ಅಂಕಣ

ರೋಹಿತ್ ಚಕ್ರತೀರ್ಥ ಎಂಬ ಅರೆ ಬೆಂದವನ ಕುರಿತು…

ಅರ್ಪಣೆ:

ತನ್ನ ಬರಹಗಳಿಂದಲೇ ನನ್ನಂತಹ ಎಳಸು ಬರಹಗಾರನಿಗೆ ಸ್ಪೂರ್ತಿಯನ್ನು ತುಂಬುತ್ತಿರುವ ಶ್ರೀ ರೋಹಿತ್ ಚಕ್ರತೀರ್ಥರಿಗೆ..

 

ಸ್ಪಷ್ಟನೆಯೊಂದಿಗೆ ಲೇಖನ ಪ್ರಾರಂಭ.  ರೋಹಿತ್ ಚಕ್ರತೀರ್ಥರನ್ನು ಮೆಚ್ಚಿಸುವುದಕ್ಕಾಗಿ, ಹೊಗಳಿ ಅಟ್ಟಕ್ಕೇರಿಸಿ ಬಕೆಟ್ ಹಿಡಿಯುವುದಕ್ಕಾಗಿ ಅಥವಾ ಅವರ ಅಭಿಮಾನಿಗಳನ್ನು ಇಷ್ಟ ಪಡಿಸುವುದಕ್ಕಾಗಿ ಈ ಬರಹವನ್ನು ಬರೆದಿದ್ದಲ್ಲ. ಮೊದಲೇ ಇದನ್ನೆಲ್ಲಾ ಬರೆಯಬೇಕೆಂದು ಅಂದುಕೊಂಡಿದ್ದೆ. ಆದರೆ ಸೂಕ್ತ ಸಮಯ ಬಂದಿರಲಿಲ್ಲ. ನಾಡಿದ್ದು, ಒಂದೇ ದಿನದಲ್ಲಿ ಶ್ರೀಯುತರ ಏಳು ಪುಸ್ತಕಗಳು ಬಿಡುಗಡೆಯಾಗುತ್ತಿದ್ದು ಈ ಆಸಾಮಿಯ ಕುರಿತು ಬರೆಯುವುದಕ್ಕೆ ಇದೇ ಸುಸಮಯ ಎಂದೆನಿಸಿ ನಿಮ್ಮ ಮುಂದಿಡುತ್ತಿದ್ದೇನೆ.

 

ರೋಹಿತ್ ಚಕ್ರತೀರ್ಥ… ತನ್ನ ಬರಹಗಳಿಂದಲೇ ನೂರಾರು ಅಭಿಮಾನಿಗಳನ್ನು ಸೃಷ್ಟಿಸಿಕೊಂಡ, ಸದ್ಯಕ್ಕೆ ಅಂತರ್ಜಾಲ ಜಗತ್ತಿನಲ್ಲಿ ಹವಾ ಕ್ರಿಯೇಟ್ ಮಾಡಿರುವ ಮಾಂತ್ರಿಕ ಬರಹಗಾರ. ಅಂಕಣ ಬರಹಗಳ ಮೂಲಕವೇ ನಮ್ಮನ್ನೆಲ್ಲಾ ಮತ್ತೊಂದು ಜಗತ್ತಿಗೆ ಕೊಂಡೊಯ್ಯಬಲ್ಲ ಮೋಡಿಗಾರ. ರಾಜಕೀಯ, ಗಣಿತ,   ವಿಜ್ಞಾನ, ಪರಿಸರ, ಪ್ರವಾಸ, ಧಾರ್ಮಿಕ, ಲೌಕಿಕ, ಅಲೌಕಿಕ.. ಹೀಗೆ ಹತ್ತು ಹಲವು ವಿಚಾರಗಳ ಮೇಲೆ ನೀರು ಕುಡಿದಷ್ಟೇ ಸುಲಭವಾಗಿ ಬರೆಯಬಲ್ಲ ಚಕ್ರತೀರ್ಥರ ಬಗ್ಗೆ ಬರೆಯುವುದಾದರೆ ಅದೆಷ್ಟೋ ವಿಚಾರಗಳನ್ನು ಬರೆಯಬಹುದು, ಆದರೆ ಅವರ ಹಾಗೆ ಬರೆಯಲು ನಮಗೆ ಬರುವುದಿಲ್ವೇ?! ಹ್ಮ..!

 

“ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಕೈ ಹಾಕದ ಕ್ಷೇತ್ರವಿಲ್ಲ” ಎನ್ನುವ ಮಾತು ಈಗ ಹಳೆಯದಾದರೂ ಇಂದಿಗೂ ಜನಜನಿತವಾಗಿದೆ. ಆದರೆ ನಮ್ಮ ಪೀಳಿಗೆಯ ಜನ  ಅದನ್ನೇ ಸ್ವಲ್ಪ ಬದಲಾಯಿಸಿ, “ ಆಡು ಮುಟ್ಟದ ಸೊಪ್ಪಿಲ್ಲ, ಚಕ್ರತೀರ್ಥರು ಬರೆಯದ ವಿಷಯಗಳಿಲ್ಲ, ಅವರು ಬರೆಯದ ಪತ್ರಿಕೆಗಳಿಲ್ಲ” ಎಂದೆಲ್ಲಾ ಹೇಳುತ್ತಿದ್ದಾರೆ. ಇದು ಖಂಡಿತವಾಗಿಯೂ ಅತಿಶಯೋಕ್ತಿ ಎನಿಸದು. ಯಾಕೆಂದರೆ ಕನ್ನಡದಲ್ಲಿ ಎಷ್ಟು ಪತ್ರಿಕೆಗಳಿವೆಯೋ ಅಷ್ಟೂ ಪತ್ರಿಕೆಗಳಲ್ಲಿ(ಕೆಲವೊಂದು exceptionಗಳಿವೆ ಬಿಡಿ) ಅವರ ಲೇಖನಗಳು ಬಂದಿದೆ, ಬರುತ್ತಲಿದೆ. ಸುಧಾ, ತರಂಗ, ಕರ್ಮವೀರ, ವಿಕ್ರಮ, ಉತ್ಥಾನ ಮುಂತಾದ ಸಾಪ್ತಾಹಿಕ, ಮಾಸಿಕಗಳಿಗೂ ಬಿಡದೇ ಬರೆಯುತ್ತಾರೆ. ಅಷ್ಟಾದರೂ ಈ ಮನುಷ್ಯನ ದಾಹ ತೀರದು, ನಿಲುಮೆ, ರೀಡೂ ಕನ್ನಡ ಮುಂತದ ವೆಬ್ ತಾಣಗಳಲ್ಲೂ ತಮ್ಮ ಕೈಚಳಕವನ್ನು ನಿರಂತರವಾಗಿ ತೋರುತ್ತಿದ್ದಾರೆ.

 

ಅವರು ಬರೆಯುತ್ತಿರುವ ವಿಷಯ ಯಾವುದೇ ಇರಲಿ. ಅದರಲ್ಲಿ ಆಳವಾದ ಅಧ್ಯಯನವಿರುತ್ತದೆ. ಸಂಧರ್ಭ ಮತ್ತು ವಿಷಯಕ್ಕೆ ತಕ್ಕಂತೆ ಖಾರ ಮಸಾಲೆ, ರುಚಿಗೆ ತಕ್ಕಷ್ಟೇ  ಉಪ್ಪು  ಓದುಗರನ್ನು ಓದಿಸುತ್ತದೆ. ತಿವಿಯಬೇಕಾದವರನ್ನು ತಿವಿಯಬೇಕಾದಲ್ಲಿ ತಿವಿಯುತ್ತಾರೆ, ಎತ್ತಿ ಮುದ್ದಿಸಬೇಕಾದವರನ್ನು ಅಪ್ಪಿ ಮುದ್ದಿಸುತ್ತಾರೆ. ಹೇಳಬೇಕಾದುದನ್ನು ನೇರವಾಗಿ, ಓದುಗನಿಗೆ ನಾಟುವಂತೆ ಹೇಳುತ್ತಾರೆ. ಅದು ಅನುವಾದವೇ ಆಗಿದ್ದರೂ ಸಹ, ಅದನ್ನು ಭಾಷಾಂತರಿಸುವಾಗ ಅದಕ್ಕೊಂದಿಷ್ಟು ಉಪಮೇ, ಅಲಂಕಾರಗಳ ಒಗ್ಗರಣೆಯನ್ನು ಹಾಕಿ ಓದನ್ನು ಬಹಳ ರುಚಿಕಟ್ಟಾಗುವಂತೆ ಮಾಡುತ್ತಾರೆ.

 

ನಿಮಗೆಲ್ಲಾ ಗೊತ್ತಿದೆಯಲ್ಲಾ, ಬರವಣಿಗೆಯಲ್ಲಿ ಇವರದ್ದು ಅಧ್ಬುತ ಟ್ಯಾಲೆಂಟ್.. ವಾರದಲ್ಲಿ ಕಡಿಮೆಯೆಂದರೂ ಏಳೆಂಟು ಲೇಖನಗಳು ಈ ಮನುಷನ ಕಡೆಯಿಂದ ಇದ್ದೇ ಇರುತ್ತದೆ. ವಾಸ್ತವದಲ್ಲಿ ಬರವಣಿಗೆಗೆ ಸಂಬಂಧವೇ ಇಲ್ಲದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇವರಿಗೆ ಇಷ್ಟೆಲ್ಲಾ ಲೇಖನಗಳನ್ನು ಬರೆಯೋದಕ್ಕೆ, ಅದಕ್ಕೆ ಪೂರಕವಾದ ಅಧ್ಯಯನಕ್ಕೆ ಮತ್ತು ಲೇಖನಗಳನ್ನು ಟೈಪಿಸೋದಕ್ಕೆ ಸಮಯವೆಲ್ಲಿಂದ ಸಿಗುತ್ತೆ ಎನ್ನುವುದೇ ನಮ್ಮೆಲ್ಲರನ್ನು ನಿಗೂಢವಾಗಿ ಕಾಡುತ್ತಿರುವ ಪ್ರಶ್ನೆ. ಅಬ್ಬಾ.. ಸಾಮಾನ್ಯರಿಗಂತೂ ಇಷ್ಟೆಲ್ಲಾ ಸಾಧ್ಯವೇ ಇಲ್ಲ. ಹಾಗಂತ ತನ್ನ ಸ್ವಂತ ಪ್ರತಿಭೆಯಿಂದಲೇ ಇವರು ಇಷ್ಟೆಲ್ಲಾ ಮನ್ನಣೆಯನ್ನು ಗಳಿಸಿದ್ದಾರೆಯೇ ಹೊರತು ಅದಕ್ಕಾಗಿ ಎಂದಿಗೂ, ಯಾರಿಗೂ ಬಕೆಟ್ ಹೀಡಿದವರಲ್ಲ. ಇನ್ ಫ್ಯಾಕ್ಟ್, ಇವರ ಬರವಣಿಗೆಯನ್ನು ನೋಡಿ ಪತ್ರಿಕೆಯ ಸಂಪಾದಕರೇ ಇವರಿಗೆ ಬಕೆಟ್ ಹಿಡಿಯುತ್ತಾರೆ.(ಹೌದು, ರೀಡೂ ಕನ್ನಡಕ್ಕೆ ಬರೆಯುವುದಕ್ಕೆ ಇವರನ್ನು ಒಪ್ಪಿಸುವುದಕ್ಕಾಗಿ ನಾನು ಒಂದೆರಡು ಭಾರಿ ಬಕೆಟ್ ಹಿಡಿದಿದ್ದೆ.)

 

ಅಷ್ಟೆಲ್ಲಾ ವಿಚಾರಗಳ ಮೇಲೆ ಇಷ್ಟೊಂದು ಲೇಖನಗಳನ್ನು, ಪುಸ್ತಕಗಳನ್ನು ಬರೆಯುತ್ತಾರಲ್ಲ, ಅದರಲ್ಲೆಲ್ಲೂ ಗೊಂದಲಗಳಿರುವುದಿಲ್ಲ. ಬರೆಯಬೇಕೆಂಬ ಕಾರಣಕ್ಕೆ ಅವರೆಂದೂ ಬರೆಯುವುದಿಲ್ಲ. ಉಳಿದ ಕೆಲವು ಬರಹಗಾರರಂತೆ “ರೋಹಿತ್ biased ಆಗಿ ಬರೆಯುತ್ತಾರೆ” ಎನ್ನುವ ಅನುಮಾನಕ್ಕೂ ಎಡೆ ಮಾಡಿಕೊಡುವುದಿಲ್ಲ. ತನ್ನ ನಿಲುವುಗಳಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ.  ಅಷ್ಟರ ಮಟ್ಟಿಗೆ ವಿಷಯ ಸ್ಪಷ್ಟತೆಯಿರುತ್ತದೆ ಚಕ್ರತೀರ್ಥರ ಬರಹಗಳಲ್ಲಿ. ಇವರು ಟೈಪಿಸಿ ಕಳುಹಿಸುವ ಲೇಖನಗಳಲ್ಲಿ ಒಂದೇ ಒಂದು ಕಾಗುಣಿತದ ತಪ್ಪೂ ಕೂಡಾ ಕಾಣಲು ಸಿಗದು, ಅಷ್ಟೊಂದು ಶ್ರದ್ಧೆ ಬರವಣಿಗೆಯ ಮೇಲೆ.

 

ಈ ಎಲ್ಲಾ ಕಾರಣಗಳಿಂದಾಗಿ, ಚಕ್ರತಿರ್ಥರು ಇವತ್ತು ಸಾವಿರಾರು ಫಾಲೋವರ್’ಗಳನ್ನು ಸಂಪಾದಿಸಿಕೊಂಡಿದ್ದಾರೆ. ಕಳೆದ ವರ್ಷ ಭಗವಾನ್ ಎನ್ನುವ ಬೌದ್ಧಿಕ ದಾರಿದ್ರ್ಯವುಳ್ಳ ವ್ಯಕ್ತಿಗೆ ಸಾಹಿತ್ಯ ಅಕಾಡೆಮಿಯು ಪ್ರಶಸ್ತಿಯನ್ನು ಕೊಟ್ಟಾಗ ಅದನ್ನು ಮೊದಲು ವಿರೋಧಿಸಿದ್ದು ರೋಹಿತ್. ಯಾವ ಬಿಜೆಪಿಯೂ ಬರಲಿಲ್ಲ, ಯಾವ ಹಿಂದುತ್ವವಾದಿಯೂ ಇರಲಿಲ್ಲ. ಇದ್ಯಾವುದರ ಹಂಗಿಗೂ ಒಳಪಡದ ರೋಹಿತ್, ಅದೇನೋ ಹುಚ್ಚು ಧೈರ್ಯ ಮಾಡಿ ಭಗವಾನ್’ಗೆ ಪ್ರಶಸ್ತಿ ನೀಡುವುದರ ವಿರುದ್ಧವಾಗಿ ಆನ್’ಲೈನ್ ಪೆಟಿಶನ್’ಗೆ ಕರೆ ಕೊಟ್ಟರು. ನೋಡ ನೋಡುತ್ತಲೇ, ನಮ್ಮೆಲ್ಲರ ನಿರೀಕ್ಷೆಗಳನ್ನು ಮೀರಿ, ಮೂರೇ ಮೂರು ದಿನದಲ್ಲಿ ಹನ್ನೆರಡು ಸಾವಿರಕ್ಕೂ ಅಧಿಕ ಜನ ಪೆಟಿಶನ್’ಗೆ ಸಹಿ ಮಾಡಿದ್ದರು. ರಾಜಕೀಯ ಹಿನ್ನೆಲೆಯಿರದ, ಹಣ ಬಲವಿಲ್ಲದ ಸಾಮಾನ್ಯ ಬರಹಗಾರನೊಬ್ಬ ನೀಡಿದ ಕರೆಗೆ ಜನ ಈ ಪರಿ ಸ್ಪಂದಿಸುತ್ತಾರೆಂದರೆ  ಆತನ ಬರಹಗಳು ಎಷ್ಟರ ಮಟ್ಟಿಗೆ ನಾಟಿರಬೇಡ? ನಮ್ಮ ದುರಾದೃಷ್ಟಕ್ಕೆ ಚಕ್ರತೀರ್ಥರಿಗೆ ‘ಅರೆ ಬೆಂದವ’  ಎನ್ನುವ ಪಟ್ಟ ಕಟ್ಟಿ, ತಿಳಿಗೇಡಿಗೆ ಪ್ರಶಸ್ತಿ ನೀಡಿಯೇ ತೀರಿತು ಸಾಹಿತ್ಯ ಅಕಾಡೆಮಿ. ಆದರೆ, ಅಕಾಡೆಮಿಯ ಮಾನ ಮರ್ಯಾದಿ ಉಳಿಸುವ ಸಲುವಾಗಿ, ಹಿಂದೆ ಪ್ರಶಸ್ತಿ ಪಡೆದ ಮಹನೀಯರುಗಳ ಗೌರವವನ್ನು ಎತ್ತಿ ಹಿಡಿಯುವ ಸಲುವಾಗಿ ಹನ್ನೆರಡು ಸಾವಿರ ಜನರ ಆಕ್ರೋಶವನ್ನು ಕ್ರೋಢೀಕರಿಸಿದ್ದು ಸಣ್ಣ ಮಾತಾ? ಜನರ ಸ್ಮೃತಿ ಪಟಲದಿಂದ ಹೀಗೆ ಬಂದು ಹಾಗೆ ಹೋಗಲಿದ್ದ ವಿಷಯವನ್ನು ರಾಜ್ಯಾದ್ಯಂತ ವೈರಲ್ ಸುದ್ದಿಯಾಗುವಂತೆ ಮಾಡಿದ್ದು ಸಣ್ಣ ಮಾತಾ? ಭಗವಾನನಂತವನ ನಿದ್ದೆಗೆಡಿದ್ದು ಮಾತ್ರವಲ್ಲದೆ, ನಮ್ಮ ಸರಕಾರವಿದೆ ಎಂಬ ಮಾತ್ರಕ್ಕೆ  ನೆಲದಲ್ಲಿ ನಿಲ್ಲಲಾರದೆ ಸದಾ ಹಾರಾಡುತ್ತಿರುವ ಲದ್ದಿ ಜೀವಿಗಳಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ದು ಸಣ್ಣ ಮಾತಾ?  ಅಲ್ಲವೇ ಅಲ್ಲ.

 

ಬರವಣಿಗೆಯಲ್ಲಿ ಬೆಂಕಿಯಂತಾಡುವ ಚಕ್ರತೀರ್ಥರ ವ್ಯಕ್ತಿತ್ವ ಎಂತಾದ್ದು ಎನ್ನುವ ಕುತೂಹಲ ಹಲವರಲ್ಲಿರಬಹುದು. ಅವರನ್ನು ಒಮ್ಮೆ ಭೇಟಿ ಮಾಡಿರುವ ನನಗೆ ಅನಿಸಿದ್ದು ಹೀಗೆ, ಹಲಸಿನ ಹಣ್ಣು ಗೊತ್ತಲ್ಲ, ಹೊರಗಿನಿಂದ ಒರಟು ಒಳಗಿನಿಂದ ಸಿಹಿ..   ಚಕ್ರತೀರ್ಥರದ್ದು ಹಲಸಿನ ಹಣ್ಣಿಗೆ ವಿರುದ್ಧವಾದ ಕ್ಯಾರೆಕ್ಟರ್. ಒಳಗಿನಿಂದ ಒರಟು, ಹೊರಗಿನಿಂದ ಸಿಹಿ ಎನ್ನುವ ಹಾಗೆ, ಬರವಣಿಗೆಯಲ್ಲಿ ಮಾತ್ರ ಒರಟು(aggressiveness)  ವ್ಯಕ್ತಿತ್ವದಲ್ಲಿ  ಸಿಹಿ. ತುಂಬಾ ಸರಳ.

 

ಅಂದ ಹಾಗೆ, ನಿಮಗೆಲ್ಲರಿಗೂ ತಿಳಿದಿರುವಂತೆ,  ರೋಹಿತ್ ಚಕ್ರತೀರ್ಥರು ಕೆಲವು ಸಮಯಗಳಿಂದ ಕಾವು ಕೊಟ್ಟು ಬೆಳೆಸಿದ ಮೊಟ್ಟೆಗಳು ನಾಡಿದ್ದು ಆಚೆಗೆ ಬರುತ್ತಿವೆ. ಒಂದೇ ಭಾರಿಗೆ ಹೊರ ಬರುವ ಹಾವಿನ  ಮೊಟ್ಟೆಗಳಂತೆ, ಒಂದೇ ಭಾರಿಗೆ ಹಲವಾರು ಪುಸ್ತಕಗಳು ಹೊರ ಬರುತ್ತಿರುವುದನ್ನು ನಾನು ಕೇಳುತ್ತಿರುವುದು ಇದೇ ಮೊದಲು. ಇದರ ಕುರಿತಾದ ಗಾಸಿಪ್’ಗಳು, ಟ್ರೋಲ್’ಗಳು ಈಗಾಗಲೇ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ.  ಸಾಧಾರಣವಾಗಿ ಎಸ್. ಎಲ್ ಭೈರಪ್ಪರಂತಹ ಮಹಾನ್ ಲೇಖಕರ ಕೃತಿಗಳು ಬಿಡುಗಡೆಗೆ ಮುನ್ನವೇ ನಮ್ಮಲ್ಲಿ ಸಂಚಲನವನ್ನುಂಟು ಮಾಡುತ್ತವೆ. ಕಾತುರತೆಯನ್ನು ಕಾಯ್ದಿರಿಸಿಕೊಳ್ಳುತ್ತವೆ.  ಅದೇ ತೆರನಾದ ಕಾತುರತೆಯನ್ನು ನಾಡಿದ್ದು  ಬಿಡುಗಡೆಯಾಗಲಿರುವ ಚಕ್ರತೀರ್ಥರ ಪುಸ್ತಕಗಳು ಕಾಯ್ದುಕೊಂಡಿವೆ. ಚಕ್ರತೀರ್ಥರನ್ನು ಭೈರಪ್ಪರೊಂದಿಗೆ ಹೋಲಿಸುವುದು ಅತಿಶಯೋಕ್ತಿಯಾದರೂ,  ಇವರೂ ಸಹ ಮುಂದೊಂದು ದಿನ ಭೈರಪ್ಪರವರು ಏರಿದ ಮಟ್ಟವನ್ನು ಏರುವುದರಲ್ಲಿ ಯಾವ ಅನುಮಾನವೂ ಇಲ್ಲ.  ನಾನು ಕಂಡಿರುವ ಅತ್ಯುತ್ತಮ ಯುವ ಬರಹಗಾರರಾಗಿರುವ ಚಕ್ರತೀರ್ಥರು ಆ ಮಟ್ಟಕ್ಕೆ ಏರಬೇಕೆಂಬುದು ನನ್ನ ಆಸೆಯೂ ಹೌದು. ನೀವೂ ಸಹ ಅದನ್ನು ಬಯಸಲಾರಿರಾ?

ಶುಭವಾಗಲಿ ಚಕ್ರತೀರ್ಥರಿಗೆ…

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!