ಅವರ ಆ ಅಯಾಸಗೊಂಡ ದೇಹ, ನೋವನ್ನು ಸಾರಿ ಹೇಳುತ್ತಿದ್ದ ಮುಖ, ಮೂಗಿನ ಮೂಲಕ ಹೋಗಿದ್ದ ಕೃತಕ ಆಹಾರನಳಿಕೆ, ಇದನ್ನೆಲ್ಲಾ ದೂರದಲ್ಲಿ ನಿಂತು ನೋಡುತ್ತಿದ್ದವಳು ಅಳು ತಡೆಯಲಾಗದೇ ರೂಮಿಗೆ ಓಡಿದೆ. ಅಮ್ಮ ಊಟಕ್ಕೆ ಕರೆಯಲು ಬಂದಾಗ ರೂಮಿನ ಮೂಲೆಯಲ್ಲಿ ಕುಳಿತು, ಮಂಡಿಯೊಳಗೆ ಮುಖ ಹುದುಗಿಸಿ ಬಿಕ್ಕುತ್ತಿದ್ದೆ. “ಯಾಕೆ ಅಳ್ತಾ ಇದೀಯಾ?” ಎಂದರು ಅಮ್ಮ ಹತ್ತಿರ ಬಂದು. “ಅಜ್ಜನಿಗೆ ತುಂಬಾ ನೋವಾಗ್ತಿದೆ ಇರಬೇಕು ಅಲ್ವಾ?” ಎಂದೆ ಅಳುಮೋರೆಯಲ್ಲೇ. ನಿಟ್ಟುಸಿರಿಟ್ಟ ಅಮ್ಮ, “ಹೌದು, ಆದ್ರೆ ನೀನು ಹೀಗೆ ಅಳ್ತಾ ಕೂತರೆ ಅವ್ರ ನೋವು ಕಡಿಮೆ ಆಗಲ್ಲ ಅಲ್ವಾ? ಅವರ ಆಸುಪಾಸು ಇರು. ಇದರಿಂದ ಅವರಿಗೆ ಸ್ವಲ್ಪ ಸಮಾಧಾನ ಆಗಬಹುದು. ಈಗ ಸದ್ಯ ಊಟ ಮಾಡು ಬಾ” ಎಂದು ಸಮಾಧಾನ ಮಾಡುತ್ತಾ ಕರೆದುಕೊಂಡು ಹೋದರು.
ಆಗಿನ್ನೂ ಐದು ವರ್ಷ ನನಗೆ. ಕ್ಯಾನ್ಸರ್ ಅಂದರೆ ಏನು ಅನ್ನುವ ಕಲ್ಪನೆಯೂ ಇರಲಿಲ್ಲ. ಆದರೆ ಅಜ್ಜನಿಗೆ ತುಂಬಾ ನೋವಾಗ್ತಿದೆ ಅನ್ನೋದು ಮಾತ್ರ ಅರ್ಥವಾಗ್ತಿತ್ತು.
ಅಜ್ಜನಿಗೆ ಅನ್ನನಾಳದ ಕ್ಯಾನ್ಸರ್ ಆಗಿತ್ತು. ಮಣಿಪಾಲಿನಲ್ಲಿ ಚಿಕಿತ್ಸೆ ಕೊಡಿಸಿದರೂ ಅದು ಫಲಕಾರಿಯಾಗದೇ ಮನೆಗೆ ವಾಪಾಸ್ಸು ಕರೆತರಲಾಗಿತ್ತು. ಗಂಟಲಿನಲ್ಲಿ ಆಹಾರ ಇಳಿಯುತ್ತಿರಲಿಲ್ಲ, ಮೂಗಿಗೆ ಅಳವಡಿಸಿದ್ದ ಆಹಾರನಳಿಕೆಯ ಮೂಲಕವೇ ಆಹಾರ ನೀಡುವುದಾಗಿತ್ತು. ಜೊತೆಗೆ ಅತೀವ ನೋವು ಬೇರೆ.
ಸಾಮಾನ್ಯವಾಗಿ ಮಕ್ಕಳಿಗಿಂತ ಮೊಮ್ಮಕ್ಕಳ ಮೇಲೆ ಪ್ರೀತಿ ಹೆಚ್ಚು ಎನ್ನುತ್ತಾರೆ. ನಾನಂತೂ ಅವರ ಮುದ್ದಿನ ಮೊಮ್ಮಗಳಾಗಿದ್ದೆ. ಅಜ್ಜ ಯಾವಾಗಲೂ ತಮ್ಮ ಹೆಗಲ ಮೇಲೆ ನನ್ನ ಕೂರಿಸಿಕೊಂಡು ಊರೆಲ್ಲ ಸುತ್ತಿಸುತ್ತಿದ್ದರು. ಕೇಳಿದ್ದೆಲ್ಲಾ ಕೊಡಿಸುತ್ತಿದ್ದರು. ಅದೆಲ್ಲಾ ಮಸುಕಾದ ನೆನಪಷ್ಟೇ ಈಗ! ಅದರೆ ನನ್ನ ಮನದಲ್ಲಿ ಅಚ್ಚೊತ್ತಿದ ಅವರ ನೆನಪುಗಳು ಎಂದರೆ ಪ್ರತಿದಿನ ರಾತ್ರಿ ಮಲಗುವಾಗ ಅವರು ಹೇಳುತ್ತಿದ್ದ ಕಥೆ. ಯಾವತ್ತೂ ಮುಗಿಯದ ಕಥೆ!
ಪ್ರತಿದಿನ ರಾತ್ರಿ ಊಟದ ನಂತರ, ನನ್ನ ಹಾಗೂ ತಮ್ಮನನ್ನ ಮಲಗಿಸುತ್ತಾ ಅಜ್ಜ ಕಥೆ ಹೇಳುತ್ತಿದ್ದರು. ಅದೊಂಥರ ವಿಶಿಷ್ಟ ಕಥೆ. ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನ ಅರಮನೆಯ ಪಕ್ಕದಲ್ಲೊಂದು ದೊಡ್ಡ ಉದ್ಯಾನ ಇತ್ತು. ಅಲ್ಲಿ ಒಂದು ದೊಡ್ಡ ಹಣ್ಣಿನ ಮರ. ಇಡೀ ಮರವೇ ಚಿಕ್ಕದಾದ ಕೆಂಪು ಬಣ್ಣದ ಹಣ್ಣುಗಳಿಂದ ತುಂಬಿಹೋಗಿತ್ತು. ಒಂದು ದಿನ ಗಿಳಿಯೊಂದು ಬಂದು ಆ ಹಣ್ಣನ್ನ ಕಚ್ಚಿಕೊಂಡು ಹಾರಿಹೋಯ್ತು. ತುಂಬಾ ರುಚಿಯಾಗಿತ್ತು ಆ ಹಣ್ಣು. ಮರುದಿನ ಅದೇ ಹಣ್ಣಿಗಾಗಿ ಆ ಗಿಳಿ ಮತ್ತೆ ಬಂದು ಹಣ್ಣನ್ನ ಕಚ್ಚಿಕೊಂಡು ಹಾರಿಹೋಯಿತು. ಅಷ್ಟೇ, ನಮಗೆ ನಿದ್ದೆ ಬರುವವರೆಗೂ ಗಿಳಿಗೆ ಹಣ್ಣು ತಿನ್ನುವುದೇ ಕೆಲಸ!! ಪ್ರತಿದಿನ ಇದೇ ಕಥೆ. ನಮಗೂ ಕಥೆ ಕೇಳಿ ಕೇಳಿ ಬೇಜಾರು ಬಂದಿತ್ತು. ಒಂದು ದಿನ ಬೇಜಾರಾಗಿ,
“ಅಜ್ಜ, ನೀವು ದಿನಾ ಇದೇ ಕಥೆ ಹೇಳ್ತೀರ. ನಮಗೆ ಬೇಜಾರು ಬಂದಿದೆ. ಬೇರೆ ಕಥೆ ಹೇಳಿ” ಎಂದೆ. ಅದಕ್ಕವರು,”ಅರ್ರೆ.. ನೀವು ಕಥೆ ಮುಗಿಯುವುದಕ್ಕೂ ಮೊದಲೇ ನಿದ್ದೆ ಮಾಡೋದು ಯಾಕೆ. ಇವತ್ತು ಪೂರ್ತಿ ಕಥೆ ಕೇಳಿ. ನಾಳೆ ಬೇರೆ ಕಥೆ ಹೇಳ್ತೀನಿ” ಎನ್ನುತ್ತಿದ್ದರು. ಆದರೆ ಆ ಕಥೆ ಮುಗಿಯುವುದಕ್ಕೆ ಹೇಗೆ ಸಾಧ್ಯ? ಅದು ಇದ್ದಿದ್ದೇ ನಮಗೆ ನಿದ್ದೆ ಬರಿಸುವುದಕ್ಕೆ.
ಆ ಗಿಳಿ ಹಣ್ಣು ತಿನ್ನುವುದನ್ನ ನಿಲ್ಲಿಸಲೂ ಇಲ್ಲ, ಕಥೆ ಪೂರ್ತಿ ಆಗಲೂ ಇಲ್ಲ. ಪೂರ್ತಿ ಆಗಲೂ ಬಿಡದಂತೆ ಕ್ಯಾನ್ಸರ್ ಎಂಬ ಮಹಾಮಾರಿ ನಮ್ಮ ಮಧ್ಯೆ ಬಂದು ನಿಂತಿತ್ತು.
ಕ್ಯಾನ್ಸರ್ ಅಂದರೇನು ಅಂತೆಲ್ಲಾ ಅರ್ಥ ಆಗಿರಲಿಲ್ಲ. ಆದರೆ ಅದು ಅಜ್ಜನಿಗೆ ತುಂಬಾ ನೋವು ಕೊಟ್ಟಿತ್ತು, ಅವರಿಂದ, ಅವರು ಹೇಳುತ್ತಿದ್ದ ಕಥೆಯಿಂದ ನನ್ನನ್ನ ದೂರ ಮಾಡಿತ್ತು ಅಂತ ಮಾತ್ರ ಗೊತ್ತಿತ್ತು. ಅದೊಂದು ರೀತಿಯ ಬೇಸರವಿತ್ತು ಕ್ಯಾನ್ಸರ್ ಮೇಲೆ. ಅದಕ್ಕೆ ಏನೋ, ‘ಈ ಬೇಸರ ಎಲ್ಲ ಬೇಡ, ಈ ಬಾರಿ ನಾವಿಬ್ಬರು ಸ್ವಲ್ಪ ಲೆಕ್ಕಾಚಾರ ಮಾಡಿಕೊಳ್ಳೋಣ’ ಎಂಬಂತೆ ಎದುರಿಗೆ ಬಂದು ನಿಂತಿತ್ತು!! ಸ್ವಲ್ಪ ನೋವು, ಜಾಸ್ತಿ ಪಾಠ ಎನ್ನುವಂತೆ. ಎಲ್ಲಾ ನೋವುಗಳು ಪಾಠಗಳನ್ನು ಹೇಳಿಕೊಡತ್ತೆ. ಕ್ಯಾನ್ಸರ್ ಎನ್ನುವುದು ಜೀವನದ ಬಹುಮುಖ್ಯ ಪಾಠ ಹೇಳಿಕೊಡುತ್ತೆ. “ಜೀವನ” ಎಂಬ ಪಾಠ, ಬದುಕುವ ಕಲೆಯನ್ನ ತೋರಿಸಿಕೊಡುತ್ತೆ.
ನಾನು ಕ್ಯಾನ್ಸರ್’ನಿಂದ ಬಳಲುತ್ತಿದ್ದಾಗ ಅಜ್ಜನನ್ನು ನೆನಪಿಸಿಕೊಳ್ಳುತ್ತಿದ್ದೆ. ಅವರ ನೋವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದೆ. ಕೀಮೋನಿಂದಾಗಿ ಒಂದು ತುತ್ತು ತಿನ್ನುವುದೂ ದುಸ್ತರ ಎನಿಸಿದಾಗ ಯಾರ ಸ್ಥಿತಿ ಬೆಟರ್ ಎಂದು ಯೋಚಿಸಿದ್ದೆ. ಆದರೆ ಅದೊಂದು ರೀತಿಯ ಸ್ಟುಪಿಡ್ ಪ್ರಶ್ನೆ. ನೋವಿನಲ್ಲಿ ಗುಡ್, ಬೆಟರ್ ಅಂತೆಲ್ಲಾ ಇರಲು ಹೇಗೆ ಸಾಧ್ಯ. ನೋವು ನೋವೇ! ಆದರೆ ಸವಾಲುಗಳು ಯಾವಾಗಲೂ ಭಿನ್ನವೇ. ಅವರು ಎದುರಿಸಿದ ಸವಾಲುಗಳು ತುಂಬಾ ದೊಡ್ಡದಾಗಿತ್ತು. ಕ್ಯಾನ್ಸರಿನ ನೋವು ಒಂದು ಕಡೆ, ತಮ್ಮ ಆ ನೋವಿನಲ್ಲಿ ಜೊತೆಯಾಗಿ ನಿಲ್ಲಬೇಕಿದ್ದ ಪತ್ನಿ, ಹಠಾತ್ತನೇ ಹಾಸಿಗೆ ಹಿಡಿದಿದ್ದು, ಪ್ರತಿದಿನ ತಮ್ಮ ನೋವಿನೊಂದಿಗೆ ಅಜ್ಜಿಯ ಹದಗೆಡುತ್ತಿದ್ದ ಪರಿಸ್ಥಿತಿಯ ಕಂಡಿದ್ದು, ನಂತರ ಅವರ ಸಾವು! ಇವೆಲ್ಲ ದೊಡ್ಡ ಅಘಾತವೇ ಆಗಿತ್ತು ಅವರಿಗೆ. ಈಗ ಯೋಚಿಸಿದರೆ ಆ ದಿನಗಳು ಎಷ್ಟು ಕಷ್ಟಕರವಾಗಿದ್ದಿರಬಹುದು ಎನಿಸುತ್ತದೆ. ಆದರ ಅದೆಲ್ಲಾ ನನ್ನ ಊಹೆಗೂ ಮೀರಿದ್ದು.
ಸ್ವಲ್ಪ ಲೆಕ್ಕಾಚಾರ ಮಾಡಿಕೊಳ್ಳೋಣ ಎಂದು ಬಂದ ಕ್ಯಾನ್ಸರ್ ಲಾಭ ನೀಡಿದ್ದೇ ಹೆಚ್ಚು. ಸುಮ್ಮನೇ ಯೋಚಿಸಿದರೆ, ಅದಿಲ್ಲದಿದ್ದರೆ ಬದುಕು ಹೀಗಿರುತ್ತಿರಲ್ಲ ಎಂದು ಅನ್ನಿಸುವುದಂತೂ ನಿಜ. ಅದು ಹೇಳಿಕೊಟ್ಟಷ್ಟು ಪಾಠಗಳು ಯಾವ ಯೂನಿವರ್ಸಿಟಿಯಲ್ಲಿಯೂ ಸಿಗುವುದಿಲ್ಲ. ಆ ಪಾಠಗಳು ಇಲ್ಲದಿದ್ದಿದ್ದರೆ ಬದುಕು ಬಹಳ ನೀರಸವಾಗಿರುತ್ತಿತ್ತೇನೋ.?? ಹಾಂ, ಸಣ್ಣಕ್ಕಿದ್ದಾಗ ಅಜ್ಜನನ್ನು ನನ್ನಿಂದ ದೂರ ಮಾಡಿದ್ದಕ್ಕೆ ಅದರ ಮೇಲೆ ಬೇಸರ ಇದ್ದದ್ದು ನಿಜ, ಆ ಬೇಸರವನ್ನು ಹೋಗಲಾಡಿಸುವುದಕ್ಕೇ ಮತ್ತೆ ನನ್ನೆದುರಿಗೆ ಬಂದಂತಿತ್ತು. ಕಿವಿ ಹಿಂಡಿ ಬದುಕ ಪಾಠ ಹೇಳಿಕೊಟ್ಟಿತ್ತು.