Featured ಅಂಕಣ

ಮತ್ತೂರಿನಲ್ಲಿ ಮೇಕೆ ಮಾಂಸ ತಿಂದ “ವಿಶ್ವಾಸಾರ್ಹ” ಪತ್ರಕರ್ತರು!

ಮೇ 4ರ ಮುಂಜಾನೆ ಮನೆ ಬಾಗಿಲಿಗೆ ಬಂದ ಪ್ರಜಾವಾಣಿಯ ಮುಖಪುಟದಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಮತ್ತೂರು ಎಂಬ ಸಂಸ್ಕøತ ಗ್ರಾಮದಲ್ಲಿ ಗುಪ್ತವಾಗಿ ಸೋಮಯಾಗ ಮಾಡಲಾಗಿದೆ. ತಮಿಳುನಾಡು, ಆಂಧ್ರ ಮುಂತಾದ ಹೊರ ರಾಜ್ಯಗಳಿಂದ ಋತ್ವಿಜರು ಬಂದು ಇಲ್ಲಿ ಖಾಸಗಿಯಾಗಿ ಒಬ್ಬರ ಅಡಕೆ ತೋಟದಲ್ಲಿ ಯಾಗ ಮಾಡಿ ಎಂಟು ಮೇಕೆಗಳನ್ನು ಬಲಿ ಕೊಟ್ಟಿದ್ದಾರೆ. ಜೊತೆಗೆ ಭಟ್ಟಿ ಇಳಿಸಿದ ಕಳ್ಳು ಸೋಮರಸವನ್ನು ಕುಡಿದಿದ್ದಾರೆ – ಇದು ಸುದ್ದಿಯ ಸಾರ. ಸಂಕೇತಿಗಳ ಯಾಗದಲ್ಲಿ ಮೇಕೆಗಳ ಆಹುತಿ – ಎಂಬ, ಆಶ್ಚರ್ಯ ಸೂಚಕ ಚಿಹ್ನೆಯ ಸಮೇತವಾದ ಅತಿರಂಜಿತ ಶೀರ್ಷಿಕೆ ಬೇರೆ! ಸರಿ, ಇದನ್ನೇ ಆಧರಿಸಿ ಒಂದೆರಡು ನ್ಯೂಸ್ ಪೋರ್ಟಲ್‍ಗಳು ಸುದ್ದಿಯನ್ನು ಯಥಾವತ್ತಾಗಿ ಮರುನಿರೂಪಿಸಿದವು. ಸುದ್ದಿಯ ಬೆನ್ನುಹತ್ತಿದ ಒಂದೆರಡು ಸುದ್ದಿಚಾನೆಲ್‍ಗಳು ತಮಗೆ ವಾಟ್ಸಾಪ್ ಮೂಲಕ ಲಭ್ಯವಾದ ಒಂದೆರಡು ನಿಮಿಷಗಳ ವಿಡಿಯೋಗಳನ್ನು ನೂರಾರು ಸಲ ತಿರು ತಿರುಪಿ ಹಾಕಿ ವೀಕ್ಷಕರನ್ನು ಬೋರು ಹೊಡೆಸಿದವು. “ಇತ್ತೀಚಿನ ವರ್ಷಗಳಲ್ಲಿ ಪ್ರಜಾವಾಣಿ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆಯೇನೋ ಅನಿಸುತ್ತಿತ್ತು, ಇದು ನಮ್ಮ ಪತ್ರಿಕೆ ಅನಿಸುತ್ತಿರಲಿಲ್ಲ. ಆದರೆ ಈ ಒಂದು ಸುದ್ದಿಯನ್ನು ಪ್ರಕಟಿಸುವ ಮೂಲಕ ಅದು ನಮ್ಮ ವಿಶ್ವಾಸವನ್ನು ಮತ್ತೆ ಗಳಿಸಿಕೊಂಡಿದೆ” ಎಂದು ಶಿವಮೊಗ್ಗದ ಬುದ್ಧಿಜೀವಿಯೊಬ್ಬರು ಸಮಾಧಾನದ ನಿಟ್ಟುಸಿರು ಬಿಟ್ಟದ್ದನ್ನು ವೆಬ್‍ಸೈಟೊಂದು ಪ್ರಕಟಿಸಿತು. ಇದಿಷ್ಟು ಹಿನ್ನೆಲೆ. ಈಗ ಮುಖ್ಯ ವಿಷಯಕ್ಕೆ ಬರೋಣ.

(1) ಸೋಮಯಾಗದಲ್ಲಿ ಪ್ರಾಣಿ ಬಲಿ ಆಚರಣೆ ಇದೆಯೇ, ಇದ್ದರೂ ಅವಶ್ಯಕವೇ? (2) ಬ್ರಾಹ್ಮಣರು ಪ್ರಾಣಿಬಲಿ ಕೊಡುವುದು, ಮಾಂಸ ಸೇವಿಸುವುದು ಅಸಾಂವಿಧಾನಿಕದೆಯೇವಾಗುತ್ತದೆಯೇ? (3) ಮತ್ತೂರಿನಲ್ಲಿ ನಡೆದದ್ದನ್ನು ಪತ್ರಿಕೆ ವಸ್ತುನಿಷ್ಠವಾಗಿ ವರದಿ ಮಾಡಿದೆಯೇ? – ಎಂದು ಮುಖ್ಯವಾಗಿ ಮೂರು ಭಾಗಗಳಾಗಿ ವಿಭಾಗಿಸಿ ನಮ್ಮ ಚರ್ಚೆಯನ್ನು ಪ್ರಾರಂಭಿಸಬಹುದು. ಮೊದಲನೆಯದಾಗಿ ಸೋಮಯಾಗದಲ್ಲಿ ಪ್ರಾಣಿ ಬಲಿ ಅಗತ್ಯವೇ ಎಂದು ನೋಡೋಣ. ಸೋಮಯಾಗ ಒಂದು ವೈದಿಕ ಯಜ್ಞ. ವೈದಿಕ ಯಾಗಗಳಲ್ಲಿ ಇದು ಅತ್ಯಂತ ಕಠಿಣವಾದದ್ದು; ಆಳವಾಗಿ ವೇದಾದ್ಯಯನ ಮಾಡಿದವರಷ್ಟೇ ಇದನ್ನು ಆಚರಿಸಲು ಅರ್ಹರು ಎಂಬ ಮಾತುಗಳನ್ನು ಕೇಳಿದ್ದೇನೆ. ನನ್ನ ಕಾಲೇಜಿನಲ್ಲಿ ಅನಂತಕೃಷ್ಣ ದೀಕ್ಷಿತ ಎಂಬ ಪ್ರೊಫೆಸರರೊಬ್ಬರು ವೇದಗಳನ್ನು ಹಲವು ವರ್ಷಗಳ ಕಾಲ ಅಧ್ಯಯನ ಮಾಡಿ, ಕೊನೆಗೆ ಸೋಮಯಾಗವನ್ನು ಅತ್ಯಂತ ನಿಷ್ಠೆಯಿಂದ ಪೂರೈಸಿ ಸೋಮಯಾಜಿ ಎಂಬ ಉಪಾಧಿ ಪಡೆದಿದ್ದರು. ತಾನೇ ತಯಾರಿಸಿದ ಅಡುಗೆ ಮತ್ತು ಮನೆಯಿಂದ ತಂದ ನೀರು ಇವೆರಡನ್ನಲ್ಲದೆ ಅವರು ಹೊರ ಜಗತ್ತಿನ ಯಾವುದನ್ನೂ ಸೇವಿಸುತ್ತಿರಲಿಲ್ಲ. ಇದು ಮೂಢನಂಬಿಕೆಯ ಪ್ರಶ್ನೆಯಲ್ಲ, ಕೇವಲ ಆಚರಣೆಯ ಪ್ರಶ್ನೆ ಅಷ್ಟೆ. ಕರ್ಮಠ ಬ್ರಾಹ್ಮಣನಾಗಿದ್ದ ಈ ವ್ಯಕ್ತಿ ತನ್ನ ಶ್ರದ್ಧೆ, ನಂಬಿಕೆ, ಆಚರಣೆಗಳಲ್ಲಿ ಅದೆಷ್ಟು ಬಿಗಿಯೋ ಹೊರ ಜಗತ್ತಿನ ವ್ಯವಹಾರಗಳಲ್ಲಿ ಅಷ್ಟೇ ಅಮಾಯಕರಾಗಿದ್ದರು. ವಿಶ್ವದ ಅಣು ರೇಣು ತೃಣ ಕಾಷ್ಠಗಳಲ್ಲಿ ಚೈತನ್ಯ ಸ್ವರೂಪಿ ಭಗವಂತನಿದ್ದಾನೆ ಎಂದು ಭಾವಿಸುತ್ತಿದ್ದ ಸೋಮಯಾಜಿಗಳು ತನ್ನ ಜೀವಿತದಲ್ಲಿ ಎಂದೂ ಯಾರನ್ನೂ ನೋಯಿಸಿದವರಲ್ಲ. ಒಂದು ಇರುವೆಗೆ ಕೂಡ ಹಿಂಸೆ ಕೊಟ್ಟವರಲ್ಲ. ಅವರು ಸೋಮಯಾಗವನ್ನು ವೇದೋಕ್ತ ರೀತಿಯಲ್ಲೇ ಮಾಡಿದ್ದುದರಿಂದ, ಸೋಮಯಾಗದಲ್ಲಿ ಪ್ರಾಣಿಬಲಿ, ಪ್ರಜಾವಾಣಿ ಹೇಳುವ ರೀತಿಯಲ್ಲಿ ನಡೆಯುವ ಸಾಧ್ಯತೆ ಇಲ್ಲ ಎಂದು ಅತ್ಯಂತ ದೃಢ ವಿಶ್ವಾಸದಿಂದ ಹೇಳಬಲ್ಲೆ. ಪತ್ರಿಕೆ ಹೇಳುವಂತೆ, ಈ ಯಾಗದಲ್ಲಿ ಪ್ರಾಣಿಗಳನ್ನು ಕಡಿಯಲಾಗುತ್ತದೆ, ಅವುಗಳ ದೇಹದ ಒಂದೊಂದೇ ಅಂಗಗಳನ್ನು ಕಡಿದು ಯಜ್ಞ ಕುಂಡಕ್ಕೆ ಅರ್ಪಿಸಲಾಗುತ್ತದೆ, ನಂತರ ಬೆಂಕಿಯಲ್ಲಿ ಬೆಂದ ಮಾಂಸವನ್ನು ಹೋತೃಗಳು ಸೇವಿಸುತ್ತಾರೆ – ಇದು ಕಪೋಲ ಕಲ್ಪಿತ ಕತೆ. ಬಹುಶಃ ವರದಿಗಾರರು ರಾತ್ರಿಯ ನಿದ್ದೆಗಣ್ಣಲ್ಲಿ ಅಥವಾ ಸುರಾರಾಕ್ಷಸನ ಅಪ್ಪುಗೆಯಲ್ಲಿದ್ದಾಗ ಇಂಥ ವರ್ಣನೆಗಳನ್ನು ತಾವಾಗಿ ಕಲ್ಪಿಸಿಕೊಂಡು ವರದಿ ಬರೆದಿರುವ ಸಾಧ್ಯತೆ ಇದೆ. ಸೋಮಯಾಗದ ವಿಧಿವಿಧಾನಗಳನ್ನು ಶ್ರೌತಪ್ರಯೋಗ ಎಂಬ ಪುಸ್ತಕದಲ್ಲಿ ವಿವರಿಸಲಾಗಿದೆ. ಆ ಪುಸ್ತಕದಲ್ಲಾಗಲೀ ಉಳಿದ್ಯಾವ ವೈದಿಕ ಸಾಹಿತ್ಯದಲ್ಲಾಗಲೀ ಹೀಗೆ “ಪ್ರಾಣಿಗಳ ಅಂಗಗಳನ್ನು ಒಂದೊಂದಾಗಿ ಕತ್ತರಿಸಿ ಅಗ್ನಿ ಕುಂಡಕ್ಕೆ ಹಾಕುವ” ಬಗ್ಗೆ ಪ್ರಸ್ತಾಪವೇ ಇಲ್ಲ. ಇನ್ನು, ಬಲಿ ಕೊಟ್ಟ ಪ್ರಾಣಿಗಳ ಮಾಂಸವನ್ನು ತಿನ್ನುವ ಮಾತು ಎಲ್ಲಿ ಬಂತು?! ಇಂಥದೊಂದು ಆಚರಣೆ ಸೋಮಯಾಗದಲ್ಲಿದ್ದರೆ ನಾನು ಕಂಡ ಪ್ರೊಫೆಸರು ಅದನ್ನು ಸುತಾರಾಂ ಮಾಡುತ್ತಿರಲಿಲ್ಲ ಎಂದು ಬೆಟ್ ಕಟ್ಟ ಬಲ್ಲೆ. ಇಲ್ಲದ್ದನ್ನೆಲ್ಲ ಕಲ್ಪಿಸಿಕೊಂಡು ಪತ್ರಿಕೆಯ ಜಾಗ ತುಂಬಿಸುವುದು ಯಾರಿಗೆ ಶೋಭೆ?

ಇನ್ನು ಪ್ರಜಾವಾಣಿಯ ವರದಿಯಲ್ಲಿ ಸೋಮರಸದ ಉಲ್ಲೇಖವೂ ಉಂಟು. ಸೋಮರಸ ಎಂದರೆ ಆಲ್ಕೋಹಾಲ್ ಎನ್ನುವುದು ಹತ್ತೊಂಬತ್ತನೇ ಶತಮಾನದಿಂದೀಚೆಗೆ ಬ್ರಿಟಿಷರು ಮಾಡಿರುವ ಎಡವಟ್ಟು ಅನುವಾದ ಎಂದು, ಸೋಮರಸದ ತಯಾರಿಯ ಬಗ್ಗೆ ಸರಿಯಾದ ಮಾಹಿತಿ ಇರುವ ಯಾರೂ ಹೇಳಿಯಾರು. ಸೋಮರಸದ ಬಗ್ಗೆ ಋಗ್ವೇದದಿಂದ ಮೊದಲ್ಗೊಂಡು ಭಾರತೀಯ ಆರ್ಷೇಯ ಪರಂಪರೆಯ ಬಹುತೇಕ ಎಲ್ಲ ಕೃತಿಗಳಲ್ಲೂ ಉಲ್ಲೇಖವಿದೆ. ಋಗ್ವೇದದ ಒಂಬತ್ತನೆಯ ಮಂಡಲದ ಋಕ್ಕುಗಳು ಸೋಮದ ವರ್ಣನೆ ಮತ್ತು ಪ್ರಶಂಸೆಗೇ ಮೀಸಲಾಗಿವೆ. ಬ್ರಾಹ್ಮಣ, ಅರಣ್ಯಕ, ಉಪನಿಷತ್ತು, ಭಗವದ್ಗೀತೆಯಂಥ ಬಹುತೇಕ ಎಲ್ಲ ಸಾಹಿತ್ಯಗಳಲ್ಲೂ ಅದನ್ನು ಜ್ಯೋತಿ, ದೇಹವನ್ನು ಶುದ್ಧ ಮಾಡುವಂಥ ಔಷಧಿ ಎಂಬರ್ಥದಲ್ಲೇ ವರ್ಣಿಸಲಾಗಿದೆ. ಇಂದ್ರ ಸೋಮರಸವನ್ನು ಕುಡಿದು ವೃತ್ರಾಸುರನೊಡನೆ ಕಾಳಗ ಮಾಡಿದನಂತೆ. ಪುರಾಣಗಳಲ್ಲಿ ದೇವತೆಗಳು ಯುದ್ಧಕ್ಕೆ ಮೊದಲು ಈ ದ್ರವ್ಯವನ್ನು ಸೇವಿಸುತ್ತಿದ್ದರೆಂದೂ ಯಜ್ಞದ ಒಂದು ಭಾಗವಾಗಿ ಋಷಿಗಳು ಸೋಮವನ್ನು ಪಾನ ಮಾಡುತ್ತಿದ್ದರೆಂದೂ ಅಲ್ಲಲ್ಲಿ ಉಲ್ಲೇಖಗಳು ಸಿಗುತ್ತವೆ. ಸೋಮರಸ ಒಂದು ಮಾದಕ ಪೇಯ; ಅದನ್ನು ಕುಡಿದರೆ ಚಿತ್ತ ಭ್ರಮೆ ಉಂಟಾಗುತ್ತದೆ ಎಂಬರ್ಥದಲ್ಲಿ ಅನುವಾದ ಮಾಡಿ ಎಡವಟ್ಟು ಮಾಡಿದವರು ರಾಲ್ಫ್ ಗ್ರಿಫಿತ್ (1826-1906) ಮತ್ತು ಆತನ ನಂತರ ಬಂದ ಸೋಕಾಲ್ಡ್ ವೇದ ಪಾರಂಗತ ವಿದೇಶೀಯರು. ಸೋಮವನ್ನು ಮಾದಕ ಪೇಯ ಅನ್ನುವುದಾದರೆ, ಋಷಿಗಳು ಕುಡಿದು ಯಾಗ ಮಾಡುತ್ತಿದ್ದರೆಂದೂ ದೇವತೆಗಳು ಅಮಲೇರಿಸಿಕೊಂಡು ತೂರಾಡುತ್ತ ಹೋಗಿ ಯುದ್ಧ ಮಾಡುತ್ತಿದ್ದರೆಂದೂ ಅರ್ಥೈಸಿಕೊಳ್ಳಬೇಕಾಗುತ್ತದೆ. ಅತ್ಯಂತ ಕಟ್ಟುನಿಟ್ಟಿನ ಆಚರಣೆಗಳನ್ನು ಪಾಲಿಸಬೇಕಾದ ಯಜ್ಞದಲ್ಲಿ ಮತ್ತು ಮೈಯೆಲ್ಲ ಕಣ್ಣಾಗಿರಬೇಕಾದ ಯುದ್ಧದಲ್ಲಿ ಕುಡುಕರು ಹೇಗೆ ಭಾಗವಹಿಸಲು ಸಾಧ್ಯ? ಅಲ್ಲದೆ ಸಮಸ್ತ ವೈದಿಕ ಸಾಹಿತ್ಯ, ಸೋಮ ಮತ್ತು ಸುರೆ – ಇವೆರಡರ ನಡುವೆ ಅತ್ಯಂತ ಸ್ಪಷ್ಟವಾದ ಭೇದವನ್ನು ತಿಳಿಸುತ್ತದೆ. ಶತಪಥ ಬ್ರಾಹ್ಮಣದಲ್ಲಿ ಸೋಮವನ್ನು ಸತ್ಯ, ಪುಣ್ಯ, ಬೆಳಕು ಎಂದರೆ ಸುರೆಯನ್ನು ಸುಳ್ಳು, ಪಾಪ, ಕತ್ತಲೆ ಎಂದು ಹೇಳಲಾಗಿದೆ. ಬ್ರಾಹ್ಮಣನಾದವನು ಸುರೆಯನ್ನು ಮುಟ್ಟಬಾರದು, ಅದನ್ನು ಮಹಾಪಾಪವೆಂದು ಪರಿಗಣಿಸಬೇಕೆಂದು ಎಲ್ಲ ಕೃತಿಗಳೂ ಮೇಲಿಂದ ಮೇಲೆ ಹೇಳುತ್ತವೆ. ಆದರೆ, ಕುಡಿಯುವುದು ಎಂದರೆ ಮಾದಕ ದ್ರವ್ಯ ಎಂದಷ್ಟೇ ಅರ್ಥ ಮಾಡಿಕೊಂಡಿದ್ದ ವಿದೇಶೀ ಪಂಡಿತರು ಈ ವ್ಯತ್ಯಾಸಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಸೋಮವನ್ನೂ ಸುರೆಯನ್ನೂ ಒಂದೇ ತಕ್ಕಡಿಯಲ್ಲಿ ಹಾಕಿ ಎರಡನ್ನೂ ಮಾದಕ ಪೇಯಗಳಾಗಿ ಮಾಡಿಬಿಟ್ಟರು. ಇಂಥ ಎಡವಟ್ಟು ಗಿರಾಕಿಗಳಿಗೆ ಪಂಚಾಮೃತದ ಮಹತ್ವ ಕೂಡ ಗೊತ್ತಾಗಿಲ್ಲ. ಐದು ದ್ರವ ವಿಶೇಷಗಳನ್ನು ಸಮ ಪ್ರಮಾಣದಲ್ಲಿ ಬೆರೆಸಿ ತಯಾರಿಸುವ “ಪಂಚ್” ಎಂಬುದು ಯುರೋಪಿನ ಅತ್ಯಂತ ಜನಪ್ರಿಯ ಮಾದಕ ಪೇಯ. ಈ ಪಂಚ್, ಭಾರತದ ಪಂಚಾಮೃತದಿಂದ ಎರವಲು ಪಡೆದ ಹೆಸರು! ವಿಷಯ ಹೀಗಿರುವಾಗ ಅವರು ಸೋಮರಸವನ್ನು ಆಲ್ಕೋಹಾಲಿಕ್ ಬೆವರೇಜ್ ಎಂದು ಅರ್ಥ ಮಾಡಿಕೊಂಡದ್ದರಲ್ಲಿ ವಿಶೇಷವೇನೂ ಇಲ್ಲ. ಆದರೆ ನಮ್ಮದೇ ಸಂಸ್ಕøತ ಸಾಹಿತ್ಯವನ್ನು ಓದಲಿಕ್ಕೂ ನಾವು, ನಮ್ಮಲ್ಲಿಗೆ ಬಂದು ಸಂಸ್ಕøತವನ್ನು ತಪ್ಪುತಪ್ಪಾಗಿ ಓದಿ ಅರ್ಥೈಸಿಕೊಂಡು ಅಪದ್ಧ ಅನುವಾದಗಳನ್ನು ಬರೆದ ಬಿಳಿಯರನ್ನೇ ಇನ್ನೂ ನೆಚ್ಚಿಕೊಂಡಿದ್ದೇವಲ್ಲ, ಇದಕ್ಕೇನು ಹೇಳೋಣ!

ಪ್ರಜಾವಾಣಿಯ ಪತ್ರಕರ್ತರಿಗೆ ಸೋಮರಸದ ಹಿಂದು-ಮುಂದಿನ ಇತಿಹಾಸವನ್ನು ಅಧ್ಯಯನ ಮಾಡುವಷ್ಟು ಸಮಯ ಇರಲಿಲ್ಲ ಎನ್ನೋಣ. ತಾವೇ ಮುಂದಾಗಿ ಸುದ್ದಿಯನ್ನು ಬ್ರೇಕ್ ಮಾಡುವ ಧಾವಂತ ಅವರಿಗಿದ್ದುದರಿಂದ, ಅಥವಾ ಸೋಮ, ಯಜ್ಞ, ಬ್ರಾಹ್ಮಣ ಇತ್ಯಾದಿ ಸಂಗತಿಗಳ ಬಗ್ಗೆ ಪ್ರಜಾವಾಣಿಯ ಸಂಪಾದಕರು ಬಯಸಿದಂತೆಯೇ ವರದಿಯನ್ನು ಸಿದ್ಧಪಡಿಸಿಕೊಡಬೇಕಾದ ದರ್ದು ಅವರಿಗಿದ್ದುದರಿಂದ ತಪ್ಪಾಗಿರುವುದು ಸಹಜ. ಸೋಮರಸದ ಬಗ್ಗೆ ಅವರು ಇತಿಹಾಸ ಏನೇನು ಹೇಳಿದೆ, ವೇದಗಳಲ್ಲಿ ಏನೆಲ್ಲ ಉಲ್ಲೇಖ ಇದೆ ಎನ್ನುವುದನ್ನು ನೋಡುವುದು ಬೇಡ. ಅದನ್ನು ಹೇಗೆ ತಯಾರಿಸುತ್ತಾರೆ ಎಂಬ ವಿಷಯವನ್ನಾದರೂ ತಿಳಿದುಕೊಳ್ಳಬಹುದಿತ್ತಲ್ಲ? ಸುಮಾರು ಮೂರು – ಮೂರೂವರೆ ಸಾವಿರ ವರ್ಷಗಳ ಹಿಂದೆ ಹಲವು ಕೃತಿಗಳಲ್ಲಿ (ಸ್ಮøತಿ, ಶ್ರುತಿ ಎರಡರಲ್ಲೂ) ಉಲ್ಲೇಖಗೊಂಡ ಈ ಸೋಮ ನಿಜವಾಗಿಯೂ ಏನು? ಇದನ್ನು ಯಾವ ವನಸ್ಪತಿ ಅಥವಾ ಗಿಡದಿಂದ ಮಾಡಲಾಗುತ್ತದೆ, ವರದಿ ಮಾಡಿದ ಪತ್ರಕರ್ತರಿಗೆ ಗೊತ್ತಿದೆಯೇ? ಅಥವಾ ಬ್ರಾಹ್ಮಣರು ಸೋಮರಸ ಕುಡಿಯುತ್ತಿದ್ದರು ಎಂದು ಲಾಗಾಯ್ತಿನಿಂದ ಹೇಳಿಕೊಂಡು ಕಂಠ ಶೋಷಣೆ ಮಾಡುತ್ತಿರುವ ಬುದ್ದುಜೀವಿಗಳಿಗೆ ಗೊತ್ತಿದೆಯೇ? ಇಲ್ಲ! ಯಾಕೆಂದರೆ ಇವರ್ಯಾರೂ ವಿಜ್ಞಾನವನ್ನು ಓದಿಕೊಂಡವರೂ ಅಲ್ಲ, ಸತ್ಯಾನ್ವೇಷಿಗಳೂ ಅಲ್ಲ. ಬೇಡ ಸ್ವಾಮೀ, ಸೋಮರಸದ ಬಗ್ಗೆ ವಿಕಿಪೀಡಿಯ ಏನು ಹೇಳುತ್ತದೆ ಎನ್ನುವುದನ್ನಾದರೂ ಓದಬಹುದಿತ್ತಲ್ಲ? ಸೋಮರಸ ತಯಾರಿಸಲು ಬಳಸುತ್ತಿದ್ದ ಗಿಡ ಯಾವುದು ಎಂಬ ವಿಷಯದಲ್ಲೇ ಇನ್ನೂ ಒಂದು ಒಮ್ಮತದ ನಿರ್ಣಯಕ್ಕೆ ಬರಲಾಗಿಲ್ಲ. ಇದ್ಯಾವುದೋ ಚಿತ್ತಾಪಸ್ಮಾರ ಹುಟ್ಟಿಸುವ ಮಾದಕ ಗಿಡವಾಗಿರಬೇಕೆಂದು ಭಾವಿಸಿದ ಪ್ರೊ. ಎನ್.ಎ. ಕ್ವಾಜಿಲ್‍ಬ್ಯಾಷ್ ಮತ್ತು ಡಾ. ಸಿ.ಜಿ. ಕಾಷೀಕರ್ ಇದನ್ನು ಎಫೆಡ್ರಾ ಎಂದರು. ಎಫೆಡ್ರಾ ಎಂಬುದು ಈಗ ನಮಗೆ ಕಾಣ ಸಿಗುವ ಮಾದಕ ಗಿಡವೇನೋ ಹೌದು. ಆದರೆ ವೇದಗಳಲ್ಲಿ ಹೇಳಿರುವುದು ಇದೇ ಗಿಡವಾದರೆ, ಇಂದು ಸೋಮರಸ ಮಾಡುವುದು ಕಷ್ಟದ ಮಾತೇ ಆಗುತ್ತಿರಲಿಲ್ಲ. ಯಾಕೆಂದರೆ ಎಫೆಡ್ರಾ ಕುಟುಂಬದ ಹಲವು ಸಸ್ಯ ಪ್ರಭೇದಗಳು ಇಂದು ಹಲವಾರು ಸಿಗುತ್ತವೆ. ಆ ಇಬ್ಬರು ಬುದ್ಧಿವಂತರು ಎಫೆಡ್ರಾವನ್ನು ಸೋಮರಸಕ್ಕೆ ಗಂಟು ಹಾಕಲು ಮುಖ್ಯ ಕಾರಣ ಏನು ಗೊತ್ತೆ? ಜಗತ್ತಿನ ಕೆಲವು ಭಾಗಗಳಲ್ಲಿ ಎಫೆಡ್ರಾವನ್ನು ಉಮಾ ಎಂದು ಕರೆಯುತ್ತಾರೆ ಎಂಬುದಷ್ಟೇ! ಭಾರತದಲ್ಲಿ ಸೋಮ ಆಗಿದ್ದುದು ಹೊರಗೆ ಹೋದಾಗ ಉಮಾ ಆಗಿದೆ. ಹಾಗಾಗಿ ಇದೇ ಆ ಗಿಡ ಎಂಬುದು ಅವರ ತರ್ಕ! ಇನ್ನು ಲಾಸ್ಸೆನ್ ಎಂಬವರು ಸೋಮ ಎಂಬುದು ಸರ್ಕೋಸ್ಟೆಮ್ಮಾ ವಿಮಿನೇಲ್ ಎಂಬ ಗಿಡ ಎಂದಿದ್ದಾರೆ. ರಾತ್ ಎಂಬ ಇನ್ನೊಬ್ಬ ಪಂಡಿತರು ಅದು ಸರ್ಕೊಸ್ಟೆಮ್ಮಾ ಅಸಿಡಮ್ ಎಂಬ ಗಿಡ ಎಂದಿದ್ದಾರೆ. ಸರ್ಕೋಸ್ಟೆಮ್ಮಾ ಸಸ್ಯ ಪ್ರಭೇದದ ಭಾರತೀಯ ಹೆಸರು ಸೋಮಲತೆ ಎಂದಿರುವುದೇ ಇಬ್ಬರ ತರ್ಕಕ್ಕೂ ಕಾರಣ! ಸೋಮಲತೆಯ ದಂಟನ್ನು ಒಣಗಿಸಿ ಹಲವು ಚಿಕಿತ್ಸಾ ನಿದಾನಗಳಲ್ಲಿ ಬಳಸುತ್ತಾರೆ. ಅದರ ಸ್ವಲ್ಪವೇ ಸ್ವಲ್ಪ ಅಂಶವನ್ನು ಕಷಾಯವಾಗಿ ಸೇವಿಸಿದರೂ ಹೊಟ್ಟೆಯೆಲ್ಲ ತೊಳೆಸಿದಂತಾಗಿ ವಾಂತಿಯಾಗುತ್ತದೆ. ಹಾಗಾಗಿ ವಿಷಪ್ರಾಶನವಾದವರಿಗೆ ಇದರ ಕಷಾಯ ಕುಡಿಸಿ ಹೊಟ್ಟೆ ಖಾಲಿಯಾಗುವಂತೆ ಮಾಡಲಾಗುತ್ತದೆ. ನಾಯಿ ಕಚ್ಚಿದವರಿಗೆ ಚಿಕಿತ್ಸೆ ಮಾಡುವ ಸಂದರ್ಭದಲ್ಲೂ ಸೋಮಲತೆಯನ್ನು ಬಳಸುತ್ತಾರೆ. ಸೋಮ ಎಂಬ ಹೆಸರು ಸಾಮಾನ್ಯಾಂಶವಾಗಿದ್ದ ಮಾತ್ರಕ್ಕೆ ಅದನ್ನು ತಂದು ಸೋಮರಸಕ್ಕೆ ಗಂಟು ಹಾಕುವುದು ಸರಿಯೇ ಎಂಬ ಬಗ್ಗೆ ಚರ್ಚೆಗಳಾಗುತ್ತಲೇ ಇವೆ ಇನ್ನೂ.

ಸೋಮ ಎಂದರೆ ಯಾವುದೇ ಗಿಡ ಅಲ್ಲ, ಅದು ಅಮನಿಟ ಮಸ್ಕರಿಯಾ ಎಂಬ ಹೆಸರಿನ ಅಣಬೆ ಎಂಬುದು ಗಾರ್ಡನ್ ವ್ಯಾಸನ್ ಎಂಬವರ ಸಂಶೋಧನೆ. ಕೆಲವು ಅಣಬೆಗಳು, ಸೇವಿಸಿದ ನಂತರ ಗಾಳಿಯಲ್ಲಿ ತೇಲಾಡಿದಂಥ, ಚಿತ್ತ ಭ್ರಮೆ ಹುಟ್ಟುವಂಥ ಅನುಭವ ಕೊಡುತ್ತವೆನ್ನುವುದು ನಮಗೆ ಗೊತ್ತು. ಅಲ್ಲದೆ ಕೆಲವು ವಿಶೇಷ ಅಣಬೆಗಳು ಲೂಸಿಡ್‍ಗಳು (ಅಂದರೆ ಚಿತ್ರ ವಿಚಿತ್ರ ಕನಸು ಬೀಳುವಂತೆ ಮಾಡುವ ಸಾಮರ್ಥ್ಯ ಇರುವಂಥವು) ಕೂಡ ಹೌದು. ಹಾಗಾಗಿ ವೈದಿಕರು ಈ ಅಣಬೆಗಳನ್ನೇ ಸೋಮರಸದಲ್ಲಿ ಬಳಸುತ್ತಿದ್ದರು ಎನ್ನುವುದು ಗಾರ್ಡನ್‍ರ ವಾದ. ಇನ್ನು ಜಾರ್ಜ್ ವ್ಯಾಟ್ ಎಂಬಾತ ಸೋಮ ಎಂದರೆ ಅಫ್ಘನ್ ದ್ರಾಕ್ಷಿ ಎಂದಿದ್ದಾನೆ. ರೈಸ್ ಎಂಬ ಸಂಶೋಧಕ ಅದು ಕಬ್ಬು ಎಂದಿದ್ದಾನೆ. ಮ್ಯಾಕ್ಸ್ ಮುಲ್ಲರ್, ಹಾಪ್ ಎಂಬ ಗಿಡದ ತಳಿ ಇರಬಹುದೆಂದು ಶಂಕಿಸಿದ್ದಾನೆ. ಹಿಲ್‍ಬ್ರಾಂಟ್ ಎಂಬಾತ, ವೇದಕಾಲೀನರು ಹೇಳಿದ ಸೋಮ ಎಂಬ ಗಿಡ ಕ್ರಿಸ್ತಪೂರ್ವ 1000ದ ಹೊತ್ತಿಗೇ ದುರ್ಲಭವಾಗಿತ್ತು; ನಂತರ ಸಂಪೂರ್ಣವಾಗಿ ನಾಮಾವಶೇಷವಾಯಿತು; ಹಾಗಾಗಿ ನಾವಿಂದು ಆ ಸಸ್ಯವನ್ನು ನೋಡಲು ಸಾಧ್ಯವೇ ಇಲ್ಲ ಎಂದು ಷರಾ ಬರೆದಿದ್ದಾನೆ. ವಿಷಯ ಹೀಗಿರುವಾಗ, ಪ್ರಜಾವಾಣಿಯ ಪತ್ರಕರ್ತರು ಯಾವ ಗಿಡವನ್ನು ಸೋಮರಸ ತಯಾರಿಸಲು ಬಳಸಲಾಗುತ್ತಿದೆ ಎಂದು ತಿಳಿದಿದ್ದಾರೆ? ಬಹುಶಃ ಮತ್ತೂರಿನಲ್ಲಿ ಸೋಮಲತೆಯನ್ನು ಬಳಸಿ ಸೋಮರಸ ತಯಾರಿಸಿರಬಹುದೆಂದು ನನ್ನ ಅನುಮಾನ. ಹಾಗೆ ಮಾಡಿದ್ದರೂ ಅದನ್ನು ಭಟ್ಟಿ ಇಳಿಸಿದ ಕಳ್ಳಿನಂತೆ ಮೂರ್ನಾಲ್ಕು ದಿನ ನೆನೆಸಿ ಕೊಳೆಸಿ ಹುಳಿ ಬರಿಸುವ ಸಾಧ್ಯತೆ ಇಲ್ಲ. ಯಜ್ಞದಲ್ಲಿ ಪಾಲ್ಗೊಂಡವರು, “ಬಳ್ಳಿಯನ್ನು ಬೆಳಗ್ಗೆ ಜಜ್ಜಿ ನೆನೆ ಹಾಕಲಾಯಿತು. ಮಧ್ಯಾಹ್ನ ಆ ರಸವನ್ನು ಸೇವನೆ ಮಾಡಲಾಯಿತು” ಎಂದು ಹೇಳಿದ್ದಾರೆ. ಹಾಗೆ ಮಾಡುವಾಗಲೂ ಕೂಡ ಒಬ್ಬರು ಒಂದು ಸಕ್ಕಣ (ಚಮಚ)ಕ್ಕಿಂತ ಹೆಚ್ಚು ತೆಗೆದುಕೊಳ್ಳುವಂತಿಲ್ಲ. ಹುಳಿ ಬರಿಸದ, ಒಂದು ಚಮಚಕ್ಕಿಂತ ಹೆಚ್ಚು ಸೇವಿಸಲ್ಪಡದ ಇಂಥ ಪೇಯ ಆಲ್ಕೋಹಾಲಿಕ್ ಆಗುವುದು ಹೇಗೆ? ಸೋಮರಸ ಕುಡಿದವರು ಯಜ್ಞ ನೆರವೇರಿಸಿದ ಬ್ರಾಹ್ಮಣರು. ಆದರೆ ನಶೆ ಏರಿದ್ದು ಮಾತ್ರ ಪ್ರಜಾವಾಣಿಯ ಪತ್ರಕರ್ತರಿಗೆ ಅನ್ನಿಸುತ್ತದೆ ಅವರ ತಲೆ ಬುಡವಿಲ್ಲದ ವರದಿ ನೋಡಿದಾಗ!

ಪ್ರಜಾವಾಣಿ ಇಲ್ಲಿ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಬೇಕು. (1) ಯಜ್ಞ ನಡೆದಾಗ ನಿಮ್ಮ ಪತ್ರಿಕೆಯ ಪ್ರತಿನಿಧಿಗಳಾಗಲೀ ಪತ್ರಕರ್ತರಾಗಲೀ ಅಲ್ಲಿರಲಿಲ್ಲ. ಯಜ್ಞ ನಡೆದು ಏಳೆಂಟು ದಿನಗಳ ನಂತರ ಅದರ ಜಾಡು ಹಿಡಿದು ವರದಿ ಮಾಡಿದ್ದೀರಿ. ಅದೂ ಯಾರ್ಯಾರೋ ಹೇಳಿ, ಅವರು ಕೊಟ್ಟ ಮಾಹಿತಿ ಆಧಾರದಲ್ಲಿ ತಯಾರಿಸಿದ ವರದಿ ನಿಮ್ಮದು. ಯಜ್ಞಕಾಲದಲ್ಲಿ ಬ್ರಾಹ್ಮಣರು ಸೇಂದಿ ಕುಡಿದರು ಎನ್ನುವುದಕ್ಕೆ ನಿಮ್ಮಲ್ಲಿ ಏನು ಪುರಾವೆ ಇದೆ?

(2) ಯಜ್ಞದಲ್ಲಿ ಪಾಲ್ಗೊಂಡಿದ್ದವರು “ಏನನ್ನೋ” ಕುಡಿದರು ಎಂದು ತೋರಿಸುವ ಕೆಲವೇ ಸೆಕೆಂಡುಗಳ ವಿಡಿಯೋ ನಿಮ್ಮಲ್ಲಿದೆ. ಅದರಲ್ಲಿ ಬ್ರಾಹ್ಮಣರು ಏನನ್ನು ಕುಡಿಯುತ್ತಿದ್ದಾರೆ ಎನ್ನುವುದು ಸ್ಪಷ್ಟವಿಲ್ಲ. ಕುಡಿದದ್ದು ಕೂಡ ಒಂದೊಂದು ಚಮಚವಷ್ಟೇ. ಸೇಂದಿ ಕುಡಿಯುವವರು ಅದನ್ನು ಹೀಗೆ, ಒಂದೇ ಚಮಚ, ತೀರ್ಥದಂತೆ ಕುಡಿಯುತ್ತಾರೆಯೇ?

(3) ಯಜ್ಞ ಮಾತ್ರವಲ್ಲ, ಪೂಜೆಯ ನಂತರ ಕೂಡ ತೀರ್ಥ ತೆಗೆದುಕೊಳ್ಳುವ ಕ್ರಮ ವೈದಿಕರಲ್ಲಿದೆ. ಇವು ಯಾವ ಬಗೆಯ ತೀರ್ಥಗಳು ಎಂಬುದು ಯಜ್ಞದಿಂದ ಯಜ್ಞಕ್ಕೆ ಬದಲಾಗಬಹುದು. ಸೋಮಯಾಗದಲ್ಲಿ ಯಜ್ಞದ ನಂತರ ಯಾವ ಬಗೆಯ ಸೋಮರಸ ಕುಡಿದರು ಎಂಬುದಕ್ಕೆ ನಿಮ್ಮಲ್ಲಿ ದಾಖಲೆ ಇದೆಯೇ? ಯಾವ ಕಳ್ಳನ್ನು ಭಟ್ಟಿ ಇಳಿಸಲಾಯಿತು? ಎಷ್ಟು ದಿನ ಹುಳಿ ಬರಿಸಲಾಯಿತು? ಯಾವ ಪದಾರ್ಥಗಳನ್ನು ಅದರ ತಯಾರಿಯಲ್ಲಿ ಬಳಸಲಾಯಿತು? ಈ ಎಲ್ಲ ಮಾಹಿತಿ ನಿಮ್ಮ ಬಳಿ ಇವೆಯೇ?

ಬಿಡಿ, ಈ ಚರ್ಚೆಯನ್ನು ಇನ್ನೊಂದು ದಿಕ್ಕಿನಿಂದ ಪ್ರಾರಂಭಿಸೋಣ. ಈ ಯಾಗದಲ್ಲಿ ಬ್ರಾಹ್ಮಣರು ಮೇಕೆಯನ್ನು ಕಡಿದರು, ಅದರ ಅಂಗಗಳನ್ನು ತುಂಡಾಗಿಸಿ ಹೋಮಕ್ಕೆ ಹವಿಸ್ಸಿನಂತೆ ಅರ್ಪಿಸಿದರು, ನಂತರ ಅದರ ಮಾಂಸ ತಿಂದರು ಎಂದು ತರ್ಕಕ್ಕಾಗಿ ಒಂದು ಕ್ಷಣ ಒಪ್ಪಿಕೊಂಡು ಬಿಡೋಣ. ಈಗ ಹೇಳಿ, ಇದು ತಪ್ಪು ಹೇಗಾಗುತ್ತದೆ? ಪ್ರಜಾವಾಣಿ ಅಥವಾ ಯಾವುದೇ ಪತ್ರಿಕೆಯ ಮುಖಪುಟದಲ್ಲಿ ಬರುವ ಸುದ್ದಿಯಾಗಲು ಎಡೆ ಮಾಡಿಕೊಡುವಂಥ ಅಪರಾಧ ಏನು ನಡೆದಿದೆ ಹೇಳುತ್ತೀರಾ? ನಮ್ಮ ರಾಜ್ಯದಲ್ಲಿ ದಿನ ಬೆಳಗಾದರೆ ನೂರಾರು ಕುರಿ ಮೇಕೆ ಆಡುಗಳನ್ನು ಕಡಿದು ಮಟನ್ ಶಾಪ್‍ಗಳಲ್ಲಿ ತೋರಣ ಕಟ್ಟಲಾಗುತ್ತದೆ. ದಿನವೊಂದಕ್ಕೆ ಈ ರಾಜ್ಯದಲ್ಲಿ ಊಟದ ತಾಟಿಗೆ ಬಂದು ಬೀಳುವ ಕೋಳಿಗಳ ಸಂಖ್ಯೆ ಅದೆಷ್ಟು ಲಕ್ಷವೋ ಲೆಕ್ಕವೇ ಇಲ್ಲ! ಬೇರೆಲ್ಲ ಬೇಡ, ಬೆಂಗಳೂರಂಥ ನಗರದಲ್ಲೇ ಒಮ್ಮೆ ವಾರಾಂತ್ಯಕ್ಕೆ ಮಿಲಿಟರಿ ಹೊಟೇಲುಗಳಲ್ಲಿ ತಿರುಗಾಡಿ ಬನ್ನಿ. ಮನುಷ್ಯನ ಜಿಹ್ವಾ ಚಾಪಲ್ಯಕ್ಕೆ ಬಲಿಯಾಗಿ ಬೇಯಿಸಲ್ಪಡುವ ಪ್ರಾಣಿಗಳೆಷ್ಟು ಎಂಬುದರ ಅಂದಾಜು ಸಿಕ್ಕೀತು. ಆ ಪ್ರಾಣಿಗಳನ್ನು ವಧೆ ಮಾಡದೆ ಅಡುಗೆ ಮಾಡಲಾಗುತ್ತದೆಯೇ? ಜಾತ್ರೆಗಳಲ್ಲಿ ಒಂದು ಕುರಿ ಕಡಿದೊಡನೆ ಹಾಹಾಕಾರ ಎಬ್ಬಿಸುವ ನಾವು ಇಲ್ಲಿ ಹೆಣವಾಗಿ ಮಲಗುವ ಸಾವಿರಾರು ಕುರಿಗಳ ಬಗ್ಗೆ ಏಕೆ ಮೌನ ವಹಿಸಿದ್ದೇವೆ? ಬಕ್ರೀದ್ ಹಬ್ಬಕ್ಕೆ ಚಾಮರಾಜಪೇಟೆಯಲ್ಲಿ ಕಮ್ಮಿಯೆಂದರೂ ಒಂದು ಲಕ್ಷ ಕುರಿಗಳು ಒಂದೇ ದಿನದಲ್ಲಿ ಮಾರಾಟವಾಗಿ ಹೋಗುತ್ತವೆ. ಅದರ ಬಗ್ಗೆ ನಮ್ಮಲ್ಲಿ ಯಾರಾದರೂ ಉಸಿರೆತ್ತಿದ್ದಾರೆಯೇ? ಇಲ್ಲ! ಬಕ್ರೀದ್‍ಗೆ ಕುರಿ ಕಡೀತೀರಲ್ಲ ಎಂದು ಯಾರಾದರೂ ವಾದ ಹೂಡಲು ಹೋದರೆ ಮುಸ್ಲಿಮರು ತಮ್ಮ “ಪವಿತ್ರ ಗ್ರಂಥ” ಎದುರು ಹಿಡಿಯುತ್ತಾರೆ. ನಮ್ಮ ಊಟದ ವಿಷಯಕ್ಕೆ ಬಂದರೆ ಅಷ್ಟೇ ನೋಡಿ ಕಥೆ ಎಂದು ತಮ್ಮ ಮಟನ್ ಕತ್ತಿಯನ್ನು ಝಳಪಿಸುತ್ತಾರೆ. ಹಾಗಾಗಿ ನಮ್ಮ ಬುದ್ದುಜೀವಿಗಳು ಬಕ್ರೀದ್‍ನಲ್ಲಿ ತಮ್ಮ ಮುಸ್ಲಿಂ ಬಾಂಧವರ ಜೊತೆ ಕೂತು ಮಟನ್ ತಿಂದು, ರಂಜಾನ್ ಹಬ್ಬದಲ್ಲಿ ಸಂಜೆ ಮುಸ್ಲಿಂ ಬಾಂಧವರ ಜೊತೆ ಇಫ್ತಾರ್ ಕೂಟ ಮಾಡಿ ಬಂದು ಹಿಂದೂ ಆಚರಣೆಗಳತ್ತ ಬೆರಳು ತೋರಿಸುತ್ತಾರೆ. ನಮ್ಮ ದೇಶದಲ್ಲಿ ಮುಸ್ಲಿಮರು ತಮ್ಮ ಪವಿತ್ರ ಗ್ರಂಥದಲ್ಲಿ ಹೇಳಿದೆ ಎನ್ನುತ್ತ ಕುರಿಮಾಂಸ ತಿನ್ನಬಹುದು. ಆದರೆ ಬ್ರಾಹ್ಮಣ ತನ್ನ ವೇದದಲ್ಲಿ ಹೇಳಿದೆ ಎಂದು ಕುರಿ ಬಲಿ ಕೊಡುವಂತಿಲ್ಲ! ಜಾತ್ರೆಗಳಲ್ಲಿ ಕುರಿ ಬಲಿ ಕೊಡುವುದು ನಿಷೇಧಿಸಲ್ಪಡುತ್ತದೆ! ಇದ್ಯಾವ ಸೀಮೆ ನೀತಿ ಸ್ವಾಮಿ? ಪ್ರಾಣಿ ಸಂರಕ್ಷಣಾ ನೀತಿಯೋ, ಮೌಢ್ಯ ವಿರೋಧಿ ನೀತಿಯೋ ಏನೇ ಇರಲಿ; ಮಾಡುವ ಕಾನೂನು ಎಲ್ಲರಿಗೂ ಅನ್ವಯಿಸಲಿ ನೋಡೋಣ. ದಾದ್ರಿಯಲ್ಲಿ ನಡೆದ ಕೊಲೆಯನ್ನು ವಿರೋಧಿಸಿ ಬುದ್ದುಜೀವಿಗಳು ಟೌನ್‍ಹಾಲ್ ಮುಂದೆ ಹಸುವಿನ ಮಾಂಸ ತಿನ್ನಬಹುದಾದರೆ ಯಾವುದೋ ಜಾತ್ರೆಯಲ್ಲಿ ಕೋಣ ಕಡಿಯುವುದು ಹೇಗೆ ಕಾನೂನು ಬಾಹಿರವಾಗುತ್ತದೆ? ಮುಸ್ಲಿಮರು ಕುರಿ ತಿನ್ನುವುದು ಅವರ ಆಹಾರ ಸಂಸ್ಕøತಿಯಾದರೆ ಬ್ರಾಹ್ಮಣರು ಕುರಿಯೋ ಮೀನೋ ಕೋಳಿಯೋ – ಅವರಿಗೆ ಇಷ್ಟ ಬಂದದ್ದನ್ನು ತಿನ್ನುವುದು ಯಾಕೆ ಆಹಾರ ಸಂಸ್ಕøತಿಯಾಗುವುದಿಲ್ಲ? ರಾಜ್ಯದ ನಾನಾ ಕಡೆಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಜನಪದದ ಹೆಸರಲ್ಲಿ ಕುರಿ ಮೇಕೆ ಕೋಳಿಗಳ ಬಲಿಯಾಗುವುದು ಸರಿ ಎಂದಾದರೆ ಯಾರದ್ದೋ ಅಡಿಕೆ ತೋಟದ ನಡುವಲ್ಲಿ ನಡೆದ ಒಂದು ಖಾಸಗಿ ಕಾರ್ಯಕ್ರಮದಲ್ಲಿ ಒಂದಷ್ಟು ಜನ ಮೇಕೆ ತಿಂದರು ಎನ್ನುವುದು ಯಾಕೆ ಪ್ರಜಾವಾಣಿಯಂಥ ವಿಶ್ವಾಸಾರ್ಹ ಪತ್ರಿಕೆಯ ಮುಖಪುಟ ಸುದ್ದಿಯಾಗಬೇಕು?

ನೆನಪಿಡಿ, ನಾನು ಇಲ್ಲಿ ಪ್ರಾಣಿಬಲಿಯನ್ನು ಅನುಮೋದಿಸುತ್ತಲೂ ಇಲ್ಲ ಬೆಂಬಲಿಸುತ್ತಲೂ ಇಲ್ಲ. ಅಥವಾ ಮತ್ತೂರಿನಲ್ಲಿ ನಡೆದ ಸೋಮಯಾಗದಲ್ಲಿ ಪ್ರಾಣಿಭಕ್ಷಣೆ ನಡೆದಿದೆ ಎಂದೂ ಹೇಳುತ್ತಿಲ್ಲ. ನನ್ನ ವಾದ ಇಷ್ಟೆ: ಒಬ್ಬ ಯಾವುದೇ ಪ್ರಾಣಿಯನ್ನು ಆಹಾರ ಸಂಸ್ಕøತಿ, ಆಹಾರ ವೈವಿಧ್ಯ ಎಂದೆಲ್ಲ ಹೆಸರು ಹೇಳಿಕೊಂಡು ಕೊಂದು ತಿನ್ನಬಹುದಾದರೆ ಇನ್ನೊಬ್ಬ ಅದನ್ನು ಆಚರಣೆ ಎಂಬ ಹೆಸರಲ್ಲಿ ಕೊಲ್ಲುವುದು ಹೇಗೆ ಕಾನೂನುಬಾಹಿರವಾಗುತ್ತದೆ? ಬಕ್ರೀದ್ ಹಬ್ಬದಲ್ಲಿ ಕುರಿ ಕಡಿಯುವುದು ನ್ಯಾಯ ಸಮ್ಮತವಾದರೆ ಮಲ್ಲಮ್ಮನ ಜಾತ್ರೆಯಲ್ಲೋ ಮಾಂಕಾಳಮ್ಮನ ತೇರಿನಲ್ಲೋ ಜನ ಕುರಿ ಕಡಿಯುತ್ತೇವೆಂದರೆ ಸರಕಾರ ಯಾಕೆ ತಲೆ ಕೆಡಿಸಿಕೊಳ್ಳಬೇಕು? ಎಂದಿನವರೆಗೆ ಹಬ್ಬದ ಹೆಸರಲ್ಲಿ ಪ್ರಾಣಿಗಳನ್ನು ಕಡಿಯುವುದು ಸರಿ ಎಂದು ಸರಕಾರ ಹೇಳುತ್ತದೋ ಅಲ್ಲಿಯವರೆಗೆ ಅದು ಬೇರೆ ಧರ್ಮಗಳ ಜನರನ್ನು ಮೌಢ್ಯದ ಹೆಸರಲ್ಲಿ ನಿರ್ಬಂಧಿಸುವುದು ಸರಿಯಲ್ಲ. ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ: ಈ ಇಷ್ಟೂ ಮಾತುಗಳನ್ನು ನಾವು “ಡೆವಿಲ್ಸ್ ಅಡ್ವೊಕೇಟ್” ಮಾದರಿಯಲ್ಲಿ ಹೇಳಿದ್ದೇನೆ ಅಷ್ಟೆ. ಮಾಂಸ ಭಕ್ಷಣೆಯ ಬಗ್ಗೆ ನಿಮ್ಮ ವೈಯಕ್ತಿಕ ಅಭಿಪ್ರಾಯ ಏನು ಎಂದರೆ ನಾನು ಸಸ್ಯಾಹಾರವನ್ನೇ ಬೆಂಬಲಿಸುವವನು. ಆದರೆ, ತಾವು ಬೇಕು ಬೇಕಾದ್ದನ್ನೆಲ್ಲ ತಿಂದುಂಡು ಸುಖವಾಗಿರುವ ಬುದ್ದುಜೀವಿಗಳು ಉಳಿದವರು ಆಚರಣೆ ಎನ್ನುತ್ತ ಒಂದು ಕುರಿಯನ್ನೋ ಆಡನ್ನೋ ಕಡಿದಾಗ ಪ್ರಪಂಚವೇ ಮುಳುಗಿತು ಎಂಬಂತೆ ಬೊಬ್ಬೆ ಹೊಡೆಯುವುದನ್ನು ಕಂಡಾಗೆಲ್ಲ ನನಗೆ ಅಸಹ್ಯವಾಗುತ್ತದೆ. ಒಂದು ಕಡೆ ಮುಸ್ಲಿಮರ ಆಚರಣೆಗಳಿಗೆ ಕುರುಡಾಗಿರುವ ಇನ್ನೊಂದು ಕಡೆ ಬೀಫ್ ಪ್ರಚಾರಕರಂತೆ ಕಾಣಿಸಿಕೊಳ್ಳುವ ಈ ಆಷಾಢಭೂತಿಗಳಿಗೆ ಸೋಮಯಾಗದಲ್ಲಿ ನಡೆಯಿತೆನ್ನಲಾದ ಮಾಂಸ ಭಕ್ಷಣೆಯ ಬಗ್ಗೆ ಮಾತಾಡಲು ಎಳ್ಳಷ್ಟೂ ಹಕ್ಕಿಲ್ಲ ಎಂಬುದಷ್ಟೇ ನನ್ನ ಅಭಿಮತ. ಹಾಗಾದರೆ ಸೋಮಯಾಗದಲ್ಲಿ ಮಾಂಸ ತಿಂದರೇ ಎಂಬ ಸಂಶಯ ಓದುಗರಿಗೆ ಬರಬಹುದು. ಇಲ್ಲ, ಅಲ್ಲಿ ಯಾವ ಮಾಂಸ ಭಕ್ಷಣೆಯೂ ನಡೆಯಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನಾವು ಕೆಲವೊಂದು ಆಚರಣೆಗಳಿಗಾಗಿ ಮೇಕೆಯನ್ನು ಅಲ್ಲಿ ಕಟ್ಟಿದ್ದೆವು. ಯಜ್ಞ ಮುಗಿಯುತ್ತಲೇ ಅವನ್ನು ಬಿಟ್ಟು ಬಿಡಲಾಯಿತು ಎಂದು ಯಾಗದ ಆಯೋಜಕರೇ ಹೇಳಿದರೂ ನಂಬದೆ ಪ್ರಜಾವಾಣಿ, ಆಯೋಜಕರ ಹೇಳಿಕೆಗೆ ವ್ಯತಿರಿಕ್ತ ವರದಿಯನ್ನು ಪ್ರಕಟಿಸಿತಲ್ಲ? ಪ್ರಜಾವಾಣಿಯ ಪತ್ರಕರ್ತರು ಮತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಣಿಭಕ್ಷಣೆ ನಡೆದಿದೆ ಎಂದು ಸಾಕ್ಷಿ ಸಮೇತ ಪುರಾವೆ ಒದಗಿಸಿಯಾರೇ? ಅಥವಾ ಅದಕ್ಕೂ ತನ್ನ ಬಳಿ ಇರುವ ಒಂದು ನಿಮಿಷದ ವಿಡಿಯೋ ತೋರಿಸಿ ಕೈತೊಳೆದುಕೊಳ್ಳುತ್ತಾರೆಯೇ?

ಚರ್ಚೆಯ ಕೊನೆಯ ಹಂತವಾದ “ಪ್ರಜಾವಾಣಿ ನಡೆದ ಘಟನೆಯನ್ನು ವಸ್ತುನಿಷ್ಠವಾಗಿ ವರದಿ ಮಾಡಿದೆಯೇ?” ಎಂಬ ಪ್ರಶ್ನೆಯನ್ನು ಎತ್ತಿಕೊಳ್ಳೋಣ. ಇಲ್ಲಿ ಗಮನಿಸಬೇಕಾದ ಕೆಲವು ಸಂಗತಿಗಳಿವೆ.

(1) ಘಟನೆ ನಡೆದ ಸ್ಥಳದಲ್ಲಿ ಪ್ರಜಾವಾಣಿಯ ಪತ್ರಕರ್ತರಾಗಲೀ ಬೇರಾವುದೇ ಮಾಧ್ಯಮ ಪ್ರತಿನಿಧಿಗಳಾಗಲೀ ಇರಲಿಲ್ಲ. ಘಟನೆ ನಡೆದು ಒಂದು ವಾರದ ಮೇಲೆ ಪ್ರಜಾವಾಣಿ ಇದನ್ನು ಮುಖಪುಟದ ವರದಿಯಾಗಿ ಪ್ರಕಟಿಸಿದೆ. ತಮಗೆ ಸುದ್ದಿ ಸಿಕ್ಕಿದ್ದು ಶಿವಮೊಗ್ಗದ ಕೆಲವು ವ್ಯಕ್ತಿಗಳಿಂದ ಎಂದು ಸಂಪಾದಕರು ಹೇಳಿಕೊಂಡಿದ್ದಾರೆ. ಅಂದರೆ ಇದು ಮೂರನೇ ವ್ಯಕ್ತಿಯ ಮೂಲಕ ಹರಿದುಬಂದಿರುವ ಗಾಳಿ ಸುದ್ದಿಯಷ್ಟೇ. ಅದೂ ಅಲ್ಲದೆ ಸುದ್ದಿ ಕೊಟ್ಟವರು ತಮಗೆ ಈ ಘಟನೆ ನಡೆದಿರುವ ಬಗ್ಗೆ ತೀವ್ರವಾದ ಆಕ್ರೋಶವಿದೆ ಎಂದೂ ಹೇಳಿಕೊಂಡಿದ್ದಾರೆ. ಅಂದ ಮೇಲೆ ಇದು ಮುಯ್ಯಿ ತೀರಿಸಿಕೊಳ್ಳಲು ಹೆಣೆದಿರುವ ಕಟ್ಟು ಕತೆಯಾಗಿರುವ ಸಾಧ್ಯತೆಯೇ ಹೆಚ್ಚು ಅನ್ನಿಸುತ್ತದೆಯೇ ವಿನಾ ವಿಶ್ವಾಸಾರ್ಹವಾದ ವಸ್ತುನಿಷ್ಠ ವರದಿ ಅನ್ನಿಸುವುದಿಲ್ಲ.

(2) ವರದಿಯಲ್ಲಿ ಸಂಕೇತಿ ಬ್ರಾಹ್ಮಣರನ್ನು ನೇರವಾಗಿ ಟಾರ್ಗೆಟ್ ಮಾಡಲಾಗಿದೆ ಎಂಬುದು ಸುಸ್ಪಷ್ಟ. ಪ್ರಜಾವಾಣಿ ಅಥವಾ ಬೇರಾವುದೇ ಪತ್ರಿಕೆಗಳು ಪ್ರಾಣಿವಧೆಯಂಥ ಸೂಕ್ಷ್ಮ ವಿಷಯದಲ್ಲಿ ಯಾವುದಾದರೂ (ಬ್ರಾಹ್ಮಣರಲ್ಲದ) ಜಾತಿಯನ್ನು ನೇರವಾಗಿ ಸೂಚಿಸಿ ವರದಿ ಬರೆಯುತ್ತವೆಯೇ? ಒಂದು ವರ್ಗವನ್ನು ಮಾತ್ರ ಎತ್ತಿ ಆಡಿಕೊಳ್ಳುವ ಮೂಲಕ ಪ್ರಜಾವಾಣಿ ಸಂಪಾದಕರು ತಮ್ಮ ತೀಟೆ ತೀರಿಸಿಕೊಂಡಿದ್ದಾರೆ ಎಂದೇ ಭಾವಿಸಬೇಕಾಗುತ್ತದೆ.

(3) ಘಟನೆಯನ್ನು ವರದಿ ಮಾಡಿರುವ ಪತ್ರಕರ್ತರಿಗೆ ಅಲ್ಪ ಜ್ಞಾನ ಮಾತ್ರವಲ್ಲ, ಕೆಲವು ವಿಷಯಗಳಲ್ಲಿ ಸಂಪೂರ್ಣ ಅಜ್ಞಾನವಿದೆ. ಸೋಮರಸವೇ ಸೇಂದಿ ಎಂದು ಭಾವಿಸಿಕೊಂಡು ವರದಿ ಹೆಣೆದಿದ್ದಾರೆ. ಯಾಗದಲ್ಲಿ ಮೇಕೆಗಳನ್ನು ಬಲಿ ಕೊಡಲಾಯಿತು ಎಂದು ಅವರು ಹೇಳಿರುವುದು, ಯಜ್ಞ ಕುಂಡದ ಪಕ್ಕ ಮೇಕೆಯನ್ನು ಕಟ್ಟಿ ಹಾಕಲಾಗಿತ್ತು ಎಂಬ ಒಂದೇ ಕಾರಣಕ್ಕೆ,!ಅನ್ನದ ಮೇಲೆ ಕೂದಲು ಬಿದ್ದಿದ್ದರೆ ಕೂದಲ ಉಂಡೆಯನ್ನೇ ಬೇಯಿಸಿ ಅನ್ನ ಮಾಡಲಾಗಿದೆ ಎಂದ ಹಾಗಾಯಿತಿದು. ಸೋಮಯಾಗ ಮಾಡಲು ಮೇಕೆ ಮತ್ತು ಹಸುವಿನ ಹಾಲು ಬೇಕು. ಮತ್ತು ಅವನ್ನು ಯಜ್ಞದ ನಡು ನಡುವೆ ಆ ಪ್ರಾಣಿಗಳಿಂದ ಪಡೆಯುತ್ತಿರಬೇಕು. ಹಾಗೆಯೇ ಯಜ್ಞದ ಕೆಲವು ವಿಧಿಗಳಿಗೆ ಗಂಡು ಮೇಕೆಯೂ ಬೇಕು. ಇವೆಲ್ಲವನ್ನೂ ಯಜ್ಞ ನಡೆಯುವಷ್ಟು ಹೊತ್ತು ಅಲ್ಲೇ ಆವರಣದಲ್ಲಿ ಕಟ್ಟಿ ಹಾಕುವುದು ವಾಡಿಕೆ. ಮತ್ತೂರಿನಲ್ಲಿ ನಡೆದ ಯಜ್ಞದ ಸಂದರ್ಭದಲ್ಲಿ ಪಕ್ಕದಲ್ಲೇ ಒಂದು ಹಸುವನ್ನೂ ಕಟ್ಟಿ ಹಾಕಲಾಗಿತ್ತು. ಪ್ರಜಾವಾಣಿಯ ಪತ್ರಕರ್ತರಿಗೆ, ಅದೃಷ್ಟವೋ ದುರದೃಷ್ಟವೋ, ಹಸುವಿನ ಫೋಟೋ ಸಿಕ್ಕಿಲ್ಲ. ಇಲ್ಲವಾದರೆ, ಸಂಕೇತಿ ಬ್ರಾಹ್ಮಣರಿಂದ ಹಸುವಿನ ಕೊಲೆ ಎಂದು ಹದಿನಾರು ಅಂಕಣದ ವರದಿ ಮಾಡುತ್ತಿದ್ದರು!

(4) ಪ್ರಜಾವಾಣಿಯಲ್ಲಿ ಬ್ರಾಹ್ಮಣರ ತೇಜೋವಧೆ ಮಾಡುವ ಈ ವರದಿಯನ್ನು ನೋಡಿ ಮತ್ತೂರಿನ ಕೆಲ ಸಂಕೇತಿಗಳಿಗೆ ಬಹಳ ಖುಷಿಯಾಗಿದೆ ಎಂದು ಒಂದು ವೆಬ್‍ಪತ್ರಿಕೆ ಹೇಳುತ್ತಿದೆ. (ಬ್ರಾಹ್ಮಣರನ್ನು ಹಳಿಯುವ ಬುದ್ದುಜೀವಿ ವರ್ಗದ ಮುಕ್ಕಾಲುಪಾಲು ಬ್ರಾಹ್ಮಣರೇ ಆಗಿರುವುದರಿಂದ ಈ ಮಾತನ್ನು ತಳ್ಳಿ ಹಾಕುವಂತಿಲ್ಲ.) ಅಲ್ಲದೆ ಒಬ್ಬರು ವಕೀಲರು, ಪ್ರಜಾವಾಣಿಯ ವಿಶ್ವಾಸಾರ್ಹತೆ ಇತ್ತೀಚೆಗೆ ಕುಂದಿತ್ತು, ಈಗ ಈ ಸುದ್ದಿಯಿಂದ ಅದು ಮತ್ತೆ ಅದನ್ನು ಗಳಿಸಿಕೊಂಡಿದೆ ಎಂದು ಹೇಳಿದ್ದನ್ನೂ ವೆಬ್‍ಪತ್ರಿಕೆ ಪ್ರಕಟಿಸಿದೆ. ಅಂದರೆ, ಪ್ರಜಾವಾಣಿಯ ವಿಶ್ವಾಸಾರ್ಹತೆ ಬುದ್ದುಜೀವಿಗಳ ವಲಯದಲ್ಲಿ ಕುಂದಿದಾಗೆಲ್ಲ ಬ್ರಾಹ್ಮಣರನ್ನು ಹೀನಾಮಾನ ಮಾಡುವ ವರದಿಯನ್ನು ಪ್ರಕಟಿಸಬೇಕೆಂಬ ಸೂತ್ರ ಇರುವಂತಿದೆ!

(5) ಪ್ರಜಾವಾಣಿಯ ವಿಶ್ವಾಸಾರ್ಹತೆ ಕುಂದಿಹೋಗಿ ಹಲವು ವರ್ಷಗಳೇ ಆದವು. ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ತಪ್ಪಿಸಲು ಅದು ಶತಾಯಗತಾಯ ಪ್ರಯತ್ನಿಸಿದ್ದು ರಹಸ್ಯವಾಗೇನೂ ಉಳಿದಿಲ್ಲ. ಆ ನಂತರವೂ ಅಷ್ಟೇ, ಅದು ಕೇವಲ ಬುದ್ದುಜೀವಿಗಳ ಬಡಬಡಿಕೆಗಳಿಗೆ ವೇದಿಕೆಯಾಗಿದೆಯಷ್ಟೇ ಹೊರತು ಯಾವೊಂದು ವಸ್ತುನಿಷ್ಠವಾದ ವರದಿಯನ್ನಾಗಲೀ ಲೇಖನವನ್ನಾಗಲೀ ಪ್ರಕಟಿಸುವ ಆಸಕ್ತಿ ತೋರಿಲ್ಲ. ಡಿ.ಕೆ. ರವಿ ಸಾವಿನ ಪ್ರಕರಣದಲ್ಲಿ ಪ್ರಜಾವಾಣಿಯಲ್ಲಿ ಪುಂಖಾನುಪುಂಖವಾಗಿ ಯಾವ ಧಾಟಿಯ ವರದಿಯಗಳು ಬಂದವು ಎನ್ನುವುದನ್ನು ಕನ್ನಡಿಗರು ನೋಡಿದ್ದಾರೆ. ಇದೀಗ ಈ ಸೋಮಯಾಗದ ಕುರಿತು ವರದಿ ಪ್ರಕಟಿಸುವ ಮೂಲಕ ಪ್ರಜಾವಾಣಿ, ಪತ್ರಿಕೋದ್ಯಮ ಹೊಸ ತಳವನ್ನು ತೋರಿಸಿದೆ.

(6) ದೇಶದಲ್ಲಿ ಆಗಸ್ಟಾ ವೆಸ್ಟ್‍ಲ್ಯಾಂಡ್ ಪ್ರಕರಣದ ಬಗ್ಗೆ ಗಂಭೀರವಾದ ಚರ್ಚೆ ನಡೆಯುತ್ತಿರುವಾಗ ಮತ್ತು ರಾಜ್ಯದಲ್ಲಿ ಸಿದ್ಧರಾಮಯ್ಯನವರ ಪದಚ್ಯುತಿಗೆ ತೆರೆಮರೆಯ ಸಿದ್ಧತೆಗಳು ನಡೆಯುತ್ತಿರುವಾಗ, ಅವೆರಡರಿಂದ ಜನರ ಗಮನ ಬೇರೆಡೆ ಸೆಳೆದು ವಿವಾದ ಹುಟ್ಟಿಸುವುದೂ ಈ ವರದಿಯ ಷಡ್ಯಂತ್ರವಾಗಿರಬಹುದು. ಸಿದ್ಧರಾಮಯ್ಯನವರು ಮೂರು ವರ್ಷ ಪೂರೈಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಆಡಳಿತದ ವೈಫಲ್ಯಗಳ ಸಾಲು ಸಾಲನ್ನು ಜನಸಾಮಾನ್ಯರು ನೆನೆಸಿಕೊಳ್ಳುತ್ತಾರೆ. ಹಾಗಾಗಿ ಜನರ ಚಿತ್ತವನ್ನು ಅನಗತ್ಯವಾದ ಚರ್ಚೆಯೊಂದರತ್ತ ಸೆಳೆದು ಮುಖ್ಯಮಂತ್ರಿಗಳನ್ನು ಬಚಾವ್ ಮಾಡುವ ಹುನ್ನಾರ ಸೋಮಯಾಗದ ವರದಿಯ ಹಿಂದೆ ಇದೆ ಎನ್ನುವುದು ಒಂದು ಊಹೆ. ಪ್ರಜಾವಾಣಿಯ ನಡೆಗಳನ್ನು ಈ ಹಿಂದೆ ಗಮನಿಸಿದವರಿಗೆ ಇದೇನೂ ಅಚ್ಚರಿಯ ಸಂಗತಿಯಲ್ಲ. ಅಲ್ಲದೆ, ಅದು ಯಾವೆಲ್ಲ ರಾಜಕಾರಣಿ-ಪತ್ರಕರ್ತರ ಜೊತೆ ಗುರುತಿಸಿಕೊಂಡಿದೆ ಎಂಬುದನ್ನು ತಿಳಿದವರಿಗೆ, ಈ ಇಡೀ ಸಂಗತಿಯ ಹಿಂದೆ ಇರಬಹುದಾದ ಕಾಣದ “ಕೈ” ಯಾವುದು ಎಂದು ಊಹಿಸುವುದೂ ಕಷ್ಟವೇನಲ್ಲ.

ಕನ್ನಡಿಗರ ವಿಶ್ವಾಸಾರ್ಹ ಪತ್ರಿಕೆಯಾಗಿದ್ದ ಪ್ರಜಾವಾಣಿ ಇಂದು ಜನರ ವಿಶ್ವಾಸವನ್ನೂ ಪತ್ರಿಕೆಯಾಗುಳಿವ ಅರ್ಹತೆಯನ್ನೂ ಕಳೆದುಕೊಂಡಿರುವುದು ಪತ್ರಿಕೋದ್ಯಮ ಜಗತ್ತಿನ ಒಂದು ದುರಂತ. ಈ ಅಧಃಪತನವನ್ನು ಅದು ಗಂಭೀರವಾಗಿ ವಿಮರ್ಶೆಗೊಳಪಡಿಸಿಕೊಳ್ಳುವ ಕಾಲ ಬಂದಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!