ಅಂಕಣ

ಇದು ಎಂದೆಂದಿಗೂ ಬಾಡದ ಮಲ್ಲಿಗೆಯೇ…

ಯಾವುದೇ ವಸ್ತುವಾಗಲಿ, ವಿಷಯವಾಗಲಿ ,ಎಷ್ಟು  ತಿಳಿದುಕೊಂಡಿದ್ದೇವೆ ಅನ್ನೋದು  ಮಾತ್ರ  ಮುಖ್ಯವಲ್ಲ ಅದನ್ನು ಹೇಗೆ ಪ್ರಸ್ತುತ ಪಡಿಸುತ್ತೇವೆ ಅನ್ನುವುದರ ಮೇಲೆ ಕೌಶಲ್ಯ ವ್ಯಕ್ತವಾಗುತ್ತದೆ. ಈ  ವಿಷಯದಲ್ಲಿ ರೋಹಿತ್’ರದು ಅದ್ಭುತ ಪ್ರತಿಭೆ, ಕ್ಲಿಷ್ಟ ವಿಷಯವನ್ನು ಆಕರ್ಷಕ  ಅಡಿ ಬರಹಗಳ ಮೂಲಕ ಸೆಳೆದು ಸರಳವಾಗಿ ಅರ್ಥ ಮಾಡಿಸುತ್ತಾರೆ. ಈ ಮನುಷ್ಯನಿಗೆ ಗೊತ್ತಿರದ ವಿಷಯಗಳೇ ಇಲ್ಲವೇನೋ ಎಂಬ ಕೌತುಕ ನನ್ನನ್ನು  ಸದಾ  ಕಾಡಿದೆ. ಅದಕ್ಕಿಂತಲೂ  ಅಚ್ಚರಿ, ಹಾಗೂ ಅಸೂಯೆ ಮೂಡಿಸುವುದು ಅವರು ಪ್ರಸ್ತುತ ಪಡಿಸುವ ಶೈಲಿ.

ಮಲ್ಲಿಗೆಯನ್ನು ಇಷ್ಟಪಡದವರಾರು? ಶುಭ್ರ ನಗೆಯ ನಿರಾಡಂಬರ ಈ ಚೆಲುವೆ ಎಲ್ಲರಿಗೂ  ಪ್ರಿಯೆ. ಇಂತಹ ಅನೇಕ ಮಲ್ಲಿಗೆ ಸುಂದರವಾದ ಮಾಲೆಯೇ ರೋಹಿತರ “ಎಂದೆಂದೂ ಬಾಡದ ಮಲ್ಲಿಗೆ “ ಪುಸ್ತಕ. ಷೇಕ್ಸ್ಪಿಯರ್’ನಿಂದ ಹಿಡಿದು ಕನ್ನಡ ಅನಂತ ಮೂರ್ತಿಗಳಗಳ ವರೆಗೆ ಅನೇಕರು ನಮ್ಮ ಜೊತೆಗಾರರಾಗಿ ಮಲ್ಲಿಗೆಯ ಕಂಪು ಬೀರುತ್ತಾ ನಮ್ಮ  ಮೈ ಮನ ಆವರಿಸುತ್ತಾರೆ.

ಮೊದಲ ಲೇಖನ  ಆರಂಭವಾಗೋದು ಗ್ರಾಚೋನ ಪರಿಚಯದಿಂದ. ಅವನ ಬದುಕಿನ ಸಾಧನೆಗಳನ್ನು  ಪರಿಚಯಿಸುತ್ತಾ “ಹಾಸ್ಯವೆಂದರೆ ಜೋಕರ್ ಎಂದೋ, ಕೋಡಂಗಿಯೆಂದೋ ಪರಿಗಣಿಸುವ, ಎರಡನೇ ದರ್ಜೆಯ ಟ್ರೀಟ್ಮೆಂಟ್ ಕೊಡುತ್ತಿದ್ದ ಕಾಲದಲ್ಲಿ ಅದಕ್ಕೂ  ರಾಜಮರ್ಯಾದೆ ಸಿಗುವ ಹಾಗೆ ಮಾಡಿದ ಎಂದು ನಮ್ಮಲಿ  ಅಭಿಮಾನ ಮೂಡಿಸುತ್ತಲೇ, ಅವನು ರಾಜ್ ಕುಮಾರ್, ಬಾಲಣ್ಣ, ನರಸಿಂಹರಾಜುರವರಿಗೆ ಸಮಾನವಾಗಿ ನಿಲ್ಲ ಬಲ್ಲವನು ಎನ್ನುತ್ತಲೇ ಹಾಲಿವುಡ್’ನ ಮಾಯಾಲೋಕದಿಂದ ನಮ್ಮನ್ನು ಕನ್ನಡ ಕಸ್ತೂರಿಯ ಮಲ್ಲಿಗೆಯ ಚಪ್ಪರಕ್ಕೆ ಕರೆ ತಂದು ಬಿಡುತ್ತಾರೆ.

ವಿಲಿಯಂ ಬಕ್, ಜಾನ್ ಹಿಗ್ಗಿನ್ಸ್ ವಿವರವಾಗಿ ತಿಳಿಸುತ್ತಾ, ಅವರ ಸಾಧನೆಗಳ ಹರಿವನ್ನು ಬಿಚ್ಚಿಡುವಾಗ  ನಮ್ಮ ಕಣ್ಣುಗಳಲ್ಲಿ ಬೆರುಗನ್ನು ತುಂಬುತ್ತಿರುವಾಗಲೇ ಅವರ ಸಾಧನೆಗೆ ಮೂಲ ಬೇರಾದ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿ ಹೆಮ್ಮೆಗೊಳ್ಳುವಂತೆ ಮಾಡಿ ಬಿಡುತ್ತಾರೆ. ರೋಹಿತರ ಪ್ರತಿಭೆ, ಭಾಷೆಯ ಮೇಲಿನ ಅವರ ಹಿಡಿತ ನಮಗೆ ದಕ್ಕೋದು ಅವರು ಬಳಸುವ ಉಪಮೆಗಳ ಮೂಲಕ. ಜಾನ್ ಹಿಗ್ಗಿನ್ಸ್ ಅವರ ಅಕಾಲಿಕ ಮರಣದಿಂದ ಸ್ತಬ್ದವಾಗುವ ಸಂಗೀತ ಪ್ರೇಮಿಗಳ ಸ್ಥಿತಿಯನ್ನು ವರ್ಣಿಸುವ ಈ  ಸಾಲು  ಓದಿ. “ತಲ್ಲೀನತೆಯ ಉತ್ತುಂಗದಲ್ಲಿ ಥಟ್ಟನೆ ತಂತಿ ಕಡಿದಾಗ ಹುಟ್ಟುವ ಮೌನ ಅಸಹನೀಯವಾಗಿರುತ್ತದೆ” ಇದನ್ನೋದಿದ ಮನಗಳಲ್ಲೂ ಮೌನ ತಂತಾನೇ ಹೆಪ್ಪುಗಟ್ಟದಿದ್ದರೆ ಕೇಳಿ.

ಇಡೀ ಪುಸ್ತಕದಲ್ಲಿ  ಇಂಥಹ ಹರಳುಗಟ್ಟಿದ ಸಾಲುಗಳು ನಮ್ಮನ್ನು ಆವರಿಸಿಕೊಳ್ಳುತ್ತಾ, ಕಾಡುತ್ತಾ  ಜೊತೆಯಾಗುತ್ತವೆ. ಅಂತಹುದೇ ಇನ್ನೊಂದು  ಸಾಲು  ನೋಡಿ “ ಆಚಾರ್ಯ ಪಾವೆಂ , ಪದಶರಧಿಯ ನಾವೆಂ” ಇದಕ್ಕಿಂತ ವ್ಯಕ್ತಿತ್ವ ಪರಿಚಯಿಸುವ, ಗೌರವ ಸಲ್ಲಿಸುವ ಮಾತುಗಳು ಬೇಕೇ? ಕೆಲವೇ ಕೆಲವು ಪದಗಳಲ್ಲಿ ಅಪಾರ ಅರ್ಥವನ್ನು ಕಣ್ಣೆದೆರು ಕಟ್ಟಿ ಕೊಡುವ ಅವರ ಭಾಷಾ ಪ್ರಾವಿಣ್ಯಕ್ಕೆ ಮನಸ್ಸು ಮೂಕವಿಸ್ಮಿತಗೊಂಡಿದೆ. ಬೇಂದ್ರೆಯವರಂತಹ ಹಿಮಾಲಯ ಪರ್ವತವನ್ನು ಪರಿಚಯಿಸುವ ಪರಿ ನೋಡಿ… ಅವರ ಬದುಕಿನ ಕೆಲವು ಅಮೂಲ್ಯ ಘಟನೆಗಳನ್ನು ನಮ್ಮೆದರು ಮಲ್ಲಿಗೆಯ ದಂಡೆಯಂತೆ ಒಪ್ಪವಾಗಿ ಕಟ್ಟಿ  ನಮ್ಮೊಳಗೇ ಅವರ ಘಮವನ್ನು ಇಳಿಸುತ್ತಾ ತನ್ಮೂಲಕ ಆಪ್ತವಾಗಿಸುತ್ತಾ, ಛೆ ಅವರನ್ನು  ನೋಡುವ ಭಾಗ್ಯ ಇಲ್ಲವಾಯಿತೇ ಎಂಬ ವಿಷಾದ ಕಾಡುವ ಹಾಗೆ ಮಾಡಿ ಬಿಡುತ್ತಾರೆ. ಹೀಗಲ್ಲದೆ ಇನ್ನ್ಹೇಗೋ ಬರದಿದ್ದರೆ ಬಹುಶ ಕ್ಲಿಷೆಯೆನಿಸುತ್ತಿತ್ತೇನೋ . ಹಾರುವ ಹಕ್ಕಿಯನ್ನು ಬರಿಗಣ್ಣಿನಲ್ಲಿ ಕಾಣುವುದಾದರೂ ಹೇಗೆ?

ಇವರು ವ್ಯಕ್ತಿತ್ವವನ್ನು ಕಟ್ಟಿಕೊಡುವ ಪರಿಯೇ ಅನನ್ಯ.  “ಕರ್ಪೂರ ತೀರಿದರೂ ಪರಿಮಳ ಅಳಿಯದಲ್ಲ” ಎನ್ನುವ ಒಂದ್ ಸಾಲು ಸಾಕು ತಳುಕಿನ ಶಾಮರಾಯರ ಬದುಕನ್ನು ಕಾಪಿಟ್ಟುಕೊಳ್ಳುವುದಕ್ಕೆ. ಕಾರಂತರನ್ನು ಎಲ್ಲರೂ ಕಡಲ ತೀರದ ಭಾರ್ಗವರೆಂದು ಕರೆದರೆ ಇವರು ಏಕಾಏಕಿ ಅವರನ್ನು ನದಿಗೆ ಹೋಲಿಸಿ ಯಾಕ್ಹಿಗೆಎಂದು ಸಂಶಯ ಪಡುವಾಗಲೇ “ ಅವರನ್ನು ಸಮುದ್ರ ಎನ್ನುವುದಕ್ಕಿಂತ ಎಲ್ಲ ಬೆಟ್ಟ ಕಾನನ ಬಯಲುಗಳಲ್ಲಿ ದಾರಿ ಮಾಡಿಕೊಳ್ಳುತ್ತಾ ಹರಿವ ನದಿಗೆ ಹೊಲಿಸಬಹುದೇನೋ” ಎಂದು ಅಚ್ಚರಿ ಹುಟ್ಟಿಸುತ್ತಾರೆ.  ಸದಾ ಜೀವಂತಿಕೆ ತುಂಬಿ ಹರಿಯುತ್ತಾ ಉಳಿದವರಿಗೆ ಜೀವ ಕೊಡುವ ನದಿ, ಕಾರಂತರು ಒಮ್ಮೆ ಕಣ್ಮುಂದೆ ತಂದುಕೊಳ್ಳಿ…

ಇನ್ನು ಗುಲ್ವಾಡಿಯವರ  ಬಗ್ಗೆ ಇವರ ಮಾತುಗಳನ್ನು ಕೇಳಿ: ಓದುಗರನ್ನು ತಿದ್ದುತ್ತಾ, ಲೇಖಕರನ್ನು ಬೆಳೆಸುತ್ತಾ, ಪತ್ರಿಕೆಯ ಸರ್ವಾಂಗಗಳನ್ನು ದುಡಿಸಿಕೊಳ್ಳುವ ಹೃದಯವಂತ ಸಂಪಾದಕ ಸಿಗುವುದು ಕಲೆಯಿಲ್ಲದ ಗುಲಗುಂಜಿಯಷ್ಟೇ ದುರ್ಲಭ” ಇದು ಅವರ ಬಗ್ಗೆ ನಮ್ಮಲ್ಲಿ ಅಭಿಮಾನ ಮೂಡಿಸುತ್ತಲೇ ಇಂದಿನ ಸಂಪಾದಕರುಗಳ ಬಗ್ಗೆ ಆಲೋಚಿಸುವ ಹಾಗೂ ಮಾಡುತ್ತದೆ.  ನಿಸಾರ್, ಅಡಿಗರು, ಚೊಕ್ಕಾಡಿ ಅವರುಗಳ ಬಗ್ಗೆ ಮಾತನಾಡುತ್ತಾ ಅಲ್ಲಲ್ಲಿ ಕವನಗಳನ್ನು ಉದಾಹರಿಸುತ್ತ ಕವನ ಓದುವುದು ಹೇಗೆ ಎಂದು ಮೌನವಾಗಿ ಅರ್ಥ ಮಾಡಿಸುತ್ತಾ ನಮ್ಮ  ಅರಿವಿನ ಕಿಟಕಿಗಳನ್ನು ಸದ್ದಿಲ್ಲದೇ ತೆರೆಯುವ ಕಲೆ ಅದ್ಭುತ.

ಸಾಹಿತ್ಯ, ಕವಿತೆಗಳ ಬಗ್ಗೆ ತಿಳಿಸುತ್ತಲೇ ಅದರ ಗುಂಗಿನಲ್ಲಿ ತೇಲಿ ಹೋಗುವಾಗಲೇ ದುತ್ತೆಂದು ಜಿಟಿನಾ ಅವರನ್ನು ಪರಿಚಯಿಸಿ ಗಣಿತದ  ಬಗೆಗಿನ ನಮ್ಮ ಕಲ್ಪನೆಯನ್ನು ಕಬ್ಬಿಣದ ಕಡಲೆಯಿಂದ ಬರೀ ಕಡಲೆಗೆ ವರ್ಗಾಯಿಸಿ ಮೆಲ್ಲುವ ಹಾಗೆ ಮಾಡುವ ಚಾಕಚಕ್ಯತೆ ಇವರದ್ದು. ಇವರ ವಿಷಯ ವೈವಿಧ್ಯತೆ ಬೆರಗು ಹುಟ್ಟಿಸುವಂತದ್ದು. ಇಡಿ ಪುಸ್ತಕ ಕೇವಲ ವಿಷಯಗಳನಷ್ಟೇ ಹೇಳುವುದಿಲ್ಲ , ಅಲ್ಲಿ  ಉಲ್ಲೇಖಿಸಿರುವ ಪುಸ್ತಕಗಳ ಹೆಸರು ಓದಿನ ಹಸಿವಿರುವವರಿಗೆ  ಮೃಷ್ಟಾನ್ನ ಭೋಜನದ ಮೆನುವನ್ನೇ ಕಣ್ಣೆದೆರು ಇಡುತ್ತದೆ. ಆರಿಸಿಕೊಳ್ಳುವ ಆಯ್ಕೆ ನಮ್ಮದು.

ಈ ಪುಸ್ತಕ ಶುರುವಾಗೋದೇ ಗ್ರಾಚೋನಿಂದ. ಅಲ್ಲಿಂದ  ಕೊನೆಯವರೆಗೂ ಕಿರಿದೊಂದು ನಗು ನಮ್ಮ ಜೊತೆಗೂಡಿ ಪಯಣಿಸುತ್ತದೆ. ನದಿಯ ಹರಿವಿನಂತೆ ಹೊಸ ಹೊಸ ಲೋಕಗಳನ್ನು ಪರಿಚಯಿಸುತ್ತಾ , ನಮ್ಮನ್ನೂ ಒಂದಾಗಿಸುತ್ತಾ ರೋಹಿತ್ ಎಂಬ ಸಮುದ್ರದ ಮುಂದೆ ತಂದು ನಿಲ್ಲಿಸುತ್ತದೆ. ದಾರಿಯುದ್ದಕ್ಕೂ ಮಲ್ಲಿಗೆಯ ಘಮ ನಮ್ಮನು ಬಿಡದೆ ಆವರಿಸಿರುತ್ತದೆ. ಈ  ಪುಸ್ತಕದ ಬಗ್ಗೆ  ನನ್ನ ಅನಿಸಿಕೆ ಅವರದೇ ಆದ  ಸಾಲಿನಿಂದ ಮುಗಿಸುತ್ತಿದ್ದೇನೆ.

“ಅತ್ತರಿನ ಪರಿಮಳವನ್ನು ಬೊಗಸೆಯಲ್ಲಿ ಹಿಡಿಯಹೊದಷ್ಟೇ ಅಪರಿಪೂರ್ಣ,ಅಸಂಗತ.” ಇದು ಎಂದೆಂದಿಗೂ ಬಾಡದ ಮಲ್ಲಿಗೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Shobha Rao

Writer

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!