Featured ಅಂಕಣ

ಬ್ರಾಹ್ಮಣರಿಗೆ ನಿಜವಾಗಿಯೂ ಮೀಸಲಾತಿ ಬೇಕಾ?

ಒಂದು ನೈಜ ಉದಾಹರಣೆಯೊಂದಿಗೆ ಆರಂಭಿಸುತ್ತೇನೆ. ನನಗೆ ಪಿಯುಸಿಯಲ್ಲಿ ಇಬ್ಬರು ಸ್ನೇಹಿತರಿದ್ದರು. ಒಬ್ಬ ಸರಕಾರದ ದೃಷ್ಟಿಯಲ್ಲಿ  ಮೇಲ್ವರ್ಗಕ್ಕೆ ಸೇರಿದ ಬಡ ಬ್ರಾಹ್ಮಣ, ಮತ್ತೊಬ್ಬ ಹಿಂದುಳಿದ ವರ್ಗಕ್ಕೆ ಸೇರಿದವನು, ಆದರೆ ಬಹಳಾ ಶ್ರೀಮಂತ. ಪಿಯುಸಿಯ ಪರೀಕ್ಷೆಯಲ್ಲಿ ಇಬ್ಬರಿಗೂ ತೊಂಬತ್ತು ಶೇಕಡಾ ಅಂಕ ಬಂದಿತ್ತು. ಅದ ನಂತರದ ಸಿಇಟಿಯಲ್ಲಿ ಬ್ರಾಹ್ಮಣ ವರ್ಗಕ್ಕೆ ಸೇರಿದವನಿಗೆ ಇನ್ನೊಬ್ಬನಿಗಿಂತ ನೂರು ರ್ಯಾಂಕ್ ಉತ್ತಮವಾಗಿ ಬಂದಿತ್ತು. ಉತ್ತಮ ಅಂಕ ಮತ್ತು ಉತ್ತಮ ರ್ಯಾಂಕ್ ಪಡೆದಿರುವ ಕಾರಣ ಇಬ್ಬರಿಗೂ ಉತ್ತಮವಾದ ಕಾಲೇಜುಗಳಲ್ಲೇ ಇಂಜಿನಿಯರಿಂಗ್ ಓದಬೇಕು ಎನ್ನುವ ಆಸೆಯಿತ್ತು. ಕೌನ್ಸೆಲಿಂಗ್’ನ ದಿನ ಬಂತು. ಇಬ್ಬರಿಗೂ ನೂರು ರ್ಯಾಂಕಿನ ಅಂತರ ಇದ್ದ ಕಾರಣ ಒಂದೇ ದಿನದಲ್ಲಿ ಕೌನ್ಸೆಲಿಂಗ್ ನಡೆಯಿತು. ಒಬ್ಬನಿಗೆ ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಾದ ಆರ್.ವಿ ಕಾಲೇಜಿನಲ್ಲಿ ಅವನಿಗೆ  ಬೇಕಾದ ಸಬ್ಜೆಕ್ಟಿನಲ್ಲಿಯೇ ಸೀಟ್ ದೊರೆಯಿತು. ಈ ಬಡ ಬ್ರಾಹ್ಮಣ ಅಷ್ಟೇನೂ ಪ್ರತಿಷ್ಠಿತವಲ್ಲದ  ಸ್ಥಳೀಯ ಕಾಲೇಜಿನಲ್ಲಿ ಆತನಿಗೆ ಬೇಕಾದ ಸಬ್ಜೆಕ್ಟ್ ಪಡೆದುಕೊಳ್ಳಲು ಎರಡನೇ ರೌಂಡಿನ ಕೌನ್ಸೆಲಿಂಗ್’ವರೆಗೂ ಹೆಣಗಾಡಬೇಕಾಯ್ತು. ಬ್ರಾಹ್ಮಣನಿಗೆ ಮತ್ತೊಬ್ಬನಿಗಿಂತ ನೂರು ಉತ್ತಮ ರ್ಯಾಂಕ್ ಬಂದಿದ್ದರೂ ಉತ್ತಮ ಕಾಲೇಜಿನಲ್ಲಿ ಸೀಟ್ ದೊರಕಲಿಲ್ಲ. ರ್ಯಾಂಕಿನಲ್ಲಿ ಬಹಳ ಸಣ್ಣ   ಅಂತರ. ಸೀಟ್ ಸಿಕ್ಕ ಕಾಲೇಜುಗಳ ಮಧ್ಯೆ ಅಜಗಜಾಂತರ ಅಂತರ!

ಇದೇ ನೋಡಿ ಮೀಸಲಾತಿಯ ಕರಾಳ ಮುಖ. ಒಬ್ಬನನ್ನು ಮೇಲೆತ್ತುವ ಸಲುವಾಗಿ ಇನ್ನೊಬ್ಬನನ್ನು ತುಳಿದು ಕೆಳಗೆ ತಳ್ಳುವುದೇ ಈ ಮೀಸಲಾತಿ. ಅಷ್ಟು ಮಾತ್ರವಲ್ಲದೆ, ಪ್ರತಿಷ್ಠಿತ ಕಾಲೇಜಿನಲ್ಲಿ ಕಲಿತನೆಂಬ ಕಾರಣಕ್ಕೆ ಒಬ್ಬನಿಗೆ ಕೋರ್ಸ್ ಮುಗಿದ ತಕ್ಷಣ ಉತ್ತಮ ಕಂಪೆನಿಯಲ್ಲಿ ಕೆಲಸವೂ ಸಿಕ್ಕಿತು. ಈ ಬಡ ಬ್ರಾಹ್ಮಣನಿಗೆ ಉತ್ತಮ ಅಂಕಗಳಿದ್ದರೂ ಶೀಘ್ರವಾಗಿ ಕೆಲಸ ಸಿಗಲಿಲ್ಲ.  ಒಂದು ವೇಳೆ ಅವರಿಬ್ಬರನ್ನೂ ಯೋಗ್ಯತೆಯ ಅಳತೆಯಲ್ಲಿ ನೋಡಿದಿದ್ದರೆ ಬಹುಶಃ ಅವರಿಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರಲ್ಲವೇ? ಇಬ್ಬರಿಗೂ ಉತ್ತಮ ಕಂಪೆನಿಯಲ್ಲೇ ಕೆಲಸ ದೊರಕುತ್ತಿತ್ತಲ್ಲವೇ? ಅವರಿಬ್ಬರ ಮಧ್ಯೆ ಮೀಸಲಾತಿಯೆಂಬ ತಡೆಗೋಡೆಯನ್ನು ತಂದಿಟ್ಟು ಪರೋಕ್ಷವಾಗಿ ಇಬ್ಬರ ನಡುವೆ ಜಾತಿ ದ್ವೇಷವನ್ನು ತಂದಿಟ್ಟಿದ್ದು ನಮ್ಮ ವ್ಯವಸ್ಥೆಯೇ ಅಲ್ಲವೇ?

ಇದು ಒಬ್ಬ ಇಬ್ಬನಿಗೆ ಆಗುತ್ತಿರುವ ಅನ್ಯಾಯವಲ್ಲ. ಬ್ರಾಹ್ಮಣ ವರ್ಗದ ನೂರಾರು ಯುವಕರಿಗೆ ಈ ಅನ್ಯಾಯವಾಗುತ್ತಿದೆ. ಉಳಿದವರಂತೆ ಯಾರೂ ಕೂಡಾ ಅದನ್ನು ಪ್ರತಿಭಟಿಸುತ್ತಿಲ್ಲ ಅಷ್ಟೇ. ಇದಿಷ್ಟು ಮಾತ್ರವಲ್ಲದೆ, ಬ್ರಾಹ್ಮಣರ ಮೇಲೆ ಪ್ರಗತಿಪರರೆಂದು, ಸಮಾಜವಾದಿಗಳೆಂದು  ಹೇಳಿಕೊಂಡು ತಿರುಗುತ್ತಿರುವ ಗಂಜಿ ಗಿರಾಕಿಗಳ ಸವಾರಿ ಅವ್ಯಾಹತವಾಗಿ ನಡೆಯುತ್ತಿದೆ. ಬ್ರಾಹ್ಮಣರನ್ನು ಹೆಜ್ಜೆ ಹೆಜ್ಜೆಗೂ  ಅವಮಾನಿಸುವುದು, ಅವರ ಕೆಲಸಗಳಿಗೆ ಅಡ್ಡಿ ಪಡಿಸುವುದು ಒಂದು ಟ್ರೆಂಡ್ ಆಗಿ ಬಿಟ್ಟಿದೆ. ಇತ್ತೀಚೆಗಿನ ಎರಡು ಮೂರು ವರ್ಷಗಳಲ್ಲಂತೂ, ಬ್ರಾಹ್ಮಣರ ವಿರುದ್ಧವಾದ ಒಂದು ಹುಲ್ಲು ಕಡ್ಡಿ ಸಿಕ್ಕರೂ ಸಾಕು, ಹಸಿ  ಮಾಂಸ ಸಿಕ್ಕ ನಾಯಿಗಳಂತಾಡುವವರು ಎರಡು ಪಟ್ಟು ಹೆಚ್ಚಾಗಿದ್ದಾರೆ. ಆದರೆ ಇದೆಲ್ಲಕ್ಕಿಂತಲೂ ಹೆಚ್ಚಾಗಿ ಬ್ರಾಹ್ಮಣನಿಗೆ ಹಿಂದಿನಿಂದಲೂ ಮುಗ್ಗಲು ಮುಳ್ಳಗಿರುವುದು ಮೀಸಲಾತಿಯೆಂಬ ಪೆಡಂಭೂತ.

ನೀವಿವತ್ತು ಯಾವುದೇ ಕ್ಷೇತ್ರಕ್ಕೇ ಹೋಗಿ. ಮೀಸಲಾತಿಯೆಂಬ ಪೆಡಂಭೂತ ನಿಮ್ಮನ್ನು ಕಾಡದಿದ್ದರೆ ಮತ್ತೆ ಕೇಳಿ. ಶಿಕ್ಷಣ ಕ್ಷೇತ್ರವಾಗಲಿ, ಉದ್ಯೋಗ ಕ್ಷೇತ್ರವಾಗಲಿ,  ನಮ್ಮ ವ್ಯವಸ್ಥೆಯಲ್ಲಿ ಭೃಷ್ಟಾಚಾರವೆಂಬುದು ಹೇಗಿದೆಯೋ ಹಾಗೆಯೇ ಎಲ್ಲಾ ಕ್ಷೇತ್ರದಲ್ಲಿಯೂ ಮೀಸಲಾತಿಯಿದೆ. ಕೆಲವು ಸಮುದಾಯಗಳು ಆರ್ಥಿಕವಾಗಿ ಹಿಂದುಳಿದಿದ್ದಾವೆ ಎಂಬ ಕಾರಣಕ್ಕೆ ಅವುಗಳನ್ನು ಮೇಲೆತ್ತುವುದಕ್ಕಾಗಿ ಹತ್ತು  ವರ್ಷಗಳ ಕಾಲಮಿತಿಯೊಂದಿಗೆ   ನೀಡಿದ   ಮೀಸಲಾತಿ ಎಪ್ಪತ್ತು ವರ್ಷಗಳಾದರೂ ಹಾಗೆಯೇ ಮುಂದುವರಿದಿದೆ.  ಮೀಸಲಾತಿ ಸಾಕು ಎಂದು ಯಾರಾದರೂ ಹೇಳಿದರೆ ಅರ್ಧಕ್ಕರ್ಧ ದೇಶವೇ ಆತನ ಎದುರು ನಿಲ್ಲುತ್ತದೆ. ಮೀಸಲಾತಿ ಕೊಡಿ ಎಂದು ಯಾರಾದರೂ ಆಗ್ರಹವನ್ನಿತ್ತರೆ ಅದೇ ಅರ್ಧಕರ್ಧ ಜನ ಆತನ ಮೇಲೆ ಪ್ರಶಂಸೆಯ ಸುರಿಮಳೆಯನ್ನೇ ಸುರಿಸುತ್ತಾರೆ, ಮೀಸಲಾತಿಯ ಪ್ರಭಾವ ಎಷ್ಟಿದೆಯೆಂದರೆ, ರಾಜಕೀಯದ ದುಷ್ಪರಿಣಾಮಕ್ಕೆ ಹೆದರಿ ನಮ್ಮ ಪ್ರಧಾನಿಗಳು  “ನಾನಿರುವವರೆಗೂ  ಮೀಸಲಾತಿಯನ್ನು ತೆಗೆಯುವುದಿಲ್ಲ” ಎನ್ನುತ್ತಾರೆ!

ಇದಕ್ಕಿಂತಲೂ ಘನಘೋರ ಸಂಗತಿಯೆಂದರೆ “ಮೀಸಲಾತಿಯನ್ನು ತೆಗೆಯೋಣ” ಎಂದು ಎಲ್ಲರೂ ಒಗ್ಗಟ್ಟಾಗಿ ಹೇಳಬೇಕಾದ ಸಮಯದಲ್ಲಿ “ ಖಾಸಗೀ ಕ್ಷೇತ್ರದಲ್ಲೂ ಮೀಸಲಾತಿಯನ್ನು ತರೋಣ” ಅಂತ ನಮ್ಮನ್ನಾಳುತ್ತಿರುವ ಕೆಲವು ರಾಜಕಾರಣಿಗಳು ಚಿಂತಿಸುತ್ತಿರುವುದು. ಈಗಾಗಲೇ ಸರಕಾರಿ ಕೆಲಸದಲ್ಲಿ ಮೀಸಲಾತಿಯು ಬ್ರಾಹ್ಮಣರು ಮತ್ತು ಇತರ ಮೇಲ್ವರ್ಗದವರ ಪಾಲಿಗೆ ತಾಂಡವ ನೃತ್ಯ ಮಾಡುತ್ತಿದೆ. ತಮ್ಮ ಯೋಗ್ಯತೆಗನುಸಾರವಾಗಿ ಉತ್ತಮ ಕೆಲಸವನ್ನೇ ನೀಡುತ್ತಿರುವ ಖಾಸಗೀ ಕ್ಷೇತ್ರವನ್ನೇ ಇವರೆಲ್ಲರೂ ತಮ್ಮ ಜೀವನಾಧಾರ ಮಾಡಿಕೊಂಡಿದ್ದಾರೆ. ಆ ಕ್ಷೇತ್ರದಲ್ಲೂ ಮೀಸಲಾತಿಯನ್ನು ಜಾರಿಗೆ ತಂದರೆ ಅದು ಬ್ರಾಹ್ಮಣರ ನಡು ನೆತ್ತಿಯ ಮೇಲೇಯೇ ಹೊಡೆದಂತೆಯೇ ಸರಿ.  ಇದು ಎಂದಾದರೂ ಜಾರಿಗೊಂಡರೆ ಅಂದು ಬ್ರಾಹ್ಮಣನ ಕಥೆ ಮುಗಿದಂತೆಯೇ!

ಬ್ರಾಹ್ಮಣರ ಮೇಲೆ ಈ ಪರಿಯ ದೌರ್ಜನ್ಯ ಯಾಕೆ? ಬ್ರಾಹ್ಮಣರಲ್ಲೂ ಬಡವರಿಲ್ಲವೇ? ಎಲ್ಲಾ ಬ್ರಾಹ್ಮಣರು ಶ್ರೀಮಂತರೆಂಬ ಪೂರ್ವಾಗ್ರಹ ಯಾಕೆ? ವಾಸ್ತವವದ ಮಾತು ಹೇಳುವುದಾದರೆ, ಎರಡು ಹೊತ್ತಿನ ಊಟ, ತಲೆ ಮೇಲೊಂದು ಸೂರು ಮತ್ತು ತಿಂಗಳಿನ ಮೂರು ಸಾವಿರಕ್ಕಾಗಿ  ಮತ್ತೊಬ್ಬರ ತೋಟದ ಉಸ್ತುವಾರಿ ನೋಡಿಕೊಳ್ಳುತ್ತಾ, ಹಗಲು ರಾತ್ರಿ ಉರಿವ ಬೆಂಕಿಯ ಮುಂದೆ ತನ್ನ ಜೀವನದ ಹಿಟ್ಟನ್ನು ಬೇಯಿಸುತ್ತಾ,  ಸಿಕ್ಕಷ್ಟು ದಕ್ಷಿಣೆಗಾಗಿ ಸಣ್ಣ ಪುಟ್ಟ ದೇವಸ್ಥಾನಗಳಲ್ಲಿ ಪೂಜೆಯನ್ನು ಮಾಡುತ್ತಿರುವ ಸಾವಿರಾರು ಬಡ ಬ್ರಾಹ್ಮಣರಿದ್ದಾರೆ. ಸಮಾಜದ ಕಣ್ಣಿಗೆ  ಅವರೆಲ್ಲರೂ  ಮೇಲ್ವರ್ಗದವರಾಗಿರಬಹುದು. ಆದರೆ ಮೀಸಲಾತಿಯ ಅಡ್ಡ ಪರಿಣಾಮಕ್ಕೆ ತುತ್ತಾಗಿ ಉದ್ಯೋಗ ದೊರಕದೆ, ಮತ್ತಿನ್ಯಾವುದೋ ಅವನ ಅರ್ಹತೆಗೆ ಯೋಗ್ಯವಲ್ಲದ ಕೆಲಸವನ್ನು ಮಾಡಿಕೊಂಡು ಕಣ್ಣೀರಿಡುತ್ತಿರುವ ಅದೆಷ್ಟೋ ಬ್ರಾಹ್ಮಣರು ನಮ್ಮ ನಡುವೆಯೇ ಇದ್ಡಾರೆ. ಆದರೆ ಹುಟ್ಟಾ ಸ್ವಾಭೀಮಾನಿಯಾಗಿರುವ ಆತ ಅದನ್ನೆಲ್ಲಿಯೂ ಮುಕ್ತವಾಗಿ ಹೇಳಿಕೊಳ್ಳುತ್ತಿಲ್ಲ ಅಷ್ಟೇ.   ಅವರಿಗೆ ಬೇಕಾಗಿರುವುದು ಮೀಸಲಾತಿಯೆಂಬ ದಾಸ್ಯದ ಬದುಕಲ್ಲ. ತಮ್ಮ ಅರ್ಹತೆಗನುಸಾರವಾಗಿ ಬಾಳಬಹುದಾದಂತಹ  ಸ್ವಾಭೀಮಾನಿ ಬದುಕು.

ಮೀಸಲಾತಿ ಬೇಕೆಂಬ ವಿಚಾರವಾಗಿ ದೇಶದಲ್ಲಿ ಹಲವಾರು ಸಮುದಾಯಗಳು ಇವತ್ತು ಹೋರಾಟಕ್ಕಿಳಿದಿವೆ. ಗುಜರಾತಿನ ಪಟೇಲರು  ಶ್ರೀಮಂತ ವರ್ಗಕ್ಕೆ ಸೇರಿದವರಾಗಿದ್ದರೂ, ಯಾವುದೇ ಮುಚ್ಚು ಮರೆಯಿಲ್ಲದೆ ಬೀದಿಗಿಳಿದು ದೊಂಬಿಯೆಬ್ಬಿಸಿದರು. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆಂದು ಮೋದಿಗೇ  ಬ್ಲಾಕ್’ಮೈಲ್ ಮಾಡುವ ಪ್ರಯತ್ನ ಮಾಡಿದರು. ಆಂಧ್ರದಲ್ಲಿ ಕಾಪು ಸಮುದಾಯದ ಜನ ಮೀಸಲಾತಿಯ ಕಿಡಿ ಹಬ್ಬಿಸಿ ರಾಜ್ಯವನ್ನೇ ಹೊತ್ತಿ ಉರಿಸಿದರು. ಹರಿಯಾಣದ ಜಾಟರು  ಇನ್ನಿಲ್ಲದ ಗಲಾಟೆಗಳನ್ನು ಮಾಡಿ ಮನೋಹರ್ ಲಾಲ್ ಕಟ್ಟರ್  ಸರಕಾರವನ್ನೇ ನಡುಗಿಸಿದರು. ನಮ್ಮ ರಾಜ್ಯದಲ್ಲೂ ಕೆಲವು ಸಮುದಾಯದ ಮಠಾಧೀಶರು, ಮುಖಂಡರು ತಮ್ಮ ಸಮುದಾಯಕ್ಕೆ ಮೀಸಲಾತಿ ಬೇಕೆಂಬ ಹಕ್ಕೊತ್ತಾಯವನ್ನು ಮಾಡಿದರು. ಆದರೆ ನಿರುಪದ್ರವಿ ಬ್ರಾಹ್ಮಣರು ಎಂದಾದರೂ ಇಂತಹ ಕೆಲಸವನ್ನು ಮಾಡಿದ್ದಾರಾ? ತಮಗೆ ಹಾಡುಹಗಲೇ ಅನ್ಯಾಯವಾಗುತ್ತಿದ್ದರೂ ಎಂದಾದರೂ ದೊಂಬಿಗಿಳಿದರಾ? ಸಾರ್ವಜನಿಕ ಆಸ್ಥಿ ಪಾಸ್ಥಿಗೆ ನಷ್ಟವುಂಟು ಮಾಡಿದ್ದಾರಾ? ಯಾವುದಾದರೂ ಬ್ರಾಹ್ಮಣ ಮಠಾಧೀಶರುಗಳು ಈ ಕುರಿತು ಸಮುದಾಯವನ್ನು ಒಂದುಗೂಡಿಸಿ ರಾಜಕೀಯ ಒತ್ತಡವನ್ನು ತಂದಿದ್ದಾರಾ?

ಕನಿಷ್ಠ ಪಕ್ಷ,  ಹಿಂದುಳಿದವರು ,ಮತ್ತು  ಅಲ್ಪ ಸಂಖ್ಯಾತರನ್ನು ದತ್ತಕ್ಕೆ ಪಡೆದುಕೊಂಡಂತೆ ವರ್ತಿಸುವ ರಾಜಕಾರಣಿಗಳಾದರೂ ಬ್ರಾಹ್ಮಣರಲ್ಲಿ ಹಿಂದುಳಿದವರ ಪರವಾಗಿ  ದನಿ ಎತ್ತಿದ್ದಾರಾ? ಅದೂ ಇಲ್ಲ. ವರ್ಷಕ್ಕೊಮ್ಮೆ ಮಂಡನೆಯಾಗುವ ಬಜೆಟುಗಳನ್ನೇ ನೋಡಿ. ಆ ಜಾತಿಗೆ ಇಷ್ಟು ಕೋಟಿ, ಈ ಸಮುದಾಯದ ಅಭಿವೃದ್ಧಿಗೆ ಇಷ್ಟು ಕೋಟಿ ಎಂಬ ಜಾತಿಯಾಧಾರಿತವಾಗಿ ನೀಡಿರುವ ಅನುದಾನಗಳ ಮೈಲುದ್ದದ ಪಟ್ಟಿ ಸಿಗುತ್ತದೆ. ಆ ಪಟ್ಟಿಯಲ್ಲಿ ಭೂತ ಕನ್ನಡಿ ಹಿಡಿದು ನೋಡಿದರೂ ಬ್ರಾಹ್ಮಣ ಸಮುದಾಯ ಕಾಣಲು ಸಿಗುವುದಿಲ್ಲ. ಯಾಕೆ? ಯಾಕೆಂದರೆ ಬ್ರಾಹ್ಮಣರು ತಮಗೆ ಯಾರು ಲಾಭ ಮಾಡಿದ್ದಾರೆ ಎನ್ನುವುದನ್ನು ನೋಡಿ ಎಂದಿಗೂ ವೋಟು ಹಾಕಲಾರರು,  ಅದಕ್ಕೆ!

ಒಬ್ಬ ಬ್ರಾಹ್ಮಣನಾಗಿ, ಮೀಸಲಾತಿಯ ದುಷ್ಪರಿಣಾಮಕ್ಕೋಳಪಟ್ಟವನಾಗಿ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಬ್ರಾಹ್ಮಣರಿಗೆ ಮೀಸಲಾತಿ ಖಂಡಿತವಾಗಿಯೂ ಬೇಡ. ನಮಗೆ ಅನ್ಯಾಯವಾಗುತ್ತಿದ್ದರೂ ಸಹ ಅವೆಲ್ಲವನ್ನೂ ನಿವಾರಿಸಿಕೊಂಡು ಮೈಗೊಡವಿ ನಿಲುವ ತಾಕತ್ತು ಪ್ರತಿಯೊಬ್ಬ ಬ್ರಾಹ್ಮಣನಿಗೂ ಇದೆ.  ಇದು “ಮೀಸೆ ಇದ್ದವರಿಗೆ ಮೀಸಲಾತಿ ಬೇಡ” ಎನ್ನುವಂತಹ ಅಹಂಕಾರದ ಮಾತಲ್ಲ, ಸಹಜ ಸ್ವಾಭೀಮಾನದ ಮಾತಷ್ಟೇ. ಬ್ರಾಹ್ಮಣರಿಗೆ ಮೀಸಲಾತಿ ಬೇಕೆಂಬ ಸಣ್ಣ ಕೂಗೆದ್ದಿರುವುದು ನಿಜ.  ಆದರೆ ಹಿಂದುಳಿದಿರುವುದನ್ನು ಮುಂದೆ ತರುವುದಕ್ಕೆ ಮೀಸಲಾತಿಯೊಂದೇ ಮಾರ್ಗ ಇರುವುದಲ್ಲ. ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿ ಕೊಟ್ಟ ನಂತರ ಎಷ್ಟು ಜನ ಅಭಿವೃದ್ಧಿ ಹೊಂದಿದ್ದಾರೆ, ದಲಿತರನ್ನು ಉದ್ಧರಿಸುವ ನೆಪದಲ್ಲಿ ಯಾರೆಲ್ಲಾ ಉದ್ಧಾರವಾಗಿದ್ದಾರೆ  ಎಂಬುದು ನಮಗೆಲ್ಲಾ ಚೆನ್ನಾಗಿ ಗೊತ್ತಿದೆ.  ಅದು ಗೊತ್ತಿದ್ದೂ ನಮಗೂ ಮೀಸಲಾತಿ ಕೊಡಿ ಎನ್ನುವುದು ಮೂರ್ಖತನದ ಪರಮಾವಧಿಯಾದೀತಷ್ಟೇ. ಅದಕ್ಕಿಂತಲೂ ಹೆಚ್ಚಾಗಿ ಇದುವರೆಗೆ ಮೀಸಲಾತಿಯನ್ನು ದ್ವೇಷಿಸುತ್ತಿದ್ದವರಾಗಿ ಈಗ ಆ ಅರ್ಹತೆಯನ್ನೇ ಕಳೆದುಕೊಳ್ಳುತ್ತೇವೆ. ಇನ್ಯಾರದ್ದೋ ಶಾಪಕ್ಕೆ ನಾವೂ ತುತ್ತಾಗುತ್ತೇವೆ.  ತೊಂಬತ್ತೊಂಬತ್ತು ಶೇಕಡಾ ಬ್ರಾಹ್ಮಣರಲ್ಲಿ ಮೀಸಲಾತಿಯಿಂದಾಗಿ ತಮಗಾಗುತ್ತಿರುವ ಅನ್ಯಾಯದ ಕುರಿತಾಗಿ ಶೋಕ ಮಡುಗಟ್ಟಿದೆಯೇ ಹೊರತಾಗಿ ಸರಕಾರವೇ ಕೊಟ್ಟರೂ ಅದನ್ನು ಸ್ವೀಕರಿಸಲು ನಮ್ಮ ಮನಸ್ಸು ಒಪ್ಪದು. ಮೀಸಲಾತಿಯೆಂಬ ದಾನವನ್ನು ಕೊಟ್ಟು  ಬ್ರಾಹ್ಮಣನನ್ನು ಸಂಪ್ರೀತಿಗೊಳಿಸುವುದು ಅಗತ್ಯವಿಲ್ಲ. ಆದರೆ ಇತರರಿಗೆ ನೀಡಿರುವ ಮೀಸಲಾತಿಯಿಂದಾಗಿ ಬ್ರಾಹ್ಮಣನಿಗಾಗುತ್ತಿರುವ ಅನ್ಯಾಯವನ್ನು ತಪ್ಪಿಸಿ, ಅವನ ಯೋಗ್ಯತೆಯ ಅಧಾರದಲ್ಲಿ ಜೀವಿಸುವಂತಹಾ ವ್ಯವಸ್ಥೆಯನ್ನು ನಿರ್ಮಿಸಿ ಕೊಟ್ಟರಷ್ಟೇ ಸಾಕು, ಬ್ರಾಹ್ಮಣ ಸಂಪ್ರೀತನಾಗುತ್ತಾನೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!