ಅಂಕಣ

ಅಮೀನು ಅಲ್ಲಾ, ಇದು ಚಿನ್ನದ ಮೀನು

ಕಥೆಗಳು ಯಾರಿಗೆ ಇಷ್ಟವಾಗೋಲ್ಲ? ಬಹಳಷ್ಟು ಬಾಲ್ಯಗಳು  ಅರಳುವುದೇ ಕಥೆಗಳನ್ನು  ಕೇಳುವುದರ ಮೂಲಕ. ಬಾಲ್ಯದ  ನೆನಪುಗಳು ಬಿಚ್ಚಿಕೊಳ್ಳುವುದೇ ಕಥೆಗಳ ಮೂಲಕ .  ಬೆಳೆದಂತೆಲ್ಲಾ ಕೇಳುವುದು ಬಿಟ್ಟು ಓದುವುದರ ಕಡೆಗೆ ಬದಲಾದರೂ ಕತೆ ಬದುಕು ಎರಡೂ ಒಂದಕ್ಕೊಂದು ಜೊತೆಗೂಡಿಯೇ ಸಾಗುತ್ತದೆ.ಬಾಲ್ಯದಲ್ಲಿ ನವರಸಗಳ ಪರಿಚಯ ಮಾಡಿಕೊಡುವುದೇ ಈ  ಕತೆಗಳು.

ರೋಹಿತ್ ಅವರ ಚಿನ್ನದ ಮೀನು ಇಂಥಹ ಕತೆಗಳ  ಅಂದದ ಹೂ ಗುಚ್ಛ.  ಕಣ್ಮನ ತಣಿಸುವುದರ ಜೊತೆಗೆ ಆಹ್ಲಾದದ ಪರಿಮಳವನ್ನು ಬೀರಿ ಬೇರೆಯದೇ ಲೋಕಕ್ಕೆ ಕೊಂಡೊಯ್ಯಬಲ್ಲ ಪುಷ್ಪಕ ವಿಮಾನ.  ಆರಂಭವಾಗೋದೆ ನಯನ್ ಸಿಂಗ್ ಎಂಬ ಛಲಗಾರನ ಕತೆಯಿಂದ. ನಡಿಗೆಯಲ್ಲಿ ಅದೂ ಹಿಮಾಲಯದಂತ ದುರ್ಗಮ ಪ್ರದೇಶದಲ್ಲಿ ಯಾವುದೇ ಅತ್ಯಾಧುನಿಕ ಉಪಕರಣಗಳಿಲ್ಲದೆ  ಗುಪ್ತವಾಗಿ ಸರ್ವೇ ಮಾಡಿ ಒಂದಿಡೀ ದೇಶದ ಮ್ಯಾಪ್ ಬರೆಯಲು ಸಹಕರಿಸಿದ ಅದ್ಭುತ ವ್ಯಕ್ತಿ. ಅವನ ಸಾಧನೆಯ ಕುರಿತು ಓದುತ್ತಿದ್ದರೆ ನಮಗರಿವಿಲ್ಲದಂತೆ ಮೈ ಮರಗಟ್ಟಿರುತ್ತದೆ.

ಇನ್ನು ಫಿಶರ್ ಕತೆಯಂತೂ ಸಮುದ್ರದಷ್ಟೇ ರೋಚಕ. ಓದುತ್ತಾ ಓದುತ್ತಾ  ಮನಸ್ಸಿನ ಸಮುದ್ರದಲ್ಲೂ ನೆನಪುಗಳ ಅಲೆಗಳ ಹೊಡೆತಕ್ಕೆ ಸಿಲುಕುತ್ತಾ, ಕುತೂಹಲದ ಚಂಡಮಾರುತಕ್ಕೆ ಎದುರಾಗುತ್ತಾ, ಮನಸ್ಸಿನಾಳಕ್ಕೆ ಡೈವಿಂಗ್ ಮಾಡುವ ಹಾಗೆ ಮಾಡುತ್ತದೆ, ಅಲ್ಲಿರುವ ಸಂಪತ್ತು  ಹುಡುಕುವ  ಛಲ ನಮ್ಮಲ್ಲೂ  ಇರಬೇಕಷ್ಟೇ..

ನನ್ನನ್ನು ಅತಿಯಾಗಿ ಕಾಡಿದ ಕತೆಗಳಲ್ಲಿ ಮುಖ್ಯವಾದದ್ದು ರವೀಂದ್ರ ಕೌಶಿಕ್ ಎಂಬ ಬೇಹುಗಾರನ ಕತೆ.  ಕತೆಯ ಜೊತೆಜೊತೆಗೆ ಗೂಡಾಚಾರ ಬದುಕಿನ ಕರಾಳತೆಯನ್ನು ರಹಸ್ಯತೆಯನ್ನು ಪರಿಚಯಿಸಿ ರೆಪ್ಪೆಗಳ ನಡುವೆ ಕಾರ್ಮೋಡವನ್ನು ಸೃಷ್ಟಿಸಿ ಬಿಡುತ್ತದೆ. ಕೇವಲ ದೇಶ ಎನ್ನುವ ಎರಡು ಅಕ್ಷರಗಳಿಗಾಗಿ ತಮ್ಮೆಲ್ಲಾ ಆಸೆಗಳನ್ನು ಬದಿಗೊತ್ತಿ ಹೊರಡುವ ಮುತ್ತುಗಳನ್ನು ಕೇವಲ ತಮ್ಮ ವೈಯುಕ್ತಿಕ ಹಿತಾಸಕ್ತಿಗಾಗಿ ಅವಹೇಳನಗೈಯ್ಯುವ ಒಂದು ವರ್ಗದ ಜನರೆಡೆಗೆ ಮನಸ್ಸು ಸಿಡಿಯುತ್ತದೆ. ಓದಿ ಕೆಳಗಿಟ್ಟಾಗ ಮಳೆ ಹನಿಯುತ್ತಿರುತ್ತದೆ.

ಇಲ್ಲಿರುವ ಪ್ರತಿಯೊಂದು ಕತೆಯೂ ಹಾಗೆ. ಯಾವುದೋ ಒಂದು ಭಾಗಕ್ಕೋ, ದೇಶಕ್ಕೋ ಸೀಮಿತವಾಗದೆ “ವಸುದೈವ ಕುಟುಂಬಕಂ” ಎನ್ನುವುದನ್ನು ನೆನಪಿಸುತ್ತದೆ. ಪಾಶ್ಚಾತ್ಯ ದೇಶದಲ್ಲಿ ವೈದ್ಯ ಪದವಿ ಪಡೆದ ಮೊದಲ ಭಾರತೀಯ ಮಹಿಳೆ ಎಂದು ಪ್ರಖ್ಯಾತಿಯಾದ ಆನಂದಿ ಬೆನ್, ಅಂತರ್ಜಾಲವೆಂದರೆ ಏನೆಂದು ಅರಿಯದ ಚೀನಾದ ಮಾ  ಕಟ್ಟಿದ ಆನ್ ಲೈನ್ ಕಂಪನಿ, ಕೇವಲ ೨೩೦೦ ದಿನಗಳಲ್ಲಿ ೨೫೦೦೦ ಚಿತ್ರ ಬರೆದು ಲಿಮ್ಕಾ ದಾಖಲೆ ಸೇರಿದ ದ್ಯೆತ್ಯ ಪ್ರತಿಭೆಯ ಪುಟಾಣಿ ಕ್ಲಿಂಟ್, ಈಜಲು ಬಾರದಿದ್ದರೂ ದೋಣಿಯಲಿ ಸಮುದ್ರಯಾನ ಮಾಡಿದ ಥಾರ್, ಲೋಕ ವಿಜ್ನಾನಿ ಸ್ಟೀಫನ್ ಹಾಕಿಂಗ್. ಭೌದ್ದ ಸನ್ಯಾಸಿ ಸೆನ್ನಿಚಿ, ಹಾಗೂ ನಮ್ಮ  ಹೆಮ್ಮೆಯ ಕಲಾಂ ತಾತ,, ಎಲ್ಲರೂ  ಬಂದು ನಮ್ಮೊಳಗೇ ಸ್ಪೂರ್ತಿಯ ಪ್ರಣತಿಯನ್ನು ಹಚ್ಚುತ್ತಾರೆ.

ಕತೆಗಳು ಎಷ್ಟೇ ಸತ್ವಭರಿತವಾಗಿದ್ದರೂ ಅದರ ಪ್ರಭಾವ ಹೇಳುವುದರ ಮೇಲೆ ಅವಲಂಬಿತವಾಗಿರುತ್ತದೆ. ಕೇಳುಗನ, ಓದುಗನ ಮನದಾಳಕ್ಕೆ ಇಳಿಯಬೇಕಾದರೆ ಶೈಲಿ ಪ್ರಮುಖ ಪಾತ್ರ ವಹಿಸುತ್ತದೆ.ಈ  ವಿಷಯದಲ್ಲಿ  ರೋಹಿತ್ ಬರೆದಿದ್ದಾರೆ ಅನ್ನುವುದಕ್ಕಿಂತ ಎದುರಿಗೆ ಕುಳಿತು ಹೇಳುತ್ತಿದ್ದಾರೇನೋ ಅನ್ನಿಸುವುದಂತೂ ಸತ್ಯ.ಎಲ್ಲಿಯೂ ಕ್ಲಿಷ್ಟ ಪದಗಳನ್ನು ಬಳಸದೆ, ಪಾಂಡಿತ್ಯ ಪ್ರದರ್ಶನ ಮಾಡಿ ಗಲಿಬಿಲಿಗೊಳಿಸದೆ ಸರಳ ಪದಗಳಲ್ಲಿ ಹೇಳುತ್ತಾ, ಓದುಗರ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಾ, ಅಲ್ಲಲ್ಲಿ ಉಸಿರುಬಿಗಿಹಿಡಿದು ಕಾಯುವಂತೆ ಮಾಡುತ್ತಾ, ಕೊನೆಯಲ್ಲಿ ತುಟಿಯಲ್ಲಿ ಒಂದು ಕಿರುನಗು ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಗೆಂದು ಇದು ನನ್ನನ್ನು ಒಂದೇ  ಗುಕ್ಕಿನಲ್ಲಿ ಓದಿಸಿಕೊಂಡು ಹೋಗಿಲ್ಲ, ಒಂದೊಂದು ಕತೆ ಮುಗಿದಾಗಲೂ ನನ್ನಲ್ಲಿ ಮೌನವನ್ನು ಹುಟ್ಟಿ ಹಾಕಿದೆ. ಆಲೋಚಿಸುವಂತೆ ಮಾಡಿದೆ. ಭಾವನೆಗಳ ತಾಕಲಾಟಕ್ಕೆ ಸಿಲುಕಿಸಿದೆ. ಹಿಮಾಲಯದ ವರ್ಣನೆಯೊಂದಿಗೆ ಆರಂಭವಾಗುವ ಈ  ಪುಸ್ತಕ ಅದರಷ್ಟೇ, ರೋಚಕ, ಭವ್ಯ..  ಅಲ್ಲಿಯ ದಾರಿಯಂತೆ ಒಮ್ಮೊಮ್ಮೆ ಬೆಚ್ಚಿ ಬೀಳಿಸುವ ಘಟನೆಗಳನ್ನು ವರ್ಣಿಸುತ್ತಾ, ಕ್ರಮಿಸಿದ ದುರ್ಗಮ ದಾರಿಯನ್ನು ತೋರಿಸುತ್ತಾ, ಸುಂದರ ಗಮ್ಯದ ದರ್ಶನವನ್ನು ಮಾಡಿಸಿ ಮನಸ್ಸಿನರಮನೆಯಲ್ಲಿ ಬೆಳಕಿನ ಕಿಡಿ ಮೂಡಿಸುತ್ತದೆ. ಯಾವುದೋ ತಿರುವಿನಲ್ಲಿ ಆವಶ್ಯಕ ಘಳಿಗೆಯಲ್ಲಿ ಕೈ ಹಿಡಿದು ನಡೆಯುವ ಅಪ್ತಮಿತ್ರನಂತೆ ಇವು ನಮ್ಮ  ಬದುಕಿನಲ್ಲಿ ಖಂಡಿತಾ ಸಹಕಾರಿಯಾಗುತ್ತದೆ.

ಇದು ಚಿನ್ನದ ಮೀನಲ್ಲ..  ಸಮುದ್ರ.. ಆಳಕ್ಕಿಳಿದಷ್ಟೂ ಸಂಪತ್ತೂ ….

Facebook ಕಾಮೆಂಟ್ಸ್

ಲೇಖಕರ ಕುರಿತು

Shobha Rao

Writer

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!