ಕವಿತೆ

ಕಗ್ಗಕೊಂದು ಹಗ್ಗ ಹೊಸೆದು… ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೬

ಒಗಟೆಯೇನೀ ಸೃಷ್ಟಿ ? ಬಾಳಿನರ್ಥವದೇನು |
ಬಗೆದು ಬಿಡಿಸುವರಾರು ಸೋಜಿಗವನಿದನು ? ||
ಜಗವ ನಿರವಿಸಿದ ಕೈಯೊಂದಾದೊಡೇಕಿಂತು ? |
ಬಗೆ ಬಗೆಯ ಜೀವಗತಿ – ಮಂಕುತಿಮ್ಮ ||

ಈ ಸೃಷ್ಟಿಯೇನಿದ್ದರು ಬರಿಯ ಒಗಟಾಗಿಯೆ ಇರುವಂತದ್ದೇನು? ಆ ಒಗಟಿನೊಳಗೆ ಬೆಸೆದುಕೊಂಡ ಈ ಬಾಳಿಗೇನಾದರೂ ಅರ್ಥವಿದೆಯೆ? ಈ ಒಗಟಿನ ಗುಟ್ಟನ್ನು ಹರಿದು, ಈ ಸೃಷ್ಟಿಯ, ಬಾಳಿನ ಸೋಜಿಗದ ಸೂತ್ರವನ್ನು ಬಿಡಿಸಿ ಅನಾವರಣಗೊಳಿಸುವವರಾರಾದರು ಇದ್ದಾರೆಯೆ? ಸೃಷ್ಟಿಯ ಅಂಗವಾಗಿ ಈ ಜಗವೆಲ್ಲವನ್ನು ಸೃಜಿಸಿ, ನಿರ್ಮಿಸಿದ ನಿರ್ಮಾತೃ ಒಬ್ಬನೆ ಎನ್ನುವುದಾದರೆ, ಅವನ ಕೈಯಲ್ಲೇಕೆ ಏಕರೂಪಿನ ಸಮಾನ ಸೃಷ್ಟಿಯಾಗುವ ಬದಲು ವಿಧವಿಧ ವೈವಿಧ್ಯದ ಅನೇಕಾನೇಕ ಜೀವಗತಿಗಳು ನಿರ್ಮಿತವಾದವು? ಅದೇನು ವೈವಿಧ್ಯತೆಯ ಪ್ರದರ್ಶನವೊ ಅಥವಾ ಏಕರೂಪಿನ ನಿಯಂತ್ರಣವಿಡಲಾಗದೆ ಹೋದ ಕಾರಣದಿಂದ ಸೃಷ್ಟಿಯಾಗಿ ಹೋದ ಜೀವರಾಶಿಗಳ ಮೊತ್ತವೊ ? ಎಂದು ಇಲ್ಲಿ ಪ್ರಶ್ನೆಯೆತ್ತುತ್ತಾನೆ ಮಂಕುತಿಮ್ಮ.

ಈ ಸೃಷ್ಟಿಯೆ ಒಂದು ಒಗಟಾಗಿ ಪರಿಣಮಿಸಿದರೆ ಅದರಲ್ಲಿ ನಡೆಸುವ ಬಾಳುವೆಯೂ ಒಗಟೇ ತಾನೆ? ಆ ಒಗಟಿನ ಬೆಡಗು ಸೇರಿರುವುದರಿಂದಲೆ ಅದನ್ನರಿಯುವ ಕುತೂಹಲ ಒಂದಲ್ಲಾ ಒಂದು ರೀತಿ ಕಾಡುವುದು. ಹೋಗಲಿ, ಅರಿಯಲೆತ್ನಿಸಿದರೆ ಸುಲಭವಾಗಿ ಬಿಟ್ಟುಕೊಡುವ ಬೆಡಗೇ ಅದು ? ಎಂದರೆ ಅದೂ ಇಲ್ಲ. ಯಾವಾಗ ಅರಿಯಲಾಗಲಿಲ್ಲವೊ ಆಗದರ ಬಗೆ ಕುತೂಹಲ, ಸೋಜಿಗ ಇನ್ನು ಹೆಚ್ಚಾಗುವುದು ಸಹಜ ಪ್ರಕ್ರಿಯೆಯೆ ಅಲ್ಲವೆ? ಅಂತಹ ಸೋಜಿಗವನ್ನು ಬಿಡಿಸಬಲ್ಲಂತವರು, ಬಿಡಿಸಿದವರು ಯಾರಾದರೂ ಇರುವರೆ ಎಂಬನುಮಾನವನ್ನು ಪ್ರಶ್ನೆಯ ಮೂಲಕ ವ್ಯಕ್ತಪಡಿಸುತ್ತಿದ್ದರೂ, ಬಹುತೇಕ ಯಾರೂ ಇಲ್ಲವೆಂಬ ಅನಿಸಿಕೆಯೆ ಅಲ್ಲಿ ಹೆಚ್ಚು ದನಿಸಿದಂತನಿಸುತ್ತದೆ. ಈ ಮೊದಲಿನೆರಡು ಸಾಲುಗಳಲ್ಲಿ ಸೃಷ್ಟಿಯಾನಂತರದ ಅಸ್ತಿತ್ವ, ಸ್ವರೂಪಗಳನ್ನು ಬೆದಕಿ ನೋಡುವ ಕವಿಯ ಯತ್ನ ಎದ್ದು ಕಾಣುತ್ತದೆ.

ಹಾಗೆ ಕೆದಕುತ್ತಲೆ ವಿಹರಿಸುತ್ತ ಹೋಗುವ ಮನಸಿಗೆ ಇದ್ದಕ್ಕಿದ್ದಂತೆ ಸಂದೇಹದ ರೂಪಿನಲ್ಲಿ ಪ್ರಶ್ನೆಯೊಂದು ಮೂಡಿಬರುತ್ತದೆ – ಆ ಸೃಷ್ಟಿಯಲ್ಲಿರುವ ಅಗಣಿತ ಜೀವಜಾಲದ ವೈವಿಧ್ಯಮಯ ವಿನ್ಯಾಸಗಳೆಲ್ಲ ಕಣ್ಣಿಗೆ ಬಿದ್ದು ಗಮನ ಸೆಳೆದಾಗ. ಈ ಜಗದ ಸೃಷ್ಟಿಗೆ ಕಾರಣೀಭೂತವಾದ ಮೂಲಶಕ್ತಿ ಒಂದೆ ಎಂಬುದು ಆಸ್ತಿಕರೆಲ್ಲರು ನಂಬುವ ಖಚಿತ ಸಿದ್ದಾಂತ. ಅದು ನಿಜವೆ ಆದಲ್ಲಿ ಆ ಸೃಷ್ಟಿಕರ್ತನ ಕೈ ಚಳಕದಲ್ಲಿ ಮೂಡಿಬಂದ ಸೃಷ್ಟಿಗಳೆಲ್ಲವೂ ಒಂದೇ ರೀತಿ ಇರಬೇಕಿತ್ತಲ್ಲವೆ? ಹಾಗಿರದೆ ಏಕಷ್ಟೊಂದು ಬಗೆಬಗೆಯ ಜೀವ ವೈವಿಧ್ಯಗಳನ್ನು ಸೃಷ್ಟಿಸಿದ ? ಎಂದು ಕೇಳುತ್ತಾರೆ ಕವಿ. ಪ್ರತಿಯೊಂದು ವೈವಿಧ್ಯಕ್ಕೂ ತನ್ನದೇ ಆದ ರೀತಿ, ನೀತಿ, ನಡೆ, ನುಡಿ, ಕಾಲಚಕ್ರಾದಿಗಳನ್ನಂಟಿಸಿ ನಡೆಸುವ ಪರಿಗೆ ಅದೆಲ್ಲಾ ಅವನ ಪೂರ್ವನಿಯೋಜಿತ ಉದ್ದೇಶದಂತೆ ಕಂಡರು ಕವಿಗೆ, ‘ಏಕರೂಪತೆಯನ್ನು ನಿರಂತರ ಕಾಪಾಡಿಕೊಂಡು ಬರಲಾಗದ ಕಾರಣಕ್ಕೆ ಹೀಗೆ ಸೃಷ್ಟಿಯ ವೈವಿಧ್ಯಗಳನ್ನಾಗಿಸಿ ಕೈ ತೊಳೆದುಕೊಂಡುಬಿಟ್ಟನೇನೊ’ ಎಂಬ ಅನುಮಾನದ ಎಳೆಯೂ ಕಂಡೂ ಕಾಣದಂತೆ ಇಣುಕುತ್ತದೆ – ಕೊನೆಯೆರಡು ಸಾಲಿನಲ್ಲಿ. ಅದರ ಜತೆಜತೆಗೆ ಆ ವೈವಿಧ್ಯತೆಗೆ ಅಚ್ಚರಿ ವ್ಯಕ್ತಪಡಿಸುವ ಮುಗ್ದ ಮಗುವಿನ ಸೋಜಿಗವೂ ಕಾಣಿಸಿಕೊಳ್ಳುತ್ತದೆ.

ಇಲ್ಲಿ ಮತ್ತೊಂದು ಗಮನಿಸುವ ಅಂಶವೆಂದರೆ ಸೃಷ್ಟಿಯ ಕುರಿತಾದ ಮೊದಲ ಸಾಲಿನ ಮಾತು. ಈ ಸೃಷ್ಟಿ ಕೇವಲ ಜೀವಜಗತ್ತಿಗೆ ಸೀಮಿತವಾದ ಸೃಷ್ಟಿಯಂತೆ ಕಾಣುವುದಿಲ್ಲ; ಬದಲಿಗೆ ಬ್ರಹ್ಮಾಂಡವೂ ಸೇರಿದಂತೆ ಸಮಷ್ಟಿಯೆಲ್ಲದರ ಸೃಷ್ಟಿಯ ಕುರಿತು ವ್ಯಕ್ತಪಡಿಸಿದ ಸೋಜಿಗದಂತೆ ಕಾಣುತ್ತದೆ. ಆ ಅಲೌಕಿಕ ಗಹನತೆಯಲ್ಲಿ ಆರಂಭವಾದದ್ದು, ಏಕಾಏಕಿ ಬಾಳುವೆ-ಜೀವಜಗತ್ತಿನ ಲೌಕಿಕ ಸ್ತರಕ್ಕೆ ಬಂದರೂ, ಅವೆರಡರ ನಡುವಿರುವ ಎಲ್ಲವನ್ನು ಆ ಎರಡು ತುದಿಗಳ ಮೂಲಕ ಹಿಡಿದಿಟ್ಟ ಸಾರಸಂಗ್ರಹ ಭಾವವನ್ನು ಒಳಗೊಂಡಿದೆಯೆನ್ನುವುದು ನನ್ನ ಗ್ರಹಿಕೆ. ತನ್ಮೂಲಕ ತನ್ನ ವಿಸ್ತಾರ ವ್ಯಾಪ್ತಿಯನ್ನು ತಾತ್ವಿಕ, ಅಧ್ಯಾತ್ಮಿಕ, ವೈಜ್ಞಾನಿಕ ಸ್ತರಗಳೆಲ್ಲದರ ಎಲ್ಲೆ-ಗಡಿಯನ್ನು ದಾಟಿಸಿ ಮೇರುಮಟ್ಟಕ್ಕೆ ಕೊಂಡೊಯ್ದು ಬಿಡುತ್ತದೆ – ವಿಶ್ಲೇಷಣೆಯ ಗಹನ ಮತ್ತು ಆಳವಾದ ಯಾನದಲ್ಲಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!