Featured ಪರಿಸರದ ನಾಡಿ ಬಾನಾಡಿ

ಬಾನಾಡಿಗಳೂ ಹೇಳುತ್ತಿವೆ – “ ಚಾಮುಂಡಿಬೆಟ್ಟ ಉಳಿಸಿ ’’

ಮೈಸೂರು  ಎಂದಾಕ್ಷಣ ಎಲ್ಲರ ಚಿತ್ತದಲ್ಲಿ ಬರುವ ಮೊದಲ ಕೆಲ ಚಿತ್ರಣಗಳಲ್ಲಿ ಚಾಮುಂಡಿ ಬೆಟ್ಟವೂ ಒಂದು. ಮಹಿಷಾಸುರನನ್ನು ಸಂಹರಿಸಿದ ನಂತರ ತಾಯಿ ಚಾಮುಂಡಿ ನೆಲೆನಿಂತ ತಾಣವೀ ಬೆಟ್ಟ. ಪುರಾತನವೂ, ಪುರಾಣಗಳಲ್ಲಿ ಉಲ್ಲೇಖಿಸಿರುವ ಮಹಾಬಲೇಶ್ವರನ ದೇವಸ್ಥಾನವೂ ಇಲ್ಲಿದೆ. ಮೈಸೂರು ಜಿಲ್ಲೆಗೇ ಪ್ರಮುಖ, ಮೈಸೂರು ಪೇಟೆಯ ನಡುವೆ ಇರುವ ಈ ಬೆಟ್ಟ, ಪೇಟೆಯ ವಾಯುಮಾಲಿನ್ಯವನ್ನು ನಿರ್ವಹಿಸುತ್ತಿರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಬೆಟ್ಟದ ಹಸಿರು ಇಡೀ ನಗರಕ್ಕೆ ಉಸಿರಾಗಿದೆ. ತಿರುಪತಿ ಬಿಟ್ಟರೆ ನಗರದ ಮಧ್ಯೆ ಇರುವ ಇನ್ನೊಂದು ಅಭಯಾರಣ್ಯವೀ ಚಾಮುಂಡಿಬೆಟ್ಟ. ಈ ಬೆಟ್ಟದಲ್ಲಿ 500ಕ್ಕೂ ಮಿಕ್ಕಿ ಸಸ್ಯ ಪ್ರಬೇಧಗಳನ್ನು, 150ಕ್ಕೂ ಹೆಚ್ಚು ಪ್ರಬೇಧದ ಹಕ್ಕಿಗಳನ್ನು, 100 ಜಾತಿಯ ಚಿಟ್ಟೆಗಳನ್ನು, 30ಕ್ಕೂ ಅಧಿಕ ಸಸ್ತನಿಗಳನ್ನು ಇದುವರೆಗೆ ದಾಖಲಿಸಿದ್ದಾರೆ. ಇಂಥಾ ಚಾಮುಂಡಿಬೆಟ್ಟಕ್ಕೆ ಈಗ ಮತ್ತೆ ಪೇಟೆಯ ಬಿಸಿ ತಾಗಿದೆ. ಮಹಿಷಾಸುರನ ಉಪಟಳ ಶುರುವಾಗಿದೆ.

ಧಾರ್ಮಿಕ ಶಕ್ತಿ ಕೇಂದ್ರವಾದ ಚಾಮುಂಡಿ ದೇಗುಲಕ್ಕೆ ಮೊದಮೊದಲು ಕಾಲುದಾರಿಯಲ್ಲಿ ಸಾಗುತ್ತಿದ್ದರು. ನಂತರ ಅನುಕೂಲಕ್ಕೆಂದು ಮಹಾರಾಜರ ಕಾಲದಲ್ಲೇ 1500 ಮೆಟ್ಟಲುಗಳನ್ನು ನಿರ್ಮಿಸಿದರು. ಕಾಲಕ್ರಮೇಣ ಮೈಸೂರು ಈಗೆಂದುಕೊಳ್ಳುವ ಅಭಿವೃದ್ಧಿಯಾಗತೊಡಗಿತು. ಪ್ರವಾಸಿಗರು ಹೆಚ್ಚ ತೊಡಗಿದರು. ಬೆಟ್ಟದ ಬುಡದಿಂದ ದೇಗುಲದ ಬುಡಕ್ಕೆ ಎರಡೆರಡು ರಸ್ತೆ ನಿರ್ಮಾಣವಾಯಿತು. ರಸ್ತೆಯಾದ ಅನಂತರ ಬರಬರುತ್ತಾ ವಾಹನಗಳಿಗೂ ದೇವಿಯ ದರ್ಶನಾಕಾಂಕ್ಷೆ ಜಾಸ್ತಿಯಾಗ ತೊಡಗಿತು. ಇದೀಗ ಅಲ್ಲಿ ತಲೆದೋರಿರುವ ಹೊಸ ಸಮಸ್ಯೆ – ಪಾರ್ಕಿಂಗ್.

chamundi-hill

ಇದಕ್ಕೆ ಪರಿಹಾರವೆಂದು ಬೆಟ್ಟದ ತುದಿಯಲ್ಲಿ, ಅಲ್ಲಿರುವ ದೇವಿಕೆರೆಯ ಬದಿಯಲ್ಲಿ, ಈಶಾನ್ಯ ಮೂಲೆಯಲ್ಲಿ, ಚಾಮುಂಡಿಯ ನೆಲೆಯಲ್ಲಿ ಇದೀಗ ಬುಲ್ಡೋಜರ್‍ಗಳನ್ನು ಬಿಟ್ಟಿದ್ದಾರೆ. ಆ ಮೂಲಕ ಬೆಟ್ಟದ ತುದಿಯನ್ನೇ ಸಮತಟ್ಟು ಮಾಡಲಾಗುತ್ತಿದೆ. ಹೇಗೂ ಮಾಡುವ ಪಾರ್ಕಿಂಗ್ ಜಾಗ ಸದಾ ಭರ್ತಿ ಇರುಲು, ಸಂಬಂಧಿಸಿದವರ ಜೇಬು ಭರ್ತಿ ಇರಲು ಅನುಕೂಲವಾಗುವಂತೆ  ಇರುವ ಎರಡು ರಸ್ತೆಗಳಿಗೆ ಇನ್ನೆರಡು ಸೇರಿಸಿ ಚತುಷ್ಪಥ ರಸ್ತೆಯನ್ನು ನಿರ್ಮಿಸಲು ಈಗಾಗಲೇ ವೇದಿಕೆ ಸಜ್ಜಾಗಿದೆ. ಪೇಟೆಗಳಲ್ಲಿ ಜನರು ಶಾಪಿಂಗ್ ಮಾಡುವಾಗ ಮೋಸಹೋಗುವ ಸಾಧ್ಯತೆ ಇದ್ದು, ದೇವರ ಸನ್ನಿಧಿಯಲ್ಲಿ ನಿರುಮ್ಮಳವಾಗಿ ಶಾಪಿಂಗ್ ಮಾಡಲಿಕ್ಕಾಗಿ ಎಂದು, ಆ ಮೂಲಕ ಬೊಕ್ಕಸವೂ ತುಂಬಲಿ ಎಂದು ಪಾರ್ಕಿಂಗ್ ಜೊತೆಗೆ ಬಹುಮಹಡಿ ಶಾಪಿಂಗ್ ಮಾಲ್ ಕಟ್ಟಲು ಈಗಾಗಲೇ ಯೋಜನೆ ಸಿದ್ಧವಾಗಿದೆ. ತಗ್ಗಿಸಿದ ಚಾಮುಂಡಿಯನ್ನು ಮಾಲಿನ ಮೂಲಕ ಏರಿಸುವ ಸೂತ್ರ ಬದ್ಧವಾಗಿದೆ. ಪರಿಸರಕ್ಕೆ ಕೊಡಬೇಕಾದ ಮಾನ್ಯತೆಯನ್ನು ಪ್ರವಾಸೋದ್ಯಮಕ್ಕೆ ಕೊಡಲಾಗಿದೆ. ಪ್ರವಾಸೋದ್ಯಮಕ್ಕೂ ಅಭಿವೃದ್ಧಿಗೂ ತಳುಕು ಹಾಕಲಾಗಿದೆ. ತರಾತುರಿಯಲ್ಲಿ ಯೋಜನೆಗಳನ್ನು ಸಿದ್ಧಗೊಳಿಸಲು ಎಲ್ಲರೂ ತುದಿಗಾಲಲ್ಲಿ ನಿಂತಿರುವವರೆ. ಆದರೆ ಮೈಸೂರು ಪೇಟೆಯ ಬಸ್‍ನಿಲ್ದಾಣದಲ್ಲಿದ್ದ ರಿಲಾಯನ್ಸ್ ಮಾಲ್ ಜನರ ಕೊರತೆಯಿಂದ ಮುಚ್ಚಿ ವರ್ಷಗಳುರುಳಿವೆ. ಸದಾ ಜನಜಂಗುಳಿಯಿಂದ ತುಂಬಿರುವ ಬಸ್‍ನಿಲ್ದಾಣದಲ್ಲಿ ಯಾರೂ ಮತ್ತೆ ಅಂಗಡಿ ಹಾಕಲು ಸಿದ್ಧರಿಲ್ಲ. ಅಂಥದರಲ್ಲಿ ಇದೀಗ ಚಾಮುಂಡಿಬೆಟ್ಟದಲ್ಲಿ ಮಾಲ್! ಆದರೆ ಕಪ್ಪು ಹಣವನ್ನು ದೇವರ ಸಾನ್ನಿಧ್ಯದಲ್ಲಿ ಬಿಳಿಮಾಡುವುದು ಶ್ರೇಯಸ್ಕರವೆಂಬ ಭಾವಕ್ಕೆ ದೇವರೇ ಪ್ರೇರಣೆ ನೀಡುವುದಾದರೆ ಇದೀಗ ಆ ಬೆಟ್ಟವನ್ನು ರಕ್ಷಿಸುವುದಾದರೂ ಹೇಗೆ?

ಭಕ್ತಿ ಪ್ರಧಾನವಾಗಿರಬೇಕಾದ ಕೇಂದ್ರದಲ್ಲಿ, ಮನಃಶಾತಿ ಸಿಗಬೇಕಾದ ತಾಣದಲ್ಲಿ ಮತ್ತದೇ ಪೇಟೆಯನ್ನು ನಿರ್ಮಾಣ ಮಾಡುವುದನ್ನು ಆ ಚಾಮುಂಡಿಯೇ ಸಹಿಸುತ್ತಿರಲು ನಾವು ನೀವು ತಡೆಯುವುದು ಹೇಗೆ? ತಾಯಿ ಚಾಮುಂಡಿಯ ಮಡಿಲಲ್ಲಿರುವ ಬಗೆಬಗೆಯ ಮರ, ಗಿಡ, ಬಳ್ಳಿಗಳನ್ನು  ಚಿಟ್ಟೆ, ಕೀಟ ಮತ್ತು ಪಕ್ಷಿ ಪ್ರಾಣಿಗಳನ್ನು ರಕ್ಷಿಸುವವರು  ಯಾರು? ದಾಯಾದಿ ಮತ್ಸರಕ್ಕೆ ಪರಿಹಾರವೆಂತು? ಅದೇ ದೇವರ ಆ ಸೃಷ್ಟಿಯಂತೆ ಈ ನಮ್ಮ ಸೃಷ್ಟಿ ಎಂಬ ತಿಳಿವಿಗೆ ಒಂದಿಷ್ಟೂ ಬದ್ಧರಾಗದೆ ಚಾಮುಂಡಿಯ ತಪ್ಪಲನ್ನೆಲ್ಲಾ ಆಕ್ರಮಿಸಿ ಈಗ ಮೇಲುಮೇಲಕ್ಕೇರುವ ಮಾನವನೊಳಗಿನ ಮಹಿಷಾಸುರನಿಗೆ ಇನ್ನಷ್ಟು ಆಡಲವಕಾಶವೋ? ಬಲ್ಲವರು ಯಾರು?

ಕೇಳಿಸುತ್ತಿದೆಯೇ ಬಾನಾಡಿಗಳ ಬೊಬ್ಬೆ?

ಚಾಮುಂಡಿ ಬೆಟ್ಟದಲ್ಲಿ ಈವರೆಗೆ ದಾಖಲಿಸಿರುವ 150 ಪ್ರಬೇಧದ ಹಕ್ಕಿಗಳಲ್ಲಿ ಅನೇಕ ವಲಸೆ ಹಕ್ಕಿಗಳೂ ಇವೆ. ಈ ವಲಸೆ ಹಕ್ಕಿಗಳಲ್ಲಿ ಕೆಲವು ಕೇವಲ ಚಾಮುಂಡಿಬೆಟ್ಟಕ್ಕೆ ಮಾತ್ರ ಬರುತ್ತವೆ ಅಥವಾ ಬೆಟ್ಟದಲ್ಲಿ ಇತರೆಡೆಗಳಿಗಿಂತ ಹೆಚ್ಚಿನ ಸಂಖೆಯಲ್ಲಿರುತ್ತವೆ. ನೀಲಿ ಬಂಡೆಸಿಳ್ಳಾರ (blue rock thrush (Monticola solitarius)) ಮತ್ತು ನೀಲಿತಲೆಯ ಬಂಡೆಸಿಳ್ಳಾರ blue-capped rock thrush (Monticola cinclorhynchus)) ಎಂಬ ಎರಡು ಹಿಮಾಲಯದ ಹಕ್ಕಿಗಳು ಪ್ರತೀ ವರ್ಷ ಸೆಪ್ಟೆಂಬರದಲ್ಲಿ ಬಂದು ಮಾರ್ಚ್ ಕೊನೆಯಲ್ಲಿ ಹಿಂತಿರುಗುತ್ತವೆ. ಚಾಮುಂಡಿ ಬೆಟ್ಟದ ಪ್ರತಿ ಕಲ್ಲೂ ಕೂಡಾ ಈ ಬಂಡೆಸಿಳ್ಳಾರನ ಆವಾಸ ಸ್ಥಾನ. ಮೈಸೂರು ಸುತ್ತಮುತ್ತ ಅನೇಕ ಕಲ್ಲುಗುಡ್ಡೆಗಳೆಲ್ಲ ದಿನೇದಿನೇ ಮಾಯವಾಗುತ್ತಿರುವುದರಿಂದ ಈ ಬಂಡೆಸಿಳ್ಳಾರಗಳಿಗೆ ಈಗ ಉಳಿದದ್ದು ಚಾಮುಂಡಿಬೆಟ್ಟ ಮಾತ್ರ. ನೀಲಿ ಬಂಡೆಸಿಳ್ಳಾರವು ಬಿಸಿಲು ಹೆಚ್ಚು ಬೀಳುವೆಡೆ ಇದ್ದರೆ ನೀಲಿ ತಲೆಯ ಬಂಡೆಸಿಳ್ಳಾರವು ಗಿಡ ಮರಗಳಡಿ ಇರುವ ಕಲ್ಲುಗಳಲ್ಲಿ ವಾಸಿಸುತ್ತವೆ. ಎರಡೂ ಕೀಟಾಹಾರಿಗಳೇ. ಹಾಗಾಗಿ ಚಾಮುಂಡಿಬೆಟ್ಟದ ಗಿಡಮರಗಳನ್ನು ಇವು ಚಳಿಗಾಲದಲ್ಲಿ ಕಾಯುತ್ತವೆ.

blue-rock-trush

ನಮ್ಮ ಅಗತ್ಯಗಳಿಗೆ ಮಿತಿ ಇಲ್ಲದಿದ್ದರೆ, ಹೆಚ್ಚಿನ ರಸ್ತೆಗಳು ಅನಿವಾರ್ಯ ಎಂದು ತಿಳಿದರೆ, ಬೆಟ್ಟದ ಮೇಲಕ್ಕೆ ಚತುಷ್ಪಥ ರಸ್ತೆಯನ್ನು ಮಾಡಿದರೆ ಅವುಗಳ ಆವಸ ಸ್ಥಾನಕ್ಕೆ ಚ್ಯುತಿಯಾಗುವುದರಲ್ಲಿ ಯಾವುದೇ ಸಂಷಯವಿಲ್ಲ. ರಾಮನಗರದ ಸುತ್ತಮುತ್ತಲು ಇರುವ ಕಲ್ಲುಬೆಟ್ಟಗಳಿಗೆ ಕೂಡಾ ಈ ಬಂಡೆಸಿಳ್ಳಾರಗಳು ವಲಸೆ ಬರುತ್ತವೆ. ಆದರೆ ಆ ಕಲ್ಲು ಬೆಟ್ಟಗಳು ಪ್ರತಿನಿತ್ಯ ನಮ್ಮ ಮಾರ್ಗಗಳಿಗೆ ಜಲ್ಲಿಯಾಗುತ್ತಿವೆ.  ಹೊಸ ಯೋಜನೆಯಂತೆ ಚಾಮುಂಡಿಬೆಟ್ಟಕ್ಕೆ ಚತುಷ್ಪಥ ರಸ್ತೆಯಾದರೆ, ಮಾಲ್ ಏರಿದರೆ ಅತ್ತ ರಾಮನಗರದಲ್ಲೂ ಬಂಡೆ ನಾಶ, ಇತ್ತ ಚಾಮುಂಡಿಬೆಟ್ಟದಲ್ಲೂ ವಿನಾಶ. ಈ ಪಾಪ ನಿಜವಾಗಿಯೂ ನಮ್ಮ ಅಭಿವೃದ್ಧಿಗೆ ಬೇಕೇ?

indian-nightjar

ಈ ಬಂಡೆಗಳಲ್ಲಿ ಸಿಳ್ಳಾರಗಳಲ್ಲದೆ ನೂರಾರು ನತ್ತಿಂಗಗಳು (Indian Nightjar)  ವಾಸವಾಗಿವೆ. ಚಾಮುಂಡಿ ಬೆಟ್ಟದಲ್ಲಿ ಮಾನವನ ಉಪಟಳ ಕಮ್ಮಿ ಎಂಬ ಕಾರಣದಿಂದ ಈ ನತ್ತಿಂಗಗಳು ನಿರ್ಭಯವಾಗಿ ಸಂತಾನೋತ್ಪತ್ತಿ ಮಾಡುತ್ತಿವೆ. ರಸ್ತೆ ನಿರ್ಮಾಣದ ನೆಪದಲ್ಲಿ ನೂರಾರು JCB ಗಳು ಸದಾ ಹರಟುತ್ತಿದ್ದರೆ, ಈ ನತ್ತಿಂಗಗಳು ಸಂತಾನೋತ್ಪತ್ತಿ ಮಾಡುವುದು ಬಿಡಿ ಹಗಲಲ್ಲಿ ನಿಶ್ಚಿಂತೆಯಿಂದ ನಿದ್ದೆ ಮಾಡಲೂ ಆಗದ ಸ್ಥಿತಿ ಬರುತ್ತದೆ. ನತ್ತಿಂಗಗಳು ನಿದ್ದೆ ಮಾಡುವುದು ಹಗಲಲ್ಲಿ ನೆನಪಿಡಿ.

ಕಿತ್ತಲೆ ತಲೆಯ ನೆಲಸಿಳ್ಳಾರ (orange-headed thrush) ಎಂಬ ಹಕ್ಕಿಯು ಮಲೆನಾಡಿನಲ್ಲಿ ಹೇರಳವಾಗಿ ಕಂಡುಬರುವಂಥಾದ್ದು. ಇದು ಮೈಸೂರಿಗೆ ಬಲು ವಿರಳ. ಆದರೆ ಚಾಮುಂಡಿಯ ಸೆರಗಿನಲ್ಲಿ ಮಲೆನಾಡಿನ ವೈಭವವಿರುವುದನ್ನು ಗುರುತಿಸಿ ಇಲ್ಲಿ ಅವು ನೆಲೆಸಿವೆ. ಬೆಟ್ಟದ ತುದಿಯಲ್ಲಿ, ಎಲ್ಲಿ ಪಾರ್ಕಿಂಗ್‍ಗೆಂದು ಬೆಟ್ಟವನ್ನು ಅಗೆಯುತ್ತಿದ್ದರೋ ಅಲ್ಲಿ ಹತ್ತಾರು ನವರಂಗಗಳನ್ನು (Indian pitta (Pitta brachyura)) ನಾವು ಚಳಿಗಾಲದಲ್ಲಿ ಕಾಣಬಹುದು. ಮೈಸೂರಿನ ಕೆಲವು ಜಾಗಗಳಲ್ಲಿ ಮಾತ್ರ ಕಾಣಿಸುವ ನವರಂಗ ಬೆಟ್ಟದಲ್ಲಿ ಏನಿಲ್ಲವೆಂದರೂ ಮೂವತ್ತರ ಮೇಲಿರಬಹುದೆಂಬ ಅಂದಾಜಿದೆ. ನಿಮಗೆ ನವರಂಗದ ಅಂದದ ಬಗ್ಗೆ ನಿಶ್ಚಿತವಾಗಿ ತಿಳಿದಿದೆಯೊ ಇಲ್ಲವೋ ಎಂದು ನನಗೆ ಗೊತ್ತಿಲ್ಲ. ನವರಂಗ ಕೇವಲ ಒಂದು ಹಕ್ಕಿಯಲ್ಲ. ಮೈ ತುಂಬ ಒಂಬತ್ತು ಬಣ್ಣಗಳನ್ನು ತುಂಬಿ ಮೆರೆಯುವ ಈ ಹಕ್ಕಿ ಇದ್ದರೆ ಆ ತಾಣ ನವ (ಹೊಸ) ರಂಗವೇ (ವೇದಿಕೆ) ಆಗಿ ಬಿಡುತ್ತದೆ.

indian-pitta

ಚಳಿಗಾಲಗಲ್ಲಿ ಮೈಸೂರಿನಲ್ಲಿ ಎಲ್ಲೂ ಕಾಣಿಸದ ನೀಲಿ ರೋಬಿನ್ ಹಕ್ಕಿ Indian blue robin (Larvivora brunnea), ನೀಲಿಕತ್ತಿನ ನೀಲಿ ನೊಣಹಿಡುಕ blue-throated blue flycatcher (Cyornis rubeculoides) ಎಂಬ ನೀಲವರ್ಣದ ಎರಡು ಪಕ್ಷಿಗಳು ಈ ಬೆಟ್ಟದಲ್ಲಿ ಮಾತ್ರ ಲಭ್ಯ ಎಂಬುದು ಗರ್ವದ ವಿಷಯವಲ್ಲದೆ ಇನ್ನೇನು?

ಮೈಸೂರಿಗೆ ಅಪರೂಪವಾದ ದೊಡ್ಡ ಹದ್ದುಗಳು Bonelli’s eagle (Aquila fasciata) ಬೆಟ್ಟದಲ್ಲಿ ಅನೇಕ ವರ್ಷಗಳಿಂದ ಸಂತಾನೋತ್ಪತ್ತಿ ಮಾಡುತ್ತಿವೆ. ಕರಿಹದ್ದು black eagle (Ictinaetus malaiensis) ಮಳೆಗಾಲದಲ್ಲಿ ಇಲ್ಲಿಗೆ ಬರುತ್ತದೆ.  rufous-bellied hawk-eagle (Lophotriorchis kienerii) ಕೂಡಾ ಆಗಾಗ ತಾಯಿಯ ದರ್ಶನಕ್ಕೆ ಭೇಟಿ ಕೊಡುವುದುಂಟು. crested hawk-eagle (Nisaetus cirrhatus) ಎಂಬ ಜುಟ್ಟಿನ ಹದ್ದು ಇಲ್ಲಿ ಆಹಾರ ಅರಸುವುದನ್ನು ನಾನು ಕಂಡಿದ್ದೇನೆ. ಚಿಟ್ಟು ಗೂಬೆ Indian scops owl (Otus bakkamoena), ಅಡವಿ ಗುಮ್ಮ mottled wood owl (Strix ocellata), ಹದ್ದು ಗೂಬೆ Indian eagle-owl (Bubo bengalensis), ಮೀನು ಗುಮ್ಮ  brown fish owl (Bubo zeylonensis ), ಹಾಲಕ್ಕಿ spotted owlet (Athene brama) ಎಂಬ ಗೂಬೆ ಪ್ರಬೇಧದ ಆಶ್ರಯ ತಾಣವೀ ಚಾಮುಂಡಿಬೆಟ್ಟ. ವಿರಳ ಹಕ್ಕಿಗಳಾದ ಕೆಂಪುಕತ್ತಿನ ನೊಣಹಿಡುಕ red-throated flycatcher (Ficedula albicilla), ಕೆಮ್ಮಂಡೆ ಜೇನ್ನೊಣಬಾಕ chestnut-headed bee-eater (Merops leschenaulti), ಕಪ್ಪುಹಕ್ಕಿ Indian blackbird (Turdus simillimus), ಪಾಚಿ ಬೆನ್ನಿನ ಮರ ಪಿಪಿಳೀಕolive-backed pipit (Anthus hodgsoni), ಮಟಪಕ್ಷಿ rufous treepie (Dendrocitta vagabunda), ಟಿಕಲ್ಸ್ ಸಿಳ್ಳಾರ Tickell’s thrush (Turdus unicolor) ಕೂಡಾ ಚಾಮುಂಡಿಬೆಟ್ಟದಲ್ಲಿ ದಾಖಲಾಗಿವೆ.

indian-eagle

ಅಷ್ಟು ದೊಡ್ಡ ಬೆಟ್ಟಕ್ಕೆ ಚತುಷ್ಪಥ ರಸ್ತೆ ನಿರ್ಮಾಣದಿಂದ, ಮಾಲ್‍ಗಳಿಂದ ಯಾವುದೇ ಹಾನಿಯಾಗುವುದಿಲ್ಲ ಎಂಬ ವಾದವುಂಟು. ಆದರೆ ಆ ಬೆಟ್ಟಕೆ, ಚಾಮುಂಡಿಯ ಪಾವಿತ್ರಕ್ಕೆ ಈಗಾಗಲೇ ಮೈಸೂರಿನಲ್ಲಿ ಆಗಿರುವ ಅಭಿವೃದ್ಧಿಯ ಆಘಾತ ಭಾರೀ ಉಂಟು. ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಮೈಸೂರಿನ ಮಾಲಿನ್ಯವನ್ನು ಇದುತನಕ ತಡೆದು ರಕ್ಷಿಸುವಲ್ಲಿ ಸ್ವಚ್ಛ ನಗರಿಯೆಂಬ ಖ್ಯಾತಿಗೆ ಭಾಜನವಾಗುವಲ್ಲಿ ಚಾಮುಂಡಿಯ ಹಸುರಿನ ಕೊಡುಗೆ ವಿಶೇಷ ಉಂಟು. ಇದನ್ನೆಲ್ಲ ಅರಿಯದಾದರೆ, ಇನ್ನೂ ನಮಗೆ ನಗರಾಭಿವೃದ್ಧಿ ಸಾಲದಾದರೆ, ಎಷ್ಟು ರಂಜಿಸಿದರೂ ಮನ ಮರ್ಕಟವಾದರೆ ಇಂದು ನಾಲ್ಕು ಪಥ ರಸ್ತೆ, ನಾಳೆ ರೋಪ್ ವೇ, ಪ್ಯಾರಾ ಗ್ಲೈಡಿಂಗ್, ರೈಲು, ಅಲ್ಲೊಂದು ಹೆಲಿಪ್ಯಾಡ್, ಬಿಟ್ಟರೆ ವಿಮಾನ ನಿಲ್ದಾಣ ಹೀಗೆ ಅಭಿವೃದ್ಧಿ ಮುಂದುವರಿದರೆ…?

ಅಭಿವೃದ್ಧಿಯ ರಸ್ತೆಗಳು ಜಾಸ್ತಿಯಾದೊಡನೆ ವಾಹನದ ದಟ್ಟನೆ ಮತ್ತು ಮಾಲಿನ್ಯ, ಮತ್ತೆ ಮತ್ತೆ ಅಲ್ಲಿನ ಜೀವಿಗಳಿಗೆ ಧಕ್ಕೆ, ವಾಹನದ ವೇಗಕ್ಕೆ ವನ್ಯ ಜೀವಿಗಳ ಸಾವು, ಮರಗಳ್ಳರಿಗೆ ಸಲೀಸು, ಕಾವಲಿನ ಹೆಸರಿನಲ್ಲಿ ಎಲ್ಲರಿಗೂ ಮಾಮೂಲು. ಹೀಗೆ ಚತುಷ್ಪಥ ರಸ್ತೆ ತಂತಾನೆ ದಶಪಥವೋ, ವಿಂಶತಿಪಥವೋ ಆಗಿಬಿಡುತ್ತದೆ.

ಹೀಗೆಲ್ಲ ಆದರೆ ಬಾನಾಡಿಗಳು ಸುಮ್ಮನಿರುವುದಿಲ್ಲ. ಅವುಗಳು ಚಾಮುಂಡಿಬೆಟ್ಟದಿಂದ ಬಲು ದೂರ ಸಾಗಿಬಿಡುತ್ತವೆ. ತಾಯಿ ಚಾಮುಂಡಿ(ಪರಿಸರ) ತನ್ನ ಮಕ್ಕಳನ್ನು ಕಳೆದುಕೊಂಡು ದುಃಖಿಸದೇ ಇರುವುದಿಲ್ಲ. ನಾವು ಹೀಗೆ ಮಹಿಷಾಸುರನ ದರ್ಪ ತೋರಿಸುತ್ತಿದ್ದರೆ ಚಾಮುಂಡಿ ದೇಗುಲದೊಳಗಿಂದ ಎದ್ದು ಬಂದು ನಮ್ಮ ಸಂಹಾರ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಏನಾಯಿತು ಎಂದು ಅವಲೋಕಿಸಲು ನಾವೂ ಇಲ್ಲ, ನೀವೂ ಇಲ್ಲ.

ಚಿತ್ರಗಳು : ಡಾ ಅಭಿಜಿತ್ ಎ.ಪಿ.ಸಿ,  ಪವನ್ ರಾಮಚಂದ್ರ.

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!