ಕಾಡಿಗೆಯ ತಂದಿದ್ದೇನೆ ಕಂದ
ನಿನ್ನ ಕಣ್ಣಿಗೆ ಲೇಪಿಸಲು
ನಿನ್ನ ಪುಟ್ಟ ಕಾಲಿಗೊಂದು
ದೃಷ್ಟಿ ಬೊಟ್ಟಿಡಲು ಕಾಯ್ದವಳು
ಕಾಲ್ಗೆಜ್ಜೆಯ ತಂದಿಟ್ಟು
ವರ್ಷವೇ ಆಯಿತೇನೋ
ಇನ್ನೂ ಅದರ ಸಪ್ಪಳವೇ
ಕೇಳದ ನತದೃಷ್ಟಳಿವಳು
ಕುಲಾಯಿಯೊಂದ
ಕೈಯಾರೆ ಹೆಣೆದಿರುವೆ
ಅಂದಕ್ಕಿರಲೆಂದು
ಮುತ್ತು ಪೋಣಿಸುತ್ತಿರುವವಳು
ತೊಟ್ಟಿಲ ಮಾಡಿರುವ
ಬಡಗಿ
ಬಗೆ ಬಗೆ ಚಿತ್ತಾರವ
ಮೂಡಿಸಿರುವನು
ತೂಗುವ ಆಸೆ ಹೊತ್ತವಳು
ನಿದ್ದೆಯಲ್ಲೇ ನಗುವ
ಮುದ್ದಾದ ನಗುವಿಗೆ
ಹಾತೊರೆದಿರುವೆ
ಖಾಲಿ ಮಡಲಿನವಳು
ನಿನ್ನ ಹಾಲ್ಗಲ್ಲಕ್ಕೊಂದು
ಮುತ್ತನಿಡುವ
ನಿನ್ನ ಪುಟ್ಟ ಕೈಗಳ ಸ್ಪರ್ಶಕೆ
ಹಾತೊರೆದವಳು
ಕಂದನ ಮುದ್ದಾಡುವ
ತಾಯಂದಿರ ಕಂಡು
ಇರದ ಭಾಗ್ಯವ ನೆನೆದು
ಕುರುಬಿದವಳು
ಪುಟ್ಟ ಕಾಲುಗಳು
ಎದೆಗೊದ್ದಾಗಿನ ಪುಳಕದ
ಕನಸು ಕಂಡು ಕಂಡು
ಬೆಂಡಾದವಳು..
“ಅಮ್ಮಾ…” ಎಂದು ಕರೆವ
ಮುದ್ದು ಕಂದನ
ಕರೆಗಾಗಿ ತೋಳುಗಳ
ತೆರೆದು ನಿಂತವಳು
ಕಂದನೊಂದನು ಕಾಣದ
ನೊಂದ ಖಾಲಿ ಮಡಿಲ
“ಬಂಜೆ”ಯೆಂಬ ತಲೆಬರಹ
ಹೊತ್ತವಳು
ಬರೀ ಬಂಜೆ ಇವಳು…