ಪ್ರಚಲಿತ

ದೇವರ ನಾಡಲ್ಲಿ ಅರಳಿದ ಕಮಲ

ಅಂತೂ – ಇಂತೂ ದೇವರ ನಾಡಲ್ಲಿ ಕಮಲವೊಂದು ಅರಳಿದೆ .ಅದು 30-40 ವರ್ಷಗಳ ಪ್ರಯತ್ನದ  ನಂತರ ,ಬಿ.ಜೆ.ಪಿ ಅಭ್ಯರ್ಥಿ  A.O ರಾಜಗೋಪಾಲ್  ನೆಮಂ ಕ್ಷೇತ್ರದಿಂದ ವಿಜೇತರಾಗಿ ಕೇರಳ  ರಾಜ್ಯ ವಿಧಾನಸಭೆಯಲ್ಲಿ ಬಿ.ಜೆ.ಪಿ ಖಾತೆ ತೆರೆದಿದ್ದಾರೆ . ಅಲ್ಲಿಗೆ ಲಕ್ಷಾಂತರ ಕಾರ್ಯಕರ್ತರ ಹಗಲಿರುಳಿನ ಶ್ರಮಕ್ಕೊಂದು ಅರ್ಥ ಬಂದಿದೆ.

ಇದನೆಲ್ಲಾ ನೋಡುತ್ತಿರುವಾಗ 80-90ನೇ ದಶಕದ ಕರ್ನಾಟಕದ ಬಿ.ಜೆ.ಪಿ ಸ್ಥಿತಿ-ಗತಿ ಅರಿವಾಗುತ್ತದೆ. ಆ ಸಮಯದಲ್ಲಿ ಬಿ.ಜೆ.ಪಿಗೆ ದೇಶದಲ್ಲಿ ಅಡಿಪಾಯ ಇರಲಿಲ್ಲ. ಇಂದು ಕೇರಳದಲ್ಲಿ ಒಂದೇ ಒಂದು ಸೀಟ್ ಗೆದ್ದರು ಹೇಗೆ ಹೆಮ್ಮೆಯಿಂದ ಬೀಗುತಿದೆಯೋ, ಅದೇ ರೀತಿಯ ಹಂಬಲ ಇಲ್ಲಿನ ಬಿ.ಜೆ.ಪಿಯ ಕಾರ್ಯಕರ್ತರಲ್ಲಿಯೂ ಇತ್ತು .ತಮ್ಮ ಕೆಲಸ -ಕಾರ್ಯಗಳನ್ನು ಬಿಟ್ಟು ಕೈಯಿಂದ ಹಣ ಖರ್ಚು ಮಾಡಿ ಸಂತೋಷ ಪಡುತ್ತಿದ್ದರು , ರಾಜ್ಯದಲ್ಲಿ ರಾಮ ಭಟ್ ,ಬಿ. ಶಿವಪ್ಪ ,ಯಡಿಯೂರಪ್ಪ ಮೊದಲಾದವರ ನಾಯಕತ್ವದಲ್ಲಿ ಬೇರೂರಲು ಪಕ್ಷ ಪ್ರಯತ್ನಿಸುತ್ತಿತ್ತು ,ಆದರೆ  ಮುಂದೆ ನಡೆದದ್ದು ಇತಿಹಾಸ .

ಇನ್ನು ಕೇರಳದ ರಾಜ್ಯಕೀಯದ ವಿಚಾರಕ್ಕೆ ಬರುವುದಾದರೆ ಅಲ್ಲಿ ರಾಷ್ಟೀಯ ಪಕ್ಷಗಳಿಗೆ ಭದ್ರವಾದ ನೆಲೆಯಿಲ್ಲ .CPI – CPI(M) , ಜೆ.ಡಿ.ಎಸ್  ಮೊದಲಾದ ಎಡಪಕ್ಷಗಳು ಸೇರಿ L.D.F (Left Democratic Front)  ಎಂಬ ಒಕ್ಕೂಟ ರಚಿಸಿಕೊಂಡರೆ ಕಾಂಗ್ರೆಸ್, ಕೇರಳ ಕಾಂಗ್ರೆಸ್ ,ಮುಸ್ಲಿಂ ಲೀಗ್ ಮೊದಲಾದವು ಜೊತೆಗೂಡಿ U.D.F (United Democratic Front) ಎಂಬ ಒಕ್ಕೂಟ ರಚಿಸಿಕೊಂಡಿವೆ . ಈ ಎರಡು ಒಕ್ಕೂಟಗಳು ಆವರ್ತನ ರೀತಿಯಲ್ಲಿ ಅಧಿಕಾರಕ್ಕೆ ಬರುವುದು ಸಾಮಾನ್ಯ ವಾಡಿಕೆ . ಕಳೆದ ಬಾರಿ ಉಮ್ಮನ್ ಚಾಂಡಿ ನೇತೃತ್ವದ U.D.F ಅಧಿಕಾರಕ್ಕೆ ಬಂದಿತು . ಅವರ  ಅಧಿಕಾರದ ಅವಧಿಯಲ್ಲಿ ನಡೆದ ಸೋಲಾರ್ ಹಗರಣ,  ಮದ್ಯ ಹಗರಣ ಮೊದಲಾದವು ಹಾಗು 5 ವರ್ಷಗಳ ಆವರ್ತನ ಪದ್ಧತಿ ಈ ಬಾರಿ ಕೇವಲ 47 ಸೀಟ್ ಸಿಕ್ಕಿ ಮುಖಭಂಗ ಅನುಭವಿಸುವಂತೆ ಮಾಡಿದೆ . L.D.F ಹಿರಿಯ ನೇತಾರ , ಮಾಜಿ ಮುಖ್ಯಮಂತ್ರಿ V.S ಅಚ್ಚುತನಂದನ್ ಹಾಗು ಪಕ್ಷದ ಕಾರ್ಯದರ್ಶಿ ಪಿನರಾಯಿ ವಿಜಯನ್ ನೇತೃತ್ವದ  L. D. F , ಒಟ್ಟು 140ಕ್ಷೇತ್ರಕ್ಕೆ  91 ರಲ್ಲಿ ಗೆದ್ದು ಅಧಿಕಾರಕ್ಕೆ ಏರಿದೆ .ಸಾಮಾನ್ಯ ವಾಗಿ ಸಾಂಪ್ರದಾಯಿಕ ಮತದಾರರನ್ನು ಹೊಂದಿರುವ ಈ ಪಕ್ಷಗಳು ಕರಾವಳಿ ತೀರದ ರಾಜ್ಯದಲ್ಲಿ ಚಾಲ್ತಿಯಲ್ಲಿವೆ .

ಕೇರಳ ಒಂದು ಸಣ್ಣ ರಾಜ್ಯ ,20 ಲೋಕಸಭಾ ಹಾಗು 140 ವಿಧಾನಸಭಾ ಕ್ಷೇತ್ರವನ್ನು ಹೊಂದಿದೆ .ಇಲ್ಲಿ ಕಾಸರಗೋಡು ಹಾಗು  ತಿರುವನಂತಪುರಂನಲ್ಲಿ ಪಕ್ಷ ಸ್ವಲ್ಪ ಪ್ರಾಬಲ್ಯ ಹೊಂದಿದೆ . ಉಳಿದೆಡೆಯಲ್ಲಿ ತನ್ನ ಅಸ್ತಿತ್ವ ಹುಡುಕಲು ಪ್ರಯತ್ನ ನಡೆಸುತ್ತಿದೆ . ಎಡಪಕ್ಷಗಳ ಗೂಂಡಗಿರಿಯಿಂದ ತನ್ನ ಹಲವಾರು ಕಾರ್ಯಕರ್ತರನ್ನು ಹಾಗು ಯುವ ಮೋರ್ಚ ರಾಜ್ಯ ಉಪಾದ್ಯಕ್ಷ ಜಯಕೃಷ್ಣ ಮಾಸ್ಟರ್ ಮೊದಲಾದ ನಾಯಕರನ್ನು ಈಗಾಗಲೇ ಕಳೆದುಕೊಂಡಿದೆ . (ಜಯಕೃಷ್ಣ ಮಾಸ್ಟರ್ :- ಇವರನ್ನು 1999 ರ ಡಿಸೆಂಬರ್ 31 ಅಂದರೆ ಹೊಸ ಶತಮಾನಕ್ಕೆ ಒಂದು ದಿನ ಮೊದಲು ವಿದ್ಯಾರ್ಥಿಗಳ ಎದುರೆ ಶಾಲೆಯಲ್ಲಿ ಹತ್ಯೆ ಮಾಡಲಾಯಿತು ). ಈಗ  ತಾನೇ ಕಮ್ಯುನಿಸ್ಟ್ ಪ್ರಾಬಲ್ಯದ ಕಣ್ಣೂರಿನಲ್ಲಿ ಕಚ್ಚಾಬಾಂಬ್ ಸ್ಪೋಟವಾದ ಹಾಗು ವಿರೋಧಿ ಪಕ್ಷಗಳ ನಾಯಕರ ಮನೆಯಲ್ಲಿ ಧಾಂಧಲೆ ಎಬ್ಬಿಸಿದ ವರದಿಗಳು ಬಂದಿವೆ . ಹೀಗೆ ಇಡೀ  ಕೇರಳವನ್ನು ಅವರಿಸಿರುವ ಕೆಂಪು ಉಗ್ರವಾದಕ್ಕೆ ಸೆಡ್ಡು ಹೊಡೆದು ಪಕ್ಷ ಕಟ್ಟುವುದು ಸುಲಭದ ಮಾತಲ್ಲ . (ಕರ್ನಾಟಕದಲ್ಲಿ ಪಕ್ಷ ಕಟ್ಟುವ ಕೆಲಸ ಇಷ್ಟು  ಬಿ.ಜೆ.ಪಿಗೆ ಹಿಂಸಾತ್ಮಕವಾಗಿರಲಿಲ್ಲ .) ಇದು ಕೇರಳದಲ್ಲಿ ಬಿ.ಜೆ.ಪಿ ಇನ್ನು ನೆಲೆ ಕಾಣದಿರಲು ಕಾರಣ .

ಇಂಥ ಸಂದರ್ಭದಲ್ಲಿಯೂ  ಬಿ.ಜೆ.ಪಿಗೆ ಅಲ್ಲಿ ಒಂದು ಆಶಾವಾದ ಮೂಡಿದೆ , ನೆಮಂ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ ಹಿರಿಯ ನಾಯಕ ರಾಜಗೋಪಾಲ್ ತಮ್ಮ ಸಮೀಪದ ಪ್ರತಿಸ್ಪರ್ಧಿ L.D.F ನ V. ಶಿವಕುಟ್ಟಿ ಅವರನ್ನು 8671 ಮತಗಳಿಂದ ಸೋಲಿಸಿ ಅಚ್ಚರಿ ತಂದಿದ್ದಾರೆ .87 ವರ್ಷದ ಈ ಹಿರಿಯ ನೇತಾರ ಕೇಂದ್ರದ ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು .1929 ರ ಸೆಪ್ಟೆಂಬರ್ 15 ರಂದು ಪಾಲಕ್ಕಾಡ್ ನಲ್ಲಿ ಜನಿಸಿದ ಇವರು ಕಾನೂನು ವ್ಯಾಸಂಗ ಮಾಡಿದ್ದಾರೆ .1992 ಹಾಗು 1998 ರಲ್ಲಿ 2 ಬಾರಿ ಮದ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ . ಕೇಂದ್ರದಲ್ಲಿ ರಕ್ಷಣೆ , ಸಂಸದೀಯ ವ್ಯವಹಾರ , ಕಂಪನಿ ವ್ಯವಹಾರ , ರೈಲ್ವೆ , ಕಾನೂನು, ಗ್ರಾಮೀಣಭಿವೃದ್ದಿ  ಖಾತೆಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ . ಆದರೆ ಇವರು ಕೇರಳದಲ್ಲಿ ಪಕ್ಷ ಕಟ್ಟಲು ನಡೆಸಿದ ಹೋರಾಟ ಮಾತ್ರ ಅಮೆರಿಕಾದ ಮಾಜಿ ಅಧ್ಯಕ್ಷ ಲಿಂಕನ್ ನಂತೆ ಬರೀ ಸೋಲಿನಿಂದಲೇ ಕೂಡಿದ್ದೆ. 1980ರಲ್ಲಿ ಕಾಸರಗೋಡು ಲೋಕಸಭೆ ಕ್ಷೇತ್ರದಿಂದ ಮೊದಲ್ಗೊಂಡು 1989 ಮಂಜೆರಿ ,1991 ಮತ್ತು 1999, 2004 ಹಾಗು 2014 ತಿರುವನಂತಪುರಂ ಲೋಕಸಭೆ ಕ್ಷೇತ್ರ ದಲ್ಲಿ ಸ್ಫಧಿಸಿ ಸೋಲನ್ನು ಕಂಡಿದ್ದಾರೆ .ಹಾಗು 2013 ಮತ್ತು 2015 ರ ವಿಧಾನಸಭಾ ಉಪಚುನಾವಣೆಯಲ್ಲಿ ಕೂಡ ಸೋತಿದ್ದರು .ಅದರಲ್ಲಿಯೂ 2014 ರ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಗೆ ನೆಕ್ ಟು ನೆಕ್ ಸ್ಪರ್ಧೆಯೊಡ್ಡಿ 15000 ಮತಗಳ ಅಂತರದಿಂದ ಸೋತಿದ್ದರು .

ಉಳಿದಂತೆ 2014ರಲ್ಲಿ ಮೋದಿ ಅಲೆ ಇತ್ತು , ಇದರಿಂದಾಗಿ ಕಾಸರಗೋಡು ಹಾಗು ತಿರುವನಂತಪುರಂ ಲೋಕಸಭೆ ಕ್ಷೇತ್ರಗಳಲ್ಲಿ ಬಿ.ಜೆ.ಪಿ 2ನೆ ಸ್ಥಾನ ಗಳಿಸಿತ್ತು. ಈಗ ಅದೇ ಕಾಸರಗೋಡ್ ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ ಅಭ್ಯರ್ಥಿ K.ಸುರೇಂದ್ರನ್ ಕೇವಲ 89 ಮತಗಳಿಂದ ಪರಾಭವಗೊಂಡಿದ್ದಾರೆ .ಅಲ್ಲದೆ ರಾಜ್ಯದ 7 ಕಡೆಗಳಲ್ಲಿ 2ನೆ ಸ್ಥಾನದಲ್ಲಿ ಇದ್ದಾರೆ ,3ಕಡೆ 3ನೆ ಸ್ಥಾನ ಹಾಗು ಚಲಾವಣೆಗೊಂಡ ಮತಗಳಲ್ಲಿ ಶೇಕಡಾ 14 ರಷ್ಟು ಮತಗಳನ್ನುN.D.A ಅಭ್ಯರ್ಥಿಗಳು ಪಡೆದು ಕೊಂಡಿದ್ದಾರೆ. ಅತಿ ಬುದ್ದಿವಂತ ಹಾಗು ಸಾಕ್ಷರರನ್ನು ಹೊಂದಿರುವ ಕೇರಳದಲ್ಲಿ ಇದು ಸಾಧನೆಯೇ ಸರಿ .

ಒಟ್ಟಾರೆಯಾಗಿ ಗಮನಿಸುವುದ್ದದಾರೇ ಮೋದಿಯ “ಸೋಮಾಲಿಯ ಮಾದರಿ”   ಹೇಳಿಕೆ ಈ ಚುನಾವಣೆಯಲ್ಲಿ ಪರಿಣಾಮ ಬೀರಿಲ್ಲ. ಕರ್ನಾಟಕದಲ್ಲಿ  ಬಿ.ಜೆ.ಪಿ 20 ವರ್ಷಗಳ ಹಿಂದೆ ಇದ್ದ ಸ್ಥಿತಿ ಅಲ್ಲಿ ಈಗ ಇದೆ .ಬಿ.ಜೆ.ಪಿ ಮಾತೃ ಸಂಘಟನೆ ಅರೆಸ್ಸೆಸ್ ಯುವ ಮತದಾರರನ್ನು ಸೆಳೆಯುತ್ತಿದೆ. 2 ಪಕ್ಷಗಳ ಆಳ್ವಿಕೆಯಿಂದ ಬೇಸತ್ತಿರುವ ವರ್ಗಕ್ಕೆ ಬಿ.ಜೆ.ಪಿ ಪರ್ಯಾಯ ಶಕ್ತಿಯಂತೆ ಗೋಚರಿಸಲಿದೆ. ಯಡಿಯೂರಪ್ಪರಂತ ನಾಯಕರ ಚಾಣಕ್ಯ ತಂತ್ರಗಳು ಫಲಿಸಬೇಕಾದರೆ ಇನ್ನೊಂದು 8-10 ವರ್ಷ ಕಾಯಬೇಕು.  ಅಲ್ಲಿಯವರೆಗೆ ಬಿ.ಜೆ.ಪಿ ಬಗ್ಗೆ ಮತದಾರರಲ್ಲಿ ನಂಬಿಕೆ ಇದ್ದರೆ ಗೆಲುವು ಸಾಧ್ಯ. ಅದಕ್ಕೆ ಅಪಾರ ತಾಳ್ಮೆ ಬೇಕು ,ತಂತ್ರಗಾರಿಕೆ ಬೇಕು . ಇಷ್ಟೆಲ್ಲಾ ಸಾಧ್ಯವಾದರೆ ದೇವರಿಗೆ ಕಮಲ ಹತ್ತಿರವಾಗಬಹುದು .

ತಾರನಾಥ್ ಸೋನಾ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!