Featured ಅಂಕಣ

ಡಾ. ಎ. ಪಿ. ಜೆ. ಅಬ್ದುಲ್ ಕಲಾಂರೊಂದಿಗೆ ಒಂದು ಸಂಜೆ

ಆಗಿನ್ನೂ ಹದಿಹರೆಯದ ಹೊಸ್ತಿಲಲ್ಲಿದ್ದ ನನಗೆ ಒಂದು ದಿನ ಬೆಂಗಳೂರಿನ ಒಂದು ಹೆಸರಾಂತ ಪಂಡಿತರ ಮನೆಯಲ್ಲಿ ಔತಣಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ರುಚಿಕಟ್ಟಾದ ಭೋಜನ ಮುಗಿದ ಮೇಲೆ, ಆತಿಥೇಯರು ನಮ್ಮನ್ನು ಒಂದು ವಿಶಾಲ ಪಡಸಾಲೆಗೆ ಕರೆದುಕೊಂಡು ಹೋದರು. ಅತಿಥಿ ಅಭ್ಯಾಗತರು ಗುಂಪಾಗಿ ಆ ಕೋಣೆಯನ್ನು ತುಂಬುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದ ಎರಡು ದೃಶ್ಯಗಳೆಂದರೆ, ವೇದಿಕೆಯ ಎದುರು ಕೆಲಸದ ಆಳುಗಳು ಸಾಲಾಗಿ ಬಿಡಿಸಿಡುತ್ತಿದ್ದ ಕುರ್ಚಿಗಳು ಮತ್ತು ವೇದಿಕೆಯ ಒಂದು ಬದಿಯಲ್ಲಿ ಗೋಡೆಗೆ ಒರಗಿಸಿಟ್ಟ ಒಂದಷ್ಟು ಸಂಗೀತವಾದ್ಯಗಳು. ಸಂಗೀತ ಕಚೇರಿಯೊಳಗೆ ನನಗರಿವಿಲ್ಲದೆ ಬಂದು ಸಿಕ್ಕಿ ಬಿದ್ದಿದ್ದೇನೆ ಎನ್ನುವುದು ಖಚಿತವಾಗುವ ಹೊತ್ತಿಗೆ ನಾನೂ ಒಂದು ಚೇರಿನಲ್ಲಿ ಕೂತಾಗಿತ್ತು.

ಸಿಕ್ಕಿ ಬಿದ್ದೆ ಎಂದೆನೆ? ಹೌದು! ನಿಜ ಹೇಳಬೇಕೆಂದರೆ ಸಂಗೀತಕ್ಕೂ ನನಗೂ ಅತ್ತೆ ಸೊಸೆಯರ ಸಂಬಂಧ! ಬೋರ್ಗಲ್ಲ ಮೇಲೆ ಸುರಿದ ನೀರಿಂದ ಆ ಕಲ್ಲಾದರೂ ತುಸು ಮೆತ್ತಗಾಗುವ ಅವಕಾಶ ಇತ್ತೇನೋ, ಆದರೆ ನನ್ನ ಕಿವಿಗಳ ಮೇಲೆ ಇದುವರೆಗೆ ಬಿದ್ದ ಸಂಗೀತಕ್ಕೆ ಅಂಥ ಸಾಧನೆಯನ್ನೂ ಮಾಡಲಿಕ್ಕಾಗಿರಲಿಲ್ಲ. ಹಾಗೆಂದು ನಾನೇನೂ ಕಿವುಡನಲ್ಲ. ಸಿನೆಮಾ ಗೀತೆಗೂ, ರಾಷ್ಟ್ರಗೀತೆಗೂ ನಡುವೆ ವ್ಯತ್ಯಾಸ ಗುರುತಿಸುವಷ್ಟು ಬುದ್ಧಿ ಇತ್ತೆನ್ನಿ! ಆದರೆ, ಈ ಕಚೇರಿಗಳಲ್ಲಿ ಕಲಾವಿದರು ಚಕ್ಕಳ ಮಕ್ಕಳ ಹಾಕಿ ಕೂತು ಗಂಟೆಗಟ್ಟಲೆ ಹಾಡುತ್ತಾರಲ್ಲ, ಅದು ಮಾತ್ರ ಗದ್ದಲ ಎಂದೇ ಅನ್ನಿಸುತ್ತಿತ್ತು ನನಗೆ. ಹಾಗಾಗಿ ಈಗ ಗೋಷ್ಠಿಯಲ್ಲಿ ಕೂತ ಮೇಲೆ ಬಲೆಗೆ ಬಿದ್ದ ಮೀನಿನಂತೆ ಒಳಗೊಳಗೇ ಚಡಪಡಿಸತೊಡಗಿದೆ. ವೇದಿಕೆಯ ಮೇಲೆ ಕಲಾವಿದರ ಸಂಗೀತ ಶುರುವಾಯಿತು. ಇಂಥ ಕಠಿಣ ಪರಿಸ್ಥಿತಿಗಳಲ್ಲಿ ಸಾಧಾರಣವಾಗಿ ಮಾಡುವಂತೆ, ಅವತ್ತೂ ನಾನು ದೊಡ್ಡ ಸಂಗೀತ ಆಸ್ವಾದಕನ ಪೋಸು ಕೊಡುತ್ತ ಘನ ಗಂಭೀರನಾಗಿ ಕೂತೆ. ಕಲೆಯನ್ನು ಹೃದಯಾಂತರಾಳದಿಂದ ಆಸ್ವಾದಿಸುವ ರಸಿಕನಂತೆ ಬಲಗೈಯ ತೋರು ಬೆರಳನ್ನು ಗಲ್ಲದ ಮೇಲಿಟ್ಟೆ. ಕಿವಿಗಳನ್ನು ಪೂರ್ತಿಯಾಗಿ ಈ ಜಗತ್ತಿಂದ ಕಿತ್ತೆಸೆದು ನನ್ನದೇ ಜಗತ್ತಿನ ಕೆಲಸಕ್ಕೆ ಬಾರದ ಯೋಚನೆಗಳಲ್ಲಿ ಮುಳುಗಿ ಹೋದೆ.

ಸ್ವಲ್ಪ ಹೊತ್ತಾದ ಮೇಲೆ ಸುತ್ತಲಿನ ಜನ ಜೋರಾಗಿ ಚಪ್ಪಾಳೆ ತಟ್ಟುವುದು ಕೇಳಿ, ಕಲ್ಪನಾಲೋಕದಿಂದ ವಾಸ್ತವಕ್ಕೆ ಧುಮುಕಿದೆ. ಅಷ್ಟು ಹೊತ್ತಿಗೆ ನನ್ನ ಬಲಗಡೆಯಿಂದ ತೀಕ್ಷ್ಣವಾದ ಆದರೆ ಆಪ್ತವೆನಿಸುವ ಒಂದು ಕೀರಲು ದನಿ ಹರಿದು ಬಂತು. “ನಿಮಗೆ ತ್ಯಾಗರಾಜರ ಕೃತಿ ಇಷ್ಟವಿಲ್ಲವೆ?” ಎಂದು ಕೇಳಿತದು. ನ್ಯೂಕ್ಲಿಯರ್ ಬಾಂಬು ಹೇಗೆ ಕೆಲಸ ಮಾಡುತ್ತದೆ ಎಂದು ಯಾರಾದರೂ ಕೇಳಿದ್ದರೆ ನನ್ನ ಪ್ರತಿಕ್ರಿಯೆ ಹೇಗಿರುತ್ತಿತ್ತೋ ಈ ಪ್ರಶ್ನೆಗೆ ಕೂಡ ಅದಕ್ಕಿಂತ ಬೇರೆ ಉತ್ತರ ನನ್ನಿಂದ ನಿರೀಕ್ಷಿಸುವಂತಿರಲಿಲ್ಲ. ನಾನು ದನಿ ಬಂದತ್ತ ತಿರುಗಿದೆ. ಅಲ್ಲಿ ನನ್ನ ಮುಖವನ್ನು ಆಶ್ಚರ್ಯ ಮತ್ತು ಪ್ರೀತಿಯಿಂದ ನೋಡುತ್ತಿದ್ದ ಆ ಮುಖವನ್ನು ನೋಡಿ ಅವಾಕ್ಕಾದೆ. ಬಿಳಿ ಹುಬ್ಬಿನ, ತೀಕ್ಷ್ಣ ನೋಟದ, ಗಿಳಿ ಮೂಗಿನ, ಉರುಟು ಮುಖದ, ಇಕ್ಕೆಲದಲ್ಲೂ ಜಲಪಾತದಂತೆ ಇಳಿಬಿದ್ದ ಕೂದಲನ್ನು ಅದರ ಪಾಡಿಗೆ ಬಿಟ್ಟು ಮಗುವಿನಂತೆ ಸದ್ದಿಲ್ಲದೆ ನಗುತ್ತಿದ್ದ ಆ ವ್ಯಕ್ತಿಯನ್ನು ಕಂಡು ನನಗೆ ಮೈಮುಳ್ಳೆದ್ದವು. ಡಾಕ್ಟರ್ ಎ.ಪಿ.ಜೆ. ಅಬ್ದುಲ್ ಕಲಾಂ ನನ್ನ ಪಕ್ಕ ಕೂತಿದ್ದರು!

ಅವರು ನನ್ನ ಕಡೆಗೊಂದು ಸಾಧಾರಣವೆನ್ನುವಂತಹ ಪ್ರಶ್ನೆ ಎಸೆದಿದ್ದರು. ಅದಕ್ಕೆ ಅಷ್ಟೇ ಸಾಧಾರಣವೆನ್ನಿಸುವ ಯಾವುದಾದರೂ ಸುಲಭದ ಉತ್ತರ ಹೇಳಿ ಜಾರಿಕೊಳ್ಳಬಹುದಿತ್ತು. ಆದರೆ, ಆ ಕಣ್ಣುಗಳಲ್ಲಿ ಶಿಷ್ಟಾಚಾರಕ್ಕೆ ಪ್ರಶ್ನೆ ಕೇಳಿದೆ ಎನ್ನುವ ಭಾವ ಇರಲಿಲ್ಲ. ನನ್ನ ಕಡೆಯಿಂದ ಬರುವ ಯಾವ ಉತ್ತರವನ್ನಾದರೂ ರಾಷ್ಟ್ರೀಯ ಮಟ್ಟದ ಪ್ರಮುಖ ಸಂಗತಿ ಎಂಬಂತೆ ಪರಿಗಣಿಸಲು ಅವುಗಳು ಸಿದ್ಧವಾಗಿದ್ದವು. ಅದಕ್ಕಿಂತ ಹೆಚ್ಚಾಗಿ, ಈ ಮನುಷ್ಯನಲ್ಲಿ ಯಾರೂ ಯಾವ ಸುಳ್ಳನ್ನೂ, ಅದೆಷ್ಟೇ ಸಣ್ಣದಾಗಿರಲಿ, ಹೇಳಿ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲದ ಮಾತು ಅನ್ನಿಸಿತು ನನಗೆ.

“ಕ್ಷಮಿಸಿ, ನನಗೆ ತ್ಯಾಗರಾಜರ ಕೃತಿಗಳ ಬಗ್ಗೆ ಅಷ್ಟೇನೂ ಗೊತ್ತಿಲ್ಲ” ಎಂದೆ ನಾನು ಸಂಕೋಚದಿಂದ. “ಅವರ ಯಾವ ಕೃತಿಯನ್ನೂ ಇದುವರೆಗೆ ಕೇಳಿದ್ದಿಲ್ಲ” ಎಂದೂ ಸೇರಿಸಿದೆ.

ಜಗತ್ತಿನ ಅತಿ ದೊಡ್ಡ ಅದ್ಭುತವೊಂದು ತನ್ನ ಪಕ್ಕದಲ್ಲಿ ಈಗಷ್ಟೇ ನಡೆದು ಹೋಯಿತೇನೋ ಎಂಬಂತೆ ಅವರು ಮಗುವಿನ ಮುಗ್ಧತೆಯಿಂದ ನನ್ನನ್ನು ಕಣ್ಣರಳಿಸಿ ನೋಡಿದರು.

“ನೀವು ತ್ಯಾಗರಾಜರನ್ನು ಕೇಳಿಲ್ಲವೆ?”, ಮತ್ತೊಮ್ಮೆ ಖಚಿತಪಡಿಸಿಕೊಂಡರು. ನೀವು ಇದುವರೆಗೆ ಸ್ನಾನವನ್ನೇ ಮಾಡಿಲ್ಲವೆ ಎಂದು ಕೇಳುವಾಗ ಹೇಗೋ ಅಷ್ಟೇ ಗಾಬರಿ ಮತ್ತು ಅಚ್ಚರಿ ಆ ದನಿಯಲ್ಲಿತ್ತು.

“ಅವರ ಸಂಗೀತ ಇಷ್ಟವಲ್ಲ ಅಂತೇನಿಲ್ಲ. ಸಂಗೀತದ ಕುರಿತು ನಾನು ಸ್ವಲ್ಪ ಒಡ್ಡ. ಒರಟು ಕಿವಿ ಅಂತಾರಲ್ಲ, ಅಂಥಾದ್ದು ನನಗೆ.. ಈ ಕರ್ನಾಟಕ, ಹಿಂದೂಸ್ತಾನಿ ಇವೆಲ್ಲ.. ಸ್ವಲ್ಪ ದೂರ” ಅಂದೆ. ಆ ಮಾತುಗಳನ್ನು ಇನ್ನಷ್ಟು ಶಿಷ್ಟವಾಗಿ ಹೇಳುವುದು ಹೇಗೋ ತಿಳಿಯಲಿಲ್ಲ. ಅದನ್ನು ಕೇಳಿ ಅವರ ಮುಖದಲ್ಲಿ ಗುರುವಿನ ಕಾಳಜಿ ಮೂಡಿತು. “ಪ್ಲೀಸ್, ನೀವು ಸ್ವಲ್ಪ ನನ್ನ ಜೊತೆ ಬರುವಿರಾ?” ಎಂದರು ತಟ್ಟನೆ. ಮುಂದಿನ ಮಾತುಕತೆ ನಡೆಯುವುದಕ್ಕೂ ಅವಕಾಶ ಕೊಡದೆ ಅವರು ಎದ್ದೇ ಬಿಟ್ಟರು. ಜೊತೆಗೆ ನನ್ನ ತೋಳನ್ನೂ ಹೂವು ಹಿಡಿದಂತೆ ಮೃದುವಾಗಿ ಹಿಡಿದಿದ್ದರು. ಅವರಿಂದ ಕೈ ಕೊಸರಿಕೊಂಡು ಕೂರುವುದಕ್ಕೆ ಯಾವ ಒರಟನಿಗೂ ಆಗದ ಮಾತು. ಯಕ್ಷಿಣಿಗಾರನ ಮಂತ್ರದಂಡಕ್ಕೆ ಗಾಳಿಯಲ್ಲಿ ತೇಲುವ ದೇಹದಂತೆ ನಾನು ಅವರ ಹಿಡಿತಕ್ಕೆ ಸಹಜವಾಗಿ ಎದ್ದು ಹಿಂಬಾಲಿಸತೊಡಗಿದೆ. ಕಚೇರಿ ನಡೆಯುತ್ತಿದ್ದಾಗಲೇ ನಡುವೆ ಎದ್ದು ನಡೆಯುತ್ತಿದ್ದ ನಮ್ಮಿಬ್ಬರನ್ನು ಹಲವು ಕಣ್ಣುಗಳು ನೋಡುತ್ತಿರಬಹುದೆಂಬ ಭಯವಾಗಿ ನಾನು ಮತ್ತೇನನ್ನೂ ನೋಡಲಾಗದೆ ನೆಲದ ಹಾಸುಗಂಬಳಿಯತ್ತ ಕಣ್ಣು ನೆಟ್ಟೆ. ಆ ಕೋಣೆಯಲ್ಲಿ ಸಣ್ಣ ದನಿಯಲ್ಲಿ ಗುಜುಗುಜು ಸುರುವಾಯಿತು. ಆದರೆ ಕಲಾಂ ಅವರಿಗೆ ಅದರತ್ತ ಗಮನವೇ ಇರಲಿಲ್ಲ.

ಅವರು ನನ್ನನ್ನು ಮನೆಯ ಒಳಕೋಣೆಗೆ ಕರೆದುಕೊಂಡು ಹೋದರು. ಅಲ್ಲಿ ಮಾಳಿಗೆಗೆ ಹೋಗುವ ದಾರಿಯಿತ್ತು. ಕಲಾಂ ಅವರಿಗೆ ಈ ಮನೆ ತುಂಬ ಪರಿಚಿತವಾಗಿದೆ ಎಂದುಕೊಂಡೆ. ಮಹಡಿಯ ಒಂದು ಕೋಣೆಯನ್ನು ತೆರೆದಾಗ ಅದೊಂದು ಸುಂದರವಾದ ಪುಟ್ಟ ಅಧ್ಯಯನ ಕೊಠಡಿಯಂತೆ ಕಂಡಿತು. ಮೇಷ್ಟ್ರು ನನ್ನನ್ನು ಒಳಕ್ಕೆ ಕರೆದು ಬಾಗಿಲು ಹಾಕಿದರು. ಹೊರ ಜಗತ್ತಿನ ಗೌಜಿನಿಂದ ಕತ್ತರಿಸಿಕೊಂಡು ಹೊಸ ಏಕಾಂತಲೋಕಕ್ಕೆ ಬಂದು ಬಿದ್ದಂತಾಯಿತು.

“ಈಗ ಹೇಳಿ, ಸಂಗೀತದ ಬಗ್ಗೆ ನಿಮಗೆ ಆಸಕ್ತಿ ಕ್ಷೀಣವಾಗಿದೆ ಎಂದಿರಿ. ಎಷ್ಟು ದಿನಗಳಿಂದ ಹೀಗನ್ನಿಸಿತ್ತು ನಿಮಗೆ?”, ಎಂದು ಕಲಾಂ ಗುಪ್ತ ಸಮಾಲೋಚನೆ ಮಾಡುವ ವೈದ್ಯನಂತೆ ಮುಂಬಾಗಿ ದುಗುಡದಿಂದ ಕೇಳಿದರು.

“ಜೀವನವಿಡೀ” ಎಂದೆ ನಾನು ನಾಚಿಕೆ ಪಡುತ್ತ. ಹಾಗೆ ಉತ್ತರಿಸಿದ ಮೇಲೆ ಇನ್ನಷ್ಟು ಸಂಕೋಚವಾಗಿ “ಡಾಕ್ಟರ್ ಕಲಾಂ ಅವರೇ, ನನಗಾಗಿ ನೀವು ಅಲ್ಲಿ ನಡೆಯುತ್ತಿರುವ ಸಂಗೀತ ಕಚೇರಿ ಮಿಸ್ ಮಾಡಿಕೋಬಾರದು. ನೀವಲ್ಲಿರಬೇಕು ಅಂತ ನನ್ನ ಇಚ್ಛೆ” ಎಂದೆ. ಆದರೆ, ಮಿಕ್ಕವೆಲ್ಲ ಗೌಣ; ಎಲ್ಲಕ್ಕಿಂತ ದೊಡ್ಡ ಸಮಸ್ಯೆ ಇಲ್ಲಿ ತನ್ನೆದುರಿಗಿದೆ ಎನ್ನುವಂತೆ ಅಚಲವಾಗಿ ನಿಂತು ತಲೆ ಆಡಿಸಿದರು ಕಲಾಂ.

“ಈಗ, ನಿಮಗೆ ಮೆಚ್ಚಿಗೆಯಾಗುವ ಯಾವುದಾದರೂ ಸಂಗೀತ ಇದ್ದರೆ ಹೇಳಿ” ಎಂದರು.

“ಸಂಗೀತ ಅಂದರೆ.. ಉದಾಹರಣೆಗೆ ಸಿನೆಮಾ ಸಂಗೀತ. ಶಬ್ದಗಳಿದ್ದರೆ ನೆನಪಿಟ್ಟುಕೊಳ್ಳುವುದು ಸುಲಭ” ಎಂದೆ ನಾನು.

ಕವಿದಿದ್ದ ಗಾಢ ಮಂಜು ಕರಗಿ ದಾರಿ ಸ್ಪಷ್ಟವಾದಾಗ ಖುಷಿ ಪಡುವ ಡ್ರೈವರ್’ನ ಹಾಗೆ ಮುಗುಳು ನಕ್ಕು “ಯಾವುದಾದರೂ ಉದಾಹರಣೆ ಕೊಡಬಹುದೆ?” ಎಂದು ನನ್ನ ಮುಖ ನೋಡಿದರು.

“ಉದಾಹರಣೆಗೆ, ಹಂಸಲೇಖ, ಕಲ್ಯಾಣ್, ಜಯಂತ್ ಕಾಯ್ಕಿಣಿ ಮುಂತಾದವರು ಬರೆಯೋ ಸಾಲುಗಳು” ಎಂದೆ. ಕಾಲೇಜಿನ ದಿನಗಳಲ್ಲೊಮ್ಮೆ ನಾನೂ ಒಂದು ಪದ್ಯ ಹಾಡಿದ್ದುಂಟು. ಅದೇ ನೆನಪಲ್ಲಿ “ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು! ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು!” ಎಂದು ಗುನುಗುನಿಸಿದೆ.

ಕಲಾಂ ಖುಷಿಯಿಂದ ತಲೆಯಾಡಿಸಿದರು. “ಗುಡ್!” ಎಂದರು.

ಅಲ್ಲಿ ಗೋಡೆಯಲ್ಲಿ ಕೂರಿಸಿದ್ದ ಒಂದು ಕಪಾಟಿನ ಗಾಜಿನ ಬಾಗಿಲು ತೆರೆದು ಅಲ್ಲಿದ್ದ ಹಲವು ಸಿಡಿಗಳನ್ನು ಒಂದೊಂದಾಗಿ ನೋಡಿ, ಕೊನೆಗೆ ಒಂದನ್ನು ಎತ್ತಿ ಆಹಾ ಎಂದು ಹತ್ತಿರದಲ್ಲಿದ್ದ ಸಿಡಿ ಪ್ಲೇಯರಿಗೆ ತುರುಕಿದರು. “ಕಣ್ಗಳ್ ಇರಂಡಾಲ್ ಉನ್ ಕಣ್ಗಳ್ ಇರಂಡಾಲ್, ಎನ್ನೈ ಕಟ್ಟಿ ಇಳುತ್ತಾಯ್ ಇಳುತ್ತಾಯ್ ಪೋದಾದಿನೆ” ಎಂಬ ಮಧುರವಾದ ಹಾಡಿನ ತಕಧಿಮಿಯಂತಹ ಸ್ವರ ತರಂಗಗಳು ಕೋಣೆಯನ್ನು ತುಂಬಿಕೊಂಡವು. ಪದ್ಯದ ಮೂರ್ನಾಲ್ಕು ಚರಣಗಳಾದ ಮೇಲೆ ಪ್ಲೇಯರ್ ಆಫ್ ಮಾಡಿದರು. “ಈಗ ಹೇಳಿ, ನೀವು ಕೇಳಿದ್ದೇನು?”

ಆ ಪ್ರಶ್ನೆಗೆ ಹೇಗೆ ಉತ್ತರ ಕೊಡಬೇಕೆಂದು ತಿಳಿಯಲಿಲ್ಲ. ಕೇಳಿದ ಹಾಡನ್ನು ಮತ್ತೆ ಅದೇ ರಾಗದಲ್ಲಿ ಹಾಡಿ ಒಪ್ಪಿಸುವುದು ಉಚಿತ ಎನ್ನಿಸಿತು. ಹಾಗೇ ಮಾಡಲು ಪ್ರಯತ್ನಿಸಿದೆ. ಧ್ವನಿ ಎಲ್ಲಿ ಒಡೆದು ಹಾಸ್ಯಾಸ್ಪದವಾಗುತ್ತದೋ ಅಂತ ಸ್ವಲ್ಪ ಅಳುಕೂ ಆಯಿತು. ಪುಣ್ಯ, ಹಾಗೇನೂ ಆಗಲಿಲ್ಲ. ಕಲಾಂ ಅವರ ಮುಖ ಸೂರ್ಯೋದಯದಂತೆ ಹೊಳೆಯಿತು.

ನನ್ನ ಪದ್ಯ ಮುಗಿಯುವ ಹೊತ್ತಿಗೆ “ನೋಡಿದ್ರಾ, ಯಾರು ಹೇಳಿದ್ದು ನಿಮಗೆ ಸಂಗೀತ ಗೊತ್ತಾಗೋದಿಲ್ಲ ಅಂತ?” ಎಂದು ಖುಷಿಯಿಂದ ಸಣ್ಣಗೆ ಕುಪ್ಪಳಿಸಿ ಬೆನ್ನು ಚಪ್ಪರಿಸಿದರು. ಹಾಗೇನೂ ಇಲ್ಲ; ಈ ಪದ್ಯ ನಾನು ಹಲವು ಸಲ ಕೇಳಿದ್ದೆ; ಒಂದಷ್ಟು ಸಲ ಗುನುಗುನಿಸಿಯೂ ಇದ್ದೆ; ಹಾಗಾಗಿ ಈ ಪದ್ಯ ಹಾಡಿದ ಮಾತ್ರಕ್ಕೆ ನನಗೆ ಸಂಗೀತ ಬರುತ್ತೆ ಅನ್ನುವ ತೀರ್ಮಾನಕ್ಕೆ ಬರೋದು ತಪ್ಪಲ್ವಾ ಎಂದೆ.

“ನಾನ್‍ಸೆನ್ಸ್” ಅಂದುಬಿಟ್ಟರು ಕಲಾಂ! “ಯಾಕೆ ತಪ್ಪು? ನಿಮಗೆ ಶಾಲೇಲಿ ಲೆಕ್ಕ ಹೇಳಿಕೊಟ್ಟದ್ದು ನೆನಪಿದೆಯೋ? ಒಂದನೇ ಕ್ಲಾಸಲ್ಲಿ ಒಂದು, ಎರಡು, ಮೂರು ಅಂತ ನಂಬರ್’ಗಳನ್ನು ಕಲಿಸಿದ ಮೇಲೆ ನಿಮ್ಮ ಟೀಚರು ಭಾಗಾಕಾರದ ಲೆಕ್ಕ ಹೇಳಿ ಕೊಟ್ಟಿದ್ದರೆ ಏನಾಗ್ತಿತ್ತು? ನಿಮಗೆ ಅದನ್ನು ಬಿಡಿಸೋದು ಸಾಧ್ಯವಿತ್ತೆ?” ಎಂದು ಪ್ರಶ್ನೆ ಹಾಕಿ ನನ್ನ ಮುಖ ನೋಡಿದರು.

“ನನ್ನಾಣೆ ಇಲ್ಲ!”

“ಹಾಗೆ ಹೇಳಿ!” ಎಂದ ಕಲಾಂ ಕಣ್ಣು ಮತ್ತೆ ಸ್ಪಟಿಕದಂತೆ ಮಿಂಚಿದವು. “ಸಂಖ್ಯೆಗಳನ್ನು ಕಲಿತ ಮಾತ್ರಕ್ಕೆ ಭಾಗಾಕಾರಕ್ಕೆ ಹೋಗಿಬಿಟ್ಟಿದ್ದರೆ ನಿಮಗೆ ಶಾಕ್ ಆಗಿಬಿಡ್ತಾ ಇತ್ತು. ನಿಮ್ಮ ಟೀಚರ್ ಮಾಡಿದ ಆ ಒಂದು ಸಣ್ಣ ತಪ್ಪಿನಿಂದ ನೀವು ಸಂಪೂರ್ಣವಾಗಿ ಇಳಿದುಹೋಗ್ತಾ ಇದ್ರಿ. ಗಣಿತ ನಿಜವಾಗಿಯೂ ಕಬ್ಬಿಣದ ಕಡಲೆ ಆಗಿ ಹೋಗ್ತಿತ್ತು ಆಗ. ಯಾವ ಲೆಕ್ಕವನ್ನೂ ಕಲಿಯುವುದಕ್ಕೆ ಬೇಕಾದ ಮನಸ್ಥಿತಿ ಇರುತ್ತಿರಲಿಲ್ಲ. ಭಾಗಾಕಾರ ಕೂಡ ನೀವು ಜನ್ಮ ಪೂರ್ತಿ ಕಲಿಯುತ್ತಿರಲಿಲ್ಲ”, ಕಲಾಂ ಒಬ್ಬ ನುರಿತ ಮನೋ ವಿಜ್ಞಾನಿಯಂತೆ ನನ್ನೆದುರು ನಿಂತು ಕಣ್ಣಲ್ಲಿ ಕಣ್ಣಿಟ್ಟು ವಿವರಿಸುತ್ತಿದ್ದರು. “ಅದಕ್ಕೇ ನೋಡಿ, ಯಾವ ಗುರುಗಳೂ ಅಂಥಾ ಪೆದ್ದು ತಪ್ಪು ಮಾಡೋದಿಲ್ಲ. ಅವರು ನಿಮ್ಮನ್ನು ಒಂದೊಂದಾಗಿ ಮೆಟ್ಟಿಲು ಹತ್ತಿಸ್ತಾರೆ. ನಂಬರ್ಸ್ ಆದ ಮೇಲೆ ಕೂಡಿಸೋದು ಹೇಳಿಕೊಡ್ತಾರೆ. ಎರಡು ಅಂಕೆಗಳನ್ನ, ಮೂರು ಸಂಖ್ಯೆಗಳನ್ನ, ಹಾಗೇ ಹಲವಾರು ಸಂಖ್ಯೆಗಳನ್ನ ಕೂಡುವ ನೈಪುಣ್ಯ ನಿಮಗೆ ಬಂತು ಅಂತ ಖಾತ್ರಿಯಾದ ಮೇಲೆ ಮುಂದಿನ ಹೆಜ್ಜೆ. ಭಾಗಾಕಾರದ ಲೆಕ್ಕ ಬರುವ ಹೊತ್ತಿಗೆ ನೀವು ಕೂಡಿಸುವ, ಕಳೆವ ಲೆಕ್ಕಗಳಲ್ಲಿ ಪಂಡಿತ ಆಗಿ ಬಿಟ್ಟಿರುತ್ತೀರಿ. ಅಲ್ಲವೆ?”

ನಾನು ಸಮ್ಮೋಹಿನಿಗೆ ಒಳಗಾದ ವ್ಯಕ್ತಿಯಂತೆ ಹ್ಞೂ ಎಂದು ತಲೆಯಾಡಿಸಿದೆ.

“ಸಂಗೀತ ಕೂಡ ಹಾಗೆಯೇ. ಒಂದೊಂದಾಗಿ ಮೆಟ್ಟಿಲು ಹತ್ತಿದರೆ ಆಯಾಸವೇ ಇಲ್ಲ. ಈಗ ಇದೇ ನೋಡಿ. ಎಷ್ಟು ಸುಲಭ ಇದೆ ಈ ಪದ್ಯ. ರೀತಿ ಗೌಳ ಅಂತಾರೆ ಈ ರಾಗಕ್ಕೆ. ನಂಬರುಗಳನ್ನು ಕೂಡಿಸೋ ಕೆಲಸ ಇದೆಯಲ್ಲ; ಅಷ್ಟು ಸಿಂಪಲ್ ಇದು.” ಎಂದು ಹೇಳುತ್ತಿರುವಾಗಲೇ ಮತ್ತೊಂದು ಸಿಡಿ ಹುಡುಕಿ ತೆಗೆದು ಪ್ಲೇಯರಿಗೆ ಸಿಕ್ಕಿಸಿದರು. “ಚಿನ್ನಕಣ್ಣನ್ ಅಳೈಕ್ಕಿರಾನ್ ” ಎಂಬ ಪದ್ಯ ಬಂತು. ಇಳಯರಾಜರ ಸಂಗೀತ ಅಂತ ಕಣ್ಮುಚ್ಚಿ ಹೇಳಬಹುದು; ಅಂಥಾ ಮೆಲೊಡಿ! “ಇದೂ ಅದೇ ರಾಗ! ಯೆಸ್, ಯೆಸ್, ಸಂಶಾಯಾನೇ ಇಲ್ಲ!” ಎಂದು ಉದ್ವೇಗದಿಂದ ಚೀರಿದೆ. ಎರಡು ಸಂಖ್ಯೆಗಳನ್ನು ಕೂಡಿಸಿ ಉತ್ತರ ಪಡೆದ ಹುಡುಗನಂತೆ ಹೃದಯ ತಬಲವಾಗಿತ್ತು ನನಗೆ.

ಅವರು ಹುಡುಕಿ ತೆಗೆದು ಇನ್ನೊಂದು ಪದ್ಯ ಹಾಕಿದರು. “ನುಡಿಸಲು ನೀನು ನುಡಿಯುವೆ ನಾನು, ನಾನೊಂದು ಗೊಂಬೆ ನೀ ಸೂತ್ರಧಾರಿ, ನಿನ್ನ ಇದಿರು ನಾ ಪಾತ್ರಧಾರಿ ” ಹಾಡು ತೇಲಿ ಬಂದು ಕೋಣೆಯನ್ನು ಅಗರಬತ್ತಿಯ ಸುವಾಸನೆಯಂತೆ ತುಂಬಿಕೊಂಡಿತು. ಹಾಗೇ ಕಣ್ಣು ಮುಚ್ಚಿದೆ. ಲಕ್ಷ್ಮೀ ಮತ್ತು ಜೈ ಜಗದೀಶರ ಮುಖಗಳು ಮನಃಪಟಲದಲ್ಲಿ ಮೂಡಿದವು. ತುಟಿಗಳು ನನಗೆ ಗೊತ್ತಿಲ್ಲದಂತೆಯೇ ಹಾಡಿನೊಂದಿಗೆ ಹೆಜ್ಜೆ ಹಾಕಿದವು. “ವೀಣೆಯು ನಾನು, ವೈಣಿಕ ನೀನು, ತಂತಿಯ ಮೀಟದೆ ನುಡಿಯುವುದೇನು?”ಎನ್ನುತ್ತ ಪದ್ಯ ಮುಂದುವರಿಯಿತು. ಅದು ಮುಗಿವ ಹೊತ್ತಿಗೆ, ಕಲಾಂ ಅವರು, “ನೋಡಿ, ಅದು ಹಿಂದೋಳ. ತುಂಬ ಆಹ್ಲಾದಕರವಾದ ರಾಗ. ಆ ರಾಗಕ್ಕೆ ಹಸುಗಳು ಕೂಡ ಹಾಲು ಕರೆಯೋದನ್ನು ನಿಲ್ಲಿಸಿ ಕಿವಿ ನೆಟ್ಟಗಾಗಿಸಿ ನಿಂತುಕೊಂಡು ಬಿಡ್ತವೆ. ಈಗ ಸ್ವಲ್ಪ ತುಂಟಾಟ ಇರುವ ರಾಗ ಹಾಕ್ತೀನಿ ನೋಡಿ. ಖರಹರಪ್ರಿಯ ಅಂತ. ನನ್ನ ಇಷ್ಟದ ರಾಗವೂ ಹೌದು, ಇಷ್ಟದ ಗಾಯಕ ಹಾಡಿದ್ದೂ ಹೌದು” ಎಂದು ಮತ್ತೆ ಇನ್ನಾವುದೋ ಸಿಡಿ ಎತ್ತಿದರು. “ಆರಾಧಿಸುವೇ ಮದನಾರಿ! ಆದರಿಸು ನೀ ದಯ ತೋರಿ! ಅಂತರಂಗದಲಿ ನೆಲೆಸಿರುವೆ,ಆಂತರ್ಯ ತಿಳಿಯದೆ ಏಕಿರುವೆ? ” ಎಂಬ ಬಭ್ರುವಾಹನದ ಹಾಡು ಅದು. ಮೈಮನಸ್ಸಿನ ತುಂಬ ಅರ್ಜುನ ಸಂನ್ಯಾಸಿಯೇ ತುಂಬಿಕೊಂಡಂತಾಯಿತು.

ಆ ಹಾಡು ಮುಗಿದ ಮೇಲೆ, ಕಲಾಂ, “ಇದನ್ನು ಈಗ ನೀವಾಗಿ ಒಮ್ಮೆ ಪೂರ್ತಿ ಹಾಡಿ. ನನಗಾಗಿ” ಎಂದರು.

ಈಗ ಮೊದಲಿನಷ್ಟು ಅಳುಕಾಗಲಿಲ್ಲ. ಆದರೂ ಪೂರ್ತಿಯಾಗಿ ಹಾಡಲು ಬರುತ್ತದೋ ಎಂದು ಸಣ್ಣ ಭಯವಾಯಿತು ಅಷ್ಟೆ. ಹಾಡಿಯೇ ಹಾಡಿದೆ. ನನಗೇ ಅಚ್ಚರಿಯಾಗುವಂತೆ ಕೊನೆಯ ಚರಣದವರೆಗೂ ಸುಖವಾಗಿ ಬಂದು ಬಿಟ್ಟೆ! ಕಲಾಂ ಅವರ ಮುಖ ಪ್ರಸನ್ನವಾಗಿತ್ತು. ಕಾಲೇಜಿನಲ್ಲಿ ರ್ಯಾಂಕ್ ಪಡೆದು ನಾನು ಭಾಷಣ ಮಾಡಿದ್ದಾಗ ಅಪ್ಪನ ಮುಖ ಹೀಗೆಯೇ ಅದ್ಭುತವಾಗಿ ಹೊಳೆದಿದ್ದನ್ನು ಕಂಡಿದ್ದೆ. ಕಲಾಂ ಕೂಡ ಈಗ ಅದೇ ಬಗೆಯ ತೃಪ್ತಿಯನ್ನು ನನ್ನಿಂದ ಪಡೆದರು ಅನ್ನಿಸಿತು. “ವಂಡರ್‍ಫುಲ್! ಅದ್ಭುತ, ಅದ್ಭುತವಾಗಿ ಹಾಡಿದ್ರಿ! ನನ್ನ ಮನಸ್ಸನ್ನು ಗೆದ್ದು ಬಿಟ್ಟಿರಿ” ಎಂದರು. ಆ ಹೊಗಳಿಕೆ ಕೇಳಿ ಗಾಳಿಯಲ್ಲಿ ತೇಲಾಡಿದ ಅನುಭವವಾಯಿತು ನನಗೆ.

“ನೋಡಿ, ನೀವು ಅಣ್ಣಾವ್ರ ಸಿನೆಮಾಗಳನ್ನು ತುಂಬ ಎಂಜಾಯ್ ಮಾಡ್ತೀರಿ ಅಂತ ಕಾಣುತ್ತೆ. ಇಲ್ಲೊಂದು ಅನುಪಮವಾದ ಹಾಡಿದೆ. ತೋಡಿ ಎಂಬ ರಾಗದಲ್ಲಿ. ಈ ರಾಗ ಗಂಗೆಯ ಹಾಗೆ. ಪ್ರಶಾಂತ, ರುದ್ರ, ವೈಯ್ಯಾರ, ಗಂಭೀರ, ಅಳುಕು, ಬಳುಕು ಎಲ್ಲವೂ ಇರುವಂಥ ಹೃದಯಂಗಮ ರಾಗ ಇದು. ಕೇಳಿ, ಕೇಳಿ!” ಎಂದು ಕಲಾಂ ಇನ್ನೊಂದು ಸಿಡಿಯನ್ನು ಹುಡುಕಿ ತೆಗೆದು ಹಾಕಿದರು. ಅಣ್ಣಾವ್ರ ಜೀವನಚೈತ್ರದ ಹಾಡು. ಹಿಮಾಲಯದ ಉತ್ತುಂಗದಲ್ಲಿ ನಿಂತು ಹಾಡುವ ರಸಪಾಕ. “ನಾದಮಯಾ.. ಈ ಲೋಕವೆಲ್ಲಾ…!” ಅದರ ಮೊದಲೆರಡು ಚರಣ ಕೇಳಿಸಿ ನನ್ನನ್ನು ನೋಡಿದರು. ಇದನ್ನೂ ಹಾಡಿ ತೋರಿಸು ಎನ್ನುವಂತೆ! ನಾನು ನಾಚಿಕೆ, ಅಳುಕು ಮರೆತು ಎದೆಯುಬ್ಬಿಸಿ ಹಾಡಿದೆ. ಸಂಗೀತದ ಬಗ್ಗೆ ಭಯ ಹೊರಟು ಹೋಗಿ ಆತ್ಮವಿಶ್ವಾಸ ಬಂದಿತ್ತು. ಅದು ಕೂಡ ಕಲಾಂ ಮೇಷ್ಟ್ರಂತೆಯೇ ನನ್ನ ಆತ್ಮೀಯ ಗೆಳೆಯ ಅನ್ನಿಸುವ ಭಾವ ಬಂದಿತ್ತು. ನನ್ನ ಹಾಡು ಮುಗಿದ ಕೂಡಲೇ ಕಲಾಂ ತಮ್ಮೆರಡೂ ಕೈಗಳನ್ನೆತ್ತಿ ಥಂಬ್ಸ್ ಅಪ್ ಎಂದರು.

ಅದಾಗಿ ಒಂದು ಡಜನ್ ಹಾಡುಗಳೇ ಪಟಪಟನೆ ಬಂದು ಹೋದವು. ಚಾರುಕೇಶಿಯಲ್ಲಿ “ಬೊಂಬೆಯಾಟವಯ್ಯಾ! “, ಮೋಹನ ಕಲ್ಯಾಣಿಯಲ್ಲಿ “ಭುವನೇಶ್ವರಿಯಾ ನೆನೆ ಮಾನಸವೇ “, ಪೂರ್ವಿ ಕಲ್ಯಾಣಿಯಲ್ಲಿ “ನಂಬಿದೆ ನಿನ್ನ ನಾದದೇವತೆಯೆ” – ಇವೆಲ್ಲ ಬಂದವು. “ನಿಲಾ ಕಾಯ್ಗಿರದು ನೇರಂ ತೇಯ್ಗಿರದು ಯಾರುಂ ರಸಿಕವಿಲ್ಲಯೇ ” ಎಂಬ ಮಾಂಡ್ ರಾಗದ ಫಿಲ್ಮಿಗಾನವೂ ಬಂತು. ಇವನ್ನೆಲ್ಲ ಸಿನೆಮ ಗೀತೆಗಳಾಗಿ ಕೇಳಿದ್ದೆನೇ ಹೊರತು, ಅವುಗಳ ಕಾಲು ಕರ್ನಾಟಕ ಸಂಗೀತದ ನೆಲದಲ್ಲೇ ನಿಂತಿವೆ ಎನ್ನುವದನ್ನು ತಿಳಿದಿರಲಿಲ್ಲ. ನನ್ನೊಳಗೆ ಹಬ್ಬುತ್ತಿದ್ದ ಖುಷಿಯ ಅಲೆಗಳ ಅಂದಾಜಾದರೂ ಎದುರಿದ್ದ ಮಹಾತ್ಮರಿಗೆ ಆಗಿತ್ತೋ ಇಲ್ಲವೋ. ಅವರಂತೂ ಸದ್ಯಕ್ಕೆ ಜಗತ್ತಿನಲ್ಲಿ ನಡೆಯಬೇಕಾದ ಅತಿ ಮುಖ್ಯ ಕೆಲಸ ಇದೊಂದೇ ಎನ್ನುವಂತೆ ಒಂದಾದ ಮೇಲೊಂದು ಹಾಡು ಹಾಕಿ ನನಗೆ ಕೇಳಿಸುವುದರಲ್ಲಿ ತನ್ಮಯರಾಗಿದ್ದರು. ಹಾಡುವ ಪದ್ಯಗಳಾದ ಮೇಲೆ ಕೊನೆಯದಾಗಿ ಒಂದೆರಡು – ಪದಗಳೇ ಇಲ್ಲದ ಕೇವಲ ಸಂಗೀತವಿದ್ದ ಸಿಡಿಗಳನ್ನು ಪ್ಲೇ ಮಾಡಿದರು. ಅವುಗಳಲ್ಲಿ ಬರುವ ಸಂಗೀತವನ್ನು ನಾನೂ ಸಿಳ್ಳೆಯ ಜೊತೆ ಅನುಕರಣ ಮಾಡಬಹುದು ಎನ್ನುವ ಸ್ವಾತಂತ್ರ್ಯ ಸಿಕ್ಕಿತು. ಕೆಲವೊಂದು ಕಡೆಗಳಲ್ಲಿ ಸಂಗೀತದ ಎತ್ತರಕ್ಕೆ ನನ್ನ ಸಿಳ್ಳೆ ಮುಟ್ಟುವುದಿಲ್ಲ ಎನ್ನಿಸಿದಾಗ, ಕಲಾಂ ಮೇಷ್ಟ್ರು ತನ್ನ ಕತ್ತು ಹಿಂದಕ್ಕೆ ಬಾಗಿಸಿ, ಹುಬ್ಬು ಎತ್ತರಿಸಿ, ಬಾಯಿ ತೆರೆದು, ನನಗೆ ನೂಕು ಬಲ ಕೊಟ್ಟಂತೆ ನಟಿಸಿದರು. ಆ ಪದ್ಯಗಳು ನಿಲ್ಲುತ್ತಲೆ ಪ್ಲೇಯರನ್ನು ಆಫ್ ಮಾಡಿ ನನ್ನ ಬಳಿ ಬಂದು ನನಗಿಂತ ಹೆಚ್ಚಿನ ಹುರುಪಿನಿಂದ ಘೋಷಿಸಿದರು: “ಯಂಗ್ ಮ್ಯಾನ್! ಈಗ ನೀವು ತ್ಯಾಗರಾಜರ ಕೃತಿಯನ್ನು ಕೇಳಲು ತಯಾರಾಗಿದ್ದೀರಿ!”

ನಾವು ಆ ಕೋಣೆಯಿಂದ ಹೊರ ಬಿದ್ದೆವು. ಮತ್ತೆ ಕೆಳಗೆ ನಡೆಯುತ್ತಿದ್ದ ಸಂಗೀತ ಕಚೇರಿಯ ಪಡಸಾಲೆ ಹೊಕ್ಕೆವು. ನಿಶ್ಶಬ್ದವಾಗಿ ನಡೆದುಬಂದು ನಮ್ಮ ಕುರ್ಚಿಗಳಲ್ಲಿ ಕೂತೆವು. ವೇದಿಕೆಯಲ್ಲಿದ್ದ ಗಾಯಕರು ಯಾವುದೋ ಹೊಸ ಪದ್ಯವನ್ನು ಹಾಡಲು ಪ್ರಾರಂಭಿಸುತ್ತಿದ್ದ ಕ್ಷಣ. ಕಲಾಂ ನನ್ನ ಮೊಣ ಕಾಲಿಗೆ ಮೆಲ್ಲನೆ ಬಡಿದು ಆತ್ಮವಿಶ್ವಾಸದ ಚಿಲುಮೆ ಎಬ್ಬಿಸಿದರು. “ಸುಮ್ಮನೆ ಆಲಿಸಿ. ರಾಗ-ತಾಳಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ” ಎಂದು ಗುಟ್ಟಾಗಿ ಕಿವಿಮಾತನ್ನೂ ಹೇಳಿದರು.

ಸಂಗೀತಗಾರರು ತಮ್ಮ ದನಿಯನ್ನು ಸರಿಪಡಿಸಿಕೊಂಡರು. ಪಕ್ಕವಾದ್ಯದ ಮಂದಿ ತಾವೊಂದು ಮಹೋನ್ನತ ಕೃತಿಯನ್ನು ನುಡಿಸಲು ಸಿದ್ಧರಾಗುವಂತೆ ಕುಳಿತಲ್ಲೇ ಮಿಸುಕಾಡಿದರು. “ಎಂದರೋ ಮಹಾನುಭಾವುಲು, ಅಂದರಿಕಿ ವಂದನಮು (http://tinyurl.com/kalamrondige11, http://tinyurl.com/kalamrondige12, http://tinyurl.com/kalamrondige13)” ಎಂಬ ಹಾಡು ಶುರುವಾಯಿತು. ಪಡಸಾಲೆಯಲ್ಲಿ ಕೂತ ತಲೆಗಳು ಮಲಯ ಮಾರುತಕ್ಕೆ ಬಳುಕುವ ಹೂವಿನ ದಂಟುಗಳಂತೆ ಓಲಾಡಿದವು. ನಾನು ಕಣ್ಣು ಮುಚ್ಚಿದೆ. ಮನಸಿನ ಪರದೆಯಲ್ಲಿ ಕಲಾಂ ಅವರ ಮುಖ ಕಾಣಿಸಿಕೊಂಡಿತು. ನಾನು ಹಾಡನ್ನು ಆಸ್ವಾದಿಸುವುದನ್ನೇ ತದೇಕಚಿತ್ತದಿಂದ ನೋಡುತ್ತ ಕಣ್ತುಂಬಿಕೊಳ್ಳುತ್ತಿರುವಂತೆ ಕೂತಿದ್ದರು. ಹಾಡುಗಾರರ ಜೊತೆಗೆ ನನಗರಿವಿಲ್ಲದಂತೆಯೇ “ಎಂದರೋ ಮಹಾನುಭಾವುಲು…” ಎಂದು ಪದ್ಯ ಪೂರ್ತಿ ಮಾಡಿದೆ. ಸಂಗೀತಗೋಷ್ಠಿ ಮುಕ್ತಾಯವಾದಾಗ, ಎಲ್ಲರೊಡನೆ ನನ್ನ ಚಪ್ಪಾಳೆಗಳನ್ನೂ ಬೆರೆಸಿದೆ. ಆದರೀಗ ಅವು ಕಾಟಾಚಾರಕ್ಕೆ ಬಡಿದ ಚಪ್ಪಾಳೆಗಳಾಗಿರಲಿಲ್ಲ.

ಕಾರ್ಯಕ್ರಮ ಮುಗಿದ ಮೇಲೆ ಮಾತಾಡಿದ ಆತಿಥೇಯ ಹೆಂಗಸು ನನ್ನತ್ತ ಒಂದು ಹರಿತ ನೋಟ ಎಸೆದು “ಕ್ಷಮಿಸಿ ಡಾಕ್ಟರ್ ಅಬ್ದುಲ್ ಕಲಾಂ ಅವರೇ, ನೀವು ಈ ಕಾರ್ಯಕ್ರಮದ ಬಹು ಮುಖ್ಯ ಭಾಗವನ್ನು ಮಿಸ್ ಮಾಡಿಕೊಳ್ಳಬೇಕಾಗಿ ಬಂದದ್ದಕ್ಕೆ” ಎಂದಳು. ಕಲಾಂ ಸ್ವಲ್ಪವೂ ಬೇಸರಿಸಿಕೊಳ್ಳದೆ, ತಡವರಿಸದೆ, “ನನ್ನನ್ನೂ ನೀವು ಕ್ಷಮಿಸಬೇಕು. ನಾನು ಈ ನನ್ನ ಗೆಳೆಯರ ಜೊತೆ ಸೇರಿ, ಅದೇ ಸಮಯದಲ್ಲಿ ಬೇರೊಂದು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾಗಿ ಬಂತು. ಮನುಷ್ಯ ತನ್ನ ಪೂರ್ಣ ಸಾಮರ್ಥ್ಯವನ್ನು ಬಸಿದು ಮಾಡಬಹುದಾದ ಅತ್ಯಂತ ಮಹತ್ತರವಾದ ಕೆಲಸವನ್ನು ನಾವಿಬ್ಬರೂ ಮಾಡುತ್ತಿದ್ದೆವು.” ಎಂದರು.

“ಹೌದೇ? ಏನದು?” ಆಕೆಯ ಹುಬ್ಬು ಮೇಲಕ್ಕೇರಿದವು.

ಕಲಾಂ ಅವರು ತನ್ನ ಎಡಗೈಯನ್ನು ನನ್ನ ಭುಜದ ಮೇಲೆ ಹಾಕಿ, ಖಚಿತವಾದ ಧ್ವನಿಯಲ್ಲಿ ಹೇಳಿದರು: “ಸಾಗರ ಇತ್ತು, ದೋಣಿ ಇತ್ತು. ಹುಟ್ಟು ಹಾಕುವುದನ್ನು ಕಲಿತೆವು. ಗಗನ ಇತ್ತು, ಏಣಿ ಇತ್ತು. ತಾರೆಗಳನ್ನು ಮಾತಾಡಿಸಿ ಬಂದೆವು. ಸೌಂದರ್ಯದ ಗಡಿರೇಖೆ ಕರೆಯುತ್ತಿತ್ತು. ಅದನ್ನೂ ಹತ್ತಿ ಆಚೆಗಿದ್ದ ಹೊಸ ಜಗತ್ತನ್ನು ಕಂಡೆವು”.

ಮೂಲ: ಜೆರೋಮ್ ವೀಡ್‍ಮನ್‍ರ “ದ ನೈಟ್ ಐ ಮೆಟ್ ಐನ್‍ಸ್ಟೈನ್”

(ಈ ಕತೆಯ ಜೊತೆ ಇನ್ನೂ ಹದಿಮೂರು ಕತೆಗಳಿರುವ “ಮನ ಮೆಚ್ಚಿದ ಹುಡುಗಿ” ಇದೇ ತಿಂಗಳು ಇಪ್ಪತ್ತಾರನೇ ತಾರೀಖು(26 June 2016) ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಬಿಡುಗಡೆಯಾಗುತ್ತಿದೆ. ಪರಭಾಷಾ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದವರು: ರೋಹಿತ್ ಚಕ್ರತೀರ್ಥ. ಕೃತಿಗೆ ಖ್ಯಾತ ಕತೆಗಾರ – ಕಾದಂಬರಿಕಾರ ಬೊಳುವಾರು ಮಹಮದ್ ಕುಂಞ ಮುನ್ನುಡಿ ಬರೆದಿದ್ದಾರೆ.)

rohith-article-pic

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!