ಅಂಕಣ

ಕೀಳರಿಮೆಯನ್ನೂ ಕಥಾ ವಸ್ತುವಾಗಿ ಬಳಸಿಕೊಂಡ ಅಕ್ಷರ ಮಾಂತ್ರಿಕನೀತ……!!!

ಅದು ಇಬ್ಬರು ಸ್ನೇಹಿತರು ತುಂಬ ವರ್ಷಗಳ ನಂತರ ಸೇರಿದ ಕ್ಷಣ.ಸ್ಥೂಲದೇಹಿ ವ್ಯಕ್ತಿಯೊಬ್ಬ,ತನ್ನ ಕೃಶಕಾಯದ ಸ್ನೇಹಿತನನ್ನು ನಿಕೋಲಿವಸ್ಕಿ ಸ್ಟೇಷನ್ನಿನಲ್ಲಿ  ಸಂಧಿಸಿದ ಸಂತಸಮಯ ಗಳಿಗೆಯದು.ಸ್ಥೂಲಕಾಯದ ವ್ಯಕ್ತಿಯ ತುಟಿಗಳು ಕೆಂಪಗೆ ಕಳಿತ ಚೆರ್ರಿಯ ಹಣ್ಣುಗಳಂತೆ ಹೊಳೆಯುತ್ತಿದ್ದರೆ,ಆತನ ಬಾಯಿಯಿಂದ ಹೊಮ್ಮುತ್ತಿದ್ದ ವೈನ್ ಮತ್ತು ಕಿತ್ತಳೆ ಹಣ್ಣಿನ ಗಂಧ ಆತ ಅದಾಗಲೇ ತನ್ನ ಊಟವನ್ನು ಮುಗಿಸಿದ್ದನ್ನೆನ್ನುವುದಕ್ಕೆ ಸಾಕ್ಷಿಯಾಗಿದ್ದವು.ನಿಧಾನವಾಗಿ ಹಳಿಗಳ ಮೇಲೆ ತೆವಳುತ್ತಿದ್ದ ರೈಲಿನಿಂದ ಪ್ಲಾಟಿಫಾರ್ಮಿನ ಮೇಲೆ ಕುಪ್ಪಳಿಸಿದ್ದ ಕೃಶದೇಹಿ ವ್ಯಕ್ತಿಯ ಎರಡೂ ಕೈಗಳಲ್ಲಿ ಬಟ್ಟೆ ತುಂಬಿದ ಸೂಟ್ ಕೇಸು ಮತ್ತೀತರ ಸರಂಜಾಮುಗಳಿದ್ದವು.ಅವನ ಅಂಗಿಯಿಂದ ಹೊಮ್ಮುತ್ತಿದ್ದ ತಿಳಿಯಾದ ಕಂಪು ಆತ ರೈಲಿನಲ್ಲಿಯೇ ಮಾಂಸದ ತುಂಡುಗಳ ಜೊತೆಗೆ ಕಾಫಿಯನ್ನು ಸೇವಿಸಿದ್ದನೆನ್ನುವುದರ ಪುರಾವೆಯಾಗಿದ್ದವು.ಅವನ ಜೊತೆಗಿದ್ದ ತೆಳ್ಳಗಿನ ಮೈಕಟ್ಟಿನ,ನೀಳ ಗದ್ದದ ಅವನ ಮಡದಿ ಮತ್ತು ಒಕ್ಕಣ್ಣನಂತೇ ಕಾಣುತ್ತಿದ್ದ ಬಾಲಕ ರೈಲಿನಿಂದಿಳಿದು ಕೃಶಕಾಯದ ವ್ಯಕ್ತಿಯನ್ನೇ ಹಿಂಬಾಲಿಸತೊಡಗಿದರು.

ಕೊಂಚ ದೂರದಿಂದಲೇ ತೆಳ್ಳಗಿನ ವ್ಯಕ್ತಿಯನ್ನು ಗಮನಿಸಿದ ಸ್ಥೂಲದೇಹಿಯ ಬಾಯಿಂದ’ಪರ್ಫಿರಿ’ಎಂಬ ಸಂತಸದ ಉದ್ಗಾರ.’ಪರ್ಫಿರಿ ಅಲ್ಲವಾ..?? ಅದೆಷ್ಟು ಕಾಲಗಳಾಯ್ತೋ ನಿನ್ನನ್ನು ನೋಡಿ..”ಎಂದ ಧಡಿಯನ ಕಣ್ಣಲ್ಲೊಂದು ಮಿಂಚು. ಒಂದರೆಕ್ಷಣ ದಾಂಡಿಗನನ್ನು ದಿಟ್ಟಿಸಿದ ಕೃಶದೇಹಿ ,ತನ್ನ ಕಣ್ಣುಗಳನ್ನು ತಾನೇ ನಂಬದವನಂತೆ,’ಓಹ್ ಮೈ ಗಾಡ್’ಎಂದು ನುಡಿದು ತನ್ನ ಪತ್ನಿಯತ್ತ ತಿರುಗಿ,’ಮಿಶಾ,ಇವನು ನನ್ನ ಬಾಲ್ಯದ ಆಪ್ತ ಮಿತ್ರ”ಎಂದ.”ಏಕಾಏಕಿ ನೀನಿಲ್ಲಿ ಹೇಗೆ ಉದ್ಭವವಾದೆ ಮಾರಾಯಾ..”? ಎನ್ನುವ ಪ್ರಶ್ನೆ ಅವನದ್ದು.ಕ್ಷಣಕಾಲ ಒಬ್ಬರನ್ನೊಬ್ಬರು ಕಣ್ತುಂಬಿಕೊಂಡ ಸ್ನೇಹಿತರು ಪರಸ್ಪರ ಬಿಗಿದಪ್ಪಿಕೊಂಡು ಮೃದುವಾಗಿ ಮೂರುಬಾರಿ ಚುಂಬಿಸಿಕೊಂಡರು.ಇಬ್ಬರ ಕಣ್ಣಂಚಿನಲ್ಲಿಯೂ ಆನಂದದ ಮಂಜಿನತೆರೆ.

’ಇದು ನಿಜಕ್ಕೂ ಅನಿರೀಕ್ಷಿತ ಗೆಳೆಯ’ಎಂದು ಮಾತಿಗಾರಂಭಿಸಿದ ಕೃಶದೇಹಿ,’ನಿನ್ನನ್ನಿಲ್ಲಿ ಹೀಗೆ ಭೇಟಿಯಾಗುತ್ತಿರುವುದು ಆಶ್ಚರ್ಯವನ್ನುಂಟು ಮಾಡುತ್ತಿದೆ ನನಗೆ.ಬಹಳ ಬದಲಾಗಿದ್ದೀಯಾ ನೀನು.ನನ್ನನ್ನು ನೋಡು ನಾನು ಹೇಗಿದ್ದೇನೋ ಹಾಗೆಯೇ ಇದ್ದೇನೆ.ಮೊದಲಿನಷ್ಟೇ ಸ್ಪುರದ್ರೂಪಿ ಮತ್ತು ಧೈರ್ಯವಂತ’ಎನ್ನುತ್ತ ಕಣ್ಣು ಮಿಟುಕಿಸಿದ ಪರ್ಫಿರಿ,’ನೀನು ಹೇಗಿರುವೆ..??ಏನು ಮಾಡುತ್ತಿರುವೆ..?? ನಿನಗೆ ಮದುವೆಯಾಯಿತೇ..’?ಎಂಬ ಪ್ರಶ್ನೆಗಳ ಸುರಿಮಳೆಗೈದ.ತನ್ನ ಪ್ರಶ್ನೆಗಳ ಉತ್ತರಕ್ಕೂ ಕಾಯದೇ ,’ನನಗಂತೂ ಮದುವೆಯಾಗಿದೆಯಪ್ಪ.ನೋಡು ಇವಳೇ ನನ್ನ ಮಡದಿ ಲೂಯಿ.ಇವಳ ಮುಂಚಿನ ಹೆಸರು ವಂಝೆಬಾಕ್ಸ್,ಪ್ರಾಟೆಸ್ಟೆಂಟ್ ಪಂಥದವಳು.ಇವನು ನನ್ನ ಮಗ ನಥಾನಿಯಲ್.ಮೂರನೆಯ ತರಗತಿಯಲ್ಲಿ ಓದುತ್ತಿದ್ದಾನೆ”ಎಂದು ನುಡಿದ.ಕುತೂಹಲದಿಂದ ದೃಢಕಾಯನನ್ನೇ ದಿಟ್ಟಿಸುತ್ತ ನಿಂತಿದ್ದ ನಥಾನಿಯಲ್’ನನ್ನು ಗಮನಿಸಿದ ಪರ್ಫಿರಿ,’ಮಗು,ಇವನು ನನ್ನ ಚಿಕ್ಕಂದಿನ ಜೀವದ ಗೆಳೆಯ.ಒಟ್ಟಿಗೆ ಓದುತ್ತಿದ್ದವರು ನಾವು’ಎಂದು ಮುಗುಳ್ನಕ್ಕ.ಕೊಂಚ ಹೊತ್ತು ಯೋಚನಾಮಗ್ನನಾದ ನಥಾನಿಯಲ್ ,ತನ್ನ ಟೊಪ್ಪಿಯನ್ನೊಮ್ಮೆ ಗೌರವಸೂಚಕವೆನ್ನುವಂತೆ ಎತ್ತಿಹಿಡಿದ.

’ಎಷ್ಟು ಚಂದವಿದ್ದವಲ್ಲವಾ ಆ ದಿನಗಳು’ಎನ್ನುತ್ತ ಮಾತು ಮುಂದುವರೆಸಿದ ತೆಳ್ಳಗಿನ ಪರ್ಫಿರಿ,’ನಿನಗೆ ನೆನಪಿದೆಯಾ ..? ಶಾಲೆಯಲ್ಲಿ ಎಲ್ಲರೂ ನಿನ್ನನ್ನು ಹೆರೋಸ್ಟ್ರಾಟಸ್ ಎಂದು ಛೇಡಿಸುತ್ತಿದ್ದರು.ಅವನು ಪ್ರಸಿದ್ಧಿಗಾಗಿ ದೇಗುಲ ಸುಟ್ಟಂತೆ,ನೀನು ಶಾಲೆಯ ಬಹುಮುಖ್ಯ ಕಡತವನ್ನೇ ಸುಟ್ಟು ಬಿಟ್ಟಿದ್ದೆ ನೋಡು’ಎಂದು ಗಹಗಹಿಸಿದ.’ನನಗೋ ಕತೆಗಳನ್ನು ಹೇಳುವ ಹುಚ್ಚು.ಹಾಗಾಗಿ ಸಹಪಾಠಿಗಳು ನನ್ನನ್ನುಸಹ ಗ್ರೀಕ್ ರಾಜಕಾರಣಿ ಎಪಿಯಾಲ್ಟಿಸ್ಸನಿಗೆ ಹೋಲಿಸಿ ಛೇಡಿಸುತ್ತಿದ್ದರು.ನೆನೆಸಿಕೊಂಡರೆ ಈಗಲೂ ನಗೆಯುಕ್ಕಿ ಬರುತ್ತದೆ.ಆಗ ನಾವಿನ್ನೂ ಎಳೆಯ ಮಕ್ಕಳು ’ಎನ್ನುತ್ತ ಮಗನತ್ತ ತಿರುಗಿದ ಪರ್ಫಿರಿ,’ನಾಚಿಕೊಳ್ಳಬೇಡ ನಥಾನಿಯಲ್,ಅವನು ನನ್ನ ಆಪ್ತಮಿತ್ರ.’ಎಂದ.’ಈಕೆ ನನ್ನ ಮಡದಿ ವಂಝೇಬಾಕ್ಸ್,ಪ್ರಾಟೆಸ್ಟೆಂಟ್ ನಂಬಿಕೆಯವಳು’ಎಂದು ಪುನರುಚ್ಛರಿಸಿದ.ಕೊಂಚಕಾಲ ಧಡಿಯನನ್ನು ನಿರುಕಿಸಿದ ನಥಾನಿಯಲ್ ನಾಚಿಕೆಯಿಂದೆಂಬಂತೆ ಅಪ್ಪನ ಬೆನ್ನಿಗಂಟಿಕೊಂಡ.

’ನೀನು ಹೇಗಿದ್ದೀಯಾ ಗೆಳೆಯಾ..’?ಎಂದು ಕೇಳುವ ಸರದಿ ಈಗ ಧಡಿಯನದ್ದಾಗಿತ್ತು.’ನೀನೀಗ ಏನು ಕೆಲಸ ಮಾಡುತ್ತಿದ್ದೀಯಾ..? ನೀನಿನ್ನೂ ಸೇನೆಯಲ್ಲಿದ್ದೀಯಾ..?? ಯಾವ ಶ್ರೇಣಿ ನಿನ್ನದು..’?ಎಂದು ಪ್ರಶ್ನಿಸಿದ ಧಡಿಯನ ದನಿಯಲ್ಲೊಂದು ಸಹಜ ಕುತೂಹಲ.’ಹೌದು ಮಿತ್ರ,ಕಳೆದೆರಡು ವರ್ಷಗಳಿಂದ ನಾನು ಕಾಲೆಜಿಯೆಟ್ ಅಸೆಸ್ಸರ್’ನಾಗಿ ಕಾರ್ಯ ನಿರ್ವಹಿಸುತ್ತಿದ್ದೆ.ನನಗೆ ಒಳ್ಳೆಯ ಹೆಸರಿದೆ.ಸಂಬಳ ಕಡಿಮೆಯೆನ್ನುವುದೇನೋ ನಿಜ.ಆದರೆ ತೀರ ದೊಡ್ದ ಸಮಸ್ಯೆಯಲ್ಲವದು.ನನ್ನ ಮಡದಿ ಸಂಗೀತದ ತರಗತಿಗಳನ್ನು ನಡೆಸುತ್ತಾಳೆ.ನಾನು ಅರೇಕಾಲಿಕ ಉದ್ಯೋಗವಾಗಿ ಕಟ್ಟಿಗೆಯ ಸಿಗರೇಟಿನ ಪೆಟ್ಟಿಗೆಗಳನ್ನು ಮಾರಿಕೊಂಡಿದ್ದೇನೆ.ಒಂದು ರೂಬಲ್ಲಿಗೊಂದರಂತೆ ಪೆಟ್ಟಿಗೆಗಳನ್ನು ಮಾರುವ ನಾನು ಹತ್ತು ಪೆಟ್ಟಿಗೆಗಳನ್ನು ಒಟ್ಟಿಗೆ ಕೊಂಡರೆ ಕೊಂಚ ರಿಯಾಯತಿಯನ್ನು ಸಹ ನೀಡುತ್ತೇನೆ.ಜೀವನ ಹೇಗೋ ನಡೆಯುತ್ತಿದೆ.ಈಗ ನನ್ನನ್ನು ಇಲ್ಲಿಗೆ ವರ್ಗಾಯಿಸಿದ್ದಾರೆ’ಎಂದು ಒಂದೇ ಉಸಿರಿನಡಿ ನುಡಿದ ಪರ್ಫಿರಿ,’ನೀನೂ ಸಹ ಒಳ್ಳೆಯ ಕೆಲಸದಲ್ಲಿರಬೇಕಲ್ಲವೇ ..? ಕನಿಷ್ಟ ಸಿವಿಲ್ ಕೌನ್ಸಲರ್’ನ ಶ್ರೇಣಿಯನ್ನಂತೂ ನೀನು ತಲುಪಿರಬೇಕು ಅಲ್ಲವಾ..’? ಎಂದು ಪ್ರಶ್ನಿಸಿದ.ಅದಕ್ಕುತ್ತರಿಸಿದ ಟೊಣಪ,’ಇಲ್ಲ ಕಣೋ,ಸಿವಿಲ್ ಕೌನ್ಸಲರ್’ನ ಶ್ರೇಣಿಗಿಂತ ಸಾಕಷ್ಟು ಮೇಲ್ಮಟ್ಟಕ್ಕೇರಿದ್ದೇನೆ.ನಾನೀಗ ಪ್ರೈವಿ ಕೌನ್ಸೆಲರ್.ನನ್ನದು ಎರಡು ತಾರೆಗಳ ಶ್ರೇಣಿ’ಎನ್ನುತ್ತ ಮುಗುಳ್ನಕ್ಕ.

ಹಾಗೊಂದು ಉತ್ತರ ಧಡಿಯನ ಬಾಯಿಯಿಂದ ಹೊರಬೀಳುತ್ತಲೇ,ಕೃಶದೇಹಿಯ ಮುಖ ವಿವರ್ಣವಾಯಿತು.ಗಾಬರಿಯಾದಂತಾದ ಪರ್ಫಿರಿ ಕ್ಷಣ ಮಾತ್ರದಲ್ಲಿ ಸುಧಾರಿಸಿಕೊಂಡು ಬಲವಂತದ ನಗೆಯೊಂದನ್ನು ಹೊರ ಹೊಮ್ಮಿದ.ಕಷ್ಟಪಟ್ಟು ಆತ ನಗುವಲ್ಲಿ ಯಶಸ್ವಿಯಾದನಾದರೂ,ತಲೆ ಸುತ್ತುವ ಅನುಭವ ಆತನಿಗೆ .ತನ್ನ ಕೈಯಲ್ಲಿದ್ದ ಸರಂಜಾಮುಗಳೆಲ್ಲ ಇನ್ನೇನು ಕೈಯಿಂದ ಜಾರಿ ಕೆಳಗೆ ಬೀಳಲಿವೆ ಎನ್ನುವ ಭಾವ.ಟೊಣಪನ ಉತ್ತರ ಕೇಳಿ ಅವನ ಮಡದಿಯ ಮುಖ ಮತ್ತಷ್ಟು ನೀಳವಾದರೆ,ತೀರ ನಿರ್ಲಕ್ಷ್ಯದಿಂದ ನಿಂತಿದ್ದ ನಥಾನಿಯಲ್ ತೆರೆದು ಹೋಗಿದ್ದ ಅಂಗಿಯ ಗುಂಡಿಗಳನ್ನು ಪಟಪಟನೇ ಹಾಕಿಕೊಳ್ಳಲಾರಂಭಿಸಿದ.’ಸರ್,ನನಗೆ ನಿಜಕ್ಕೂ ಸಂತಸವಾಗುತ್ತಿದೆ.ನಾವಿಬ್ಬರೂ ಚಿಕ್ಕಂದಿನಲ್ಲಿ ಸ್ನೇಹಿತರಾಗಿದ್ದೇವು.ಈಗ ನೋಡಿ, ನೀವು ನನ್ನ ಉನ್ನತಾಧಿಕಾರಿಗಳು’ಎಂದು ನುಡಿದ ಕೃಶದೇಹಿಯ ಮಾತಿನಲ್ಲೊಂದು ಕೃತಕ ಗಾಂಭೀರ್ಯತೆ.ಅವ್ಯಕ್ತ ಅಸಮಾಧಾನ.ಸ್ನೇಹಿತನ ಆಂಗಿಕಭಾಷೆಯಲ್ಲಾದ ಅನಿರೀಕ್ಷಿತ ಬದಲಾವಣೆಯಿಂದ ಧಡಿಯನ ಹುಬ್ಬು ಗಂಟಿಕ್ಕಿತು.’ಅರೆರೇ..!! ಇದೇನು ಏಕಾಏಕಿ ಸರ್ ಎಂದುಬಿಟ್ಟೆ.ಬಿಡು ಬಿಡು ನಾವಿಬ್ಬರೂ ಬಾಲ್ಯದ ಸ್ನೇಹಿತರು ಕಣೋ,ನಮ್ಮಿಬ್ಬರ ನಡುವೆ ಈ ಔಪಚಾರಿಕತೆಯ ಅವಶ್ಯಕತೆಯಿಲ್ಲ’ಎಂದ ಟೊಣಪ ಬಿಗಿಯಾಗತೊಡಗಿದ್ದ ವಾತಾವರಣವನ್ನು ತಿಳಿಯಾಗಿಸಲೆತ್ನಿಸಿದ.’ಏನು ಹೇಳುತ್ತಿದ್ದೀರಿ ಸಾಹೇಬರೇ’ಎಂದು ಸಣ್ಣದ್ದೊಂದು ವ್ಯಂಗ್ಯನಗೆ ನಕ್ಕ ಪರ್ಫಿರಿ,’ಸಾಹೇಬರ ಪರಿಚಯವೆಂದರೇನೇ ನಮಗೆ ದೇವರ ಅನುಗ್ರಹದಂತೆ’ಎಂದ.ತೀರ ವಿಚಿತ್ರವಾಗಿ ವರ್ತಿಸಲಾರಂಭಿಸಿದ ಕೃಶದೇಹಿ,ಅಸಹಜವೆನ್ನುವಷ್ಟು ನುಲಿಯುತ್ತ ,’ಸರ್,ಇವನು ನನ್ನ ಮಗ ನಥಾನಿಯಲ್,ಈಕೆ ನನ್ನ ಮಡದಿ ಲೂಯಿ,ಪ್ರಾಟೆಸ್ಟಂಟಳು’ಎಂದು ಮತ್ತೊಮ್ಮೆ ನಾಟಕೀಯವಾಗಿ ತನ್ನ ಕುಟುಂಬವನ್ನು ಧಡಿಯನಿಗೆ ಪರಿಚಯಿಸಿದ.

ಗೆಳೆಯನ ವಿಲಕ್ಷಣ ವರ್ತನೆಯನ್ನು ಧಡಿಯ ವಿರೋಧಿಸಬೇಕೆಂದುಕೊಂಡನಾದರೂ,ಕೃಶದೇಹಿಯ ಮುಖದಲ್ಲಿದ್ದ ಅತಿಯಾದ ವಿನಯ,ಮಿತಿ ಮೀರಿದ ಪೂಜ್ಯಭಾವ,ಅಳತೆಗೆಟ್ಟ ಭಾವುಕತೆ ಧಡಿಯನಲ್ಲೊಂದು ಹೇವರಿಕೆ ಹುಟ್ಟಿಸಿತ್ತು.ತುಂಬ ಕಸಿವಿಸಿಯೆನ್ನಿಸಿ ಅಲ್ಲಿಂದ ಹೊರಡಲನುವಾದ ಟೊಣಪ ಕೊನೆಯ ಬಾರಿಗೆನ್ನುವಂತೆ ಹಸ್ತಲಾಘವಕ್ಕಾಗಿ ಕೃಶದೇಹಿಯತ್ತ ಕೈಚಾಚಿದ.ಟೊಣಪನ ಕೈಯ ಮೂರು ಬೆರಳುಗಳನ್ನು ಮಾತ್ರ ಹಿಡಿದುಕೊಂಡ ಪರ್ಫಿರಿ,ಪೇಲವವಾಗಿ ನಕ್ಕ.’ಹೀ,ಹೀ,ಹೀ’ಎನ್ನುವ ನಾಟಕೀಯವಾಗಿ ನಕ್ಕವಳು ಅವನ ಮಡದಿ.ನಥಾನಿಯಲ್ ಪಾದದಡಿಯಲ್ಲಿ ನೆಲವನ್ನು ಕೆರೆಯುತ್ತ ನಿಂತಿದ್ದ. ವಾತಾವರಣದಲ್ಲೊಂದು ಅಸಹನೀಯ ಭಾವುಕತೆ ಹರಡಿಕೊಂಡಿತ್ತು.

ಬದುಕಿನ ಸಣ್ಣ ಘಟನೆಯೊಂದನ್ನೇ ವಸ್ತುವಾಗಿರಿಸಿಕೊಂಡು ಇಷ್ಟು ಅದ್ಭುತವಾದ ಕತೆ ಬರೆಯಲು ರಷ್ಯನ್ ಕತೆಗಾರ ಆಂತೋನ್ ಚೇಕಾಫನಿಗಲ್ಲದೇ ಇನ್ಯಾರಿಗೆ ಸಾಧ್ಯ..?? 1883ರಲ್ಲಿ ಚೆಕಾಫ್ ಬರೆದ ’Fat and Thin’ ಎನ್ನುವ ಸಣ್ಣಕತೆಯ ಭಾವಾನುವಾದವಿದು.ಕತೆಯಲ್ಲಿ ಬರುವ ಕಾಲೇಜಿಯೆಟ್ ಕೌನ್ಸಿಲರ್, ಸಿವಿಲ್ ಕೌನ್ಸಿಲರ್,ಪ್ರೈವಿ ಕೌನ್ಸಿಲರ್ ಶಬ್ದಗಳು ರಷ್ಯಾದ ಸೇನೆಯ ಆಡಳಿತಾಧಿಕಾರಿಗಳ ವಿಭಿನ್ನ ಶ್ರೇಣಿಗಳು.ಕಾಲೇಜಿಯೆಟ್ ಕೌನ್ಸಿಲರ್ ಎನ್ನುವುದು ಪ್ರೈವಿ ಕೌನ್ಸಿಲರ್ ಪದವಿಗಿಂತ ಮೂರು ಶ್ರೇಣಿಗಳಷ್ಟು ಕಿರಿಯದ್ದು. ನಮ್ಮ ಸಾಮಾಜಿಕ ಸ್ಥಾನಗಳು ನಮ್ಮ ಸಂಬಂಧಗಳನ್ನು,ನಮ್ಮಲ್ಲಿನ ಆಪ್ತ ಭಾವಗಳನ್ನು ಹೇಗೆ ಪ್ರಭಾವಿಸುತ್ತವೆ ಎನ್ನುವುದನ್ನು ವಿವರಿಸುವ ಅದ್ಭುತ ಕತೆಯಿದು.ವರ್ಷಗಳ ನಂತರ ಅನಿರೀಕ್ಷಿತವಾಗಿ ಭೇಟಿಯಾಗುವ ಸ್ನೇಹಿತರ ನಡುವೆ ಮೊದಮೊದಲು ಇಣುಕುವುದು ಪರಿಶುದ್ಧ ಸಂತಸ.ಪರಸ್ಪರರ ಸಾಮಾಜಿಕ ಸ್ಥಾನಮಾನಗಳ ಪರಿಚಯವಾಗುವವರೆಗೂ ಅಲ್ಲೊಂದು ಖುಷಿಯ ವಾತಾವರಣ.ಆದರೆ ಸಾಮಾಜಿಕ ಸ್ಥಾನಮಾನಗಳ ಅನಾವರಣವಾದ ಕ್ಷಣದಲ್ಲೇ ಸನ್ನಿವೇಶದಲ್ಲೊಂದು ನಾಟಕೀಯ ಬದಲಾವಣೆ. ಸ್ಥೂಲದೇಹಿ ಸ್ನೇಹಿತನ ಪ್ರಗತಿಯನ್ನು ಕಂಡ ಕೃಶದೇಹಿ ಗೆಳೆಯನ ಮನದಲ್ಲೊಂದು ಅವ್ಯಕ್ತ ಹತಾಶಭಾವ.ನಿಜ ಜೀವನದಲ್ಲೂ ತುಂಬ ಸಲ ಹೀಗಾಗುವುದಿದೆ.ಬಾಲ್ಯದಲ್ಲೆಲ್ಲೋ ಕಳೆದು ಹೋಗಿರುವ ಸ್ನೇಹಿತನೊಬ್ಬ ಏಕಾಏಕಿ ಎದುರಾದರೆ ನಮ್ಮಲ್ಲಾಗುವ ಸಂತಸಕ್ಕೆ ಎಣೆಯಿಲ್ಲ. ಹಾಗೆ ಎದುರಾದ ಸ್ನೇಹಿತ ಸಾಮಾಜಿಕವಾಗಿ,ಆರ್ಥಿಕವಾಗಿ ನಮಗಿಂತ ತೀರ ಎತ್ತರದಲ್ಲಿದ್ದರೆ ನಮ್ಮಲ್ಲೊಂದು ಕಸಿವಿಸಿ.ಅದು ಸ್ನೇಹಿತನ ಏಳ್ಗೆಯೆಡೆಗಿನ ಮಾತ್ಸರ್ಯವೇ ಆಗಿರಬೇಕೆಂದೇನಿಲ್ಲ.ಆದರೆ ಅವನಷ್ಟೇ ವಯಸ್ಸಿನ,ಅವನಷ್ಟೇ ಬುದ್ದಿವಂತಿಕೆಯ ನಾವುಗಳು ಬದುಕಿನಲ್ಲಿ ಏನನ್ನೂ ಸಾಧಿಸಿಲ್ಲವಲ್ಲ ಎನ್ನುವ ಖಿನ್ನ ಭಾವ ಅಥವಾ ಬದುಕಿನಲ್ಲಿ ಸೋತೆವೆಂಬ ತಾತ್ಕಾಲಿಕ ಕೀಳರಿಮೆಯೂ ಆಗಿರಬಹುದು.ಇಂಥಹ ಸೂಕ್ಷ ಭಾವವನ್ನಿಟ್ಟುಕೊಂಡು ಕತೆಗಳನ್ನಿಟ್ಟು ರಚಿಸುತ್ತಿದ್ದ ಸಣ್ಣಕತೆಗಳ ಮಾಂತ್ರಿಕ ಚೇಕಾಫ್ ನ ಅಪೂರ್ವ ಸೃಜನಶೀಲತೆ ನನ್ನಲ್ಲೊಂದಿಷ್ಟು ಹೊಟ್ಟೆಕಿಚ್ಚು ಮೂಡಿಸಿದ್ದಂತೂ ಸತ್ಯ. ಅವನಂತೆ

ಕತೆಗಳನ್ನು ಬರೆಯಲಾಗದಲ್ಲ ಎನ್ನುವ ಕೀಳರಿಮೆಯ ನಿವಾರಣೆಗಾಗಿಯೇ ಇಂಥಹ ಮಹಾನ್ ಕತೆಗಾರರ ಸಾಹಿತ್ಯಕ್ಕೆ ಬೆನ್ನು ಬೀಳುತ್ತೇನೆ.ಹಾಗೆ ಓದಿದ ಸಣ್ಣಕತೆಗಳನ್ನು ನಿಮಗಾಗಿ ಕನ್ನಡಕ್ಕೆ ತರುವ ನನ್ನ ಹಳೆಯ ಚಾಳಿ ನಿಮಗೆ ತಿಳಿಯದ್ದೇನಲ್ಲ.ಚೆಕಾಫ್’ನ ಮತ್ತೊಂದು ಅನರ್ಘ್ಯ ಸಾಹಿತ್ಯಿಕ ರತ್ನವನ್ನು ನಿಮ್ಮೆದುರಿಗಿಟ್ಟಿದ್ದೇನೆ.ಒಪ್ಪಿಸಿಕೊಳ್ಳುವ ಔದಾರ್ಯ ನಿಮ್ಮದು.

Facebook ಕಾಮೆಂಟ್ಸ್

ಲೇಖಕರ ಕುರಿತು

Gururaj Kodkani

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಗುರುರಾಜ್, ಸಾಹಿತ್ಯದಲ್ಲಿ ಬಹಳ ಆಸಕ್ತಿಯುಳ್ಳವರು. ಯಲ್ಲಾಪುರದವರು. ಹಾಯ್ ಬೆಂಗಳೂರು ಪತ್ರಿಕೆಗೆ ಅಂಕಣ ಬರೆಯುತ್ತಿದ್ದ ಇವರು ಪ್ರಸ್ತುತ ಹಿಮಾಗ್ನಿ ಪತ್ರಿಕೆಯಲ್ಲೂ ಬರೆಯುತ್ತಿದ್ದಾರೆ. ಪುಸ್ತಕವಿಮರ್ಶೆ,ಅನುವಾದ,ವೈಜ್ನಾನಿಕ ಬರಹಗಳು ,ಜೀವನಾನುಭವದ ಲೇಖನಗಳನ್ನು ಬರೆಯುವುದು ಇವರಿಗೆ ಅಚ್ಚುಮೆಚ್ಚು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!