‘ವಾರಣಾಸಿ’!!
ಮೂರು ದಿನಗಳಿಂದ ರೈಲಿನಲ್ಲಿ ಕುಳಿತು ಕುಳಿತು ಬಸವಳಿದಿದ್ದ ನನಗೆ ‘ವಾರಣಾಸಿ’ ಎಂದು ದಪ್ಪಕ್ಷರದಲ್ಲಿ ಬರೆದಿದ್ದ ಆ ಹಳದಿ ಬೋರ್ಡು ಕಂಡಮೇಲೆ ಜೀವವೆ ಬಂದಂತಾಯಿತು.ಅಬ್ಬಾ! ಜೀವಮಾನದಲ್ಲಿ ಅಷ್ಟು ಕಾಲ ರೈಲು ಪ್ರಯಾಣ ಮಾಡಿದವನಲ್ಲ ನಾನು.ಆದರೂ ಮಾಡಲೇ ಬೇಕಾಯಿತು.ನಾನು ಯಲಹಂಕದ ಸ್ಕೂಲ್ ಆಫ್ ಜರ್ನಲಿಸಂನಲ್ಲಿ ಓದುತ್ತಿದ್ದಾಗ ನನ್ನ ರೂಮ್’ಮೇಟ್ ಆಗಿದ್ದ ಪ್ರಣವನನ್ನು ನೋಡದೆ ಉಳಿಯಲಾಗಲಿಲ್ಲ. ಅವನು ನಮ್ಮೂರು ನೋಡಲು ಬಾ ಬಾ ಎಂದು ಬಹಳ ಒತ್ತಾಯಿಸಿದ ಮೇಲೆ ನಾನು ಕೆಲಸಕ್ಕೆ ರಜಾ ಹಾಕಿ ಉತ್ತರ ಪ್ರದೇಶದ ಆ ಹಳ್ಳಿಗೆ ಹೋಗಲೇ ಬೇಕಾಯಿತು. ಆ ಹಳ್ಳಿಯ ಹೆಸರು ‘ಚುನಾರ್’. ಮಿರ್ಜಾಪೂರ್ ಜಿಲ್ಲೆಯ ‘ಚುನಾರ್’ ಬನಾರಸಿನಿಂದ ಸುಮಾರು ೨೦ ಕಿಮೀ ದೂರದಲ್ಲಿದೆ. ಒಳಗೆ ನಿಲ್ಲಲು ಇರುವೆಗೂ ಜಾಗವಿಲ್ಲದ ಹಸಿರು ಬಣ್ಣದ ವ್ಯಾನೊಂದನ್ನು ಬನಾರಸಿನಲ್ಲಿ ಏರಿ ಕೊನೆಗೂ ನಾನು ಚುನಾರ್’ಗೆ ಬಂದಿಳಿದೆ.
ಸುತ್ತಲೂ ಸಾಲು ಸಾಲು ಮರಗಳು, ಸುಮಾರು ನೂರು ನೂರು ಮೀಟರಿಗಳಿಗೊಂದು ಕಸದ ಬುಟ್ಟಿ, ಹಚ್ಚ ಹಸಿರೇ ತುಂಬಿಕೊಂಡ ತೋಟಗಳು,ನಡುವೆ ಅಚ್ಚನೀಲಿ ಬಣ್ಣದ ಸ್ವಚ್ಛ ರಸ್ತೆ!ಎಲ್ಲೆಂದರಲ್ಲಿ ಹಸನ್ಮುಖಿ ಜನರು,ವಿಶೇಷ ಮಣ್ಣಿನ ವಾಸನೆ! ನಮ್ಮಲ್ಲಿ ಎಲೆಕ್ಷನ್ ಸಮಯದಲ್ಲೂ ಇಂತಹ ವೈಚಿತ್ರ್ಯ ಕಾಣಲಾಗದು!ಇಲ್ಲಿ ಪ್ರಣವ್ ತ್ರಿಪಾಠಿಯವರ ಮನೆ ಎಲ್ಲಿ ಎಂದು ಕೇಳಿದ್ದಕ್ಕೆ ಓರ್ವ ಯುವಕ ‘ಓ ಅಣ್ಣನ ಮನೆಗಾ?’ ಎನ್ನುತ್ತಾ ನನ್ನ ಬ್ಯಾಗನ್ನು ಸರಕ್ಕನೇ ತನ್ನ ತೋಳಮೇಲೆ ಹೊತ್ತು ಅವನ ಮನೆಯವರೆಗೂ ನನ್ನನ್ನು ಕರೆದೊಯ್ದು ಬಿಟ್ಟ.ನನಗಂತೂ ಆ ಹಳ್ಳಿಯ ಮೂಲೆ ಮೂಲೆಯಲ್ಲೂ ಪ್ರೇಮವನ್ನು ಬಿಟ್ಟು ಬೇರೇನೂ ಕಾಣಿಸುತ್ತಿರಲಿಲ್ಲ.
ನನ್ನನ್ನು ಸುಮಾರು ಎರಡು ವರ್ಷಗಳ ನಂತರ ಕಂಡ ಪ್ರಣವ ನನ್ನನ್ನು ನೋಡುತ್ತಲೇ ಹೊರಗಡೆ ಓಡಿಬಂದ. ಕಾಲೇಜಿನಲ್ಲಿ ತನ್ನ ವಿಚಿತ್ರ ಪೋಷಾಕುಗಳಿಂದಲೇ ಹೆಸರು ಮಾಡಿದ್ದ ಆತನನ್ನು ಸರಳ ಜುಬ್ಬಾ ಪಜಾಮಾದಲ್ಲಿ ಕಂಡು ಅಚ್ಚರಿಯಾಯಿತು!ಮನೆಯ ಮುಂದೆ ಕಾಲ್ತೊಳೆಯಲು ನೀರೆರೆದ ಆತ,ಮನೆಗೆ ಹೊಕ್ಕುತ್ತಲೇ ಗಟ್ಟಿಯಾಗಿ ನನ್ನನ್ನು ತಬ್ಬಿಬಿಟ್ಟ.ಅವನ ಕಣ್ಣಾಲಿಗಳು ಒದ್ದೆಯಾಗಿದ್ದವು.ಮನೆಯ ಪ್ರತಿಯೊಬ್ಬರಿಗೂ ನನ್ನನ್ನು ಪರಿಚಯಿಸುವಾಗ ಆತನ ಕಣ್ಣುಗಳನ್ನು ನೋಡಿ ಬಹಳ ಸಂತೋಷವಾಯಿತು.
ಕೆಲಹೊತ್ತು ವಿಶ್ರಮಿಸಿದ ಬಳಿಕ ನನ್ನನ್ನು ಪ್ರಣವ ನನ್ನನ್ನು ಬನಾರಸನ್ನು ತೋರಿಸಲು ಕರೆದೊಯ್ದ. ಅವನು ಜೀವನಕ್ಕಾಗಿ ಏನು ಮಾಡುತ್ತಿದ್ದನೋ ನನಗೆ ತಿಳಿದಿಲ್ಲ. ಆದರೆ ಚುನಾರಿನಲ್ಲಿ ಆತನಿಗೆ ಇರುವ ಗೌರವ ಅಲ್ಲಿನ ಗುಡಿಗಳ ದೇವರಿಗಿಂತಲೂ ಹೆಚ್ಚಾಗಿತ್ತು. ಅವನ ಬಾಯಲ್ಲಿ ಬನಾರಸಿನ ವೈಭವವನ್ನು ಕೇಳುವುದೇ ಒಂದು ಹಬ್ಬವಾಗಿತ್ತು. ಅಲ್ಲಿನ ಒಂದೊಂದು ಸ್ಥಳವೂ ಅವನಿಂದ ಒಂದೊಂದು ಭಾವವನ್ನು ಹೊರಡಿಸುತ್ತಿದ್ದವು. ಎತ್ತೆತ್ತರ ಗೋಪುರದ ದೇವಾಲಯಗಳು,ಕಿವಿಪಟಲಕ್ಕೆ ಆಗಾಗ್ಗೆ ಬೀಳುವ ಶಂಖದ ಸದ್ದು,ಎಲ್ಲಿ ನೋಡಿದರೂ ರಾರಾಜಿಸುವ ಕೇಸರಿ ಬಾವುಟಗಳು, ಮುಸಲ್ಮಾನರು ಹಿಂದೂಗಳು ಒಟ್ಟಿಗೆ ಅತ್ಯಂತ ಪ್ರೀತಿ ಹಾಗೂ ಸೌಹಾರ್ದದಿಂದ ಬಾಳುವ ಓಣಿಗಳು,ಬದುಕಿದ್ದಾಗ ತನ್ನದೇ ಜಗವೆಂದು ಬೀಗಿದ ಅದೆಷ್ಟೋ ದೇಹಗಳು ಬೂದಿಯಾಗಿ ನೀರು ಸೇರುವ ಘಾಟುಗಳು! ವಾರಣಾಸಿಯ ಗಲ್ಲಿಗಲ್ಲಿಗಳೂ ಜೀವನ ಪಾಠದ ಗ್ರಂಥಾಲಯಗಳು. ವಿಶ್ವನಾಥ, ಸಂಕಟ ಮೋಚನ ಹನುಮಂತ, ದುರ್ಗಾ ಕುಂಡ ಮಂದಿರಗಳು ಹಾಗೂ ರಾಮನಗರ ಕೋಟೆ ನೋಡಿದ ಬಳಿಕ ರಾತ್ರಿಯಾಗುತ್ತಿತ್ತು.ಆಗಲೇ ಪ್ರಣವ ನನ್ನನ್ನು ಮಣಿಕರ್ಣಿಕಾ ಘಾಟಿಗೆ ಕರೆದೊಯ್ದದ್ದು.ಅಲ್ಲಿನ ಕಟ್ಟೆಯೊಂದರ ಮೇಲೆ ಕುಳಿತು ಪ್ರಣವ ಕಣ್ಣೀರಿಡಲು ಪ್ರಾರಂಭಿಸಿದ. ನನಗೂ ಅವನ ಈ ಬದಲಾವಣೆಗೆ ಕಾರಣ ಹುಡುಕಬೇಕಿತ್ತು. ಮನಸ್ಸಿನಲ್ಲಿ ಅದೆಷ್ಟೋ ಪ್ರಶ್ನೆಗಳು ಉತ್ತರದ ಮಳೆಗಾಗಿ ಕಾದಿದ್ದವು.
“ನೋಡು! ಜೀವನ ಪರ್ಯಂತ ಕಂಡ ಕನಸುಗಳು ಕ್ಷಣದಲ್ಲಿ ಬೂದಿಯಾಗಿ ನೀರು ಸೇರುವುದನು ನೋಡು!” ಪ್ರಣವ ಹೇಳಿದ. ಅವನ ಮುಖಚರ್ಯೆ ನೋಡಿ ಆತನು ನನಗೆ ಏನೋ ಹೇಳಬಯಸುತ್ತಿದ್ದಾನೆಂದು ಅರ್ಥವಾಯಿತು.ಅವನ ಹೆಗಲಮೇಲೆ ಕೈಹಾಕುತ್ತಲೇ ಆತ ಕರಗಿ ನೀರಾದ.
**************
ನಿನಗೆ ಗೊತ್ತೇ ಇದೆ. ನಾನು ಮೂಲತಃ ಚುನಾರಿನವನಲ್ಲ. ನನ್ನೂರು ಜಾರ್ಖಂಡಿನ ಧನ್ಬಾದ್. ಜರ್ನಲಿಸಂ ನನ್ನ ಪ್ಯಾಶನ್ನಾಗಿತ್ತು. ಮನೆಯವರಿಂದ ತುಂಬ ದೂರ ಬೆಂಗಳೂರಿಗೆ ಜರ್ನಲಿಸಂ ಮಾಡಲು ಬಂದೆ. ನಿನಗೆ ಗೊತ್ತು,ಯಾವತ್ತೂ ಪ್ರೀತಿ ಪ್ರೇಮದ ಕೊರೆತೆಯಿರದೆ ಬದುಕಿದ ನಾನು ಹೊಸತನದ ಊರಿನಲ್ಲಿ ಮೊದಮೊದಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಏನನ್ನೋ ಒಂದು ಪಡೆದುಕೊಳ್ಳಲು ಓಡುತ್ತಿದ್ದ ಜನರ ನಡುವೆ ನಿಂತು ನನ್ನ ಸುತ್ತ ಮುತ್ತ ಏನಾಗುತ್ತಿದೆ ಎಂದು ಕತ್ತೆತ್ತಿ ನೋಡಲೂ ಸಹ ನನಗೆ ಸಮಯವಿರುತ್ತಿರಲಿಲ್ಲ. ಅಕ್ಷರಶಃ ನಾನು ಕಳೆದುಹೋಗಿದ್ದೆ. ಆಗಲೇ ನನಗೆ ಪ್ರಕೃತಿ ಸಿಕ್ಕದ್ದು ಪ್ರಕೃತಿಯೂ ಸಹ ನನ್ನಂತೇ ದೂರದ ಊರಿನಿಂದ ಬಂದವಳು. ಜರ್ನಲಿಸಂನ ಬಗ್ಗೆ ಇದ್ದ ಒಲವು ಅವಳನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದಿತ್ತು. ಜಾಗತಿಕ ವಿದ್ಯಮಾನಗಳ ಕುರಿತು ಅವಳ ಹಾಗೂ ನನ್ನ ನಿಲುವುಗಳು ಬಹುತೇಕ ಹೊಂದುತ್ತಿದ್ದವು.
ಅಷ್ಟೇ ಅಲ್ಲ ಅಪ್ಪ ಅಮ್ಮನಿಂದ ದೂರವಿರುವುದರಿಂದ ಅವಳ ಪ್ರತಿ ಸುಖ ದುಃಖಗಳಿಗೂ ನಾನೇ ಕಿವಿಯಾಗಿದ್ದೆ.ಅದು ಹೇಗೋ ಹುಚ್ಚಿಯಂತೆ ನನ್ನನ್ನು ಹಚ್ಚಿಕೊಂಡು ಬಿಟ್ಟಳು.ನನಗೆ ಅವಳ ಬಿಟ್ಟರೆ ಬೇರೆ ನಿರೀಕ್ಷೆ ಇರುತ್ತಿರಲಿಲ್ಲ. ಅವಳಿಗೆ ನಾನಿಲ್ಲದೇ ರಕ್ಷಣೆ ಇರುತ್ತಿರಲಿಲ್ಲ. ಅವಳು ನಾನಾದಳು,ನಾನು ಅವಳಾದೆ. ಒಮ್ಮೆ ಅವಳ ಕೈಹಿಡಿದು ನಡೆದರೆ ಸಾಕು,ಇಡೀ ಜಗತ್ತೇ ಎದುರಾದರೂ ಪರಿವೆ ಇಲ್ಲ ಎಂಬಷ್ಟು ಧೈರ್ಯ ಬರುತ್ತಿತ್ತು. ಈ ಒಡನಾಟ ಪ್ರೀತಿಗೆ ಅಡಿಪಾಯವಾಯಿತು.
ಅವಳ ಪುಟ್ಟ ಕಂಗಳಲ್ಲಿ ಒಂದು ಸುಂದರ ಕನಸಿತ್ತು.ಅವಳ ಹುಟ್ಟೂರು ಇದೇ ಚುನಾರ್. ಚುನಾರ್ ಆಗಿನ ಕಾಲದಲ್ಲಿ ಮೂಲಭೂತ ಸೌಕರ್ಯವೂ ಇರದ ಕುಗ್ರಾಮ.ಶಾಲೆಯಿಲ್ಲ,ವಿದ್ಯುತ್ ಇಲ್ಲ. ಬಡತನವೇ ರಾರಾಜಿಸುತ್ತಿದ್ದ ಕಾಲವದು. ಜನ ತಮ್ಮ ಕುಟುಂಬ ಸಮೇತ ಗಂಗೆಗೆ ಹಾರಿ ಪ್ರಾಣಬಿಟ್ಟ ಉದಾಹರಣೆಗಳೂ ಇದ್ದವು. ಸರಕಾರ ಮೂಕವಾಗಿತ್ತು.ಗದ್ದೆಗಳು ಬೆಂಕಿರೋಗಕ್ಕೆ ತುತ್ತಾಗಿ ಜನ ತುತ್ತು ಅನ್ನಕ್ಕೂ ಪರದಾಡುತ್ತಿದ್ದ ಕಾಲವದು.ಅಲ್ಲಿನ ಪಂಚಾಯತಿ ಕಟ್ಟೆಯ ಪ್ರಮುಖರೋರ್ವರ ಮಗಳಾಗಿದ್ದ ಇವಳು ಜನರ ಈ ಗೋಳಾಟವನ್ನು ನೋಡುತ್ತಲೇ ಬೆಳೆದವಳು. ಅದಾಗಲೇ ಅವಳಿಗೆ ಲೇಖನಿಯ ಶಕ್ತಿಯ ಅರಿವಾಗಿತ್ತು. ಚುನಾರ್ ಮಾತ್ರವಲ್ಲ ಹೀಗೆ ಸಮಸ್ಯೆ ಅನುಭವಿಸಿತ್ತಿರುವ ಎಷ್ಟೋ ಜನರ ಕೂಗನ್ನು ಇಡೀ ಜಗತ್ತಿಗೆ ಕೇಳಿಸಲೆಂದೆ ಅವಳು ಜರ್ನಲಿಸಂ ಕುರಿತು ಆಸಕ್ತಿ ತಳೆದಿದ್ದು.
ಜರ್ನಲಿಸಂ ಮುಗಿಯುತ್ತಲೇ ಅವಳು ಚುನಾರಿಗೆ ತೆರಳಿದಳು. ನನಗೆ ಅವಳಿಲ್ಲದೇ ಧನ್’ಬಾದ್’ನಲ್ಲಿ ಉಳಿಯಲಾಗಲಿಲ್ಲ.ನಾನೂ ಚುನಾರಿಗೆ ಹೊರಟು ನಿಂತೆ.ಅಲ್ಲಿನ ಪಂಚಾಯಿತಿ ಚೇರ್ಮನ್ನರಿಗೆ ನಾನು ಅಲ್ಲಿಗೆ ಬಂದ ನಿಜ ಕಾರಣ ತಿಳಿಸದೇ ಆ ಹಳ್ಳಿಯ ಜನರ ಪರದಾಟ ಹಾಗೂ ಅಲ್ಲಿನ ಕೋಟೆಯ ಬಗ್ಗೆ ಸ್ಟೋರಿ ತಯಾರಿಸಲು ಬಂದ ಜರ್ನಲಿಸ್ಟ್ ಎಂದು ಪರಿಚಯ ಮಾಡಿಕೊಂಡೆ. ಅವರು ತಮ್ಮ ಮನೆಯಲ್ಲೇ ನನಗೆ ಆಶ್ರಯ ನೀಡಿದರು. ಅಲ್ಲಿ ಸಿಕ್ಕ ಅವಕಾಶದಲ್ಲೇ ನಾನು ಅವಳನ್ನು ಭೇಟಿಯಾಗುತ್ತಿದ್ದೆ. ಬಹಳಷ್ಟು ಸುಂದರವಾದ ಕ್ಷಣಗಳವು. ಅಪರೂಪಕ್ಕೆ ಸಿಗುವ ಇಂತಹ ಕ್ಷಣಗಳಲ್ಲಿ ಒಬ್ಬರಿಗೊಬ್ಬರು ಸಿಕ್ಕು ಮಾತನಾಡುತ್ತಿದ್ದೆವು;ಕನಸುಗಳನ್ನು ಹಂಚಿಕೊಳ್ಳುತ್ತಿದ್ದೆವು.
ಏನೇ ಆಗಲಿ, ಮದುವೆಯಾದಮೇಲೆ ಅವಳು ಧನ್’ಬಾದಿಗೆ ಬರಲೇ ಬೇಕು. ಅದು ಇವಳಿಗೆ ಸುತಾರಾಂ ಇಷ್ಟವಿರಲಿಲ್ಲ. ಯಾವಾಗಲೂ ಅವಳು ಹೇಳುತ್ತಿದ್ದಳು,”ಈ ಜನರನ್ನು ಹೀಗೆಯೇ ಇರಲು ಬಿಟ್ಟು ನಾನು ಧನ್ಬಾದಿನಲ್ಲಿ ಯಾವ ಸುಪ್ಪತ್ತಿಗೆಯ ಮೇಲೆ ತಾನೆ ಸಂತೋಷ ಕಂಡೇನು?”ಎಂದು. ಅವಳಿಗಾಗಿ ಆದರೂ ಅಲ್ಲಿನ ಪರಿಸ್ಥಿತಿಗಳು ಅಭಿವೃದ್ಧಿ ಹೊಂದಲೇ ಬೇಕಿದ್ದವು.
ಇತ್ತ ನಾನು ಸುಮ್ಮನಿರಲಿಲ್ಲ. ಸುದೀರ್ಘವಾದ ಲೇಖನವೊಂದನ್ನು ಹಳ್ಳಿಯ ಕುರಿತು ಬರೆಯಲು ಶುರುಮಾಡಿದೆ. ಹಳ್ಳಿಯ ಪ್ರತಿ ಮನೆಗೂ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದೆ. ಒಂದು ಸರಿಯಾದ ಮುಹೂರ್ತವನ್ನು ಇಟ್ಟು ಜನರನ್ನು ಒಗ್ಗೂಡಿಸಿ ಮಿರ್ಜಾಪುರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಧರಣಿ ಮಾಡುವ ಯೋಜನೆ ಹಾಕಿಕೊಳ್ಳಲಾಯಿತು. ನನ್ನ ಪ್ರಯತ್ನಕ್ಕೆ ನನ್ನ ಹುಡುಗಿ ಬೆನ್ನೆಲುಬಾಗಿ ನಿಂತಳು. ಕೊನೆಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಧರಣಿ ನಡೆಸಿದೆವು. ಅವರೇನೋ ಹಳ್ಳಿಗೆ ಬರಲು ಒಪ್ಪಿಕೊಂಡರೂ ಪರಿಸ್ಥಿತಿಯೇನೂ ಸುಧಾರಿಸಲಿಲ್ಲ. ಇತ್ತ ನಾನು ಬರೆದ ಲೇಖನ ರಾಜ್ಯಾದ್ಯಂತ ಸದ್ದು ಮಾಡಿತು. ಆಗಲೇ ವಿಧಾನಸಭೆ ಚುನಾವಣೆ ಶುರುವಾಯಿತು. ನಾನು ಹಾಗೂ ಪ್ರಕೃತಿ ಜನರನ್ನು ಭಾಷಣಗಳ ಮೂಲಕ ಜಾಗೃತಗೊಳಿಸಿದೆವು. ಜನರಲ್ಲಿ ಜಗದ ಅರಿವು ಮೂಡಿಸಿ ಬದಲಾವಣೆಯ ಕಿಚ್ಚು ಹೊತ್ತಿಸಿದೆವು.ರಾಜಕಾರಣಿಗಳು ಹಿಂಡು ಹಿಂಡಾಗಿ ಊರೆಡೆಗೆ ಧಾವಿಸಲು ಶುರು ಮಾಡಿದರು. ಹೇಗೂ ನಮ್ಮೂರಿನ ನಾಯಕನೆಂದೇ ನನ್ನನ್ನು ಬಿಂಬಿಸಲಾಗಿತ್ತು. ಬಂದ ಎಲ್ಲಾ ಪಕ್ಷದವರಿಗೂ ಜನ ನನ್ನ ಮಾತನ್ನೇ ಕೇಳುತ್ತಾರೆಂದು ಮನವೊಲಿಸಿ ಮತಬ್ಯಾಂಕಿನ ಮತಗಳೆಲ್ಲ ನಿಮಗೇ ಎಂದು ಎಲ್ಲರಿಂದ ಹಣವನ್ನು ಪಡೆದೆ. ಅಷ್ಟೇ ಅಲ್ಲ, ಎಲ್ಲೆಲ್ಲಿ ಜನರನ್ನು ಪಟಾಯಿಸಲು ಹಣ,ಸೀರೆ ಇತ್ಯಾದಿ ವಸ್ತುಗಳನ್ನಡಗಿಸಿದ್ದರೋ ಅವೆಲ್ಲವನ್ನೂ ಹಳ್ಳಿಗರಿಂದ ಲೂಟಿ ಮಾಡಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಯಾರೂ ಮತ ಹಾಕಲಿಲ್ಲ. ಬಂದ ಹಣದಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳಾದವು. ಆಮೇಲೆ ನಮ್ಮ ನಮ್ಮ ಹಣವನ್ನೇ ಸೇರಿಸಿ ಒಂದು ಸಮಾನಾಂತರ ಗ್ರಾಮ ಸರಕಾರವನ್ನೇ ರಚಿಸಿದೆವು. ಯಾವಾಗ ಎಲ್ಲ ಜನರ ಸಮಸ್ಯೆಗಳೂ ಒಂದೇ ಆಗಿರುತ್ತದೋ ಆಗ ಅವರು ಒಟ್ಟಾಗುತ್ತಾರೆ. ಎಲ್ಲಿ ಒಗ್ಗಟ್ಟು ಇದೆಯೋ ಅಲ್ಲಿ ಶಕ್ತಿ ಇರುತ್ತದೆ. ಒಟ್ಟಾಗಿ ನಿಂತೆವು,ಗ್ರಾಮ ಮನೆಯಾಯಿತು, ಸ್ವಚ್ಛವಾಯಿತು. ಎಲ್ಲರೂ ಸೇರಿ ಬಾವಿಗಳನ್ನು ತೋಡಿದರು. ಇಲ್ಲಿನ ಪ್ರತಿಯೊಂದು ಜೀವಿಯಲ್ಲೂ ಅಭಿವೃದ್ಧಿ ಒಂದೇ ಗುರಿಯಾಯಿತು. ಗ್ರಾಮದಲ್ಲೆಡೆಯೂ ಪ್ರೀತಿಯೇ ಆವರಿಸಿತು. ವಿಶ್ವನಾಥನ ಕೃಪೆಯಿಂದ ಫಸಲು ಕೂಡ ಚೆನ್ನಾಗಿ ಬಂತು. ಕೊನೆಗೂ ನಾವು ಹಳ್ಳಿಯಲ್ಲಿ ಬದಲಾವಣೆ ತಂದೆವು. ನಮ್ಮ ಸಾಧನೆ ಇತರರಿಗೆ ಮಾದರಿಯಾಯಿತು. ಜನ ತಮ್ಮ ನಾಯಕರನ್ನು ಆರಿಸುವ ಮೊದಲು ವಿವೇಚನೆಯಿಂದ ಯೋಚಿಸಲು ಶುರುಮಾಡಿದರು. ಇದು ಹೊಸ ಕ್ರಾಂತಿಗೆ ನಾಂದಿಯಾಯಿತು.
ಆದರೆ ಆ ದೇವರು ಬಯಸಿದ್ದು ಬೇರೆಯೇ ಆಗಿತ್ತು. ಪ್ರಕೃತಿಯ ಆಸೆಯಂತೆ ಈ ಹಳ್ಳಿಯನ್ನು ಬದುಕಲರ್ಹವಾಗಿ ರೂಪಿಸಿದ ಮೇಲೆ ನಮ್ಮಿಬ್ಬರ ಮದುವೆ ಮಾತುಕತೆ ಶುರುವಾಯಿತು. ಇನ್ನೇನು ನಾನು ಪ್ರಕೃತಿಯನ್ನು ಮದುವೆಯಾಗಬೇಕೆನ್ನುವಷ್ಟರಲ್ಲಿ ಅವಳಿಗೆ ತೀವ್ರವಾದ ಜ್ವರ ಆವರಿಸಿತು. ಆ ಜ್ವರವನ್ನು ಅವಳ ಸೂಕ್ಷ್ಮ ದೇಹ ತಡೆಯಲಾರದೇ ಹೋಯಿತು. ಎರಡು ದಿನಗಳ ಬಳಿಕ ನನ್ನ ಪ್ರಕೃತಿ ತುಂಬ ಗಂಭೀರ ಸ್ಥಿತಿಗೆ ತಲುಪಿದಳು. ನನ್ನ ಕೈಹಿಡಿದು ಮಲಗಿದ್ದ ಅವಳ ತಲೆಯನ್ನು ನೇವರಿಸುತ್ತಿರುವಾಗಲೇ ಅವಳು ತೀರಿಹೋದಳು. ಆಗ ನಾನು ಬಂದದ್ದು ಇಲ್ಲಿಯೇ. ಇದೇ ಮಣಿಕರ್ಣಿಕಾ ಘಾಟಿನಲ್ಲಿಯೇ ನನ್ನ ಕೈಹಿಡಿದು ನಡೆಸಿದ ಪ್ರಕೃತಿ ಬೂದಿಯಾಗಿ ನೀರುಪಾಲಾದಳು. ಅವಳೊಡನೆ ಕಟ್ಟಿದ ಕನಸುಗಳು ಸಹ ಬೂದಿಯಾದವು. ಯಾಕೆ ಶಿವನೇ ನಾನೇ ಏಕೆ? ನನಗೇ ಏಕೆ ಇಂತಹ ಕಷ್ಟ?ಈ ಹುಡುಗಿಗಾಗಿ ಏನೆಲ್ಲ ಮಾಡಿದೆ. ನನ್ನ ಮುದ್ದಾದ ಪ್ರಕೃತಿಯೊಡನೆ ಕೊನೆಯವರೆಗೂ ಬದುಕಬೇಕೆಂದು ಒಂದೇ ಒಂದು ಕನಸಿತ್ತು. ಅದನ್ನೂ ಕಿತ್ತುಕೊಂಡುಬಿಟ್ಟೆಯಾ? ನನ್ನ ಕೂಗು ಇದೇ ಜಾಗದಲ್ಲಿಯೇ ಮುಗಿಲು ಮುಟ್ಟಿತ್ತು. ಪ್ರಕೃತಿ ತನ್ನಿಷ್ಟದ ವಾರಣಾಸಿಯಲ್ಲಿಯೇ ಉಳಿದಳು. ಎಂದಿಗೂ ಧನ್’ಬಾದಿಗೆ ಬರಲೇ ಇಲ್ಲ.
ಆಗಲೇ ಓರ್ವ ಅಘೋರಿ ನನಗೆ ಕಂಡದ್ದು. ನನ್ನನ್ನು ಕಂಡು ನನ್ನ ಹತ್ತಿರ ಬಂದ. ಅಂದು ಅವನು ಹೇಳಿದ ಮಾತುಗಳು ನನಗೆ ಇನ್ನೂ ಚೆನ್ನಾಗಿ ನೆನಪಿದೆ. “ಎಲ್ಲವೂ ಅವನು,ನೀನು ಕೂಡ ನಿನ್ನವನಲ್ಲ.ಸೋಲೆಲ್ಲ ನಿನ್ನದು, ಗೆಲುವೆಲ್ಲ ಅವನದು.ನಿನ್ನೊಳಗಿದ್ದುಕೊಂಡು ಕಣ್ಣಾಮುಚ್ಚೆ ಆಡುವನವನು.ಗೆದ್ದರೆ ನಿನಗೆ ಅವನನ್ನೆ ಕೊಡುವನು.ಅಲ್ಲಿಗೆ ನೀ ಎಲ್ಲರವ,ನೀನೆ ಎಲ್ಲವೂ..”ಎಂದು ಅವನು ಹೇಳುತ್ತಲೇ ನನಗೆ ಏನು ಹೇಳಬೇಕೋ ತಿಳಿಯಲಿಲ್ಲ. ಕೊಂಚ ಸಮಯದ ಬಳಿಕ ನಾನು ಜೋರಾಗಿ ನಗಲಾರಂಭಿಸಿದೆ. ಅವಳೆ ಇಲ್ಲದ ಧನ್’ಬಾದ್ ನನಗೇಕೆ? ಚುನಾರಿನ ಪ್ರತಿ ಜೀವಿಯೂ ನನ್ನನ್ನು ಪ್ರೀತಿಸುತ್ತದೆ. ಅವರೆಲ್ಲ ನನ್ನವರು. ಯಾರೋ ಎಂತೆಂತಹುದೋ ರೀತಿಯಲ್ಲಿ ಪ್ರೀತಿಯಲ್ಲಿ ಮೋಸಹೋಗಬೇಕಾದರೆ ನನ್ನವಳು ಹೋಗುತ್ತಲೇ ನೂರು ತಾಯಿಯರ ಪ್ರೀತಿಯನ್ನು ನೀಡಿ ಹೋಗಿದ್ದಾಳೆ.ಒಂದು ಊರಿನಷ್ಟು ಪ್ರೇಮ ನನಗಾಗಿ ನೀಡಿ ಹೋಗಿದ್ದಾಳೆ. ಓ ದೇವರೆ ಕ್ಷಮಿಸಿಬಿಡು. ನೀನು ಎಲ್ಲರಿಗಿಂತಲೂ ನನಗೇ ಹೆಚ್ಚು ಅರ್ಥಪೂರ್ಣ ಜೀವನ ನೀಡಿದ್ದೀಯಾ ,ನಾನು ನಿಜಕ್ಕೂ ಧನ್ಯ ಎಂದು ಕೂಗಿ ಅಲ್ಲಿಂದ ಹೊರಬಂದೆ.ಅಲ್ಲಿ ನನ್ನ ಜೀವನದ ಒಂದು ಮಹತ್ತರವಾದ ಭಾಗ ಸುಟ್ಟುಬೂದಿಯಾಯಿತು.ಊರಿಗೆ ಬಂದಾಗ ನನ್ನ ಸಾಂತ್ವನಕ್ಕೆ ನಿಂತ ಜನರ ಕಂಡು ನನ್ನ ಜೀವನಕ್ಕೆ ಹೊಸದಿಕ್ಕು ದೊರೆಯಿತು.
*************
“ಅಬ್ಬಾ! ಪ್ರಣವ ಈ ಎರಡು ವರ್ಷಗಳಲ್ಲಿ ನಿನ್ನ ಜೀವನದಲ್ಲಿ ಇಷ್ಟೆಲ್ಲಾ ನಡೆದರೂ ನನಗೆ ಒಂದು ಮಾತು ಹೇಳಲಿಲ್ಲವಲ್ಲೋ” ನಾನು ಕೇಳಿದೆ.ನನ್ನ ಕಣ್ಣುಗಳು ತುಂಬಿ ಬಂದಿದ್ದವು.
“ಇಲ್ಲ ಕಣೋ,ಹಾಗೇನಿಲ್ಲ.ನಿನಗಿವೆಲ್ಲವನ್ನೂ ಹೇಳಬೇಕೆನಿಸುತ್ತಿತ್ತು.ಒಳ್ಳೆ ಸಮಯಕ್ಕಾಗಿ ಕಾಯುತ್ತಿದ್ದೆ ಅಷ್ಟೇ. ಈಗ ಜೀವನ ಸುಗಮವಾಗಿ ಸಾಗುತ್ತಿದೆ.ಊರಿನಲ್ಲಿ ಯಾರ ಮನೆಯಲ್ಲಿ ಊಟ ಮಾಡುವುದು ಎನ್ನುವುದೇ ದೊಡ್ಡ ತಲೆನೋವಾಗಿದೆ ಹಾಹಾ! ಈಗಲೂ ಕೆಲವೊಮ್ಮೆ ಅವಳು ನೆನಪಾದಾಗ ಇಲ್ಲಿಯೇ ಬರುತ್ತೇನೆ.ಗಂಗೆ ನೀರನ್ನೊಮ್ಮೆ ನನ್ನ ಮೇಲೆ ಹಾಕಿಕೊಂಡರೆ ಅವಳೇ ಸ್ಪರ್ಶಿಸಿದಂತೆ ನನಗೆ.ಬಹಳ ಬೇಸರವಾದಾಗ ಇಲ್ಲಿಯೇ ಬಂದು ಕುಳಿತು ಈ ಶವಗಳು ಬೂದಿಯಾಗುವುದನ್ನು ನೋಡುತ್ತ ಕುಳಿತುಬಿಡುತ್ತೇನೆ.ಇಲ್ಲಿ ಬಂದು ಒಂದು ಅರ್ಥ ಮಾಡಿಕೊಂಡೆ.ಈ ಪ್ರೀತಿಯಲ್ಲಿರುವಷ್ಟು ಶಕ್ತಿ ಇನ್ಯಾವುದರಲ್ಲೂ ಇಲ್ಲ ಪ್ರಸಾದ.ಪ್ರೀತಿ ಮಾನವನಂಥ ಪ್ರಾಣಿಯಲ್ಲೂ ಇರುವಂತಹ ದೈವಿಕವಾದ ಗುಣ.ಈ ಪ್ರೀತಿಯೊಂದೆ ಸಾಕು,ಈ ಜಗತ್ತೇ ನಿನ್ನದು!ಬಿಡು ಅದನ್ನ.ಅಂದಹಾಗೆ ನೀನು ಬಂದಿದ್ದು ತುಂಬ ಸಂತೋಷವಾಯಿತು.ತುಂಬ ಹಗುರವಾಗಿದ್ದೇನೆ ಈಗ” ಪ್ರಣವ ಮುಗುಳ್ನಗುತ್ತಲೇ ಹೇಳಿದ. ನಾನು ಮರಳಿ ಏನನ್ನೂ ಹೇಳಲಿಲ್ಲ.ಗಂಗೆಯ ಹರಿಯುವ ಸದ್ದು ನಿರಂತರತೆಯ ಪ್ರತೀಕವಾಗಿಯೂ ಅದರ ದಡದಲ್ಲಿ ಸುಡಲ್ಪಡುತ್ತಿದ್ದ ಶವಗಳು ಅಶಾಶ್ವತೆಯ ಪ್ರತೀಕವಾಗಿಯೂ ಕಂಡವು.
ವಾರಣಾಸಿ! ಜೀವನ ಹಾಗೂ ಸಾವಿನ ನಡುವೆ ಇರುವಂತಹ ಅದೆಷ್ಟೋ ವಿಷಯಗಳನ್ನು ಕಲಿಸಿಕೊಟ್ಟಿತ್ತು.ಮರಳಿ ರೈಲು ಪ್ರಯಾಣ ನನಗೆ ಅಷ್ಟು ಪ್ರಯಾಸದಾಯಕವೆನಿಸಲಿಲ್ಲ. ರೈಲಿನೊಳಗಿನ ಜನರೊಡನೆ ಬೆರೆಯುತ್ತಾ,ಮಕ್ಕಳೊಡನೆ ಆಡುತ್ತಾ ,ನಗುತ್ತಾ ಮುಗ್ಧ ಮಗುವಾಗಿ ಹೋದೆ.ಜೀವನವಿಡೀ ರೈಲಿನಲ್ಲೆ ಕಳೆಯಬೇಕೆನಿಸತೊಡಗಿತ್ತು.ಯಾರೋ ಅಪರಿಚಿತರಾಗಿದ್ದವರು ಮೂರು ದಿನಗಳಲ್ಲೇ ಆಪ್ತರಾಗಿಹೋದರು.ಹೀಗೆ ಎಲ್ಲಾ ಪ್ರಯಾಣಗಳೂ ನೂರಾರು ನೆನಪುಗಳನ್ನು ಕಟ್ಟಿಕೊಡುತ್ತವೆ ಹಾಗೂ ಏನಾದರೂ ಒಂದನ್ನು ಹೇಳಿಕೊಟ್ಟೆ ಕೊಡುತ್ತವೆ.ನೀವು ಕೂಡ ಸಾಧ್ಯವಾದಾಗಲೆಲ್ಲ ದೂರದೂರುಗಳಿಗೆ ಪ್ರವಾಸ ಬೆಳೆಸಿ.ನಿಮಗೆ ಕಾಣಸಿಗುವ ಅಸಂಖ್ಯ ಜಾಗಗಳು, ಕಥೆಗಳು ಹಾಗೂ ಪಾತ್ರಗಳು ಏನಾದರೂ ಒಂದು ಕಲಿಸಿಯೇ ಕಲಿಸುತ್ತವೆ.ಈ ಜಗತ್ತು ಒಂದು ತೆರೆದ ವಿಶ್ವವಿದ್ಯಾಲಯವಿದ್ದಂತೆ.ಇಲ್ಲಿ ಇದ್ದಷ್ಟು ದಿನಗಳಿಗೆ ಏನಾದರೂ ಅರ್ಥವಿರಲಿ ಎಂಬುದೇ ನನ್ನ ಅನಿಸಿಕೆ.