Featured ಅಂಕಣ

ಬದುಕಲ್ಲಿ ಸಿಕ್ಕಿದ ಅವಕಾಶಗಳಿಗೆ ಕೃತಜ್ಞರಾಗಿರಿ……

“ನಾವು ಯಾರೂ ಕೂಡ ಜೀವಂತವಾಗಿಯೇ ಈ ಬದುಕಿನಿಂದಾಚೆ ಹೋಗುವುದಿಲ್ಲ. ಹಾಗಾಗಿ ಧೈರ್ಯಶಾಲಿಗಳಾಗಿರಿ, ವಿನಯಶೀಲರಾಗಿರಿ, ಉತ್ತಮರಾಗಿರಿ ಹಾಗೂ ಬದುಕಲ್ಲಿ ಸಿಕ್ಕಿದ ಅವಕಾಶಗಳಿಗೆ ಕೃತಜ್ಞರಾಗಿರಿ” ಹೈಸ್ಕೂಲ್ ಹುಡುಗನೊಬ್ಬ ತನ್ನ ಶಾಲೆಯ ಪ್ರೈಜ್ ಗೀವಿಂಗ್ ಸಮಾರಂಭದಲ್ಲಿ ಭಾಷಣ ಮಾಡಿದ್ದ. ಈ ಭಾಷಣವನ್ನು ಬರೆದುಕೊಂಡಾಗ ಬಹುಶಃ ಈ ಮಾತುಗಳ ಆಳ ಅತನಿಗೂ ತಿಳಿದಿರಲಿಲ್ಲವೇನೋ?! ಆದರೆ ಆತ ಶಾಲೆಯಲ್ಲಿ ಎಲ್ಲರ ಎದುರು ಈ ಮಾತುಗಳನ್ನು ಹೇಳುವಾಗ ಮಾತ್ರ ಅವುಗಳ ಆಳ ಅಕ್ಷರಶಃ ಅರಿವಾಗಿತ್ತು.

      ಆತ ಅಂದು ಆ ಸಮಾರಂಭಕ್ಕೆ ಬಂದು ಭಾಷಣ ಮಾಡುತ್ತಾನೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಸ್ವತಃ ಆತ ಕೂಡ. ಆತನ ಡಾಕ್ಟರ್ ಕೂಡ ಅದನ್ನೇ ಹೇಳಿದ್ದರು. ಆದರೆ ಅಲ್ಲಿ ಕೆಲಸ ಮಾಡುತ್ತಿದ್ದ ನರ್ಸ್, “ನೀನಿದನ್ನ ಮಾಡಲಿಲ್ಲ ಅಂತ ಪಶ್ಚಾತ್ತಾಪ ಪಡಬಾರದು ಅಂತ ನಾನು ಬಯಸುತ್ತೇನೆ” ಎಂದಳಂತೆ. ಆ ಮಾತುಗಳೇ ಅತನನ್ನು ಆಸ್ಪತ್ರೆಯ ಹೊರ ಬಂದು ಭಾಷಣ ನೀಡುವಂತೆ ಮಾಡಿತ್ತು. ಅಂದು ಕಣ್ಣು ತುಂಬಿ ತನ್ನೆಲ್ಲಾ ಸಹಪಾಠಿಗಳ, ಶಿಕ್ಷಕರ, ಗಣ್ಯರ ಎದುರಿಗೆ ಮಾಡಿದ ಆ ಭಾಷಣ ಯೂಟ್ಯೂಬಿನಲ್ಲಿ ಹರಿದಾಡಿ ಲಕ್ಷ-ಲಕ್ಷ ಜನರ ಕಣ್ಣಂಚನ್ನ ತೇವಗೊಳಿಸಿತ್ತು.

     ಜೇಕ್ ರಾಸ್ ಬೈಲಿ, ಈ ಭಾಷಣವನ್ನು ಬರೆದಾಗ ಆತನ ಬದುಕು ಎಲ್ಲರಂತೆಯೇ ಸಾಧಾರಣವಾಗಿತ್ತು. ಆದರೆ ಸಮಾರಂಭಕ್ಕೆ ಇನ್ನೇನು ಒಂದು ವಾರವಿದೆ ಎನ್ನುವಾಗ ಆತನಿಗೆ ಕ್ಯಾನ್ಸರ್ ಇದೆ ಎಂದು ತಿಳಿಯಲ್ಪಟ್ಟಿತ್ತು. ತಕ್ಷಣವೇ ಚಿಕಿತ್ಸೆ ಆರಂಭಿಸದೇ ಇದ್ದಲ್ಲಿ, ಮೂರು ವಾರಗಳಲ್ಲೇ ಸಾವುಂಟಾಗಬಹುದು ಎಂದಿದ್ದರು. ಅಂದು ಆಸ್ಪತ್ರೆಯಲ್ಲಿ ನರ್ಸ್ ಹೇಳಿದ ಮಾತುಗಳೇ ಆತನಿಗೆ ಸ್ಪೂರ್ತಿಯಾಗಿದ್ದವು, ಅದೇನೆ ಇರಲಿ, ಕ್ಯಾನ್ಸರ್ ಎಂದು ತಿಳಿದ ಒಂದೇ ವಾರದಲ್ಲಿ ಎಲ್ಲರೆದುರಲ್ಲಿ ವೀಲ್ಚೇರ್’ನಲ್ಲಿ ಬಂದು ಇಂತಹ ಒಂದು ಭಾಷಣ ಮಾಡುವುದಕ್ಕೆ, ಅದರಲ್ಲೂ ತನಗೆ ಕ್ಯಾನ್ಸರ್ ಉಂಟಾಗಿದೆ ಎಂದು ಒಂದು ದೊಡ್ದ ಸಮಾರಂಭವೊಂದರಲ್ಲಿ ಹೇಳಿಕೊಳ್ಳುವುದಕ್ಕೆ ಎದೆಗಾರಿಕೆ ಬೇಕು. ಯಾಕೆಂದರೆ ೧೭-೧೮ ವರ್ಷದ ಹುಡುಗನೊಬ್ಬನಿಗೆ ಆ ಕಟು ಸತ್ಯವನ್ನು ಒಪ್ಪಿಕೊಳ್ಳುವುದಕ್ಕೇ ಸಮಯ ಬೇಕು. ಮನಸ್ಸು ಒಂದು ದೊಡ್ಡ ರಣರಂಗವಾಗಿರುತ್ತದೆ. ಯಾಕೆ? ಏನು? ಹೇಗೆ? ಮುಂದೆ? ಮುಂದೆ ಎನ್ನುವುದಾದರೂ ಇದೆಯಾ ಎಂಬ ಪ್ರಶ್ನೆಗಳು ಮನದಲ್ಲಿ ಭೋರ್ಗರೆಯುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಆತ ತೋರಿದ ಎದೆಗಾರಿಕೆ ನಿಜಕ್ಕೂ ಮೆಚ್ಚುವಂತದ್ದು.

  ಹಲ್ಲು ಮತ್ತು ದವಡೆ ನೋವಿನಿಂದ ಬಳಲುತ್ತಿದ್ದ ಜೇಕ್, ಡಾಕ್ಟರ್ ಬಳಿ ಹೋದಾಗ ಆತನಿಗೆ ತಿಳಿದದ್ದು, ಆತನಿಗೆ ಬರ್ಕಿತ್ಸ್ ನಾನ್ ಹಾಡ್ಕಿನ್ಸ್ ಲಿಂಫೋಮ ಉಂಟಾಗಿದೆ ಎಂದು. ಅದೂ ಕೂಡ ನಾಲ್ಕನೇ ಸ್ಟೇಜಲ್ಲಿತ್ತು. ವಾರದೊಳಗೆ ಆತನಿಗೆ ಚಿಕಿತ್ಸೆ ಆರಂಭಿಸಬೇಕಿತ್ತು. ಹಾಗಾಗಿ ತಕ್ಷಣವೇ ಆತ ಆಸ್ಪತ್ರೆಗೆ ದಾಖಲಾಗಿದ್ದ. ಅಂದು ಆತ ಆ ಸಮಾರಂಭಕ್ಕೆ ವೀಲ್ಚೇರ್’ನಲ್ಲಿ ಬಂದು ಭಾಷಣ ಮಾಡಿದಾಗ, ಮೊದಲನೇ ಕೀಮೋ ತೆಗೆದುಕೊಂಡು ಕೇವಲ ನಾಲ್ಕೈದು ದಿನವಾಗಿತ್ತಷ್ಟೆ.

ಶಾಲೆಯ ಹೆಡ್ ಮಾನಿಟರ್ ಆಗಿದ್ದ ಜೇಕ್ ಅಂದು ತನ್ನ ಸಹಪಾಠಿಗಳನ್ನುದ್ದೇಶಿಸಿ ಮಾತನಾಡಿದ್ದು, ಅಲ್ಲಿ ನೆರೆದಿದ್ದವರೆಲ್ಲರಿಗೂ ಸ್ಪೂರ್ತಿ ನೀಡುವಂತಾಗಿತ್ತು ಎಂದರೆ ಅತಿಶಯೋಕ್ತಿಯಾಗುವುದಿಲ್ಲ. “ನಮ್ಮ ಬದುಕು ಯಾವಾಗ ಕೊನೆಗೊಳ್ಳುತ್ತದೋ ಅಥವಾ ಹೇಗೆ ಕೊನೆಗೊಳ್ಳುತ್ತದೋ ಗೊತ್ತಿಲ್ಲ, ಹಾಗಾಗಿ ನಮ್ಮ ಮುಂದೆ ಏನಿದೆಯೋ ಅದಕ್ಕಾಗಿ ಹೆಮ್ಮೆ ಇಂದ ಕೆಲಸ ಮಾಡೋಣ” ಎಂದಿದ್ದ ಜೇಕ್. ಅಂದು ಅಲ್ಲಿದ್ದ ವಿದ್ಯಾರ್ಥಿಗಳೆಲ್ಲರ ಬದುಕು ಈ ಮಾತುಗಳನ್ನು ಕೇಳಿ ಹಾಗೂ ಜೇಕ್’ನ ಧೈರ್ಯವನ್ನು ನೋಡಿ ಬದಲಾಗಿರುತ್ತದೆ.

ಆತನ ಮಾತುಗಳನ್ನ ಕೇಳಿದ ಅಲ್ಲಿನ ವಿದ್ಯಾರ್ಥಿಗಳು ಉದ್ವೇಗಗೊಂಡು, ಆತನಿಗೆ ಗೌರವ ಸೂಚಕವಾಗಿ  ನ್ಯೂಜಿಲ್ಯಾಂಡ್’ನ ಸಾಂಪ್ರಾದಾಯಿಕ ನೃತ್ಯ ಎನಿಸಿಕೊಂಡ ‘ಹಾಕ’(Haka)ವನ್ನು ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಜೇಕ್ “ನಿಜಕ್ಕೂ ಅದು ನನ್ನ ಬದುಕಿನ ಅತ್ಯಂತ ಅದ್ಭುತ ಕ್ಷಣ. ಆ ಗೌರವವನ್ನು ಪಡೆದುಕೊಳ್ಳುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ” ಎನ್ನುತ್ತಾನೆ.

ಆತ ತನ್ನ ಭಾಷಣದ ಮಧ್ಯೆ ಹೇಳಿದ “ನಾವು ಯಾರೂ ಕೂಡ ಜೀವಂತವಾಗಿಯೇ ಈ ಬದುಕಿನಿಂದಾಚೆ ಹೋಗುವುದಿಲ್ಲ. ಹಾಗಾಗಿ ಧೈರ್ಯಶಾಲಿಗಳಾಗಿರಿ, ವಿನಯಶೀಲರಾಗಿರಿ, ಉತ್ತಮರಾಗಿರಿ ಹಾಗೂ ಬದುಕಲ್ಲಿ ಸಿಕ್ಕಿದ ಅವಕಾಶಗಳಿಗೆ ಕೃತಜ್ಞರಾಗಿರಿ” ಎಂಬ ಮಾತು ಅವಾರ್ಡ್’ನ್ನು ಕೂಡ ಪಡೆದುಕೊಂಡಿದೆ. ನ್ಯೂಜಿಲ್ಯಾಂಡ್’ನ ಮ್ಯಾಸ್ಸೀ ಯೂನಿವರ್ಸಿಟಿ “ಕ್ವೋಟ್ ಆಫ಼್ ದ್ ಇಯರ್” ಎಂಬ ಪ್ರಶಸ್ತಿಯನ್ನು ನೀಡಿದೆ. ಆತನ ಆ ಭಾಷಣ ಎಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತೆಂದರೆ ಸುಮಾರು ೧.೬ಮಿಲಿಯನ್’ಗೂ ಹೆಚ್ಚು ಬಾರಿ ಅದನ್ನು ವೀಕ್ಷಿಸಲಾಗಿದೆ. ಅದರ ನಂತರ ಹತ್ತು ಹಲವಾರು ದೇಶಗಳಿಂದ ಆತನಿಗೆ ಸಂದೇಶಗಳು ಬರಲಾರಂಭಿಸಿದ್ದವು. ಆದರೆ ಆತ ಹೇಳಿದ್ದು, “ನಾನು ನಿಜಕ್ಕೂ ನಿಮ್ಮೆಲ್ಲರ ಸಹಕಾರ. ಆಶಯಗಳಿಗೆ ಕೃತಜ್ಞನಾಗಿದ್ದೇನೆ. ಆದರೆ ಸಾಕಷ್ಟು ಜನ ನನ್ನ ಹಾಗೆ ಕ್ಯಾನ್ಸರ್’ನಿಂದ ಬಳಲುತ್ತಿರುವಾಗ, ನನಗಿಂತ ಹೆಚ್ಚು ಅನುಭವಿಸುತ್ತಿರುವಾಗ, ನನಗೆ ಮಾತ್ರ ಸಿಗುತ್ತಿರುವ ಜನರ ಗಮನ ಅಥವಾ ಪ್ರಸಿದ್ಧತೆ ಮುಜುಗರವನ್ನುಂಟು ಮಾಡುತ್ತಿದೆ. ನಿಜವಾಗಿಯೂ ಯಾರದೇ ಸಹಕಾರವಿಲ್ಲದೇ ಬದುಕಿಗಾಗಿ ಹೋರಾಡುತ್ತಿರುವವರಿಗೆ ನಮ್ಮ ಗಮನ ಹರಿಸಬೇಕು” ಎನ್ನುತ್ತಾನೆ. ವಯಸ್ಸಿನಲ್ಲಿ ಚಿಕ್ಕವನಾದರೂ ಆತನ ವ್ಯಕ್ತಿತ್ವ ಆತನನ್ನ ಎತ್ತರದಲ್ಲಿ ನಿಲ್ಲುವಂತೆ ಮಾಡುತ್ತದೆ.

    ಆತನ ಕ್ಯಾನ್ಸರ್ ಅನುಭವದ ಬಗ್ಗೆ ಕೇಳಿದಾಗ, “ಅದನ್ನ ವಿವರಿಸುವುದು ಕಷ್ಟ, ಒಬ್ಬ ಕ್ಯಾನ್ಸರ್ ಸರ್ವೈವರ್ ಮಾತ್ರ ಅದನ್ನ ಸರಿಯಾಗಿ  ಅರ್ಥ ಮಾಡಿಕೊಳ್ಳಲು ಸಾಧ್ಯ.” ಎನ್ನುವ ಜೇಕ್, “ಕ್ಯಾನ್ಸರ್’ನಲ್ಲಿ ನಾವು ಎಷ್ಟರ ಮಟ್ಟಿಗೆ ಸಾಯುತ್ತಿರುತ್ತೇವೋ ಅಷ್ಟೇ ಪ್ರಮಾಣದಲ್ಲಿ ನಮ್ಮ ತಂದೆ ತಾಯಿಗಳು ಕೂಡ ಅನುಭವಿಸುತ್ತಿರುತ್ತಾರೆ” ಎನ್ನುತ್ತಾನೆ. ಜೇಕ್’ನ ಈ ಮಾತು ನನ್ನ ಮನಸ್ಸಿಗೆ ಬಹಳ ಹತ್ತಿರ ಎನಿಸಿದ್ದು. ಕ್ಯಾನ್ಸರ್ ಆಗಿರುವುದಿಲ್ಲ ಎಂಬ ಒಂದು ಅಂಶವನ್ನು ಬಿಟ್ಟರೆ, ತಂದೆ-ತಾಯಿಗಳು ಕೂಡಾ ನಮ್ಮಷ್ಟೇ ಅನುಭವಿಸುತ್ತಿರುತ್ತಾರೆ. ನಮಗಿಂತ ಹೆಚ್ಚು ಎಂದರೂ ಅತಿಶಯೋಕ್ತಿ ಆಗುವುದಿಲ್ಲ.

ಜೇಕ್ ಹೇಳುವಂತೆ ಸಾವನ್ನು ಹತ್ತಿರದಿಂದ ನೋಡುವುದರ ಪರಿಣಾಮವೆಂದರೆ ನಾವು ನಿಜವಾಗಿಯೂ ಯಾರು ಹಾಗೂ ಏನಾಗ ಬಯಸುತ್ತೇವೆ ಎಂಬುದರ ಬಗ್ಗೆ ಗಹನವಾಗಿ ಚಿಂತನೆ ಮಾಡುತ್ತೇವೆ ಎನ್ನುವುದು. ವೈಚಿತ್ರ್ಯವೆಂದರೆ ನಮಗೆ ಅಲ್ಲಿಯ ತನಕ ಅಂತಹ ಆಳವಾದ ಯೋಚನೆಗಳು ಬರುವುದೇ ಇಲ್ಲ. ಬಂದರೂ ಅಷ್ಟೊಂದು ವಿಚಾರ ಕೂಡ ಮಾಡುವುದಿಲ್ಲ. ‘ನಾವು ಹೆಚ್ಚು ಪ್ರಜ್ಞಾಪೂರ್ವಕವಾಗಿ ಬದುಕಲಾರಂಭಿಸಿದಾಗ ಬದುಕು ಸುಂದರವಾಗುತ್ತದೆ’ ಎಂಬ ಸದ್ಗುರುವಿನ ಮಾತು ಕೇಳಿದಾಗ, ಹಾಗಾದರೆ ನಾವು ಪ್ರಜ್ಞಾಪೂರ್ವಕವಾಗಿ ಬದುಕುತ್ತಿಲ್ಲವಾ? ಅಷ್ಟೊಂದು ನಿರ್ಲಕ್ಷ್ಯದಿಂದ್ದೇವಾ? ನಮ್ಮ ಬದುಕನ್ನ ನಾವು ಗಮನಿಸುತ್ತಿಲ್ಲವಾ ಎಂಬ ಪ್ರಶ್ನೆಗಳು ಏಳುತ್ತವೆ. ಅದು ನಿಜವೂ ಹೌದು, ನಾವು ದಿನಂಪ್ರತಿ ಕೆಲಸಗಳಲ್ಲಿ ಎಷ್ಟು ಮುಳುಗಿದ್ದೇವೆ ಅಂದರೆ ನಮ್ಮ ಬದುಕು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಗಮನ ಹರಿಸಲು ಸಮಯವೇ ಇಲ್ಲ.

   ಅದೇನೆ ಇರಲಿ, ಜೇಕ್ ಇಂದು ಸಂಪೂರ್ಣವಾಗಿ ಗುಣಮುಖವಾಗಿದ್ದಾನೆ. ವಾಣಿಜ್ಯ ಹಾಗೂ ನ್ಯಾಯಶಾಸ್ತ್ರದಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಬೇಕು ಎಂದುಕೊಂಡಿರುವ ಜೇಕ್, ಸವಾಲುಗಳನ್ನು ಎದುರಿಸುತ್ತಿರುವ ಯುವ ಜನರನ್ನ ತನ್ನ ಬದುಕಿನ ಬಗ್ಗೆ ಹೇಳಿ ಸ್ಪೂರ್ತಿ ತುಂಬುವ ಹೆಬ್ಬಯಕೆಯನ್ನು ಕೂಡ ಹೊಂದಿದ್ದಾನೆ. ಆದರೆ ಅದಕ್ಕೂ ಮುಂಚೆ, “ಕೀಮೊ ಇಂದಾಗಿ ೧೮ ವರ್ಷದವನಾದ ನಾನು, ೮೧ ವರ್ಷದವನಾಗಿರುವಂತೆ ಭಾಸವಾಗುತ್ತಿದೆ. ನಾನು ಮೊದಲಿನಂತೆ ಫಿಟ್ ಆಗಬೇಕು. ಅದಕ್ಕೆ ಮೊದಲ ಆದ್ಯತೆ” ಎಂದಿದ್ದಾನೆ. ಆತನ ಕನಸುಗಳೆಲ್ಲ ನನಸಾಗಲಿ, ತನ್ನ ಬದುಕಿನಿಂದ ಇನ್ನೂ ಹೆಚ್ಚು ಜನರಿಗೆ ಸ್ಪೂರ್ತಿ ತುಂಬಲಿ ಎಂದು ಆಶಿಸೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!