ಅಂಕಣ

ಒಡಪುಗಳು-ಉತ್ತರ ಕರ್ನಾಟಕದ ವಿಶೇಷತೆ..

ಒಡಪುಗಳನ್ನು ಉತ್ತರ ಕರ್ನಾಟಕದ ವಿಶಿಷ್ಟ ಸಂಪ್ರದಾಯವೆಂದೇ ಹೇಳಬಹುದು.ಮದುವೆ,ಮುಂಜಿ ಇನ್ನಿತರ ಕಾರ್ಯಕ್ರಮಗಳಲ್ಲಿ ಸೇರಿರುವ ಹೆಂಗಸರು,ಗಂಡಸರು ಹೇಳುವ ಒಡಪುಗಳನ್ನು ಕೇಳುವುದೇ ಒಂದು ವಿಶಿಷ್ಟ ಕ್ಷಣ.ಒಡಪು ಹೇಳದಿದ್ದರೆ ವಧು ವರರನ್ನಂತೂ ಸೇರಿರುವ ಹೆಂಗಸರು ಗೋಳಾಡಿಸಿಬಿಡುತ್ತಾರೆ..ಒಡಪುಗಳ ಜೊತೆಗೆ ಗಂಡ ಹೆಂಡತಿಯ ಹೆಸರನ್ನೂ ,ಹೆಂಡತಿ ಗಂಡನ ಹೆಸರನ್ನೂ ಹೇಳಬೇಕು..ಮದುವೆ ಮರುದಿನ ಮಾಡುವ ಕಾರ್ಯ” ಮಾವನ ಮನೆ ಶಾಸ್ರ “ಅಂದರೆ ವಧುವಿನ ಮನೆಯಲ್ಲಿನ ಆರತಿ ಶಾಸ್ತ್ರ (ಉತ್ತರ ಕರ್ನಾಟಕದ ಜನರ ಆಡುಭಾಷೆಯಲ್ಲಿ “ಮಾಮಾನಿ”) ದಲ್ಲಂತೂ ಆರತಿ ಶಾಸ್ತ್ರಕ್ಕೆ ಬಂದ ಹೆಂಗಳೆಯರು, ವಧು ವರರನ್ನು ಒಡಪು ಹೇಳಿ ಹೆಸರು ಹೇಳುವಂತೆ ಕಾಡುವಾಗ ,ನಾಚುತ್ತ ಒಡಪು ಹೇಳಿ ಗಂಡನ ಹೆಸರನ್ನು ಹೆಂಡತಿ,ಹೆಂಡತಿಯ ಹೆಸರನ್ನು ಗಂಡ ಹೇಳುವುದು ನೋಡಲು ಮೋಜೆನಿಸುತ್ತದೆ..ಉತ್ತರ ಕರ್ನಾಟಕದ ಕಡೆಗೆ ಹೀಗೆ ಒಡಪು ಹಾಕಿ ಗಂಡನ ಹೆಸರು ಹೇಳುವಾಗ ಕೊನೆಯಲಿ “ಗೌಡ್ರು” ಎಂದು ಸೇರಿಸುವುದು ವಾಡಿಕೆ.(.ಉದಾಹರಣೆಗೆ ಗಂಡನ ಹೆಸರು ಮಂಜುನಾಥ ಎಂದಿದ್ದರೆ ಮಂಜುನಾಥಗೌಡ್ರು ಎಂದು..) ಪತಿಯನ್ನು ಏಕವಚನದಿಂದ ಸಂಭೋಧಿಸಿದಂತಾಗುತ್ತದೆ ಎಂದು ಹೆಸರಿನ ಕೊನೆಯಲ್ಲಿ “ಗೌಡ್ರು” ಎಂದು ಸೇರಿಸಿ ಹೆಂಗಳೆಯರು ಗಂಡನ ಹೆಸರನ್ನು ಹೇಳುತ್ತಾರೆ..ಒಡಪುಗಳಲ್ಲಿ ಪತಿಯನ್ನು ಪತ್ನಿಯೂ,ಪತ್ನಿಯನ್ನೂ ಪತಿಯೂ ರೇಗಿಸುವುದೂ ಉಂಟು..
ಒಡಪುಗಳು ಹಿಂದಿನಿಂದ ನಡೆದು ಬಂದ ಸಂಪ್ರದಾಯ..ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳ ಕೆಲವು ಸಂದರ್ಭಗಳನ್ನು ಹಳ್ಳಿಯ ಹೆಂಗಳೆಯರು ಒಡಪಿನ ಮೂಲಕ ಹೇಳುತ್ತಾರೆ..ಅದಕ್ಕೊಂದು ಉದಾಹರಣೆಯಾಗಿ ಈ ಒಡಪು…
“ಪಾಂಡವರು ಅರಗಿನಮನೆಯಿಂದ ಪಾರಾಗಿದ್ದು ಯುಕ್ತಿಯಿಂದ
ಆರತಿ ಮಾಡಿ ರಾಯರ ಹೆಸರು ಹೇಳುವೆನು ಭಕ್ತಿಯಿಂದ(ಗಂಡನ ಹೆಸರು)”
“ಶ್ರೀರಾಮಚಂದ್ರನು ವನವಾಸಕ್ಕೆ ಹೋಗುವಾಗ ಅಯೋಧ್ಯೆಯ ಜನರಿಗೆ ದುಃಖ
ನನ್ನ ಪತಿಯ ಹೆಸರು ಹೇಳತೇನಿ
ಭಾಳ ಕಾಡಬ್ಯಾಡ್ರಿ ಅಕ್ಕ..(ಗಂಡನ ಹೆಸರು)”
ಇನ್ನು ಉತ್ತರ ಕರ್ನಾಟಕದ ಹೆಂಗಳೆಯರು ಒಡಪು ಕಟ್ಟುವುದರಲ್ಲಿ ನಿಸ್ಸೀಮರು.ಅದಕ್ಕೆ ಉದಾಹರಣೆಯಾಗಿ ಈ ಕೆಳಗಿನ ಒಡಪುಗಳು…
“ಅಲ್ಲಾವುದ್ದೀನನು ಪದ್ಮಿನಿಯನ್ನು ಕಂಡಿದ್ದು ಗಾಜಿನ ಕನ್ನಡಿಯಲ್ಲಿ
ಶಕುಂತಲೆಯ ಉಂಗುರ ಕಳೆದದ್ದು ನರ್ಮದಾ ನದಿಯಲ್ಲಿ
ನಾನು ಆರತಿ ಮಾಡಿ ಹೆಸರು ಹೇಳತೇನಿ ಮ್ಯಾಗೇರಿಯವರ ಮನೆಯಲ್ಲಿ..(ಗಂಡನ ಹೆಸರು)”
(ಮ್ಯಾಗೇರಿ ಇದು ಮನೆತನದ ಹೆಸರು..ಆರತಿ ಶಾಸ್ತ್ರ ಯಾರ ಮನೆಯಲ್ಲಿರುತ್ತದೋ ಆ ಮನೆಯ ಮನೆತನದ ಹೆಸರು ಹೇಳುತ್ತಾರೆ)

ಹೆಂಗಳೆಯರಷ್ಟೇ ಅಲ್ಲ..ಗಂಡಸರೂ ಒಡಪುಗಳನ್ನು ಹಾಕಿಯೇ ಹೆಂಡತಿಯ ಹೆಸರು ಹೇಳಬೇಕು.ಉತ್ತರ ಕರ್ನಾಟಕದ ಕೆಲವು ಕಡೆ ವಧುವಿಗೆ ವರಸೆಯಲ್ಲಿ ಮಾವನಾಗುವವರು,ವರನಿಗೆ ಮಾವನಾನಾಗುವವರು,ಆರತಿ ಮಾಡುವ ಸಂಪ್ರದಾಯವಿದೆ.ಬೇಕಂತಲೇ ಗಂಡಸರನ್ನು ಆರತಿ ಮಾಡಲು ಒತ್ತಾಯಿಸುವ ಹೆಂಗಸರು
ಒಡಪಿಗಾಗಿ ಕಾಡದೇ ಬಿಡುವುದಿಲ್ಲ.
“ಹಾಗಲ ಬಳ್ಳಿಗೆ ಹಂದರ ಚಂದ
ದ್ರಾಕ್ಷಿ ಬಳ್ಳಿಗೆ ಗೊಂಚಲು ಚಂದ
ಭೂಮಿಗೆ ಹಸಿರು ಚಂದ
ನನ್ನಾಕಿ ಇನ್ನೂ ಚಂದ (ಹೆಂಡತಿಯ ಹೆಸರು)”
“ಹಗ್ಗದಾಗ ಹೊಡೆದ್ರ
ಮಗ್ಗಲದಾಗ ಬರತಾಳ
(ಹೆಂಡತಿಯ ಹೆಸರು)”
(ಮಗ್ಗಲದಾಗ -ಪಕ್ಕದಲ್ಲಿ)
ಹೀಗೆ ಒಡಪು ಹೇಳುವಾಗ ಅಲ್ಲಿ ಒಡಪು ಹೇಳುವವನ ಹೆಂಡತಿಯಿದ್ದರೆ ನಾಚಿ ನೀರಾಗಿರುತ್ತಾಳೆ.

ಕೆಲ ಒಡಪುಗಳು ಸೇರಿರುವ ಜನರನ್ನು ನಗೆಗಡಲಲ್ಲಿ ತೇಲಿಸುತ್ತವೆ..
“ಕಟಗಲ ರೊಟ್ಟಿ
ಕಾರದ ಚಟ್ನಿ
ಕಟಗೊಂಡ ಹೋಗಂದ್ರ
ಸೆಟಗೊಂಡ ಹೊಗ್ತಾರ (ಪತಿಯ ಹೆಸರು)”
(ಸೆಟಗೊಂಡ -ಸಿಟ್ಟು ಮಾಡಿಕೊಂಡು)
“ಒಲಿ ಮುಂದ ಕುಂತಾರ
ವಟವಟ ಅಂತಾರ
ಎದ್ ಹೋಗಂದ್ರ
ಒದ್ ಹೊಗ್ತಾರ (ಪತಿಯ ಹೆಸರು)”
(ಒಲಿ-ಒಲೆ)
ಇತ್ತಿಚೆಗೆ ಹಳೆಯ ಒಡಪುಗಳು ಕಾಲಕ್ಕೆ ತಕ್ಕಂತೆ ಬದಲಾಗಿವೆ.ಒಡಪು ಕಟ್ಟುವುದು ಒಂದು ಕಲೆ.ಹಳ್ಳಿಯ ಕಡೆ ಈಗೀಗ ಒಡಪು ಕಟ್ಟುವವರು ಕಡಿಮೆಯಾಗಿದ್ದಾರೆ.ಬರಬರುತ್ತ ಈ ಒಡಪುಗಳ ವಿಶಿಷ್ಟ ಸಂಪ್ರದಾಯ ಕಡಿಮೆಯಾಗುತ್ತಿದೆ.ಕೇವಲ ಅಜ್ಜಿಯಂದಿರಿಗಷ್ಟೇ ಸೀಮಿತ ಒಡಪುಗಳು ಎನ್ನುವ ಭಾವನೆಯಿದೆ.ಏನೇ ಆದರೂ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಒಡಪು ಹಾಕಿ ಹೆಸರು ಹೇಳುವ ಮೋಜಿನಾಟ ಮಾತ್ರ ವಿಶೇಷವೆನಿಸುತ್ತದೆ..
ನನ್ನ ಹಳ್ಳಿಯಲ್ಲಿ ನಾನು ಕೇಳಿದ ಕೆಲವು ಒಡಪುಗಳು..
೧.ಆಗನೂರು ಅಡಕಿ
ಜೋಗನೂರು ಎಲಿ
ಮಲ್ನಾಡ ಪತ್ರಿ
ಒಪ್ಪಿಸಿ ವಿಳೆ ಕೊಟ್ರ
ತಪ್ಪಿಸಿಕೊಂಡ ಹೋಗ್ತಾರ (ಪತಿಯ ಹೆಸರು)
೨.ಎಡೆಯೂರು ಶಿದ್ದಲಿಂಗೇಶನ ಹಿಂದೆ
ಇರುವುದು ಹುತ್ತ
ಮುತೈದೆ ಮೂಗಲ್ಲಿರುವುದು ನತ್ತು
ನಾನು ಆರತಿ ಮಾಡಿ ಹೆಸರು ಹೇಳತೇನಿ
ಮೂರಸಂಜಿ ಹೊತ್ತು (ಪತಿಯ ಹೆಸರು)
(ಮೂರಸಂಜಿ ಹೊತ್ತು-ಮುಸ್ಸಂಜೆಯ ಹೊತ್ತು)
೩.ಸೆರಗ ಹಿಡಿಬ್ಯಾಡ್ರಿ
ಸೆರಗಿನ ಮುತ್ತು ಉದರತೈತಿ
ನೀರಿಗಿ ಹಿಡಿಬ್ಯಾಡ್ರಿ
ನೀರಲಹಣ್ಣು ಉದರತೈತಿ
ನನ್ನ ರಾಯನ ಹೆಸರು
ಕೇಳಿದವರ ಹಲ್ಲು ಉದರತೈತಿ (ಪತಿಯ ಹೆಸರು)
೪.ದೂರ ನಿಂತ ಕೇಳ್ರಿ ದ್ರೌಪದಿ ಹೆಸರು
ಸರಿದು ನಿಂತ ಕೇಳ್ರಿ ಸರಸ್ವತಿ ಹೆಸರು
ಹತ್ತು ಮಂದ್ಯಾಗ ಕೇಳ್ರಿ ಅತ್ತಿ-ಮಾವನ
ಹೆಸರು
ಕುಂತ ಮಂದ್ಯಾಗ ಕೇಳ್ರಿ ತಂದಿ-ತಾಯಿ
ಹೆಸರು
ಆರತಿ ಮಾಡ್ಬೇಕಾದ್ರ ಕೇಳ್ರಿ ಪತಿಪುರುಷನ
ಹೆಸರು (ಪತಿಯ ಹೆಸರು)
೫.ಕರಿಸೀರಿ ಉಟ್ಟು ಕೆರಿ ನೀರಿಗೆ
ಹೋಗುವಾಗ
ವಾರಿಗೆ ಗೆಳತಿಯರು ಸೆರಗು ಹಿಡಿದು
ಕೇಳುವಾಗ
ಇಂತವರ (ತಂದೆಯ ಮನೆತನದ
ಹೆಸರು)ಮಗಳಾದೆ
ಇಂತವರ (ಮಾವನ ಮನೆತನದ ಹೆಸರು)
ಸೊಸೆಯಾದೆ
ಊರಿಗೆ ಉತ್ತಮಳಾದೆ
ನನ್ನವರ ಮನೆಗೆ ಮಹಾಲಕ್ಷ್ಮಿಯಾದೆ
ಪತಿಗೆ ಒಪ್ಪುವ ಸತಿಯಾದೆ (ಪತಿಯ ಹೆಸರು)
(ವಾರಿಗೆ ಗೆಳತಿಯರು-ಸಮವಯಸ್ಕ ಗೆಳತಿಯರು)
೬.ಕುರುವತ್ತಿ ಬಸವಣ್ಣನ ಹೊಳೆಯ ದಂಡಿಯ ಮ್ಯಾಲ
ಬಂಗಾರದ ಲಿಂಗವ ಹೂಡಿ
ಊದಬತ್ತಿ ಪಟುವು ಮಾಡಿ
ಅವಲಕ್ಕಿ ಮಾಡಿ
ಕಲ್ಲಸಕ್ಕರೆ ಸಾರು ಮಾಡಿ
ಬಂಗಾರದ ಬದನೆಕಾಯಿ
ಸಿಂಗಾರದ ಚವಳಿಕಾಯಿ ಪಲ್ಲೆ ಮಾಡಿ
ಗಂಗಾಳ ನೀಡಿದ್ರ
ನಿಲ್ಲಿಸಿ ನ್ಯಾಯ ಮಾಡುತಾರ (ಪತಿಯ ಹೆಸರು)
(ಗಂಗಾಳ-ಊಟದ ತಟ್ಟೆ,
ನ್ಯಾಯ-ಜಗಳ
ಈ ಒಡಪಿಗೆ ಅನ್ವಯಿಸಿದಂತೆ)
೭.ಆಚಾರ ಹೀನರ ಮನೆಗೆ ಹೋಗಬಾರದು
ವಿಚಾರಹೀನರ ಸಭೆಯಲಿ ಕುಳಿತು ಊಟ ಮಾಡಬಾರದು
ಮನೆಯವರ (ಪತಿಯ)ಮಾತು ಮೀರಿ ನಡೆಯಬಾರದು (ಪತಿಯ ಹೆಸರು)
೮.ಕಟ್ಟಿ ನೋಡಿದ್ರ ಕಟ್ಟಾಣಿ ಸರ ಅಲ್ಲ
ಇಟ್ಟು ನೋಡಿದ್ರ ಕಿವಿಯ ಬುಗುಡಿ ಅಲ್ಲ
ಎಷ್ಟು ನೋಡಿದ್ರೂ ಸೂರಿಗಿ ನಾಗರ ಸೀರಿ ಅಲ್ಲ
ತೊಟ್ಟ ನೋಡಿದ್ರ ಕುತನಿ ಕುಬುಸ ಅಲ್ಲ
ಖರ್ಜೂರ ಅಲ್ಲ
ಕಲ್ಲಸಕ್ಕರಿ ಪಟ್ನ (ಪೊಟ್ಟಣ)ಅಲ್ಲ
ಬೆಂಡಲ್ಲ -ಬೆತ್ತಾಸಲ್ಲ
ಉಂಡ ಕಡಬ ತಂದು ಉಡಿಯಾಗ ಸುರಿತಾರ
ಕಂಟ್ಯಾನ ಬಾರಿಹಣ್ಣು ತಂದು ಕಡೆತನಕ
ಹಂಗಿಸತಾರ(ಪತಿಯ ಹೆಸರು)
(ಕಟ್ಟಾಣಿ ಸರ-ಬೆಲೆ ಬಾಳುವ ಮುತ್ತಿನ ಸರ
ಬುಗುಡಿ-ಕಿವಿಯ ಆಭರಣ
ಕಡಬು-ಹೋಳಿಗೆ
ಕಂಟ್ಯಾನ-ಪೊದೆಯೊಳಗಿನ,ಬೇಲಿಯೊಳಗಿನ)
೯.ಕಾಂಗ್ರೆಸ್ ಕಮೀಟಿಯಲ್ಲಿ ಗಾಂಧೀಜಿಯವರು ಮಾತಾಡಿದ್ದ ಅರ್ಧ ತಾಸು
ನಾನು ಆರತಿ ಮಾಡಿ ಹೆಸರು ಹೇಳತೇನಿ ಕೊಡಬ್ಯಾಡ್ರಿ ತ್ರಾಸು(ಪತಿಯ ಹೆಸರು)
(ತ್ರಾಸು -ತೊಂದರೆ)
೧೦.ಉಪ್ಪಿಟ್ಟು ಉದುರು ಭಾಳ
ಉಳ್ಳಾಗಡ್ಡಿ ಪದರು ಭಾಳ
ನನ್ನ ಮ್ಯಾಲ ಪತಿರಾಯನ ನೆದರು ಭಾಳ (ಪತಿಯ ಹೆಸರು)
ಹೀಗೇ ಈ ಒಡಪಿನ ವಿಶೇಷತೆಗೆ ಉತ್ತರ ಕರ್ನಾಟಕ ಹೆಸರುವಾಸಿಯಾಗಿದೆ…‌

Facebook ಕಾಮೆಂಟ್ಸ್

ಲೇಖಕರ ಕುರಿತು

Mamatha Channappa

ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!