Featured ಅಂಕಣ

ನೇತ್ರಾವತಿ ತಿರುಗಿದರೆ ಬರಗಾಲ ಖಾತ್ರಿ!

ಒಂದು ವಾರದ ಹಿಂದೆ ಮಂಗಳೂರಲ್ಲಿ ಜಲಕ್ಷಾಮ ತಲೆದೋರಿ ಹೊಟೇಲುಗಳನ್ನೂ ಹಾಸ್ಟೆಲ್ಲುಗಳನ್ನೂ ವಿಧಿಯಿಲ್ಲದೆ ಮುಚ್ಚಬೇಕಾಗಿ ಬಂತು. ಬಹುಶಃ ಹೀಗಾದದ್ದು ಮಂಗಳೂರಿನ ಚರಿತ್ರೆಯಲ್ಲೇ ಮೊದಲ ಬಾರಿ. ವರ್ಷಧಾರೆಗಾಗಿ ಸಂಪ್ರದಾಯದಂತೆ ಅಲ್ಲಲ್ಲಿ ನಾಗ ತನು, ಬೊಂಡಾಭಿಷೇಕಗಳು ನಡೆಯುತ್ತಿದ್ದಾಗ ಗೆಳೆಯರೊಬ್ಬರು ಮಾತಿನ ನಡುವೆ, ಇನ್ನೂ ಎರಡು ವಾರ ಈ ಪ್ರದೇಶದಲ್ಲಿ ಹನಿಯೂ ಮಳೆಯಾಗಬಾರದೆಂದು ಶಾಪ ಹಾಕಿದರು! ಯಾಕೆ ಹಾಗೆನ್ನುತ್ತೀರಿ ಎಂದರೆ, ಇನ್ನೇನು ಸ್ವಾಮಿ! ನೇತ್ರಾವತಿಯನ್ನು ತಿರುಗಿಸುವ ಯೋಜನೆ ದಿನೇದಿನೇ ಹುರಿಗಟ್ಟುತ್ತಿದೆ. ರಾಕ್ಷಸಾಕಾರದ ಪೈಪುಗಳು ಬಂದು ಎತ್ತಿಹೊಳೆಯ ಬುಡದಲ್ಲಿ ರಾಶಿ ಬೀಳುತ್ತಿವೆ. ಇನ್ನೂ ನಮ್ಮ ದಪ್ಪ ಚರ್ಮದ ಜನಕ್ಕೆ ಪರಿಸ್ಥಿತಿಯ ಬಿಸಿ ಅರಿವಾಗಿಲ್ಲವೆಂದರೆ ಏನು ಮಾಡೋಣ? ಎಂದು ಹತಾಶೆ ತೋಡಿಕೊಂಡರು. ನಿಜ, ಮಲೆಘಟ್ಟ ಸೋಪಾನ ಕೆಳಪಟ್ಟಿಯಲಿ ಹುಟ್ಟಿ ಮೂರೇ ಉರುಳಿನಲ್ಲಿ ಕಡಲ ಕುದಿತದ ಎಣ್ಣೆ ಕೊಪ್ಪರಿಗೆಗೆ ಬಂದು ಬೀಳುವ ನೇತ್ರಾವತಿ ಪುಟ್ಟ ನದಿ, ಆದರೂ ಕರಾವಳಿಯ ಜೀವನದಿ. ಪಶ್ಚಿಮಘಟ್ಟದಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಹರಿದು ಬಯಲು ಸೀಮೆಗೆ ನೀರುಣಿಸುವ ಬದಲು ಈಕೆ ಪಶ್ಚಿಮಾಭಿಮುಖವಾಗಿ ಸಮುದ್ರ ಸೇರಿ ವೇಸ್ಟ್ ಆಗುತ್ತಾಳಲ್ಲ ಎಂದು ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯನವರಂತೆ ಪ್ರಕೃತಿಯೂ ಯೋಚಿಸಿದ್ದರೆ ಕರ್ನಾಟಕದ ಭೂಪಟದಲ್ಲಿ ಕರಾವಳಿಯನ್ನು ಮರುಭೂಮಿಯೆಂದು ಬರೆಯಬೇಕಾಗುತ್ತಿತ್ತು. 2010ರಲ್ಲಿ ಬಂದ ನೇತ್ರಾವತಿ ನದಿ ನೀರು ತಿರುಗಿಸುವ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾದ ಮೇಲೆ ಸರಕಾರ ಹಳೆ ಮದ್ಯವನ್ನು ಹೊಸ ಬಾಟಲಿಯಲ್ಲಿ ಹಾಕಿ ಎತ್ತಿನಹೊಳೆ ಪ್ರಾಜೆಕ್ಟ್ ಹೆಸರಲ್ಲಿ ತಂದಿದೆ. ಅದ್ಯಾವುದೋ ಹೆಸರು ಕೇಳದ ಊರಿನ, ತಮಗೆ ಸಂಬಂಧ ಪಡದ ಯೋಜನೆ ಎಂದು ಮೈಮರೆತರೆ ಇದೇ ಕರಾವಳಿಯ ಜನ ಮುಂದೆ ವರ್ಷಕ್ಕೆ ಆರು ತಿಂಗಳು ನೀರಿಗಾಗಿ ಬಾಯಿ ಬಡಿದುಕೊಳ್ಳಬೇಕಾದ ಪರಿಸ್ಥಿತಿ ಬರಲಿದೆ.

ಚಿಕ್ಕಮಗಳೂರಿನ ಸಂಸೆಯಲ್ಲಿ ಹುಟ್ಟುವ ನೇತ್ರಾವತಿ ತನ್ನ ಪಯಣದ ದಾರಿಯಲ್ಲಿ ಬಂಡಾಜೆ, ಕೊಟ್ಟಿಗೆಹಾರ,ಅಣಿಯೂರು, ಸುನಾಲ, ನೆರಿಯ, ಕಪಿಲೆ, ಕೆಂಪುಹೊಳೆ ಎಂಬ ಹೆಸರಿನ ಹೊಳೆಗಳನ್ನು ಜೊತೆ ಮಾಡಿಕೊಂಡು,ಕುಮಾರ ಪರ್ವತದಲ್ಲಿ ಹುಟ್ಟಿ ಇಳಿಯುವ ಕುಮಾರಧಾರಾ ನದಿಯನ್ನು ಮಡಿಲಿಗೆ ಹಾಕಿಕೊಂಡು148 ಕಿಲೋಮೀಟರ್ ಹರಿದು ಅರಬ್ಬಿಯ ಶರಧಿಯನ್ನು ಸೇರುತ್ತಾಳೆ. ಕರಾವಳಿಯ ಹತ್ತು ಲಕ್ಷ ರೈತರಿಗೆ ಈಕೆಯೇ ಜೀವನಾಡಿ. ವರ್ಷದ ಏಳೆಂಟು ತಿಂಗಳು ಭರಪೂರ ಹರಿಯುವ, ಬೇಸಗೆಯ ಕೊನೆಯ ನಾಲ್ಕು ತಿಂಗಳಲ್ಲಿ ಘಟ್ಟದ ಹೆಗಲಿಂದ ತೆಳು ಜಡೆಯೊಂದು ಇಳಿಬಿದ್ದಂತೆ ಮಿಂಚಿನ ಸೆಳಕಾಗುವ ಈ ನದಿ ಇಷ್ಟು ವರ್ಷ ಮೇ ಅಂತ್ಯದಲ್ಲೂ ಅಷ್ಟಿಷ್ಟು ಒಸರನ್ನು ಉಳಿಸಿಕೊಂಡಿರುತ್ತಿತ್ತು. ಆದರೆ ಈ ವರ್ಷದ ಮೇ ಮೊದಲ ವಾರದಲ್ಲಿ, ಉಪ್ಪಿನಂಗಡಿಯಲ್ಲಿ ಕುಮಾರಧಾರವನ್ನು ಕೂಡುವ ಸಂಗಮವನ್ನು ತಲುಪುವ ಮುಂಚೆಯೇ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನದಿ ಕಣ್ಮುಚ್ಚಿದೆ. ಅಲ್ಲಿಂದ ಮುಂದಕ್ಕೆ ಬಗೆದು ತೆಗೆದರೂ ಈ ನದಿಯ ಹರಿವಿನ ಸ್ಥಳದಲ್ಲಿ ಒಂದು ತೊಟ್ಟು ನೀರೂ ಇಲ್ಲ! ಎತ್ತಿನಹೊಳೆ ಯೋಜನೆಯ ಮೂಲಕ ಈ ನದಿಯಿಂದ ಸರಕಾರ ಬಯಲುಸೀಮೆಯ ಏಳು ಜಿಲ್ಲೆಗಳ 28ತಾಲ್ಲೂಕುಗಳಿಗೆ ಹಾಗೂ ಅಲ್ಲಿರುವ 68.5 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುತ್ತದಂತೆ!

ಸರಕಾರದ ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಆಗಿದ್ದ ಜಿ.ಎಸ್. ಪರಮಶಿವಯ್ಯ2002ರಲ್ಲಿ ನೇತ್ರಾವತಿಯ ಪಾತ್ರ ತಿರುಗಿಸಿ ಪೂರ್ವ ಕರ್ನಾಟಕದ ಜನರ ಗಂಟಲೊಣಗಿಸುವ ಕಾರ್ಯಯೋಜನೆ ಸಿದ್ಧಪಡಿಸಿದರು. ಅವಿಭಜಿತ ದಕ್ಷಿಣಕನ್ನಡದಲ್ಲಿ ವಾರ್ಷಿಕ 6000 ಮಿಲಿಮೀಟರ್ ಮಳೆಯಾಗುತ್ತದೆಂದು ಇವರಿಗೆ ಯಾರು ಹೇಳಿದರೋ ತಿಳಿಯದು. 2014ರ ವರದಿಯ ಪ್ರಕಾರ ಇಲ್ಲಿನ ವಾರ್ಷಿಕ ಮಳೆಪ್ರಮಾಣ ಅದರ ಅರ್ಧದಷ್ಟು (3200ಮಿಲಿಮೀಟರ್) ಮಾತ್ರ. ಈ ಯೋಜನೆಗೆ ಸರಕಾರ, 2012ರ ಜುಲೈನಲ್ಲಿ 8323.5 ಕೋಟಿ ರುಪಾಯಿ ಮೀಸಲಿಟ್ಟರೆ 2015ರ ಡಿಸೆಂಬರ್ ಹೊತ್ತಿಗೆ ಅಂದಾಜು ವೆಚ್ಚ ಏರಿ 12912.36 ಕೋಟಿ ರುಪಾಯಿಗಳಾದವು. ನೇತ್ರಾವತಿಯ ಹರಿವಿನ ದಿಕ್ಕು ಬದಲಾಯಿಸುವ ಯೋಜನೆ ಎಂದರೆ ಇಡೀ ಕರಾವಳಿಯ ಪ್ರತಿಭಟನೆ ಎದುರಿಸಬೇಕಾಗುತ್ತದೆಂದು,ಉಪಾಯವಾಗಿ ಎತ್ತಿನಹೊಳೆಯ ಹೆಸರನ್ನು ತೇಲಿಬಿಡಲಾಯಿತು. ಎತ್ತಿನಹೊಳೆಯೂ ಸೇರಿದಂತೆ ನೇತ್ರಾವತಿಯ ಏಳೆಂಟು ಉಪನದಿಗಳಿಂದ 142ಟಿಎಂಸಿ ನೀರನ್ನು ಮೂಲದಲ್ಲೇ ಸಂಗ್ರಹಿಸಿ, ದೊಡ್ಡ ಜಲಾಶಯದಂಥ ತೊಟ್ಟಿಗಳಲ್ಲಿ ಶೇಖರಿಸಿ, ಅಲ್ಲಿಂದ370 ಮೆಗಾವ್ಯಾಟ್ ವಿದ್ಯುತ್ ಬಳಸಿ ನೀರನ್ನು 200ಮೀಟರ್ ಎತ್ತರಕ್ಕೆ ಪಂಪ್ ಮಾಡಿ, 274ಕಿಲೋಮೀಟರ್ ಉದ್ದದ ಕೊಳವೆಗಳ ಮೂಲಕ ಪೂರ್ವದ ಜಿಲ್ಲೆಗಳಿಗೆ ಹರಿಸುವ ಯೋಜನೆ ಇದು. ಇದಕ್ಕಾಗಿ ಎತ್ತಿನಹೊಳೆಯ ಸುತ್ತಮುತ್ತ 8ಚೆಕ್‍ಡ್ಯಾಂಗಳನ್ನು ಕಟ್ಟಬೇಕಾಗುತ್ತದೆ. ಹಚ್ಚಹಸುರಿನ ಕಂಬಳಿ ಹೊದ್ದು ಬೆಚ್ಚನೆ ಮಲಗಿದ್ದ ಪಶ್ಚಿಮಘಟ್ಟದ ಮೈಮೇಲೆ ಜೆಸಿಬಿಗಳ ರಾಕ್ಷಸ ಹಲ್ಲುಗಳು ನೆಲ ಬಗೆಯುವುದರಲ್ಲಿ ನಿರತವಾಗುತ್ತವೆ. ಜೈವಿಕ ಸಮತೋಲನಕ್ಕೆ ಬಹುದೊಡ್ಡ ಕೊಡಲಿಯೇಟು ಬೀಳುತ್ತದೆ. ವರ್ಷಕ್ಕೆ 464 ಟಿಎಂಸಿಯಷ್ಟು ನೀರನ್ನು ಗರ್ಭದಲ್ಲಿರಿಸಿಕೊಂಡು ತುಂಬಿ ಹರಿಯುತ್ತಿದ್ದ ನೇತ್ರಾವತಿ, ತನ್ನ ಎಲ್ಲಾ ಉಪನದಿ, ಕಿರುನದಿಗಳನ್ನೂ ಕಳೆದುಕೊಂಡು ಮಳೆಗಾಲದ ಮೂರು ತಿಂಗಳು ಭೋರ್ಗರೆದು ಹರಿದು ಬರಿದಾಗುವ ಹಳ್ಳದ ಸ್ವರೂಪಕ್ಕೆ ಇಳಿಯುತ್ತದೆ. ಒಟ್ಟಿನಲ್ಲಿ, ಉಪ್ಪಿನಂಗಡಿಯ ನದಿ ಬಯಲಿನಲ್ಲಿ ವರ್ಷಕ್ಕೆ ಆರು ತಿಂಗಳು ಹುಡುಗರು ಕ್ರಿಕೆಟ್ ಆಡಬಹುದೆಂಬುದೊಂದೇ ಲಾಭ.

ಎತ್ತಿನಹೊಳೆಯ ಪ್ರಾಜೆಕ್ಟನ್ನು ಸರಕಾರ ಎತ್ತಿಕೊಂಡದ್ದೇ ಆದರೆ ಅದರ ಪ್ರತಿಕೂಲ ಪರಿಣಾಮಗಳನ್ನು ಇಡೀ ಕರಾವಳಿ ಎದುರಿಸಬೇಕಾಗುತ್ತದೆ ಎಂಬುದನ್ನು ಮರೆಯಬಾರದು. ಉದಾಹರಣೆಗೆ, ತುಳುನಾಡಿನಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆ. ಇದಕ್ಕೆ ವಾರ್ಷಿಕ 750ಮಿಲಿಮೀಟರ್ ಮಳೆ ಬೇಕು. ಪಶ್ಚಿಮಘಟ್ಟದಲ್ಲಿ ಗುಡ್ಡ ಕಡಿದು ದಾರಿ ಮಾಡುವ ಕಾಮಗಾರಿ ಹಗಲಿರುಳು ನಡೆಯುವುದರಿಂದ ಮಳೆಯ ಪ್ರಮಾಣದಲ್ಲಿ ವ್ಯತ್ಯಯವಾಗಬಹುದು. ಹಾಗೆಯೇ, ನೇತ್ರಾವತಿಯಲ್ಲಿ ಒಳಹರಿವು ಕುಗ್ಗಿ ಸುತ್ತಮುತ್ತಲಿನ ಜಲಾನಯನ ಪ್ರದೇಶದ ಅಂತರ್ಜಲ ಮಟ್ಟ ಕುಸಿಯಬಹುದು. ನದಿ ಮೀನುಗಾರಿಕೆಯನ್ನು ನಂಬಿಕೊಂಡವರು ಅದನ್ನು ಕೈಬಿಟ್ಟು ಬೆಂಗಳೂರಿನ ರಸ್ತೆಗಳಲ್ಲಿ ಪಾನಿಪೂರಿ ಅಂಗಡಿ ತೆರೆಯಬೇಕಾಗಬಹುದು. ದಟ್ಟ ಅರಣ್ಯವನ್ನು ಬುಡಸಮೇತ ಕಿತ್ತೆಸೆದ ಮೇಲೆ ಆನೆ, ಚಿರತೆಯಂಥ ವನ್ಯಜೀವಿಗಳ ಉಪಟಳ ನಾಡಿನವರಿಗೆ ಜಾಸ್ತಿಯಾಗಬಹುದು. ದೀಪದ ಬುಡದಲ್ಲೇ ಕತ್ತಲೆ ಎಂಬಂತೆ ಗುಂಡ್ಯ, ಎತ್ತಿನಹೊಳೆ ಮುಂತಾದ ಜಾಗಗಳ ರೈತರು ಬೆಳೆಗೆ ನೀರಿಲ್ಲದೆ ಕಂಗಾಲಾಗಬಹುದು. ಮಳೆಗಾಲದಲ್ಲಿ ಸಮುದ್ರದ ನೀರಿನ ಮಟ್ಟ ಏರಿ ಬಹಳಷ್ಟು ಉಪ್ಪುನೀರು ಒಳನಾಡಿಗೆ ನುಗ್ಗಲು ಪ್ರಯತ್ನಿಸುತ್ತದೆ. ಆಗ ಅದನ್ನು ತಡೆದು ಬೆಳೆ ಬೆಳೆವ ಜಮೀನು ಉಪ್ಪುನೀರಿಗೆ ಆಹುತಿಯಾಗದಂತೆ ತಡೆಯುವುದೇ ಮೈದುಂಬಿ ಹರಿಯುವ ನೇತ್ರಾವತಿಯಂಥ ನದಿಗಳು. ಮಳೆಗಾಲದ ಅಬ್ಬರ ಇಳಿದ ಮೇಲೂ ಸಮುದ್ರಕ್ಕೆ ಸಾಕಷ್ಟು ಪ್ರಮಾಣದ ನೀರು ಸೇರಿಸುತ್ತ, ಅಲ್ಲಿನ ಮೀನುಗಳಿಗೆ ಜೀವವಾಯುವಿನ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಂಡು, ತೀರ ಪ್ರದೇಶದ ಮೀನುಗಾರರಿಗೆ ನೆಮ್ಮದಿಯ ನಿದ್ರೆ ದಯಪಾಲಿಸುತ್ತವೆ ಈ ನದಿದೇವತೆಗಳು. ಅದೆಲ್ಲ ಬಿಡಿ; ಮಂಗಳೂರು ದಿನೇದಿನೇ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚಿದಂತೆ ನೀರಿನ ಬೇಡಿಕೆಯೂ ಹೆಚ್ಚುತ್ತಿದೆ. ನೇತ್ರಾವತಿಯ ನೀರನ್ನು ಕೋಲಾರ, ಬೆಂಗಳೂರುಗಳಿಗೆ ಕಳಿಸಿ ಕುಡ್ಲದ ಜನ ಬಾಯಿಗೆ ಉಪ್ಪು ನೀರು ಹಾಕಿಕೊಳ್ಳುತ್ತಾರಾ ಎಂಬುದು ಇನ್ನೊಂದು ಯಕ್ಷಪ್ರಶ್ನೆ!

ಯಾವುದೇ ಯೋಜನೆ ಕಾರ್ಯರೂಪಕ್ಕೆ ಬರಬೇಕಾದರೆ ಮೊದಲು ವಿಸ್ತೃತ ಯೋಜನಾ ವರದಿ ತಯಾರಿಸುವುದು ಕ್ರಮ. ಎತ್ತಿನಹೊಳೆ ಪ್ರಾಜೆಕ್ಟಿಗೆ ತಯಾರಿಸಿದ ಯೋಜನಾ ವರದಿಯಲ್ಲಿ ನೀರನ್ನು ಕುಡಿಯುವುದಕ್ಕಷ್ಟೇ ಅಲ್ಲದೆ ಬೆಂಗಳೂರು ನಗರದ ಕೈಗಾರಿಕಾ ಅಗತ್ಯಗಳಿಗೂ ಬಳಸಲಾಗುವುದು ಎನ್ನಲಾಗಿದೆ. ಅಂದರೆ ಇಲ್ಲಿ ಯೋಜನಾ ಉದ್ದೇಶವನ್ನು ಮರೆಮಾಚಿ ಜನರನ್ನು ಕತ್ತಲಲ್ಲಿಡಲಾಗಿದೆ ಎಂಬುದು ಸ್ಪಷ್ಟ. ಎತ್ತಿನಹೊಳೆಯಿಂದ ಎತ್ತಿದ ನೀರನ್ನು ಏಳು ಜಿಲ್ಲೆಗಳಿಗೆ ಹಂಚುವುದು ಹೇಗೆ? ಕೈಗಾರಿಕೆ ಮತ್ತು ಜನರ ದಿನಬಳಕೆ ಎರಡಕ್ಕೂ ಒಂದೇ ಮೂಲ ಎಂದಾಗ, ನೀರಿನ ಕೊರತೆಯಿರುವ ಸಂದರ್ಭದಲ್ಲಿ,ಕೈಗಾರಿಕೋದ್ಯಮಿ ನೋಟಿನ ಕಂತೆ ತೋರಿಸಿಯಾದರೂ ತನ್ನ ಪಾಲು ಗಿಟ್ಟಿಸಿಕೊಳ್ಳುತ್ತಾನೆ. ಮಹಾರಾಷ್ಟ್ರದಲ್ಲಿ ಬರದ ಪರಿಸ್ಥಿತಿ ಇರುವಾಗ ಕೋಕಾಕೋಲ ಕಂಪೆನಿಗೆ ನೀರು ಪೂರೈಕೆ ಯಾಕೆ ಎಂದು ಪ್ರಶ್ನಿಸಿದವರ ಮೇಲೆ ಕಂಪೆನಿ ತನ್ನ ಕಾರ್ಮಿಕರನ್ನೇ ಛೂ ಬಿಟ್ಟಿದ್ದು ಇನ್ನೂ ಹಸಿಯಾಗಿದೆ. ಅಂದರೆ ಕುಡಿಯುವ ನೀರಿನ ಪೂರೈಕೆಗಾಗಿ ಏಳು ಜಿಲ್ಲೆಗಳ ಜನ ಪರಸ್ಪರ ಕಚ್ಚಾಡುವ, ಬೀದಿಗಿಳಿಯುವ,ಹೋರಾಟ ನಡೆಸುವ ಗಂಭೀರ ಸಮಸ್ಯೆಯೂ ತಲೆದೋರಬಹುದು. ಅದೆಲ್ಲ ಬಿಡಿ; ಅಕ್ಟೋಬರ್ ನಂತರ ಈ ನದಿಯಲ್ಲಿ 9 ಟಿಎಂಸಿ ನೀರು ಸಿಗುವುದು ಕೂಡ ಕಷ್ಟ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳೇ ಹೇಳುತ್ತಿರುವಾಗ ಸರಕಾರ 24 ಟಿಎಂಸಿ ತೆಗೆಯುವುದು ಎಲ್ಲಿಂದ? ನೀರನ್ನು ಆಕಾಶದೆತ್ತರಕ್ಕೆ ಪಂಪ್ ಮಾಡಲು ಬೇಕಾದ ವಿದ್ಯುತ್ ಎಲ್ಲಿಂದ ಬರುತ್ತದೆ? ಈಗಾಗಲೇ ವಿದ್ಯುತ್ ಕೊರತೆಯಿಂದ ಬೇಯುತ್ತಿರುವ ಕರ್ನಾಟಕದಲ್ಲಿ ಮುಂದೆ ಇಡೀ ಬಜೆಟ್ ಭಾಷಣವನ್ನು ಕ್ಯಾಂಡಲ್ ಬೆಳಕಿನಲ್ಲಿ ಓದಬೇಕಾಗಬಹುದು. 13000 ಕೋಟಿ ರುಪಾಯಿ ಸುರಿದು ಈ ಯೋಜನೆ ಪೂರ್ತಿಗೊಳಿಸಲು ಸರಕಾರದ ಬಳಿ ದುಡ್ಡು ಎಲ್ಲಿದೆ ಎಂಬುದು ಎಲ್ಲಕ್ಕಿಂತ ಮುಖ್ಯ ಪ್ರಶ್ನೆ. ಪರಮಶಿವಯ್ಯನವರೇ ಹಿಂದೆ ಗುಂಡ್ಯ ಜಲವಿದ್ಯುತ್ ಯೋಜನೆ ಪ್ರಾರಂಭವಾದರೆ,ಎತ್ತಿನಹೊಳೆಯಿಂದ ನೀರೆತ್ತಿ ಗುರುತ್ವಬಲ ಬಳಸಿ ಸಾಗಿಸಲು ಸಾಧ್ಯವಿಲ್ಲ ಎಂದಿದ್ದರು. ಇಷ್ಟೆಲ್ಲ ಅಧ್ವಾನಗಳಿದ್ದರೂ ಯೋಜನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಯಾಕೆ ಯಾರೂ ಧೈರ್ಯ ತೋರುತ್ತಿಲ್ಲ?

ಪರಮಶಿವಯ್ಯನವರು ತನ್ನ ಬೆನ್ನು ತಾನೇ ತಟ್ಟಿಕೊಂಡಿದ್ದಂತೆ ಇದೇನೂ ವಿನೂತನ ಯೋಜನೆಯಲ್ಲ. 70ರ ದಶಕದಲ್ಲೇ ಕ್ಯಾಪ್ಟನ್ ದಸ್ತೂರ್ ಎಂಬವರು ಭಾರತದ ಇಕ್ಕೆಲಗಳಲ್ಲಿರುವ ರಾವಿ ಮತ್ತು ಬ್ರಹ್ಮಪುತ್ರ ನದಿಗಳನ್ನು ತಿರುಗಿಸಿ ಭರತಮಾತೆಗೆ ನೆಕ್ಲೇಸ್ ತೂಗುಹಾಕಬೇಕೆಂಬ ಯೋಜನೆ ಮುಂದಿಟ್ಟಿದ್ದರು. 1977ರಿಂದ2006ರವರೆಗೆ ನಡೆದ ತೆಲುಗು ಗಂಗಾ ಯೋಜನೆಯ ಕಾಮಗಾರಿಯಲ್ಲಿ ಕೃಷ್ಣಾ ನದಿಯನ್ನು ಕಾಲುವೆಯ ಮೂಲಕ ಚೆನ್ನೈಗೆ ಹರಿಸುವ ಪ್ರಯತ್ನ ಮಾಡಲಾಯಿತು. 15 ಟಿಎಂಸಿ ನೀರು ಸಿಗುತ್ತದೆಂಬ ಭಾರೀ ಭರವಸೆ ಕೊಟ್ಟು ಕೊನೆಗೆ ಚೆನ್ನೈ ತಲುಪಿದ್ದು 5ಟಿಎಂಸಿ ಮಾತ್ರ. ದೋಸೆ ಮಗುಚಿ ಹಾಕಿದಷ್ಟು ಸುಲಭವಾಗಿ ಲಕ್ಷಾಂತರ ಜನರನ್ನು ಒಕ್ಕಲೆಬ್ಬಿಸಿ ಓಡಿಸಬಲ್ಲ ಚೀನಾ ದೇಶದಲ್ಲೂ ದಕ್ಷಿಣದಿಂದ ಒಂದು ನದಿಯನ್ನು ಎರಡು ಸಾವಿರ ಮೈಲಿ ಉತ್ತರಕ್ಕೆ ಎಳೆದು,ಕೊನೆಗದು ಎಲ್ಲೂ ಸಲ್ಲದೆ ಕೊನೆಯುಸಿರೆಳೆಯುವಂತೆ ಮಾಡಲಾಯಿತು. ಪರಿಸರದ ಸೂಕ್ಷ್ಮ ಬಂಧದ ಬಗ್ಗೆ ನಯಾಪೈಸೆ ಗೊತ್ತಿಲ್ಲದೆ ಅಭಿವೃದ್ಧಿಯೆಂದರೆ ಇಟ್ಟಿಗೆ-ಸಿಮೆಂಟು ಎಂದು ಭಾವಿಸಿದವರು ಯೋಜನೆಗಳನ್ನು ರೂಪಿಸುವ ಜವಾಬ್ದಾರಿ ವಹಿಸಿಕೊಂಡಾಗ ಹೀಗಾಗುತ್ತದೆ. ಕರಾವಳಿಯ ದುರಂತವೆಂದರೆ ಇಲ್ಲಿ ಇಚ್ಛಾಶಕ್ತಿಯಿಂದ ಹೋರಾಡುವ ನಾಯಕರ ಕೊರತೆ ಸದಾ ಕಾಡುತ್ತದೆ. ಕರಾವಳಿಯವರಾಗಿಯೂ ಎತ್ತಿನಹೊಳೆಯನ್ನು ಬೆಂಬಲಿಸುವ ಎರಡು ಮಾಜಿ ಮುಖ್ಯಮಂತ್ರಿಗಳನ್ನು ಪಡೆದಿರುವ ಮಹಾದುರ್ದೈವಿ ಈ ಪ್ರದೇಶ. ಅಲ್ಲದೆ, ಯೋಜನೆಗೂ ಬೆಂಬಲಿಸುತ್ತೇನೆ ಹೋರಾಟಕ್ಕೂ ಬೆಂಬಲಿಸುತ್ತೇನೆ ಎಂದು ಒಂದೊಂದು ವೇದಿಕೆಯಲ್ಲಿ ಒಂದೊಂದು ಮಾತಾಡುವ ಜೆ.ಆರ್. ಲೋಬೋ ಥರದ ಅವಕಾಶವಾದಿ ಶಾಸಕರೂ ಇಲ್ಲಿ ಹೇರಳವಾಗಿದ್ದಾರೆ. ಹಾಗಾಗಿ, ತುಳುವರು ರಾಜಕಾರಣಿಗಳನ್ನೂ ಅವರ ಮರ್ಜಿಯನ್ನೂ ಅರಬ್ಬೀ ಸಮುದ್ರಕ್ಕೆಸೆದು ತಮ್ಮ ಪಾಡಿಗೆ ತಾವು ಜನಾಂದೋಲನ ರೂಪಿಸಿದರೆ ಬದುಕಿಯಾರು. ಈ ಯೋಜನೆಯಿಂದ ತಮ್ಮ ಜಿಲ್ಲೆಗಳಿಗೆ ಕುಡಿಯುವ ನೀರು ಸಿಗುವುದು ಅಷ್ಟರಲ್ಲೇ ಇದೆ; ಇದೆಲ್ಲವೂ ನೂರಾರು ಕೋಟಿಗಳನ್ನು ಬಾಚಲು ಪುಢಾರಿಗಳು ಹೂಡಿರುವ ತಂತ್ರವೆಂದು ಚಿಕ್ಕಬಳ್ಳಾಪುರ, ಕೋಲಾರ,ಬೆಂಗಳೂರು, ರಾಮನಗರದ ಜನರೂ ಅರ್ಥ ಮಾಡಿಕೊಳ್ಳಬೇಕು. ಸರಕಾರದ ಕಿವಿ ಹಿಂಡಬೇಕಾದ ಈ ಹೊತ್ತಿನಲ್ಲಿ ನಾವೆಲ್ಲರೂ ಮೌನವಾಗಿದ್ದರೆ ಇನ್ನೆರಡು-ಮೂರು ದಶಕದಲ್ಲಿ ಆಕಾಶದಲ್ಲಿ ಚಾಚಿದ ನೀರಿಲ್ಲದ ಬೃಹತ್ ಕೊಳವೆಗಳು ನಮ್ಮ ಹೆಡ್ಡತನವನ್ನೂ ಸ್ವಯಂಕೃತ ದುರಂತವನ್ನೂ ಅಣಕಿಸಿ ನಗುತ್ತಿರುತ್ತವೆ.

(ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಲೇಖನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಇನ್ನಷ್ಟು ಜನರಿಗೆ ತಲುಪಿಸುವ ಉದ್ದೇಶದಿಂದ ಲೇಖಕರ ಅನುಮತಿ ಪಡೆದು ರೀಡೂ ಕನ್ನಡದಲ್ಲಿ ಪ್ರಕಟಿಸಲಾಗಿದೆ)

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!