Featured ಅಂಕಣ

ಬತ್ತಿದ ಕೆರೆಗಳನ್ನು ಬದುಕಿಸಬಹುದು, ಸತ್ತಂತಿರುವವರು ಎಚ್ಚರವಾದರೆ!

ಪ್ರಜಾಪ್ರಭುತ್ವದ ಒಂದು ವೈಶಿಷ್ಟ್ಯವೇನೆಂದರೆ, ಇಲ್ಲಿ ಪ್ರಜಾಪ್ರತಿನಿಧಿಯಾಗಿ ಆಯ್ಕೆಯಾಗಿ ಶಕ್ತಿಕೇಂದ್ರದಲ್ಲಿ ಕೂತವನಿಗೆ ಕಿವಿಯಿಲ್ಲ ಮತ್ತು ತನ್ನ ಸಂಕಟಗಳನ್ನು ಹೇಳಿಕೊಂಡು ಪರಿಹಾರ ಪಡೆಯಬೇಕಾದ ಜನತಾ ಜನಾರ್ದನನಿಗೆ ಧ್ವನಿಯಿಲ್ಲ. ನಿಮ್ಮ ಕಷ್ಟವೇ ನನ್ನ ಕಷ್ಟ, ನಿಮ್ಮ ಕಣ್ಣೀರೊರೆಸುವುದಕ್ಕಾಗಿ ಭಗವಂತ ರೂಪಿಸಿ ಕಳಿಸಿರುವ ಮೃಣ್ಮಯಮೂರ್ತಿ ನಾನು ಎಂದು ಆಕರ್ಷಕವಾಗಿ ಮಾತಾಡಿಕೊಂಡು ಜನರ ತಲೆ ನೇವರಿಸುವ ರಾಜಕಾರಣಿ ಕೂಡ ಅಧಿಕಾರದ ಗದ್ದುಗೆ ಏರಿದ ಮೇಲೆ ಹತ್ತಿ ಬಂದ ಏಣಿಯನ್ನು ಮರೆಯುತ್ತಾನೆ. ಅವನನ್ನು ಆರಿಸಿ ಕಳಿಸಿದ ಜನ ದಶಕಗಳಿಂದ ಪರಿಹಾರವಾಗದ ಸಮಸ್ಯೆಗಳನ್ನು ಅಕ್ಷರ ಅಳಿಸಿಹೋದ ಅರ್ಜಿಗಳಲ್ಲಿ ತುಂಬಿಕೊಂಡು ಬಂಗಲೆಯ ಹೊರಗೆ ನಾಯಿಗಳಂತೆ ಕಾಯಬೇಕಾಗುತ್ತದೆ. ಒಂದಾನೊಂದು ಕಾಲದಲ್ಲಿ ಜನರನ್ನು ತಲೆ  ಮೇಲೇರಿಸಿಕೊಂಡು ಮೆರವಣಿಗೆ ಬಂದಿದ್ದ ಅದೇ ರಾಜಕಾರಣಿ ಈಗ ತನ್ನ ಬಳಿ ಅಹವಾಲು ಹಿಡಿದು ಬಂದವರನ್ನು ಕಡೆಗಣ್ಣಲ್ಲೂ ನೋಡದೆ ಕಾರಿನ ದೂಳು ಹಾರಿಸಿಕೊಂಡು ಹೋಗಿ ಬಿಡುತ್ತಾನೆ. ರಾಜಕಾರಣದ ಅತಿ ದೊಡ್ಡ ಶಾಪ ಭ್ರಷ್ಟಾಚಾರವಲ್ಲ, ಅಸಂವೇದನೆ. ನಮ್ಮ ರಾಜಕಾರಣಿಗಳು ಬರಬರುತ್ತ ಕಟ್ಟಿಗೆಯ ತುಂಡುಗಳಂತೆ, ಇಟ್ಟಿಗೆಯಿಂದ ಮಾಡಿದ ಗೊಂಬೆಗಳಂತೆ ಹೃದಯವಿಲ್ಲದೆ ಮಾತಾಡತೊಡಗುತ್ತಾರಲ್ಲ, ಅದುವೇ ಪ್ರಜಾಸತ್ತೆಯ ಮೊದಲ ಸೋಲು. ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ನೋಡಿದಾಗೆಲ್ಲ ಪ್ರಜಾಪ್ರಭುತ್ವ ಮತ್ತು ಸಮಾಜವಾದಗಳು ಇಳಿದ ಅಧೋಗತಿಯನ್ನು ಇವರು ಸಾಂಕೇತಿಸುತ್ತಿದ್ದಾರೋ ಅನ್ನಿಸುತ್ತದೆ.

ಕಳೆದ ಎರಡು ವಾರಗಳಿಂದ ಮುಖ್ಯಮಂತ್ರಿಗಳು ರಾಜ್ಯದ ವಿವಿಧೆಡೆಗಳಲ್ಲಿ ಬರ ಪ್ರವಾಸ ಮಾಡುತ್ತಿದ್ದಾರೆ. ಒಂದು ಬರಪೀಡಿತ ಹಳ್ಳಿಯಲ್ಲಿ, ಜನ ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದರೂ ಮುಖ್ಯಮಂತ್ರಿಗಳ ಕಾರು ಸಾಗಿ ಬರುವ ದಾರಿಯಲ್ಲಿ ಟ್ಯಾಂಕರಿನಿಂದ ನೀರು ಚೆಲ್ಲಿ ದೂಳು ಏಳದಂತೆ ನೋಡಿಕೊಳ್ಳಲಾಯಿತು. ಇಂಥ ತಲೆ ಕೆಟ್ಟ ಐಡಿಯಾ ಮಾಡಿದ ಸ್ಥಳೀಯ ಪುಢಾರಿಗಳಿಗೆ ಮುಖ್ಯಮಂತ್ರಿಗಳು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರೆ ಅದು ಅಲ್ಲಿಯವರಿಗಷ್ಟೇ ಅಲ್ಲ ಕರ್ನಾಟಕದ ಅಪ್ರಜ್ಞಾವಂತ ಜನರಿಗೊಂದು ಪಾಠವಾಗುತ್ತಿತ್ತು. ಒಂದೊಳ್ಳೆಯ ಸಂದೇಶ ಮುಖ್ಯಮಂತ್ರಿಗಳಿಂದ ಜನರಿಗೆ ಹೋದಂತೆ ಆಗುತ್ತಿತ್ತು. ಆದರೆ, ಅವರು ಅದ್ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿಗಳು ನೀರಿನ ಸದ್ಬಳಕೆಯ ವಿಷಯದಲ್ಲಿ ಕನಿಷ್ಠ ಹತ್ತು ನಿಮಿಷ ಅರ್ಥಪೂರ್ಣವಾಗಿ ಮಾತಾಡಿದ್ದನ್ನು ರಾಜ್ಯದ ಜನತೆ ಕೇಳಿಲ್ಲ. ಮಾತೆತ್ತಿದರೆ ಕೇಂದ್ರದಿಂದ ಹೆಚ್ಚಿನ ನೆರವು ಬೇಕು ಎಂಬ ಒಂದು ಬೇಡಿಕೆಯನ್ನಷ್ಟೇ ನಾವು ಅವರಿಂದ ಕೇಳುತ್ತಿದ್ದೇವೆ. ಕೇಂದ್ರ 1200 ಕೋಟಿ ರುಪಾಯಿಗಳನ್ನು ಕೊಟ್ಟ ಮೇಲೂ ಮತ್ತೂ ಒಂದಷ್ಟು ಬರಲಿ ಎನ್ನುವುದಕ್ಕಷ್ಟೇ ಮುಖ್ಯಮಂತ್ರಿಗಳ ಜವಾಬ್ದಾರಿ ಸೀಮಿತವಾದಂತಿದೆ. ಅದು ಬಿಟ್ಟರೆ ಕರಾವಳಿ ಕರ್ನಾಟಕದಲ್ಲಿ ಹರಿಯುವ ನದಿಗಳನ್ನು ಬಲವಂತವಾಗಿ ಪೂರ್ವಾಭಿಮುಖವಾಗಿ ಹರಿಸಿ ಇತ್ತಲಿನ ಜಿಲ್ಲೆಗಳಿಗೆ ನೀರೊದಗಿಸುವ ಅವೈಜ್ಞಾನಿಕ ಕ್ರಮಗಳನ್ನು ಸಮರ್ಥಿಸಿಕೊಂಡು ಮಾತಾಡುತ್ತಿದ್ದಾರೆ. ಎತ್ತಿನಹೊಳೆ ಪ್ರಾಜೆಕ್ಟಿಗಿಂತ ಹಲವು ನೂರು ಕೋಟಿ ರುಪಾಯಿಗಳಷ್ಟು ಕಮ್ಮಿ ದರದಲ್ಲಿ ಮಾಡಿ ಮುಗಿಸಬಹುದಾದ ಶಾಶ್ವತ ಪರಿಹಾರಗಳತ್ತ ಮುಖ್ಯಮಂತ್ರಿಗಳಿಗೆ ದೃಷ್ಟಿಯೇ ಇಲ್ಲ. ಅರಬ್ಬೀ ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಸಿಹಿ ನೀರು ಪಡೆದು ರಾಜ್ಯದ ಕೆಲವು ಜಿಲ್ಲೆಗಳಿಗಾದರೂ ನೀರುಣಿಸಬಹುದು. ಈ ವಿಷಯದಲ್ಲಿ ಮುಖ್ಯಮಂತ್ರಿಗಳಷ್ಟೇ ವಿರೋಧ ಪಕ್ಷದ ಧುರೀಣರೂ ನಯವಂಚಕರು.

ಬೇಡ ಬಿಡಿ, ಕರ್ನಾಟಕದ ಉಳಿದ ಎಲ್ಲಾ ಜಿಲ್ಲೆಗಳ ವಿಷಯವನ್ನೂ ಬಿಟ್ಟು ಬಿಡೋಣ. ನಮ್ಮ ಚರ್ಚೆಯನ್ನು ಬೆಂಗಳೂರಿಗಷ್ಟೇ ಸೀಮಿತಗೊಳಿಸಿಕೊಳ್ಳೋಣ. ನೂರು ವರ್ಷಗಳ ಹಿಂದೆ ನೂರಾರು ಕೆರೆಗಳಿದ್ದ ಬೆಂಗಳೂರಲ್ಲಿ ಈಗ ಉಳಿದಿರುವವೆಷ್ಟು, ದೇವರಿಗೂ ಗೊತ್ತಿಲ್ಲ! ಸರಕಾರವೇ ಮುಂದೆ ನಿಂತು ಮಾಡಿಸಿದ ಸಮೀಕ್ಷೆಯಲ್ಲಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ 1545 ಕೆರೆಗಳು ಮತ್ತು 2000 ಕುಂಟೆ, ಖರಾಬು, ಹಳ್ಳ, ಕಟ್ಟೆ, ರಾಜ ಕಾಲುವೆ ಇದ್ದವೆಂಬ ಲೆಕ್ಕ ಬರೆಯಲಾಗಿದೆ. ಇವುಗಳಲ್ಲಿ ಕೆಲವು ಕೆರೆಗಳ ಪರಿಸ್ಥಿತಿಯ ಬಗ್ಗೆ ಸಣ್ಣ ಹಕ್ಕಿನೋಟ ಇದು: ಕೆಂಪಾಂಬುಧಿ ಕೆರೆ ದಕ್ಷಿಣ ಬೆಂಗಳೂರಲ್ಲಿ ಸದ್ಯಕ್ಕೆ ಅರೆ ಪ್ರಜ್ಞಾವಸ್ಥೆಯಲ್ಲಿರುವ ನೀರಿನ ಒರತೆ. 47 ಎಕರೆ 7 ಗುಂಟೆ ಇದ್ದ ಕೆಂಪಾಂಬುಧಿಯಲ್ಲಿ 3 ಎಕರೆ 34 ಗುಂಟೆ ಸದ್ಯಕ್ಕೆ ಅಕ್ರಮವಾಗಿ ಒತ್ತುವರಿಯಾಗಿದೆ. ದಕ್ಷಿಣ ಬೆಂಗಳೂರಿನ ಇನ್ನೊಂದು ಮುಖ್ಯ ಕೆರೆಯಾದ ಯಡಿಯೂರಲ್ಲಿ ಇದ್ದದ್ದು 18 ಎಕರೆ 2 ಗುಂಟೆ. ಅದರಲ್ಲಿ 10 ಎಕರೆ 7 ಗುಂಟೆಯಷ್ಟು ಜಾಗವನ್ನು ಒತ್ತುವರಿ ಮಾಡಿ ಸುತ್ತಮುತ್ತ ಹತ್ತಾರು ಅಪಾರ್ಟ್‍ಮೆಂಟ್‍ಗಳನ್ನು ಎಬ್ಬಿಸಲಾಗಿದೆ. ಬನ್ನೇರುಘಟ್ಟದ ಅರಕೆರೆಯಲ್ಲಿರುವ ಕೆರೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ವಹಿಸುತ್ತಿದೆಯಂತೆ. ಅಲ್ಲಿನ 37 ಎಕರೆಗಳಲ್ಲಿ 7 ಎಕರೆ ಸುತ್ತಮುತ್ತಲಿನ ಲ್ಯಾಂಡ್ ಮಾಫಿಯಾಕ್ಕೆ ಸ್ವಾಹಾ ಆಗಿದೆ. ಜೆ.ಪಿ.ನಗರದ ಪುಟ್ಟೇನಹಳ್ಳಿ ಕೆರೆಯ 84 ಎಕರೆ 22 ಗುಂಟೆಗಳಲ್ಲಿ ಬರೋಬ್ಬರಿ 31 ಎಕರೆಯನ್ನು ಬಿಲ್ಡರುಗಳು ನುಂಗಿ ನೀರು ಕುಡಿದಿದ್ದಾರೆ. ಉತ್ತರಹಳ್ಳಿಯ ಮುಖ್ಯರಸ್ತೆಯಲ್ಲಿ ಈಗ ಒಂದು ಸಣ್ಣ ಹೊಂಡದ ರೂಪಕ್ಕೆ ಇಳಿದಿರುವ ದೊರೆಕೆರೆ ಒಂದಾನೊಂದು ಕಾಲದಲ್ಲಿ 28 ಎಕರೆ 23 ಗುಂಟೆಗಳಷ್ಟು ವಿಶಾಲವಾಗಿತ್ತು. ಈಗ ಅದರಲ್ಲಿ ಸರಿಯಾಗಿ ಸರ್ವೇ ಲೆಕ್ಕಕ್ಕೆ ಸಿಗುತ್ತಿರುವುದು 14 ಗುಂಟೆ ಮಾತ್ರ. ರಾಜರಾಜೇಶ್ವರಿ ನಗರದ ಹಲಗೆವಡೇರಹಳ್ಳಿ ಕೆರೆಯಲ್ಲಿ 17 ಎಕರೆಯ ಪೈಕಿ 6 ಎಕರೆ ಜಾಗ ಇತ್ತೀಚೆಗಷ್ಟೇ ಎದ್ದ ನವನವೀನ ಬಹುಮಹಡಿ ಕಟ್ಟಡಿಗಳಿಗೆ ಆಹುತಿಯಾಗಿದೆ. ರಾಮಮೂರ್ತಿ ನಗರದಲ್ಲಿರುವ ಕೌದೇನಹಳ್ಳಿ ಕೆರೆಯ ಒಟ್ಟು ವಿಸ್ತೀರ್ಣ 55 ಎಕರೆ 10 ಗುಂಟೆ. ಆದರೆ ಅದರಲ್ಲಿ ಒತ್ತುವರಿಯಾಗಿ ಕಾಂಕ್ರೀಟ್ ಕಾಡು ಎದ್ದಿರುವುದು 34 ಎಕರೆ 10 ಗುಂಟೆ ಜಾಗದಲ್ಲಿ. ಸರಕಾರೀ ದಾಖಲೆಗಳಲ್ಲಿ ಚನ್ನಸಂದ್ರ-2 ಎಂಬ ಹೆಸರಲ್ಲಿ ಬರೆಯಲ್ಪಟ್ಟಿರುವ ಬಾಣಸವಾಡಿಯ ಒಂದು ಕೆರೆಯ ವಿಸ್ತೀರ್ಣ 42 ಎಕರೆ 30 ಗುಂಟೆ. ಆದರೆ ಅದರಲ್ಲಿ 17 ಎಕರೆ 27 ಗುಂಟೆ ಜಾಗವನ್ನು ಯಥಾಪ್ರಕಾರ ಕಳ್ಳಕಾಕರು ಒತ್ತುವರಿ ಮಾಡಿದ್ದಾರೆ. ಈ ಕಳ್ಳರು ಯಾವಾವುದೋ ಖಾಸಗಿ ಬಿಲ್ಡರುಗಳೇನಲ್ಲ, ಬಿಡಿಎ ಅಧಿಕಾರಿಗಳೇ! ಅಕ್ರಮ ಒತ್ತುವರಿಯಾಗಿರುವ ಜಾಗದ ಪೈಕಿ 14 ಎಕರೆಗಳನ್ನು ಬಿಡಿಎ ಒಂದು ಲೇಔಟ್ ಮಾಡಿ ಮಾರಿ ಕೈತೊಳೆದುಕೊಂಡುಬಿಟ್ಟಿದೆ.

ದಾಖಲೆಗಳಲ್ಲಿ 56 ಎಕರೆ 37 ಗುಂಟೆಗಳಷ್ಟು ವಿಶಾಲವಾದ ದೊರೆಸಾನಿಪಾಳ್ಯ ಕೆರೆಗೆ ಹೋಗಿ ನೋಡಿದರೆ ನಿಮಗೆ ಶಾಕ್ ಆಗಬಹುದು. ಯಾಕೆಂದರೆ ಇಲ್ಲಿ ಬೇರೆಲ್ಲ ಕಡೆಗಳಲ್ಲಿ ಆದಂತೆ, ಅರ್ಧಮರ್ಧ ಜಾಗ ಒತ್ತುವರಿಯಾಗುವುದು, ಅಳಿದುಳಿದ ಜಾಗದಲ್ಲಿ ಕೆರೆಯಿತ್ತೆಂಬುದಕ್ಕೆ ಕುರುಹೆಂಬಂತೆ ನೀರಿನ ಪಸೆ ಕಾಣುವುದು – ಇವೆಲ್ಲ ಇಲ್ಲವೇ ಇಲ್ಲ. ದೊರೆಸಾನಿಪಾಳ್ಯ ಕೆರೆಯ ಆ ಅಷ್ಟೂ 56 ಎಕರೆಗಳ ವಿಶಾಲ ಜಲಪ್ರದೇಶವೂ ಒಂದಿಂಚು ಬಿಡದಂತೆ ಒತ್ತುವರಿ ದೊರೆಗಳ ಪಾಲಾಗಿದೆ! ಒಂದಾನೊಂದು ಕಾಲದಲ್ಲಿ ಇದನ್ನು ಬಿಡಿಎ ನಿರ್ವಹಿಸುತ್ತಿತ್ತು. ಆದರೆ ಕೆರೆಗೆ ಬೇಲಿಯೆಳೆದು ಕಾಯುತ್ತ ಕೂರುವ ಕೆಲಸ ಬೇಸರವಾಗಿ ಒಂದು ಬೇಸಗೆಯ ದಿನ ಅದು, ಒಣಗಿನಿಂತ ಕೆರೆಯನ್ನು ಕೇಕ್ ಕತ್ತರಿಸಿದಂತೆ ತುಂಡರಿಸಿ ಬೇಕು ಬೇಕೆಂದವರಿಗೆಲ್ಲ ಬೇಕಾಬಿಟ್ಟಿ ಹಂಚಿ ತನ್ನ ಜವಾಬ್ದಾರಿಯಿಂದ ಕಳಚಿಕೊಂಡಿತು. ಕೆರೆಯನ್ನು ಹಲವು ವರ್ಷಗಳ ಹಿಂದೆಯೇ “ಚೇಂಜ್ ಆಫ್ ಲ್ಯಾಂಡ್ ಯೂಸ್” ನಿಯಮದಡಿ ವಸತಿಯೋಗ್ಯ ಪ್ರದೇಶ ಎಂದು ಬದಲಾವಣೆ ಮಾಡಿದ್ದರಿಂದ ಅದು ಈಗ ಅಕ್ರಮವಾಗುವುದಿಲ್ಲ ಎಂಬುದು ಬಿಡಿಎ ವಾದ! ಉತ್ತರಹಳ್ಳಿ ರಸ್ತೆಯ ಚಿಕ್ಕಲಸಂದ್ರ ಕೆರೆಗೂ ಇದೇ ಗತಿ ಒದಗಿದೆ. ಅಲ್ಲೀಗ ಕೋರ್ಟಿಗೆ ಸಾಕ್ಷಿ ಒದಗಿಸಲಿಕ್ಕಾಗಿ ಒಂದು ಚದರಂಗುಲ ಕೆರೆ ಬೇಕು ಎಂದರೂ ಸಿಗುವುದಿಲ್ಲ. ಅಲ್ಲೇ ಪಕ್ಕದಲ್ಲಿ ಸುಮಾರು 10 ಎಕರೆ 23 ಗುಂಟೆ ಜಾಗದಲ್ಲಿ ಮೈಚಾಚಿ ಹರಡಿಕೊಂಡಿದ್ದ ಇಟ್ಟುಮಡು ಕೆರೆ ಇಂದು ತನ್ನ ಜೀರ್ಣಾವಸ್ಥೆಯಲ್ಲಿ ಕೂಡ ಕಾಣ ಸಿಗುವುದಿಲ್ಲ. ಇಡೀ ಇಟ್ಟು ಮಡುವೇ ಒಂದು ಬಹುಮಹಡಿ ಕಟ್ಟಡಗಳ ಸಂಕೀರ್ಣ ಎಂಬ ಭಾವ ಬರುವಷ್ಟು ಒತ್ತೊತ್ತಾಗಿ ಅಲ್ಲಿ ಕಾಂಕ್ರೀಟಾರಣ್ಯ ಬೆಳೆದು ನಿಂತಿದೆ. ಒಂದಾನೊಂದು ಕಾಲದಲ್ಲಿ ಚಿನ್ನಕ್ಕಿಂತ ಬೆಲೆ ಬಾಳುವ ಶುದ್ಧ ನೀರನ್ನು ಕಾಪಿಡುತ್ತಿದ್ದ ಈ ಕೆರೆಯ ಮಡಿಲಲ್ಲಿ ಈಗ ಮಣ್ಣಿಗೆ ಚಿನ್ನದ ಬೆಲೆ! ಇನ್ನು ಈ ಎಲ್ಲ “ಚಿಕ್ಕ ಪುಟ್ಟ” ಕೆರೆಗಳನ್ನು ಬಿಟ್ಟು ಬೆಂಗಳೂರಿನ ಮಹಾಕೆರೆಯಾದ ಬೆಳ್ಳಂದೂರಿನ ವಿಷಯಕ್ಕೆ ಬರೋಣ. ಕಳೆದ ವರ್ಷ ಈ ಕೆರೆಯಲ್ಲಿ ಎತ್ತರೆತ್ತರ ನೊರೆ ಹಾರಿ, ನೀರಲ್ಲೇ ಬೆಂಕಿಯೂ ಉದ್ಭವವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ನಗರ ಮಿಂಚಿದ್ದು ಹಲವರ ನೆನಪಿಂದ ಮರೆಯಾಗಿರಲಾರದು. ಈ ಬುರುಗುನೊರೆಯನ್ನು ಶಮನ ಮಾಡಲು ಬಿಡಿಎ ಮತ್ತು ಬಿಬಿಎಂಪಿಯ ಅಧಿಕಾರಿಗಳು ಸಾವಿರಾರು ಲೀಟರ್ ನೀರನ್ನು ತಂದು ಸುರಿದದ್ದೂ ಸುದ್ದಿಯಾಯಿತು. ದೂರದಿಂದ ಕಂಡರೆ ಹಿಮಾಲಯದ ಶುಭ್ರಧವಲ ಕಾಂತಿಯನ್ನು ನೆನಪಿಸುವ ಈ ಕೆರೆಯ ನೊರೆ ವೈಭವ ಹೊರ ಜಗತ್ತಿಗೆ ಕಾಣಿಸಬಾರದೆಂಬ ಸದುದ್ಧೇಶದಿಂದ ಸರಕಾರ ಇಲ್ಲಿ ಹತ್ತು ಮೀಟರ್‍ನಷ್ಟು ಎತ್ತರದ ಮೆಷ್ ಹಾಕಿ ಬಿಟ್ಟಿತು. ಇಂಥ ಸರಳ ಪರಿಹಾರಗಳು ನಮ್ಮವರಲ್ಲದೆ ಬೇರಾವ ದೇಶದ ಬುದ್ಧಿವಂತರಿಗೆ ಹೊಳೆದಾವು?

2014ರಲ್ಲಿ ಬೆಂಗಳೂರು ನಗರದಲ್ಲಿ ಪರಿಶೀಲನೆಗೊಳಪಟ್ಟ ಒಟ್ಟು ಕೆರೆಗಳು 835. ದಾಖಲೆಗಳ ಪ್ರಕಾರ 27604 ಎಕರೆ ಇರಬೇಕಿದ್ದ ಈ ಕೆರೆಗಳಲ್ಲಿ ಒತ್ತುವರಿಯಾಗಿರುವುದು ಬರೋಬ್ಬರಿ 4277 ಎಕರೆ! ಹಾಗೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿದ್ದ 710 ಎಕರೆಗಳ ಒಟ್ಟು ವಿಸ್ತೀರ್ಣ 29972 ಎಕರೆ ಇರಬೇಕಿತ್ತು. ಆದರೆ ಅದರಲ್ಲಿ 6195 ಎಕರೆ ಭಾಗ ಆಧುನಿಕರೆಂಬ ನರಿನಾಯಿಗಳ ಪಾಲಾಗಿವೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಇನ್ನೂ ಗೌರ್ಮೆಂಟ್ ಲೆಕ್ಕದಲ್ಲಿರುವ 1545 ಕೆರೆಗಳ ಪೈಕಿ ಒತ್ತುವರಿಯಾಗದೆ ತಮ್ಮ ಅಸ್ತಿತ್ವವನ್ನು ಅಷ್ಟೋಇಷ್ಟೋ ಉಳಿಸಿಕೊಂಡಿರುವವು ಕೇವಲ 166 ಕೆರೆಗಳು. ನಗರದೊಳಗಿನ ಜಲಮೂಲಗಳನ್ನು ಕಳೆದುಕೊಂಡರೆ ಏನೆಲ್ಲ ಅನಾಹುತಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂಬುದನ್ನು ಈ ಬೇಸಗೆಯಲ್ಲೇ ಸಾಕು ಸಾಕೆನಿಸುವಷ್ಟು ನೋಡಿದ್ದೇವೆ. ಇನ್ನೂ ನಾಲ್ಕೈದು ವರ್ಷಗಳು ಕಳೆವಷ್ಟರಲ್ಲಿ ಬೆಂಗಳೂರಿನ ಬೇಸಗೆಯ ತಾಪಮಾನ 42-45 ಡಿಗ್ರಿ ಸೆಲ್ಸಿಯಸ್ಸಿಗೆ ಮುಟ್ಟುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಐಐಎಸ್‍ಸಿಯ ಪರಿಸರ ತಜ್ಞರಂತೂ ಇನ್ನೈದು ವರ್ಷಗಳಲ್ಲಿ ಬೆಂಗಳೂರು ಸಂಪೂರ್ಣವಾಗಿ ಸತ್ತೇ ಹೋಗಲಿದೆ; ಇಲ್ಲಿನ ಕೆರೆಗಳು ಒಂದೋ ಹಳ್ಳಕೊಳ್ಳದ ಸ್ವರೂಪಕ್ಕೆ ಇಳಿಯಬಹುದು; ಅಥವಾ ಇಟ್ಟುಮಡುವಿನ ಕೆರೆಯಂತೆ ಸಂಪೂರ್ಣವಾಗಿ ನಾಮಾವಶೇಷವಾಗಿ ಬಿಸಿಗಾಳಿ ಹಬ್ಬಿಸುವ ಗಗನಚುಂಬಿ ಕಟ್ಟಡಗಳು ಎದ್ದೇಳಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಒಟ್ಟಲ್ಲಿ ನಾವು ಈಗಾಗಲೇ ಶರತಲ್ಪದ ಮೇಲೆ ಮಲಗಿ ಉತ್ತರಾಯಣಕ್ಕಾಗಿ ಪ್ರತೀಕ್ಷೆಯಲ್ಲಿರುವ ಭೀಷ್ಮನಗರಿಯಲ್ಲಿ ಕೊನೆಯ ಉಸಿರಾಟ ನಡೆಸಿದ್ದೇವೆ ಎನ್ನುವುದು ಸ್ಪಷ್ಟ. ಈ ವಿಷಮ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಅದ್ಭುತ ಅವಕಾಶ ಸಿದ್ಧರಾಮಯ್ಯನವರಿಗೆ ಇತ್ತು. ಎಪ್ರೀಲ್-ಮೇ ತಿಂಗಳ ಈ ಬೇಸಗೆಯಲ್ಲಿ ಅಳಿದುಳಿದಿರುವ ಕೆರೆಗಳತ್ತ ಜೆಸಿಬಿಗಳನ್ನೂ ಲಾರಿಗಳನ್ನೂ ಕಳಿಸಿ, ಅಲ್ಲಿ ರಾಶಿರಾಶಿ ಬಿದ್ದಿರುವ ಕಸ ತೆಗೆಸಿ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಹೂಳೆತ್ತುವ ಕೆಲಸಕ್ಕೆ ಚಾಲನೆ ಕೊಡಬಹುದಾಗಿತ್ತು. ಮಳೆಗಾಲಕ್ಕೆ ಎರಡು ವಾರವಿದೆ ಎಂಬಷ್ಟರಲ್ಲಿ ಬೆಂಗಳೂರಿನ ಅಷ್ಟೂ ಕೆರೆಗಳು ಸಂಪೂರ್ಣ ಸ್ವಚ್ಛವಾಗಿ, ಮುಂಗಾರ ಮಾರುತಗಳಿಗೆ ಸರ್ವವಿಧದಲ್ಲೂ ಸಜ್ಜುಗೊಳ್ಳುವಂತೆ ನೋಡಿಕೊಳ್ಳಬಹುದಾಗಿತ್ತು. ಕೊಳಚೆ ತೂಬುಗಳನ್ನು ಕಟ್ಟುನಿಟ್ಟಾಗಿ ಮುಚ್ಚಿಸಿ ಕೆರೆಗಳ ಒಡಲನ್ನು ಕಾಪಿಡಬಹುದಾಗಿತ್ತು. ಇಚ್ಛಾಶಕ್ತಿಯಿದ್ದರೆ, ಬೆಂಗಳೂರು ತನ್ನ ಸುಂದರ ಕೆರೆಗಳಿಂದಲೇ ಆಕರ್ಷಣೆಯ ಕೇಂದ್ರಬಿಂದುವಾಗುವಂತೆ, ಪ್ರವಾಸಿಗಳನ್ನೂ ವಲಸೆ ಹಕ್ಕಿಗಳನ್ನೂ ಕೈಬೀಸಿ ಕರೆಯುವಂತೆ, “ಕೆರೆ ಪ್ರವಾಸೋದ್ಯಮ”ದ ಪ್ರಮುಖ ತಾಣವಾಗುವಂತೆ ರೂಪಿಸಬಹುದಾಗಿತ್ತು. ನಗರದ ಕೆರೆಗಳು ಆರೋಗ್ಯಪೂರ್ಣವಾಗಿದ್ದರೆ, ಮಳೆಗಾಲದಲ್ಲಿ ವರುಣ ಅದೆಷ್ಟೇ ತಾಂಡವ ಕುಣಿದರೂ ಅಷ್ಟೂ ನೀರನ್ನು ತಮ್ಮ ಗರ್ಭದಲ್ಲಡಗಿಸಿಕೊಂಡು ನಗರವನ್ನು ಕಾಪಾಡಬಲ್ಲವು. ಪಾತಾಳ ಕಂಡಿರುವ ಅಂತರ್ಜಲ ಮಟ್ಟವನ್ನು ಸುಧಾರಿಸಬಲ್ಲವು. ಈ ನಗರ ಇನ್ನಷ್ಟು ಸಾವಿರ ಜನರಿಗೆ ಸಹನೀಯವಾಗುವಂತೆ ಮಾಡಬಲ್ಲವು. ನಗರದ ಹಸಿರಿಗೆ ಉಸಿರಾಗಬಲ್ಲವು. ಬೇಸಗೆಯಲ್ಲಿ ಈ ನಗರ ಹನಿ ನೀರಿಗೂ ಹಾಹಾಕಾರ ಹೊಡೆಯಬೇಕಾದ ಪರಿಸ್ಥಿತಿಯನ್ನು ತಪ್ಪಿಸಬಲ್ಲವು. ಇವೆಲ್ಲವನ್ನು, ಸಿದ್ಧರಾಮಯ್ಯನವರು ಸಂವೇದನಾಶೀಲ ಮುಖ್ಯಮಂತ್ರಿಗಳಾಗಿದ್ದರೆ ಯೋಚಿಸುತ್ತಿದ್ದರು.

ಇನ್ನೆರಡು ವಾರದಲ್ಲಿ ಮಳೆಗಾಲ ಆರಂಭ. ಈ ವರ್ಷದ ಮಾನ್ಸೂನ್ ಸಹಜವಾಗಿರುತ್ತದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿರುವದರಿಂದ ಒಳ್ಳೆಯ ಮಳೆ-ಬೆಳೆ ಆಗುತ್ತದೆಂದು ಆಶಿಸೋಣ. ಆದರೆ, ಹಿಡಿ ಹಿಡಿ ಎನ್ನುತ್ತ ಹಿಡಿತುಂಬ ಸುರಿವ ಮಳೆಯನ್ನು ಭವಿಷ್ಯಕ್ಕಾಗಿ ಕಾಪಿಟ್ಟುಕೊಳ್ಳುವ ಸರಳ ಸಂಗತಿಯನ್ನೂ ಮಾಡಲಾರೆವಲ್ಲಾ ಎಂಬುದೇ ಅಚ್ಚರಿ ಮತ್ತು ಖೇದದ ಸಂಗತಿ. ಈ ವರ್ಷವೂ ಬೆಂಗಳೂರಲ್ಲಿ ಮಳೆ ಸುರಿಯುತ್ತದೆ. ಸುರಿದ ಬಹುಪಾಲು ಶುದ್ಧ ಜಲ ಸಿಕ್ಕಸಿಕ್ಕ ರೋಡು-ತೋಡುಗಳಲ್ಲಿ ಹರಿದು ರಾಜಕಾಲುವೆಯ ಕೊಳಚೆಯಲ್ಲಿ ಬೆರೆತು ವೃಷಭಾವತಿಯ ಹೊಟ್ಟೆ ಸೇರುತ್ತದೆ. ಈಗಾಗಲೇ ಅಪಾಯಕಾರಿ ರಾಸಾಯನಿಕಗಳಿಂದ ತುಂಬಿ ಹೋಗಿರುವ ಕೆರೆಗಳ ಒಡಲಿಗೆ ಮಳೆಯ ಶುದ್ಧ ನೀರು ಬೀಳುತ್ತದೆ. ಒಂದೆರಡು ದಿನ ಹನಿ ಕಡಿಯದಂತೆ ಮಳೆ ಜಡಿದರೆ ಸಾಕು ಇಡೀ ಬೆಂಗಳೂರು ನಗರ ಜಲಸಾಗರದಲ್ಲಿ ತೇಲುವ ತೆಪ್ಪವಾಗುತ್ತದೆ. ರಾಜ್ಯ ಸರಕಾರ ತನ್ನದೂ ಅಲ್ಲ ತನ್ನಪ್ಪನದೂ ಅಲ್ಲವೆಂಬ ನಿರ್ಲಿಪ್ತತೆಯಿಂದ ನೂರಾರು ಕೋಟಿಗಳ ಪರಿಹಾರ ಹಣ ಬಿಡುಗಡೆ ಮಾಡುತ್ತದೆ. ತನ್ನ ಖಜಾನೆ ಬರಿದಾದರೆ ಅತ್ತ ಕೇಂದ್ರದಿಂದ ಒಂದಷ್ಟು ಕೋಟಿಗಳು ಬರಲಿ ಎಂದು ನಿರೀಕ್ಷಿಸುತ್ತದೆ. ನಗರದ ಯಾವ ಕೆರೆಗೂ ಧಾರಣ ಶಕ್ತಿ ಇಲ್ಲವಾದ್ದರಿಂದ ಮಳೆಗಾಲ ಮುಗಿಯುತ್ತಲೇ ಇವುಗಳಲ್ಲಿ ನೊರೆ, ಜೊಂಡು, ಮೀನುಗಳ ರಾಶಿ ರಾಶಿ ಹೆಣ ಕಾಣಿಸುತ್ತವೆ. ಮತ್ತೆ ಮುಂದಿನ ವರ್ಷದ ಬೇಸಗೆಗೆ ಇರುತ್ತೇವೆ ನಾವು ಹೀಗೆಯೇ… ಗ್ಲೋಬಲ್ ವಾರ್ಮಿಂಗನ್ನು ಬಯ್ಯುತ್ತ, ಧಗೆಧಗೆ ಎಂದು ಚೀರಾಡುತ್ತ, ನೀರಿಲ್ಲದ ನಲ್ಲಿಗಳ ಎದುರು ಬಾಯ್ತೆರೆದು ಕೂತ ಕೊಡಗಳ ಫೋಟೋಗಳನ್ನು ಫೇಸ್‍ಬುಕ್ಕಿನಲ್ಲಿ ಅಪ್‍ಲೋಡ್ ಮಾಡುತ್ತ, ಬರ ಪರಿಹಾರಕ್ಕೆ ದಿಲ್ಲಿಯಿಂದ ಬರುವ ಸಾವಿರ ಕೋಟಿಗಳ ಪರಿಹಾರಕ್ಕೆ ಬಕಗಳಂತೆ ಕಾಯುತ್ತ, ಮತ್ತೆ ಮಳೆಗಾಗಿ ಪ್ರಾರ್ಥಿಸುತ್ತ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!