ಅಂಕಣ

ನಮ್ಮೊಳಗಿನ ಹೋರಾಟ

ಈ ಲೇಖನ, ನನ್ನ ಗೆಳೆಯನೊಬ್ಬನ ದಿನಚರಿಯಲ್ಲಾದ ಒಂದು ಚಿಕ್ಕ ಘಟನೆಯಿಂದ ಪ್ರಭಾವಿತವಾಗಿ ಬರೆದಿರುವುದು. ಕೆಲವೊಮ್ಮೆ ನಮ್ಮೊಡನೆ ಮೂರೋ ನಾಲ್ಕೋ ನಿಮಿಷ ಭೇಟಿಯಾಗಿ ಹೋಗುವ ಕೆಲವು ವ್ಯಕ್ತಿಗಳು ಮನದ ಕಡಲಿನಲ್ಲಿ ಎಂತಹ ಗೊಂದಲಗಳ ಅಲೆ ಎಬ್ಬಿಸುತ್ತಾರೆಂದರೆ, ಅದಕ್ಕೆ ಉತ್ತರ ಇಲ್ಲವೇ ತಕ್ಕ ಮಟ್ಟಿನ ಸಮಾಧಾನ ತಂದುಕೊಳ್ಳುವವರೆಗೆ ಮನಸ್ಸು ಅವಿಶ್ರಾಂತವಾಗುತ್ತದೆ. ಅಂತದೇ ಅವಿಶ್ರಾಂತ ಮನಸಿನ ತುಮುಲಗಳ ನಡುವಿನ ಹೋರಾಟದ ಪ್ರತಿನಿಧಿಯೇ ಈ ಲೇಖನ.

ಅಂದು ನನ್ನ ಗೆಳೆಯ ಹೋಗಿದ್ದದ್ದು ಒಂದು ಹೋಟಲ್ ಗೆ. ಅಲ್ಲಿ ಒಬ್ಬ ಪುಟ್ಟ ಹುಡುಗ ಕೆಲಸ ಮಾಡುತ್ತಿದ್ದನಂತೆ. ಅದೇಕೋ ಆ ಹುಡುಗನನ್ನೊಮ್ಮೆ ಮಾತನಾಡಿಸಬೇಕೆಂಬ ಕುತೂಹಲ ನನ್ನ ಗೆಳೆಯ ಹಾಗೂ ಅವನ ಸಂಗಡಿಗರಿಗೆ. ಅವನನ್ನು ಕರೆದು ಕೇಳಿದರಂತೆ “ಏನಪ್ಪಾ, ಯಾಕೆ ಇಲ್ಲಿ; ಅದೂ ಇಷ್ಟು ಚಿಕ್ಕ ವಯಸ್ಸಿನಲ್ಲಿ ಕೆಲಸ ಮಾಡ್ತಾ ಇದ್ದೀಯಾ?” ಎಂದು. ಆತ ಸ್ವಾಭಿಮಾನಿ, ಮೊದಮೊದಲು ಉತ್ತರಿಸಲು ಹಿಂಜರಿದ. ಕೊನೆಗೆ ಸ್ವಲ್ಪ ಒತ್ತಾಯಿಸಿದಾಗ ಆತ ಹೇಳಿದ್ದು ಇಷ್ಟು.
ಅವನ ಊರು ಗಂಗಾವತಿ. ಮನೆಯಲ್ಲಿ ಆತನೊಬ್ಬನೇ ದುಡಿಯುವ ವ್ಯಕ್ತಿ. ತಂದೆ ಈಗಾಗಲೇ ತೀರಿಕೊಂಡಿದ್ದಾರೆ ದಿನಕ್ಕೆ ೨ ಹೊತ್ತಿನ ಊಟಕ್ಕೊಸ್ಕರ ಆತನ ಒದ್ದಾಟ. ಇವೆಲ್ಲದರ ನಡುವೆ ತಮ್ಮನ ಓದಿನ ಜವಾಬ್ದಾರಿ. ಅಬ್ಬಾ!!! ಅವನ ಪ್ರಕಾರ ಈ ದಿನಚರಿಯೇ ಒಂದು ಹೋರಾಟ. ತನ್ನ ಕುಟುಂಬದ ಅಸ್ತಿತ್ವದ ಉಳಿವಿಗಾಗಿ ನಡೆಸುತ್ತಿರುವ ಹೋರಾಟ. ಅದು ನಿಜವೂ ಕೂಡ. ಅವನ ಸ್ಥಾನದಲ್ಲಿ ನಿಂತು ನೋಡಿದಾಗ, ಅವನ ಪ್ರತಿ ಕ್ಷಣ ಕೂಡ ಕಾಣುವುದು ಹೋರಾಟವಾಗಿಯೇ.
ಇನ್ನು ಸ್ವಲ್ಪ ಮುಂದುವರಿದು ಅಲ್ಲಿ ವಿಚಾರಿಸಿದಾಗ ತಿಳಿದುಬಂದ ವಿಷಯ ಇನ್ನೂವಿಷಾದನೀಯವಾಗಿತ್ತು. ಅದೇನೆಂದರೆ ಆತನಿಗೆ ಅಲ್ಲಿ ತಿಂಗಳಿಗೋ ಅಥವಾ ದಿನಕ್ಕೋ ಒಂದಿಷ್ಟು ಸಂಬಳ ಎಂದು ಖಚಿತ ಮೊತ್ತವೇ ಇಲ್ಲವಂತೆ. ಇದನ್ನು ಕೇಳಿದಾಗಂತೂ ಅಯ್ಯೋ ದೇವರೆ, ಇದೆಂತಹ ಹೋರಾಟ ಅನಿಸಿತು.

ಹೀಗೆ ಈ ಹೋರಾಟದ ಕುರಿತಾಗಿ ವಿಶ್ಲೇಷಿಸತೊಡಗಿದಾಗ ನನ್ನೊಳಗಿನ ನನ್ನಲ್ಲಿ ಒಂದಷ್ಟು ಯೋಚನೆಗಳ ಲಹರಿ ಹರಿದಾಡತೊಡಗಿತು. ಈ ಬದುಕು ಒಂದು ಹೋರಾಟ ಎಂದನಲ್ಲ; ಅದು ಎಲ್ಲರ ವಿಚಾರದಲ್ಲೂ ನಿಜವೇ ಅಥವಾ ಅವನಿಗೆ ಮಾತ್ರವೇ? ಎಲ್ಲರ ವಿಚಾರದಲ್ಲೂ ಬದುಕು ಒಂದು ಹೋರಾಟ ಎಂದಾದರೆ, ನಾನೂ ಹೋರಾಡುತ್ತಿದ್ದೇನೆಯೇ? ಅವನದ್ದು ದಿನದ ಊಟಕ್ಕೋಸ್ಕರ, ತಮ್ಮನ ಓದಿಗೋಸ್ಕರದ ಹೋರಾಟವಾದರೆ ನನ್ನ ಹೋರಾಟ ಯಾವುದಕ್ಕೆ? ಹೀಗೆ ಒಂದಷ್ಟು ಹೊಸ ಹೊಸ ಪ್ರಶ್ನೆಗಳು ಇದ್ದಕ್ಕಿದ್ದಂತೆ ಮನದಲ್ಲಿ ಜಾಗ್ರತವಾದವು. ಈ ಪ್ರಶ್ನೆಗಳ ಉತ್ತರದ ಹುಡುಕಾಟದ ಅಂತರ್ಮುಖಿ ಪಯಣ ಆರಂಭವಾಗಿತ್ತು.

ಜೀವನದ ಸಂದರ್ಭಗಳು ಪ್ರತಿಯೊಬ್ಬರನ್ನೂ ಒಂದಲ್ಲ ಒಂದು ರೀತಿಯ ಹೋರಾಟಕ್ಕೆ ಧುಮುಕುವಂತೆ ಮಾಡುತ್ತವೆ. ಮಗನೊಬ್ಬ ಮನೆಯ ಸಾಲದ ಹೊರೆಯ ತಗ್ಗಿಸಲು ತನ್ನ ಉನ್ನತ ವ್ಯಾಸಂಗದ ಕನಸನ್ನು ಬದಿಗೊತ್ತಿ, ಈ ಸಾಲ ತೀರಿಸುವ ಹೋರಾಟಕ್ಕೆ ಧುಮುಕುತ್ತಾನೆ. ಮನೆಯ ಹಿರಿಮಗಳೊಬ್ಬಳು ತಮ್ಮ-ತಂಗಿಯರಿಗಾಗಿ ತನ್ನ ಮದುವೆಯನ್ನು ಮುಂದೂಡುತ್ತಾ ಕುಡುಕ ಅಪ್ಪ ಹೊರಬೇಕಾಗಿದ್ದ ಜವಾಬ್ದಾರಿಯನ್ನು ತಾನು ಹೊತ್ತಿದ್ದಾಳೆ. ಮಗನ ಉಜ್ವಲ ಭವಿಷ್ಯದ ಕನಸೊಂದು ಅಪ್ಪನೊಬ್ಬನನ್ನು ಗಂಟೆಗಳ ಲೆಕ್ಕವಿಲ್ಲದೆ ದುಡಿಯುವ ಹೋರಾಟಕ್ಕೆ ಪ್ರೇರೇಪಿಸಿದೆ. ಮನೆಯವರೆಲ್ಲರಿಗೆ ಊಟ ಬಡಿಸಿದ ತಾಯಿಯೊಬ್ಬಳು, ಹಸಿವಿನೊಂದಿಗೆ ತನ್ನ ಹೋರಾಟ ಆರಂಭಿಸುತ್ತಾಳೆ. ಬಾಳಸಂಗಾತಿಯ ಅಗಲಿಕೆಯಿಂದ ನೊಂದು ಈ ಜಗತ್ತನ್ನೇ ತ್ಯಜಿಸ ಹೊರಟವಳು, ತನ್ನ ಪುಟ್ಟ ಮಗುವಿನ ನಗುವ ಕಾಯಲು ಮತ್ತೆ ಈ ಜೀವನಚಕ್ರದ ಹೋರಾಟಕ್ಕೆ ಧುಮುಕುತ್ತಾಳೆ. ಇತ್ತ ಒಬ್ಬ ಸಾಫ್ಟವೇರ್ ಇಂಜಿನಿಯರ್ ಅದೇನೇನೋ ಆಗುವ ಕನಸು ಕಾಣುತ್ತ, ಕೀಬೋರ್ಡ್ ಮತ್ತು ಕೈಬೆರಳುಗಳ ನಡುವಿನ ನಿರಂತರ ಹೋರಾಟವನ್ನು ಮುಂದುವರೆಸಿದ್ದಾನೆ. ಕೂಲಿ ಕಾರ್ಮಿಕನೊಬ್ಬನಿಗೆ ಸ್ಮಾರ್ಟ್ ಫೋನ್ ಕೊಳ್ಳುವ ಬಯಕೆ. ಅದಕ್ಕಾಗಿಯೇ ಒಂದಷ್ಟು ಹೊತ್ತು ಜಾಸ್ತಿ ದುಡಿಯುವ ನಿರ್ಧಾರ ಮಾಡಿದ್ದಾನೆ. ಹೀಗೆ ಪ್ರತಿಯೊಬ್ಬರೂ ಅರಿವಿದ್ದೋ ಇಲ್ಲದೆಯೋ ತಮ್ಮದೇ ಆದ ಒಂದೊಂದು ಹೋರಾಟವನ್ನು ನಡೆಸುತ್ತಲೇ ಇರುತ್ತಾರೆ. ಇವೆಲ್ಲವುಗಳನ್ನು ಆಲೋಚಿಸುವಾಗ, ನಿಜ; ಆ ಪುಟ್ಟ ಹುಡುಗ ಹೇಳಿದಂತೆ ಈ ಬದುಕೊಂದು ಹೋರಾಟವೇ ಎನಿಸಿತು.

ಈ ಹೋರಾಟ ಅನಿವಾರ್ಯವೇ? ಇದಕ್ಕೆ ಯಾವುದೇ ಪರ್ಯಾಯವಿಲ್ಲವೇ? ಬಹುಷಃ ಇಲ್ಲ. ಏಕೆಂದರೆ, ನಮಗಾಗಿ ಅಥವಾ ನಮ್ಮವರಿಗಾಗಿ ಈ ಹೋರಾಟದ ಅಖಾಡಕ್ಕೆ ಧುಮುಕದೇ ಇದ್ದರೆ, ಈ ಧರಣಿಯಲ್ಲಿ ನಾವು ಕಳೆವ ಕ್ಷಣಗಳಿಗೊಂದು ಸಾರ್ಥಕತೆ ಸಿಗಲಾರದು ಅನಿಸುತ್ತದೆ ನನಗೆ. ಕೆಲವೊಮ್ಮೆ ಪರಿಸ್ಥಿತಿ ತೀರಾ ಹದಗೆಟ್ಟು ಈ ಜಂಜಾಟಗಳನ್ನೆಲ್ಲ ತ್ಯಜಿಸಿ ಸನ್ಯಾಸಿಯಂತೆ ಶಾಶ್ವತ ಸುಖವನ್ನರಸಿ ಹೋಗೋಣ ಎಂದು ಕೆಲವರಿಗೆ ಅನಿಸಿದರೂ ಅನಿಸಬಹುದು. ಆದರೆ ಗೆಳೆಯರೆ, ಶಾಶ್ವತ ಸುಖ ಇರುವುದು ಸಮಸ್ಯೆಗಳನ್ನುಎದುರಿಸಿ ಗೆದ್ದು ಬರುವುದರಲ್ಲಿಯೇ ಹೊರತು ಎಲ್ಲವನ್ನು ಬಿಟ್ಟು ಓಡಿಹೋಗುವುದರಲ್ಲಲ್ಲ. “ಇಲ್ಲಿ ಈಸಬೇಕು, ಇದ್ದು ಜಯಿಸಬೇಕು”. ಆಗ ಮಾತ್ರವೇ ಬದುಕಿಗೊಂದು ಅರ್ಥ ಬರಲು ಸಾಧ್ಯ. ನಾವು ಕಂಡ ಕನಸುಗಳು ನನಸಾದಾಗ ಅಥವಾ ನಮ್ಮ ಬಯಕೆಗಳು ಕೈಗೂಡಿದಾಗ ಅಥವಾ ನಮ್ಮವರಿಗೋಸ್ಕರ ನಾವು ಪಟ್ಟ ಶ್ರಮ ಫಲಿಸಿ ಅವರ ಮೊಗದಲ್ಲಿ ಒಂದು ಸಂತಸದ ನಗು ಮೂಡಿದಾಗ ಉಂಟಾಗುವ ಆತ್ಮತೃಪ್ತಿಯಿಂದ ಆಗಸದೆತ್ತರಕ್ಕೆ ಮನಸು ಜಿಗಿಯುವ ಅನುಭವವೇ ರೋಮಾಂಚಕ. ಇದೇ ರೋಮಾಂಚಕ ಅನುಭವಕ್ಕಾಗಿಯೇ ನಾವೆಲ್ಲರೂ ಹೋರಾಟಕ್ಕಿಳಿಯುವುದು.

ನನ್ನ ಪ್ರಕಾರ ಯಾವುದೇ ವ್ಯಕ್ತಿ ಈ ಮೊದಲು ವಿವರಿಸಿದಂತಹ ಒಂದು ಭೌತಿಕ ಹೋರಾಟಕ್ಕೆ ಇಳಿಯುವ ಮೊದಲು ವ್ಯಕ್ತಿಯ ಒಳಗೊಂದು ಹೋರಾಟ ನಡೆಯುತ್ತದೆ. ವ್ಯಕ್ತಿಯ ಭೌತಿಕ ಹೋರಾಟದ ಯಶಸ್ಸು ಆತನ ಆಂತರಿಕ ಹೋರಾಟದಲ್ಲಿ ಕೈಗೊಳ್ಳುವ ನಿರ್ಧಾರಗಳ ಮೇಲೆ ಅವಲಂಬಿತವಾಗಿರುತ್ತದೆ.  ಉದಾಹರಣೆಗೆ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಜವಾಬ್ದಾರಿ ಹೊರುವ ನಿರ್ಧಾರ ಮಾಡಿ ಉನ್ನತ ವ್ಯಾಸಂಗದ ಕನಸನ್ನು ಕೈಚೆಲ್ಲುವ ಸಂದರ್ಭದಲ್ಲಿ ಒಬ್ಬ ಹುಡುಗನ ಮನದೊಳಗಾಗುವ ಕೋಲಾಹಲ ಬಹುಷಃ ಅವನಿಗೆ ಮಾತ್ರ ಅರ್ಥವಾಗಬಲ್ಲದು. ಕಾರಣ, ಉನ್ನತ ವ್ಯಾಸಂಗ ಅದೆಷ್ಟೋ ದಿನಗಳ ಕನಸು. ಅದಕ್ಕೋಸ್ಕರ ಆತ ಅದೆಷ್ಟೋ ಅಧ್ಯಯನ ಮಾಡಿದ್ದಾನೆ. ಹಾಗಾಗಿ ಆ ಕನಸಿನ ಬೇಟೆಯಿಂದ ವಿಮುಖನಾಗುವುದು ಸುಲಭದ ವಿಚಾರವಂತೂ ಅಲ್ಲ. ಹಾಗೆಂದು ಮನೆಯವರೆಲ್ಲರನ್ನು ಕಷ್ಟಕ್ಕೀಡು ಮಾಡುವ ಮನಸ್ಸು ಯಾರಿಗೂ ಇರುವುದಿಲ್ಲ. ಹಾಗೆಯೇ ಕುಡುಕ ಅಪ್ಪನ ಕಾರಣಕ್ಕಾಗಿ, ಮನೆಯ ಜವಾಬ್ದಾರಿ ಹೊರುವ ನಿರ್ಧಾರ ಕೈಗೊಳ್ಳುವ ಮಗಳೊಬ್ಬಳ ಮನದಲ್ಲಿ ಅದಿನ್ನೆಂತ ಹೋರಾಟ ನಡೆದಿರಬಹುದಲ್ಲವೇ? ಒಂದು ರೀತಿ ಆಲೋಚಿಸಿದರೆ, ಅದು ಅವಳಿಗೆ ಅನಿವಾರ್ಯ ಕೂಡ ಅಲ್ಲ. ಆದರೆ ಅಲ್ಲಿ ತನ್ನವರು ಎನ್ನುವ ಮಮತೆ ಅವಳ ಆಂತರಿಕ ಹೋರಾಟದಲ್ಲಿ ಜಯ ಸಾಧಿಸುತ್ತದೆ. ಇವೆರಡು ಉದಾಹರಣೆಗಳಷ್ಟೇ. ಇಂತಹ ವಿರುದ್ಧ ದಿಕ್ಕಿನಲ್ಲಿ ಸಾಗುವ ಎರಡು ಹಾದಿಗಳಲ್ಲಿ ಒಂದನ್ನು ಆಯ್ಕೆ ಮಾಡುವ ಸಂದರ್ಭ ಪ್ರತಿಯೊಬ್ಬರ ಜೀವನದಲ್ಲೂ ಬೇಡವೆಂದರೂ ಎದುರಾಗುತ್ತದೆ. ಆ ಕ್ಷಣದಲ್ಲಿ ಮನದ ಭಾವಗಳ ನಡುವೆ ನಡೆಯುವ ಹೋರಾಟ ಹಾಗೂ ಕೊನೆಯಲ್ಲಿ ಕೈಗೊಳ್ಳುವ ನಿರ್ಧಾರ ಬದುಕಿನ ದಿಕ್ಕನ್ನೇ ಬದಲಿಸಬಲ್ಲದು. ಹಾಗೆಯೇ ಈ  ಬದಲಾದ ಬದುಕಿನಲ್ಲೂ, ಬದಲಾಯಿಸುವಾಗ ನಡೆದ ಹಲವಾರು ಕನಸುಗಳ ಹಾಗೂ ಬಯಕೆಗಳ ಸಾವು-ನೋವುಗಳು ಮತ್ತೆ ಮತ್ತೆ ಕಾಡುತ್ತ ವ್ಯಕ್ತಿಯನ್ನು ವಿಚಲಿತಗೊಳಿಸುತ್ತವೆ. ಆ ಮೂಲಕ  ಕೋಲಾಹಲದ ಅಲೆಗಳು ನಿರಂತರವಾಗಿ ಮನದ ದಡಕ್ಕೆ ಬಡಿಯುವಂತೆ ಮಾಡುತ್ತವೆ.

ಇನ್ನೊಂದು ರೀತಿಯಲ್ಲಿ ನಮ್ಮೊಳಗೆ ನಡೆಯುವ ಹೋರಾಟವಿದೆ. ಅದೇನೆಂದರೆ, ನಾವೇ ಬಯಸಿ ಕೆಲವೊಂದು ಆಯ್ಕೆಗಳನ್ನು ಬದುಕಲ್ಲಿ ಮಾಡಿರುತ್ತೇವೆ. ದಿನಕಳೆದಂತೆ ಯಾವದೋ ಕಾರಣಕ್ಕೆ ನಮ್ಮ ಆಯ್ಕೆ ತಪ್ಪು ಎನಿಸಲು ಆರಂಭವಾಗುತ್ತದೆ. ಆದರೆ ಆಗ ನಮ್ಮಲ್ಲಿ ಬೇರೆ ಆಯ್ಕೆಗಳಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಮನದ ಕಡಲಲ್ಲಿ ಕೋಲಾಹಲದ ಅಲೆಗಳು ಏಳಲು ಶುರುವಾಗುತ್ತದೆ. ಹೊರಗಿನ ಪ್ರಪಂಚಕ್ಕೆ ಅದು ಕಾಣಿಸುವುದಿಲ್ಲ. ಸಮಾಜದ ಕಣ್ಣಿಗೆ ನಾವು ಅದೃಷ್ಟವಂತರು, ಕಾರಣ ಸಮಾಜದ ಪ್ರಕಾರ ನಾವು ಬದುಕುತ್ತಿರುವುದು ನಮ್ಮ ಆಯ್ಕೆಯ ಬದುಕು. ಆದರೆ ಆಯ್ಕೆ ತಪ್ಪಾದ ವಿಚಾರ ಸಮಾಜದ ಕಣ್ಣಿಗೆ ಕಾಣಿಸುವುದಿಲ್ಲ. ಈ ವಿಚಾರವನ್ನು ಬಹಿರಂಗಗೊಳಿಸಲು ನಮಗೆ ಸ್ವಪ್ರತಿಷ್ಠೆ ಅಡ್ಡಬತುತ್ತದೆ. ಹಾಗಾಗಿ ಅಲ್ಲಿಂದ ಮುಂದಿನ ಬದುಕು “ಸಮಾಜ ಏನೆನ್ನುವುದೋ…?” ಎಂಬ ಭಯದಲ್ಲಿಯೇ ಸಾಗುತ್ತದೆ. ಹೀಗೆ ಅರೆಮನಸ್ಸಿನಿಂದ ಬಯಸದ ಪ್ರಸ್ತುತತೆಗೆ ಹೊಂದಿಕೊಂಡು ದಿನ ದೂಡುವುದು ಕೂಡ ಹೋರಾಟವೇ. ಎದೆಯೊಳಗೆ ಭಾವಗಳೆಲ್ಲ ನಿರ್ಜೀವವಾಗಿದ್ದರೂ ಮೊಗದಲ್ಲೊಂದು ನಗು ಬರಿಸಿಕೊಳ್ಳಬೇಕಾಗುತ್ತದೆ. ಆ ನಮ್ಮ ನಗು ನಮ್ಮನ್ನೇ ಅಣಕಿಸುತ್ತಿರುತ್ತದೆ. ಆಗ ನಮ್ಮನ್ನಣಕಿಸುವ ನಮ್ಮದೇ ನಗುವನ್ನು ಸಹಿಸುವುದು ಇನ್ನೊಂದೇ ಬಗೆಯ ಹೋರಾಟವಾಗಿ ಬಿಡುತ್ತದೆ.

ಹೀಗೆ ಗೆಳೆಯರೆ… ಬದುಕು ಎನ್ನುವುದು ವಿಚಿತ್ರ, ವಿಶೇಷ, ವಿಭಿನ್ನ ಸನ್ನಿವೇಷಗಳ ಕಥಾನಕ. ಈ ಕಥಾನಕದಲ್ಲಿ ಪಾತ್ರ ವಹಿಸುವಾಗ ಆ ನಿರ್ದೇಶಕ ಕೊಡುವ ಪಾತ್ರಕ್ಕೆ ತಕ್ಕ ಬಣ್ಣ ಬಳಿದುಕೊಂಡು ಅದಕ್ಕೆ ನ್ಯಾಯ ಒದಗಿಸುವುದು ನಮ್ಮ ಕೆಲಸ. ಪಾತ್ರಗಳು ಬದಲಾಗಬಹುದು, ಬದಲಾಗುತ್ತಿದ್ದರೆ ಒಳ್ಳೆಯದೇ. ಕಾರಣ, ಹೀಗೆ ಬದಲಾಗುತ್ತಾ ಸಾಗುವಾಗ ಯಾವುದೋ ಒಂದು ದಿನ ನಮ್ಮ ಇಷ್ಟದ ಪಾತ್ರವೇ ಸಿಗಬಹುದು; ನಮ್ಮ ಕೀರ್ತಿ ಆಗಸದೆತ್ತರಕ್ಕೆ ಬೆಳೆಯಬಹುದು. ಆದರೆ ಇಷ್ಟವಿಲ್ಲದ ಪಾತ್ರವೆಂದು ಪರದೆಯಿಂದ ಹಿಂದೆ ಸರಿದರೆ ಮಾತ್ರ, ಬದುಕು ಕತ್ತಲೆಯಲ್ಲಿ ಕಳೆದು ಹೋಗಬಹುದು. ಹಾಗಾಗಿ ದಿನವೂ ಹೊಸ ಹೊಸ ಬಣ್ಣ ಬಳಿದುಕೊಳ್ಳೋಣ, ವಹಿಸುವ ಪಾತ್ರಗಳಲ್ಲಿ ಹೊಸತನ್ನು ಅನ್ವೇಶಿಸೋಣ, ನಮ್ಮತನವನ್ನು ಕಾಪಾಡಿಕೊಂಡು ಸಂದರ್ಭಗಳಿಗೆ ಹೊಂದಿಕೊಳ್ಳೋಣ. ಆ ಮೂಲಕ ನಮ್ಮೊಳಗಿನ ನಿರಂತರ ಹೋರಾಟದಲ್ಲಿ ಜಯ ಸಿಗುತ್ತದೋ ಇಲ್ಲವೋ ಅರಿಯೆ, ಅದರೆ ಹಿಮ್ಮುಖವಾಗಿ ಹೇಡಿಯಂತೆ ಓಡಲಿಲ್ಲ ಎಂಬ ಸಂತೃಪ್ತಿಯ ನಗು ನಮ್ಮನ್ನು ಅಣಕಿಸುವ ನಗುವನ್ನು ಮೀರಿ ನಿಲ್ಲಲಿ ಎನ್ನುವುದು ಈ ಲೇಖನದ ಆಶಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Gunaga

ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ.
ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!