Featured ಅಂಕಣ

ದೇಶದ್ರೋಹಿಗಳನ್ನಾದರೂ ಬೆಂಬಲಿಸಬಹುದು, ದೇಶ ಕಾಯುವ ಪೋಲೀಸರನ್ನಲ್ಲ!

ಇತ್ತೀಚೆಗೆ ಆರು ತಿಂಗಳ ಹಿಂದೆ ನಡೆದ ಆ ಘಟನೆ ಇನ್ನೂ ನಮ್ಮ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಇದೆ. ತಮ್ಮ ಮೆಚ್ಚಿನ ಹಿರಿಯ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ, ಅದನ್ನು ತಡೆ ಹಿಡಿಯಬೇಕೆಂಬ ಬೇಡಿಕೆಯನ್ನು ಹಿಡಿದುಕೊಂಡು ಮಂಗಳೂರಿನ ಪೋಲೀಸ್ ಠಾಣೆಯೊಂದರ ಸಿಬ್ಬಂದಿಗಳು ಹಠಾತ್ತನೆ ಪ್ರತಿಭಟನೆ ನಡೆಸಿದರು. ಪೋಲೀಸ್ ಇಲಾಖೆಯ ಇತಿಹಾಸದಲ್ಲಿಯೇ, ಹಿರಿಯ ಅಧಿಕಾರಿಯ ವರ್ಗಾವಣೆಯನ್ನು ರದ್ದು ಮಾಡಬೇಕೆಂದು ನಡೆದ ಆ ಮೊದಲ ಪ್ರತಿಭಟನೆ ರಾಜ್ಯಾದ್ಯಂತ ಸುದ್ದಿ ಮಾಡಿತ್ತು.  ಪೋಲೀಸರ ಪ್ರತಿಭಟನೆಗೆ ಮಣಿದ ಸರಕಾರ ವರ್ಗಾವಣೆಯನ್ನು ರದ್ದು ಮಾಡಿತಾದರೂ ತಿಂಗಳ ಬಳಿಕ ಮತ್ತೆ ಅದೇ ಅಧಿಕಾರಿಯನ್ನು ವರ್ಗ ಮಾಡಿಯೇ ತೀರಿತು. ಸಾಲದ್ದಕ್ಕೆ ಆವತ್ತು ಪ್ರತಿಭಟನೆಯನ್ನು ಮಾಡಿದ ಇತರರನ್ನೂ ಸಹ ಶಿಸ್ತು ಕ್ರಮದ ನೆಪದಲ್ಲಿ ವರ್ಗಾವಣೆ ಮಾಡಿತು. ಬಿಡಿ, ಅದೀಗ ಹಳೇಯ ವಿಚಾರ. ಹೊಸ ವಿಚಾರವೇನೆಂದರೆ, ಹಳೇಯ ಪ್ರತಿಭಟನೆ ನಮ್ಮ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ಬೃಹತ್ ಪ್ರತಿಭಟನೆಗೆ ಪೋಲೀಸ್ ಇಲಾಖೆ ಮುಂದಾಗಿದೆ.

ವಿಷಯ ಈಗಾಗಲೇ ವೈರಲ್ ಆಗಿರುವುದರಿಂದ  ನೀವು ಇದರ ಬಗ್ಗೆ ತಿಳಿದೇ ಇರುತ್ತೀರ. ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯ, ರಾಜಕೀಯ ಹಸ್ತಕ್ಷೇಪ, ವೇತನ ತಾರತಮ್ಯ ಮುಂತಾದ ವಿಷಯಗಳನ್ನಿಟ್ಟುಕೊಂಡು ರಾಜ್ಯಾದ್ಯಂತ ಪ್ರತಿಭಟಿಸಲು ಪೋಲೀಸರು ನಿರ್ಧರಿಸಿದ್ದಾರೆ. ಪೋಲೀಸರ ಇ ಪ್ರತಿಭಟನೆಗೆ ಸಾರ್ವಜನಿಕರಿಂದಲೂ ಉತ್ತಮ ಬೆಂಬಲ ವ್ಯಕ್ತವಾಗಿರುವುದಾರಿಂದ ತಲೆ ಕೆಡಿಸಿಕೊಂಡಿರುವ ಸರಕಾರ ಶತಾಯ ಗತಾಯ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನ ನಡೆಸಿದೆ.

ಆದರೆ, ಷಿಸ್ತು ಮತ್ತು ಸನ್ನಡತೆಗೆ ಹೆಸರಾಗಿರುವ ಪೋಲೀಸರು ಪ್ರತಿಭಟಿಸುವ ಹಾಗಿಲ್ಲ ಎನ್ನುವ ನಿಯಮವಿದೆ. ಸಮಸ್ಯೆಗಳಿರಲೀ, ಇಲ್ಲದರಲಿ, ಅದನ್ನು ಒಳಗೋಳಗೆಯೇ ಪರಿಹರಿಸಿಕೊಳ್ಳಬೇಕೇ ವಿನಹ ಸಾರ್ವಜನಿಕವಾಗಿ ಪ್ರತಿಭಟಿಸುವ ಹಕ್ಕು ಪೋಲೀಸರಿಗಿಲ್ಲ. ವೇತನ ತಾರತಮ್ಯವಿದ್ದರೆ ಸರಕಾರೀ ನೌಕರರು ಪ್ರತಿಭಟಿಸಬಹುದು. 108 ಸೇವೆಯ ನೌಕರರು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟಿಸಬಹುದು, ಸರಕಾರೀ ವೈದ್ಯರೂ ಬೀದಿಗಿಳಿಯಬಹುದು. ಮೌಲ್ಯಮಾಪನಕ್ಕೆ ನೀಡುತ್ತಿರುವ ಹಣ ಕಡಿಮೆಯಾಯಿತೆಂಬ ಕಾರಣಕ್ಕೆ ಉಪನ್ಯಾಸಕರು ಮೌಲ್ಯ ಮಾಪನವನ್ನೇ ಬಹಿಷ್ಕರಿಸಬಹುದು. ಪ್ರತಿಭಟನೆಯ ನೆಪದಲ್ಲಿ  ವಕೀಲರು ಬೆಂಗಳೂರಿನಲ್ಲಿ ದಾಂಧಲೆ ನಡೆಸಬಹುದು. ಮಾಧ್ಯಮಗಳೂ ಸಹ ಬೀದಿಗಿಳಿಯಬಹುದು. ಕೆ.ಎಸ್. ಆರ್.ಟಿ.ಸಿ ನೌಕರರು ಬಸ್ ಬಂದ್ ಮಾಡಿ ತಮ್ಮ ಹಕ್ಕೊತ್ತಾಯವನ್ನು ಮಂಡಿಸಬಹುದು. ಹೀಗೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ  ಸರಕಾರದ ವಿವಿಧ  ವಿಭಾಗಗಳಲ್ಲಿ ಕೆಲಸ ಮಾಡುವ ಯಾರು ಬೇಕಾದರೂ ಪ್ರತಿಭಟನೆಯನ್ನು ಮಾಡಬಹುದು, ಶಿಸ್ತಿಗೆ ಹೆಸರಾಗಿವ ಪೋಲೀಸರನ್ನು ಹೊರತುಪಡಿಸಿ!

ಸುಮ್ಮನೇ ಒಮ್ಮೆ ಯೋಚಿಸೋಣ. ಪೋಲೀಸರು ನೋಡುವುದಕ್ಕೆ ಅದೆಷ್ಟು ಒರಟರಂತೆ ಕಂಡರೂ  ಅವರೂ ಸಹ ನಮ್ಮಂತೆಯೇ ಮನುಷ್ಯರೇ. ಅವರಿಗೂ ಮನಸ್ಸೆಂಬುದಿದೆ. ಅವರಿಗೂ ನಮ್ಮಂತೆಯೇ ಮನೆ ಮಠ ಎಂದುದಿರುತ್ತದೆ.ವಾರದಲ್ಲೊಮ್ಮೆಯಾದರೂ ಮನೆಯವರೊಂದಿಗೆ ಸಂತೋಷದಿಂದ ಕಾಲ ಕಳೆಯುವ ಆಸೆ ಅವರಿಗೂ ಇದ್ದೇ ಇರುತ್ತದೆ. ಪೋಲೀಸರು ಎಂದ ಮಾತ್ರಕ್ಕೆ ಅವರೇನು ಸರ್ವ ಸಂಘ ಪರಿತ್ಯಾಗಿಗಳಲ್ಲ ಅಲ್ವಾ? ಆದರೆ, ಪ್ರಸ್ತುತ ವಾತಾವರಣದಲ್ಲಿ ಒಬ್ಬ ಸಾಮಾನ್ಯ ಪೋಲೀಸ್’ಗೆ ಇದಕ್ಕೆಲ್ಲ ಮುಕ್ತವಾದ ಅವಕಾಶ ಸಿಗುತ್ತಿದೆಯಾ? ತಮ್ಮ ಜೀವನವನ್ನು ಆನಂದದಿಂದ ಸಾಗಿಸುವಂತಹಾ ವಾತಾವರಣ ಇಲಾಖೆಯೊಳಗಡೆ ಇದೆಯಾ? ಇತ್ತೀಚೆಗಿನ ದಿನಗಳಲ್ಲಿ ಇಲಾಖೆಯೊಳಗೆ ನಡೆದ ಕೆಲವು ಘಟನೆಗಳನ್ನು ನೋಡಿದರೆ “ಇಲ್ಲ” ಅಂತ ಎದೆಯೆತ್ತಿ ಹೇಳಬಹುದು.

ಅಷ್ಟಕ್ಕೂ ಪೋಲೀಸರ್ಯಾಕೆ ಪ್ರತಿಭಟಿಸಬಾರದು? ಮಲ್ಲಿಕಾರ್ಜನ ಬಂಡೆಯಂತಹ ಧೈರ್ಯವಂತ ಅಧಿಕಾರಿಗಳನ್ನು ಇಲಾಖೆಯೋಳಗೆಯೇ ಸಂಚು ಮಾಡಿ ಕೊಂದಾಗಲೂ ಪ್ರತಿಭಟಿಸಬಾರದೇ? ಬಂಡೆಯವರಿಗೆ ಬಂದಂತಹ ಪರಿಸ್ಥಿತಿ ಇತರ ಪೋಲೀಸರಿಗೂ ಬರಬಹುದು, ಅದರಿಂದ ಜಾಗರೂಕಗೊಳ್ಳುವುದಕ್ಕಾದರೂ ಪ್ರತಿಭಟಿಸಬಾರದಾ? ಅನುಪಮ ಶೆಣೈ ಎನ್ನುವ ಮಹಿಳಾ ಡಿ ವೈ.ಎಸ್.ಪಿ ಯನ್ನು ಪರಮೇಶ್ವರ ನಾಯಕ್ ಎನ್ನುವ ನಾಲಾಯಕ್ ಸಚೀವರು ತಮ್ಮ ಪ್ರಭಾವ ಬಳಸಿ ಅನ್ಯಾಯವಾಗಿ ಎತ್ತಂಗಡಿ ಮಾಡಿ ಮುಖಭಂಗಕ್ಕೀಡಾದರಲ್ಲವೇ, ಅದನ್ನಾದರೂ ಪೋಲೀಸರು ಪ್ರತಿಭಟಿಸಬಾರದೇ? ಪ್ರಮೋದ್ ಕುಮಾರ್’ರವರ ವರ್ಗಾವಣೆಯನ್ನು ಪ್ರತಿಭಟಿಸಿದ್ದೇ ಮಂಗಳೂರಿನ ಪೋಲೀಶರು ಮಾಡಿದ ಮಹಾ ತಪ್ಪಾ? ತಮ್ಮ ಇಲಾಖೆಯ ಕೆಲಸಗಳನ್ನು ಸ್ವತಂತ್ರವಾಗಿ ಮಾಡಲು ಬಿಡಿ, ರಾಜಕೀಯ ಹಸ್ತಕ್ಷೇಪವನ್ನು  ಮಾಡಬೇಡಿ ಎಂದು ಪ್ರತಿಭಟಿಸುವುದೇ ಮಹಾನ್ ತಪ್ಪಾ? ಪ್ರತಿಭಟನೆ ಮಾಡುವುದೇ ಸರಕಾರಕ್ಕೆ ದೊಡ್ಡ ಮುಖಭಂಗವಾ ಅಲ್ಲಾ ಪೋಲೀಸರು ಪ್ರತಿಭಟನೆ ಮಾಡುವ ಸಂಧಿಗ್ದತೆಯನ್ನು ಸೃಷ್ಟಿಸಿದ್ದಾರಲ್ಲ, ಅದೇ ದೊಡ್ಡ ಮುಖಭಂಗವಾ? ಸಂಬಂಧ ಪಟ್ಟವರು ಉತ್ತರಿಸಬೇಕು.

ನನ್ನ ಆಪ್ತ ಸ್ನೇಹಿತನ ತಂದೆಯೊಬ್ಬರು ಪೋಲೀಸ್ ಇಲಾಖೆಯಲ್ಲಿದ್ದಾರೆ. ಸ್ನೇಹಿತ ಎಲ್ಲೋ ದೂರದಲ್ಲಿ ಕೆಲಸದಲ್ಲಿದ್ದಾನೆ. ಇವರು ಕೊಲೆ-ಸುಲಿಗೆ-ತನಿಖೆ ಎಂದು ಮಂಗಳೂರು-ಬೆಂಗಳೂರು ಇತ್ಯಾದಿ ಇತ್ಯಾದಿ ಓಡಾಡಿಕೊಂಡಿರುತ್ತಾರೆ. ಸ್ನೇಹಿತನ ತಾಯಿ ಮಾತ್ರ ಮನೆಯಲ್ಲಿ ಒಬ್ಬಂಟಿ ಜೀವನ ನಡೆಸುತ್ತಾರೆ. ಅವರನ್ನು ಭೇಟಿಯಾದಾಗಲೆಲ್ಲಾ “ಅಯ್ಯೋ, ನಿಂಗೆ ಗೊತ್ತಲ್ಲನಾ ಇವರ ಡಿಪಾರ್ಟ್’ಮೆಂಟಿನ ಕಥೆ?” ಎಂದು ಮುಖ ಸಣ್ಣ ಮಾಡುತ್ತಾರೆ. ಇದು ಒಬ್ಬ ಪೋಲೀಸಿನ ಕಥೆಯಲ್ಲ. ನಮ್ಮನ್ನು ಕ್ಷಣ ಕ್ಷಣವೂ ಕಾಯುತ್ತಿರುವ ಪ್ರತಿಯೊಬ್ಬ ಪೋಲೀಸಪ್ಪನ ಕಥೆಯೂ ಇದೇ. ಕಾನ್ಸ್’ಟೇಬಲ್, ಪೇದೆಗಳ ಕಥೆಯಂತೂ ಕೇಳುವುದೇ ಬೇಡ. ಮಳೆಯೆಂದಿಲ್ಲ, ಬಿಸಿಲೆಂದಿಲ್ಲ, ಚಳಿಯಂತೂ ಇಲ್ಲವೇ ಇಲ್ಲ, ದಿನಾ ಧೂಳು ತಿನ್ನದೇ ಇರುವಂತಿಲ್ಲ. ದಿನವೂ ಕಡಿಮೆಯೆಂದರೂ ಹದಿನಾಲ್ಕರಿಂದ ಹದಿನೇಳು ಘಂಟೆ ಡ್ಯೂಟಿ ಮಾಡಬೇಕು. ವಾರದ ರಜೆಯೆಂದರೆ ಏನೆಂಬುದೇ ಅವರಿಗೆ ಗೊತ್ತಿಲ್ಲ. ಸಾಯಲಿ, ಅಗತ್ಯದ ರಜೆ ಸಿಗಬೇಕೆಂದರೂ ಮೇಲಾಧಿಕಾರಿಗಳ ಕೈಕಾಲು ಹಿಡಿಯಬೇಕು. ಅವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ಳಬೇಕು. ಮೇಲಾಧಿಕಾರಿಗೋ ಇಲ್ಲಾ ಸ್ಥಳೀಯ ರಾಜಕಾರಣಿಗೋ ತಗ್ಗಿ ಬಗ್ಗಿ ನಡೆಯದಿದ್ದರೆ ನೀರಿಲ್ಲದ ಸ್ಥಳಕ್ಕೆ ವರ್ಗಾಯಿಸಿಕೊಳ್ಲಲು ಸಿದ್ಧರಿರಬೇಕು. ಒಟ್ಟಿನಲ್ಲಿ  ಯಾರಿಗೆ ಬೇಕು ಈ ನಾಯಿ ಪಾಡು?

ಈ ಎಲ್ಲಾ ಬೆಳವಣಿಗೆಗಳ ನಡುವೆ, ಪ್ರತಿಭಟನೆಯ ಕಾವನ್ನು ನೋಡಿ ಖುದ್ದು  ಗೃಹ ಸಚಿವರೇ ಬೆಂದು ಹೋಗಿದ್ದಾರೆ. ಇಂಧನ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆಗಳು ಈಗಾಗಲೇ ಸರಕಾರದ ಮಾನವನ್ನು ಹರಾಜು ಹಾಕಿವೆ. ಗೃಹ ಇಲಾಖೆಯಂತೂ ಈ ಸರಕಾರ ಬಂದಂದಿನಿಂದಲೂ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದೆ. ಈಗ ಮತ್ತೆ ಪ್ರತಿಭಟನೆಗಿಳಿಯುತ್ತಿದ್ದಾರೆಂದರೆ ಸುಮ್ಮನಿರಲಾದೀತೇ? ಆ ಪ್ರಯುಕ್ತ ಸನ್ಮಾನ್ಯ ಗೃಹ ಸಚಿವರು “ಪ್ರತಿಭಟನೆ ನಡೆಸುವ ಪೋಲೀಸರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು, ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದಿಸುವವರ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ  ಹೂಡಲು ನಿರ್ಧರಿಸಿದ್ದಾರೆ.

ತನ್ನ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ಎನ್ನುತ್ತಾ ಸರಕಾರದ ವಿರುದ್ಧ ಸಾತ್ವಿಕ ಪ್ರತಿಭಟನೆ ನದೆಸಲು ನಿರ್ಧರಿಸಿರುವ ಪೋಲೀಸರನ್ನು ಬೆಂಬಲಿಸದೆ ಮತ್ಯಾರನ್ನು ಬೆಂಬಲಿಸಲಿ ಗೃಹ ಮಂತ್ರಿಗಳೇ? ವಿಪರ್ಯಾಸ ನೋಡಿ. ಬಾಂಬ್ ಉಡಾಯಿಸಿ ಹತ್ತಾರು ಜೀವಗಳನ್ನು ಕೊಂದದ್ದಕ್ಕಾಗಿ ಮರಣ ದಂಡನೆಗೆ ಗುರಿಯಾದ ಯಾಕೂಬ್ ಮೆನನ್ ಸತ್ತಾಗ “ImwithYakubMenon” ಎನ್ನುತ್ತಾ ಆತನನ್ನು ಬೆಂಬಲಿಸಬಹುದು, ಇಲ್ಲಾ ಅವನದ್ದೇ ಜಾತಿಗೆ ಸೇರಿದ ಅಜ್ಮಲ್ ಕಸಬೋ, ಅಫ್ಜಲ್ ಗುರುವನ್ನೋ ಸಾಮಾಜಿಕ ಜಾಲತಾಣಗಳಲ್ಲಿ ಓಪನ್ನಾಗಿ ಬೆಂಬಲಿಸಬಹುದು, ದೇಶದ ಪ್ರಧಾನಿಯವರನ್ನು “Idiot” ಎಂದು ಕರೆಯಬಹುದು. ಯಾರೂ ಇಲ್ಲಾ ಅಂದ್ರೆ “ಭಾರತವನ್ನು ಬರ್ಬಾದ್ ಮಾಡುವವರೆಗೂ ಹೋರಾಟ ಮಾಡುತ್ತೇನೆ” ಎಂದ  ಕನ್ಹಯ್ಯಾ ಕುಮಾರನನ್ನಾದರೂ ಬೆಂಬಲಿಸಿ, ಪ್ರಚೋದಿಸಿ ಜಾಲತಾಣಗಳಲ್ಲಿ ಪೋಸ್ಟ್ ಮಾಡಬಹುದು. ಆದರೆ, ಕ್ಷಣ ಕ್ಷಣವೂ ರಾಜಕಾರಣಿಗಳನ್ನು ಕಾಯುತ್ತಾ ಜೊತೆ ಜೊತೆಗೆ ದೇಶವನ್ನೂ ಕಾಯುತ್ತಾ ಜೀವಕ್ಕೂ, ತಾವಿರುವ ಸ್ಥಾನಕ್ಕೂ  ಭದ್ರತೆಯಿಲ್ಲದ ಜೀವನವನ್ನು ನಡೆಸುವ ಪೋಲಿಸರನ್ನು ಮಾತ್ರ ಯಾರೂ ಬೆಂಬಲಿಸಬಾರದು, ಅರ್ಥ ಆಯ್ತಾ?!

ಲಾಸ್ಟ್ ಪಂಚ್: ಪೋಲಿಸರ ಪ್ರತಿಭಟನೆಯನ್ನು ಹತ್ತಿಕ್ಕದೆ, ಅವರ ಬೇಡಿಕೆಯನ್ನು ಈಡೇರಿಸಿ,  ಕಾಂಗ್ರೆಸ್ ಪಕ್ಷವನ್ನು ವಿನಾಶದತ್ತ ಕೊಂಡೊಯ್ಯಬೇಡಿ ಸಿದ್ಧರಾಮಯ್ಯನವರೇ” ಎಂದು ತಮ್ಮ ಎಂದಿನ ಹರಿತವಾದ ಮಾತುಗಳಿಂದ ಕಾಂಗ್ರೆಸ್ಸಿನ ನಾಯಕ ಜನಾರ್ಧನ ಪೂಜಾರಿಯವರು ತಮ್ಮದೇ ಸರಕಾರಕ್ಕೆ ಛಾಟಿ ಬೀಸಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಮಾತನ್ನು ಕೇಳುವುದಿಲ್ಲ ಎನ್ನುವುದು ಗೊತ್ತಿದು ಗೊತ್ತಿದ್ದೂ, ಸರಕಾರ ತಪ್ಪಿ ನಡೆದಾಗಲೆಲ್ಲಾ ಬಿಜೆಪಿಯವರಿಗಿಂತಲೂ ಮೊದಲು ದನಿಯೆತ್ತುವ ಜನಾರ್ಧನ ಪೂಜಾರಿಯವರು ಮೈ ಪರಚಿಕೊಳ್ಳುವ ಪರಮೇಶ್ವರರಿಗಿಂತ ನಮಗೆ ಬಹಳ ಇಷ್ಟವಾಗುತ್ತಾರೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!