ಅಂಕಣ

ಮಾನವ ಹಕ್ಕುಗಳ ಆಯೋಗ: ಇದ್ದು ಸಾಧಿಸುತ್ತಿರುವುದಾದರೂ ಏನು!?

ಬಸುರಿ ಹೆಂಗಸು ತನಗಿಷ್ಟವಿಲ್ಲದ ಪಿಂಡವನ್ನು ಕೀಳಬೇಕಾದರೆ,ಇಲ್ಲವೇ ತಾಯಿಯೋರ್ವಳು ತನ್ನ ಕೈತುತ್ತು ತಿಂದು ಬೆಳೆಯುತ್ತಿರುವ ಮಗುವಿಗೆ ಹೊಡೆಯಬೇಕಾದರೆ, ಅಥವಾ ತಿದ್ದಿ ತೀಡುವ ಕೆಲಸದಲ್ಲಿ ಶಿಕ್ಷಕನೇನಾದರೂ ಒಂದೆರಡೇಟನ್ನು ವಿದ್ಯಾರ್ಥಿಗೆ ಬಿಗಿದರೆ, ಆವಾಗೆಲ್ಲಾ ನಮ್ಮ ಮುಂದೆ ಧುತ್ತೆಂದು ಪ್ರತ್ಯಕ್ಷವಾಗುವುದು, ಇನ್ನಿಲ್ಲದಂತೆ ಕಾಡುವುದು ಈ ಮಾನವ ಹಕ್ಕುಗಳೆಂಬ ಮಹಾಭೂತ! ಬದುಕುವ ಹಕ್ಕು ಈ ಭುವಿಯಲ್ಲಿರುವ ಮಾನವರೆಲ್ಲರಿಗೂ ಇದೆಯೆಂದೂ, ಇನ್ನೊಬ್ಬರಿಗೆ ತೊಂದರೆ ನೀಡುವ, ಇನ್ನೊಬ್ಬರ ಬದುಕನ್ನು ಕಸಿದುಕೊಳ್ಳುವ ಹಕ್ಕು ಅದ್ಯಾರಿಗೂ ಇಲ್ಲವೆಂದೂ  ಈ ಮಾನವ ಹಕ್ಕುಗಳ ಹೋರಾಟಗಾರರ ಬಲವಾದ ಪ್ರತಿಪಾದನೆ. ನಮ್ಮ ‘ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ’ ಕೂಡ ಕಾರ್ಯ ತತ್ಪರವಾಗಿರುವುದು ಇದೇ ನಿಟ್ಟಿನಲ್ಲಿ. ಹಾಗೆ ನೋಡಿದರೆ ಇದೊಂದು ಉತ್ತಮ ಪ್ರತಿಪಾದನೆಯೇ. ಅಂದರೆ ಪ್ರತೀ ಮಾನವ ಜೀವಿಗೂ ಅವರದ್ದೇ ಆದ ಜೀವನವೊಂದಿರುವಾಗ ಅದನ್ನುಇನ್ನೊಬ್ಬರು ಕಸಿದುಕೊಳ್ಳುವುದು ಸುತಾರಾಂ ಒಪ್ಪತಕ್ಕ ವಿಚಾರವಲ್ಲ. ಆದ್ದರಿಂದಲೇ ಹುಟ್ಟಲಿರುವ ಮಗುವಿಗೂ ಬದುಕುವ ಹಕ್ಕನ್ನು ಕರುಣಿಸಿ ಅದರ ರಕ್ಷಣೆ-ಪೋಷಣೆಯ ಹೊಣೆಯನ್ನು ತಾಯಿಯಾದವಳ ಜವಬ್ದಾರಿಯನ್ನಾಗಿಸಲಾಗಿದೆ. ಅಂದರೆ ಹೊಟ್ಟೆಯಲ್ಲಿ ಬೆಳೆಯುತ್ತಿರುವ ತನಗಿಷ್ಟವಿಲ್ಲದ ‘ಪಿಂಡ’ವನ್ನೂ ಕೂಡ ತಾಯಿಯಾದವಳು ‘ಇದು ನನ್ನ ದೇಹ ನಾನೇನೂ ಮಾಡಬಲ್ಲೆ’ಎನ್ನುತ್ತಾ ಗರ್ಭಪಾತ ಮಾಡುವ ಹಾಗಿಲ್ಲ! ಇದೇ ಕಾರಣಕ್ಕಾಗಿ ಇಂದು ಭ್ರೂಣ ಹತ್ಯೆಯು ಕೂಡ ಅಪರಾಧವಾಗಿ ಘೋಷಿಸಲ್ಪಟ್ಟಿರುವುದು.

ಇರಲಿ ಇದನ್ನೇನೋ ಒಂದು ಚೌಕಟ್ಟಿನೊಳಗಡೆ ಒಪ್ಪಬಹುದು. ಆದರೆ ವಿಚಾರ ಅದಲ್ಲ, ಬದಲಾಗಿ ಎಲ್ಲೋ ಗಲ್ಲಿಯಲ್ಲಿ ಅದ್ಯಾರಿಗೋ ಹೊಡೆದರೆ, ಇನ್ಯಾರಿಗೋ ನಿಂದಿಸಿದರೆ, ಗರ್ಭಪಾತ ಮಾಡಿಸಿಕೊಂಡರೆ ಆ ಕೂಡಲೇ ಹಾಜರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿಸುತ್ತಾ ಮಾನವತೆಯ ಬಗ್ಗೆ ಒಕ್ಕೊರಳ ಪಾಠ ಮಾಡುತ್ತಿರುವ ಈ ಹೋರಾಟಗಾರರು, ಈ ಮಾನವ ಹಕ್ಕುಗಳ ಆಯೋಗಗಳು ಇಂದು ರುದ್ರಭಯಂಕರವಾಗಿ ಪ್ರಪಂಚದಾದ್ಯಂತ ರಕ್ತ ಪಾತವಾಗುತ್ತಿದ್ದರೂ ಸುಖಾಸುಮ್ಮನೆ ಕೂತಿರುತ್ತಾರಲ್ಲ ಯಾಕೆ!? ಸಣ್ಣ ಸಣ್ಣ ವಿಷಯಗಳಲ್ಲಿ ಮೂಗು ತೂರಿಸಿ ರಾಷ್ಟ್ರಗಳ ಕಾನೂನು ರಚನೆಯಲ್ಲಿ ಪ್ರಭಾವ ಬೀರಿರುವ ಇವರುಗಳಿಗೆ ಕಾನೂನನ್ನೆ ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿರುವ ರಾಷ್ಟ್ರಗಳ ವಿರುದ್ಧವೇಕೆ ಈವರೆಗೂ ಸೊಲ್ಲೆತ್ತಬೇಕೆಂದನ್ನಿಸಿಲ್ಲ!? ಅದರಲ್ಲೂ ಇವರ ಹೋರಾಟಕ್ಕೆ ಬೇರೆ ವಿಶ್ವಸಂಸ್ಥೆಯ ಆಶ್ರಯವಿದೆ. ಸಣ್ಣದಾಗಿ ಕಿರುಚಿದರೂ ಪ್ರಪಂಚವನ್ನೇ ಕಿವಿಯಾಗಿಸಿಸುವ ತಾಕತ್ತಿದೆ(!?) ಹಾಗಿದ್ದರೂ ಇಂತಹ ವಿಚಾರಗಳಲ್ಲಿ ಇವರ ಮೌನವೇಕೆಂದೇ ಅರ್ಥವಾಗುತ್ತಿಲ್ಲ!

ಅದಕ್ಕೆ ಇಂದು ಈ ಮಾನವ ಹಕ್ಕುಗಳ ರಕ್ಷಕರ ಪಾತ್ರವನ್ನೇ ಪ್ರಶ್ನಿಸಬೇಕೆಂದೆನ್ನಿಸುವುದು! ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಆಮ್ನೆಸ್ಟಿ ಇಂಟರ್ನ್ಯಾಷನಲ್, ಭಾರತದ ‘ಎನ್ಎಚ್ಆರ್ಸಿ’ (ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ), ವಿವಿಧ ರಾಷ್ಟ್ರಗಳಲ್ಲಿರುವ ವಿವಿಧ ರೀತಿಯ ಆಯೋಗಗಳೆಲ್ಲಾ ಇರುವುದು ಕೇವಲ ತೋರಿಕೆಗೇನೋ ಎಂಬಂತೆ ಭಾಸವಾಗುತ್ತಿರುವುದು! ಯಾಕೆಂದರೆ ಒಂದೆಡೆ ತಾನು ‘ಸೇಫ್’ ಎಂದೆನ್ನಿಸಿಕೊಳ್ಳುವ ಜಾಗದಲ್ಲಿ ಸ್ವಲ್ಪ ಎಡವಟ್ಟಾದರೂ ಓಡೋಡಿ ಬಂದು, ಪತ್ರಿಕೆಗಳ ಮುಂದೆ ಗಂಟೆಗಟ್ಟಲೆ ಕೂತು ಖಾರವಾಗಿ ಮಾತನಾಡುವ ಇವರುಗಳು  ಇಂದು ಈ ಭಯೋತ್ಪಾದಕರುಗಳ ಅಮಾನುಷ ಕುಕೃತ್ಯಗಳನ್ನೆಲ್ಲಾ ಮೌನವಾಗಿಯೇ ಸ್ವೀಕರಿಸಿಕೊಂಡು ಸುಖಾಸುಮ್ಮನೆ ಕೂತಿದ್ದಾರೆ! ‘ಯಜ್ಡಿ’ ಎನ್ನುವ ಮುಸಲ್ಮಾನೇತರ ಜನಾಂಗವೊಂದು ಇರಾನ್’ನಲ್ಲಿ ಐಸಿಸ್ ಕೈಯಲ್ಲಿ ಬರ್ಬರವಾಗಿ ಹಿಂಸಿಸಲ್ಪಡುತ್ತಿದ್ದರೂ, ಹೆಂಗಳೆಯರು ಸಾಮೂಹಿಕವಾಗಿ ಅತ್ಯಾಚಾರಕ್ಕೆಳೆಯಲ್ಪಡುತ್ತಿದ್ದರೂ ಒಂದೇ ಒಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳದ ಈ ಮಾನವ ಹಕ್ಕುಗಳ ಪೋಷಕರು ಇಂದು ವಿರಾಜಮಾನರಾಗಿದ್ದಾರೆ ಎಂದರೆ ಅದರರ್ಥವೇನು!? ಒಂದು ವೇಳೆ ಮನಸ್ಸು ಮಾಡಿದ್ದರೆ ವಿಶ್ವಸಂಸ್ಥೆಯಲ್ಲೇ ಇರುವ ಮಾನವ ಹಕ್ಕುಗಳ ಆಯೋಗದ ಬಲದಿಂದಲಾದರೂ ಒಂದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯನ್ನೋ ಇಲ್ಲವೇ ಆರ್ಥಿಕ ದಿಗ್ಭಂದನಗಳನ್ನೋ ಹೇರುತ್ತಾ ಐಸಿಸ್’ನಂತಹ ಭಯೋತ್ಪಾದಕತೆಯನ್ನು ಬೆಂಬಲಿಸುವ ರಾಷ್ಟ್ರಗಳನ್ನು ತಲ್ಲಣಗೊಳಿಸವ ದೊಡ್ಡ ಪ್ರಯತ್ನ ನಡೆಸಬಹುದಿತ್ತು. ಆದರೆ ಅದೆಷ್ಟು ಬಾರಿ ಸಂಬಂಧಪಟ್ಟ ಆಯೋಗಗಳು ಈ ವಿಚಾರದಲ್ಲಿ ವಿಶ್ವಸಂಸ್ಥೆಯ ಬಾಗಿಲು ಬಡಿದಿದೆ!? ಅದೆಷ್ಟು ಬಾರಿ ಪರಿಣಾಮಕಾರಿಯಾಗಿ ಒತ್ತಡ ಹೇರಿದೆ!? ಖಂಡಿತಾ ಉತ್ತರ ‘ಶೂನ್ಯವಷ್ಟೇ’! ಒಟ್ಟಿನಲ್ಲಿ ಇನ್ನೂ ಜನ್ಮ ಕಾಣದ ಅಂದರೆ ಗರ್ಭಾವಸ್ಥೆಯಲ್ಲೇ ಇರುವ ಮಗುವಿನ ಬದುಕುವ ಹಕ್ಕುಗಳ ಬಗೆಗೂ ತಲೆಕೆಡಿಸಿಕೊಂಡು ಹೋರಾಡುವ ಇವರುಗಳಿಗೆ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಹೆಂಗಳೆಯರನ್ನು ಕೂಡಿ ಹಾಕಿ ವಿಕೃತವಾಗಿ ಭೋಗಿಸಿ ಬಿಸಾಡುವ ಕಾಮ ಪಿಪಾಸುಗಳ ಕುಕೃತವನ್ನಾಗಲೀ ಇಲ್ಲವೇ ‘ಧರ್ಮ’ವೇ ಕಾರಣವಾಗಿ ಸಾಮೂಹಿಕವಾಗಿ ಗುಂಡಿಟ್ಟು ಕೊಲ್ಲುವ ಭಯೋತ್ಪಾದಕರ ಭೀಷಣತೆಯನ್ನಾಗಲೀ ವಿರೋಧಿಸಬೇಕೆಂದು ಅನ್ನಿಸದೇ ಹೋಗಿರುವುದು ವಿಪರ್ಯಾಸವೇ ಸರಿ! ಅಷ್ಟೇ ಏಕೆ, ಕಳೆದ ಕೆಲವು ತಿಂಗಳುಗಳ ಕೆಳಗೆ ಅಫ್ಘಾನಿಸ್ತಾನದಲ್ಲಿ ಒಬ್ಬಾಕೆ ಕುರಾನ್’ಗೆ ಅವಮರ್ಯಾದೆ ಸಲ್ಲಿಸಿದಳು ಎಂಬ ಕಾರಣಕ್ಕೆ ಆಕೆಯನ್ನು ಹಿಡಿದು ಸಾರ್ವಜನಿಕವಾಗೇ ಬೆಂಕಿ ಹಚ್ಚಿ ಸುಟ್ಟದ್ದು ಎಲ್ಲಾ ಮೀಡಿಯಾಗಳಲ್ಲೂ ಪ್ರಸಾರವಾಗಿದೆ.ಆದರೆ ಕಲ್ಲು ಹೃದಯವನ್ನೂ ಕರಗಿಸುವಂತಿದ್ದ ಈ ಭೀಕರ ದೃಶ್ಯ ಮಾತ್ರ ನಮ್ಮ ಮಾನವ ಹಕ್ಕುಗಳ ಹೋರಾಟಗಾರರನ್ನು ಬಡಿದೆಬ್ಬಿಸಲೇ ಇಲ್ಲ! ಹಾಗೇನೆ ಧರ್ಮದ ಕಾರಣಕ್ಕೆ ಪತ್ರಕರ್ತರನ್ನು ಹೆಡೆಮುರಿ ಕಟ್ಟಿ ಶಿರಚ್ಚೇದ ಮಾಡಿದಾಗಲೂ ಇವರ ವಿಳಾಸ ಪತ್ತೆಯಿಲ್ಲ! ಪಾಕಿಸ್ಥಾನದಲ್ಲಿ ಮುದ್ದು ಕಂದಮ್ಮಗಳನ್ನು ಗುಂಡು ಇಟ್ಟು ಕೊಂದು ಹಾಕಿದಾಗಲೂ ಇವರದ್ದು ಮೌನವೇ ಉತ್ತರ! ಒಟ್ಟಿನಲ್ಲಿ ಇಸ್ಲಾಮೀಕರಣದ ರೇಖೆಯ ಮೇಲೆ ನಡೆಯುವ ಅದ್ಯಾವ ಭಯೋತ್ಪಾದಕತೆಯನ್ನೂ ನಮ್ಮ ಮಾನವ ಹಕ್ಕುಗಳ ಹೋರಾಟಗಾರರು ವಿರೋಧಿಸಿದಂತೆ ಕಾಣುತ್ತಿಲ್ಲ! ಹಾಗಾದರೆ ಇವುಗಳ್ಯಾವುವೂ ‘ಮಾನವ ಹಕ್ಕುಗಳ’ ಉಲ್ಲಂಘನೆಯ ಪರಿಧಿಗೆ ನಿಲುಕುವುದಿಲ್ಲವೆಂದು ಅರ್ಥೈಸಬೇಕೇ? ಅಥವಾ ಈ ವಿಚಾರದಲ್ಲಿ ತಲೆ ಹಾಕಿದರೆ ಎಲ್ಲಿ ತಮ್ಮ’ಬದುಕುವ’ ಹಕ್ಕನ್ನೇ ಕಳೆದುಕೊಳ್ಳಬೇಕಾದೀತು ಎಂಬ  ಭಯವೇ!? ಬಹುಷಃ ಎರಡನೆಯ ಉತ್ತರವೇ ನಿಜವೆಂದೆನ್ನಿಸುತ್ತದೆ! ಯೆಮನ್, ಈಜಿಪ್ಟ್, ಅಫಘಾನ್, ಪಾಕಿಸ್ಥಾನ ಮುಂತಾದ ರಾಷ್ಟ್ರಗಳ ಧರ್ಮ ಆಧಾರಿತ ಭಯೋತ್ಪಾದಕಕತೆಯನ್ನು ಬೇಕಾದರೆ ಪಕ್ಕಕ್ಕಿಡೋಣ ಆದರೆ ತೀರಾ ಇತ್ತೀಚಿಗೆ ಉತ್ತರ ಕೊರಿಯಾದಂತಹ ರಾಷ್ಟ್ರದಲ್ಲಿ ಸ್ವತಃ ಅಲ್ಲಿನ ಅಧ್ಯಕ್ಷನೇ ಕಂಡ ಕಂಡವರನ್ನು ಮುಲಾಜಿಲ್ಲದೆ ಗುಂಡಿಕ್ಕುವ ಕಾಯಕಕ್ಕೆ ಕೈ ಹಾಕಿದ್ದಾನಲ್ಲಾ? ಆವಾಗಲೂ ಯಾಕೆ ಯಾವ ಮಾನವ ಹಕ್ಕುಗಳ ಹೋರಾಟಗಾರರು ಗಂಟಲು ಹರಿಸಿಕೊಂಡು ವಿಶ್ವ ಮಟ್ಟದಲ್ಲಿ ಹೋರಾಡುತ್ತಿಲ್ಲ!?ಎಲ್ಲೋ ಒಂದು ಕಡೆ ಕೂತು ಇದು ಮಾನವ ಹಕ್ಕುಗಳಿಗೆ ಮಾಡುವ ಅಪಮಾನವೆಂದು ತೇಲುವ ಹೇಳಿಕೆಯೊಂದನ್ನು ಕೊಟ್ಟು ಬಿಟ್ಟರಷ್ಟೇ ಸಾಕೇ!?ವಿಶ್ವ ವ್ಯಾಪಿಯಾಗಿರುವ ಈ ಸಂಘಟನಾ ಸಾಮರ್ಥ್ಯ ಹಾಗೇ ನೋಡಿದರೆ ವಿಶ್ವ ವ್ಯಾಪಿಯಾಗಿ ಪ್ರತಿಭಟನೆ ಮಾಡುವ ತಾಕತ್ತು ಇದೆ. ಆದರೂ ಮೌನ ವಹಿಸಿರುವುದು ಏಕೆಂಬುದಕ್ಕೆ ಉತ್ತರ ಹುಡುಕಬೇಕಿದೆ!

ಇನ್ನು ಹೊರಗಿನ ವಿಚಾರಗಳನ್ನು ಬದಿಗಿಟ್ಟು ಒಮ್ಮೆ ಭಾರತದ ಒಳಗಡೆಗೆ ಇಣುಕೋಣ. ಹೌದು, ಇಲ್ಲಿನ ಕಾಶ್ಮೀರಿ ಪಂಡಿತರುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ,  ಈಶಾನ್ಯ ಭಾಗದ ರಾಜ್ಯಗಳ ಸಮಸ್ಯೆಗಳು, ಭಯೋತ್ಪಾದನೆ, ನಕ್ಸಲರ ಅಟ್ಟಹಾಸಗಳೆಲ್ಲಾ ಕಣ್ಣ ಮುಂದೆ ಕಟ್ಟುವ ಹಾಗಿದೆ. ಆದರೆ ದುರಾದೃಷ್ಟಕ್ಕೆ ಇವೆಲ್ಲವುಗಳು ನಮ್ಮ ‘ಎನ್ಎಚ್ಆರ್ಸಿ’ಯ ಪ್ರತಿರೋಧದ ಪರಿಧಿಗೆ ಬಂದೇ ಇಲ್ಲ ಎಂದರೆ ನಂಬಲೇ ಬೇಕು! ತಮ್ಮ ಸ್ವಂತ ನೆಲೆಯನ್ನು ಆಸ್ತಿಪಾಸ್ತಿಗಳನ್ನು ಬಿಟ್ಟು ಕೊನೆಗೆ ಬದುಕುವ ಹಕ್ಕನ್ನೇ ಕಳೆದುಕೊಂಡು ಅಲೆಮಾರಿಗಳ ಹಾಗೆ ದೇಶವ್ಯಾಪಿಯಾಗಿ ಚದುರಿ ಹೋಗಿರುವ ನಮ್ಮ ಕಾಶ್ಮೀರಿ ಪಂಡಿತರುಗಳಿಗೂ ಒಂದು ಜೀವಿಸುವ ಹಕ್ಕಿದೆ ಎಂಬುದನ್ನು ಇವರು ಮರೆತು ಬಿಟ್ಟರೇ!? ಭಯೋತ್ಪಾದಕ ಇಲ್ಲವೇ ಮೋಸ್ಟ್ ವಾಂಟೆಡ್ ರೌಡಿಗಳು ಎಲ್ಲಾದರೂ ಪೋಲೀಸ್ ಎನ್ಕೌಂಟರ್ಗೆ ಬಲಿಯಾದರೆ ಆ ಕೂಡಲೇ ಓಡೋಡಿ ಬಂದು ದೇಶದ ನ್ಯಾಯಿಕ ವ್ಯವಸ್ಥೆಯ ವಿಮರ್ಶೆಗೆ ಇಳಿಯುವ ಇವರುಗಳಿಗೆ ಇಂತಹ ದೊಡ್ಡ ಮಟ್ಟದ ಅನ್ಯಾಯಗಳು ಕಣ್ಣಿಗೆ ಕಾಣಿಸದೇ ಹೋಗಿರುವುದು ಪ್ರಶ್ನಾರ್ಹವೇ ಅಲ್ಲವೇ!? ಇಷ್ರತ್ ಜಹಾನ್’ನಂತಹ ಭಯೋತ್ಪಾದಕಿಯ ಬಗೆಗೂ ಇವರ ಹೃದಯಕಲಕಿದೆ. ಕಸಬ್’ನಂತಹ ಪಾಪಿಯ ಮರಣದಂಡನೆಯೂ ಇವರಿಗೆ ತಪ್ಪು ಎನ್ನಿಸಿದೆ!  ಆತ್ಮ ರಕ್ಷಣೆಗೆಂದು ಬೀಸುವ ಲಾಠಿಯೋ ಇಲ್ಲ ಕದ್ದು ಓಡುವಾಗ ಬೆನ್ನಟ್ಟಿದ ಪೋಲೀಸ್ ಹೊಡೆದ ಬುಲೆಟ್ಟೋ ಎಲ್ಲಾದರೂ ಅಪ್ಪಿತಪ್ಪಿ ಅಪರಾಧಿಯ ಪ್ರಾಣ ತೆಗೆಯಿತು ಎಂದಾದಾಗಲೂ ಇದೇ ಪರಿಸ್ಥಿತಿ! ಸತ್ತವನು ಮುಸಲ್ಮಾನನಾಗಿ ಬಿಟ್ಟರೆ ಮತ್ತೆ ಹೇಳುವುದೇ ಬೇಡ! ಪ್ರತಿಭಟನೆಯ ಮೇಲೆ ಪ್ರತಿಭಟನೆಗಳಾಗುತ್ತವೆ. ಅದರ ಕಾರಣಕರ್ತನ ಜನ್ಮವನ್ನು ಜಾಲಾಡಿಸಿ ಸರಕಾರವನ್ನೇ ಅಪರಾಧಿಯನ್ನಾಗಿಸಲಾಗುತ್ತದೆ! ಇವರ ಈ ಪರಿಯ ಹೋರಾಟದಿಂದಾಗಿಯೇ ಇಂದು ಅದೆಷ್ಟೋ ದಕ್ಷ ಅಧಿಕಾರಿಗಳು ಇಂದು ಚಡಪಡಿಸುತ್ತಿರುವುದು, ಉಗ್ರರ ಧಮನಕ್ಕೆ ಹಿಂದೇಟು ಹಾಕುತ್ತಿರುವುದು.

ಹೇಳಿ, ಬದಲಾಗಬೇಡವೇ ಈ ನಮ್ಮಮಾನವ ಹಕ್ಕುಗಳ ಮನೋಸ್ಥಿತಿ?

ಪ್ರಥಮ ವಿಶ್ವಯುದ್ಧ ಮುಗಿದ ಬಳಿಕ ಲೀಗ್ ಆಫ್ ನೇಷನ್ ಜನ್ಮ ತಾಳಿತು. ಆದರೆ ಕೆಲವೇ ವರ್ಷಗಳಲ್ಲಿ ಇದರ ವಿಫಲತೆ ಬಟಾ ಬಯಲಾಗಿ ಎರಡನೇ ಮಹಾಯುದ್ದ ಎದುರಿಸಬೇಕಾಯಿತು.ರಾಷ್ಟ್ರ ರಾಷ್ಟ್ರಗಳು ಮತ್ತೊಮ್ಮೆ ಬಡಿದಾಡಿಕೊಂಡವು. ಸಾವು ನೋವುಗಳನ್ನು ಎಣಿಕೆಗೆ ಮೀರಿ ಪಡೆದವು. ಬಳಿಕ ಮುಂದೆ ವಿಶ್ವವು ಶಾಂತವಾಗಿರಬೇಕೆಂದು ಬಯಸಿ ಅಮೇರಿಕಾದ ಮುಂದಾಳತ್ವದಲ್ಲಿ ವಿಶ್ವ ಸಂಸ್ಥೆಯ ಉದಯವಾಯಿತು. ಸದ್ಯ ಈವರೆಗೂ ಅದು ಉಸಿರಾಡುತ್ತಿದೆ ಎಂಬುದೇ ಅದರ ಸಾಧನೆ! ಯಾಕೆಂದರೆ ಇಂದು ಮತ್ತೆ ಪ್ರಪಂಚದ ಹಲವಾರು ರಾಷ್ಟ್ರಗಳು ಪರಸ್ಪರ ಬದ್ಧ ವೈರಿಗಳಾಗಿ ಪರಿವರ್ತಿತಗೊಂಡಿದೆ. ಇನ್ನದೆಷ್ಟೋ ರಾಷ್ಟ್ರಗಳು ಯುದ್ಧಕ್ಕಾಗಿ ಕಾಯುತ್ತಿವೆ. ಇರುವ ಅಂತರರಾಷ್ಟ್ರೀಯ ನ್ಯಾಯಾಲಯ, ಮಾನವ ಮಾನವ ಹಕ್ಕುಗಳ ಆಯೋಗಗಳೆಲ್ಲವು ಇದ್ದು ಇದ್ಯಾವುದನ್ನೂ ತಪ್ಪಿಸಿಲ್ಲ. ಪ್ರಭಾವ ಬೀರುವ ತಾಕತ್ತಿಲ್ಲವೋ ಅಥವಾ ಆ ನಿಟ್ಟಿನಲ್ಲಿರುವ ಉಮೇದುಗಾರಿಕೆಯ ಕೊರತೆಯೋ ತಿಳಿಯದು. ಒಟ್ಟಿನಲ್ಲಿ ಇವೆಲ್ಲವುಗಳು ಇಂದು ಕೇವಲ ಸಣ್ಣ ಪುಟ್ಟ ವಿಚಾರಗಳನ್ನಷ್ಟೇ ಎತ್ತಿಕೊಂಡು ಕಾಲ ಕಳೆಯುತ್ತಿದೆ ಎಂಬುದು ನಗ್ನ ಸತ್ಯ!

ಪ್ರಸಾದ್ ಕುಮಾರ್

ಮಾರ್ನಬೈಲ್

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!