ಅಂಕಣ

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೯

ಏನು ಭೈರವಲೀಲೆಯೀ ವಿಶ್ವಭ್ರಮಣೆ! |
ಏನು ಭೂತಗ್ರಾಮನರ್ತನೋನ್ಮಾದ! ||
ಏನಗ್ನಿ ಗೋಳಗಳು! ಏನಂತರಾಳಗಳು! |
ಏನು ವಿಸ್ಮಯ ಸೃಷ್ಟಿ! ಮಂಕುತಿಮ್ಮ ||

ಭೈರವ ಲೀಲೆಯೆನ್ನುವುದು ಆ ಕಾಲ ಭೈರವನ ಪ್ರಚಂಡ ರೂಪಿನ ರೌದ್ರಾವತಾರದ ಹಿನ್ನಲೆಯಲ್ಲಿ ಪರಿಗಣಿಸಬೇಕಾದ ಹೋಲಿಕೆ. ಇಲ್ಲಿ ಕವಿ ಸೃಷ್ಟಿಯುಂಟಾದ ಬಗೆಯನ್ನು ನಮ್ಮ ಕಲ್ಪನೆಗೆಟುಕುವ ಪರಿಧಿಯಲ್ಲಿ ವಿವರಿಸುವ ಸಲುವಾಗಿ ಈ ಭೈರವನ ಪ್ರಚಂಡತೆಯ ಅಂಶವನ್ನು ಬಳಸಿಕೊಳ್ಳುತ್ತಾರೆ. ಮೂಲತಃ ಇಲ್ಲಿ ವಿಶ್ವ ಭ್ರಮಣೆಯೆನ್ನುವುದು ಕೇವಲ ವಿಶ್ವದ ನಿರಂತರ ಪರಿಭ್ರಮಣೆಯೆಂದು ಮಾತ್ರವಲ್ಲದೆ, ಅದರ ಮೂಲ ಸೃಷ್ಟಿಯ ಹಿನ್ನಲೆಯಲ್ಲಿ ಹೇಳಿದ್ದೆಂದು ಪರಿಗಣಿಸಬೇಕು. ಆ ದೃಷ್ಟಿಕೋನದಲ್ಲಿ ನೋಡಿದರೆ ಈ ವಿಶ್ವಭ್ರಮಣೆಯನ್ನು ‘ಬೃಹತ್ ಸ್ಪೋಟ’ಕ್ಕೆ ನೇರವಾಗಿ ಸಮೀಕರಿಸಿಬಿಡಬಹುದು. ಆ ಸ್ಪೋಟದ ತರುವಾಯ ತಾನೆ ವಿಶ್ವದ ಸೃಷ್ಟಿಯಾದದ್ದು ? ಆ ಬೃಹತ್ ಸ್ಪೋಟದಲ್ಲುಂಟಾದ ಹಾಹಾಕಾರದ, ಸೋಜಿಗದ ಭೈರವ ಲೀಲೆಯನ್ನು ಹೇಗೆಂದು ವರ್ಣಿಸುವುದೆಂದು ವಿಸ್ಮಯ ಪಡುತ್ತದೆ ಕವಿ ಮನಸು.

ಆ ವಿಶ್ವಭ್ರಮಣೆಯ ಆರಂಭದ ಸರಣಿ ಪ್ರಕ್ರಿಯೆಯ ಮುಂದುವರೆದ ಮರುಸ್ಪೋಟದ ಭಾಗವಾಗಿ ತಾನೆ ಮಿಕ್ಕೆಲ್ಲ ಗ್ರಹತಾರಾ ಮಂಡಲಗಳ ಸೃಷ್ಟಿಯಾದದ್ದು ? ಅವೆಲ್ಲ ಕವಿ ದೃಷ್ಟಿಯಲ್ಲಿ ಉನ್ಮಾದದ ಭೂತಗ್ರಾಮ ನರ್ತನದಂತೆ ಕಾಣುತ್ತದೆ. ಇಲ್ಲಿ ನನಗನಿಸುವಂತೆ ಭೂತಗ್ರಾಮವನ್ನು ಎರಡು ರೀತಿಯಲ್ಲಿ ನೋಡಬಹುದು – ಮೊದಲನೆಯದು ನಮ್ಮ ವೇದಾಂತಿಕ ತಳಹದಿಯಿಂದ ಬರುವ ನಂಬಿಕೆಯಾದ ಪಂಚಭೂತಗಳದು. ಸೃಷ್ಟಿಯಲ್ಲೆಲ್ಲವೂ ಪಂಚಭೂತಗಳಿಂದಲೆ (ಆಕಾಶ, ಗಾಳಿ, ನೀರು, ಭೂಮಿ, ಅಗ್ನಿ) ಆದುದೆನ್ನುವ ಸಿದ್ದಾಂತ ಇಲ್ಲಿ ಪ್ರಸ್ತುತವಾಗುವ ಕಾರಣ ಭೂತಗ್ರಾಮ ನರ್ತನವೆನ್ನುವುದು ಈ ಪಂಚಭೂತಗಳ ಪಾಕವೆತ್ತಿ ಸೃಷ್ಟಿಯಡುಗೆ ಮಾಡುತ್ತಿರುವ ಪ್ರಕೃತಿಯ ಕ್ರಿಯೆ ಎಂದು ವಿವರಿಸಬಹುದು. ಮತ್ತೊಂದು ರೀತಿಯಲ್ಲಿ ನೋಡಿದರೆ ಭೂತಗ್ರಾಮವೆನ್ನುವುದು ಭೂತಗಳು ನೆಲೆಸಿದ ನೆಲೆಯಾದ ಸ್ಮಶಾನದ ಸಂಕೇತವೂ ಆಗಬಹುದೇನೊ ? ಮಸಣದಲ್ಲಿ ತಾನೆ ಭೂತ ಪ್ರೇತಗಳು ಉನ್ಮಾದದಿಂದ ಹೆಣದ ಸುತ್ತ ನರ್ತನಗೈಯ್ಯುವುದು ? ಕವಿಗೆ ಈ ಸೃಷ್ಟಿ ಪ್ರಕ್ರಿಯೆಯಲ್ಲಿ ಅದೇ ರೀತಿಯ ಉನ್ಮಾದವೆ ಕಂಡಿರಬಹುದು. ಮತ್ತೊಂದು ಬದಿಯಿಂದ ನೋಡಿದರೆ ಅದು ಲಯದ ಅಥವ ನಾಶದ ಸಂಕೇತವೂ ಆಗಬಹುದು. ಒಟ್ಟಾರೆ ಮೊದಲೆರಡು ಸಾಲುಗಳಲ್ಲಿ ಸೃಷ್ಟಿ ಪ್ರಕ್ರಿಯೆಯ ಆಂತರ್ಯವನ್ನು ಅದರೆಲ್ಲ ರೌದ್ರತೆಯೊಡನೆ ಹಿಡಿದಿಡುವ ಯತ್ನ ಕಾಣುತ್ತದೆ.

ಮಿಕ್ಕೆರಡು ಸಾಲುಗಳು ಅದನ್ನೆ ಮುಂದುವರೆಸುತ್ತ ಆ ಸೃಷ್ಟಿ ಪ್ರಕ್ರಿಯೆಯ ಫಲಿತದತ್ತ ಕಣ್ಣು ಹಾಯಿಸುತ್ತದೆ. ಸ್ಪೋಟದಿಂದಾದ ಉತ್ಪನ್ನಗಳೆಲ್ಲ ಒಂದೇ ಎರಡೆ ? ನಕ್ಷತ್ರಗಳಂತಹ ಲಕ್ಷಾಂತರ ಅಗ್ನಿಗೋಳಗಳು, ಅದರ ಸುತ್ತ ನೆರೆದ ಗ್ರಹ ಸಮೂಹಗಳು, ಧೂಮಕೇತು – ಉಲ್ಕೆಯಂತಹ ಆಕಾಶಕಾಯಗಳು, ಅದರ ನಿಗೂಢತೆಯನ್ನು ಹೆಚ್ಚಿಸುವ ಯಾವಾವುದೊ ಕಾಯದಸ್ತಿತ್ವಗಳು, ಕಪ್ಪುಬಿಲ – ಬಿಳಿಬಿಲದಂತಹ ಅರಿಯಲಾಗದ ಒಗಟಿನ ಅಂತರಾಳಗಳು – ಒಂದೆ, ಎರಡೆ ಅಲ್ಲಿನ ವಿಸ್ಮಯಗಳು ? ಅದೆಲ್ಲವನ್ನು ಒಗ್ಗೂಡಿಸುತ್ತ ಕವಿ ಒಂದೆ ಮಾತಿನಲ್ಲಿ ಹೇಳಿಬಿಡುತ್ತಾರೆ – ‘ಏನು ವಿಸ್ಮಯ ಸೃಷ್ಟಿ !’ ಎಂದು. ಸೃಷ್ಟಿಯ ನಂತರವೂ ಅದನ್ನು ನಿಖರವಾಗಿ ಅರಿಯಲಾಗದ ಅದರ ನಿರಂತರತೆಯೂ, ಅನಂತ ಸ್ವರೂಪವು ಕೂಡ ‘ಏನಂತರಾಳ’ ಎಂಬ ಮಾತಿನಲ್ಲಿ ಸೂಚ್ಯವಾಗಿ ಧ್ವನಿತವಾಗುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!