾರತದಲ್ಲಿ ತಲೆಯೆತ್ತಿವೆ. LAVA, INTEX, MICROMAX ಹಾಗೂ KARBONN ಸೇರಿದಂತೆ ಇನ್ನೂ ಹಲವಾರು ಸ್ಟಾರ್ಟ್ ಅಪ್ ಕಂಪನಿಗಳು ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತಮ್ಮ ಛಾಪು ಮೂಡಿಸಿವೆ.

ನಿಮಗೆ ಸರಿಯಾಗಿ ನೆನಪಿರಬಹುದು ಸುಮಾರು ಒಂದು ದಶಕಗಳ ಹಿಂದೆ ಅಂದರೆ ಆಗಿನ್ನೂ ಸ್ಮಾರ್ಟ್ ಫೋನ್ ಗಳು ಭಾರತೀಯ ಮಾರುಕಟ್ಟೆಯಲ್ಲಿ ಸದ್ದುಮಾಡಲು ಆರಂಭಿಸಿರಲಿಲ್ಲ. ಬರೀ ಬೇಸಿಕ್ ಸೆಟ್ ಮೊಬೈಲ್ ಫೋನ್ಗಳು ಹಾಗೂ ಕಾರ್ಡ್‌ಲೆಸ್ ಫೋನ್ಗಳು ಲಗ್ಗೆ ಇಟ್ಟ ಕಾಲ. ನೋಕಿಯಾ ಬೇಸಿಕ್ ಮಾಡೆಲ್ಗಳನ್ನು ಬಳಸಿದ ನೆನಪು ನಿಮಗಿರಬಹುದು. ಅದೇ ದೊಡ್ಡ ವಿಷಯ ಆ ದಿನಗಳಲ್ಲಿ. ಮೊಬೈಲ್ ಅನ್ನೋ ಸಾಧನವನ್ನು ವಿಚಿತ್ರವಾಗಿ ಕಾಣುತ್ತಿದ್ದ ದಿನಗಳು. ನೋಕಿಯಾ ಮಾರುಕಟ್ಟೆಯಲ್ಲಿ ಬಹಳ ಹೆಸರುಮಾಡಿದ್ದೇನೋ ಸತ್ಯ. ನಿಮಗೆ ನೆನಪಿರಬಹುದು ನೋಕಿಯ ತನ್ನ ಮೊಬೈಲ್ ಫೋನ್ ಗಳನ್ನು ಸ್ವಲ್ಪ ವಿನೂತನವಾಗಿ ಬದಲಾಯಿಸಿ ಮಾರುಕಟ್ಟೆಗೆ ಪರಿಚಯಿಸಿತು. ಅಂದರೆ ಹಾಡು, ಸಣ್ಣದೊಂದು ಕ್ಯಾಮರಾ, ಚಿಕ್ಕದೊಂದು ಮೆಮೋರಿ ಕಾರ್ಡ್ ಹಾಕಲು ಜಾಗ ಹೀಗೆ ಹೊಸ ಶೈಲಿಯನ್ನು ಬಿಡುಗಡೆ ಮಾಡಿದುದರ ಜೊತೆಗೆ ಬ್ಲ್ಯೂಟೂತ್ ಎಂಬ ಹೊಸ ತಂತ್ರಜ್ಞಾನವನ್ನೂ ಅಳವಡಿಸಿಕೊಂಡಿತು.

ಎಲ್ಲಿಯವರೆಗೂ ಸ್ಮಾರ್ಟ್ ಫೋನ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರಲಿಲ್ಲವೋ ಅಲ್ಲಿಯವರೆಗೂ ಬ್ಲ್ಯೂಟೂತ್ ತಂತ್ರಜ್ಞಾನ ಮೊಬೈಲ್ ಫೋನ್ಗಳಲ್ಲಿ ರಾಜನಾಗಿ ಮೆರೆದಿತ್ತು. ಆದರೆ ಸ್ಮಾರ್ಟ್ ಫೋನ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಲವು ವರ್ಷಗಳಲ್ಲಿ ಬ್ಲ್ಯೂಟೂತ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾ ಬಂದಿತು.

ನಾವೆಲ್ಲರೂ ಪ್ರತೀ ದಿನ ಯಾವುದಾದರು ಕಾರಣಕ್ಕೆ ಬ್ಲ್ಯೂಟೂತ್ ತಂತ್ರಜ್ಞಾನವನ್ನು ಉಪಯೋಗಿಸಿಯೇ ಇರುತ್ತೇವೆ. ಆದರೆ ಯಾರೂ ಇದು ಯಾವರೀತಿ ಕೆಲಸಮಾಡುತ್ತದೆ ಅನ್ನುವುದನ್ನ ತಿಳಿದುಕೊಂಡಿರುವುದಿಲ್ಲ. ಹಾಗಾದರೆ ಬನ್ನಿ ಬ್ಲ್ಯೂಟೂತ್ ಎಂಬ ನೀಲಿಹಲ್ಲಿನ ಮಾಂತ್ರಿಕನ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ಈ ನೀಲಿ ಹಲ್ಲಿನ ಮಾಂತ್ರಿಕ ಹುಟ್ಟಿದ್ದಾದರೂ ಹೇಗೆ ಮತ್ತು ಯಾವಾಗ ?. ಯಾಕೆ ಬ್ಲ್ಯೂಟೂತ್ ಅವಶ್ಯಕತೆ ಹುಟ್ಟಿತು ?. ಈ ತಂತ್ರಜ್ಞಾನ ಯಾವರೀತಿ ಕೆಲಸಮಾಡುತ್ತದೆ ಹಾಗೂ ಇನ್ನೂ ಹಲವಾರು ವಿಷಯಗಳನ್ನ ತಿಳಿದುಕುಳ್ಳೋಣ.

ಬ್ಲ್ಯೂಟೂತ್ ಎಂಬುದು ಅಲ್ಪ ಅಂತರದ ಸ್ಥಿರ ಮತ್ತು ಸಂಚಾರಿ ಸಾಧನಗಳ ನಡುವೆ ಖಾಸಗಿ ವಲಯ ಜಾಲಗಳನ್ನು ರಚಿಸಿಕೊಂಡು ದತ್ತ ಹಸ್ತಾಂತರ ನಡೆಸಲು ಬಳಸುವ ಮುಕ್ತ ನಿಸ್ತಂತು ಪ್ರೋಟೋಕಾಲ್. ಇದು ವಿಕಿಪೀಡಿಯ ನೀಡುವ ವ್ಯಾಖ್ಯಾನ. ಇನ್ನು ಸ್ವಲ್ಪ ಸರಳವಾಗಿ ಹೇಳೋದಾದರೆ, ಬ್ಲ್ಯೂಟೂತ್ ಎರಡು ಉಪಕರಣಗಳ ನಡುವೆ ಅಂದರೆ ಉದಾಹರಣೆಗೆ ಎರಡು ಮೊಬೈಲ್ ಫೋನ್ಗಳ ನಡುವೆ ಡಾಟಾ ವರ್ಗಾವಣೆ ಮಾಡಲು ಬಳಸುವ ನಿಸ್ತಂತು ತಂತ್ರಜ್ಞಾನ. ಬ್ಲ್ಯೂಟೂತ್ ತಂತ್ರಜ್ಞಾನ 2.4GH(gigahertz) ರೇಡಿಯೋ ತರಂಗದ ಪರಿಧಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಇದು ಅನೇಕ ಸಾಧನಗಳ ಜೊತೆ ಸಂಪರ್ಕ ಸಾಧಿಸಲು ಸಹಾಯಮಾಡುತ್ತದೆ.

ಬ್ಲ್ಯೂಟೂತ್ ನ ಪ್ರಮುಖ ವಿಶೇಷತೆಗಳು,

·         ಕಡಿಮೆ ತೊಡಕು

·         ಕಡಿಮೆ ವಿದ್ಯುತ್ ಬಳಕೆ

·         ಕಡಿಮೆ ಬೆಲೆಗೆ ಲಭ್ಯ

·         ಉತ್ತವ ಸಾಮರ್ಥ್ಯ

ಬ್ಲ್ಯೂಟೂತ್ ಸಾಧನ ಬರೀ ಮೊಬೈಲ್ ಫೋನ್ಗಳಲ್ಲಿ ಮಾತ್ರವಲ್ಲದೆ ಉಳಿದ ಕ್ಷೇತ್ರದಲ್ಲಿ ಅಂದರೆ ಫ್ಯಾಕ್ಸ್ ಕಳುಹಿಸಲು, ಮುದ್ರಣಮಾಡಲು ನಿಸ್ತಂತು ಸಾಧಕವಾಗಿ ಕೆಲಸಮಾಡುತ್ತದೆ. ಹಾಗೂ ಹ್ಯಾಂಡ್ಸ್ ಫ್ರೀ ಹೆಡ್ಸೆಟ್ ಗಳಲ್ಲಿಯೂ ಇದರ ಕೆಲಸ ಬಹಳ ಅದ್ಭುತ. ಇಂದು ಮಾರುಕಟ್ಟೆಯಲ್ಲಿ ಹಲವಾರು ವಿಧಗಳಲ್ಲಿ ಬ್ಲ್ಯೂಟೂತ್ ಲಭ್ಯವಿದೆ.

ಬ್ಲ್ಯೂಟೂತ್ ಹೆಸರು ಹುಟ್ಟಿದ್ದು ಹೇಗೆ?

ಬ್ಲ್ಯೂಟೂತ್ ಹೆಸರಿನ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ. ಅದೇನೆಂದರೆ ಈ ಹೆಸರನ್ನು ಡೆನ್ಮಾರ್ಕ್’ನ ಹತ್ತನೇ ಶತಮಾನದ ಹೆರಾಲ್ಡ್ ಬ್ಲಟಾಂಡ್ ಎಂಬ ರಾಜನಿಗೆ ಗೌರವ ಸೂಚಿಸಲು ಇಡಲಾಗಿದೆ. ಡೆನ್ಮಾರ್ಕ್’ನಲ್ಲಿ ಹೆರಾಲ್ಡ್ ಬ್ಲಟಾಂಡ್ ಎಂಬ ರಾಜನಿದ್ದನಂತೆ. ಬ್ಲೂಬೆರ್ರಿ ರಾಜನಿಗೆ ಬಹಳ ಇಷ್ಟವಾದ ಹಣ್ಣಾಗಿತ್ತಂತೆ. ಸದಾ ರಾಜ ಬ್ಲೂಬೆರ್ರಿ ತಿನ್ನುತ್ತಿದ್ದರಿಂದ ಆತನ ಹಲ್ಲುಗಳು ನೀಲಿ ಗಟ್ಟಿರುತ್ತಿದ್ದವಂತೆ. ಹಾಗಾಗಿ ರಾಜನನ್ನು ಎಲ್ಲರೂ ಬ್ಲ್ಯೂಟೂತ್ ರಾಜ ಎಂದು ಕರೆಯುತ್ತಿದ್ದರಂತೆ. ಹೆರಾಲ್ಡ್ ಬ್ಲಟಾಂಡ್ ರಾಜ ಬ್ಲ್ಯೂಟೂತ್ ಎಂಬ ಹೆಸರಿನಿಂದ ಪ್ರಖ್ಯಾತನಾಗಿದ್ದನಂತೆ. ಬ್ಲೂಟೂತ್ ಪದವು ಡೆನ್ಮಾರ್ಕ್ ನ ಹತ್ತನೇ-ಶತಮಾನದ ಚಕ್ರವರ್ತಿ ಹೆರಾಲ್ಡ್’ರ ಹೆಸರಾದ ಹಳೆಯ ನಾರ್ಸ್ ಭಾಷೆಯಲ್ಲಿ ಬ್ಲಾಟನ್ ಅಥವಾ ಡ್ಯಾನಿಷ್ನಲ್ಲಿ ಬ್ಲಾಟಂಡ್ ಎಂಬುದರ ಆಂಗ್ಲೀಕೃತ ಆವೃತ್ತಿಯಾಗಿದೆ. ಈ ಚಕ್ರವರ್ತಿಯು ಸಾಮರಸ್ಯದಿಂದಿರದ ಡ್ಯಾನಿಷ್ ಬುಡಕಟ್ಟುಗಳನ್ನು ಏಕೀಕೃತಗೊಳಿಸಿ ಸಾಮ್ರಾಜ್ಯ ಸ್ಥಾಪಿತಗೊಳಿಸಿದ್ದನು. ಇದರ ಅಂತರಾರ್ಥವೇನೆಂದರೆ  ಬ್ಲ್ಯೂಟೂತ್ ಸಂವಹನ ಪ್ರೋಟೋಕಾಲ್ಗಳೊಂದಿಗೆ ಅದೇ ರೀತಿಯಲ್ಲಿ ವ್ಯವಹರಿಸಿ, ಅವುಗಳನ್ನು ಒಂದು ಸಾರ್ವತ್ರಿಕ ಪ್ರಮಾಣಕ್ಕೆ ಒಳಪಡಿಸುತ್ತದೆ.

ಬ್ಲ್ಯೂಟೂತ್ ಚಿಹ್ನೆಯು ಬಂಧಕ ರೂನ್ ಚಿಹ್ನೆಯು ಜರ್ಮನಿಯ ರೂನ್ಗಳು  (ಹಗಲ್ಲ್) ಮತ್ತು  (ಬರ್ಕಾನನ್)ಗಳನ್ನು ಸಂಯೋಜಿಸಿದ ಚಿಹ್ನೆಯಾಗಿದೆ.

ಬ್ಲ್ಯೂಟೂತ್ ನ ವರ್ಗಗಳು,

ವರ್ಗ

ಗರಿಷ್ಠ ಅನುಮತಿಸಿದ ಶಕ್ತಿ

ವ್ಯಾಪ್ತಿ

mW (dBm)

(ಸರಿಸುಮಾರು)

ವರ್ಗ 1

100 mW (20 dBm)

~100 ಮೀಟರ್‌ಗಳು

ವರ್ಗ 2

2.5 mW (4 dBm)

~10 ಮೀಟರ್‌ಗಳು

ವರ್ಗ 3

1 mW (0 dBm)

~1 ಮೀಟರ್‌

ಬ್ಲ್ಯೂಟೂತ್ ಇತಿಹಾಸ,

೧೯೯೮ ರಲ್ಲಿ ಸ್ಪೆಶಲ್ ಇಂಟರೆಸ್ಟ್ ಗ್ರೂಪ್(Special Interest Group)  ಬ್ಲ್ಯೂಟೂತ್ ತಂತ್ರಜ್ಞಾನವನ್ನು ಮೊದಲಬಾರಿಗೆ ಹುಟ್ಟುಹಾಕುತ್ತದೆ. ೧೯೯೯ ರಲ್ಲಿ ಮೊದಲ ವರ್ಶನ್ 1.0 ಮಾರುಕಟ್ಟೆಯಲ್ಲಿ ಲಭ್ಯವಾಯಿತು. ಪ್ರಪ್ರಥಮಬಾರಿಗೆ ೨೦೦೦ನೇ ಇಸವಿಯಲ್ಲಿ ಈ ತಂತ್ರಜ್ಞಾನವನ್ನು ಮೊಬೈಲ್’ಫೋನ್ ಗಳಲ್ಲಿ, ಕಂಪ್ಯೂಟರ್’ಗಳಲ್ಲಿ, ಮೌಸ್’ಗಳಲ್ಲಿ ಹಾಗೂ ಹೆಡ್’ಸೆಟ್’ಗಳಲ್ಲಿ ಪರಿಚಯಿಸಲಾಯಿತು. ತದನಂತರ ಕ್ಯಾಮರಾಗಳಲ್ಲಿ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬ್ಲ್ಯೂಟೂತ್ ತಂತ್ರಜ್ಞಾನವನ್ನು ಅಳವಡಿಸಲಾಯಿತು.

ಕಾಲ ಬದಲಾದಂತೆ ತಂತ್ರಜ್ಞಾನಗಳೂ ಬದಲಾಗುತ್ತಿದೆ. ಹೇಳೀ ಕೇಳೀ ಇದು ಸ್ಮಾರ್ಟ್ ಫೋನ್ ಯುಗ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್. ವಿಧವಿಧವಾದ ತಂತ್ರಜ್ಞಾನ. “ನಿನ್ನ ಮೊಬೈಲ್’ನಲ್ಲಿ SHAREit ಇದೆಯ ?” ಅನ್ನೋ ಪ್ರಶ್ನೆಯನ್ನು ನಿಮಗೆ ಪ್ರತೀದಿನ ಯಾರಾದರೂ ಒಬ್ಬರು ಕೇಳಿಯೇ ಕೇಳಿರುತ್ತಾರೆ. ಬೆರಳ ತುದಿಯಲ್ಲೇ ಅದೆಷ್ಟೋ ಕೆಲಸಗಳು ಸುಲಭವಾಗಿ ನಡೆಯುತ್ತವೆ. ಅದೂ ಕ್ಷಣಮಾತ್ರದಲ್ಲಿ. ಬ್ಲ್ಯೂಟೂತ್ ಗಿಂತ ಹೆಚ್ಚಿನ ವೇಗದಲ್ಲಿ ಡಾಟಾ ವರ್ಗಾವಣೆ ಮಾಡಲು ಹಲವಾರು ತಂತ್ರಾಂಶಗಳು ಮಾರುಕಟ್ಟೆಯಲ್ಲಿ ಹೆಸರುಮಾಡಿವೆ. ಅದರಲ್ಲಿ ಪ್ರಮುಖವಾಗಿರುವುದು SHAREit, Xender, Superbeam, HitcherNet, Wifi Shoot, WiFi Direct+. ಬಹುತೇಕ ಎಲ್ಲಾ ಸ್ಮಾರ್ಟ್ ಫೋನ್ಗಳಲ್ಲಿ SHAREit ಅಪ್ಲಿಕೇಶನ್ ಇದ್ದೇ ಇರುತ್ತದೆ. SHAREit ಅನ್ನೋ ಹೊಸ ತಂತ್ರಜ್ಞಾನದಿಂದ ಬ್ಲ್ಯೂಟೂತ್ ತನ್ನ ಇರುವಿಕೆಯನ್ನೇ ಕಳೆದುಕೊಂಡಿದೆ. ಬದಲಾಗುತ್ತಿರುವ ಜಗತ್ತಿಗೆ ತಕ್ಕ ತಂತ್ರಜ್ಞಾನ. ಏನೇ ಇರಲಿ ಈ ತಂತ್ರಜ್ಞಾನಗಳು ನಮ್ಮನ್ನು ಆಳುವ ಪರಿಸ್ಥಿತಿ ಬರದಿದ್ದರೆ ಅಷ್ಟೇ ಸಾಕು. ಏನಂತೀರಾ…!

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Madhyasta

ಹೆಸರು ಮಂಜುನಾಥ್ ಮಧ್ಯಸ್ಥ. ಓದಿದ್ದು ವಿಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ. ಬರೆಯೋದು ನೆಚ್ಚಿನ ಹವ್ಯಾಸ. ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ನನ್ನ ನೆಚ್ಚಿನ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!