ಅಂಕಣ

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೦
____________________________________

ಏನು ಪ್ರಪಂಚವಿದು | ಏನು ಧಾಳಾಧಾಳಿ! |
ಏನದ್ಭುತಾಪಾರಶಕ್ತಿ ನಿರ್ಘಾತ! ||
ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? |
ಏನರ್ಥವಿದಕೆಲ್ಲ ? ಮಂಕುತಿಮ್ಮ ||

ಪ್ರಪಂಚವೆನ್ನುವುದು ಅಸ್ತಿತ್ವಕ್ಕೆ ಬಂದದ್ದೇನೊ ಆಯಿತು, ಜೀವಿಗಳ ಸೃಷ್ಟಿಯಾಗಿ ಕಾಲ ದೇಶಗಳ ಕೋಶದಲ್ಲಿ ಭೂಗೋಳದ ವಿಸ್ತಾರದಲ್ಲಿ ಹರಡಿಕೊಂಡಿದ್ದು ಆಯ್ತು. ಇನ್ನು ಮೇಲಾದರೂ ಎಲ್ಲಾ ಸುಖಕರವಾಗಿ, ಸುಗಮವಾಗಿ ನಡೆದುಕೊಂಡು ಹೋಗಬಹುದಲ್ಲಾ ? ಎಂದುಕೊಳ್ಳುವ ಕವಿಮನಕ್ಕೆ ಕಾಣಿಸುವುದು ಬರಿ ನಿರಾಶೆಯೆ. ಪ್ರಪಂಚದ ಎಲ್ಲರು ತಮ್ಮ ತಮ್ಮ ಸ್ವಾರ್ಥ, ಹವಣಿಕೆ, ಹಿತಾಸಕ್ತಿಗಳ ಹಿಂದೆ ಬಿದ್ದು ಪರಸ್ಪರ ಪ್ರತ್ಯಕ್ಷ ಅಥವಾ ಪರೋಕ್ಷ ಹೋರಾಟಕ್ಕಿಳಿದು, ಪರಸ್ಪರ ಧಾಳಿ – ಪ್ರತಿಧಾಳಿಯನ್ನು ಮಾಡಿಕೊಂಡು ಕದನಕ್ಕಿಳಿದ ಪರಿ ಕವಿಯನ್ನು ಕಾಡುತ್ತದೆ. ಅದು ಸಾಲದೆನ್ನುವಂತೆ ದಿಗ್ಭ್ರಮೆಯಾಗಿಸುವ ಮತ್ತೊಂದು ಅಂಶವೆಂದರೆ ಆ ಕದನ, ಹೋರಾಟಗಳಲ್ಲಿ ಬಳಕೆಯಾಗಿ ವ್ಯರ್ಥವಾಗಿ ವ್ಯಯವಾಗುತ್ತಿರುವ ಅಪಾರ ಶಕ್ತಿ ಸಂಚಯ. ಹುಟ್ಟಿ ಸಾಯುವ ಮನುಜ ಜೀವಿತದಲ್ಲಿ, ತನ್ನಿರುವಿನ ಮೂರು ದಿನಗಳಲ್ಲಿ ಇಷ್ಟೆಲ್ಲಾ ಹೊಡೆದಾಟ, ಹೋರಾಟಕ್ಕಿಳಿದು ಒದ್ದಾಡುವ ಮಾನವನ ನಿಜವಾದ ಗುರಿಯಾದರೂ ಏನು ? ಹೀಗೆ ಮಾಡುತ್ತಿರುವುದಕ್ಕೆಲ್ಲ ಏನಾದರು ಬೆಲೆ, ಮೌಲ್ಯಗಳಿವೆಯೆ ? ಇದ್ದಕ್ಕೆಲ್ಲ ಕೊನೆಯೆನ್ನುವುದು ಇದೆಯೆ? ಮನುಜನಿಗೆ ತನ್ನ ನಿಜವಾದ ಉದ್ದೇಶ, ಗುರಿಗಳ ಮನನವಾಗಿ, ತನ್ಮೂಲಕ ಅದರ ಮೌಲ್ಯದ ಪರಿಜ್ಞಾನವೂ ಅರಿವಾಗಿ, ಕೊನೆಯ ಮುಕ್ತಾಯದಲ್ಲಿ ಸಾರ್ಥಕ ಭಾವವನ್ನು ಕಾಣುವ ದಿನಗಳು ಬರುವುದುಂಟೆ ? ಅದೊಂದು ಗೊತ್ತಿರದೆ ಮಾಡುತ್ತಿರುವ ಈ ಹುನ್ನಾರಗಳಿಗೆಲ್ಲಾ ಏನಾದರು ಅರ್ಥವಿದೆಯೆ ಎಂದು ಕೇಳುತ್ತದೆ ಕವಿಯ ಮನಸು. ಇದು ಲೌಕಿಕ ಸ್ತರದ ವಾಸ್ತವ ಸ್ಥಿತಿಗೆ ಹೊಂದುವ ನೇರ ವಿವರಣೆ.

ಇದನ್ನೆ ಕೊಂಚ ಎತ್ತರದ ತಾತ್ವಿಕ ಸ್ತರದಿಂದ ನೋಡಿದರೆ ಮತ್ತಷ್ಟು ಅರ್ಥವ್ಯಾಪ್ತಿಗಳು ಹೊರಡುತ್ತವೆ. ಮೊದಲೆರಡು ಸಾಲುಗಳನ್ನು ಲೌಕಿಕ ಪ್ರಪಂಚಕ್ಕೆ ಹೋಲಿಸಿದಷ್ಟೆ ಸಹಜವಾಗಿ ವಿಶ್ವಚಿತ್ತದಲ್ಲಿ, ವ್ಯೋಮ ಗರ್ಭದಲ್ಲಿ ನಡೆಯುವ ಲಕ್ಷಾಂತರ ನಿರಂತರ ಸ್ಪಂದನ, ತಿಕ್ಕಾಟಗಳಿಗೂ ಸಮೀಕರಿಸಬಹುದು. ಅಲ್ಲಿ ನಡೆಯುವ ಧಾಳಿಗಳಾಗಲಿ, ಶಕ್ತಿ ಪ್ರತಿಶಕ್ತಿಗಳ ವಿನಿಮಯವಾಗಲಿ, ಅದ್ಭುತ ಶಕ್ತಿಪಾತದ, ವ್ಯಯಾಪವ್ಯಯದ ಹೊಡೆತಗಳ ಭೀಕರತೆಯಾಗಲಿ ಲೌಕಿಕದಳತೆಯಲ್ಲಿ ವಿವರಿಸಲೇ ಆಗದಷ್ಟು ಅಗಾಧ ಗಾತ್ರದ್ದು. ಆದರೂ ಅವೆಲ್ಲಾ ಯಾವುದೊ ನಿಯಂತ್ರಿತ ವ್ಯವಸ್ಥೆಯಲ್ಲಿ ಬಂಧಿಯಾದ ಶಿಸ್ತಿನ ಸಿಪಾಯಿಗಳಂತೆ ತಮ್ಮ ಇರುವಿಕೆಯನ್ನು ನಿಭಾಯಿಸಿಕೊಂಡು ಹೋಗುತ್ತಿವೆ. ಏನೊ ಗಹನ ಗುರಿಯಿರುವಂತೆ, ಬೆಲೆಯಿರುವಂತೆ, ಗೊತ್ತಿರುವ ನಿಶ್ಚಿತ ಅಂತ್ಯವು ಇರುವಂತೆ ಕಾರ್ಯ ನಿರ್ವಹಿಸುತ್ತಿವೆ. ಅಂತಹ ಅದ್ಭುತಗಳ ಗಾತ್ರ ಆಕಾರಕ್ಕೆ ಹೋಲಿಸಿದರೆ ಮಾನವ ಲೆಕ್ಕಕ್ಕೆ ಬಾರದಷ್ಟು ನಗಣ್ಯ. ಆದರೇಕೊ ಅವನ ಬದುಕಿನಲ್ಲಿ ಯಾವ ಗೊತ್ತು, ಗುರಿ, ಮೌಲ್ಯಗಳಿರುವಂತೆ ಕಾಣುತ್ತಿಲ್ಲವಲ್ಲ ? ಆ ಸಮಷ್ಟಿಯಿಂದ ಅದೇ ತತ್ವ, ಸಿದ್ದಾಂತ, ನಿಖರತೆಗಳು ಭಟ್ಟಿ ಇಳಿದು ಮಾನವ ಜೀವನದ ಗತಿ ನಿರ್ದೇಶಿಸಿದಂತೆ ಕಾಣುವುದಿಲ್ಲವಲ್ಲ ? ಯಾಕೀ ವಿಭಿನ್ನತೆ ಒಂದೆ ಸೃಷ್ಟಿಯೆರಡು ಸಂತಾನಗಳಲ್ಲಿ ? ಏನಿದರ ಅರ್ಥ ? ಎಂದು ಕೇಳುವ ಕವಿ ಮನ ವಿಭಿನ್ನತೆಯನ್ನು ಅಚ್ಚರಿಯಿಂದ ನೋಡುವಷ್ಟೆ ಸಹಜವಾಗಿ, ಅದರ ಫಲಿತ ವ್ಯತ್ಯಾಸಗಳನ್ನು ಗಮನಿಸಿ ನಡೆಸುವ ಜಿಜ್ಞಾಸೆ ಇಲ್ಲಿನ ತಿರುಳು.

– ನಾಗೇಶ ಮೈಸೂರು

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೧
_________________________________

ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ |
ಮೃತ್ಯು ಕುಣಿಯುತಲಿಹನು ಕೇಕೆ ಹಾಕುತಲಿ ||
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ |
ಎತ್ತಲಿದಕೆಲ್ಲ ಕಡೆ? ಮಂಕುತಿಮ್ಮ ||

ಇದ್ದಕ್ಕಿದ್ದಂತೆ ಜಿಗ್ಗನೆದ್ದು ಎಲ್ಲೆಂದರಲ್ಲಿ ಹರಡುವ ಸಾಂಕ್ರಾಮಿಕ ರೂಪದ ರೋಗರುಜಿನಗಳು, ಯುದ್ಧಾವಘಡಘಳಿಂದ ಜರ್ಝರಿತವಾಗಿದ್ದ ಕಾಲಘಟ್ಟದಲ್ಲಿ ದುಗುಡ, ತಳಮಳದಿಂದ ಕೂಡಿದ ಕವಿಯ ಮನದಲ್ಲಿ ಮೂಡುವ ಸಂಕಟಗಳ ಭಾರದ ಆಲಾಪ ಈ ಸಾಲುಗಳಲ್ಲಿ ಕಾಣಿಸಿಕೊಂಡಿವೆ. ಸಂಭವಿಸುತ್ತಿರಬಹುದಾದ ಅನಾಹುತ ಸ್ಥಳೀಯವಾಗದೆ ಜಾಗತಿಕ ಸ್ವರೂಪದ್ದಾದ ಕಾರಣ ಇಡೀ ಭೂಮಿಯನ್ನೆ ಬಂದಪ್ಪಳಿಸಿದೆಯೊಂದು ದುರ್ದೈವ – ಎಂದು ಅಲವತ್ತುಗೊಳ್ಳುತ್ತದೆ ಕವಿ ಮನ. ಬಂದು ಮುತ್ತಿದ ದುರ್ದೈವದ ದೆಸೆಯಿಂದ ಎಲ್ಲೆಡೆಯು ಕೇಕೆ ಹಾಕುತ್ತ, ಹಾಹಾಕಾರದೊಡನೆ ಕಾಣಿಸಿಕೊಳ್ಳುತ್ತಿರುವ ಮೃತ್ಯುವಿನ ಅಟ್ಟಹಾಸಕ್ಕು ಒದ್ದಾಡಿಕೊಂಡೆ, ವಿಲಪಿಸುತ್ತದೆ ಕವಿ ಹೃದಯ.

ಆ ದಿನ ಧರ್ಮಕ್ಕೆ ಸಹಜವಾಗಿ ಎಲ್ಲೆಡೆಯು ಬರಿ ಅವುಗಳದೆ ಸುದ್ಧಿಯಾಗಿ, ಎಲ್ಲೇ ಹೋದರು, ಏನೆ ಮಾಡಲ್ಹೊರಟರು ಅದರ ಪ್ರಭಾವವೆ ಎಲ್ಲೆಡೆ ತನ್ನ ಛಾಪು ಒತ್ತುತ್ತ ಅದು ಬಿಟ್ಟರೆ ಬೇರೆ ವಿಷಯವೆ ಇಲ್ಲವೆನ್ನುವಂತಾಗಿಸಿಬಿಟ್ಟಿದೆ; ಅದು ಪ್ರಭಾವ ಬೀರದಿರುವ ಯಾವ ತಾಣವೂ, ಯಾವ ಸಂಗತಿಯೂ ಕಾಣದಾಗಿ, ಇದ್ದಕ್ಕೆಲ್ಲ ಕೊನೆಯಿದೆಯೆ ಎಂದಾದರು? ಇದರಿಂದೆಲ್ಲ ಬಿಡುಗಡೆ, ಮುಕ್ತಿ ಸಿಗಲಿದೆಯೆ ? ಎಂದು ಖೇದಗೊಳ್ಳುತ್ತದೆ. ತನ್ನೆಲ್ಲ ಆಧ್ಯಾತ್ಮಿಕ ಮತ್ತು ಮಾಮೂಲಿ ದೈನಂದಿನ ಪ್ರಭಾವಲಯದ ಪರಿಧಿಯಲ್ಲಿ ವಿಹರಿಸುತ್ತಿದ್ದ ಕವಿಮನ ತನ್ನ ಸುತ್ತಲಿನ ಅಪರೂಪದ ಕಠೋರ ವಾಸ್ತವಕ್ಕೆ ಸ್ಪಂದಿಸುವ ಬಗೆಯನ್ನಿಲ್ಲಿ ಕಾಣಬಹುದು.

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!