Featured ಅಂಕಣ

ಗೋಸಾಕಾಣಿಕೆಯತ್ತ ಹೆಚ್ಚಬೇಕಿರುವ ಒಲವು

ಭಾರತ ಕ್ಷೀರೋತ್ಪಾದನೆಯಲ್ಲಿ ಮೊದಲ ಸ್ಥಾನಕ್ಕೆ ಬರಲು ಕಾರಣವಾದುದು ಗೋಸಾಕಾಣಿಕೆಯತ್ತ ಹೆಚ್ಚುತ್ತಿರುವ ಒಲವು. ಇಲ್ಲಿ ಎರಡು ಬಗೆಯ ಒಲವು ಹೆಚ್ಚು ಗಟ್ಟಿಯಾಗಿ ಕಂಡುಬರುತ್ತಿದೆ. ಒಂದು ಸಾಂಪ್ರದಾಯಿಕವಾಗಿ ಹೈನುಗಾರಿಕೆ ಮಾಡುತ್ತಿದ್ದವರು ಅದರಲ್ಲಿಯೆ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ಮುಂದುವರಿಯುತ್ತಿರುವುದು. ಇವರು ದೊಡ್ಡ ಮಟ್ಟಿನಲ್ಲಿ ಆಧುನಿಕತೆಯತ್ತ ಮುಖಮಾಡಲು ಅವರ ಸುತ್ತ ಮುತ್ತಲಿನ ಹಳೆಯ ಮನಸ್ಸುಗಳು ಒಪ್ಪುತ್ತಿಲ್ಲ. ಹತ್ತಾರು ಅಡ್ಡಿ ಆತಂಕಗಳ ನಡುವೆಯೂ ಇವರು ಸಣ್ಣ ಪ್ರಮಾಣದಲ್ಲಿ ಹತ್ತಿರದ ಡೈರಿಗೆ ಹಾಲು ಹಾಕುತ್ತಿರುವುದು ಇವರ ಸಾಧನೆ. ಹಟ್ಟಿಯನ್ನು ಆಧುನಿಕವಾಗಿ ವಿನ್ಯಾಸಗೊಳಿಸದೆ ಅದೆ ಹಳೆಯ ಸೊಪ್ಪು ಗೊಬ್ಬರದ ಹಟ್ಟಿಯಲ್ಲಿ ಏನೆಲ್ಲ ಸಾಹಸ ಮಾಡಿ ಹೈನುಗಾರಿಕೆ ಮುಂದುವರಿಸುವ ಸಾಹಸ ಸಣ್ಣದಲ್ಲ. ಇಂಥವರಿಗೆ ಪರಿವರ್ತನೆಯ ಅವಕಾಶಗಳು ಸಿಕ್ಕಿ ಬಿಟ್ಟರಂತು ಇವರು ಹೈಟೆಕ್ ಹೈನುಗಾರರ ಸಾಧನೆಗಿಂತಲೂ ಮಿಗಿಲಾದುದನ್ನು ಖಂಡಿತ ಮಾಡಬಲ್ಲರು.  ಸಪ್ಪಿನ ಹಟ್ಟಿಯ ಎಲ್ಲ ಬಗೆಯ ಕಷ್ಟ ಕಾರ್ಪಣ್ಯಗಳ ಅರಿವು ಇವರಿಗೆ ಕರಗತವಾದುದರಿಂದ ಹೊಸ ಬದಲಾವಣೆಯಲ್ಲಿ ಇವರು ಇನ್ನಷ್ಟು ಸಾಧನೆ ಮಾಡುವುದು ಸಾಧ್ಯ. ಕೃಷಿಕರಲ್ಲಿ ಬಹುತೇಕ ಮಂದಿ ಸಾಂಪ್ರದಾಯಿಕವಾಗಿ ಬೆಳೆದು ಬಂದಿದ್ದ ಗೋಸಾಕಾಣಿಕೆಗೆ ತಿಲಾಂಜಲಿ ನೀಡಿ ಪೇಟೆ ಹಾಲಿಗೆ ಶರಣು ಹೋಗಿದ್ದಾರೆ. ಇದರಿಂದ ಒಟ್ಟು ಕೃಷಿಯ ಮೇಲೆ ಪ್ರತಿಕೂಲ ಪರಿಣಾಮಗಳಾಗಿವೆ.

ಇಂದೇನು ಸಾವಯವದ ಕೂಗು ಎದ್ದಿದೆ ಅದು ಗೋಸಾಕಾಣಿಕೆಯಿಲ್ಲದೆ ಯಾವತ್ತೂ ಪರಿಪೂರ್ಣವಾಗದು. ಅದು ಸೊಪ್ಪು ಗೊಬ್ಬರ ರೂಪದಲ್ಲಾಗಿರಬಹುದು, ಸ್ಲರಿ ರೂಪದಲ್ಲಾಗಿರಬಹುದು. ಸೆಗಣಿ ಮತ್ತು ಗೋಮೂತ್ರಗಳು ಕೃಷಿಯಲ್ಲಿ ಬಳಕೆಯಾಗುತ್ತಿದ್ದುದು ನಮ್ಮ ನೆಲದಲ್ಲಿ ಸಾಮಾನ್ಯ. ಗೋಸಾಕಾಣಿಕೆಯ ಮರ್ಮವನ್ನು ಅರಿತು ಅದರಲ್ಲಿನ ಸುಖಗಳನ್ನು ಮತ್ತು ಅಂತಿಮವಾಗಿ ಅದು ಕೃಷಿಗೆ ಹಾಗು ಬದುಕಿಗೆ ನೀಡುವ ಹೊಸತನಗಳನ್ನು ಅರಿತು ಮುನ್ನಡೆಸುತ್ತಿರುವವರು ಹಳ್ಳಿಗರು. ವಿಶೇಷವೆಂದರೆ ಹಳ್ಳಿಗಳಲ್ಲಿ ಉಳಿದುಕೊಂಡು ಗೋಸಾಕಾಣಿಕೆಯನ್ನು ಸಮರ್ಥವಾಗಿ ನಿಭಾಯಿಸುವ ಯುವ ಪೀಳಿಗೆಯ ಅನೇಕ ಮಂದಿ ಇಂದು ಉಳಿದವರ ಎದುರು ತಲೆಯೆತ್ತಿ ನಡೆಯುವಂತಾಗಿದೆ. ಅವರಿಗೆ ಬೆಲೆ ಬಂದಿದೆ. ಅವರ ಕ್ಷೀರೋತ್ಪನ್ನಗಳಿಗಂತು ಇನ್ನಿಲ್ಲದ ಬೇಡಿಕೆ. ಹಳ್ಳಿಗಳಲ್ಲಿ ಹಾಲಿನ ಉತ್ಪನ್ನಗಳಿಗೆ ದರ ನಿಗದಿ ಮಾಡುವ ಸ್ವಾತಂತ್ರ್ಯ ಹೈನುಗಾರರಿಗೆ ಇರುವುದು ಅವರ ಸಾಧನೆಗಳಿಗೆ ಹೆಚ್ಚಿನ ಸ್ಪೂರ್ತಿ ನೀಡುತ್ತಿದೆ.

  ಇನ್ನು ಹೈಟೆಕ್ ಕ್ಷೀರೋತ್ಪಾದಕರದ್ದು ಮತ್ತೊಂದು ಮಜಲು. ಅವರು ಬ್ಯಾಂಕುಗಳಾಶ್ರಯದಲ್ಲಿ ಬಹಳ ದೊಡ್ಡ ಮಟ್ಟಿನ ಗೋಸಾಕಾಣಿಕೆಯನ್ನು ಅತ್ಯಾಧುನಿಕವಾಗಿ ಮುನ್ನಡೆಸುತ್ತಿದ್ದಾರೆ. ಹಾಲಿನ ಉತ್ಪಾದನೆಯಲ್ಲಿ ತೀವ್ರಗತಿಯ ಬದಲಾವಣೆ ಬರಲು ಇಂತಹ ಹೈಟೆಕ್ ಮನಸ್ಸು ಮುಖ್ಯ ಕಾರಣ. ಮಾನವ ಶ್ರಮವನ್ನು ಬಹಳಷ್ಟು ಕಡಿಮೆಗೊಳಿಸುವ ಎಲ್ಲ ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ದೊಡ್ಡ ಮಟ್ಟಿನ ವಹಿವಾಟು ಇವರು ನಡೆಸುತ್ತಿದ್ದಾರೆ. ಸಾಂಪ್ರದಾಯಿಕ ಹೈನುಗಾರಿಕೆ ಕಡಿಮೆಯಾಗುತ್ತಿರುವಂತೆ ಈ ಹೈಟೆಕ್ ಹೈನುಗಾರಿಕೆ ವೇಗ ಪಡೆದುಕೊಳ್ಳುತ್ತಿರುವುದು ಕ್ಷೀರೋತ್ಪಾದನೆಯ ಮಟ್ಟಿಗೆ ಸರಿಯಾದರೂ ಕೃಷಿ ಸಂಬಂಧಿ ಬೆಳವಣಿಗೆಗಳನ್ನು ಗಮನಿಸಿದರೆ ಇದು ಕೃಷಿಗೆ ಪೂರಕ ಅಲ್ಲ. ಅಲ್ಲಿಂದ ಸೆಗಣಿ ಪೂರೈಕೆಯಾಗುತ್ತಿದ್ದರೂ ಕೃಷಿಕರೆ ತಮ್ಮ ಮನೆಯಲ್ಲಿ ಗೋಸಾಕಾಣಿಕೆ ಮಾಡಿ ಕೃಷಿಗೆ ಹಟ್ಟಿಗೊಬ್ಬರ, ಸ್ಲರಿಗಳನ್ನು ಬಳಕೆ ಮಾಡಿದಂತೆ ಆಗದು.

ಕೇರಳದಲ್ಲಿ ದೇಸೀ ಕ್ರಾಂತಿ

 ಕಾಸರಗೋಡು ಜಿಲ್ಲೆಯ ಪೆರ್ಲದ ಬಜಕ್ಕೂಡ್ಲುವಿನಲ್ಲಿರುವ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಗಳ ನಿರ್ದೇಶನದಂತೆ ಕಾರ್ಯಾಚರಿಸುತ್ತಿರುವ ಅಮೃತಧಾರಾ ಗೋಶಾಲೆ ಕಾಸರಗೋಡು ಗಿಡ್ಡ ತಳಿಯ ಸಂವರ್ಧನೆಯಲ್ಲಿ ವಹಿಸುತ್ತಿರುವ ಶ್ರಮ ಗುರುತರವಾದುದು. ಬೇಳದಲ್ಲಿರುವ ಸರಕಾರಿ ಸ್ವಾಮ್ಯದ ಗೋಶಾಲೆಯಲ್ಲಿಯೂ ದೇಸೀ ದನಗಳ ಬಗೆಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತದೆ. ಉತ್ತರ ಕೇರಳದಿಂದ ಉಳಿದ ಕೇರಳದ ದಕ್ಷಿಣ ಭಾಗಗಳಿಗೆ ದೇಸೀ ತಳಿಗಳ ಗಂಡು ಮತ್ತು ಹೆಣ್ಣು ಕರುಗಳನ್ನು ಅಧಿಕ ಪ್ರಮಾಣದಲ್ಲಿ ಕಳುಹಿಸಲಾಗುತ್ತಿದೆ. ಕಾಸರಗೋಡು ಜಿಲ್ಲೆಯ ಒಳಗೆ ಕಾಸರಗೋಡು ಗಿಡ್ಡ ತಳಿಯ ಹೆಣ್ಣು ಕರು ಅದರಲ್ಲೂ ಕಪಿಲ ಬಣ್ಣದ ಕರು ಇದ್ದರಂತು ಅದಕ್ಕೆ ವಿಪರೀತ ಬೇಡಿಕೆ.  ಸಾವಯವ ಕೃಷಿಯ ಯೋಜನೆ ಮತ್ತು ಯೋಚನೆಗಳಲ್ಲಿ ಇವರೆಲ್ಲ ವಹಿಸುತ್ತಿರುವ ಪಾತ್ರ ಸಣ್ಣದಲ್ಲ.

ಮನೆಗೊಂದು ಗೋವು

 ಮನೆಗೊಂದು ಗೋವು ಸಾಕುವ ಅಭ್ಯಾಸ ಮಾಡುವುದು ಹಳ್ಳಿಗರಿಗೆ ಕಷ್ಟವಲ್ಲ. ಹಳ್ಳಿಯಲ್ಲಿನ ಮನೆಗಳಲ್ಲಿ ಅದರಲ್ಲೂ ಕೃಷಿಕರ ಮನೆಗಳಲ್ಲಿ ಗೋಸಾಕಾಣಿಕೆ ಮಾಡುವ ತಾಕತ್ತು ಇರುವವರ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ ಕಾಸರಗೋಡು ಗಿಡ್ಡ ತಳಿಯಂತಹ ಅಪ್ಪಟ ದೇಸೀ ತಳಿಗಳನ್ನು ಸಾಕಿ ಸಲಹುವುದು ಮತ್ತು ಅವುಗಳನ್ನು ಕೃಷಿಗೆ ಪೂರಕವಾಗಿ ಬಳಕೆ ಮಾಡಿಕೊಳ್ಳುವುದು ಕಷ್ಟವಲ್ಲ. ಕಡಿಮೆ ಜಾಗ, ಸುಲಭ ಸಾಕಾಣಿಕೆ, ಅತ್ಯಲ್ಪ ತಿನಸು, ಖರ್ಚು ಕಡಿಮೆ, ಮನೆ ಮಂದಿಗೆ ಸಾಕಷ್ಟು ಅಮೃತದಂತಹ ಹಾಲು, ನಮ್ಮ ಬಳಗದ ಸದಸ್ಯರಂತೆ ವರ್ತಿಸುವ ರೀತಿ – ಇದೆಲ್ಲ ದೇಸಿ ತಳಿಗಳನ್ನು ಸಾಕಲು ಇರುವ ಕೆಲವು ಸಾಧ್ಯತೆಗಳು. ಮಿಶ್ರ ತಳಿ ಮತ್ತು ವಿದೇಶಿ ತಳಿಗಳನ್ನು ಸಾಕುತ್ತಿರುವ ಕೆಲವು ಹೈನುಗಾರರು ಹಾಲು ಮಾರಾಟದ ಉದ್ದೇಶ ಕೈಬಿಟ್ಟು ಮನೆ ಖರ್ಚಿಗೆ ಬೇಕಾದಷ್ಟು ಹಾಲು ಕೊಡುವ ದೇಸೀ ತಳಿಗಳತ್ತ ಮಾರುಹೋಗುತ್ತಿದ್ದಾರೆ. ಸ್ವಾವಲಂಭನೆಯ ಬದುಕು ಇದು. ಜತೆಗೆ ಸಾವಯವ ಕೃಷಿಯ ಪರಿಕಲ್ಪನೆಯೇನಿದೆ ಅದು ಕೂಡ ಇಲ್ಲಿ ಪೂರ್ಣವಾಗುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

ಶಂ.ನಾ. ಖಂಡಿಗೆ

ಕನ್ನಡದಲ್ಲಿ ಎಂ.ಎ ಬಳಿಕ ಹೊಸದಿಗಂತ ಪತ್ರಿಕೆಯ ಸಾಪ್ತಾಹಿಕ ಪುರವಣಿಯ ಸಂಪಾದಕರಾಗಿ ಐದು ವರ್ಷ ಕಾರ್ಯನಿರ್ವಹಿಸಿದ ಬಳಿಕ ಮರಳಿ ಮಣ್ಣಿಗೆ ಎನ್ನುವಂತೆ ಪೂರ್ಣ ಪ್ರಮಾಣದಲ್ಲಿ ಕೃಷಿಯತ್ತ ಒಲವು. ಜೊತೆಗೇ ಹೊಸದಿಗಂತ ಪತ್ರಿಕೆಯಲ್ಲಿ ಹತ್ತು ವರ್ಷಗಳಿಂದ “ಕೃಷಿಯೊಸಗೆ” ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಮಕ್ಕಳ ಕಥೆ ಕವನ – ಪುಸ್ತಕ ವಿಮರ್ಶೆ – ವ್ಯಕ್ತಿತ್ವ ವಿಕಸನ ಬರಹ ಹೀಗೆ ಬರಹದ ಒಲವು. ಪ್ರಸ್ತುತ, ಪ್ರತಿಷ್ಟಿತ ಕ್ಯಾಂಪ್ಕೋದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!