ಅಂಕಣ

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೨

_______________________________

ಮಾನವರೋ ದಾನವರೋ ಭೂಮಾತೆಯನು ತಣಿಸೆ |

ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? ||

ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ |

ಸೌನಿಕನ ಕಟ್ಟೆಯೇಂ ? – ಮಂಕುತಿಮ್ಮ ||

ಸುತ್ತೆಲ್ಲ ನಡೆದಿರುವ ಅಟ್ಟಹಾಸದ ರೂವಾರಿಗಳಾದರೊ ಬೇರಾರೊ ಆಗಿರದೆ ಇದೆ ಮನುಕುಲದ ಸಂತತಿಯ ವಾರಸುದಾರರೆ ಆಗಿರುವ ವಿಷಾದದ ಸಂಗತಿಯನ್ನು ಗಮನಿಸಿದ ವಿಹ್ವಲ ಕವಿಮನ ‘ಅವರೇನು ಮನುಷ್ಯರೋ? ರಾಕ್ಷಸ ಸಂತತಿಯವರೊ? ಎಂದು ರೊಚ್ಚಿಗೇಳುತ್ತದೆ. ಆ ಸಾತ್ವಿಕ ಕೋಪದ ದನಿಯಲ್ಲೆ ಮನಸು ಕೇಳುತ್ತದೆ – ತನಗಾಗಿ ಕೇವಲ ಕಣ್ಣೀರ ರೂಪದ ಬಾಷ್ಪಾಂಜಲಿ ಸಾಕೆನ್ನುವ ಭೂತಾಯಿಯ ಮಡಿಲಿಗೆ ಯಾಕೆ ರಕ್ತಧಾರೆಯನ್ನೆರೆಯುವರು? ಎಂದು. ಹರ್ಷಾತಿರೇಖದ ಆನಂದಬಾಷ್ಪವೇ ಆಗಲಿ, ದುಃಖಾತಿರೇಖದ ಗೋಳಿನ ಕಣ್ಣೀರೆ ಆಗಲಿ – ಎರಡು ಭಾವಾತಿರೇಖಗಳ ಪ್ರದರ್ಶನಕ್ಕೆ ಕೇವಲ ಕಣ್ಣೀರಿನ ಸಂವಹನವೊಂದಿದ್ದರೆ ಸಾಕು, ಆ ತಾಯಿಯನ್ನು ತೃಪ್ತಿಪಡಿಸಲು ಅಥವಾ ಅವಳ ಅರಿವಿಗೆ ನಿಲುಕುವಂತೆ ಅನಾವರಣಗೊಳ್ಳಲು. ಅಂತಹ ಜಲ ತರ್ಪಣವನ್ನು ಮಾತ್ರ ಕೇಳುವ, ಅದನ್ನು ಕುಡಿದು ತಣಿದೆ ಅದರಿಂದಲೆ ವನರಾಜಿಯನ್ನು ಪೋಷಿಸಿ, ಸಲಹಿ ಮತ್ತದನ್ನೆ ಮತ್ತೆ ಫಸಲಾಗಿ ಮರಳಿಸುವ ಉದಾತ್ತ ಧ್ಯೇಯೋದ್ದಾತ್ತ ಜನನಿ ಅವಳು.  ಬೇಕಿರದಿದ್ದರೂ ಹೀಗೆ ಹೊಡೆದಾಟ, ಬಡಿದಾಟಗಳ ಮೂಲಕ ಮನುಜರನ್ನೆ ಸಂಹರಿಸಿ ನೆತ್ತರ ಕೋಡಿ ಹರಿಸಿ  ಅದನ್ನೇ ಅವಳಿಗೆ ಕುಡಿಸುವರಲ್ಲ – ಎಂಬ ವಿಸ್ಮಯ, ನೋವು ಮುಗ್ದ ಕವಿ ಮನದ ಪ್ರಲಾಪವಾಗಿಬಿಡುತ್ತದೆ.

ಮತ್ತೆ ಕೊಂಚ ಒಳಗಿಳಿದು ನೋಡಿದರೆ – ಯಾವುದೆ ಕದನ, ಯುದ್ಧ, ಹೋರಾಟ, ಹೊಡೆದಾಟ, ಬಡಿದಾಟಗಳೆಲ್ಲ ನೇರವಾಗಿಯೊ, ಪರೋಕ್ಷವಾಗಿಯೊ ಈ ಭೂಮಾತೆಯ ಸ್ವಾಧೀನ ಮತ್ತು ಸ್ವಾಮಿತ್ಯಕ್ಕೋಸ್ಕರ, ಮತ್ತವಳಲ್ಲಡಗಿದ ಅಪಾರ ಸಂಪತ್ತಿನ ಅಧಿಪತ್ಯಕ್ಕೋಸ್ಕರ ಎಂಬುದರ ಅರಿವು ಕವಿಯ ದಿಗ್ಭ್ರಮೆ, ನೋವುನ್ನು ಅಧಿಕವಾಗಿಸಿದ್ದು ಕಾಣುತ್ತದೆ. ಅದೇನನ್ನು ಬೇಡದ ಬರಿಯ ಭಾಷ್ಪಾರ್ಪಣೆಗೆ ಎಲ್ಲವನ್ನು ಕೊಡುವ ವಿಶಾಲ, ಉದಾರ ಮನಸಿನ ಮಡಿಯನ್ನೆಲ್ಲ ಪಾಶವೀ ರಕ್ತದಿಂದ ಮೈಲಿಗೆಯಾಗಿಸುತ್ತಾರಲ್ಲ ಎಂಬ ಹಪಹಪಿಕೆಯಲ್ಲಿ. ಆದರೆ ಆ ಹಿತವಚನದ ಮಾತನ್ನು ಕೇಳುವ ಜನರಾದರೂ ಯಾರು? ಯಾವುದಾದರೊಂದು ಕಾರಣದ ನೆಪ ಹಿಡಿದು ಹಗೆಯ ಕತ್ತಿ ಮಸೆಯುತ್ತ, ಅದೆಬ್ಬಿಸಿದ ದ್ವೇಷದ ದಳ್ಳುರಿಯ ಕಿಡಿಯಲ್ಲಿ, ಉಸಿರುಗಟ್ಟಿಸುವ ಆ ಬೆಂಕಿಯ್ಹೊಗೆಯ ಪರಿಸರದಲ್ಲೆ ಪರಸ್ಪರ ಕಾದುತ್ತ ಇಡೀ ಭೂಮಂಡಲವನ್ನೆ ರಣರಂಗವನ್ನಾಗಿಸಿ ಪರಸ್ಪರರನ್ನೆ ತರಿದು ಹಾಕುತ್ತಿರುವರಲ್ಲ? ಇದನ್ನೇನು ವಾಸಿಸುವ ಭೂಮಿಯೆಂದುಕೊಂಡಿದ್ದಾರೊ ಅಥವಾ ಕಟುಕನ ಕಟ್ಟೆಯಲಿ ದಯೆ, ಧರ್ಮ, ದಾಕ್ಷಿಣ್ಯ ತೋರದೆ ಕಡಿಯುವ ಕಸಾಯಿಖಾನೆ ಎಂದು ಭಾವಿಸಿದ್ದಾರೊ? ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತದೆ ಬೇಸತ್ತ ಮಂಕುತಿಮ್ಮನ ಮನ.

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!