Featured ಪ್ರಚಲಿತ

ಸೋಮಯಾಗ; ಸರಿ ತಪ್ಪುಗಳ ಮಧ್ಯೆ ಅರ್ಥವಾಗದೇ ಉಳಿದಿರೋ ಒಂದಷ್ಟು ವಿಚಾರಗಳು!

ಇದೀಗ ಹೆಚ್5ಎನ್1 (ಹಕ್ಕಿಜ್ವರ)ನ ಭೀತಿ. ಪಕ್ಷಿಗಳಿಂದ ಬರುವ ಈ ರೋಗ ಮಾನವನ ಜೀವಕ್ಕೂ ಅಪಾಯಕಾರಿಯಂತೆ. ಆದ್ದರಿಂದ ಸಹಜವಾಗೇ ರೋಗಕ್ಕೆ ಹೆದರಿದ ನಮ್ಮ ಸರಕಾರ ತನ್ನ ಅಧಿಕಾರಿಗಳನ್ನು ಕರೆಸಿ ಒಂದಷ್ಟು ಸೂಕ್ತ ಮಾರ್ಗದರ್ಶನವನ್ನು ನೀಡಿ ಕೋಳಿ ಫಾರಂಗಳಿಗೆ ಕಳುಹಿಸಿಕೊಟ್ಟಿದೆ. ಹಾಂ ಅಂದ ಹಾಗೆ ಲಸಿಕೆ ನೀಡಲು ಅಲ್ಲ ಸ್ವಾಮಿ ಬದಲಾಗಿ ಕೈಗೆ ಗ್ಲೌಸ್ ತೊಟ್ಟು, ಮುಖ ಮೂತಿ ಮುಚ್ಚಿಕೊಂಡು ಕೋಳಿಗಳನ್ನು ಕತ್ತು ಹಿಚುಕಿ ಕೊಲ್ಲಲು! ಪರಿಣಾಮ ಬರೋಬ್ಬರಿ 1.5ಲಕ್ಷಕ್ಕೂ ಅಧಿಕ ಕೋಳಿಗಳು ತನ್ನ ಕತ್ತನ್ನು ಮುರಿಸಿಕೊಂಡು ವಿಲವಿಲನೆ ಒದ್ದಾಡುತ್ತಾ ಅಧಿಕಾರಿಗಳ ಮುಂದೆಯೇ ಮೋಕ್ಷ ಪಡೆಯಬೇಕಾಯಿತು! ಎಷ್ಟು ಕೋಳಿಗಳಿಗೆ ಹಕ್ಕಿಜ್ವರ ಬಂದಿದೆ ಅದೆಷ್ಟು ಕೋಳಿಗಳು ಆರೋಗ್ಯವಾಗಿಯೇ ಇವೆ ಎಂಬ ಬಗ್ಗೆ ಅದ್ಯಾವ ತನಿಖೆಯೂ ಇಲ್ಲ. ಒಟ್ಟಿನಲ್ಲಿ ಎಲ್ಲಾ ಕೋಳಿ ಫಾರಂಗಳಲ್ಲಿ ಕೋಳಿಗಳನ್ನು ಕತ್ತು ಹಿಚುಕಿ ಕೊಲ್ಲಬೇಕೆಂಬ ಆಜ್ಞೆ ಹೊರಡಿದೆಯಷ್ಟೇ! ರೋಗ ಬಂದರೆ ಔಷಧಿ ತಾನೇ ನೀಡಬೇಕು? ರೋಗಿಯನ್ನೇ ಕೊಂದು ಬಿಡುವುದೆಂದರೆ!? ಇರಲಿ, ಹಾಗಂತ ಇಲ್ಲಿ ಯಾರೂ ಪ್ರಶ್ನಿಸಿಲ್ಲ. ಚರ್ಚೆಯೂ ಆಗಿಲ್ಲ. ಆದ್ದರಿಂದ ಈ ವಿಷಯ ಪಕ್ಕಕಿರಲಿ. ಯಾಕೆಂದರೆ ಸತ್ತಿರುವುದು ಕೋಳಿಗಳಲ್ಲವೇ. ಹೇಗೂ ಸಾಯಲಿಕ್ಕೆಂದೇ ಹುಟ್ಟಿರುವಂತಹುದು ಎಂದುಕೊಂಡರಾಯಿತು ಬಿಡಿ. ಆದರೆ ವಿಚಾರ ಅದಲ್ಲ. ಹಾಗೇ ಸುಮ್ಮನೆ ಒಂದು ಬಾರಿ ಯೋಚಿಸಿ ನೋಡಿ. ಒಂದು ವೇಳೆ ಇವಿಷ್ಟೇ ಲಕ್ಷದಷ್ಟು ಕೋಳಿಗಳನ್ನು ಯಾವುದಾದರೂ ಮಾರಿಯಮ್ಮನ ಜಾತ್ರೆಯಲ್ಲೋ, ದೈವಸ್ಥಾನಗಳಲ್ಲೋ ಕತ್ತು ಹಿಚುಕಿ ಕೊಂದು ಹಾಕಿರುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು!!? ಅಬ್ಬಾ ಊಹಿಸುವುದೇ ಕಷ್ಟ. ಹಾಗೇನಾದರೂ ನಡೆದರೆ ದಿಲ್ಲಿಯಿಂದಲೇ ನಮ್ಮ ಪ್ರಾಣಿ ದಯಾಸಂಘದ ಪ್ರತಿನಿಧಿಗಳು ಹಾಜರಾಗುತ್ತಿದ್ದರು! ಇತ್ತ ಮೂಢನಂಬಿಕೆ ವಿರೋಧಿ ಹೋರಾಟದ ನಮ್ಮ ಸರಕಾರದ ಪ್ರತಿನಿಧಿಗಳೂ ಕೂಡ ರಾತ್ರಿ ಹಗಲು ಎನ್ನದೆ ಡಿಸಿ ಮನೆ ಮುಂದೆ ಕೂತು ನಿಷೇಧ ತರುವಲ್ಲಿ ಯಶಸ್ವಿಯಾಗುತ್ತಿದ್ದರು! ಅಲ್ಲೊಂದಷ್ಟು ಬಿಸಿ ಬಿಸಿ ಚರ್ಚೆಗೆ ಗ್ರಾಸವೂ ಸಿಗುತಿತ್ತು. ಮೌಢ್ಯ, ಅಂಧಾಚಾರ ಎಂಬಿತ್ಯಾದಿ ‘ಬುದ್ಧಿವಂತರ’ ಪದಪ್ರಯೋಗಗಳಂತೂ ಪತ್ರಿಕೆ, ಟಿವಿಗಳಲೆಲ್ಲಾ ತುಂಬಾ ರಾರಾಜಿಸಲ್ಪಡುತ್ತಿದ್ದವು! ಒಟ್ಟಿನಲ್ಲಿ ಅಂದು ಉಡುಪಿಯಲ್ಲಾದಂತೆ ಪೋಲೀಸ್ ಕಣ್ಗಾವಲಲ್ಲೇ  ಜಾತ್ರೆ ನಡೆಸುವ ಕೆಟ್ಟ ಪರಿಸ್ಥಿತಿ ಎದುರಾಗಿ ಬಿಡುತ್ತಿತ್ತು ಅನ್ನಿ!

ಯಾಕೆ ಹೀಗೆ? ಪರಿಸ್ಥಿತಿಗೆ ತಕ್ಕಂತೆ ನಮ್ಮ ಹಿಂಸೆಯ ವ್ಯಾಖ್ಯಾನವೂ ಬದಲಾಗಬೇಕೆ!?

ಇರಲಿ, ಮೊನ್ನೆಯಷ್ಟೇ ನಡೆದ ಇನ್ನೊಂದು ಘಟನೆಯನ್ನು ಗಮನಿಸಿ. ಶಿವಮೊಗ್ಗದ ಊರೊಂದರಲ್ಲಿ ಒಂದಷ್ಟು ಬ್ರಾಹ್ಮಣರು ಸೇರಿಕೊಂಡು ಯಾಗದ ಹೆಸರಲ್ಲಿ ಮೇಕೆ ಮಾಂಸ ಮೆಲ್ಲಿದರೆಂಬ ಸುದ್ದಿ! ಇದು ಎಷ್ಟು ನಿಜವೋ ಸುಳ್ಳೋ ಎಂಬುದು ದೇವರಿಗೇ ಗೊತ್ತು.  ಆದರೆ ಅಷ್ಟಕ್ಕೆ ಸಾಕಾಗಿ ಹೋಯಿತು ನೋಡಿ. ಎಲ್ಲರೂ ನಾ ಮುಂದು ತಾ ಮುಂದು ಎಂಬಂತೆ ಮುಗಿಬಿದ್ದು ವಿಮರ್ಶೆಗೆ ಇಳಿದರು. ಅದರಲ್ಲೂ ಈ ಮೊದಲೇ ಬ್ರಾಹ್ಮಣ ದ್ವೇಷವನ್ನು ತಮ್ಮ ಅಜನ್ಮ ಸಿದ್ಧ ಹಕ್ಕಾಗಿಸಿಕೊಂಡಿರುವ ‘ಬುದ್ದಿವಂತರ’ ವರ್ಗವಂತೂ ಸಿಕ್ಕಿದ್ದೇ ಚಾನ್ಸ್ ಎಂಬಂತೆ ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ನೀಡಲು ಶುರುವಿಟ್ಟರು! ಪ್ರಾಣಿ ಹಿಂಸೆಯಿಂದ ಮೊದಲ್ಗೊಂಡ ಚರ್ಚೆ ಕೊನೆಗೆ ‘ಯಜ್ಞ’ ‘ಯಾಗ’ ಮಾಡುವುದೇ ತಪ್ಪು, ಅದೊಂದು ಅಂಧಾಚಾರ ಅನ್ನುವಲ್ಲಿಯವರೆಗೂ ಹೋಯಿತು ಕೆಲವರ ವಾದ! ದೇವರ ಹೆಸರಲ್ಲಿ, ಯಜ್ಞ ಯಾಗದ ಹೆಸರಲ್ಲಿ ಮೂಕಪ್ರಾಣಿಗಳನ್ನು ಬಲಿ ನೀಡುವುದು ಅಕ್ಷಮ್ಯ ಅಪರಾಧ, ಅಂತವರನ್ನು ಕೂಡಲೇ ಜೈಲಿಗಟ್ಟಬೇಕು ಎಂಬುದು ಇವರೆಲ್ಲರ ಪರಮ ಬೇಡಿಕೆ! ಇರಬಹುದು, ಮಹಾತ್ಮ ಗಾಂಧೀ, ಬುದ್ಧ, ಬಸವಣ್ಣನಂತವರು ಮೆಟ್ಟಿದ ಈ ನಾಡಲ್ಲಿ ಹಿಂಸೆಯನ್ನು ವಿರೋಧಿಸುವುದು ಸರಿಯಾದ ಕ್ರಮವೇ. ಆದರೆ ಇಲ್ಲಿ ಆಶ್ಚರ್ಯವೇನೆಂದರೆ, ಹೀಗೆಲ್ಲಾ ಹೇಳಿಕೆ ನೀಡಿದವರು, ಮತ್ತೂರಿನ ಸೋಮಯಾಗವನ್ನು ಗಂಟೆಗಟ್ಟಲೆ ವಿಮರ್ಶಿಸುತ್ತಾ ಮೂಕ ಪ್ರಾಣಿಗಳ ಮೇಲೆ ಏಕಾಏಕಿ ಔದಾರ್ಯ ತೋರ್ಪಡಿಸಿದವರು ಬೇರಾರು ಅಲ್ಲ, ಬದಲಾಗಿ ಅಂದು ಬೆಂಗಳೂರಿನ ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲೇ ದನದ ಮಾಂಸವನ್ನು ಹರಿದು ಹಂಚಿ ತಿಂದು ತೇಗಿದವರು, ಹಾಗೂ ಅದನ್ನು ವೈಚಾರಿಕತೆಯ ಹೆಸರಲ್ಲಿ, ‘ಆಹಾರದ ಹಕ್ಕು’ ಎಂದೆನ್ನುತ್ತಾ ಪ್ರತಿಪಾದಿಸಿದವರು!! ಏನನ್ನಬೇಕು ಇದಕ್ಕೆ? ಇದನ್ನೇ ತಾನೇ ಅಸಹ್ಯವೆನ್ನುವುದು!? ವಿರೋಧಿಸಲು ಇವರಿಗೆ ಕನಿಷ್ಟ ನೈತಿಕ ಅರ್ಹತೆಯಾದರೂ ಬೇಕಿತ್ತು ಅಲ್ಲವೇ? ಬ್ರಾಹ್ಮಣರು ಕುರಿ ತಿಂದರೆ ಅದು ಅಕ್ಷಮ್ಯ ಅಪರಾಧ (ತಿಂದಿದ್ದಾರೆ ಎನ್ನಲು ಅದ್ಯಾವುದೇ ಬಲವಾದ ಆಧಾರಗಳಂತೂ ಇಲ್ಲವೇ ಇಲ್ಲ ಎಂಬುದು ನೆನಪಿರಲಿ) ಆದರೆ ‘ಬುದ್ಧಿವಂತರು’ ದನದ ಮಾಂಸವನ್ನು ಸಾರ್ವಜನಿಕವಾಗಿ ಬೇಯಿಸಿ ತಿನ್ನುವುದಾದರೆ ಅದು ವೈಚಾರಿಕತೆ!! ಎಂಥಾ ದುರಂತಮಯ ವಾದ ಇದು! ನಮ್ಮಲ್ಲಿನ ಇನ್ನೂ ಒಂದು ವೈರುಧ್ಯ ನೋಡಿ. ನಮ್ಮಲ್ಲಿ ಕೋಳಿ ಕುರಿ ಮೇಕೆಗಳನ್ನು ಕಸಾಯಿಖಾನೆಗಳಲ್ಲಿ ಹೇಗೆ ಬೇಕಾದರೂ ಕೊಲ್ಲಬಹುದು. ಅವುಗಳ ಕತ್ತನ್ನಾದರೂ ಹಿಸುಕಿ, ಚೂರಿಯನ್ನಾದರೂ ಹಾಕಿ ಇಲ್ಲವೇ ‘ಹಲಾಲ್’ ಎಂಬ ಹೆಸರಲ್ಲಿ ಪ್ರಾಣಿಯ ಕತ್ತಿನ ನರವನ್ನು ಕತ್ತರಿಸಿಕೊಂಡು ಹಿಂಸಾತ್ಮಕವಾಗಿಯೇ ಬೇಕಾದರೂ ಕೊಂದು ಹಾಕಿ. ಆದರೆ ಅದನ್ನು ಇಲ್ಲಿ ಯಾರೂ ಕೇಳುವವರಿಲ್ಲ! ಅದು ಇಲ್ಲಿ ತಪ್ಪು ಅಂತ ಅನ್ನಿಸುವುದೇ ಇಲ್ಲ್ಲ. ಆದರೆ ಅಪ್ಪಿ ತಪ್ಪಿಯೂ ನೀವು ಮಾರಿಯಮ್ಮನ ಗುಡಿಯಲ್ಲೋ ಅಥವಾ ಇನ್ನೆಲ್ಲಾದರೂ ಪೂಜಾ ಸ್ಥಳಗಳಲ್ಲೋ ಹರಕೆ ರೂಪದಲ್ಲಿ ಕೋಳಿ ಕುರಿಯನ್ನು ಕತ್ತರಿಸಿದರೆ ಮಾತ್ರ ಮುಗಿದೇ ಹೋಯಿತು! ಅದು ಈ ನೆಲದಲ್ಲಿ  ಮಹತ್ತರವಾದ ಹಿಂಸೆಯಾದಂತಾಗುತ್ತದೆ. ಮೂಕ ಪ್ರಾಣಿಯ ಹತ್ಯೆ ಎಂಬುದಾಗಿ ಸಾರಲ್ಪಡುತ್ತದೆ!!

ಬೇಜಾರಾಗುವುದು ಇದಕ್ಕೇ. ಇದು ನಮ್ಮ ದೇಶದ ವಸ್ತು ಸ್ಥಿತಿಗೆ ಹಿಡಿದ ಕನ್ನಡಿಯಷ್ಟೇ!

ಇದೀಗ ಶಿವಮೊಗ್ಗದಲ್ಲಾದ ಸೋಮಯಾಗವನ್ನೇ ಗಮನಿಸೋಣ. ಅಲ್ಲಿ ಯಾಗ ಕುಂಡದ ಸುತ್ತ ನೆರೆದವರು ಒಂದಷ್ಟು ಬ್ರಾಹ್ಮಣರು. ಅವರೆಲ್ಲಾ ಅಲ್ಲಿ ಯಾಗದ ಹೆಸರಲ್ಲಿ ಮಾಂಸ ತಿಂದರು, ಕಳ್ಳ ಬಟ್ಟಿ ಬೇಯಿಸಿ ಕುಡಿದರು ಎಂಬ ವಿಚಾರ. ಇದು ಎಷ್ಟು ನಿಜ, ಎಷ್ಟು ಸುಳ್ಳು ಎಂಬ ವಿಚಾರವನ್ನು ನಾನಿಲ್ಲಿ ಚರ್ಚಿಸಲಾರೆ. ಆದರೆ ಇದನ್ನು ವಿರೋಧಿಸಲು, ತಪ್ಪೆನ್ನಲು ನಾವುಗಳು ಯಾರು ಎಂಬುದೇ ಇಲ್ಲಿ ನನ್ನ ಪ್ರಶ್ನೆ! ಯಾಕೆಂದರೆ ಈ ದೇಶದಲ್ಲೇನಾದರೂ ಮಾಂಸಹಾರ ನಿಷೇಧಿಸಲ್ಪಟ್ಟಿದೆಯೇ!? ಅಥವಾ ಮಾಂಸಹಾರವೆನ್ನುವುದು ಕೇವಲ ‘ವರ್ಗ’ವೊಂದರ ಸೊತ್ತೆ!? ಇಲ್ಲವಲ್ಲ!? ಮಿಕ್ಕವರು ನಿರ್ಭಯವಾಗಿ ಗೋ ಮಾಂಸ ತಿನ್ನಬಹುದದಾದರೆ, ಅದು ಅವರವರ ಆಹಾರದ ಹಕ್ಕು ಎಂದೆನ್ನಿಸುವುದಾದರೆ ಈ ಯಾಗದ ಸುತ್ತ ನೆರೆದ ಮನುಷ್ಯರಿಗೆ ಕನಿಷ್ಟ ಮಾಂಸ ತಿನ್ನುವ ಸ್ವಾತಂತ್ರ್ಯವೂ ಇಲ್ಲವೇ!? (ಸಂಬಂಧಪಟ್ಟವರ ಕ್ಷಮೆ ಕೋರುತ್ತಾ). ಇದೀಗ ಯಾಗ ನೆರವೇರಿಸಿದ ಸಂಬಂಧಪಟ್ಟ ಪರೋಹಿತರುಗಳು ಮಾಂಸ ಸೇವನೆಯ ವಿಚಾರವನ್ನು ಸ್ಪಷ್ಟವಾಗಿ ಅಲ್ಲಗಳೆಯುತ್ತಿದ್ದಾರೆ. ನಡೆದಿರೋ ಅಪಪ್ರಚಾರಕ್ಕೆ ಕ್ರೋಧಿತರಾಗಿದ್ದಾರೆ ಕೂಡ. (ಮಾಡದ್ದನ್ನು ಮಾಡಿದ್ದೇವೆ ಎಂದು ಒಪ್ಪಿಕೊಳ್ಳುವುದು ಕೂಡ ತಪ್ಪೇ ಅಲ್ಲವೇ?) ಆದರೆ ಒಂದು ವೇಳೇ ಅವರುಗಳು ‘ಹೌದು ನಾವು ತಿಂದಿದ್ದೇವೆ, ಇನ್ನೂ ತಿನ್ನುತ್ತೇವೆ ಏನೀವಾಗ’ ಎಂದು ಪ್ರಶ್ನಿಸಿರುತ್ತಿದ್ದರೆ ಈ ‘ವಿರೋಧಿಗಳ’, ಅರೆಬೆಂದ ವಿಚಾರವಾದಿಗಳ ಉತ್ತರ ಏನಾಗಿರುತ್ತಿತ್ತು!? ಹೇಳೀ, ಅದ್ಯಾವ ನೆಲೆಗಟ್ಟಿನ ಮೇಲೆ ಬ್ರಾಹ್ಮಣರು ಮಾಂಸಹಾರ ತಿನ್ನಬಾರದೆಂದು ಇವರು ಇಂದು ಹೇಳುತ್ತಿದ್ದಾರೆ? ಯಾಕೆಂದರೆ ವೇದಗಳ ಕಾಲದಲ್ಲಿ ಬ್ರಾಹ್ಮಣರೆಲ್ಲಾ ಪಶು ಆಹಾರ ತಿನ್ನುತ್ತಿದ್ದರು ಎಂಬ ಸ್ವಾರಸ್ಯಕರ ವಿಚಾರವನ್ನು ಮಂಡಿಸಿದವರುಗಳೂ ಕೂಡ ಇವರುಗಳೇ ಅಲ್ಲವೇ!?  ಇದೀಗ ಬ್ರಾಹ್ಮಣರು ಮಾಂಸ ತಿಂದರು ಎಂಬ ಸುದ್ದಿ ಹಬ್ಬಿದ ಕೂಡಲೇ ಯಾಕೆ ಇವರೆಲ್ಲಾ ಮೈಮೇಲೆ ದೇವರು ಬಂದಂತೆ ಆಡಬೇಕು!? ಅಷ್ಟಕ್ಕೂ ಯಾಗ ಯಜ್ಞಗಳೇ ಬೋಗಸ್, ಮೌಢ್ಯವೆನ್ನುವ ಮಂದಿಗೆ ಅದರ ಸುತ್ತ ನಡೆಯುವ ವಿಚಾರಗಳಾದರೂ ಯಾಕೆ ಬೇಕು? ಅಲ್ಲಿ ಕುರಿಯನ್ನಾದರೂ ಬಲಿ ಕೊಡಲಿ ಇಲ್ಲ ಕೋಳಿಯನ್ನಾದರೂ ಕೊಡಲಿ. ಅದು ಅವರಿಗೆ ಬಿಟ್ಟ ವಿಚಾರವಷ್ಟೇ. ಅದಕ್ಕೇಕೆ ಸಂಬಂಧವೇ ಪಡದ ಮೂರನೇ ವ್ಯಕ್ತಿಗಳು ಮೂಗು ತೂರಿಸುತ್ತಾ ವಿಮರ್ಶೆಗೆ ಇಳಿಯುವುದು!? ಇನ್ನು ಪ್ರಾಣಿಗಳನ್ನು ಕೊಲ್ಲುವುದೇ ತಪ್ಪು ಅದು ಅಪರಾಧವೆನ್ನುವುದಾದರೆ ಈ ನಮ್ಮ ದೇಶದಲ್ಲಿ ತೆರೆದುಕೊಂಡಿರುವ ಲಕ್ಷೋಪ ಲಕ್ಷ ಕಸಾಯಿಖಾನೆಗಳೇನು!? ಅದನ್ನೆಂದು ಕೊನೆ ಕಾಣಿಸುವುದು!? ಹಾಗಾದರೆ ಅಲ್ಲೆಲ್ಲಾ ನಡೆಯುತ್ತಿರುವುದು ಮೂಕ ಪ್ರಾಣಿಯ ಹತ್ಯೆಯಲ್ಲವೇ!? ಒಬ್ಬರು ತಿನ್ನುವುದು ಅಪರಾಧ ಇನ್ನೊಬ್ಬರು ತಿನ್ನುವುದು ವಿಚಾರವಾದ! ಇದೆಂತಹ ವಿತಂಡವಾದ!?

ಅದಕ್ಕೆ ದೇಶದಲ್ಲಿ ಇಂದು ವೈಚಾರಿಕ ನಿಲುವುಗಳೇ ದಾರಿ ತಪ್ಪಿವೆ ಅನ್ನಿಸುತ್ತಿವೆ. ಸರಿ ತಪ್ಪುಗಳನ್ನು ವಾಖ್ಯಾನಿಸಬೇಕಾದರೂ ಕುಲ ಗೋತ್ರಗಳ ಪರಿಶೀಲನೆ ನಡೆಯುತ್ತಿದೆಯೇನೋ ಎಂದು ಭಾಸವಾಗುತ್ತಿದೆ. ಒಂದು ಕಾಲದಲ್ಲಿ ವೈದಿಕ ಪರಂಪರೆ ಶೋಷಣೆಗೆ ಅನುವು ಮಾಡಿಕೊಟ್ಟಿತ್ತು ಎಂಬ ಒಂದೇ ಕಾರಣಕ್ಕೆ ಇಂದು ವೈದಿಕ ಆಚರಣೆಯ ಎಲ್ಲವನ್ನೂ ದೂಷಿಸುವುದು, ದೂರೀಕರಿಸುವುದು ಒಂದು ರೀತಿಯ ‘ವೈಚಾರಿಕತೆ’ಯೆಂಬಂತಾಗಿದೆ. ಆದ್ದರಿಂದಲೇ ಪ್ರಕೃತಿ ಪೂಜೆಯ ಪ್ರತೀಕದಂತಿರುವ ಯಜ್ಞ, ಯಾಗ, ಹೋಮ ಹವನಾದಿಗಳಲ್ಲೂ ಲೋಪವ ಹುಡುಕಿ ಅದರ ನಿಷೇಧಕ್ಕೆ ಪಣತೊಟ್ಟಿರುವುದು!

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!