ಅಂಕಣ

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೬
______________________________

ಇಳೆಯಬಿಟ್ಟಿನ್ನುಮೆತ್ತಲುಮೈದದ ಪ್ರೇತ |
ವಲೆವಂತೆ ಲೋಕ ತಲ್ಲಣಿಸುತಿಹುದಿಂದು ||
ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ |
ತಳಮಳಕೆ ಕಡೆಯೆಂದೊ? – ಮಂಕುತಿಮ್ಮ ||

ಇಹ ಜೀವನದಲ್ಲಿ ದೇಹವೊಂದರೊಳಗಿನ ಜೀವವಾಗಿರುವ ತನಕ, ಈ ಭೂಮಿಯ ಮೇಲೆ ಹೇಗೊ ಬದುಕಿರಲೊಂದು ಲೌಕಿಕ ರಹದಾರಿಯಾದರು ಇರುತ್ತದೆ – ಭೌತಿಕ ದೇಹದ ರೂಪದಲ್ಲಿ. ಅಂತಹ ಜೀವಾತ್ಮ, ತಾನು ಧರಿಸಿದ ದೇಹ ಸಾವಿಗೀಡಾಗುತ್ತಿದ್ದಂತೆ ಅದನ್ನು ತ್ಯಜಿಸಿ ಒಂದೊ ಮೇಲಿನದಾವುದೊ ಲೋಕಕ್ಕೆ ತೆರಳಬೇಕು (ಮುಕ್ತಿ, ಮೋಕ್ಷದ ಪರಿಕಲ್ಪನೆಯಡಿ), ಇಲ್ಲವೆ ಮತ್ತೊಂದಾವುದೊ ಜೀವಿಯ ದೇಹದಲ್ಲಿ ಜಾಗ ಹುಡುಕಿಕೊಂಡು ಹೊಸ ಜೀವನವನ್ನಾರಂಭಿಸಬೇಕು (ಪುನರ್ಜನ್ಮವೆಂಬ ಮರುಸ್ವರೂಪದಲ್ಲಿ). ಇವೆರಡೂ ಆಗದ ಅತಂತ್ರ ಸ್ಥಿತಿಯಲ್ಲಿರುವ ಆತ್ಮಗಳ ಗೋಳಾಟದ ಕಥೆಯೆ ಹೇಳಲಾಗದ ದಾರುಣತೆ. ಇಳೆಯ ಬಿಟ್ಟಗಲಲಾಗದ ಪ್ರೇತದ ರೂಪದಲ್ಲಿ, ಆ ತ್ರಿಶಂಕು ಸ್ಥಿತಿಗೆ ಸಿಕ್ಕಿ ತಲ್ಲಣಿಸಿ ಒದ್ದಾಡುವ ಪ್ರೇತದ ಸ್ಥಿತಿ ಯಾವ ದೇವರಿಗೆ ತಾನೆ ಪ್ರೀತಿ ? ಇಳೆಯಲ್ಲಿರುವಂತಿಲ್ಲ, ಬಿಟ್ಟೆಲ್ಲೂ ಹೋಗುವ ತಾಣವೂ ಗೊತ್ತಿಲ್ಲದ ಪರಿಸ್ಥಿತಿಯಲ್ಲಿ ದಿಕ್ಕೆಟ್ಟು ಅಲೆಯುವುದೆ ‘ಹಣೆಬರಹ’ವಾಗಿಬಿಡುತ್ತದೆ. ಅದೇ ಮನಸ್ಥಿತಿಯಲ್ಲಿ ತಲ್ಲಣಿಸಿ ಕಂಗೆಟ್ಟಿರುವ ಲೋಕದ ಪರಿಸ್ಥಿತಿಗೆ ಮಮ್ಮಲ ಮರುಗುವ ಪರಿ ಈ ಸಾಲುಗಳಲ್ಲಿ ವರ್ಣಿತವಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಪ್ರೇತ ಸೂಚ್ಯವಾಗಿ ಸಾಂಕೇತಿಸುತ್ತಿರುವುದು ಆ ಸ್ಥಿತಿಯತ್ತ ಸಾಗುತ್ತಿರುವ ಹಳೆಯ ಧರ್ಮವನ್ನು. ನಾವು ಅಪ್ಪ ಹಾಕಿದ ಆಲದ ಮರವೆಂಬ ಸೋಗಿನಡಿಯಲ್ಲಿ ಅದನ್ನು ಒಂದು ಕಡೆ ನಿಷ್ಠೆಯಿಂದ ಜೋಪಾನವಾಗಿ ಕಾಪಿಟ್ಟುಕೊಳ್ಳದೆ ಅಥವಾ ಪೂರ್ತಿ ಎಳ್ಳು ನೀರು ಬಿಟ್ಟು ಕೈ ತೊಳೆದುಕೊಳ್ಳದೆ ಗೊಂದಲದ ಸ್ಥಿತಿಯನ್ನು ಸೃಜಿಸಿಬಿಟ್ಟಿದ್ದೇವೆ. ಅದನ್ನೀಗ ತಂದಿಟ್ಟಿರುವ ಸ್ಥಿತಿ ಹೇಗಿದೆಯೆಂದರೆ ಅದೇ ಪ್ರೇತವಾಗಿ ದಿಕ್ಕೆಟ್ಟು ಅಂಡಲೆಯುವಂತಹ ವಿಚಿತ್ರ ಪರಿಸ್ಥಿತಿ ( ಈ ದಿನಗಳಲ್ಲಿ ನಾಸ್ತಿಕ, ಆಸ್ತಿಕ ತಲೆಬರಹದಡಿ ನಡೆಯುವ ಕೆಸರೆರಚಾಟವನ್ನು ಗಮನಿಸಿದರೆ ಪರಿಸ್ಥಿತಿ ಈಗಲೂ ಅಷ್ಟೇನು ಭಿನ್ನವಿಲ್ಲವೆನಿಸುತ್ತದೆ).

ಪರಿಸ್ಥಿತಿ ಹೀಗಿರುವಾಗ ಈ ಲೋಕದ ತಲ್ಲಣವಾದರೂ ಯಾಕಾಗಿ? ಕವಿ ಕಾಣುವಂತೆ ಹಳೆಯ ಧರ್ಮ ಸತ್ತುಹೋಗಿದೆ – ದೇಹ ಬಿಟ್ಟ ಆತ್ಮದಂತೆ. ಆದರೆ ಅದರ ಬದಲಿಗೆ, ಅದರ ಸ್ಥಾನದಲ್ಲಿ ಕೂತು – ಸಲಹಿ – ಕಾಪಾಡಿ – ಮಾರ್ಗದರ್ಶನ ನೀಡುವ ಹೊಸಧರ್ಮ ಹುಟ್ಟಿಲ್ಲವಾಗಿ, ಏನು ಮಾಡಬೇಕೆಂದರಿವಾಗದೆ ಅಡ್ಡಾಡುವ ಪ್ರೇತದಂತೆ ತಲ್ಲಣಿಸಿಹೋಗಿದೆ ಈ ಲೋಕ. ಸತ್ತುಹೋದ ಹಳತಿಗೆ ಮತ್ತೆ ಮುಖ ತೋರುವಂತಿಲ್ಲ; ಹೊಸತನ್ನಾಶ್ರಯಿಸೋಣವೆಂದರೆ ಅದಿನ್ನು ಹುಟ್ಟೆ ಇಲ್ಲ. ಇತ್ತ ಹಳೆ ಧರ್ಮವನ್ನು ಮುಂದುವರಿಸಲೂ ಆಗದು – ಪ್ರಸ್ತುತ ಪರಿಸರದಲ್ಲಿ ಅದರ ಅಂಧಾನುಕರಣೆಯೇ ನಗೆಪಾಟಲಿಗೀಡಾಗಿಸಿಬಿಡುತ್ತದೆ; ಅಂತೆಯೇ ಹೊಸ ಮನೋಧರ್ಮವನ್ನು ಅಳವಡಿಸಿಕೊಳಲು ಆಗದು – ಯಾಕೆಂದರೆ ಅದೇನೆಂಬ ಗೊಂದಲವೆ ಬಗೆಹರಿಯಲಾಗದಷ್ಟು ಸಂಕೀರ್ಣ. ನೂರೆಂಟು ಹೊಸ ಧರ್ಮ, ತತ್ವಗಳು ನಾನು-ತಾನು ಎಂದು ಸ್ಪರ್ಧೆಯೊಡ್ಡುತ್ತ ಸಮಷ್ಟಿಯನ್ನು ಮತ್ತಷ್ಟು ಛಿಧ್ರವಾಗಿಸುತ್ತಿವೆ. ಅಂತಹ ಅತಂತ್ರಕ್ಕೆ ಸಿಕ್ಕಿ ತಲ್ಲಣಿಸಿ ನರಳುವ ಪಾಡು ಈ ಲೋಕದ್ದಾಗಿ ಹೋಗಿದೆ. ಈ ತಳಮಳ ಎಂದಾದರು ಕೊನೆಯಾಗಲುಂಟೆ ಅಥವ ಇದು ಜೀವಮಾನ ಪೂರ್ತಿ ನಿರಂತರವೆ ? ಎಂದು ಸಂಕಟಪಡುವ ಕವಿಮನದ ಜಿಜ್ಞಾಸೆ ಈ ಪದ್ಯದ ಭಾವ.

ಇಲ್ಲಿ ಧರ್ಮ ಎನ್ನುವುದನ್ನು ಬರಿಯ ಆ ಪದದ ನೈಜ ಮೂಲಾರ್ಥಕ್ಕೆ ಮಾತ್ರವೆ ಸೀಮಿತಗೊಳಿಸದೆ ಧರ್ಮ – ಸಂಸ್ಖೃತಿ – ಆಚಾರ – ವಿಚಾರ – ನಡೆನುಡಿ – ಜೀವನ ಶೈಲಿ – ಮನೋಭಾವ – ಮನೋಧರ್ಮಗಳನ್ನೆಲ್ಲ ಒಗ್ಗೂಡಿಸಿದ ಸಮಷ್ಟಿತ ಭಾವದಲ್ಲಿ ನೋಡಬೇಕು. ಆಗಷ್ಟೆ ಈ ಪದ್ಯದ ಗಹನತೆ ಮತ್ತು ವಿಶಾಲ ವ್ಯಾಪ್ತಿಯ ಆಳಗಲ ನಿಲುಕಿಗೆ ಸಿಗುವುದು. ಈಗಿನ ಪೀಳಿಗೆಗಳಲ್ಲಿರುವ ಗೊಂದಲ, ಗುರಿ-ಗಮ್ಯ ಗೊತ್ತಿರದ ಬದುಕಿನ ರೀತಿ, ಯಾಂತ್ರಿಕವಾಗಿ ಏನೊ ಮಾಡಿಕೊಂಡು ಹೋಗುತ್ತಿರುವ ಅಸಹಾಯಕ ಭಾವ – ಇವೆಲ್ಲಕ್ಕು ಮೂಲ ಕಾರಣವನ್ನು ಇಲ್ಲಿ ವಿವರಿಸಿರುವುದನ್ನು ಕಾಣಬಹುದು. ಹಿಂದೆ ಮುಂದೆ ನೋಡದೆ ಹಳತ ಬಿಟ್ಟು ಹೊಸತನ್ನು ಅಳವಡಿಸಿಕೊಳಲು ಹೊರಟ ಲೋಕ ಹೊಸತರ ಸ್ವರೂಪದ ಸ್ಪಷ್ಟ ಸುಳಿವೆ ಕಾಣದೆ ಎಡವಿ ಬಿದ್ದುದನ್ನು ಸರಳವಾಗಿ ಆಡಿ ತೋರಿಸುವ ಚಮತ್ಕಾರ ಈ ಸಾಲುಗಳದು. ಗುಂಪಿನ ಜತೆ ಕುರಿಮಂದೆಯ ಹಾಗೆ ಸಾಗದಿದ್ದರೆ ಎಲ್ಲಿ ಕಳುವಾಗಿ ಹೋಗುತ್ತೇವೆಯೋ? ಎಲ್ಲಿ ದಾರಿ ತಪ್ಪಿ ಸರೀಕರಲ್ಲಿ ಕೀಳಾಗಿಬಿಡುತ್ತೇವೆಯೋ ? ಎನ್ನುವ ಅತಂತ್ರದಲ್ಲೆ ಅದೇ ಗೊಂದಲದ ಮತ್ತಷ್ಟು ಜಟಿಲತೆಗೆ ಕಾರಣವಾಗುವುದು ಈ ತಳಮಳದ ಮತ್ತೊಂದು ಮುಖ. ವಿದ್ಯಾಭ್ಯಾಸ ಮುಗಿಸಿ ಹೊಟ್ಟೆಪಾಡಿನ ಕೆಲಸ ಹಿಡಿವ ಯುವ ಜನಾಂಗದಿಂದ ಹಿಡಿದು ಕರ್ಮಾಧೀನ ಚಿಂತನೆ ನಡೆಸುವ ವಯೋವೃದ್ಧರವರೆಗೂ ಈ ಗೊಂದಲ ಒಂದಲ್ಲ ಒಂದು ರೀತಿಯಲ್ಲಿ ಅನುರಣಿತ. ಖೇದವೇನೆಂದರೆ, ಅದರ ಪ್ರತಿಫಲನ ಒತ್ತಡ – ನಿರೀಕ್ಷೆಗಳ ರೂಪದಲ್ಲಿ ಬೆಳೆಯುವ ಮುಗ್ದ ಮಕ್ಕಳ ಗುಂಪಿಗೂ ವರ್ಗಾವಣೆಯಾಗುತ್ತಿರುವುದು.

ಕಡೆಯೆರಡು ಸಾಲುಗಳನ್ನು ನೋಡುತ್ತಿದ್ದಂತೆ ಹೊಳೆಯುವ ಮತ್ತೊಂದು ಸಂಗತಿ – ಈ ಕಗ್ಗವೂ ಕೂಡ ಹಿಂದಿನ ಕಗ್ಗದ ಹಾಗೆ (15), ಕಳಚಿಹೋಗುತ್ತಿರುವ ಹಳತಿಗೆ ಜೋಡಿಸುವ ಸೇತುವೆಯಾಗಿ ಬಾರದ ಹೊಸತನ್ನು ದೂರುವ ಪದ್ಯ. ಅಲ್ಲಿ ಹಳೆಯ ಭಕ್ತಿ ದರ್ಶನದ ಕುರಿತಾದ ವ್ಯಾಖ್ಯೆ, ಇಲ್ಲಿನ ಹಳೆ-ಹೊಸ ಧರ್ಮದ ಜಿಜ್ಞಾಸೆಯಾಗಿ ಮಾರ್ಪಟ್ಟಿದೆ. ಆ ಜಿಜ್ಞಾಸೆ ಬಗೆಹರಿಯದ ತಳಮಳದ ಮಟ್ಟ ಮುಟ್ಟಿರುವ ವಿಪರ್ಯಾಸದ ಖೇದವೂ ಇಲ್ಲಿ ವ್ಯಕ್ತವಾಗಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!