ಅಂಕಣ

221ಬಿ, ಬೇಕರ್ ಸ್ಟ್ರೀಟ್, ಲಂಡನ್

1990ರ ದಶಕದಲ್ಲಿ ಟಿವಿ ಸೀರಿಯಲ್ಲುಗಳನ್ನು ನೋಡುತ್ತಿದ್ದ ಜಮಾನದವರಾದರೆ ನಿಮಗೆ ಬ್ಯೋಮಕೇಶ ಭಕ್ಷಿಯ ಪರಿಚಯ ಇದ್ದೇ ಇರುತ್ತದೆ. ಈತ ತನ್ನ ಗೆಳೆಯ ಅಜಿತ್’ನ ಜೊತೆ ಹಲವು ಪತ್ತೇದಾರಿ ಕೆಲಸಗಳನ್ನು ಮಾಡುವುದನ್ನು ನೀವೆಲ್ಲ ರೋಮಾಂಚನ ಅನುಭವಿಸುತ್ತ ನೋಡಿರುತ್ತೀರಿ. ಅದೇ ಸಮಯದಲ್ಲಿ ಕನ್ನಡದಲ್ಲಿ ಸ್ಪೈ, ಕ್ರೈಂ ಮುಂತಾದ ಒಂದೂಮುಕ್ಕಾಲಕ್ಷರದ ಪತ್ರಿಕೆಗಳು ಬರುತ್ತಿದ್ದವು. ಹಳೇಕಾಲದ ಜೇಮ್ಸ್ ಹ್ಯಾಡ್ಲಿ ಚೇಸ್, ಪಾಕೆಟ್ ಪುಸ್ತಕಗಳ ಸೈಜಿನಲ್ಲಿದ್ದ ಈ ಪತ್ರಿಕೆಗಳಲ್ಲಿ ಒಂದೋ ಎರಡೋ ಕತೆಗಳು. ಅತ್ತ ಪೂರ್ಣ ಪ್ರಮಾಣದ ಕಾದಂಬರಿಯೂ ಅಲ್ಲದ, ಇತ್ತ ಸಣ್ಣಕತೆಯೆಂದು ಕರೆಯಲಿಕ್ಕೂ ಆಗದ ನಡುವಿನ ಗಾತ್ರ ಅವುಗಳದ್ದು. 40ರಿಂದ 80 ಪುಟಗಳ ಆಸುಪಾಸುನಲ್ಲಿರುವ ಅವನ್ನು ಇಂಗ್ಲೀಷಿನಲ್ಲಾದರೆ ನೊವೆಲ್ಲಾ ಅನ್ನುತ್ತಾರೆ; ಅಂಥ ನೀಳ್ಗತೆ/ಕಿರುಕಾದಂಬರಿಗಳನ್ನು 90ರ ದಶಕದ ಓದುಗರಾದರೆ ನೀವೂ ಚಪ್ಪರಿಸಿಕೊಂಡು ಓದಿರುತ್ತೀರಿ. ಒಂದು ಕೊಲೆ, ಅದರ ಪತ್ತೆಗೆ ಹೊರಡುವ ಓರ್ವ ಪತ್ತೇದಾರ, ಅವನ ಬೇಟೆಗೆ ಹೊರಡುವ ಕೊಲೆಗಾರ ಮತ್ತವನ ಸಹಚರರು, ಒಂದೆರಡು ಫೈಟಿಂಗ್ ಸೀನುಗಳು, ಧುತ್ತೆಂದು ಬಂದು ಮರೆಯಾಗುವ ಮಿಂಚಿನ ಬಳ್ಳಿಯಂಥ ಹೆಣ್ಣು, ಅವಳ ಜೊತೆ ಪತ್ತೇದಾರನ ಸರಸ – ಹೀಗೆ ಮಸಾಲೆ ಸಿನೆಮಾಗೆ ಬೇಕಾದ ಎಲ್ಲ ಅಂಶಗಳೂ ಆ ನಲವತ್ತರವತ್ತು ಪುಟಗಳಲ್ಲಿ ಬಂದುಹೋಗುತ್ತಿದ್ದವು. ಅದಕ್ಕಿಂತ ಒಂದೆರಡು ದಶಕಗಳಷ್ಟು ಹಿಂದಕ್ಕೆ ಹೋದರೆ ನಿಮಗೆ ಎನ್. ನರಸಿಂಹಯ್ಯನವರ ಕಾದಂಬರಿಗಳ ಪರಿಚಯ ಇದ್ದವರೂ ಸಿಕ್ಕಾರು. ಪುರುಷೋತ್ತಮ, ಅರಿಂಜಯರ ಸಾಹಸಗಳನ್ನು 70ರ ದಶಕದಲ್ಲಿ ಕದ್ದುಮುಚ್ಚಿ ಓದಿ ಮೈ ನವಿರೇಳಿಸಿಕೊಂಡು ಅದೇ ನಶೆಯಲ್ಲಿ ನಾಲ್ಕೈದು ದಿನ ಧಿಮ್ಮೆನ್ನುವ ತಲೆ ಹೊತ್ತು ತಿರುಗಾಡುತ್ತಿದ್ದರು ಆ ಓದುಗರು. ಕಳಪೆ ಎನ್ನಿ, ಮಸಾಲೆ ಎನ್ನಿ, ಉತ್ತಮ ಎನ್ನಿ, ರೋಮಾಂಚಕ ಎನ್ನಿ, ಏನೇ ಹೇಳಿದರೂ ಅಂಥ ಕತೆಗಳನ್ನು ಓದಿ ಮೈಮರೆವ ಓದುಗ ವರ್ಗ ಇತ್ತು, ಮತ್ತದು ಸಾಕಷ್ಟು ದೊಡ್ಡದಾಗಿಯೇ ಇತ್ತು ಎನ್ನುವುದನ್ನು ಮರೆಯುವಂತಿಲ್ಲ. ಈ ಕತೆಗಳು ಕನ್ನಡ ಸಾಹಿತ್ಯಕ್ಕೂ ಬಹುದೊಡ್ಡ ಓದುಗ ಬಳಗವನ್ನು ಸೃಷ್ಟಿಸಿಕೊಟ್ಟವು. ಯಾಕೆಂದರೆ ಇಂಥ ಕಾದಂಬರಿಗಳನ್ನು ಓದಬೇಕೆಂಬ ಹಠದಿಂದ ಅಆಇಈ ಕಲಿತವರೂ ಇದ್ದರು! ಮತ್ತು ಅವರು ಓದುವ ಹುಚ್ಚಿಗೆ ಬಿದ್ದು ನರಸಿಂಹಯ್ಯ, ಜಿಂದೆ ಮುಂತಾದವರನ್ನು ಓದಿ ದಾಟಿ ಮುಂದೆ ಹೋಗಿ ತ್ರಿವೇಣಿ, ಸಾಯಿಸುತೆ, ಅನಕೃ, ತರಾಸು ಎಲ್ಲರನ್ನೂ ಗಬಗಬ ಮುಗಿಸಿ ಭೈರಪ್ಪನವರನ್ನು ಮುಟ್ಟಿದರು. ಓದುವ ಹುಚ್ಚಿಗೆ ಹೀಗೆ ಪತ್ತೇದಾರಿ ಸಾಹಿತ್ಯ ಒಂದು ಗಟ್ಟಿಯಾದ ಅಸ್ತಿಭಾರ ಹಾಕಿಕೊಟ್ಟಿತು ಎಂದು ಹೇಳಿದರೆ ತಪ್ಪಿಲ್ಲ.

ಪತ್ತೇದಾರಿ ಎಂಬ ಪ್ರಕಾರ ಶುರುವಾದದ್ದು ಹತ್ತೊಂಬತ್ತನೇ ಶತಮಾನದಲ್ಲಿ ಎಂದು ಕಾಣುತ್ತದೆ. ಅಥವಾ ಆ ಮೊದಲೇ ಹುಟ್ಟಿ ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಪ್ರಸಿದ್ಧಿಯ ಶಿಖರ ಮುಟ್ಟಿತೋ! ಇಂಗ್ಲೀಷಿನಲ್ಲಿ ಈ ಪ್ರಕಾರವನ್ನು ಜನಪ್ರಿಯಗೊಳಿಸಿದವರು ಅಗಾಥಾ ಕ್ರಿಸ್ಟಿ, ಎಡ್ಗರ್ ಅಲನ್ ಪೋ, ಡೊರೋತಿ ಸೇಯರ್ಸ್, ಹೋರ್ಹೆ ಲೂಯಿಸ್ ಬೋರ್ಹೇಸ್, ಜಿ.ಕೆ. ಚೆಸ್ಟರ್ಟನ್ ಮುಂತಾದವರು. ಮೊದಲ ಪತ್ತೇದಾರಿ ಕತೆಯನ್ನು 1841ರಲ್ಲಿ ಎಡ್ಗರ್ ಅಲನ್ ಪೋ ಬರೆದನು ಎಂದು ಹೇಳುತ್ತಾರೆ. ಆದರೆ, ಅವನಿಗಿಂತ ಇಪ್ಪತ್ತು ವರ್ಷಕ್ಕೆ ಹಿಂದೆಯೇ ಬೇರೆಯವರು ಆ ಪ್ರಕಾರವನ್ನು ಶುರುಮಾಡಿದ್ದರೆಂಬ ವಾದ ಇದೆ. 1837ರಲ್ಲಿ ಬಂದ “ದ ಸೀಕ್ರೆಟ್ ಸೆಲ್” ಎಂಬ ಕತೆ ಪತ್ತೇದಾರಿ ಸಾಹಿತ್ಯದ ಮೊದಲ ಮೊಳಕೆ ಎಂದು ಇನ್ನು ಕೆಲವರ ಅಭಿಪ್ರಾಯ. ಇದೇ ಬಗೆಯ ಗೊಂದಲ ಪತ್ತೇದಾರಿ ಕಾದಂಬರಿಗಳ ವಿಷಯದಲ್ಲೂ ಇದೆ. ಕೆಲವರು 1868ರಲ್ಲಿ ಪ್ರಕಟವಾದ (ವಿಲ್ಕೀ ಕಾಲಿನ್ಸ್ ಬರೆದ) “ದಿ ಮೂನ್ ಸ್ಟೋನ್”ಗೆ ಆ ಗೌರವ ಕೊಟ್ಟರೆ ಇನ್ನು ಕೆಲವರು “ದ ನಾಟಿಂಗ್ ಹಿಲ್ ಮಿಸ್ಟರಿ”ಗೆ ಆ ಹಾರ ಹಾಕಬೇಕೆನ್ನುತ್ತಾರೆ. ನಾಟಿಂಗ್ಹಿಲ್ ಮಿಸ್ಟರಿಯನ್ನು ಬರೆದ ಕಾದಂಬರಿಕಾರರು ಯಾರು ಎಂಬುದು ಇದುವರೆಗೂ ಪತ್ತೆಯಾಗದ ವಿಷಯ! ಅದೇನೇ ಇರಲಿ, ಹತ್ತೊಂಬತ್ತನೇ ಶತಮಾನದ ಕೊನೆ ಮುಟ್ಟುವಷ್ಟರಲ್ಲಿ ಅತ್ಯಂತ ಸಮೃದ್ಧವಾಗಿ ಬೆಳೆದುನಿಂತ ಈ ಪ್ರಕಾರವನ್ನು ಓದಿ ಆರ್ಥರ್ ಕಾನನ್ ಡಾಯ್ಲ್ ಪ್ರಭಾವಿತನಾಗಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. 1859ರ ಮೇ 22ರಂದು ಹುಟ್ಟಿದ ಡಾಯ್ಲ್, ವೃತ್ತಿಯಿಂದ ವೈದ್ಯ. ನೌಕಾದಳದಲ್ಲಿ ವೈದ್ಯಾಧಿಕಾರಿಯಾಗಿ ಕೆಲಸ ಮಾಡಿದವನು. ವೈದ್ಯ ವೃತ್ತಿಯಲ್ಲಿದ್ದುಕೊಂಡು ಯುರೋಪ್, ಆಫ್ರಿಕಗಳನ್ನು ನೋಡಿಕೊಂಡು ಬಂದವನು. ಪ್ರವೃತ್ತಿಯಿಂದ ಅವನೊಬ್ಬ ಒಳ್ಳೆಯ ಬಾಕ್ಸರ್ ಕೂಡ ಹೌದು. ಇಂಗ್ಲೆಂಡಿನ ಉಚ್ಛಕುಲೀನರಿಗೆಲ್ಲ ಅಂಟಿಕೊಂಡಿದ್ದ ಕ್ರಿಕೆಟ್ ರೋಗದಿಂದ ತುಸು ಹೆಚ್ಚೇ ಎನ್ನುವಂತೆ ಬಾಧಿತನಾದವನು ಈತ. ಸೇನೆಯಲ್ಲಿ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ಡೆಪ್ಯುಟಿ ಲೆಫ್ಟಿನೆಂಟ್ ಸ್ಥಾನಕ್ಕೆ ಏರಿದವನು. ಸಾಹಸ ಕ್ರೀಡೆಗಳಲ್ಲಿ ಅಪಾರವಾದ ಆಸಕ್ತಿಯೂ, ಪರಿಶ್ರಮವೂ ಇದ್ದ ಡಾಯ್ಲ್ ಯುರೋಪಿನಲ್ಲಿ ಸ್ಕೀಯಿಂಗ್ ಆಟವನ್ನು ಜನಪ್ರಿಯಗೊಳಿಸಿದ. ಇಷ್ಟೊಂದು ವೈವಿಧ್ಯಮಯ ವ್ಯಕ್ತಿಯಾಗಿದ್ದ ಆತ ತನ್ನ ಬಿಡುವಿನ ವೇಳೆಯಲ್ಲಿ ಲೇಖನಿ ಹಿಡಿದು ಒಳ್ಳೊಳ್ಳೆಯ ಪತ್ತೇದಾರಿ ಕತೆಗಳನ್ನು ಬರೆಯಲೂ ಬಲ್ಲವನಾಗಿದ್ದನೆಂಬುದು ಕುತೂಹಲಕರ ಸಂಗತಿ. ಪಾತ್ರಸೃಷ್ಟಿ, ಪಾತ್ರಪೋಷಣೆ, ಸನ್ನಿವೇಶ ವೈವಿಧ್ಯ, ಭಾಷಾಸೌಂದರ್ಯಗಳಲ್ಲಿ ಯಾವ ನುರಿತ ಕಾದಂಬರಿಕಾರನಿಗೂ ಕಮ್ಮಿಯಿಲ್ಲದಂತೆ ಡಾಯ್ಲ್ ತನ್ನ ಲೇಖನಿಯನ್ನು ದುಡಿಸಿದ. ಅಲನ್ ಪೋ ಕತೆಗಳಿಂದ ತುಸು ಹೆಚ್ಚೇ ಪ್ರಭಾವಿತನಾದ ಡಾಯ್ಲ್, ಆತನ ಕತೆಗಳಲ್ಲಿ ಬರುವ ಕೆಲವು ಪಾತ್ರಗಳನ್ನು ಮನಸ್ಸಲ್ಲಿಟ್ಟುಕೊಂಡು, ತನ್ನ ವೈದ್ಯಶಾಲೆಯ ಗುರುವಾಗಿದ್ದ ಡಾ. ಜೋಸೆಫ್ ಬೆಲ್ ಎಂಬವರನ್ನು ಹೋಲುವ ಒಂದು ನಾಯಕ ಪಾತ್ರವನ್ನು ಸೃಷ್ಟಿಸಿದ. ಮೊದಲು ಶೆರಿಂಗ್ ಫೋರ್ಡ್ ಹೋಮ್ಸ್ ಎಂದು ಕರೆಯಲ್ಪಟ್ಟ ಆ ಪಾತ್ರಕ್ಕೆ ನಂತರ ಹೆಸರು ಬದಲಾಯಿಸಿ ಶೆರ್ಲಾಕ್ ಹೋಮ್ಸ್ ಎಂದು ನಾಮಕರಣ ಮಾಡಿದ. ನಾಮದ ಬಲವೋ ಏನೋ, ಈ ಶೆರ್ಲಾಕ್ ಹೋಮ್ಸ್ ಮುಂದೆ ಶತಮಾನದಷ್ಟು ಕಾಲ ಸಾಹಿತ್ಯ ಮತ್ತು ಸಿನೆಮಾ ಜಗತ್ತನ್ನು ಅದ್ವಿತೀಯನಾಗಿ ಆಳಿದ.

ಇಂಗ್ಲೀಷಿನಲ್ಲಿ ಪತ್ತೇದಾರಿಯ ಟ್ರೆಂಡ್ ಅದೆಷ್ಟು ದೂಳೆಬ್ಬಿಸಿಬಿಟ್ಟಿತೆಂದರೆ ಸುಮಾರು ಐವತ್ತು ವರ್ಷಗಳ ಕಾಲ ಎಲ್ಲ ಪ್ರಮುಖ ಡಿಟೆಕ್ಟಿವ್ ನಾವೆಲಿಸ್ಟ್’ಗಳೂ ಜಿದ್ದಿಗೆ ಬಿದ್ದವರಂತೆ ಬರೆಯತೊಡಗಿದರು. ಮೈ ನವಿರೇಳಿಸುವ, ಕುರ್ಚಿಯ ತುದಿಯಲ್ಲಿ ಕೂರಿಸುವ, ತಲೆ ಧಿಮ್ಮೆನ್ನಿಸುವ, ಹೃದಯ ಬಡಿತ ಹೆಚ್ಚಿಸುವ, ಉಸಿರು ನಿಲ್ಲಿಸುವ, ಹಿಡಿದ ಪುಸ್ತಕ ಕೆಳಗಿಡಲಾರದಷ್ಟು ಮೈಮನ ಆವರಿಸಿಕೊಳ್ಳುವ ಈ ಹೊಸ ಪ್ರಕಾರಕ್ಕೆ ಓದುಗರ ಬರ ಇರಲಿಲ್ಲವಾದ್ದರಿಂದ ಕತೆಗಾರರಿಗೂ ಹುಲುಸಾದ ಕೃಷಿ ಮಾಡಲು ಹುರುಪು ಬಂತು. ಪತ್ತೇದಾರಿ ಸಾಹಿತ್ಯ ಕನ್ನಡಕ್ಕೆ ಕಾಲಿಟ್ಟಾಗಲೂ ಅಂಥಾದ್ದೇ ಪ್ರತಿಕ್ರಿಯೆ ಹುಟ್ಟಿತ್ತು ನೋಡಿ. ನರಸಿಂಹಯ್ಯ, ಜಿಂದೆ ನಂಜುಂಡಸ್ವಾಮಿ, ಟಿ.ಕೆ. ರಾಮರಾವ್, ಸುದರ್ಶನ ದೇಸಾಯಿ, ಶೇಷಗಿರಿ, ಬಿ.ವಿ. ಅನಂತರಾಂ, ಎಚ್.ಕೆ. ಅನಂತರಾವ್, ಕೌಂಡಿನ್ಯ ಮೊದಲಾದವರು ಈ ಜಾನರ್ ಅವಿಚ್ಛಿನ್ನವಾಗಿ ಬೆಳೆದುಬರುವಂತೆ ನೋಡಿಕೊಂಡರು. ಇದು ಕನ್ನಡದಲ್ಲಷ್ಟೇ ಹುಟ್ಟಿ ಬೆಳೆದಿದ್ದ ಟ್ರೆಂಡ್ ಅಲ್ಲ. ಅಂತಾರಾಷ್ಟ್ರೀಯ ಖ್ಯಾತಿಯ ಸಿನೆಮಾ ನಿರ್ದೇಶಕ ಸತ್ಯಜಿತ್ ರೇ, ಬಂಗಾಳಿ ಭಾಷೆಯಲ್ಲಿ ಅತ್ಯಂತ ಪ್ರಸಿದ್ಧ ಪತ್ತೇದಾರಿ ಕತೆಗಾರರೂ ಆಗಿದ್ದರು. ಅವರು ಸೃಷ್ಟಿಸಿದ್ದ ಫೆಲೂದಾ ಮತ್ತು ಪ್ರೊದೋಷ್ ಚಂದ್ರ ಮಿತ್ರ ಎಂಬ ಎರಡು ಪತ್ತೇದಾರಿ ಪಾತ್ರಗಳು ಬಂಗಾಳದಲ್ಲಿ ವಿಶ್ವವಿಖ್ಯಾತವಾಗಿದ್ದವು! ಬ್ಯೋಮಕೇಶ ಭಕ್ಷಿ ಎಂಬ ಕಥಾನಾಯಕನನ್ನು ಸೃಷ್ಟಿಸಿದ್ದ ಶರದಿಂದು ಬಂದೋಪಾಧ್ಯಾಯ, ಕತೆ ಬರೆದೂ ಬರೆದು ಸಾಕಾಗಿ ಕೊನೆಗೆ ಭಕ್ಷಿಗೆ ತನ್ನ ಕೊನೆಯ ಕತೆಯಲ್ಲಿ ಮದುವೆ ಮಾಡಿಸಿ, ಮುಂಬಯಿಗೆ ಹೋಗಿ ಸಿನೆಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಕತೆ ಮತ್ತು ಕಲಕತ್ತಾ ಎರಡರಿಂದಲೂ ವಿಮುಖರಾಗಿ ಹದಿನಾರು ವರ್ಷಗಳನ್ನು ಸಿನೆಮಾ ಜಗತ್ತಿನಲ್ಲಿ ಕಳೆದ ಬಂದೋಪಾಧ್ಯಾಯರು ವಾಪಸು ಹುಟ್ಟೂರಿಗೆ ಬಂದಾಗ ಬಂಗಾಳಿಗಳು ಅವರ ಜೊತೆ ಜಗಳಾಡಿ ಬ್ಯೋಮಕೇಶ ಭಕ್ಷಿಗೆ ಮರುಜನ್ಮ ಕೊಡಿಸಿದರು! ಶರದಿಂದು ನಂತರ ತನ್ನ ಜೀವನದ ಕೊನೆಯವರೆಗೆ ಪತ್ತೇದಾರಿ ಕತೆಗಳನ್ನು ಬರೆಯುತ್ತ ಹೋಗಬೇಕಾಯಿತು!

ನಿಜವಾಗಿಯೂ ಪತ್ತೇದಾರರು ಸಮಾಜದಲ್ಲಿ ಇದ್ದರೋ ಇಲ್ಲವೋ. ಆದರೆ ಅವರು ಇದ್ದಾರೆಂದು ಸಮಾಜವನ್ನು ನಂಬಿಸುವಂತೆ ಈ ಲೇಖಕರು ತಮ್ಮ ಕತೆಗಳನ್ನು ಬರೆದರು. ನೀಳ ದೇಹ, ಚೂಪು ಮೂಗು, ಕಲ್ಲಿನಲ್ಲಿ ಕೊರೆದಿಟ್ಟಂಥಾ ಹೊಳಪು ಕಣ್ಣುಗಳು, ಅಥವಾ ಕೆಲವೊಮ್ಮೆ ಅವುಗಳ ನೋಟವನ್ನು ಯಾರೊಬ್ಬರೂ ಗುರುತಿಸಲು ಸಾಧ್ಯವಾಗದಂತೆ ಮೂಗಿನ ಮೇಲೆ ಕೂತ ಕಪ್ಪು ಕನ್ನಡಕ, ನೀಳ ಕಪ್ಪು ಕೋಟು, ಕಪ್ಪು ಬಣ್ಣದ ಹ್ಯಾಟು, ಏನನ್ನೋ ಯೋಚಿಸುತ್ತಿರುವಂತೆ ಗಾಳಿಯಲ್ಲಿ ವೃತ್ತ ಬರೆಯುತ್ತಿರುವ ಕೈ, ಎಡಗೈಯಲ್ಲಿ ಹಿಡಿದ ಪೈಪು, ಅದರಿಂದ ಸಣ್ಣಗೆ ಕಂಡೂ ಕಾಣದಂತೆ ಹೊರಬಂದು ಲೀನವಾಗುತ್ತಿರುವ ಹೊಗೆ. ಪತ್ತೇದಾರರು ಹೀಗಿರುತ್ತಾರೆಂದು, ಅಥವಾ ಹೀಗೆ ಕಾಣುವವರೆಲ್ಲ ಪತ್ತೇದಾರರೆಂದು ಜನರು ನಂಬಿದ್ದರು. ಡಾಯ್ಲ್’ನ ಶೆರ್ಲಾಕ್ ಹೋಮ್ಸ್ ಕೂಡ ಹೀಗೆಯೇ ಇದ್ದ. ಅರ್ಧ ಹರಿದ ಕಾಗದ, ರಸ್ತೆಯಲ್ಲಿ ಬಿದ್ದ ಹ್ಯಾಟು, ಬಯಲಿನಲ್ಲಿ ಕಂಡ ರಕ್ತದ ಕಲೆ ಮುಂತಾದ ಸಣ್ಣಪುಟ್ಟ ಸಂಗತಿಗಳನ್ನಿಟ್ಟುಕೊಂಡೇ ಅವನು ಕೇಸುಗಳ ಬೆನ್ನುಹತ್ತುವ ಬಗೆಯನ್ನು ಓದುಗರು ಉಸಿರು ಬಿಗಿಹಿಡಿದು ಓದುತ್ತಿದ್ದರು. ಹೆಚ್ಚಾಗಿ ಪತ್ತೇದಾರನಿಗೆ ಸಹಾಯಕನೊಬ್ಬ ಇರುವುದು ವಾಡಿಕೆ. ಹೋಮ್ಸ್’ನ ಅಂತಹ ಗೆಳೆಯ ವಾಟ್ಸನ್, ವೃತ್ತಿಯಿಂದ ವೈದ್ಯ. ಆತ ಸಂಬಳಕ್ಕಿರುವ ಸಹಾಯಕನೇನಲ್ಲ. ಆದರೆ ಹೋಮ್ಸ್ ಜೊತೆ ಸೇರಿ ಕೇಸುಗಳ ಬೆನ್ನುಹತ್ತುವುದರಲ್ಲಿ ಅವನಿಗೆ ಎಲ್ಲಿಲ್ಲದ ಖುಷಿ. ಪತ್ತೆ ಕೆಲಸಕ್ಕೆ ಬೇಕಾಗುವ ಅತ್ಯಗತ್ಯ ಸೂಕ್ಷ್ಮ ವಿವರಗಳನ್ನು ವಾಟ್ಸನ್ ತನಗರಿವಿಲ್ಲದೆಯೇ ಬಿಟ್ಟುಕೊಡುತ್ತಾನೆಂಬ ಗುಟ್ಟು ಹೋಮ್ಸ್’ಗೆ ಗೊತ್ತು. ಹಾಗಾಗಿ ತಾನು ಹೋಗುವಲ್ಲೆಲ್ಲ ಅವನು ವಾಟ್ಸನ್ನನ್ನು ಬೆನ್ನಿಗೆ ಕಟ್ಟಿಕೊಳ್ಳುತ್ತಾನೆ.

ಡಾಯ್ಲ್’ನ ಹೋಮ್ಸ್ ಆ ಕಾಲದ ಇತರ ಪತ್ತೇದಾರರಂತೆ ಅತಿಬುದ್ಧಿವಂತನೇನಲ್ಲ. ಆತ ಆಗಾಗ ತಪ್ಪು ಮಾಡುವುದುಂಟು. ಹೀಗೆ ಮಾಡಯ್ಯಾ ಎಂದು ಓದುಗ ಗೋಗರೆಯುವ ಹೊತ್ತಲ್ಲೇ ಈ ಹೋಮ್ಸ್ ಇನ್ನೊಂದು ತಿರುವಿನಲ್ಲಿ ಹೋಗಿ ಮತ್ತಾವುದೋ ಬಗೆಯಲ್ಲಿ ಕೇಸನ್ನು ಎತ್ತಿಕೊಳ್ಳುವುದುಂಟು. ಕೆಲವೊಮ್ಮೆ ಒಂದೆರಡು ತಪ್ಪುಹೆಜ್ಜೆ ಇಟ್ಟು ಮತ್ತೆ ಹಿಂದಕ್ಕೆ ಬರುವುದೂ ಉಂಟು. ಲಾಜಿಕ್ಕಿನ ಭಾಷೆಯಲ್ಲಿ ಹೇಳಬೇಕೆಂದರೆ ಅವನು ಅಬ್ಡಕ್ಷನ್ ಎಂಬ ಮಾದರಿಯನ್ನು ಅನುಸರಿಸುವವನು. ಸಮಸ್ಯೆಯನ್ನು ಪರಿಹರಿಸಲು ಮೂರು ದಾರಿಗಳಂತೆ: ಡಿಡಕ್ಷನ್, ಇಂಡಕ್ಷನ್ ಮತ್ತು ಅಬ್ಡಕ್ಷನ್. ಮೊದಲನೆಯದು ಅವರಿವರ ಹೇಳಿಕೆಯನ್ನು ನಂಬಿಕೊಂಡು ಒಂದು ನಿರ್ಣಯಕ್ಕೆ ಬರುವ ಮಾದರಿ. ಎರಡನೆಯದ್ದು, ಪರರ ಹೇಳಿಕೆಗಳಿಗಿಂತ ಹೆಚ್ಚಾಗಿ ಕಣ್ಣಿಗೆ ಕಾಣಸಿಗುವ ಒಂದಷ್ಟು ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋಗಿ ಕೊನೆಗೆ ಸಮಸ್ಯೆಯನ್ನು ಭೇದಿಸುವ ಬಗೆ. ಮೂರನೆಯದ್ದು ಅಷ್ಟಿಷ್ಟೇ ಸಾಕ್ಷಿಗಳನ್ನು ಎತ್ತಿಕೊಂಡು ಅವುಗಳ ಸುತ್ತ ತಾನೇ ಹೀಗಾಗಿರಬಹುದೆ, ಹಾಗಾಗಿರಬಹುದೆ ಎನ್ನುತ್ತ ಕತೆಯನ್ನು ಸೃಷ್ಟಿಸಿಕೊಳ್ಳುವುದು. ಇಂಗ್ಲೀಷಿನಲ್ಲಿ “ಕನೆಕ್ಟ್ ದ ಡಾಟ್ಸ್” ಎನ್ನುತ್ತಾರಲ್ಲ ಹಾಗೆ, ಚದುರಿದ ಬಿಂದುಗಳನ್ನು ಕೂಡಿಸಿಕೊಂಡು ಕೊನೆಗೆ ಸ್ಪಷ್ಟ ಅಂತ್ಯವನ್ನು ಕಂಡುಕೊಳ್ಳುವ ವಿಧಾನ. ಇಲ್ಲಿ ಕತೆಯನ್ನು ತಾನೇ ಊಹಿಸಿಕೊಳ್ಳುವ ಅವಕಾಶ ಇರುವುದರಿಂದ ಎಲ್ಲೋ ಆಗಾಗ ತಪ್ಪುಗಳಾಗುವುದು ಸಹಜವಲ್ಲವೆ? ಬಹುಶಃ ಅವನ ಈ ಗುಣವೇ ಅವನನ್ನು ಅತಿಮಾನುಷನಾಗಿ ಮಾಡದೆ ಓದುಗರ ಹತ್ತಿರ ತಂದಿತಿರಬೇಕು. ಉಳಿದೆಲ್ಲ ಪತ್ತೇದಾರರಂತೆ ಹೋಮ್ಸ್ ಕೂಡ ಅವಿವಾಹಿತ. ವೃತ್ತಿನಿಷ್ಠ. ಕೀರ್ತಿಪರಾಙ್ಮುಖ. ಇಂಗ್ಲೀಷ್ ಸಂಸ್ಕೃತಿಯ ಸಭ್ಯನಾದರೂ ಆಗಾಗ ಶಿಷ್ಟಾಚಾರ ಮೀರುವವನು. ತನ್ನ ಮಾತಿನಲ್ಲಿ, ನಡೆಯಲ್ಲಿ ನಾಜೂಕಿನ ಮನುಷ್ಯ. ಅವನ ಕೆನ್ನೆ ಸದಾ ನುಣುಪು. ಮೈಮೇಲಿನ ಕೋಟಿನಲ್ಲಿ ಇಸ್ತ್ರಿ ಹಾಕಿದ ಗೆರೆ ಸದಾ ಗರಿಗರಿ. ತನ್ನ ಊಹೆಯನ್ನೂ ಮೀರಿ ಬುದ್ಧಿವಂತಿಕೆ ತೋರಿಸುವ ವ್ಯಕ್ತಿಗಳನ್ನು ಕಂಡರೆ ಹೋಮ್ಸ್’ಗೆ ಒಂದು ಬಗೆಯ ತಾತ್ಸಾರ ಮತ್ತು ಅಸೂಯೆ. ಅವನ ಇಡೀ ವೃತ್ತಿಜೀವನದಲ್ಲಿ ಒಮ್ಮೆ ಮಾತ್ರ ತಾನೇ ಬೇಸ್ತು ಬೀಳುವ ಪ್ರಸಂಗದಲ್ಲಿ ಸಿಕ್ಕಿಕೊಳ್ಳುತ್ತಾನೆ. ಆದರೆ, ಆಗ ಅವನನ್ನು ಮೀರುವಾಕೆ ಐರೀನ್ ಆಡ್ಲರ್ ಆದ್ದರಿಂದ, ಮತ್ತಾಕೆ ಆತನ ಗುಪ್ತಪ್ರೇಯಸಿಯೂ ಆದ್ದರಿಂದ, ಆ ಸೋಲು ಕೂಡ ಅವನಿಗೆ ರುಚಿಕರ.

ಹೋಮ್ಸ್’ನ ಕತೆಗಳು ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರತೊಡಗಿದಾಗ ಅದಕ್ಕೆ ಚಿತ್ರ ಬರೆಯುತ್ತಿದ್ದ ಸಿಡ್ನಿ ಪ್ಯಾಜೆಟ್ ಎಂಬ ಕಲಾವಿದ, ಆ ವ್ಯಕ್ತಿತ್ವಕ್ಕೆ ಒಂದು ಹ್ಯಾಟೂ ತೋಳಿಲ್ಲದ ಜ್ಯಾಕೆಟ್ಟೂ (ಇದನ್ನು ಕೇಪ್ ಎನ್ನುತ್ತಾರೆ) ತೊಡಿಸಿದ. ಹೋಮ್ಸ್’ನ ಕತೆಯನ್ನು ನಾಟಕಕ್ಕೆ ಅಳವಡಿಸಿ ರಂಗದ ಮೇಲೆ ಅಭಿನಯಿಸಲು ಶುರುಮಾಡಿದಾಗ, ಅವನು ಎಳೆಯುತ್ತಿದ್ದ ಪೈಪ್ ನೇರವಾಗಿದ್ದರೆ ಮುಖ ಸರಿಯಾಗಿ ಕಾಣುವುದಿಲ್ಲವೆಂದು ನಾಟಕದವರು ಬಳ್ಳಿಯಂತೆ ಬಳುಕುವ ಪೈಪ್ಅನ್ನು ಬಳಕೆಗೆ ತಂದರು. ಅಲ್ಲಿಂದ ಮುಂದಕ್ಕೆ ತನ್ನ ಕೈಯಲ್ಲಿ ಈ ಪತ್ತೇದಾರ ಒಂದು ಎಸ್ ಆಕಾರದ ಪೈಪ್ ಹಿಡಿದಿರುವಂತೆ ಕಲಾವಿದರು ಚಿತ್ರ ಬಿಡಿಸತೊಡಗಿದರು. ಹೀಗೆ ಮೂಲದಲ್ಲಿ ಇಲ್ಲದ ಅದೆಷ್ಟೋ ವಿಶೇಷಗಳನ್ನು ಕಲಾವಿದರು ತಮಗೆ ಸರಿ ಕಂಡಹಾಗೆ ಹೋಮ್ಸ್ಗೆ ತೊಡಿಸುತ್ತ ಹೋದರು. ಶೆರ್ಲಾಕ್ ಹೋಮ್ಸ್ ಅದೆಷ್ಟು ಪ್ರಸಿದ್ಧನಾದನೆಂದರೆ ಜರ್ಮನಿಯ ಹಿಟ್ಲರ್ ಪಡೆ ಅವನನ್ನು ತನ್ನ ಸಂದೇಶವನ್ನು ದೇಶಾದ್ಯಂತ ಸಾರುವ ಸರಕಾರೀ ಚಲನಚಿತ್ರಗಳಲ್ಲೂ ಬಳಸಿಕೊಂಡು ಅವನ ತೋಳಿಗೆ ಸ್ವಸ್ತಿಕ ತೊಡಿಸಿತು! ಡಾಯ್ಲ್, ಹೋಮ್ಸ್’ನ ಮೊದಲ ಕತೆ ಬರೆದದ್ದು 1887ರಲ್ಲಿ. ಹತ್ತೊಂಬತ್ತನೇ ಶತಮಾನದ ಮೊದಲ ಇಪ್ಪತ್ತು ವರ್ಷಗಳಲ್ಲಿ ಹಾಲಿವುಡ್ ಒಂದರಲ್ಲೇ ಹೋಮ್ಸ್ ಮೇಲೆ ಕನಿಷ್ಠ ನೂರು ಸಿನೆಮಾಗಳು ಬಂದುಹೋದವು! ಪುಸ್ತಕ, ಟಿವಿ, ರೇಡಿಯೋ, ವೃತ್ತಪತ್ರಿಕೆಗಳಲ್ಲಿ ಬಂದುಹೋದ ಹೋಮ್ಸ್ ಅವತರಣಿಕೆಗಳು ಎಷ್ಟು ಎಂಬ ಲೆಕ್ಕವೇ ಇಲ್ಲ.

ಶೆರ್ಲಾಕ್ ಹೋಮ್ಸ್’ನ ಕತೆಗಳಲ್ಲಿ ಆತನ ವಿಳಾಸದ ಪ್ರಸ್ತಾಪ ಆಗಾಗ ಬರುತ್ತದೆ. ಯಾವುದಾದರೂ ವ್ಯಕ್ತಿಯನ್ನು ಖಾಸಗಿಯಾಗಿ ಭೇಟಿ ಮಾಡಬೇಕಿದ್ದರೆ ಹೋಮ್ಸ್ ತನ್ನ ಮನೆಯ ವಿಳಾಸ ಕೊಡುತ್ತಾನೆ. ಅದು 221ಬಿ, ಬೇಕರ್ ಸ್ಟ್ರೀಟ್, ಲಂಡನ್ – ಎಂದು. ಅಸಲಿಗೆ ಅಂಥದೊಂದು ಬೀದಿಯೇ ಲಂಡನ್ನಲ್ಲಿ ಇರಲಿಲ್ಲ! ಆದರೆ, ಹೋಮ್ಸ್’ನ ಕತೆ ಜಗತ್ತಿನ ಯಾವೆಲ್ಲ ಮೂಲೆಗಳಲ್ಲಿ ಜನಪ್ರಿಯವಾಗಿತ್ತೋ ಅವೆಲ್ಲಾ ಕಡೆಗಳಿಂದಲೂ ಈ ವಿಳಾಸಕ್ಕೆ ಪತ್ರಗಳು ಬರುತ್ತಿದ್ದವು. ಕೆಲವು ಮೆಚ್ಚಿ ಬರೆದವು; ಇನ್ನು ಕೆಲವು ಪತ್ತೇದಾರಿಕೆಯ ಸಹಾಯ ಕೇಳಿ ಬರೆದವು. ಇಂಥ ಪತ್ರಗಳನ್ನು ಏನು ಮಾಡಬೇಕೆಂದು ಲಂಡನ್ನಿನ ಅಂಚೆ ಇಲಾಖೆ “ರಾಯಲ್ ಪೋಸ್ಟ್”ಗೆ ಗೊತ್ತಿರಲಿಲ್ಲ. ಡಾಯ್ಲ್ ಬದುಕಿದ್ದಷ್ಟು ಕಾಲ ಅದು ಆ ಎಲ್ಲ ಪತ್ರಗಳನ್ನೂ ಅವನಿಗೆ ಕಳಿಸಿ ಕೈತೊಳೆದುಕೊಳ್ಳುತ್ತಿತ್ತು. ಆದರೆ, ಆತನ ಮರಣಾನಂತರ ಬಂದ ಪತ್ರಗಳನ್ನು ಹಾಗೇ ಒಂದೆಡೆ ರಕ್ಷಿಸಿಕೊಂಡು ಹೋಗಲಾಯಿತು. ಪತ್ರಗಳ ಪ್ರವಾಹ ಯಾವ ಮಟ್ಟಿಗಿತ್ತೆಂದರೆ ಅವನ್ನೆಲ್ಲ ಜೋಪಾನವಾಗಿ ರಕ್ಷಿಸಿಡುವ ಜವಾಬ್ದಾರಿ ತನಗೆ ದುಬಾರಿಯಾಗುತ್ತದೆಂದು ಅಂಚೆ ಇಲಾಖೆ ಅಲವತ್ತುಕೊಳ್ಳಬೇಕಾದ ಪರಿಸ್ಥಿತಿ ಬಂತು. ಕೊನೆಗೆ ಹೋಮ್ಸ್ ಅಭಿಮಾನಿ ಸಂಘವೊಂದು ಲಂಡನ್ನಿನಲ್ಲಿ ಹೋಮ್ಸ್ನ ಕಾಲ್ಪನಿಕ ಮನೆಯನ್ನು ಹೋಲುವ ಮನೆಯೊಂದನ್ನು 1990ರಲ್ಲಿ ಕಟ್ಟಿಸಿ ಸಾರ್ವಜನಿಕರಿಗೆ ಮುಕ್ತವಾಗಿಟ್ಟಿತು. ಅದಾಗಿ ಕೆಲವು ವರ್ಷಗಳ ನಂತರ ಅಂಥಾದ್ದೇ ಇನ್ನೊಂದು ಮನೆಯನ್ನು ಇನ್ನೊಂದು ಅಭಿಮಾನಿ ಬಳಗ ಕಟ್ಟಿಸಿ, ಇದೇ ಹೋಮ್ಸ್ನ ಕತೆಗಳನ್ನು ಹೋಲುವ ಅಧಿಕೃತ ನಿವಾಸ ಎಂದಿತು. ಅದನ್ನೀಗ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಇದು ಬೇಕರ್ ಸ್ಟ್ರೀಟ್ ಎಂಬ ಬೀದಿಯ 239ನೇ ನಂಬರ್’ನಲ್ಲಿದೆ. ಸಂಘದವರು ಅಂಚೆ ಇಲಾಖೆಗೆ ಮನವಿ ಸಲ್ಲಿಸಿ, ಅದನ್ನೇ 221ಬಿ ಎಂದು ಅಧಿಕೃತಗೊಳಿಸಬೇಕೆಂಬ ಬೇಡಿಕೆ ಇಟ್ಟು ಯಶಸ್ವಿಯಾಗಿದ್ದಾರೆ. ಆಗ ಪತ್ರಗಳನ್ನು ಯಾವ ವಿಳಾಸಕ್ಕೆ ಕಳಿಸಬೇಕು ಎಂಬ ಹೊಸ ಸಮಸ್ಯೆ ಎದ್ದಾಗ, ಅವೆರಡೂ ಸಂಘಗಳ ನಡುವೆ ವಿವಾದ ಹತ್ತಿ ಕೊನೆಗೆ ಹೊಸದಾಗಿ ನಿರ್ಮಿಸಿದ “ಅಧಿಕೃತ” ನಿವಾಸಕ್ಕೇ ಕಳಿಸಬಹುದೆಂಬ ತೀರ್ಮಾನವಾಯಿತು. ಅಸ್ತಿತ್ವದಲ್ಲೇ ಇಲ್ಲದಿದ್ದ ಒಂದು ಬೀದಿಯನ್ನು, ಕತೆಯಲ್ಲಿ ಬಂದಿದೆ ಎಂಬ ಕಾರಣಕ್ಕೆ ಕೃತಕವಾಗಿ ನಿರ್ಮಿಸಿ, ಅಲ್ಲೊಂದು ಮನೆಯನ್ನೂ ಕಟ್ಟಿಸಿ ಕಲ್ಪನೆಯನ್ನು ಮರೆಸುವಷ್ಟು ಸಶಕ್ತವಾಗಿ ಕಟ್ಟಿರುವ ವಾಸ್ತವಗೃಹ ನಿಂತಿದೆ. ಈ ಕಲ್ಪನೆ-ವಾಸ್ತವಗಳ ಕಲಸುಮೇಲೋಗರದ ಕತೆಯನ್ನು ಇಂಗ್ಲೀಷರು ಒಂದೇ ವಾಕ್ಯದಲ್ಲಿ “A fictional flat in a real city has been made a reality at a fictional address in the real city near the real address of the fictional flat” ಎಂದು ಹೇಳುತ್ತಾರೆ. ಅರ್ಥವಾಗದೇ ಹೋದರೆ ಭಯಬೀಳಬೇಕಿಲ್ಲ. ಶೆರ್ಲಾಕ್ ಹೋಮ್ಸ್ ನಿಜವಾದ ವ್ಯಕ್ತಿಯೋ ಕಾಲ್ಪನಿಕ ಪಾತ್ರವೋ ಎಂಬುದು ಇನ್ನೂ ಹಲವರಿಗೆ ಬಗೆಹರಿಯದ ಸಮಸ್ಯೆಯಾಗಿ ನಿಂತಿರುವಾಗ ಇಂಥ ಸಂಕೀರ್ಣ ವಾಕ್ಯದ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ ಬಿಡಿ!

ತಮಾಷೆಯೆಂದರೆ ಶೆರ್ಲಾಕ್ ಹೋಮ್ಸ್’ನ ಕಾಲ ಮುಗಿದು ನೂರು ವರ್ಷಗಳು ಸಂದುಹೋದರೂ ಇಂದಿಗೂ ಅಂಥ ಒಬ್ಬ ವ್ಯಕ್ತಿ ಇದ್ದಾನೆಂದೇ ಭ್ರಮಿಸಿ ಕಾಗದ ಬರೆಯುವವರು ಇದ್ದಾರೆ! ಹೋಮ್ಸ್, ನೀನೊಬ್ಬನೇ ನನ್ನ ಸಮಸ್ಯೆಯನ್ನು ಪರಿಹರಿಸಬಲ್ಲೆ. ದಯವಿಟ್ಟು ಈ ಪತ್ರಕ್ಕೆ ತುರ್ತಾಗಿ ಉತ್ತರಿಸು – ಎಂಬ ಒಕ್ಕಣೆಯ ಪತ್ರಗಳು ಬಂದಾಗೆಲ್ಲ ಹೋಮ್ಸ್ ಅಭಿಮಾನಿ ಸಂಘದವರು, “ಹೋಮ್ಸ್ ಈಗ ವೃದ್ಧಾಪ್ಯದ ಕಾರಣದಿಂದ ಪತ್ತೇದಾರಿಕೆಯಿಂದ ನಿವೃತ್ತರಾಗಿದ್ದಾರೆ. ಯಾವ ಹೊಸ ಕೇಸನ್ನೂ ತೆಗೆದುಕೊಳ್ಳುತ್ತಿಲ್ಲ. ಕ್ಷಮಿಸಿ” ಎಂಬ ಉತ್ತರ ಬರೆದು ಕಳಿಸುತ್ತಾರೆ. ಹೋಮ್ಸ್ ಕತೆಗಳನ್ನು ಆಧರಿಸಿ ನೂರಾರು ಸಿನೆಮಾಗಳು, ಟಿವಿ ಧಾರಾವಾಹಿಗಳು ಬಂದುಹೋಗಿವೆ. ಅವುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಜನಪ್ರಿಯವಾದದ್ದು 1984ರಿಂದ 94ರವರೆಗೆ ಅಮೆರಿಕಾದಲ್ಲಿ ಪ್ರಸಾರವಾದ ಶೆರ್ಲಾಕ್ ಹೋಮ್ಸ್ ಎಂಬ ಧಾರಾವಾಹಿ. ಇದರ ನಾಯಕನಟ ಜೆರೆಮಿ ಬ್ರೆಟ್ ನಿಜವಾಗಿಯೂ ಹೋಮ್ಸ್ ಇವನೇ ಎಂದು ಜನ ನಂಬಿಬಿಡುವಷ್ಟು ಸಹಜವಾಗಿ ಅಭಿನಯಿಸಿ ಜನಪ್ರಿಯನಾದ. ಇತ್ತೀಚೆಗೆ ಕೆಲವು ವರ್ಷಗಳಿಂದ ಶೆರ್ಲಾಕ್ ಎಂಬ ಟಿವಿ ಸರಣಿ  ಬರುತ್ತಿದೆ. ಹೊಸ ಕಾಲದ ಹೊಸ ಸಮಸ್ಯೆಗಳಿಗೆ ಉತ್ತರ ಹುಡುಕುವ ಪತ್ತೇದಾರನಾಗಿ ಹಾಲಿವುಡ್ ನಟ ಬೆನೆಡಿಕ್ಟ್ ಕಂಬರ್ಬ್ಯಾಚ್ ನಟಿಸಿ ಜನಮನ ಸೂರೆಗೈದಿದ್ದಾನೆ. ಜೊತೆಗೆ “ಎಲಿಮೆಂಟರಿ” ಎಂಬ ಇನ್ನೊಂದು ಸರಣ ಯೂ ಶುರುವಾಗಿದೆ. ಹೋಮ್ಸ್ ಕತೆಗಳನ್ನು ಓದಿದವರಿಗೆ ಈ ಪದದ ಅರ್ಥ ಚೆನ್ನಾಗಿ ಗೊತ್ತು. ತೀರಾ ಗಹನ, ಸಂಕೀರ್ಣ, ಜಿಗುಟು ಎನ್ನಿಸುವ ಸಮಸ್ಯೆಗಳನ್ನೂ ಹೋಮ್ಸ್ “ಇಟ್ ಈಸ್ ಎಲಿಮೆಂಟರಿ” ಎಂದು (ಅಷ್ಟೇನೂ ದೊಡ್ಡ ಸಮಸ್ಯೆಯಲ್ಲ ಎಂಬರ್ಥದಲ್ಲಿ) ಹೇಳಿ ತನ್ನದೇ ಆದ ವಿಚಿತ್ರ, ವಿಶಿಷ್ಟ ಬಗೆಯಲ್ಲಿ ಪರಿಹರಿಸುವ ಚೆಂದವನ್ನು ಬಲ್ಲವರೇ ಬಲ್ಲರು. ಹಾಗಾಗಿ ಕತೆಯಲ್ಲಿ ಎಲ್ಲೆಲ್ಲಿ ಎಲಿಮೆಂಟರಿ ಎಂಬ ಪದ ಹೋಮ್ಸ್ ಬಾಯಿಂದ ಬರುತ್ತದೋ, ಅಲ್ಲೆಲ್ಲ ಒಂದು ಅದ್ಭುತವಾದ ತಿರುವು ಕತೆಯ ಓಘಕ್ಕೆ ಸಿಗುವುದೆಂದು ಓದುಗರಿಗೆ ಗೊತ್ತು.

ಹತ್ತೊಂಬತ್ತು-ಇಪ್ಪತ್ತನೇ ಶತಮಾನಗಳಲ್ಲಿ ಡಾಯ್ಲ್’ನಂತೆ ಹಲವರು ಪತ್ತೇದಾರಿ ಕೃತಿಗಳನ್ನು ಬರೆದರೂ, ಯಾರೊಬ್ಬರಿಗೂ ಹೋಮ್ಸ್’ನ ಜನಪ್ರಿಯತೆಯನ್ನು ಸರಿಗಟ್ಟಲು ಸಾಧ್ಯವಾಗಲಿಲ್ಲ. ಕಾಲ್ಪನಿಕ ಪಾತ್ರವೊಂದು ನಿಜವಾಗಿಯೂ ಈ ಭೂಮಿಯಲ್ಲಿ ನಡೆದಾಡಿಹೋಗಿದೆ ಎಂಬಂತೆ ಜನರ ಮನಸ್ಸಲ್ಲಿ ಅಚ್ಚಾಗಿ ಉಳಿಯುವುದು ಶತಮಾನಕ್ಕೊಮ್ಮೆ ಸಂಭವಿಸುವ ವಿರಳ ವಿದ್ಯಮಾನ. ಹೋಮ್ಸ್ ಆ ಮಟ್ಟಿಗೆ ಅದೃಷ್ಟವಂತ. ಅವನ ಕಾಲ್ಪನಿಕ ಮನೆಯನ್ನು ಇಂದಿಗೂ ಬ್ರಿಟಿಷರು ವಾಸ್ತವ ಜಗತ್ತಿನಲ್ಲಿ ಎಬ್ಬಿಸಿ ಕಾದಿಟ್ಟುಕೊಂಡು ಹೋಗುತ್ತಿದ್ದಾರೆ. ಹೋಮ್ಸ್ ನಿಜವಾದ ವ್ಯಕ್ತಿ ಎಂದು ಭ್ರಮೆ ಹಿಡಿಸುವಂತೆ ಅವನಿಗೆ ಸಂಬಂಧಿಸಿದ ಕೋಟು, ಹ್ಯಾಟು, ಬೂಟು, ಕನ್ನಡಕ, ಭೂತಗನ್ನಡಿ (ಅದನ್ನು ಬಳಸಿದ ಮೊದಲ ಪತ್ತೇದಾರ ಅವನು), ಕೋಲು, ಪುಸ್ತಕಗಳು ಎಲ್ಲವನ್ನೂ 221ಬಿ, ಬೇಕರ್ ಸ್ಟ್ರೀಟ್ ವಿಳಾಸದಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಹೋಮ್ಸ್ ಸರಣಿಯ ಪುಸ್ತಕಗಳು ಈಗಲೂ ಅಲ್ಲಿನ ಬೀದಿಯಲ್ಲಿ ಬಿಸಿ ಕಜ್ಜಾಯದಂತೆ ಮಾರಾಟವಾಗುತ್ತವೆ. ಕಳೆದ ನೂರೈವತ್ತು ವರ್ಷಗಳಲ್ಲಿ ಬಂದ ಈ ಹೊತ್ತಗೆಗಳ ಬಗೆಬಗೆಯ ಆವೃತ್ತಿಗಳನ್ನು ಹೋಮ್ಸ್ ಮನೆಯ ಕಪಾಟುಗಳಲ್ಲಿ ಸಾಲಾಗಿ ಜೋಡಿಸಿ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಲಾಗಿದೆ. ಇವನ್ನೆಲ್ಲ ನೋಡುವಾಗ ನಮ್ಮ ಎನ್. ನರಸಿಂಹಯ್ಯ ಇದ್ದೊಂದು ಮನೆಯನ್ನೂ ಕಳೆದುಕೊಂಡು ಸರಕಾರೀ ಇಲಾಖೆಗಳಿಗೆ ಪತ್ರ ಬರೆದುಕೊಂಡು ಹೈರಾಣಾದ ಸುದ್ದಿ ಮನಃಪಟಲದಲ್ಲಿ ತೇಲಿ ಹೋಗುತ್ತದೆ. ನಮ್ಮಲ್ಲಿ ಕಾಲ್ಪನಿಕ ಪಾತ್ರಗಳನ್ನು ಬಿಡಿ, ಅವನ್ನು ಸೃಷ್ಟಿಸಿದ ರಕ್ತಮಾಂಸದ ಕತೆಗಾರರನ್ನೂ ಸರಿಯಾಗಿ ನಡೆಸಿಕೊಳ್ಳುವ ಔದಾರ್ಯ ಸರಕಾರಕ್ಕೆ, ಜನಕ್ಕೆ ಹುಟ್ಟಲಿಲ್ಲ. ಒಂದೆರಡು ಸಿನೆಮಾ ಮಾಡಿ ತೋಪೆದ್ದವರಿಗೂ ಬೀದಿಬೀದಿಗಳಲ್ಲಿ ಅಭಿಮಾನಿ ಸಂಘಗಳು ಹುಟ್ಟುವ ಈ ನೆಲದಲ್ಲಿ ನೂರಾರು ಕತೆ, ಕಾದಂಬರಿಗಳನ್ನು ಬರೆದವರು ಯಾವ ಸಂಘಸಂಸ್ಥೆಗಳ ಆಸ್ಥೆಯಿಲ್ಲದೆ ಬದುಕು ಮುಗಿಸಿಹೋಗುತ್ತಾರೆ. ನಿಮಗೆ ಅಚ್ಚರಿಯಾಗಬಹುದು, ಜಗತ್ತಿನಾದ್ಯಂತ ಹೆಸರಾಗಿರುವ ಶೆರ್ಲಾಕ್ ಹೋಮ್ಸ್ ಮೇಲೆ ಆರ್ಥರ್ ಕಾನನ್ ಡಾಯ್ಲ್ ಬರೆದದ್ದು ಕೇವಲ 56 ಕತೆ, ನಾಲ್ಕು ಕಾದಂಬರಿಗಳು ಅಷ್ಟೆ!

1930ರ ಜುಲೈ 7ರಂದು, ತನ್ನ 71ನೇ ವಯಸ್ಸಿನಲ್ಲಿ ಡಾಯ್ಲ್ ತೀರಿಕೊಂಡ. ಆದರೆ, ಆತನ ಸೃಷ್ಟಿಯಾದ ಹೋಮ್ಸ್ ಮಾತ್ರ ಚಿರಂಜೀವಿಯಾಗಿ ಸಾಹಿತ್ಯ ಜಗತ್ತಿಗೆ ಸೇರಿಹೋಗಿದ್ದಾನೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!