“ಬೈಕ್ ಕೊಡಿಸುವುದೆಲ್ಲ ಸರಿ, ಅಮೇಲೆ ಶೋಕಿ ಮಾಡ್ಕಂಡ್ ರಾಶ್ ಡ್ರೈವ್ ಮಾಡಿದ್ರೆ ಅಷ್ಟೆ, ಆವಾಗ್ಲೇ ಕೀ ಕಿತ್ಕೊಂಡ್ ಬಿಡ್ತೇನೆ” ಎನ್ನುವ ಎಚ್ಚರಿಕೆಯೊಂದಿಗೇನೆ ಎಲ್ಲಾ ಅಪ್ಪಮ್ಮಂದಿರೂ ತಮ್ಮ ಮಕ್ಕಳಿಗೆ ಬೈಕ್ ಕೊಡಿಸುವುದು. ಅದ್ರೆ ಆ ಮುಂಡೇವು ಅದನ್ನೆಲ್ಲಾ ತಲೆಗಾಕಿಕೊಳ್ಳಬೇಕೇ? ಬೈಕ್ ಬರುತ್ತದೆ ಎನ್ನುವ ಅಮಲಿನಲ್ಲಿ ಸುಮ್ಮನೆ ತಲೆ ಅಲ್ಲಾಡಿಸಿರುತ್ತವೆ. ಅಮೇಲೆ “ಮುಂಡಾ ಮುಚ್ತು” ಎನ್ನುತ್ತಾ, ಕಾಲೇಜಿನ ಬೀದಿಯಲ್ಲಿ ಹೆಣ್ಣೈಕ್ಲು ಕಂಡ ತಕ್ಷಣ ಯಾವ ಶೋಕಿ ಮಾಡ್ಬಾರ್ದು ಅಂತ ಅಪ್ಪಮ್ಮ ಹೇಳಿರ್ತಾರೋ ಅದೇ ಶೋಕಿಗಿಳಿಯುತ್ತಾರೆ. ತಪ್ಪು ಅವರದ್ದಲ್ಲ, ಅವರ ಪ್ರಾಯದ್ದು. ಆದರೆ, ಅದೇ ಶೋಕಿಯ ಅಮಲಿನಲ್ಲಿ ಮೈ ಮರೆತರೆ ಜೀವನ ಪರ್ಯಂತ ಶಾಕ್’ಗೆ ಒಳಗಾಗಬಹುದು. ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಬಹುದು. ಶೋಕಿಗೋಸ್ಕರ ಎಗ್ಗಿಲ್ಲದೆ ರೈಡ್ ಮಾಡಿಯೋ ಅಥವಾ ಪಾನಮತ್ತರಾಗಿ ಕಾರು ಬೈಕ್ ಚಲಾಯಿಸಿಯೋ ಅಪಘಾತಕ್ಕೀಡಾಗುವುದು ದೊಡ್ಡ ಸಂಗತಿಯೇ ಅಲ್ಲ. ಅದು ಸರ್ವೇ ಸಾಮಾನ್ಯ. ಆದರೆ ಕೆಲವೊಮ್ಮೆ ನಮ್ಮ ತಪ್ಪಿಲ್ಲದೆಯೂ ಅಪಘಾತಕ್ಕೀಡಾಗುವ ಸಂದರ್ಭಗಳು ಬರುತ್ತವೆ. “ಆಗ್ಲೇ ಬೇಕೂಂತ ಬರೆದಿದ್ದರೆ ಅದು ಆಗಿಯೇ ಆಗುತ್ತದೆ” ಅನ್ನುತ್ತಾರಲ್ಲ, ಹಾಗೆ.
ಎರಡು ತಿಂಗಳ ಹಿಂದೆ ನಾನು ನನ್ನ ಬೈಕಿನಲ್ಲಿ ಹಾಯಾಗಿ ಹೋಗುತ್ತಿದ್ದೆ. ಹಾಯಾಗಿ ಎಂದರೆ ಬಹಳಾ ವೇಗದಲ್ಲಿ ಎಂದರ್ಥವಲ್ಲ. ಹೆಚ್ಚೆಂದರೆ ನಲುವತ್ತರಲ್ಲಿದ್ದೆ. ಕೆಲಸ ಮುಗಿಸಿ ಮನೆಗೆ ಬರುವ ಸಮಯ ಅದು. ಹೊಟ್ಟೆ ತಾಳ ಹಾಕುತ್ತಿತ್ತು. ಮನೆಗೆ ಹೋಗಿ ಸಿಕ್ಕಿ ಸಿಕ್ಕಿದ್ದನ್ನೆಲ್ಲಾ ತಿನ್ನುವ ಮುಂದಾಲೋಚನೆಯಲ್ಲಿ ಮನಸ್ಸಿತ್ತು. ಇದೇ ಯೋಚನೆಯಲ್ಲಿ ಬೈಕು ಮತ್ತು ಮನಸ್ಸು ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಅವೆರಡಕ್ಕೂ ಬ್ರೇಕ್ ಬಿತ್ತು. ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ನಾನು ರಸ್ತೆಯ ಮಧ್ಯದಲ್ಲಿ ಬಿದ್ದಿದ್ದೆ. ಏಳಲಾರದೆ ನರಳಾಡುತ್ತಿದ್ದೆ. ಸುತ್ತ ಮುತ್ತ ಹತ್ತಿಪ್ಪತ್ತು ಜನ ಸೇರಿದ್ದರು. ಹಾಯಾಗಿ ಹೋಗುತ್ತಿದ್ದೆ ಎಂದೆನಲ್ಲಾ, ನನ್ನ ಪಕ್ಕವೇ ಆರೇಳು ವರ್ಷದ ಹುಡುಗನೊಬ್ಬ ಸೈಕಲ್ ತುಳಿಯುತ್ತಾ ಹೋಗುತ್ತಿದ್ದ. ನಾವಿಬ್ಬರೂ ಜೊತೆ ಜೊತೆಯಾಗಿಯೇ ಸಾಗುತ್ತಿದ್ದೆವೆಂದರೆ ನನ್ನ ವೇಗವೆಷ್ಟಿದ್ದಿರಬಹುದೆಂದು ಊಹಿಸಿ. ನಾನು ನನ್ನಷ್ಟಕ್ಕೆ ಬರುತ್ತಿದ್ದೆ, ಆತ ಅವನಷ್ಟಕ್ಕೇ ಆಟವಾಡುತ್ತಾ ಬರುತ್ತಿದ್ದ. ಆತ ಆಟದ ಭರದಲ್ಲಿ ಸೈಕಲನ್ನು ಸಡನ್ನಾಗಿ ಬಲಕ್ಕೆ ತಿರುಗಿಸಿದ ಪರಿಣಾಮ ನನ್ನ ಬೈಕ್ ಅವನಿಗೆ ಗುದ್ದಿ ನಾನು ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟೆ. ಆ ಕಡೆ ಈ ಕಡೆ ತಿರುಗುವಾಗ ನೋಡಿಕೊಳ್ಳಬೇಕು ಎಂಬುದೂ ಆತನಿಗೆ ಗೊತ್ತಿರಲಿಲ್ಲ ಅಂತ ಕಾಣಬೇಕು, ನಾನು ಮಾತ್ರ ಡುಬ್ಬೆಂದು ಬಿದ್ದಿದ್ದೆ. ಶರೀರ ಇಡೀ ನಡುಗುತ್ತಿತ್ತು, ಒಂದೆರಡು ಕಡೆ ರಕ್ತ ಜಿನುಗುತ್ತಿತ್ತು. ಅಲ್ಲಿಗೆ ಮನೆಗೆ ಹೋಗಿ ಮುಕ್ಕಿ ತಿನ್ನುವ ನನ್ನ ಕನಸು ನುಚ್ಚು ನೂರಾಯಿತು.
ವಾಸ್ತವದಲ್ಲಿ ಅದೊಂದು ಸಣ್ನ ಅಪಘಾತ. ಎಷ್ಟು ಸಣ್ಣದೆಂದರೆ ಸಣ್ಣ ಪುಟ್ಟ ತರಚು ಗಾಯ ಬಿಟ್ಟರೆ ಬೇರೇನೂ ಆಗಿರಲಿಲ್ಲ. ಆ ಹುಡುಗು ಏನೂ ಆಗದವನಂತೆ ಎದ್ದು ಹೋಗಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆದರೆ, ಹೊರಗಿನಿಂದಾದ ಗಾಯ ಮಾತ್ರ ಸಣ್ಣದಾಗಿತ್ತು. ಒಳಗಿನಿಂದ? ರಸ್ತೆಗೆಸೆಯಲ್ಪಟ್ಟಾಗ ಎದೆ ಭಾಗ ರಸ್ತೆಗೆ ಬಲವಾಗಿ ಅಪ್ಪಳಿಸಿತ್ತು. ಇದರಿಂದಾಗಿ ನನ್ನ ಪಕ್ಕೆಲುಬಿನಲ್ಲಿ ಕ್ರ್ಯಾಕ್ ಉಂಟಾಗಿತ್ತು. ನನ್ನ ಗ್ರಹಚಾರಕ್ಕೆ ಇದು ನನಗೆ ಗೊತ್ತಾಗಿದ್ದು ಆರು ದಿನಗಳ ನಂತರ.
Usually ಸಣ್ಣ ಪುಟ್ಟ ಗಾಯಗಳಿಗೆಲ್ಲಾ ತಲೆ ಕೆಡಿಸಿಕೊಳ್ಳುವವ ನಾನಲ್ಲ. ಅದಕ್ಕೆಲ್ಲಾ ವೈದ್ಯರಲ್ಲಿಗೆ ಹೋಗಿ ಹತ್ತಾರು ಮಾತ್ರೆಗಳನ್ನು ನುಂಗುವ ಜಾಯಮಾನವೇ ನನ್ನದಲ್ಲ. ಈ ಆಕ್ಸಿಡೆಂಟ್ ಆಯ್ತಲ್ಲಾ, ಅದಾಗಿ ಐದು ದಿನ ಯಾವುದೇ ಎಗ್ಗಿಲ್ಲದೆ ಕೆಲಸಕ್ಕೆ ಹೋಗಿದ್ದೆ. ನೋವು ಎನ್ನುವುದು ನಿಜವಾಗಿಯೂ ಕಾಡಲು ಶುರು ಮಾಡಿದ್ದು ಆರನೇ ದಿನ. ಅಪಘಾತವಾದ ದಿನ “ಎಕ್ಸ್ ರೇ ಮಾಡಿಸೋಣವಾ” ಎಂದು ವೈದ್ಯರಲ್ಲಿ ಕೇಳಿದ್ದೆ. ಅದಕ್ಕವರು “ಬಿದ್ದ ಏಟಿಗೆ ಎರಡು ದಿನ ನೋವಿರುತ್ತೆ, ಮತ್ತೆ ಎಲ್ಲಾ ಸರಿ ಹೋಗುತ್ತೆ” ಎಂದಿದ್ದರು. ವೈದ್ಯರೇ ಹಾಗೆ ಹೇಳಿದ ಮೇಲೆ ನಾನು worry ಮಾಡುವುದುಂಟೇ? ಬಿಟ್ಹಾಕ್ದೆ. ಆರನೇ ದಿನ ನೋವು ಬಿಗಡಾಯಿಸಿದಾಗ ಎಕ್ಸ್ ರೇ ಮಾಡಿಸಿದೆ. ಅದನ್ನು ನೋಡಿದ ವೈದ್ಯರು ಹೇಳಿದ್ದು, “ಪಕ್ಕೆಲುಬಿನಲ್ಲಿ ಕ್ರ್ಯಾಕ್ ಆಗಿದೆ, ಒಂದು ತಿಂಗಳು ಕಂಪ್ಲೀಟ್ ರೆಸ್ಟ್ ಮಾಡಬೇಕು” ಎಂದರು. ಅವರ ಮೊದಲ ವಾಕ್ಯಕ್ಕಿಂತಲೂ ಜಾಸ್ತಿ ಎರಡನೇಯದಕ್ಕೆ ಥರಗುಟ್ಟಿ ಹೋದೆ.
ವೈದ್ಯರು ಅಷ್ಟು ಹೇಳಿಯೂ ನನಗೆ ಅದರ ಗಂಭೀರತೆಯ ಅರಿವಾಗಲಿಲ್ಲ. ಮನೆಯಲ್ಲಿ ಟಿವಿಯಿದೆ, ಲಾಪ್’ಟಾಪ್ ಇದೆ, ಇಂಟರ್’ನೆಟ್ ಇದೆ ಎಲ್ಲಾ ಇದೆ. ಆದರೆ ಒಂದು ತಿಂಗಳು ಮನೆಯಲ್ಲಿಯೇ ಇರುವುದಾದರೂ ಹೇಗೆ? ಈ ಒಂದು ತಿಂಗಳು ನನ್ನ ಕನ್’ಸ್ಟ್ರಕ್ಷನ್ ಸೈಟನ್ನು ಯಾರು ನೋಡಿಕೊಳ್ಳುತ್ತಾರೆ? ಮಳೆಗಾಲ ಶುರುವಾಗುವುದಕ್ಕೂ ಮುನ್ನ ಸ್ಲಾಬ್ ಕಾಂಕ್ರೀಟ್ ಮಾಡುವುದಾದರೂ ಹೇಗೆ? ಎಂಬಿತ್ಯಾದಿ ವಿಚಾರಗಳೇ ನನ್ನ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವೇ ಹೊರತು ನನ್ನೆದೆಯಲ್ಲೇನೋ ನೋವಿದೆ ಎನ್ನುವುದನ್ನು ಮರೆತೇ ಬಿಟ್ಟಿದ್ದೆ. ಆದರೆ ಮಲಗಿದಲ್ಲಿಂದ ಏಳುವಾಗ, ಕುಳಿತುಕೊಳ್ಳುವಾಗ ಆಗುತ್ತಿದ್ದ ನೋವು ಅದನ್ನು ಪದೇ ಪದೇ ನೆನಪಿಸುತ್ತಿತ್ತು. ಜೊತೆಗೆ “ಲೈಟಾಗಿ ತೆಗೆದುಕೊಳ್ಳಬೇಡ, ಸರೀ ರೆಸ್ಟ್ ಮಾಡು, ಟೇಕ್ ಕೇರ್” ಎಂದು ಯಾವಾಗಲು ಎಚ್ಚರಿಸುತ್ತಿದ್ದ ಆಪ್ತ ಸ್ನೇಹಿತರ ಮಾತುಗಳು ನನಗೇನೋ ಆಗಿದೆ ಎಂದು ಹೇಳುತ್ತಿದ್ದವು. Actually ನನಗಿಂತ ಹೆಚ್ಚು ಅವರೇ ನನ್ನ ಬಗ್ಗೆ ಚಿಂತಿತರಾಗಿದ್ದರು.
ನಾನು ನೋವನ್ನು ನೆಗ್ಲೆಕ್ಟ್ ಮಾಡಿದಷ್ಟು ಅದು ನನ್ನನ್ನು ಅಪ್ಪಿಕೊಳ್ಳುತ್ತಿತ್ತು. ಅದೇ ಸಂದರ್ಭಕ್ಕಾಗಿ ಕಾದು ಕುಳಿತಿತ್ತೋ ಏನೋ, ವೈರಲ್ ಫಿವರ್ ಎರಡೆರಡು ಭಾರಿ ನನ್ನನ್ನು ಕಾಡಿತು. ಹೈ ಪವರಿನ ನೋವು ನಿವಾರಕ ಮಾತ್ರೆಗಳಿಂದಾಗಿ ಉಂಟಾದ ಆಸಿಡಿಟಿಯು ನನ್ನನ್ನು ಹೈರಾಣಾಗಿಸಿತು ಸತ್ಯ ಹೇಳ್ಳಾ? ಅಸಹನೀಯವಾದ ಆ ನೋವು ಬದುಕುವ ಆಸೆಯನ್ನೇ ಕೈ ಬಿಡುವಂತೆ ಮಾಡಿತ್ತು. ಇದಕ್ಕಿಂತ ಹತ್ತು ಪಟ್ಟು ಹೆಚ್ಚು ಪ್ರಮಾಣದ ಅಪಘಾತಕ್ಕೀಡಾಗಿಯೂ ಏನೂ ಆಗಿಲ್ಲವೆಂಬಂತೆ ಉತ್ಸಾಹದಿಂದ ಬದುಕುತ್ತಿರುವ ಸ್ನೇಹಿತನ ಉದಾಹರಣೆ ನನ್ನ ಕಣ್ಣ ಮುಂದೆ ಇದ್ದಾಗಲೂ ಆ ನೋವು ಮಾತ್ರ ಈ ಜೀವನವೇ ಬೇಡ ಎನ್ನುವಂತೆ ಮಾಡಿತ್ತು.
ಅಪ್ಪನನ್ನು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಹೋಗುವಾಗಲೆಲ್ಲಾ ಒಂದು ಮಾತು ಹೇಳುತ್ತಾರೆ. “ಸ್ವಲ್ಪ ನಿಧಾನಕ್ಕೆ ಓಡ್ಸು” ಅಂತ. ಈ ಉಪದೇಶ ಬಂದಾಗಲೆಲ್ಲಾ “ಏಯ್, ನಾನ್ ಎಷ್ಟ್ ಸ್ಪೀಡ್ ಹೋದ್ರೂ ನನ್ನ ಎಚ್ಚರಿಕೆಯಲ್ಲಿ ನಾನಿರುತ್ತೇನೆ” ಎನ್ನುವ ಸಿದ್ಧ ಉತ್ತರ ನನ್ನ ಕಡೆಯಿಂದ ಹೊಗುತ್ತದೆ. ಮೊನ್ನೆ ಅಪಘಾತವಾದ ದಿನ ನಾನು ನಿಧಾನವಾಗಿಯೇ ಇದ್ದೆ. ಜಾಗ್ರತೆಯಲ್ಲಿಯೂ.. ಆದರೆ ನಾವು ಎಷ್ಟು ಜಾಗ್ರತೆಯಲ್ಲಿದ್ದರೇನು ಬಂತು? ಆ ಕಡೆಯವರು ಜಾಗ್ರತೆ ತಪ್ಪಿದರೂ ನಮಗೆ ಎರವಾಗಬಹುದು. ಮೊನ್ನೆ ಬೆಂಗಳೂರು ಸಮೀಪ ವೀಲಿಂಗ್ಸ್ ಮಾಡಿ ಪ್ರಾಣ ಕಳೆದುಕೊಂಡ ಹುಡುಗರಿಬ್ಬರ ಕಥೆ ಗೊತ್ತಲ್ಲಾ? ಅವರಿಬ್ಬರು ಪ್ರಾಣ ಕಳೆದುಕೊಂಡಿದ್ದು ಮಾತ್ರವಲ್ಲದೆ, ಅವರು ಮಾಡಿದ ತಪ್ಪಿಗೆ ತಪ್ಪೇ ಮಾಡದ ಮತ್ತಿಬ್ಬರು ಬೈಕ್ ಸವಾರರು ಆಸ್ಪತ್ರೆ ಸೇರುವಂತಾಗಿತ್ತು. ಒಂದು ವೇಳೆ ನಾನೂ ಸಹ ವೇಗದಲ್ಲಿರುತ್ತಿದ್ದರೆ ಏನಾಗುತ್ತಿತ್ತೋ ಏನೋ? ಬಹುಶಃ ನನ್ನದೂ ಬಾಲಕನದ್ದು ಇಬ್ಬರದ್ದೂ ಅಡ್ರೆಸ್’ಗೆ ಇರುತ್ತಿರಲಿಲ್ಲ. ಆ ಸಣ್ಣ ಅಪಘಾತ ನನ್ನನ್ನು ಒಂದೂವರೆ ತಿಂಗಳು ಮಕಾಡೆ ಮಲಗಿಸಿ ಬಿಡ್ತು.
ಯಾರಿಗೂ ಆಗದ ಭೀಕರ ಅಪಘಾತಕ್ಕೆ ತುತ್ತಾಗಿದ್ದೇನೆ ಅಂತ ನಾನು ಇಷ್ಟನ್ನೆಲ್ಲಾ ಬರೆದಿದ್ದಲ್ಲ. ಆದರೆ ಸಣ್ಣ ಅಪಘಾತವೂ ಕೆಲವೊಮ್ಮೆ ನಮ್ಮನ್ನು ಧೃತಿಗೆಡಿನಿಬಿಡಬಹುದು. ಸಣ್ಣವಾಗಿದ್ದರೂ ಅವುಗಳು ಕಲಿಸುವ ಪಾಠ ಮಾತ್ರ ದೊಡ್ದದು. ಈಗ ನನ್ನ ಬೆಡ್ ರೆಸ್ಟ್ ಮುಗಿದಿದೆ. ಬೈಕಿನ ಸವಾರಿಯ ಜೊತೆಗೆ ಜೀವನ ಪಯಣ ಸಾಗಿದೆ.