ಪ್ರಚಲಿತ

ಜಾತ್ಯಾತೀತ ಜನತಾ ದಳ ವಿಲ ವಿಲ, ಭಿನ್ನ ಧಾರಿಯಲ್ಲಿ ತೆನೆ ಹೊತ್ತ ಮಹಿಳೆ

ರಾಷ್ಟ್ರ ರಾಜಕಾರಣದಲ್ಲಿ ಜನತಾ ಪರಿವಾರ ಒಂದು ಮಾಡಲು ಹೆಣಗುತ್ತಿರುವ ದೇವೇಗೌಡರು ಒಂದೆಡೆಯಾದರೆ, ರಾಜ್ಯದಲ್ಲಿ ಪಕ್ಷಕ್ಕಿರುವ ಅಸ್ತಿತ್ವವನ್ನು ಉಳಿಸಲಾಗದೇ ಪರದಾಡುತ್ತಿರುವ ಕುಮಾರಸ್ವಾಮಿ ಇನ್ನೊಂದೆಡೆ. ಹಾಸನ ರಾಜಕೀಯದಸಾರ್ವಭೌಮತ್ವವನ್ನೂ ದಿನೇ ದಿನೇ ಕಳೆದುಕೊಳ್ಳುತ್ತಿರುವ ರೇವಣ್ಣ. ಪಕ್ಷದೊಳಗೆ ಹೊಗೆಯಾಡುತ್ತಿರುವ ಅಸಮಾಧಾನ,ಕಾರ್ಯಕರ್ತರಲ್ಲಿ ಬತ್ತಿದ ಉತ್ಸಾಹ. ಗೌಡರ ಫ್ಯಾಮಿಲೀ ಪಾಲಿಟಿಕ್ಸ್ ಗೆ ಇತಿಶ್ರೀ ಹಾಡಲು ಶತಾಯ ಗತಾಯ ಪ್ರಯತ್ನಿಸುತ್ತಿರುವ ವಿರೋಧಿ ಪಾಳಯ.ಇದು ಜಾತ್ಯಾತೀತ ಜನತಾದಳದ ಸಧ್ಯದ ಪರಿಸ್ಥಿತಿ.

ಹೌದು. ಜನತಾ ಪರಿವಾರ ಒಡೆದು ಛಿದ್ರ ಛಿದ್ರವಾದಾಗ ದೇವೇಗೌಡರ ಕನಸಿನ ಕೂಸಾಗಿ ಸ್ಥಾಪನೆಯಾದದ್ದು ಜೆಡಿಎಸ್. ರಾಮಕೃಷ್ಣ ಹೆಗಡೆಯವರನ್ನು ಉಚ್ಚಾಟಿಸಿದ ನಂತರ ದಳದಲ್ಲಿ ದೇವೇಗೌಡರ ಹಿಡಿತ ಮತ್ತಷ್ಟು ಬಿಗಿಯಾಯಿತು.ಪಕ್ಷದಲ್ಲಿ ತನ್ನ ಮರ್ಜಿಯಲ್ಲದೇ ಬೇರೇನೂ ನಡೆಯಬಾರದು ಎಂಬ ಅಹಂ ಭಾವನೆ ಗೌಡರನ್ನು ಆವರಿಸಿತ್ತು. ವರುಷಗಳುರುಳುತ್ತಾ ಎರಡನೇ ದರ್ಜೆಯ ನಾಯಕರುಗಳು ಜೆಡಿಎಸ್ ಗೆ ಟಾಟಾ ಹೇಳಿ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಬೇರೆ ಪಕ್ಷಗಳತ್ತ ಮುಖ ಮಾಡತೊಡಗಿದರು. ಜೆಡಿಎಸ್ ಗೆ ಬಹಳ ದೊಡ್ಡ ಪೆಟ್ಟು ನೀಡಿದ್ದು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಳಗದ ನಿರ್ಗಮನ. ಆವಾಗ ನೆಲಕ್ಕೆ ಬಿದ್ದ ಜೆಡಿಎಸ್ ಇನ್ನೂ ಎದ್ದಿಲ್ಲ. ಎಲ್ಲೋ ಆವಾಗೊಮ್ಮೆ ಈವಾಗೊಮ್ಮೆ ರಾಜಕ್ಕೀಯವಾಗಿ ಮೇಲೇಳಲು  ಪ್ರಯತ್ನಿಸುತ್ತಿದೆಯಾದರೂ ಗೌಡರ ಕುಟುಂಬ ರಾಜಕಾರಣದ ವ್ಯಾಮೋಹದಲ್ಲಿ ಮತ್ತಷ್ಟು ಅಧಃಪತನ ಕಾಣುತ್ತಿದೆ.

ಮೊದಲೆಲ್ಲ ರಾಜಕೀಯ ಅತಂತ್ರತೆ ಪರಿಸ್ಥಿತಿಯಲ್ಲಿ ತಮ್ಮ ತಂತ್ರಗಳ ಮೂಲಕ ವಿರೋಧಿಗಳಿಗೆ ಚಮಕ್ ಕೊಡುತ್ತಿದ್ದ ಅಪ್ಪ ಮಗ ಈಗ ಖುದ್ದು ತಾವೇ ಬೆಪ್ಪಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.೨೦೧೪ರ ಜೂನ್ ನಲ್ಲಿ ವಿಧಾನಪರಿಷತ್ ಚುನಾವಣಾ ಟಿಕೆಟ್ ಗಾಗಿ ಕುಮಾರಸ್ವಾಮಿ ಕೋಟಿಗಟ್ಟಲೇ ಹಣ ಕೇಳುತ್ತಿರುವ ಆಡಿಯೋ ಟೇಪ್ ಹೊರ ಬಂದಾಗಲೇ ಜನ ಜೆಡಿಎಸ್ ಮೇಲೆ ಸಂಶಯದಿಂದ ನೋಡ ತೊಡಗಿದರು. ಆ ಸಲದ ಚುನಾವಣೆಯಲ್ಲಿ ರಾಜ್ಯಸಭೆಗೆ ಉದ್ಯಮಿ ಕುಪೇಂದ್ರ ರೆಡ್ಡಿ,ವಿಧಾನಪರಿಷತ್ ಗೆ ಮತ್ತೊಬ್ಬ ಉದ್ಯಮಿ ಸರವಣ,ರಿಯಲ್ ಎಸ್ಟೇಟ್ ಉದ್ಯಮಿ ಮಲ್ಲಿಕಾರ್ಜುನ, ಭೈರತಿ ಸುರೇಶ್ ಆಯ್ಕೆಯಲ್ಲಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕುಮಾರಸ್ವಾಮಿ ಮಾಡಿದ ಎಡವಟ್ಟು ಪಕ್ಷದ ಇವತ್ತಿನ ಸ್ಥಿತಿಗೆ ಪ್ರಮುಖ ಕಾರಣಗಳಲ್ಲೊಂದು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ನಂತರದ ದಿನಗಳಲ್ಲಿ ಕುಮಾರಸ್ವಾಮಿ ಆಪ್ತರಾದ ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ, ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ ಮುಂತಾದವರು ಬಹಿರಂಗವಾಗಿಯೇ ಪಕ್ಷದ ನಾಯಕತ್ವದ ವಿರುದ್ಧ ಮಾತನಾಡತೊಡಗಿದರು.ಇವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಕುಮಾರಸ್ವಾಮಿ ವಿಫಲರಾಗಿದ್ದು ಪಕ್ಷವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿತು. ಬಿಬಿಎಂಪಿ ಚುನಾವಣೆ ಮೈತ್ರಿ ಸಂದರ್ಭದಲ್ಲಿ ಜಮೀರ್ ಅಹ್ಮದ್ ಜೆಡಿಎಸ್ ಪ್ರಮುಖರನ್ನು ಸಂಪರ್ಕಿಸದೇ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರು. ತಮ್ಮ ಬದ್ಧ ವೈರಿ ಸಿದ್ಧರಾಮಯ್ಯ ಜೊತೆ ಮೈತ್ರಿ ಮಾಡಿಕೊಂಡಿದ್ದು ಇರಿಸು ಮುರಿಸು ಉಂಟು ಮಾಡಿತ್ತಾದರೂ ಬಿಜೆಪಿ ಹಣಿಯುವ ತಂತ್ರ ಮತ್ತು ಅಧಿಕಾರದ ಲಾಲಸೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರನ್ನು ಸುಮ್ಮನಾಗಿಸಿತು.

ಹೀಗೆ ಜೆಡಿಎಸ್ ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನೇ ತಂತ್ರಗಾರಿಕೆಯನ್ನಾಗಿ ಮಾಡಿಕೊಂಡ ಸಿದ್ದರಾಮಯ್ಯ ಜಮೀರ್ ನೇತೃತ್ವದ ಭಿನ್ನಮತೀಯ ಜೆಡಿಎಸ್ ಶಾಸಕರನ್ನು ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲು ದಾಳವನ್ನಾಗಿ ಬಳಸಿಕೊಂಡರು. ಇದರ ಮುಂದುವರಿದ ಭಾಗವೇ ಗೌಡರ ರಾಜಕೀಯ ಕರ್ಮಭೂಮಿ ಹಾಸನದಲ್ಲಿ ಅರಕಲಗೂಡು ಶಾಸಕ ಮಂಜು ಅವರನ್ನು ಮಂತ್ರಿಯಾಗಿಸಿದ್ದು. ದಶಕಗಳಿಂದ ಗೌಡರ ವಿರುದ್ಧ ಕತ್ತಿ ಮಸೆಯುತ್ತಾ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದ ಮಂಜು ಸಿದ್ಧರಾಮಯ್ಯ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ. ಹಾಸನದಲ್ಲಿ ಗೌಡರ ಕೋಟೆಯನ್ನು ಅಲ್ಲಾಡಿಸುವಲ್ಲಿ ಮಂಜು ತಕ್ಕ ಮಟ್ಟಿಗೆ ಯಶಸ್ಸು ಕಂಡಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಸಂಖ್ಯಾ ಬಲ ಹೊಂದಿದ್ದರೂ ವಿಧಾನ ಪರಿಷತ್ ಚುನಾವಣೆಯಲ್ಲಿ ಮಂಜು ತಂತ್ರಗಾರಿಕೆ ಮತ್ತು ಜೆಡಿಎಸ್ ಆಂತರಿಕ ಬೇಗುದಿಯಿಂದಾಗಿ ಪಟೇಲ್ ಶಿವರಾಂ ಮಖಾಡೆ ಮಲಗಿದ್ದರು. ನಂತರ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಪಡೆದಿದ್ದರೂ ಭವಾನಿ ರೇವಣ್ಣ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗುವುದನ್ನು ತಪ್ಪಿಸಲೂ ಯಶಸ್ವಿಯಾಗುತ್ತಾರೆ ಮಂಜು. ಹೀಗೆ ತನ್ನ ಭದ್ರ ಕೋಟೆಯಲ್ಲೇ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಜೆಡಿಎಸ್. ಗೌಡರ ಎರಡನೇ ಪುತ್ರ ರೇವಣ್ಣ ಹಾಸನಕ್ಕೆ ಮಾತ್ರ ತನ್ನ ರಾಜಕೀಯವನ್ನು ಸೀಮಿತಗೊಳಿಸಿದ್ದಾರೆ.

ಜೆಡಿಎಸ್ ನ ಮತ್ತೊಂದು ಭದ್ರಕೋಟೆ ಮಂಡ್ಯದಲ್ಲೂ ಚೆಲುವರಾಯಸ್ವಾಮಿ ಕೊಟ್ಟಿರುವ ಭಿನ್ನಮತದ ಏಟಿನಿಂದ ಜೆಡಿಎಸ್ ತತ್ತರಿಸಿ ಹೋಗಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅಭ್ಯರ್ಥಿ ಆಯ್ಕೆ ಮಾಡಿದ್ದಕ್ಕೆ ಚೆಲುವರಾಯಸ್ವಾಮಿ ಕುಮಾರಸ್ವಾಮಿಯವರ ನಾಯಕತ್ವದ ವಿರುದ್ಧ ಬಹಳ ದೊಡ್ದ ಮಟ್ಟದಲ್ಲಿ ಮುನಿಸಿಕೊಂಡಿದ್ದಾರೆ. ಇನ್ನು ಒಂದು ಕಾಲದ ಭದ್ರಕೋಟೆ ರಾಮನಗರದಲ್ಲೂ ಡಿಕೆಶಿ ಆರ್ಭಟದ ಮುಂದೆ ಕುಮಾರಸ್ವಾಮಿ ಪ್ರಭಾವ ಮಂಕಾಗಿ ಹೋಗಿದೆ. ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಶಾಸಕನಾಗಿದ್ದರೂ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ಮಾಡಿದ ಹೆಚ್ಡಿಕೆ ನಡೆ ಕೂಡಾ ರಾಮನಗರದ ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ಘಾಸಿ ಮಾಡಿದೆ.

ಸಧ್ಯದ ವಿಧಾನ ಪರಿಷತ್ ಮತ್ತು  ರಾಜ್ಯಸಭಾ ಚುನಾವಣೆಯಲ್ಲೂ ಜೆಡಿಎಸ್ ಮಾಡಿದ ದೊಡ್ಡ ತಪ್ಪು ಇದೇ. ಪಕ್ಷೇತರರನ್ನು ಚುನಾವಣೆಗೆ ತಿಂಗಳುಗಳ ಮೊದಲು ತನ್ನ ತೆಕ್ಕೆಗೆ ಹಾಕಿಕೊಂಡಿದ್ದ ಕುಮಾರಸ್ವಾಮಿಯವರು ತಮ್ಮ ಪಕ್ಷದ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ವಿಫಲರಾಗಿದ್ದರು. ಕಾಂಗ್ರೆಸ್ ಜೊತೆ ಮತ್ತೊಮ್ಮೆ ಮೈತ್ರಿಗೆ ಪ್ರಯತ್ನ ಮಾಡಿದ ಜಮೀರ್ ಕುಮಾರಸ್ವಾಮಿಯವರು ಅದಕ್ಕೊಪ್ಪದಿದ್ದಾಗ ಪಕ್ಷದ ವಿರುದ್ಧವೇ ತಿರುಗಿ ಬಿದ್ದರು.ಮೊದಲೇ ಜೆಡಿಎಸ್ ಮುಗಿಸಲು ಹವಣಿಸುತ್ತಿದ್ದ ಸಿದ್ದರಾಮಯ್ಯ, ಡಿಕೆಶಿ ಮುಖಾಂತರ ಪಕ್ಷೇತರರ ಜೊತೆ ಭಿನ್ನಮತೀಯ ಜೆಡಿಎಸ್ ಶಾಸಕರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಸರಿಯಾಗಿಯೇ ಟಾಂಗ್ ನೀಡಿದ್ದಾರೆ. ಪಕ್ಷದ ಅಭ್ಯರ್ಥಿಗಳನ್ನುಗೆಲ್ಲಿಸಿಕೊಳ್ಳುವಲ್ಲಿ ಜೆಡಿಎಸ್ ವಿಫಲವಾಗಿದೆ.

ಅಧಿಕಾರವಿಲ್ಲದೇ, ಅಧಿಕಾರ ಸಿಗುವ ಸಣ್ಣ ಆಶಾಕಿರಣವೂ ಇಲ್ಲದೇ ದಳಪತಿಗಳು ಹಾದಿ ಬೀದಿಯಲ್ಲಿ ಒಬ್ಬರನ್ನೊಬ್ಬರ ಮೇಲೆ ಕತ್ತಿ ಮಸೆಯುತ್ತಿದ್ದಾರೆ. ಹೊಸ ಮುಖಗಳು ಮತ್ತು ಪಕ್ಷನಿಷ್ಟರಾಗಿರುವ ಹಳೇ ಮುಖಗಳನ್ನು ಸೇರಿಸಿ ಪಕ್ಷ ಕಟ್ಟುವ ಕಲೆ ದೇವೇಗೌಡರಿಗೆ ಹೊಸತೇನಲ್ಲ. ಆದರೆ ತಳಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆ ಮತ್ತು ಕುಮಾರಸ್ವಾಮಿಯವರ ಮುಂದಿನ ದಿನಗಳ ಕಾರ್ಯತಂತ್ರದ ಮೇಲೆ ಜೆಡಿಎಸ್ ಭವಿಷ್ಯ ಅವಲಂಬಿತವಾಗಿರೋದು ಮಾತ್ರ ಸೂರ್ಯ ಚಂದ್ರರಷ್ಟೇ ಸತ್ಯ

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!