ಅಂಕಣ

ದುರಂತ ನಾಯಕಿ ಸೀತೆಯ ಬದುಕು………!

 

(ಓದುವ ಮುನ್ನ : ರಾಮನ ಹಬ್ಬದ ಹಾಗೆ ಸೀತೆಗೊಂದು ಹಬ್ಬವನ್ನು ಪ್ರತ್ಯೇಕವಾಗಿ ಆಚರಿಸಿದ ನೆನಪಿಲ್ಲ ನನಗೆ. ಬಹುಷಃ ನಿತ್ಯವೂ ಸ್ಮರಣೆಯಾಗುವ  ವ್ಯಕ್ತಿತ್ವಗಳಿಗೆ ದಿನನಿತ್ಯವೂ ಹಬ್ಬವೆಂಬ ಭಾವದಿಂದಿರಬೇಕು. ಆದರ್ಶ ದಾಂಪತ್ಯದ ಜೋಡಿಗೆ ಸದಾ ಉದಾಹರಣೆಯಾಗುವ ಸೀತಾರಾಮರ ಬದುಕಿನಲ್ಲಿ ಸೀತೆಯ ಬದುಕು ಅಷ್ಟೊಂದು ನಿರಾಳವಾಗಿತ್ತೆ ? ಎಂದು ನೋಡಿದರೆ ಹುಟ್ಟುವ ಪ್ರಶ್ನೆಗಳ ಒಂದು ಜಿಜ್ಞಾಸೆ ಈ ಲೇಖನದಲ್ಲಿದೆ – ನಾಗೇಶ ಮೈಸೂರು)

ಸೀತಾರಾಮರು ಸಂತೋಷವಾಗಿದ್ದ ಚಿತ್ರಣ ಬರಿ ಚಿತ್ರಪಟ, ದೇವರ ಪೋಟೊಗಳಿಗೆ ಮಾತ್ರ ಸೀಮಿತಾನಾ?

ಮೊನ್ನೆ ಶ್ರೀರಾಮನವಮಿಯ ಮಾತಿನ ನಡುವೆ ಯಾರೊ ಕಳಿಸಿದ ಸೀತಾ, ರಾಮ, ಲಕ್ಷ್ಮಣ ಮತ್ತು ಹನುಮರಿದ್ದ ಚಿತ್ರ ನೋಡುತ್ತಾ ಇದ್ದೆ. ನಿಜ ಹೇಳುವುದಾದರೆ ಶ್ರೀರಾಮನ ಅದೆಷ್ಟೊ ಚಿತ್ರಪಠ, ಪೋಟೊ, ವಿಗ್ರಹಗಳನ್ನ ನೋಡಿದ್ದೇನೆ, ಆದರೆ ಎಲ್ಲೂ ರಾಮ ಅಥವಾ ಸೀತೆಯನ್ನ ಒಬ್ಬಂಟಿಯಾಗಿ ನೋಡಿದ ಚಿತ್ರದ ನೆನಪಿಲ್ಲ. ಯಾವಾಗಲೂ ಸೀತಾ ಲಕ್ಷ್ಮಣರ ಸಮೇತ ಅಂಜನೇಯನ ಜೊತೆಯಿರುವ ಚಿತ್ರಗಳೆ ಕಣ್ಮುಂದೆ ಬಂದು ನಿಲ್ಲುತ್ತವೆ. ಅದರಲ್ಲು ಪೂಜಾರೂಪದಲ್ಲಂತೂ ಮನೆಗಳಿಂದ ಹಿಡಿದು ದೇಗುಲದತನಕ ಇದೆ ಅನ್ಯೋನ್ಯತೆಯ ಚಿತ್ರಣವೆ – ಚಿತ್ರಪಟವಾದರೂ ಸರಿ, ಜತೆಗೂಡಿದ ವಿಗ್ರಹವಾದರೂ ಸರಿ. ಆದರ್ಶ ದಾಂಪತ್ಯದ ವಿಷಯಕ್ಕೆ ಬಂದಾಗಲಂತೂ ಸೀತಾರಾಮರ ಹೋಲಿಕೆ ಎಷ್ಟು ಸರ್ವೇಸಾಧಾರಣವೆಂದರೆ ಯಾರಾದರೂ ಜೋಡಿ ದಂಪತಿಗಳನ್ನು ಕಂಡಾಗ ‘ಅವರನ್ನು ನೋಡು ಒಳ್ಳೆ ಸೀತಾರಾಮರ ಜೋಡಿ’ ಅಂತಲೊ, ಜೋಡಿಗಳನ್ನು ಆಶೀರ್ವದಿಸುವ ಸಮಯದಲ್ಲಿ ‘ ಸೀತರಾಮರ ಹಾಗೆ ಬಾಳಿ’ ಅಂತಲೊ ಹೇಳುವ ವಾಡಿಕೆ ಎಲ್ಲೆಡೆಯೂ ಕಾಣಬರುತ್ತದೆ.

ಅದನ್ನೆ ಯೋಚಿಸುತ್ತ ಚಿತ್ರವನ್ನೆ ನೋಡುತ್ತಾ ಗಮನ ಹಾಗೆ ಪಟದಲ್ಲಿದ್ದ ಸೀತೆಯತ್ತ ಹೋಯ್ತು. ಸೀತೆಯತ್ತ ನೋಡುತ್ತಿದ್ದಂತೆ ತನ್ನಂತಾನೆ ಅವಳು ಪಟ್ಟ ಬವಣೆ, ಯಾತನೆಗಳೂ ಹಾಗೆ ಕಣ್ಮುಂದೆ ಬಂದು ನಿಂತವು. ಅ ಪಾತ್ರವನ್ನು ಒಂದು ಪೂಜನೀಯ ಆದರ್ಶದ ಮಸೂರದಡಿಯಿಟ್ಟು ಆರಾಧನಾ ಭಾವದಿಂದ ನೋಡಬೇಕೊ, ಅಥವಾ ಅಷ್ಟೆಲ್ಲಾ ಕಷ್ಟ ಕೋಟಲೆಗಳನ್ನು ಸಹಿಸುತ್ತ, ಪದೆಪದೆ ಜೀವನದ ಪರಿಪರಿ ಅಗ್ನಿಪರೀಕ್ಷೆಗಳಿಗೆ ಗುರಿಯಾಗುತ್ತ, ತನ್ನ ತಪ್ಪಿರದಿದ್ದರೂ ಸತತ ಶಿಕ್ಷೆಯನನುಭವಿಸುವ ದುರಂತ ನಾಯಕಿಯಾಗಿ ನೋಡಬೇಕೊ ಗೊತ್ತಾಗಲಿಲ್ಲ. ಆ ಗೊಂದಲ ಸಂದಿಗ್ದಗಳ ನಡುವೆ ವಾದಾತೀತ ಅಂಶವೆನಿಸಿದ್ದೆಂದರೆ ಆ ಅನುಭವದ ಅಗ್ಗಿಷ್ಟಿಕೆಯಲ್ಲಿ ಬೇಯುವ, ಪರಿತಪಿಸಿದರೂ ಸಹಿಸುತ್ತ ಕಾಯುವ ಅಪರಿಮಿತ, ಅಸಾಧಾರಣ ತಾಳ್ಮೆ. ಅಷ್ಟೆಲ್ಲಾ ಪಾಡುಪಟ್ಟರು ಶ್ರೀರಾಮನದೆ ಗುಂಗಿನಲಿ ಬಾಳು ಸವೆಸುತ್ತ, ಅವನ ನೆರಳಂತೆ ಅವನ ಜಾಡನ್ನೆ ಅನುಕರಿಸುತ್ತ ನಡೆದವಳ ಬಗೆ ಮೂಡಿಸಿದ ಭಾವನೆ ಹಾಡಿನ ಸಾಲಾಗಿ ಗುನುಗಿಸಿತು…

ಎಲ್ಲಿತ್ತು ಸೀತೆಗೆ ತಾಳ್ಮೆ, ಗಳಿಸುಳಿಸೆ ಶ್ರೀರಾಮನೊಲುಮೆ

ಏನೆಲ್ಲ ಭಯಂಕರ ಪಾಡು, ಅನುಸರಿಸಿದರೂ ಪತಿಜಾಡು || 01 ||

ಶಿವನ ಬಿಲ್ಮುರಿದ ಬಲ್ಲಿದನೆ, ವರಿಸಿ ಕೈಹಿಡಿದಾಕಾಂತನೆ

ಪಟ್ಟ ಮಹಿಷಿ ವಚನ, ಮುರಿದು ಮೂಲೆಗೊತ್ತಿದ ಪ್ರಕರಣ || 02 ||

ಹೇಳಿ ಕೇಳಿ ಅವಳು ರಾಜಕುಮಾರಿ; ಜನಕರಾಜನ ಮಗಳಾಗಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವಳು. ಜೀವನಪರ್ಯಂತ ಕಾಪಾಡಬಲ್ಲ, ಸುಖವಾಗಿಟ್ಟುಕೊಳ್ಳಬಲ್ಲ ಸಮರ್ಥನನ್ನೆ ವರಿಸಬೇಕೆಂದು ಆಶಿಸಿ, ಸ್ವಯಂವರದಲಿ ಶಿವಧನುಸ್ಸನು ಹೆದೆಯೇರಿಸಬಲ್ಲ ವೀರಾಗ್ರಣಿಗೆ ಸೀತೆಯ ಪಾಣಿಗ್ರಹಣವೆಂದ ಜನಕ. ಅದರಂತೆ ಬಿಲ್ಲನ್ನೆ ಮುರಿದು ಸಾಹಸಿ ರಾಮನ ಕೈಹಿಡಿದು, ರಾಜ ಮನೆತನದಲ್ಲೆ ಸುಖವಾಗಿ ಬಾಳಲು ಹೊರಟವಳು. ಒಂದು ರೀತಿ, ಆ ವಿವಾಹವೆ ಪ್ರಮಾಣವಚನವಿದ್ದ ಹಾಗೆ – ತವರಿನಲಿದ್ದ ರಾಜಕುಮಾರಿಯ ಸುಖವೆ, ಹೋದ ಮನೆಯಲ್ಲು ಸಿಗಲಿದೆಯೆಂದು. ಆದರೆ ಆದದ್ದಾದರೂ ಏನು? ಹೆಚ್ಚು ಕಡಿಮೆ ಜೀವನವನ್ನೆಲ್ಲ ಕಾಡಿನಲ್ಲಿ, ಅಪಹರಣಕಾರನ ನೆರಳಡಿಯ ವ್ಯಥೆಯಲ್ಲಿ, ಮುನಿಯಾಶ್ರಮದಲ್ಲಿ – ಹೀಗೆ ಕಳೆಯಿತೆ ವಿನಃ, ಅರಮನೆಯಲ್ಲಿ ಸುಖ, ಸಂತೋಷದಲ್ಲಿ ಕಳೆದಿದ್ದೆ ಕಮ್ಮಿ. ಅದೆ ಅವಳೆ ಜೀವನದಲಿ ವಿಧಿಯಾಡಿದ ವಿಚಿತ್ರ ವ್ಯಂಗ್ಯವೊ ಏನೊ!

ಕಳಚಿಟ್ಟು ತವರಾಭರಣ, ಎಲ್ಲ ವೈಭೋಗ ಭ್ರಮನಿರಸನ

ನಾರುಮಡಿಯುಡಿಸಿ ವನವಾಸ, ಕಡೆಗಣಿಸಿ ಕಾಡಿನವೇಷ || 03 ||

ನೋಡಿ, ರಾಣಿಯಾಗಿ ಎಷ್ಟು ವೈಭೋಗ, ವೈಭವದಿಂದ ಬಾಳಬೇಕಿತ್ತು;ಬಿಟ್ಟಿತೆ ವಿಧಿ? ಕೈಕೆಯ ರೂಪದಲ್ಲೊ ಅಥವ ಮಂಥರೆಯ ಕುತಂತ್ರದ ಹೆಸರಲ್ಲೊ – ಒಟ್ಟಿನಲಿ ದುರದೃಷ್ಟದ ರೂಪದಲ್ಲಿ ಕಾಡಿ ವನವಾಸಕ್ಕೊರಡಬೇಕಾಯ್ತು, ರಾಮನ ಜತೆಗೆ. ರಾಜೋಚಿತ ಉಡುಗೆ ತೊಡುಗೆಯೆಲ್ಲಾ ತ್ಯಜಿಸಿ, ಅಭರಣಗಳನೆಲ್ಲ ತೆಗೆದಿಟ್ಟು, ಸಾಮಾನ್ಯ ವನವಾಸಿನಿಯ ಹಾಗೆ ನಾರುಮಡಿಯುಟ್ಟು ತೆರಳಬೇಕಾಯ್ತು ರಾಮನ ಹಿಂದೆ. ಎಲ್ಲಾ ವೈಭೋಗವನ್ನು ಕಡೆಗಣಿಸಿ ವನವಾಸಕ್ಕೆ ತೆರಳುವ ಅನಿವಾರ್ಯಕ್ಕೆ ಸಿಕ್ಕಿದಾಗ ಆಗಿರಬಹುದಾದ ಭ್ರಮನಿರಸನ, ನಿರಾಶೆ, ಕೀಳರಿಮೆಗಳನ್ನೆಲ್ಲ ನುಂಗಿಕೊಂಡೆ ಹೆಜ್ಜೆಯಿಡಬೇಕಾದ ಸಂಕಷ್ಟಕ್ಕೆ ಸಿಕ್ಕಬೇಕಾಯ್ತು, ಈ ವನಿತೆ!

ಕಾಡಿ ಪರ್ಣಕುಟೀರದ ಕರ್ಮ, ಜಿಂಕೆ ಮಾರೀಚನ ಚರ್ಮ

ಮಾಯ ಮೃಗ ಬೆನ್ಹತ್ತೂ, ನಿನಗೆ ಸಿಗಲಿಲ್ಲದಾ ಸವಲತ್ತು || 04 ||

ಹೋಗಲಿ ಕಾಡಿನಲ್ಲಾದರೂ ನೆಮ್ಮದಿ, ಸುಖವಿತ್ತೆ? ಪಾಪ, ಅವಳೇನು ಬಯಸಿದರು ಹೊಂದುವ, ಸುಖಿಸುವ ಭಾಗ್ಯವಿರಲಿಲ್ಲವೊ ಏನೊ. ಮಾಯಾಮೃಗ ಮಾರೀಚನ ರೂಪದಲ್ಲಿ ಕಾಣಿಸಿಕೊಂಡು ಆಶೆಗಳನ್ನ ಹುಟ್ಟಿಸಿ, ಮನ ಚಂಚಲವಾಗಿಸಿ ಬಯಕೆಯೆ ಬಂಗಾರದ ಜಿಂಕೆಯಾಗಿ ಬೆನ್ನು ಹಿಡಿಸಿದಾಗ ಸಾಕ್ಷಾತ್ ರಾಮನೆ ಬೆನ್ನತ್ತಿದರೂ ಕೊನೆಗದು ಮಾಯಾಜಿಂಕೆಯಾಗಿ ಪರಿಣಮಿಸಿ, ಮಾರೀಚನಾಗಿ ಸತ್ತು ಬಿತ್ತು. ಸಾಲದೆಂಬಂತೆ ರಾಮನ ದನಿಯಲ್ಲೆ ಸೀತಾ, ಲಕ್ಷ್ಮಣರನ್ನು ಕೂಗಿ ಕರೆದು ಜೀವವನ್ನಪ್ಪಿ, ಲಕ್ಷ್ಮಣನಿಂದಲೂ ಸೀತೆಯನ್ನು ಬೇರ್ಪಡಿಸಿತು. ಕೊನೆಗೆ ಅಷ್ಟೆಲ್ಲಾ ಪಾಡುಪಟ್ಟವಳಿಗೆ ಬಯಸಿದ ಜಿಂಕೆಯಿರಲಿ, ಅದರ ತೊಗಲಾದರೂ ಸಿಕ್ಕಿತೆ? ಅಲ್ಲೂ ನಿರಾಶೆಯೆ; ಕಾಂಚನ ಮೃಗದ ಆಸೆಗೆ ಕೊನೆಗೆ ಸಿಕ್ಕಿದ ಸವಲತ್ತು ಅಪಹರಣದ ನೋವು, ವಿರಹದ ದಳ್ಳುರಿ, ವೇದನೆಯ ಏಕಾಂಗಿ ಹೋರಾಟ. ಪ್ರಾಯಶಃ, ಇಡಿ ರಾಮಾಯಣದಲ್ಲಿ ಸೀತೆ ಪಟ್ಟ ಎಲ್ಲ ತರಹದ ಕಷ್ಟಕ್ಕೂ ಅವಳ ನೇರ ಹೊಣೆ ಅಥವ ಪಾತ್ರ ಇರಲಿಲ್ಲ; ಬರಿ ಅವರಿವರ ನಿರ್ಧಾರಗಳ ಪರಿಣಾಮದುರಿ ಅವಳಿಗೂ ತಗಲಿತ್ತಷ್ಟೆ. ಆದರೆ ಮಾಯಜಿಂಕೆಯ ಪ್ರಕರಣವೊಂದರಲ್ಲಿ ಮಾತ್ರ ಇದು ಅದಲು ಬದಲಾಗಿಹೋಯ್ತು. ಇಲ್ಲಿ ಅವಳ ಬಯಕೆಯೆ ವಿಷಗಳಿಗೆಯಾಗಿ ಅವಳ ಜೀವನದ ದಿಕ್ಕನ್ನೆ ಬದಲಿಸಿಬಿಟ್ಟಿತು. ಇದೊಂದೆ ಅವಳಾಗಿ ಅವಳ ಮೇಲೆ ತಂದು ಹಾಕಿಕೊಂಡ ದುರಂತವಾದರೂ, ಅದರ ಪರಿಣಾಮವೆ ರಾಮಾಯಣದ ರೋಚಕ ಕಥನಕ್ಕೆ ನಾಂದಿಯಾದದ್ದು ಮತ್ತೊಂದು ಬಗೆಯ ಚೋದ್ಯ! ಒಟ್ಟಾರೆ ಒಂದು ಜಿಂಕೆಯ ಚರ್ಮದ ಸವಲತ್ತಿಗೂ ಎರವಾಗಬೇಕಾಗಿ ಬಂದದ್ದು, ಅವಳ ಕರ್ಮ.

ಅವನಾವನೊ ಬ್ರಾಹ್ಮಣ, ಹೊತ್ತೊಯ್ದ ದಶಕಂಠ ರಾವಣ

ಸಂಪಾತಿ ಜಟಾಯು ಕ್ಷುದ್ರ, ಅವಿತಿಟ್ಟನೆ ಲಂಕೆಯ ಭದ್ರ || 05 ||

ಅಂತೂ ರಾವಣನ ಹಂಚಿಕೆಯನುಸಾರ ಎಲ್ಲವು ನಡೆದು, ಆ ಮಹಾಬ್ರಾಹ್ಮಣನ ಕೈ ಸೆರೆಯಾಗಬೇಕಾಯ್ತು. ಅಂತಹ ರಾಮ ಲಕ್ಷ್ಮಣರೆ ಏಮಾರಿದಾಗ ತಡೆದವನನ್ನು ಹೊಡೆದಾಡಲೆತ್ನಿಸಿದ ಹಕ್ಕಿಯೇನು ಲೆಕ್ಕ? ಒಂದು ಜೀವವನ್ನೆ ತೆತ್ತರು, ಮತ್ತೊಂದು ಕನಿಷ್ಟ ಆಗಸದಲಿ ಹೊತ್ತೊಯ್ದವನ ನೋಡಲಷ್ಟೆ ಅದದ್ದು. ಹೇಗಿದ್ದರೂ, ಸೀತೆಯ ಸ್ಥಿತಿಯ ಪರಿಣಾಮ ಮಾತ್ರ ಬದಲಾಗದೆ ಲಂಕಾಧೀಶನ ಭದ್ರ ಬಿಗಿಮುಷ್ಟಿಯಲ್ಲಿ ನರಳುವಂತಾಯ್ತು..

ತಗ್ಗಿಸಿದ ತಲೆಯೆತ್ತದ ಮೌನ, ಹುಲುಕಡ್ಡಿಯಿಡಿದೆ ಧ್ಯಾನ

ಬಂದೆ ಬರುವನು ಶ್ರೀರಾಮ, ಅಂದುಕೊಂಡೆ ಕಳೆದಾ ದಿನ || 06 ||

ಆದರೂ ಅಮಿತ ವಿಶ್ವಾಸ, ಅನಂತವಾದ ನಂಬಿಕೆ, ಶ್ರದ್ದೆಯಿಂದ ವೀರಾಗ್ರಣಿ ರಾಮ ಬಂದೆ ಬರುವನು, ತನ್ನನ್ನು ಸೆರೆಯಿಂದ ಬಿಡಿಸಿ ಕಾಪಾಡಿ ಈ ಜೀವನ್ಮರಣ ಸ್ಥಿತಿಯಿಂದ ಮುಕ್ತನಾಗಿಸುವನು ಎಂದು ಕಾದು ಕುಳಿತವಳ ಸಹನೆ, ತಾಳ್ಮೆ, ತ್ಯಾಗಗಳೆ ಅಸಾಧಾರಣ. ವೃಕ್ಷದಡಿಯಲಿ ಹುಲುಕಡ್ಡಿಯೊಂದರ ಸಖ್ಯ ಹಿಡಿದು ಕೂತು ಮಡುಗಟ್ಟಿದ ಸಂಕಟ, ದುಃಖದ ನಡುವೆಯು ‘ರಾಮ, ರಾಮ’ನೆಂದೆ ಹಲುಬುತ್ತ ದಿನ ಕಳೆದ ಪತಿವ್ರತಾಶಿರೋಮಣಿ, ಜಾನಕಿ.

ಸಹಿಸಿ ವಿರಹಾ ದುರಿತ, ಯೌವ್ವನದ ನೋವೆ ಅಪರಿಮಿತ

ಪತಿಯಿದ್ದೂ ವನದಲೆ ದೂಡಿ, ಕಳೆದ ಕಾಲವೆಲ್ಲ ವೃಕ್ಷದಡಿ || 07 ||

ಹಲುಬಿ ಹುಯಿಲಿಟ್ಟರು ಕೇಳದ ಜಾಗದಲಿ, ಎಕಾಂಗಿಯಾಗಿ ಅಬಲೆ ಅಪರಿಚಿತನ ಆಶ್ರಯದಲ್ಲಿ ನರಳಬೇಕಾದ ಅನಿವಾರ್ಯವೇನು ಸಾಮಾನ್ಯ ನೋವೆ? ಹೇಳಿ ಕೇಳಿ ಯೌವ್ವನ, ಪ್ರಾಯದ ವಯಸ್ಸು. ಮದುವೆಯಾಗಿ ಗಂಡನ ಮನೆ ಸೇರಿ ಬಾಳುವೆಯಾರಂಭಿಸಿದ ಆರಂಭಿಕ ಹಂತದ ಸಮಯ. ಆ ಮಧುರ ಜೀವನದ ಸುಖ, ಸೌಭಾಗ್ಯಗಳನ್ನೆಲ್ಲ ಮನಸಾರೆ, ಪತಿಯೊಡನೆ ಕಾಡಿನಲ್ಲಾದರು ಅನುಭವಿಸುವ ಕಾಲದಲ್ಲೆ ಈ ಅಪಹರಣ ನಡೆದು ಹೋಯ್ತು. ಆ ನಡುವೆ ಒಂದಾಗಿದ್ದ ಕ್ಷಣಿಕ ಗಳಿಗೆಗಳ ನೆನಪಲ್ಲೆ ವಿರಹ, ಬೇಗೆಯನನುಭವಿಸುತ್ತ ಬರಿ ನೋವು, ನೆನಪಿನಲ್ಲೆ ಅಶೋಕವೃಕ್ಷದಡಿ ಕೂತು ಕಾಲ ದೂಡಬೇಕಾದ ಸಮಯದಲ್ಲೂ ವಿಚಲಿತಳಾಗದೆ, ಮನೋಧಾರ್ಡ್ಯ ಕುಂದಲು ಬಿಡದೆ, ತನ್ನ ಪತಿ ಪ್ರೇಮದಾಶವಾದಕ್ಕೆ ಅಂಟಿ ಕುಳಿತವಳು ಈ ವೈದೇಹಿ.

ಕೈಯಲ್ಹಿಡಿದು ಮಿಣುಕು ಜೀವ, ಭಕ್ತ ಹನುಮನದೆ ಭಾವ

ನಂಬಿಕೆ ಶ್ರದ್ದೆ ಸರೋವರದೆ, ಹುಡುಕಲೆಲ್ಲೆಡೆ ಪತಿಯಿರದೆ || 08 ||

ಆ ಸಾಗರದಂತಹ ಅಚಲ ನಂಬಿಕೆ, ನಿಷ್ಟೆಯಾದರು ಎಷ್ಟು ಅಮೋಘವಾದದ್ದು! ಸ್ವಾಮಿಭಕ್ತಿಯಲ್ಹೇಗೆ ಹನುಮನ ಅಚಲ ಶ್ರದ್ದೆ, ಭಕ್ತಿಭಾವಗಳು ಏಕಮೇವಾದ್ವಿತೀಯವೊ, ಅದೆ ರೀತಿಯಲಿ ಪತಿಭಕ್ತಿಯ ಶ್ರದ್ದೆ ಸೀತಾಮಾತೆಯದು. ಅದೂ ಪತಿ ಸಾಕಷ್ಟು ಕಾಲದಿಂದ ಸಮೀಪದಲಿರದಿದ್ದರೂ ತನ್ನಾಶ್ರದ್ದೆಯ ಸರೋವರದಲ್ಲೆ ಮಿಂದು, ಬೆಂದು, ಬಳಲುತ್ತಲೆ ಬಳಿಯಿರದವನ ಹೆಸರನ್ಹುಡುಕಿದ, ರಾಮನ ಹೆಸರನ್ನೆ ಜಪಿಸುತ್ತಲೆ ಕೊರಗಿದ ರಮಣಿ.

ಕೊನೆಗು ಕಾದೆ ಕುಳಿತೆ, ಸರಿ ಕಾದಾಡಿ ಗೆದ್ದವನ ನೀನರಿತೆ

ದೂಷಿಸಿದರೂ ನೀ ಕಳಂಕಿತೆ, ತಾಳಿಕೊಂಡೆ ಬರೆದೆ ಚರಿತೆ || 09 ||

ಲೋಕಾಪವಾದದ ನಿರೀಕ್ಷೆ, ಬಿಡದೆ ಮಾಡಿಸಿತೆ ಅಗ್ನಿಪರೀಕ್ಷೆ

ಬೆಂದು ಬೆಂಕಿಯೊಳಗೆ ಭೀತೆ, ಸಾಧಿಸಬೇಕಾಯ್ತೆ ಪತಿವ್ರತೆ || 10 ||

ಇಷ್ಟೆಲ್ಲಾ ಆದರು ಅವಳಿಗೆ ದೊರಕಿದ ಫಲವಾದರೂ ಏನು? ಅವಳ ಸಲುವಾಗಿಯೆ ಮೂಲೆಮೂಲೆಯನೆಲ್ಲಾ ಹುಡುಕಿ, ಮಿಡುಕಿ, ತಡುಕಾಡಿದ ರಾಮ; ಕಪಿ ಸೈನ್ಯ ಕಟ್ಟಿದ, ಅವಳನಿಟ್ಟ ತಾಣವನ್ನು ಕಂಡುಹಿಡಿಸಿದ, ಸಮುದ್ರಕೆ ಸೇತುವೆ ಕಟ್ಟಿದ, ಪಡಬಾರದ ಪಾಡನ್ನೆಲ್ಲಾ ಪಟ್ಟು ಸೇನೆಯೊಡನೆ ಲಂಕೆಯ ತಟದಲಿ ಬಂದು ಕಾದಾಡಿ, ಹೋರಾಡಿ, ಆತಂಕಾತಂಕದ ಕ್ಷಣಗಳನೆಲ್ಲಾ ಎದುರಿಸಿ ಕೊನೆಗೂ ರಾವಣನ ನೆಚ್ಚಿನ ಭಂಟರ, ನೆಂಟರ, ಬಂಧುಜನರನೆಲ್ಲ ಸಂಹರಿಸಿ ವಿಜಯ ಸಂಪಾದಿಸಿದ – ಎಲ್ಲಾ ಸೀತೆಯ ಹಿಂಪಡೆಯುವ ಸಲುವಾಗಿ. ಅದರೆ ಆಮೇಲೇನಾಯ್ತು? ದೂರದೂರ ಅಪರಿಚಿತ ನೆಲ, ನೆಲೆಯ ಸಂಕಟಗಳಿಂದ ಕಡೆಗೂ ಮುಕ್ತಳಾದವಳ ಆಲಂಗಿಸಿ, ರಮಿಸಿ, ಮೈದಡವಿ ಅವಳ ಛಲ, ನಿಷ್ಟೆ, ಪತಿ ಪ್ರೇಮಗಳ ಅಭಿನಂದಿಸುವ ಬದಲು ಲೋಕಾಪವಾದದ ಸೆರಗ್ಹಿಡಿದ ಶ್ರೀರಾಮಚಂದ್ರ. ಗಂಡನಿಂದ ಅಷ್ಟೊಂದು ವರ್ಷ ದೂರದಲ್ಲಿ, ಪರಪುರುಷನ ವಶದಲಿದ್ದ ಹೆಣ್ಣನ್ನು ನಂಬಿ ಸ್ವೀಕರಿಸಲ್ಹೇಗೆ ಎಂದುಬಿಟ್ಟ. ಒಂದು ದುಃಖದ ಮಡುವಿನಿಂದ ಮತ್ತೊಂದಕ್ಕೆ ಚೆಲ್ಲಿದ ಸಂಕಟದ ಜೊತೆಗೆ, ಕಳಂಕಿನಿ ಎಂಬ ದೋಷಾರೋಪಣೆಯನ್ನು ಹೊತ್ತು ನಿವಾರಿಸುವ, ನಿಭಾಯಿಸುವ ಹೊಣೆಯೂ ಅವಳ ಮೇಲೆ ಬಿತ್ತು. ಅಷ್ಟೆಲ್ಲ ಅವಮಾನ, ದೂಷಣೆಗಳನ್ನು ತಾಳಿಕೊಂಡೆ ಅಗಿಪರೀಕ್ಷೆಯಂತಹ ಅಗ್ನಿಪರೀಕ್ಷೆಯಲ್ಲೂ ಗೆದ್ದು ವಿಚಿತ್ರ ಪರಿಸ್ಥಿತಿಯಲ್ಲಿ ಚರಿತ್ರೆ ಬರೆಯುವಂತಹ ಅನಿವಾರ್ಯಕ್ಕೆ ಸಿಲುಕಿತಾ ಹೆಣ್ಣು ಜೀವ.

ರಾಣಿಯಾಗೂ ತುಸೆ ಹೊತ್ತು, ಲವಕುಶರನು ಹೊಟ್ಟೆಗ್ಹೊತ್ತು

ಕೇಳಗಸನ ಮಾತು, ಮತ್ತೆ ಕಾಡಿಗಟ್ಟಿತ್ತೆ ಮರ್ಯಾದೆ ಕುತ್ತು || 11 ||

ಜನನಿ ಅರಮನೆಯಲ್ಹುಟ್ಟಿ, ಕಾನನ ಸೆರೆಮನೆಯಾಗೂ ಗಟ್ಟಿ

ಮಕ್ಕಳ್ಹೆರಲೂ ದುರ್ಗತಿ ಸತಿಗೆ, ಆಶ್ರಮವೆ ಸೂತಕದ ಗತಿಗೆ || 12 ||

ಸರಿ ಮುಗಿಯಿತು ಲೋಕಾಪವಾದ ಹೊರಿಸುವವರ ತೃಪ್ತಿಪಡಿಸಿದ ಕಥೆ. ಅಲ್ಲೂ ಗೆದ್ದು ಬಂದು ತಾನು ಪುನೀತೆಯೆ ಎಂದು ಜಗಕ್ಕೆಲ್ಲಾ ಸಾರಿದ್ದೂ ಆಯ್ತು. ಇನ್ನಾದರೂ ಮುಗಿಯಿತೊ ಬವಣೆಗಳ ಶೂಲ? ಇನ್ನಾದರೂ ನೆಮ್ಮದಿಯಿಂದ ರಾಣಿಯಾಗಿ ಸುಖಭೋಗಗಳನನುಭೋಗಿಸೋಣವೆಂದರೆ ಅಲ್ಲೂ ಬಿಡಲಿಲ್ಲಾ ಪೀಡೆ. ಅಗಸನ ನೆಪದಲ್ಲಿ ಶೂರ್ಪನಖಿಯ ಸಂಚಿನೊಳಸಂಚನ್ಹೊತ್ತು ಮತ್ತೆ ಅಪವಾದದ ರೂಪದಲ್ಲಿ ಬಂದೆರಗಿತು. ಸೀತೆಯ ಜೀವನದಲ್ಲಿ ಮತ್ತೊಂದು ಹೆಣ್ಣು ನೇರ ಅಥವಾ ಅಪ್ರತ್ಯಕ್ಷ್ಯವಾಗಿ ಕೈಹಾಕಿ ಘಾಸಿಗೊಳಿಸಿದ್ದೆ ಹೆಚ್ಚು. ಅದು ಕೈಕಯಿ ರೂಪವೊ, ಮಂಥರೆಯ ಕಿವಿ ಚುಚ್ಚಾಟವೊ ಅಥವಾ ಯಾವುದೆ ರೀತಿಯ ನೇರ ಸಂಬಂಧ, ನೆಂಟೆ ಇರದ ಶೂರ್ಪನಖಿಯೊ – ಅವರವರ ಸ್ವಾರ್ಥ, ಷಡ್ಯಂತ್ರಗಳ ಸಾಧನೆಗೆ ಅವರೆಲ್ಲಾರಾಡಿದ ಆಟ ಸೀತೆಯ ಬದುಕಿನ ದುರಂತವಾಗಿದ್ದು ಮಾತ್ರ ನಿಜಕ್ಕೂ ವಿಷಾದನೀಯ. ಅದರಲ್ಲೂ ಶೂರ್ಪನಖಿಯ ಪಾತ್ರವಂತೂ ಅತೀವ ಘಾಸಿಗೊಳಿಸಿದ ರಕ್ಕಸಿ ಕೃತ್ಯ – ಅದೂ ಒಂದಲ್ಲ, ಎರಡು ಬಾರಿ. ಮೊದಲಿಗೆ ಕಾಡಿನಲ್ಲಿ ರಾಮ ಲಕ್ಷ್ಮಣರ ಮೇಲಿನ ಮೋಹ ವಿಫಲವಾದಾಗ ಆ ಸೇಡಿಗೆ ಬಲಿಯಾದದ್ದು ಸೀತೆ. ತನ್ನಪಾಡಿಗೆ ಸುಮ್ಮನಿದ್ದ ರಾವಣನನ್ನು ಪ್ರೇರೆಪಿಸಿ, ಅವನಲ್ಲಿ ಸೀತೆಯ ಆಸೆಯ್ಹುಟ್ಟಿಸಿ, ಮೋಹದ ಬಲೆಗೆ ಕೆಡವಿದ ಪರಿಣಾಮ ಯಾವ ತಪ್ಪನ್ನು ಮಾಡಿರದ ಸೀತೆಯ ಮೇಲೆ ಆಯ್ತು. ಅದೆಲ್ಲಾ ಹೇಗೊ ಮುಗಿಯಿತಲ್ಲ ಎಂದು ಅಯೋಧ್ಯೆಗೆ ಹಿಂತಿರುಗಿ ಹೊಸಬಾಳು ಆರಂಭಿಸಿದರೆ, ಅಲ್ಲೂ ಅಗಸ-ಅಗಸಗಿತ್ತಿಯ ಅವತಾರದಲಿ ಕಾಡಿತ್ತು ಶೂರ್ಪನಖಿಯ ಕಾಟ. ಜನಾನುರಾಗಿ ಶ್ರೀರಾಮನ ದೌರ್ಬಲ್ಯದ ಎಳೆ ಹಿಡಿದು ಕೇವಲ ಹೀಯಾಳಿಕೆಯ ಮಾತೊಂದರಿಂದಲೆ ರಾಮನಲ್ಲಿ ಕಂಪನದಲೆಗಳನ್ನೆಬ್ಬಿಸಿ, ಮನಸನ್ನೆ ಅಸ್ಥಿರಗೊಳಿಸಿ ತುಂಬು ಗರ್ಭಿಣಿಯಾಗಿದ್ದ ಸೀತೆಯ ಪರಿಸ್ಥಿತಿಯನ್ನು ಪರಿಗಣಿಸದೆ ಮತ್ತೆ ಕಾಡಿಗೊಯ್ದುಬಿಡುವಂತೆ ಮಾಡಿತ್ತು. ಇಲ್ಲಿ ನಿಜಕ್ಕೂ ಅಚ್ಚರಿಯಾಗುವುದು ಶೂರ್ಪನಖಿಯ ಚಾತುರ್ಯ, ಜಾಣ್ಮೆ, ಬುದ್ದಿಬಲದ ಕುರಿತು. ನೇರವಾಗಿ ರಣರಂಗಕ್ಕಿಳಿಯದೆ, ಕಿಂಚಿತ್ತೂ ಕೈ ಮಣ್ಣು ಮಾಡಿಕೊಳ್ಳದೆ, ತನ್ನ ಹೆಸರನ್ನಾಗಲಿ ಪಾತ್ರವನ್ನಾಗಲಿ ಮೇಲೆದ್ದು ಕಾಣುವ ಸ್ತರದಲ್ಲಿಡದೆ ಕೇವಲ ನೇಪಥ್ಯದಿಂದಲೆ ರಾಮ, ರಾವಣರಿಂದಿಡಿದು ಹಲವು ಗಂಡಸರನ್ನು ಸೂತ್ರದ ಬೊಂಬೆಗಳಂತಾಡಿಸಿ ಅವರಿಗರಿವಿಲ್ಲದಂತೆಯೆ ಅವರ ಕೈಲಿ ತನಗೆ ಬೇಕಾದ್ದನ್ನು ಸಾಧಿಸಿಕೊಂಡ ತರವೆ ಅದ್ಭುತದತಿಶಯ. ಬಹುಶಃ ಇಡಿ ರಾಮಾಯಣದ ಮುಖ್ಯ ತಿರುವುಗಳ ಕಾರ್ಯತಂತ್ರದ (ಸ್ಟ್ರಾಟೆಜಿಯ) ವಿಷಯಕ್ಕೆ ಬಂದರೆ, ಅವಳದೆ ನಿಸ್ಸಂದೇಹವಾಗಿ ಅಗ್ರಸ್ಥಾನ. ಅದರಲ್ಲೂ ರಂಗದಲ್ಲಿ ನೇರವಾಗಿಲ್ಲದೆ , ಪರೋಕ್ಷವಾಗಿ ಅವಳು ಸಾಧಿಸಿದ ಗುರಿಯನ್ನು ಗಮನಿಸಿದರೆ ಕೊನೆಗೆ ಸೀತೆಗಿಂತ ಅವಳೆ ಬದುಕಿನಲ್ಲಿ ಹೆಚ್ಚು ಸುಖ ಸಂತೋಷ ಪಟ್ಟವಳೆಂದು ಧಾರಾಳವಾಗಿ ಹೇಳಬಹುದು!

ಈ ಕುತಂತ್ರದಿಂದಾಗಿ ಇಲ್ಲೂ ಏಟು ತಿಂದ ರಾಣಿ ಸೀತೆ ಕೊನೆಗೆ ಅವಳಿ ಮಕ್ಕಳನ್ಹೊತ್ತ ಗರ್ಭದಲ್ಲೆ ಮತ್ತೆ ಕಾನನವೆಂಬ ಸೆರೆಮನೆಗೆ ಹೋಗಿ ಬದುಕುವ ದುರ್ಗತಿಗೀಡಾಗಬೇಕಾಯ್ತು. ಎಲ್ಲ ಐಭೋಗ, ಐಶ್ವರ್ಯಗಳಿದ್ದರೂ ಅದನ್ನು ಮನಸಾರೆ ಅನುಭವಿಸುವ ಯೋಗ ಮಾತ್ರ ಸೀತೆಗಿಲ್ಲದೆ ಹೋದದ್ದು ಅವಳ ಬದುಕಿನ ಮತ್ತೊಂದು ದುರಂತ. ಕೊನೆಗೆ ತವರು ಮನೆಯಿದ್ದೂ, ಗಂಡನ ಮನೆಯೂ ಇದ್ದೂ ಕಾಡಿನಲ್ಲಿ ಋಷಿಯೊಬ್ಬನ ಆಶ್ರಮದಲ್ಲಿ ಹಡೆಯುವ, ಸೂತಕ ಕಳೆಯುವ ಸಂಕಷ್ಟ ಪರಂಪರೆಗೊಳಗಾಗಬೇಕಾಯ್ತು!

ಸಾಲದೆಂಬಂತೆ ವಿಧಿಯಾಟ ಕುಹಕ, ಅಪ್ಪಾ ಮಕ್ಕಳ ಚಳಕ

ಎದುರುಬದುರಲೆ ನಿಂತೆ ಯುದ್ಧ, ಸ್ತ್ರೀ ದುಃಖವಾಗಿ ಸಮೃದ್ದ || 13 ||

ಕೊನೆಗೂ ಒಡೆಯಿತು ಸಹನೆ, ಬಿರಿದ ಭೂಮಿಯಡಿಗೆ ತಪನೆ

ಭೂತಾಯ ಮಡಿಲಲ್ಹುಟ್ಟಿ, ಭೂತಳವೆ ಕೊನೆಗಾಗೋಯ್ತೆ ಗಟ್ಟಿ || 14 ||

ಕಾಣುವ ಜೀವನವೆಲ್ಲ ದುರಂತಕಥೆ, ಸುಖವೆಲ್ಲಾದರೂ ಇತ್ತೆ?

ಹೆಸರಿಗೆ ರಾಮನ ಪಕ್ಕ ಸೀತೆ, ಜೀವನವೆಲ್ಲಾ ದೂರವಿದ್ದ ಕಥೆ || 15 ||

ಅಲ್ಲಿಗೂ ಕೊನೆಯಾಗದ ಈ ದುರಂತ ನಾಯಕಿಯ ಪ್ರವರ ಮತ್ತೆ ಮುಂದಿನ ಪೀಳಿಗೆಯ ಲವ-ಕುಶ ಜನನದ ನಂತರವೂ ಮುಂದುವರೆಯಿತು. ತಂದೆ ಯಾರು, ಎಲ್ಲಿ ಎಂಬ ಪ್ರಶ್ನೆಗಳನ್ನುತ್ತರಿಸುವ ವೇದನೆಯ ಜತೆ ಮುಂದೊಂದು ದಿನ ಅಶ್ವಮೇಧಯಾಗದ ಕುದುರೆಯಾಗಿ ಬಂದ ವಿಧಿ ತಂದೆ ಮಕ್ಕಳ ನಡುವೆಯೆ ಯುದ್ಧ ಮಾಡುವ ಸ್ಥಿತಿಗೆ ಕೆಡವಿತು. ಹೀಗೆ ಒಂದರ ಹಿಂದೊಂದರಂತೆ ಸಾಲಾನುಸಾಲಾಗಿ, ಪುಂಖಾನುಪುಂಖವಾಗಿ ಬಂದೆರಗಿದ ಕೋಟಲೆಗಳ ಸಾಲಿಗೆ ಒಂದೆ ವ್ಯಾಖ್ಯಾನವೆಂದರೆ ‘ಸ್ತ್ರೀ ದುಃಖವಾಗಿ ಸಮೃದ್ದ..’. ನನಗಂತೂ ಸೀತೆಯ ಬದುಕಿನ ಯಾವ ಹಂತದಲ್ಲಿ ನೋಡಿದರೂ ( ಬಾಲ್ಯದಲ್ಲೂ ನೆಲದಡಿ ಸಿಕ್ಕವಳ ಪಾಡಾಯ್ತು ಅವಳದು) ಬರಿ ದುರಂತಗಳೆ ಸುತ್ತುವರಿದ, ಹೆಚ್ಚೆಂದರೆ ಸುಖ ನೆಮ್ಮದಿಯ ಲೇಪನವಷ್ಟೆ ಕಾಣುವ ವಿಧಿ ವೈಪರೀತ್ಯ. ಹೆಸರಿಗಷ್ಟೆ ರಾಮನ ಜತೆ, ರಾಮನ ಪಕ್ಕ ( ಕೇವಲ ಚಿತ್ರ ಪಟಕ್ಕೆ ಮಾತ್ರವೇನೊ ಎಂಬಂತೆ). ಕೊನೆಗಿದೆಲ್ಲ ಮುಕ್ತಿಯಾಗಿದ್ದಾದರೂ ಎಲ್ಲಿ? ಮತ್ತೆ ದುರಂತದ ಮಡಿಲಲ್ಲೆ. ಸಹಿಸಿ ಸಹಿಸಿಯೆ, ಸಹನೆಯ ಕಟ್ಟೆಯೊಡೆಯಿತೊ ಎಂಬಂತೆ ಕೊನೆಗೆ, ಇನ್ನು ಎಳ್ಳಷ್ಟು ಮಾತ್ರವೂ ಸಹಿಸಲಾರೆ ಎಂಬಂತೆ ಬಿರಿದ ಭೂ ಮಾತೆಯ ಮಡಿಲಲಿ ಆಶ್ರಯ ಬೇಡಿ, ಮತ್ತೆ ಬಂದ ಭುವಿಯ ಮಡಿಲನ್ನೆ ಸೇರುವ ಪಡಿಪಾಟಲಾಯ್ತು ಅವಳದು – ಕೊನೆಗೂ ಭೂಮಿಯ ತಳವಷ್ಟು ಮಾತ್ರವೆ ಗಟ್ಟಿ ಎಂಬಂತೆ. ಹೀಗೆ ಅಂತ್ಯದಲ್ಲೂ ಬರಿ ದುರಂತದ ಛಾಯೆಯೆ!

ಪತಿವ್ರತೆಯ ಹೆಸರಿನಲಿ ಸವೆದ ದುರಂತ ನಾಯಕಿ ಜಾನಕಿ

ಎಲ್ಲಿತ್ತೊ ಭೂಮಿಯ ಸಹನೆ, ಬಹುಶಃ ಭೂಜಾತಳಾ ಕರುಣೆ || 16 ||

ಕಾರಣವಿತ್ತೊ ಬಿಟ್ಟಿತೊ ಕೊನೆ, ಅನುಭವಿಸಿಬ್ಬರೂ ಯಾತನೆ

ಒಟ್ಟುಗೂಡಿದ್ದ ಸಂತಸದಾ ಗಳಿಗೆ, ಚಿತ್ರಗಳಲಷ್ಟೆ ಕಂಡ ಬಗೆ || 17 ||

ಪ್ರಾಯಶಃ ಭೂಮಾತೆಯ ಮಡಿಲಿಂದ ನೇರ ಹುಟ್ಟಿ ಬಂದ ಕಾರಣಕ್ಕೊ ಏನೊ – ಅವಳದು ಭೂತಾಯಿಯದೆ ಸಹನೆ, ತಾಳ್ಮೆ. ಪತಿವ್ರತಾ ಧರ್ಮದ ಹೆಸರಲ್ಲಿ ಎಲ್ಲವನ್ನು ಮೂಕವಾಗಿ ಅನುಭವಿಸಿದಳೆ ಹೊರತು, ಹೋರಾಡಿ ಪ್ರತಿರೋಧಿಸಲಿಲ್ಲ. ವಿಧಿಯಿತ್ತ ಕರ್ಮವೆಂದು ಬಗೆದು ರೋಧಿಸಿ ಸವೆದವಳ ಪಾತ್ರ ಒಂದೆಡೆ ಆದರ್ಶದ ಮೇರು ಸೀಮೆಯೆನಿಸಿದರೆ ಮತ್ತೊಂದೆಡೆ ಸ್ತ್ರೀಕುಲದ ಶೋಷಣೆಯ ಪ್ರಾತಿನಿಧಿಕವೂ ಆಗುವುದು ಒಂದು ರೀತಿಯ ಪೌರಾಣಿಕ ವ್ಯಂಗ್ಯವೂ ಹೌದು. ಸಂಪ್ರದಾಯ ನಂಬಿಕೆಗಳ ಬೇಲಿಯಲ್ಲಿ ಮಹಾನ್ ಎನಿಸುವ ಸಂಘಟನೆಗಳೆ , ತಾರ್ಕಿಕ ಹಾಗೂ ವೈಚಾರಿಕ ನೆಲೆಗಟ್ಟಿನಲ್ಲಿ ಅಸಂಬದ್ಧವಾಗಿ ಕಾಣುವುದು ಈ ಸೀತೆಯ ಪಾತ್ರದಷ್ಟೆ ದುರಂತವೆನಿಸುವ ವಾಸ್ತವ. ಇದಕ್ಕೆ, ಆಗ ನಡೆದಿರಬಹುದಾದ ಸಂಘಟನೆಗಳೆಲ್ಲ ತಮ್ಮದೆ ಆದ ಸಾಪ್ರದಾಯಿಕ ನೆಲೆಗಟ್ಟಿನ ಚೌಕಟ್ಟಿನೊಳಗೆ ಬಿಂಬಿತವಾಗಿ, ಉಳಿದುಕೊಂಡು ಬಂದಿರುವುದು ಕಾರಣವಾಗಿರಬಹುದು. ಹಿನ್ನಲೆಯಾಗಿ ಬೇರೇನೊ ನಡೆದಿದ್ದರೂ, ಅದರ ಅರಿವಿಲ್ಲದೆ, ದಾಖಲೆಗಳಿಲ್ಲದೆ ಮತ್ಯಾವ ತೀರ್ಮಾನಕ್ಕೂ ಬರಲಾಗದ ಸ್ಥಿತಿಯೂ ಕಾರಣವಿರಬಹುದು.

ಹೀಗಾಗಿ ಇಡಿ ಸೀತೆಯ ಪ್ರಕರಣವನ್ನೆ ಆಗಲಿ, ರಾಮಾಯಣವನ್ನೆ ಆಗಲಿ ಒಟ್ಟಾರೆ ಅವಲೋಕಿಸಿದರೆ ಕಾರಣವಿರಲಿ ಬಿಡಲಿ ಸೀತಾ ರಾಮರಿಬ್ಬರು ಒಂದಲ್ಲ ಒಂದು ಬಗೆಯ ಯಾತನೆ, ವೇದನೆ ಅನುಭವಿಸುತ್ತಲೆ ಜೀವನ ಕಾಲ ಕಳೆದುಬಿಡುತ್ತಾರೆ. ಆದರೆ ಈಗ ನಾನು ನೋಡುತ್ತಿರುವ ಈ ಚಿತ್ರ ಪಟದಲ್ಲಿ ಮಾತ್ರ (ಅಥವ ನಾನು ನೋಡಿರುವ ಎಲ್ಲಾ ಚಿತ್ರ ಪಟಗಳಲ್ಲೂ – ಕೆಲವು ಪೈಂಟಿಂಗುಗಳನ್ನು ಹೊರತು ಪಡಿಸಿ), ರಾಮಾಸೀತೆಯರು ಜತೆಯಲಿರುವ ಅನೋನ್ಯ ಚಿತ್ರಣವೆ ಕಾಣುತ್ತದೆ. ಅದೇನು ಮಾನವತ್ವದಿಂದ ದೈವತ್ವಕ್ಕೇರಿಸುವ ಹಂಬಲವೊ, ಅಥವಾ ತುಸು ಕಾಲ ಮಾತ್ರವೆ ಮಿಂಚಿ ಮಾಯವಾದ ಅವರ ಸುಖ ಜೀವನದ ತುಣುಕನ್ನು ಬಿಡದೆ ಕಟ್ಟಿಡಿದು ಕಾಪಾಡುವ ಯತ್ನವೊ (ನಾವು ನಮ್ಮ ಮದುವೆಯ ಪೋಟೊ ಫ್ರೇಮ್ ಹಾಕಿ ಜತನದಿ ಎತ್ತಿಡುವ ಹಾಗೆ). ಅಥವಾ ಆ ಬದುಕಿನ ಹಿಂದಡಗಿದ ವಿಷಾದ, ವೇದನೆಗಳನ್ನೆಲ್ಲಾ ಒಂದು ಸುಂದರ ಆವರಣದೊಳಗೆ ಬಚ್ಚಿಡುವ ಹುನ್ನಾರವೂ ಇರಬಹುದು! ( ನಮ್ಮ ಕಂಪ್ಯೂಟರೊಳಗಿನ ಕಲಸು ಮೇಲೋಗರವನ್ನೆಲ್ಲಾ, ಸುಂದರವಾದ ಸ್ಕ್ರೀನ್ ಸೇವರಿನಿಂದ ಮುಚ್ಚಿ ಹಾಕುವಂತೆ).

ಒಟ್ಟಾರೆ ದುರಂತ ನಾಯಕಿ ಸೀತೆಯ ಬದುಕು ಆ ನಗುಮೊಗದ ಚಿತ್ರ ಹೇಳುವಷ್ಟು ಸುಖಮಯವಲ್ಲವೆಂದು ನನ್ನ ಅಭಿಪ್ರಾಯ. ನೀವೇನನ್ನುವಿರೊ?

– ನಾಗೇಶ ಮೈಸೂರು

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!