Featured ಅಂಕಣ

ಪಾಪಿ ರಾಷ್ಟ್ರದಲ್ಲಿ ಭಾರತಾಂಬೆಗಾಗಿ ಅಮರನಾದ “ರವೀಂದ್ರ”

ದೇಶಕ್ಕಾಗಿ ಬದುಕುವವರೆಷ್ಟು ಜನ? ಉದ್ದುದ್ದ ಭಾಷಣ ಬಿಗಿಯುವ ಅದೆಷ್ಟು ರಾಜಕಾರಣಿಗಳು ಭಾರತಾಂಬೆಗೆ ಜೀವ ನೀಡಲು ತಯಾರಿದ್ದಾರೆ? ಆದರೆ ಕೆಲವರು ಸುದ್ದಿಯಿಲ್ಲದೆ ದೇಶ ಸೇವೆ ಮಾಡಿ ಮರೆಯಾಗಿ ಬಿಡುತ್ತಾರೆ, ಅವರೆಂದೂ ಪ್ರಚಾರ ಬಯಸುವುದೇ ಇಲ್ಲ. ಸಂಸಾರ, ಮನೆ, ಮಕ್ಕಳು ಅವರ ತಲೆಯಲ್ಲಿ ಸುಳಿಯುವುದೇ ಇಲ್ಲ ಬದಲಾಗಿ ಆಶ್ರಯ ನೀಡಿದ ಭಾರತಾಂಬೆಯ ಕಾಪಾಡುವುದೇ ಸರ್ವಸ್ವ ಎಂದುಕೊಂಡು ಜೀವಿಸಿ ಬಿಡುತ್ತಾರೆ. ಸಾವರ್ಕರ್ ಆ ತರ ಬದುಕಿದ್ದರು, ಮಗ ಹೆಂಡತಿಯನ್ನು ಕಳೆದುಕೊಂಡರೂ ನೋವನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡು ದೇಶಕ್ಕಾಗಿ ಬದುಕಿ ಬಿಟ್ಟ ಮಹಾನ್ ಸಂತ ಆತ. ಬಹುಷ: ಅಂತಹವರಿಲ್ಲದಿದ್ದರೆ ಭಾರತಾಂಬೆ ದಾಸ್ಯದ ಸಂಕೋಲೆಯಿಂದಾಚೆ ಬರಲು ಸಾಧ್ಯವೇ ಇರಲಿಲ್ಲವೇನೋ.ನಮ್ಮನ್ನಾಳುವವರು ಈ ದೇಶವನ್ನು ಒಡೆದು ಆಳಲು ಸ್ವಾತಂತ್ರ್ಯ ನಂತರವೂ ಪ್ರಯತ್ನಿಸಿದರು ಮತ್ತು ಅದರಲ್ಲಿ ಬಹುಪಾಲು ಯಶಸ್ಸನ್ನೂ ಹೊಂದಿದರು.ಆದರೆ ಅವರು ದೇಶವನ್ನು ತಮ್ಮ ಅಧೀನದಲ್ಲಿರಿಸಿಕೊಳ್ಳಲು ಆಗ ಅನುಸರಿಸಿದ್ದು ಜಾತಿ ಧರ್ಮದ ಆಧಾರದ ಮೇಲೆ ಜನರನ್ನು ಒಡೆದು ಆಳುವ ವ್ಯವಸ್ಥಿತ ಸಂಚಿನ ದಾರಿಯನ್ನು.  

ಬಹುಷ: ನಿಮಗೆಲ್ಲ   ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ ಅಥವಾ ರಿಸರ್ಚ್  ಅಂಡ್ ಅನ್ಯಾಲಿಸಿಸ್ ವಿಂಗ್ ಅಥವಾ RAW ಎಂಬ ನಮ್ಮ ಸರಕಾರದ ಅಧಿಕೃತ ಬೇಹುಗಾರಿಕಾ ಸಂಸ್ಥೆಯ ಬಗ್ಗೆ ತಿಳಿದಿರುತ್ತದೆ.ಸಾಮಾನ್ಯವಾಗಿ ಭಾರತದ ಹೊರಗಡೆ ಕಾರ್ಯ ನಿರ್ವಹಿಸುವ ಈ ಸಂಘಟನೆ ಇತರೆ ದೇಶಗಳ ಚಟುವಟಿಕೆ, ಅವುಗಳ ರಾಜತಾಂತ್ರಿಕ ನೀತಿ ಮತ್ತು ಅಲ್ಲಿನ ಆಗು ಹೋಗುಗಳನ್ನು ವಿಶ್ಲೇಷಿಸಿ ಭಾರತ ಸರ್ಕಾರಕ್ಕೆ ವರದಿ ಮಾಡುತ್ತದೆ. ಇಷ್ಟೇ ಅಲ್ಲದೇ ಭಾರತದಲ್ಲಿ ನಡೆಯುವ ಆಂತರಿಕ ಭಯೋತ್ಪಾದನೆ ಮತ್ತು ಉನ್ನತ ಸಮಾಜಘಾತುಕ ಶಕ್ತಿಗಳನ್ನು ಸೆದೆ ಬಡಿಯಲು ಕೂಡ ರಾ ವಿಭಾಗವು ತನ್ನ ಬೇಹುಗಾರಿಕಾ ಪಡೆಯನ್ನು ಬಳಸುತ್ತದೆ.1962 ರ ಭಾರತ-ಚೀನ ಯುದ್ಧ ಮತ್ತು 1965ರ ಭಾರತ-ಪಾಕಿಸ್ತಾನ ಯುದ್ಧದ ಬಳಿಕ ಬೇಹುಗಾರಿಕಾ ಪಡೆಯ ಅಗತ್ಯತೆಯನ್ನು ಭಾರತ ಸರ್ಕಾರ ಮನಗಂಡು 1968ರ ಸೆಪ್ಟೆಂಬರ್ 21ರಂದು ‘ರಾ’ವನ್ನು ಹುಟ್ಟು ಹಾಕಲಾಯಿತು. ದೆಹಲಿಯಲ್ಲಿ ಇದರ ಪ್ರಧಾನ ಕಚೇರಿಯಿದೆ. ಭಾರತದ ಪರಮಾಣು ಅಸ್ತ್ರಗಳ ಪರೀಕ್ಷೆಗೆ ಸಂಬಂಧಿಸಿದ ನಗುವ ಬುದ್ಧ (ಸ್ಮೈಲಿಂಗ್ ಬುದ್ಧ) ಕಾರ್ಯಾಚರಣೆಯ ಸುರಕ್ಷತೆಯ ಹೊಣೆಯನ್ನು ‘ರಾ’ ಹೊತ್ತುಕೊಂಡು ಯಶಸ್ವಿಯಾಗಿ ಮುಗಿಸಿತ್ತು. ಕಾರ್ಗಿಲ್ ಯುದ್ಧ ಮತ್ತು ಭಾರತದ ಇತರೇ ರಹಸ್ಯ ಕಾರ್ಯಾಚರಣೆಯಲ್ಲೂ ‘ರಾ’ ತನ್ನದೇ ಪಾತ್ರ ವಹಿಸುತ್ತ ಬಂದಿದೆ.

RAW ದಲ್ಲಿ ಅದೆಷ್ಟೋ ಯುವಕರು ಕೆಲಸ ಮಾಡುತ್ತಾರೆ, ದೇಶಕ್ಕಾಗಿ ಕೆಲಸ ಮಾಡುತ್ತಾರೆ!!. ಪತ್ತೇದಾರಿಯಾಗಿ ತಮ್ಮನ್ನು ತಾವು ಎಂತಹ ಕಷ್ಟದ  ಸನ್ನಿವೇಶಕ್ಕೂ ತಳ್ಳಿಕೊಳ್ಳಲು ಅವರು ತಯಾರಿರುತ್ತಾರೆ.ಇಲ್ಲೊಬ್ಬ  ಭಾರತಾಂಬೆಗೆ ತೆರೆಮರೆಯಲ್ಲೇ ಅಮೂಲ್ಯ ಸೇವೆ ಮಾಡಿದ ಹೀರೊ ಇದ್ದಾನೆ, ಕ್ಷಮಿಸಿ ಆತ ಈಗ ಬದುಕಿಲ್ಲ. ಸೇವೆ ಮಾಡುತ್ತಾ ಮಾಡುತ್ತಾ ತನ್ನನ್ನು ತಾನು ಭಾರತಾಂಬೆಗೆ ಅರ್ಪಿಸಿಕೊಂಡ ಹುತಾತ್ಮ ಆತ.ಇದು ಭಾರತಕ್ಕಾಗಿ ಬದುಕಿದ ಮತ್ತು ಭಾರತಕ್ಕಾಗಿಯೇ ತನ್ನ ಪ್ರಾಣ ತೆತ್ತ “ಪತ್ತೇದಾರಿ”ಯೊಬ್ಬನ ಜೀವನ ಕಥೆ.ಆತನೇ “ರವೀಂದ್ರ ಕೌಶಿಕ್”.

ರವೀಂದ್ರ ಕೌಶಿಕ್ ಭಾರತದ ಅಧಿಕೃತ ಬೇಹುಗಾರಿಕಾ ಸಂಸ್ಥೆ RAW ದಲ್ಲಿ ಪತ್ತೇದಾರಿಯಾಗಿ ಸುದೀರ್ಘ ಸಮಯದವರೆಗೆ ಕೆಲಸ ಮಾಡಿದ ವ್ಯಕ್ತಿ. ರಾಜಸ್ಥಾನದ ಗಂಗಾ ನಗರದ ಏಪ್ರಿಲ್  11 1952ರಲ್ಲಿ ಜನಿಸಿದ ರವೀಂದ್ರ ತನ್ನ ಬಿ.ಕಾಮ್ ಪದವಿಯನ್ನು  23ನೇ ವಯಸ್ಸಿನಲ್ಲಿ ಮುಗಿಸುತ್ತಾನೆ. ಪದವಿಯನ್ನು ಲಕ್ನೌದಲ್ಲಿ ಓದುತ್ತಿದ್ದ ಸಮಯದಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದ ರವೀಂದ್ರನ ಅಭಿನಯವನ್ನು ಎಲ್ಲರೂ ಮೆಚ್ಚುತ್ತಿದ್ದರು. ತನ್ನ ಮನೋಜ್ಞ ಅಭಿನಯದಿಂದ ಇಡೀ ಕಾಲೇಜ್’ನಲ್ಲಿ ಸ್ವಲ್ಪ ಹೆಸರು ಗಳಿಸಿದ್ದ ರವೀಂದ್ರ. ಒಮ್ಮೆ ರವೀಂದ್ರನ ಅಭಿನಯವನ್ನು ನೋಡಿದ್ದ RAW ಅಧಿಕಾರಿಯೊಬ್ಬರು ಆತನನ್ನು RAW ಸೇರಿಸಿಕೊಳ್ಳಲು ಬಯಸುತ್ತಾರೆ. ಪರಿಣಾಮ ರವೀಂದ್ರ ತನ್ನ 23ನೇ ವಯಸ್ಸಿನಲ್ಲಿ ಭಾರತದ ಪತ್ತೇದಾರಿ ಸಂಸ್ಥೆಯನ್ನು ಸೇರುತ್ತಾನೆ.

ಅದು 1975ರ ಸಮಯ ಪಾಕಿಸ್ತಾನ ಮತ್ತೆ ಭಾರತದ ಮೇಲೆ ದಾಳಿ ನಡೆಸಲು ತಯಾರಾಗಿದೆ ಎಂಬ ಆಂತರಿಕ ಸುದ್ದಿ ರಾ ಗೆ ಲಭಿಸಿತ್ತು. ಪಾಕಿಸ್ತಾನ ಸೇನೆಯ ನಡೆಯನ್ನು ಗಮನಿಸುವ ಸಲುವಾಗಿ ಭಾರತದಿಂದ ಒಬ್ಬ ಪತ್ತೇದಾರಿಯನ್ನು ಪಾಕಿಸ್ತಾನಕ್ಕೆ ಕಳುಹಿಸುವ ಉಪಾಯವನ್ನು ರಾ ಮಾಡುತ್ತದೆ. ಆಗಷ್ಟೇ ರಾ ಸೇರಿದ್ದ ರವೀಂದ್ರ ಕೌಶಿಕ್ ಎಂಬ ಬಿಸಿ ರಕ್ತದ ಹುಡುಗನಿಗೆ ಪತ್ತೇದಾರಿಕೆಗೆ ಬೇಕಾದ ಎಲ್ಲ ತರಬೇತಿಯನ್ನು ನೀಡಿ ಆತನನ್ನು ಪಾಕಿಸ್ತಾನಕ್ಕೆ ಕಳುಹಿಸುವ ತೀರ್ಮಾನ ಮಾಡಿ ರವೀಂದ್ರನನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತದೆ. ಪಾಕಿಸ್ತಾನಕ್ಕೆ ಹೊರಡುವ ಮುನ್ನ ಆತನಿಗೆ ಮರು ನಾಮಕರಣವನ್ನೂ ಮಾಡಲಾಗುತ್ತದೆ ಅಲ್ಲಿಯವರೆಗೆ ಹಿಂದುವಾಗಿದ್ದ ರವೀಂದ್ರನಿಗೆ ನಭಿ ಅಹ್ಮದ್ ಶಕೀರ್ ಎಂದು ಹೊಸ ಹೆಸರನ್ನಿಡಲಾಗುತ್ತದೆ. ಈಗ ಪಾಕಿಸ್ತಾನದ ಕರಾಚಿ ಯೂನಿವರ್ಸಿಟೀಯಲ್ಲಿ ಕಾನೂನು ವ್ಯಾಸಂಗ ಮಾಡುವ ವಿದ್ಯಾರ್ಥಿಯಾಗಿ ರವೀಂದ್ರ ಸೇರಿಕೊಳ್ಳುತ್ತಾನೆ ಮತ್ತು  ಅಲ್ಲಿ ಕಾನೂನು ಪದವಿಯನ್ನೂ ಮುಗಿಸುತ್ತಾನೆ. ಮುಂದೆ ರವೀಂದ್ರ ಪಾಕಿಸ್ತಾನದ ಸೈನ್ಯ ಸೇರುವ ದುಸ್ಸಾಹಸ ಮಾಡಿ ಅಲ್ಲಿಯೂ ಸೇರುತ್ತಾನೆ. ಆರಂಭದಲ್ಲಿ ಕೆಳ ಹುದ್ದೆಯಲ್ಲಿದ ರವೀಂದ್ರನಿಗೆ ಮೇಜರ್ ಎಂಬ ಉನ್ನತ ಹುದ್ದೆಯನ್ನು ನೀಡಲಾಗುತ್ತದೆ. ಒಂದು ಕ್ಷಣ ಯೋಚಿಸಿ ಪ್ರತಿ ಕ್ಷಣವನ್ನೂ ಆತ ಹೇಗೆ ಎದುರಿಸಿರಬಲ್ಲ ಎಂದು.!!!! ದಡ್ಡ ಪಾಕಿಸ್ತಾನಕ್ಕೆ ತನ್ನ ಸೈನ್ಯದ ಮೇರು ಹುದ್ದೆಯಲ್ಲೊಬ್ಬ ಭಾರತೀಯನಿದ್ದಾನೆ ಎಂದು ತಿಳಿಯಲೇ ಇಲ್ಲ. ಪಾಕಿಸ್ತಾನದ ಅಮಾನತ್ ಎನ್ನುವವಳನ್ನು ಪ್ರೀತಿಸಿದ ರವೀಂದ್ರ ಅವಳನ್ನು ಮದುವೆ ಕೂಡ ಆದ. ಆದರೆ ಪಾಕಿಸ್ತಾನಕ್ಕೆ ನಭಿ ಎಂಬ ರವೀಂದ್ರನ ಮೇಲೆ ಚೂರೂ ಸಂಶಯ ಬರಲೇ ಇಲ್ಲ.ಪಾಕಿಸ್ತಾನ ಸೈನ್ಯ ಇಡುತ್ತಿದ್ದ ಪ್ರತಿ ಹೆಜ್ಜೆಗೂ ಭಾರತ ತಕ್ಕ ಪ್ರತ್ಯುತ್ತರವನ್ನು ನೀಡುತ್ತಿತ್ತು, ಇದು ಸಾಧ್ಯವಾಗುತ್ತಿದ್ದಿದ್ದು  ರವೀಂದ್ರ ಕಳುಹಿಸುತ್ತಿದ್ದ ಆಂತರಿಕ ಸಂದೇಶಗಳಿಂದಾಗಿತ್ತು. ಪಾಕಿಸ್ತಾನ ಸೈನ್ಯದ ಎಲ್ಲ ಸ್ಟ್ರ್ಯಾಟಜೀ ಯನ್ನು ಭಾರತೀಯರಿಗೆ ರವಾನಿಸುವ ಕೆಲಸವನ್ನು ರವೀಂದ್ರ ಮಾಡುತ್ತಿದ್ದ. ಭಾರತಾಂಬೆಯ ಹೆಮ್ಮೆಯ ಪುತ್ರ ಎಂದರೆ ಈತನೇ ಇರಬೇಕು.

ಪಾಕಿಸ್ತಾನ ಅನೇಕ ಭಾರೀ ಭಾರತದ ರಾಜಸ್ಥಾನದ ಗಡಿಯಲ್ಲಿ ದಾಳಿ ಮಾಡುವ ಉದ್ದೇಶದಿಂದ ಬಂದು ವಿಫಲವಾಗಿ ಪೇಚು ಮೋರೆ ಹಾಕಿಕೊಂಡು ವಾಪಸ್ಸಾಗುತ್ತಿತ್ತು. ಭಾರತೀಯ ಸೈನ್ಯ ಸರ್ವ ಸನ್ನದ್ಧವಾಗಿ ರಾಜಸ್ಥಾನದ ಗಡಿಯಲ್ಲಿ ಬೀಡು ಬಿಡುತ್ತಿದ್ದರ ಹಿಂದಿದ್ದಿದ್ದು ರವೀಂದ್ರ ಕೌಶಿಕ್!!! ಭಾರತೀಯ ಸೈನಿಕರು ಪಾಕಿಸ್ತಾನದ ಸುಮಾರು 50ಕ್ಕೂ ಹೆಚ್ಚು ಸೈನಿಕರನ್ನು ಪಹೆಲ್ಗಾವ್ ಎಂಬಲ್ಲಿ ಕೊಂದಿದ್ದರ ಹಿಂದೆ ರವೀಂದ್ರ ಕಳುಹಿಸಿದ್ದ ಮಾಹಿತಿ ಕೆಲಸ ಮಾಡಿತ್ತು. ಪಾಕಿಸ್ತಾನಿ ಸೈನಿಕರ ಸ್ಟ್ರ್ಯಾಟಜೀಯನ್ನು  ಎಳೆ ಎಳೆಯಾಗಿ ರವೀಂದ್ರ ವಿವರಿಸಿದ್ದರ ಪರಿಣಾಮ ಭಾರತೀಯ ಸೈನಿಕರು ಪಾಕಿಸ್ತಾನೀಗಳನ್ನು ಕೊಂದಿದ್ದರು.ಅಂದಿನ ಗೃಹ ಸಚಿವರಾಗಿದ್ದ ಎಸ್ ಬಿ ಚೌಹಾಣ್, ರವೀಂದ್ರ ಕೌಶಿಕ್ ಗೆ “ಕಪ್ಪು ಹುಲಿ” ಎಂದು ನಾಮಕರಣ ಮಾಡಿದ್ದರು.

ಆದರೆ ಇಂತಹ ಸಮಯದಲ್ಲೊಂದು ಅವಘಡ ನಡೆದು ಹೋಯಿತು. 1983ರಲ್ಲಿ ರಾ ಭಾರತದಿಂದ ಇನ್ನೊಬ್ಬ ಪತ್ತೇದಾರಿ ಇನ್ಯಾತ್ ಮಾಂಸಿ ಎನ್ನುವನನ್ನು  ರವೀಂದ್ರ ಕೌಶಿಕ್’ನನ್ನು ಸೇರಿಕೊಳ್ಳಲು ಪಾಕಿಸ್ತಾನಕ್ಕೆ ಕಳುಹಿಸಿತು, ಆದರೆ ಆ ವ್ಯಕ್ತಿಯನ್ನು ಪಾಕಿಸ್ತಾನದ ಗುಪ್ತಚರ ಇಲಾಖೆ ಬಂಧಿಸಿ ಬಿಟ್ಟಿತು.ಬಂದಿಸಿದ ಆತನಿಗೆ ವಿಪರೀತ ಕಿರುಕುಳ ನೀಡಲಾಯಿತು ಆಗ ಆತ ರವೀಂದ್ರ ಕೌಶಿಕ್’ನ ಬಗ್ಗೆ ಪಾಕಿಸ್ತಾನೀ ಪೊಲೀಸರಿಗೆ ಬಾಯಿ ಬಿಟ್ಟ.ಪರಿಣಾಮ ರವೀಂದ್ರ ಕೌಶಿಕ್’ನನ್ನು ಪಾಕಿಸ್ತಾನಿ ಪೊಲೀಸರು ಬಂಧಿಸಿದರು. ಆದರೆ ಒಂದು ಮೂಲದ ಪ್ರಕಾರ ರವೀಂದ್ರನನ್ನು ಬಂಧಿಸುವ ಮುಂಚೆ ಆತ ಭಾರತೀಯ ಸರ್ಕಾರದ ಪಾಕಿಸ್ತಾನೀ ಕಚೇರಿಗೆ ಬಂದು ತನ್ನನ್ನು ಬಿಡಿಸುವಂತೆ ಗೋಗರಿದಿದ್ದನಂತೆ. ಆದರೆ ಭಾರತ ಸರ್ಕಾರ ಆತನನ್ನು ಮರಳಿ ಭಾರತಕ್ಕೆ ಕರೆ ತರುವ ಪ್ರಯತ್ನವನ್ನೇ ಮಾಡಲಿಲ್ಲ. ನಂತರ ರವೀಂದ್ರನನ್ನು ಸೈಲ್ಕೊಟ್ ಜೈಲಿನಲ್ಲಿ ಬಂಧಿಸಿರಿಸಲಾಯಿತು, ಆತನಿಗೆ ವಿಪರೀತ ಕಿರುಕುಳ ನೀಡಿ ಹಿಂಸಿಸಲಾಯಿತು. ಪ್ರಮುಖವಾಗಿ ಆತನಿಗೆ ಪಾಕಿಸ್ತಾನೀಯರು ಆಮಿಷವನ್ನೂ ಒಡ್ಡಿದ್ದರು. ಭಾರತೀಯ ಸೇನೆಯ ಕೆಲವು ಆಂತರಿಕ ವಿಷಯ ತಿಳಿಸಿದರೆ ನಿನ್ನನ್ನು ಬಿಡುತ್ತೇವೆ ಎಂದು ರವೀಂದ್ರನಿಗೆ ಆಮಿಷ ಒಡ್ಡಲಾಯಿತು.ಆದರೆ ರವೀಂದ್ರ ಯಾವುದೇ ರಹಸ್ಯವನ್ನು ಬಾಯ್ಬಿಡಲಿಲ್ಲ. 1985ರಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ರವೀಂದ್ರನ ಶಿಕ್ಷೆಯನ್ನು ಕಡಿಮೆಗೊಳಿಸಿ ಜೀವಾವಧಿ ಶಿಕ್ಷೆ ಎಂದು ಘೋಷಿಸಲಾಯಿತು. ಹದಿನಾರು ವರ್ಷಗಳ ಕಾಲ ರವೀಂದ್ರ ಕೌಶಿಕ್ ನನ್ನು ಮಿಯಾನ್‌ವಾಲಿ ಜೈಲಿನಲ್ಲಿಡಲಾಯಿತು. ಪರಿಣಾಮ ಕೊಳಕು ಜೈಲಿನಿಂದಾಗಿ ರವೀಂದ್ರನಿಗೆ ಕ್ಷಯ ಮತ್ತು ಅನೇಕ ಹೃದಯ ಸಂಬಂದಿ ಕಾಯಿಲೆಗಳು ಆವರಿಸಿದ್ದವು. ಪರಿಣಾಮ 2000ನೇ ಇಸ್ವಿಯ ಜುಲೈ 26ರಂದು ರವೀಂದ್ರ ಮುಲ್ತಾನ್’ನ ಸೆಂಟ್ರಲ್ ಜೈಲ್’ನಲ್ಲಿ ಅಸುನೀಗಿದ. ದೇಶಕ್ಕಾಗಿ ಬದುಕಿದ ಈ ಮಹಾನ್ ಚೇತನ ನಮಗೆಲ್ಲ ಪ್ರೇರಣೆ. ಯಾಕೆ ಸರ್ಕಾರ ಆತನನ್ನು ಮರಳಿ ತರುವ ಪ್ರಯತ್ನ ಮಾಡಲೇ ಇಲ್ಲ? ಯಾಕೆ ಅಪ್ರತಿಮ ಹೋರಾಟಗಾರನಿಗೆ ಕನಿಷ್ಟ ಸಾಮಾನ್ಯನಿಗೆ ಸಿಗಬೇಕಾದ  ಗೌರವವೂ ಸಿಗಲಿಲ್ಲ?

ರವೀಂದ್ರ ಕೌಶಿಕ್’ರ ಅಪ್ಪ ಜೆ.ಎಂ.ಕೌಶಿಕ್ ಭಾರತೀಯ ವಾಯು ನೆಲೆಯ ಅಧಿಕಾರಿಯಾಗಿದ್ದರು, ನಿವೃತ್ತಿಯ ನಂತರ ಸ್ಥಳೀಯ ಕಂಪನಿಯಲ್ಲೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಪಾಕಿಸ್ತಾನದ ಜೈಲಿನಲ್ಲಿ ತಾನನುಭವಿಸುತ್ತಿದ್ದ  ಕಷ್ಟ, ನೋವುಗಳನ್ನು ತನ್ನ ಮನೆಯವರ ಬಳಿ ರಹಸ್ಯ ಪತ್ರಗಳ ಮೂಲಕ ರವೀಂದ್ರ ಹಂಚಿಕೊಳ್ಳುತ್ತಿದ್ದ. ರವೀಂದ್ರನ ಅಮ್ಮ ಅಮಾಲಾದೇವಿ ಆಗಿನ ಸರ್ಕಾರಕ್ಕೆ, ಅದೆಷ್ಟೋ ಸಚಿವರುಗಳಿಗೆ ತನ್ನ ಮಗನನ್ನು ಬಿಡಿಸಿಕೊಡುವಂತೆ ಅನೇಕ ಪತ್ರ ಬರೆದರು, ಆದರೆ ಅದ್ಯಾವುದೂ ಗೊಡ್ಡು ಸರಕಾರಕ್ಕೆ,ಹೆಡೀ ಸಚಿವರುಗಳಿಗೆ ಕೇಳಲೇ ಇಲ್ಲ. ರವೀಂದ್ರ ಕೌಶಿಕ್’ರ ಆ ನೋವಿನ ಪತ್ರ ಓದುತ್ತಾ ಓದುತ್ತಾ ಅವರಪ್ಪ ಒಂದು  ದಿನ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದರು.ಅವರಮ್ಮ ಬಯಸುತ್ತಿದ್ದುದು ಒಂದೇ, ತನ್ನ ಮಗನ ಈ ಸೇವೆಯನ್ನು ಕನಿಷ್ಟ ಪಕ್ಷ ಗೌರವಿಸಿ ಸಾಕು ಎಂಬುದು. ಆದರೆ ಈ ” ಕಪ್ಪು ಹುಲಿ”ಯನ್ನು ಕಗ್ಗತ್ತಲೆಯಲ್ಲಿ ಕೂಡಿ ಹಾಕಲಾಯಿತು. ಮತ್ತೆ ಇತಿಹಾಸ ಸತ್ತು ಹೋಯಿತು.

ಪಾಕಿಸ್ತಾನದ ಜೈಲಿನಿಂದ ರಹಸ್ಯವಾಗಿ ಅಪ್ಪನಿಗೆ ಪತ್ರ ಬರೆಯುತ್ತಿದ್ದ ರವೀಂದ್ರ ಒಮ್ಮೆ ಅಪ್ಪನನ್ನು ಹೀಗೆ ಕೇಳಿದ್ದ :”ಅಪ್ಪ, ಭಾರತಂದಂತಹ ರಾಷ್ಟ್ರಕ್ಕೆ ತನ್ನ ಜೀವ ಮುಡಿಪಾಗಿಟ್ಟವನಿಗೆ ಇದನ್ನೇ ಉಡುಗೊರೆಯಾಗಿ ನೀಡುತ್ತಾರೆಯೇ?”.

ನನ್ನ ಮನಸ್ಸು ಭಾರವಾಗಿತ್ತು. ಇಂದಿರಾ ಗಾಂಧಿಯ ಬಗ್ಗೆ ಮತ್ತೆ ಸಿಟ್ಟು ಬಂದಿತ್ತು. ಕೇವಲ ಇಂದಿರಾ ಗಾಂಧಿಯಲ್ಲ ಆ ನಂತರ ಬಂದ ಅಷ್ಟೂ ಸರಕಾರದ ಬಗ್ಗೆಯೂ ಕೋಪ ಮೂಡಿತ್ತು. ಯಾಕೆ ಹೀಗೆ ಮಾಡಿದಿರಿ, ಅವನೊಬ್ಬ ದೇಶಪ್ರೇಮಿ ಎಂಬುದೇ ತಪ್ಪೇ? ಹಿಂದೂ ಆಗಿದ್ದರೂ ಉರ್ದು ಕಲಿತು ಪಕ್ಕ ಮುಸಲ್ಮಾನನಂತೆ ಬದುಕಿ ಭಾರತಾಂಬೆಯ ಕಾಯುವ ಕೆಲಸ ಮಾಡಿದನಲ್ಲ ಅದು ತಪ್ಪೇ? ಶತ್ರುಗಳನ್ನು ಹೊಕ್ಕಿ ಚಾಣಾಕ್ಷನಂತೆ ಅವರ ಮಗ್ಗಲು ಮುರಿದನಲ್ಲ ಅದು ತಪ್ಪೇ? ರವೀಂದ್ರ ಕೌಶಿಕ್ ಎಂಬ ಆ ಪತ್ತೇದಾರಿಯ ಜೀವನ ಸಲ್ಮಾನ್ ಖಾನ್ ನಟಿಸಿದ್ದ “ಏಕ್ ಥಾ ಟೈಗರ್” ಎಂಬ ಸಿನಿಮಾ ಆಗಿ ಹೊರ ಬಂತು ಆದರೆ ಕನಿಷ್ಟ ರವೀಂದ್ರನನ್ನು ನೆನೆಯುವ ಕೆಲಸವನ್ನು ಅವರ್ಯಾರೂ ಮಾಡಲಿಲ್ಲ.ಮನುಷ್ಯನನ್ನು ಬಳಸಿಕೊಂಡು ತಿಪ್ಪೆಗೆಯೆಸೆದ ಸರಕಾರದ ಧೋರಣೆಗೆ ನನ್ನ ಧಿಕ್ಕಾರ.

ಆದರೂ ಆತ ತನ್ನ ಪಾತ್ರದಲ್ಲಿ ಬರೆದ ಈ ಸಾಲುಗಳೇಕೋ ತುಂಬಾ ಕಾಡುತ್ತಿದೆ,ಕಾಡುತ್ತಲೇ ಇರುತ್ತವೆ.

Kya Bharat jaise bade desh ke liye kurbani dene waalon ko yahi milta hai?(Is this the reward a person gets for sacrificing his life for India?)”

ರವೀಂದ್ರ ತುಮ್ ಅಮರ್ ಹೋ !!!

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!