ಭೂಮಿ ಅಥವಾ ಈ ವಿಶ್ವದ ಪ್ರಾಯ ಎಷ್ಟು? ಬೈಬಲ್ ಪ್ರಕಾರ, ಭೂಮಿಯನ್ನು ದೇವರು ಆರು ದಿನಗಳಲ್ಲಿ ಸೃಷ್ಟಿಸಿದ. ಮತ್ತು ಈ ಸೃಷ್ಟಿಕಾರ್ಯ ಸುಮಾರು 6,000 ವರ್ಷಗಳ ಹಿಂದೆ ನಡೆಯಿತು. ಭೂಮಿಯನ್ನು ಮೊದಲು ಸೃಷ್ಟಿಸಿದ ದೇವರು ನಂತರ ಚಂದ್ರ, ಸೂರ್ಯ, ನಕ್ಷತ್ರಾದಿಗಳನ್ನು ಸೃಷ್ಟಿಸಿ ಕೊನೆಗೆ ಹಗಲು-ರಾತ್ರಿಗಳನ್ನೂ ಜೀವರಾಶಿಯನ್ನೂ ಹುಟ್ಟಿಸಿ ಸೃಷ್ಟಿಯ ಮೊದಲ ಗಂಡುಹೆಣ್ಣುಗಳಾದ ಆಡಂ-ಈವ್’ರಿಗೆ ಜನ್ಮ ಕೊಟ್ಟ. ಇದು ವಿಶ್ವಸೃಷ್ಟಿಯ ಬಗ್ಗೆ ಬೈಬಲ್’ನ ಅವತರಣಿಕೆ. ವಿಶ್ವದ ಹುಟ್ಟು ಹೇಗಾಯಿತು, ಎಷ್ಟು ಪ್ರಾಚೀನದಲ್ಲಾಯಿತು ಎಂಬುದರ ಬಗ್ಗೆ ಖುರಾನ್’ನಲ್ಲಿ ಯಾವುದೇ ಉಲ್ಲೇಖವೂ ಇಲ್ಲ. ಹೆಚ್ಚುಕಡಿಮೆ ಅದು ಬೈಬಲ್’ನ ಮಾತುಗಳನ್ನು ಅನುಮೋದಿಸುವಂತೆ ಕಾಣುತ್ತದೆ. ಹಾಗಾಗಿ, ಜಗತ್ತಿನ ಮೂರು ಮುಖ್ಯ ರಿಲಿಜಿಯನ್ನುಗಳಾದ ಯಹೂದಿ, ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂಗಳು ಭೂಮಿಯೂ ಬ್ರಹ್ಮಾಂಡವೂ 6,000 ವರ್ಷಗಳಿಂದೀಚೆಗಷ್ಟೇ ಅಸ್ತಿತ್ವದಲ್ಲಿವೆ ಎಂಬುದನ್ನು ಹೇಳುತ್ತವೆ ಮತ್ತು ಒಪ್ಪುತ್ತವೆ. ಈ ವಾದಕ್ಕೆ ತೀರಾ ಭಿನ್ನವಾದ ದಿಕ್ಕಿನಲ್ಲಿ ಹೆಜ್ಜೆ ಇಡುತ್ತದೆ ಭಾರತೀಯ ಪರಂಪರೆ. ಇಲ್ಲಿನ ವೇದ, ಪುರಾಣ, ಸ್ಮೃತಿಗಳಿಗೆ ಭೂಮಿಯ ಸೃಷ್ಟಿಯ ಪ್ರಶ್ನೆ ನಗಣ್ಯವಾಗುತ್ತದೆ. ಅದಕ್ಕಿಂತ ಆಚೆಗೆ ಚಾಚಿರುವ ಬೃಹತ್ ಬ್ರಹ್ಮಾಂಡ, ಅರ್ಥಾತ್ ವಿಶ್ವ ಹಲವು ಲಕ್ಷ ಕೋಟಿ ವರ್ಷಗಳಷ್ಟು ಹಿಂದೆ ಕಣ್ಣುಬಿಟ್ಟಿತು ಎನ್ನುತ್ತವವು! ನಮ್ಮ ಕಣ್ಣುಗಳಿಗೆ ಕಾಣುವುದಷ್ಟೇ ಅಲ್ಲ, ದೃಗ್ಗೋಚರವಲ್ಲದೆ ಆಚೆಗೂ ಹರಡಿಕೊಂಡಿರುವ ಈ ವಿಸ್ತಾರವಾದ ವ್ಯವಸ್ಥೆಯನ್ನು ಬ್ರಹ್ಮನಿಗೆ ಹೋಲಿಸಿ, ಆತನಿಗೆ ನೂರು ವರ್ಷ ಆಯಸ್ಸು ಎಂದು ಹೇಳಿ, ಆ ಮಾನಕ್ಕೆ ತಕ್ಕಂತೆ ಕಾಲವನ್ನು ವಿಘಟಿಸಿಕೊಂಡು ಬರುತ್ತಾರೆ ವೈದಿಕ ಋಷಿಗಳು.
ದೈನಂದಿನ ವ್ಯವಹಾರಕ್ಕೆ ನಮಗೆ ಸೆಕೆಂಡು, ನಿಮಿಷ, ತಾಸುಗಳು ಸಾಕು. ಲೋಕವ್ಯವಹಾರಕ್ಕೆ ತಿಂಗಳು, ಮಾಸ, ದಶಕಗಳ ಅಗತ್ಯವೂ ಇದೆಯೆನ್ನಿ. ಇನ್ನು ಇತಿಹಾಸದ ಅಧ್ಯಯನದಲ್ಲಿ ಶತಮಾನ, ಸಹಸ್ರಮಾನಗಳನ್ನೂ ಓದುತ್ತೇವೆ. ಜೀವವಿಜ್ಞಾನಿಗಳೂ ಆರ್ಕಿಯಾಲಜಿಸ್ಟ್’ಗಳೂ ಭೂಗರ್ಭದಿಂದ ಯಾವಾವುದೋ ಪಳೆಯುಳಿಕೆಗಳನ್ನು ತೆಗೆದು ಇವೆಲ್ಲ ಒಂದೆರಡು ಲಕ್ಷ ವರ್ಷಗಳಷ್ಟು ಹಳೆಯವು ಎನ್ನುವಾಗಲೇ ನಮ್ಮಲ್ಲಿ ಕೆಲವರಿಗೆ ಆ ಸಂಖ್ಯೆಯ ಭಾರಕ್ಕೆ ಬವಳಿ ಬರಬಹುದು. ಭೂಮಿಯ ಆಯುಷ್ಯ ಸದ್ಯಕ್ಕೆ ನಾಲ್ಕುನೂರು ಕೋಟಿ ವರ್ಷಗಳು ಎನ್ನುವಷ್ಟರಲ್ಲಿ ಮೂರ್ಛೆಯೇ ಹೋದಾರು. ಲಕ್ಷವರ್ಷ, ಕೋಟಿವರ್ಷಗಳನ್ನೆಲ್ಲ ನಮ್ಮ ಬುದ್ಧಿ ಗ್ರಹಿಸುವುದಿಲ್ಲ. ಅಷ್ಟೆಂದರೆ ಎಷ್ಟಾಗುತ್ತದೆ ಎಂಬುದರ ಅಂದಾಜೂ ಸಿಗುವುದಿಲ್ಲ. ಎಷ್ಟೋ ಯಾರಿಗ್ಗೊತ್ತು; ನಮ್ಮ ತಿಳಿವಳಿಕೆಯನ್ನೂ ಮೀರಿಹೋಗುವ ಮಹಾಕಾಲ ಅಷ್ಟೆ ಎಂದುಬಿಡುತ್ತೇವೆ. ವಿಶ್ವದ ಸೃಷ್ಟಿಯಾದದ್ದು 13.7 ಬಿಲಿಯನ್, ಅಂದರೆ 1370 ಕೋಟಿ ವರ್ಷಗಳ ಹಿಂದೆ. ಅದೇ ಸೃಷ್ಟಿಯ ಆದಿ. ಮಹಾಸ್ಫೋಟ. ಅದಕ್ಕಿಂತ ದೊಡ್ಡ ಕಾಲ ಪರಿಮಾಣ ನಮಗೆ ಗೊತ್ತಿಲ್ಲ. ಅಷ್ಟು ವರ್ಷಗಳ ಆಚೆಗೂ ಏನಾದರೂ ಇರಲು ಸಾಧ್ಯವಿದೆಯೇ ಎಂದರೆ ಕೆಲ ವಿಜ್ಞಾನಿಗಳು, ಅದಕ್ಕಿಂತ ಹಿಂದೆ ಕಾಲವೆಂಬ ಸಂಗತಿಯೇ ಅಸ್ತಿತ್ವದಲ್ಲಿರಲಿಲ್ಲ ಎಂದುಬಿಡುತ್ತಾರೆ. ಅದೂ ಸರಿಯೆನ್ನಿ. ಸೃಷ್ಟಿಯ ಅಸ್ತಿತ್ವ ಇದ್ದರಷ್ಟೇ ಕಾಲಕ್ಕೂ ಅರ್ಥ ತಾನೇ? ಸೃಷ್ಟಿಯಲ್ಲದೆ ಕೇವಲ ಕಾಲ ಮಾತ್ರ ಇತ್ತು ಎಂದರೆ ಏನರ್ಥ? ಆಧುನಿಕ ಭೌತವಿಜ್ಞಾನ ಮತ್ತು ಪಾಶ್ಚಾತ್ಯ ತತ್ತ್ವಶಾಸ್ತ್ರಗಳಲ್ಲಿ ಕಾಲಕ್ಕೆ ನಿರಪೇಕ್ಷವಾದ ಸ್ವಯಂ ಅಸ್ತಿತ್ವವಿಲ್ಲ. ಆದರೆ, ಇವೆಲ್ಲಕ್ಕಿಂತ ಸಾವಿರಾರು ಪಟ್ಟು ದೊಡ್ಡದಾದ ಕಾಲದ ಲೆಕ್ಕಾಚಾರ ಭಾರತೀಯ ಪ್ರಾಚೀನ ಪರಂಪರೆಯಲ್ಲಿತ್ತು! ಅಷ್ಟೊಂದು ದೊಡ್ಡ ಕಾಲ ಪರಿಮಾಣಗಳು ನಮ್ಮವರಿಗೆ ಯಾತಕ್ಕೆ ಬೇಕಾದವು? ಕಾಲದ ಉದ್ದಗಲಗಳನ್ನು ಕ್ರಮಬದ್ಧವಾದ ಆರೋಹಣ ಕ್ರಮದಲ್ಲಿಡುವ ಆಲೋಚನೆ ಅವರಿಗೆ ಬಂದದ್ದಾದರೂ ಹೇಗೆ? ಅವೆಲ್ಲ ಕಾಲಗರ್ಭದಲ್ಲಿ ಹುಗಿದುಹೋಗಿರುವ ರಹಸ್ಯ.
ವೇದಗಳಲ್ಲಿ ಎರಡು ಬಗೆಯ ಕಾಲಗಳನ್ನು ಹೇಳುತ್ತಾರೆ. ಒಂದು ಮಾನುಷ, ಇನ್ನೊಂದು ದೈವಿಕ. ಮನುಷ್ಯನ 1 ವರ್ಷ, ದೇವಕಾಲದಲ್ಲಿ ಒಂದು ದಿನಕ್ಕೆ ಸಮ. ಹಾಗೆಯೇ, 360 ಮಾನುಷ ವರ್ಷಗಳು ಕಳೆದಾಗ, ಅದು ಒಂದು ದೇವ ವರ್ಷಕ್ಕೆ ಸಮನಾಗುತ್ತದೆ. ಹೀಗೆ ಎರಡು ಮಾನಗಳನ್ನು ಬಳಸಿಕೊಳ್ಳುವುದರಿಂದ, ದೊಡ್ಡ ಸಂಖ್ಯೆಗಳನ್ನು ಬಳಸದೆಯೂ ಬ್ರಹದ್ರೂಪದ ಕಾಲವ್ಯಾಪ್ತಿಯನ್ನು ಸೂಚಿಸಲಿಕ್ಕೆ ಸಾಧ್ಯ ಎಂಬುದು ಒಂದು ಅನುಕೂಲ. ದೂರದ ವಿಷಯಕ್ಕೆ ಬಂದಾಗ ನಾವೀಗ ಜ್ಯೋತಿರ್ವರ್ಷ, ಜ್ಯೋತಿರ್ಮಾನ ಮುಂತಾದ ಮಾನಗಳನ್ನು (ಯೂನಿಟ್ಸ್ ಆಫ್ ಡಿಸ್ಟೆನ್ಸ್) ಬಳಸುತ್ತೇವಲ್ಲ, ಇದೂ ಹಾಗೆಯೇ. ವರ್ಷ ಅಥವಾ ಸಂವತ್ಸರದ ಜೊತೆಗೆ, ಪ್ರಾಚೀನರ ಕಾಲನಿರ್ಣಯ ಲೆಕ್ಕಾಚಾರಗಳಲ್ಲಿ ಮತ್ತೆ ಮತ್ತೆ ಬರುವ ಇನ್ನೊಂದು ಪರಿಕಲ್ಪನೆಯೆಂದರೆ “ಯುಗ”. ಒಟ್ಟು ನಾಲ್ಕು ಯುಗಗಳು: ಕೃತ, ತ್ರೇತಾ, ದ್ವಾಪರ ಮತ್ತು ಕಲಿ. ಯುಗಗಳ ಬಗ್ಗೆ ವಿಷ್ಣುಪುರಾಣದಲ್ಲಿ ಹೇಳುತ್ತಾರೆ: ಕಲಿಯುಗದ ಲೆಕ್ಕಾಚಾರ ಮಾಡುವಾಗ ಸಂಧ್ಯಾ, ಯುಗ ಮತ್ತು ಸಂಧ್ಯಾಂಶ ಎಂಬ ಮೂರು ಭಾಗಗಳನ್ನು ಮಾಡಿ, ಅವುಗಳಲ್ಲಿ ಕ್ರಮವಾಗಿ 100, 1000 ಮತ್ತು 100 ದೇವವರ್ಷಗಳನ್ನು ಪರಿಗಣಿಸಬೇಕು ಮತ್ತು ಇದನ್ನು ಒಟ್ಟಾಗಿ ಕಲಿಯುಗದ ಅವಧಿ ಎಂದು ಭಾವಿಸಬೇಕು. ಅಂದರೆ, 1200 ದೇವವರ್ಷಗಳು, ಅರ್ಥಾತ್ ಭೂಮಿಯ ಮೇಲೆ ನಡೆಯುವ ಒಟ್ಟು (1200 * 360=) 4,32,000 ಮಾನುಷ ವರ್ಷಗಳು ಒಂದು ಕಲಿಯುಗಕ್ಕೆ ಸಮ. ಕೃತಯುಗದ ಕಾಲಾವಧಿ ಇದರ ನಾಲ್ಕುಪಟ್ಟು. ತ್ರೇತಾಯುಗದ್ದು ಮೂರು ಪಟ್ಟು, ದ್ವಾಪರದ್ದು ಎರಡು ಪಟ್ಟು. ಕೃತ, ತ್ರೇತಾ, ದ್ವಾಪರ ಮತ್ತು ಕಲಿಯುಗಗಳ ಕಾಲಾವಧಿಗಳು 4:3:2:1 ಅನುಪಾತದಲ್ಲಿವೆ. ಹಾಗಾಗಿ, ನಾಲ್ಕೂ ಯುಗಗಳ ಒಟ್ಟು ಕಾಲಾವಧಿ, (17,28,000) + (12,96,000) + (8,64,000) + (4,32,000) = 43,20,000 ವರ್ಷಗಳು. ಅಲ್ಲಿಗೆ ಮುಗಿಯಿತು ಎನ್ನುವಂತಿಲ್ಲ! ಇದು ಕಾಲಚಕ್ರದ ಒಂದು ಆವರ್ತ ಅಷ್ಟೆ. ಕಲಿಯುಗದ ಅಂತ್ಯವಾಗುತ್ತಲೇ ಪ್ರಳಯವಾಗಿ ಚಕ್ರ ಮತ್ತೆ ಕೃತಯುಗಕ್ಕೆ ಬಂದು ನಿಲ್ಲುತ್ತದೆ. ಪ್ರಳಯವೆಂದರೆ ಇಲ್ಲಿ ಆವರ್ತದ ಮುಕ್ತಾಯ ಎಂದು ಅರ್ಥ. ಪುರಾಣಗಳು ಕೊಡುವ ಇದೇ ವಿವರಣೆಯನ್ನು ಮನುಸ್ಮೃತಿಯ ಮೊದಲ ಅಧ್ಯಾಯವೂ ವಿಸ್ತೃತವಾಗಿ ವರ್ಣಿಸುತ್ತದೆ.
ನಾಲ್ಕು ಯುಗಗಳ ಒಂದು ಆವರ್ತಕ್ಕೆ ಚತುರ್ಯುಗ ಅಥವಾ ಮಹಾಯುಗ ಎಂದು ಹೆಸರು. ಇಂಥ 71 ಚತುರ್ಯುಗಗಳಿಗೆ ಒಂದು ಮನ್ವಂತರ. ಹದಿನಾಲ್ಕು ಮನ್ವಂತರಗಳು ಒಟ್ಟಾಗಿ ಒಂದು ಕಲ್ಪ. ಕಲ್ಪವೆಂದರೆ ಬ್ರಹ್ಮನ ಒಂದು ಹಗಲು. ಹಗಲು ಮತ್ತು ಇರುಳು ಎರಡನ್ನೂ ಒಳಗೊಂಡ ಬ್ರಹ್ಮನ ಒಂದು ದಿನ ಎರಡು ಕಲ್ಪಗಳಿಗೆ ಸಮ. ಇದು ಭೂಮಿಯ ಮೇಲೆ ಮನುಷ್ಯ ಸಂತತಿ ಕಳೆಯುವ 864 ಕೋಟಿ ವರ್ಷಗಳಿಗೆ ಸಮ! ಒಟ್ಟು 720 ಕಲ್ಪಗಳು ಕಳೆದರೆ ಅದು ಬ್ರಹ್ಮನ ಒಂದು ವರ್ಷ. ಅಂಥ ನೂರು ಬ್ರಹ್ಮವರ್ಷಗಳು ಸಂದರೆ ಬ್ರಹ್ಮಪಟ್ಟ. ಅಲ್ಲಿಗೆ ಇಡೀ ವಿಶ್ವದ ಸೃಷ್ಟಿ-ಸ್ಥಿತಿ-ಲಯಗಳು ಮುಗಿದು ಚಿದಾನಂದ ಸ್ಥಿತಿ! ಬ್ರಹ್ಮನ ಆಯಸ್ಸನ್ನು ಮನುಷ್ಯನ ನೆಲೆಯಿಂದ ಗುಣಿಸಿ ನೋಡಿದರೆ, ಅದು ಒಟ್ಟು 3.11 ಕೋಟಿ ಕೋಟಿ ವರ್ಷಗಳು. ಸಂಖ್ಯೆಗಳಲ್ಲಿ ಬರೆಯುವುದಾದರೆ 31104ರ ಮುಂದೆ 10 ಸೊನ್ನೆ ಹಾಕಿದರೆಷ್ಟೋ ಅಷ್ಟು ವರ್ಷಗಳ ಬೃಹತ್ ಕಾಲಾವಧಿ. ಈಗಿನ ವಿಜ್ಞಾನ ಹೇಳುವ ಬಿಗ್’ಬ್ಯಾಂಗ್ ಯಾ ಮಹಾಸ್ಫೋಟ 13.7 ಬಿಲಿಯನ್ ವರ್ಷಗಳ ಹಿಂದೆ ನಡೆಯಿತೆಂದು ಹೇಳಬಹುದಾದರೆ, ಅಂದಿನಿಂದ ಇಂದಿನವರೆಗಿನ ವಿಶ್ವದ ಪ್ರಾಯ ಬ್ರಹ್ಮನ ಲೆಕ್ಕಾಚಾರದಲ್ಲಿ ಒಂದೂವರೆ ದಿನಕ್ಕೆ ಸಮ ಅಷ್ಟೆ!
ಹಾಗಾದರೆ ನಾವಿನ್ನೂ ವಿಶ್ವದ ಆದಿಮ ಸ್ಥಿತಿಯಲ್ಲಿದ್ದೇವೆಯೇ? ಭಾರತೀಯ ಪರಂಪರೆ ಹೇಳುವಂತೆ, ಈಗಾಗಲೇ ಹಲವು ಪ್ರಳಯಗಳೂ ಹಲವು ಕಾಲಚಕ್ರಗಳೂ ಕೋಟ್ಯಂತರ ಮಾನುಷ ವರ್ಷಗಳೂ ವಿಶ್ವದಲ್ಲಿ ಆಗಿಹೋಗಿವೆ. ತನ್ನ ಜೀವಿತಾವಧಿಯಲ್ಲಿ ಬ್ರಹ್ಮ ಆಗಲೇ ಭರ್ಜರಿಯಾದ ಅರ್ಧಶತಕ ಸಿಡಿಸಿ, 51ನೇ ವರ್ಷದ ಮೊದಲ ದಿನಕ್ಕೆ ಪಾದಾರ್ಪಣೆ ಮಾಡಿದ್ದಾನೆ. ಬ್ರಹ್ಮನ ಪ್ರತಿದಿನವೂ ಎರಡು ಕಲ್ಪಗಳು, ಅಂದರೆ 2000 ಮಹಾಯುಗಗಳ ಬಾಬ್ತು. ಈ ಕಲ್ಪಗಳಲ್ಲಿ ನಾವೀಗ ಮೊದಲ ಕಲ್ಪದಲ್ಲಿದ್ದೇವೆ. ಇದಕ್ಕೆ ಶ್ವೇತವರಾಹ ಕಲ್ಪ ಎಂದು ಹೆಸರು. ಇದರಲ್ಲಿ ಈಗಾಗಲೇ ಆರು ಮನ್ವಂತರಗಳು (ಅಂದರೆ ಒಟ್ಟು 426 ಮಹಾಯುಗಗಳು) ಕಳೆದು ಏಳನೆಯದಾದ ವೈವಸ್ವತ ಮನ್ವಂತರದಲ್ಲಿದ್ದೇವೆ. ಮತ್ತು ಇದರಲ್ಲೂ ಆಗಲೇ 27 ಮಹಾಯುಗಗಳು ಪೂರ್ತಿಯಾಗಿ ಮುಗಿದು ಇಪ್ಪತ್ತೆಂಟನೆಯದಕ್ಕೆ ಕಾಲಿಟ್ಟಿದ್ದೇವೆ. ಈ ಮಹಾಯುಗದಲ್ಲಿ ಮೊದಲ ಮೂರು – ಕೃತ, ತ್ರೇತಾ, ದ್ವಾಪರ ಯುಗಗಳು ಕಳೆದು ಕೊನೆಯದಾದ ಕಲಿಯುಗಕ್ಕೆ ಬಂದಿದ್ದೇವೆ. ಕಲಿಯುಗದ ನಾಲ್ಕನೇ ಒಂದು ಭಾಗ ಇನ್ನೂ ಮುಗಿದಿಲ್ಲ. ನಮ್ಮದಿನ್ನೂ ಮೊದಲ ಪಾದ. ಸಂಧ್ಯಾವಂದನೆಯ ಸಂದರ್ಭದಲ್ಲಿ ಈ ಇಡೀ ಕತೆಯನ್ನು ನಾವು ಶುಭೇ ಶೋಭನೇ ಮುಹೂರ್ತೇ ಆದ್ಯಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತವರಾಹ ಕಲ್ಪೇ ಸಪ್ತಮೇ ವೈವಸ್ವತ ಮನ್ವಂತರೇ ಅಷ್ಟಾವಿಂಶತಿತಮೆ ಮಹಾಯುಗೇ ಕಲಿಯುಗೇ ಪ್ರಥಮ ಪಾದೇ.. ಎಂದು ನೆನಪಿಸಿಕೊಳ್ಳುತ್ತೇವೆ. ಕಲಿಯುಗ ಪ್ರಾರಂಭವಾಗಿ 5115 ವರ್ಷಗಳು ಕಳೆದು ಇದೀಗ 5116ನೇ ವರ್ಷ ನಡೆಯುತ್ತಿದೆ. ಮಹಾಭಾರತ ಯುದ್ಧ ಮುಗಿದು ಮೂವತ್ತಾರು ವರ್ಷಗಳ ನಂತರ ದ್ವಾಪರ ಯುಗ ಕೊನೆಗೊಂಡು ಕಲಿಯುಗ ಪ್ರಾರಂಭವಾಯಿತು. ಮಹಾಭಾರತದ ಕಾಲಘಟ್ಟವನ್ನೂ ಗ್ರಹ-ನಕ್ಷತ್ರಾದಿಗಳ ಚಲನೆಯನ್ನೂ ಗಣನೆಗೆ ತೆಗೆದುಕೊಂಡು ಕ್ರಿಸ್ತಪೂರ್ವ 3102ರ ಫೆಬ್ರವರಿ 17-18ರ ರಾತ್ರಿ ಕಲಿಯುಗ ಪ್ರಾರಂಭವಾಯಿತೆಂದು ಮೊತ್ತಮೊದಲ ಬಾರಿಗೆ ಲೆಕ್ಕ ಹಾಕಿ ಹೇಳಿದವನು, ಕ್ರಿಸ್ತಶಕ ಐದನೇ ಶತಮಾನದಲ್ಲಿದ್ದ ಅಗ್ರಮಾನ್ಯ ಗಣಿತಜ್ಞ ಕುಸುಮಪುರದ ಆರ್ಯಭಟ. ಈ ಲೆಕ್ಕಾಚಾರದ ಪ್ರಕಾರ, ವಿಶ್ವದ ಸೃಷ್ಟಿಯಾಗಿ ಇಂದಿಗೆ 15,55,21,96,08,53,116 ವರ್ಷಗಳಾದವು.
ಜಗತ್ತಿನಲ್ಲಿ ಇದುವರೆಗೆ ಬಂದುಹೋಗಿರುವ ಎಲ್ಲ ಕಾಲನಿರ್ಣಯಗಳಿಗಿಂತ ಭಿನ್ನವೂ ಸಂಕೀರ್ಣವೂ ಆದ ಈ ಲೆಕ್ಕಾಚಾರಗಳು ಭಾರತೀಯರ ಗಣಿತ ಎಷ್ಟು ಮುಂದುವರಿದಿತ್ತೆಂಬುದಕ್ಕೂ ಅದ್ಭುತವಾದ ಸಾಕ್ಷಿ. ಯುಗಗಳ ಪರಿಕಲ್ಪನೆಯ ಮೂಲಕ ಎರಡು ವಿಷಯಗಳನ್ನು ಭಾರತೀಯರು ಜಗತ್ತಿಗೆ ಹೇಳಿದರು. ಒಂದು, ಕಾಲ ಸರಳರೇಖಾತ್ಮಕವಲ್ಲ; ಆವರ್ತ ಗುಣವಿರುವ ಭೌತಿಕ ಸಂಗತಿ. ಈ ಮಾತುಗಳನ್ನು ಪುಷ್ಟೀಕರಿಸುವ ಮಾತುಗಳನ್ನು ಇತ್ತೀಚೆಗೆ ಸ್ಟ್ರಿಂಗ್ ಸಿದ್ಧಾಂತ ಕೂಡ ಆಡುತ್ತಿದೆ. ವಿಶ್ವ ಎಂದೆಂದೂ ನಿಶ್ಚಲ ಸ್ಥಿತಿಯಲ್ಲಿರುವ ಅಥವಾ ಸದಾ ವಿಸ್ತರಿಸುತ್ತ ಹೋಗುತ್ತಿರುವ ಸಾಧ್ಯತೆ ಇಲ್ಲ. ಅದಕ್ಕೆ ಸೃಷ್ಟಿ-ಸ್ಥಿತಿ-ಲಯಗಳ ಚಕ್ರಗತಿಯಿರಬಹುದು ಎಂಬ ವಾದವನ್ನು ಹಲವು ಭೌತವಿಜ್ಞಾನಿಗಳು ಮುಂದಿಡುತ್ತಿದ್ದಾರೆ. ಎರಡನೆಯದಾಗಿ, ಭಾರತೀಯರು ಮಾನುಷ, ದೇವ, ಬ್ರಹ್ಮ ಕಾಲಗಳೆಂಬ ಭಿನ್ನ ಮಾನಗಳನ್ನು ಬಳಸುವ ಮೂಲಕ, ಕಾಲವೆಂಬುದು ಎಲ್ಲ ಸ್ಥಿತಿಗಳಲ್ಲೂ ಒಂದೇ ಆಗಿರಲಾರದು; ಭಿನ್ನ ಆಯಾಮಗಳಲ್ಲಿ ಅದು ಭಿನ್ನ ವೇಗಗಳನ್ನು ಪಡೆದುಕೊಳ್ಳಬಹುದು ಎಂಬುದನ್ನೂ ಸೂಚಿಸಿದರು. ಸಮಯ ನಿರಪೇಕ್ಷವಲ್ಲ ಎಂಬುದೇ ಐನ್’ಸ್ಟೈನ್’ರ ಸಾಪೇಕ್ಷ ಸಿದ್ಧಾಂತದ ಬುನಾದಿಯೂ ಕೂಡ! ಹಿಂದೂ ಸಂಪ್ರದಾಯದಲ್ಲಿ ದಿನ, ವಾರ, ತಿಂಗಳುಗಳಷ್ಟೇ ಪುನರಾವರ್ತನೆಯಾಗುವುದಲ್ಲ; ವರ್ಷಗಳೂ ಮತ್ತೆ ಮತ್ತೆ ಸುತ್ತಿ ಬರುತ್ತವೆ. ನಮಗೆ 60 ಸಂವತ್ಸರಗಳ ಕೋಷ್ಟಕವಿದೆ. ಈಗಿನ ದುರ್ಮುಖ ಸಂವತ್ಸರ ಆರು ದಶಕಗಳ ಬಳಿಕ ಮರಳಿ ಬರುತ್ತದೆ. ವರ್ಷದ ಲೆಕ್ಕಾಚಾರಕ್ಕೆ ಭೂಮಿಯ ಚಲನೆಯನ್ನು ಪರಿಗಣಿಸಿದ ನಮ್ಮವರು ಸಂವತ್ಸರ ಚಕ್ರಕ್ಕೆ ಗುರು ಗ್ರಹದ ಚಲನೆಯನ್ನು (ಇದರ ಆವರ್ತನಾವಧಿ ಸರಿಸುಮಾರು 12 ವರ್ಷ ಮತ್ತು ಅರವತ್ತು 12ರ ಗುಣಕ) ಆಧಾರವಾಗಿಟ್ಟುಕೊಂಡರು ಎನ್ನುವುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಹಾಗಾಗಿ, ಸಂವತ್ಸರ ಚಕ್ರಕ್ಕಿಂತ ಬಹುದೊಡ್ಡದಾದ ಯುಗದ ಲೆಕ್ಕಾಚಾರಕ್ಕೆ ನಮ್ಮವರು ಇನ್ನೂ ದೂರದ ಆಕಾಶ ಕಾಯಗಳನ್ನು ಆಧಾರವಾಗಿಟ್ಟುಕೊಂಡಿರುವ ಸಾಧ್ಯತೆ ಇದ್ದೇ ಇದೆ. ವಿಷ್ಣುಪುರಾಣದಲ್ಲಿ ಯುಗದ ವ್ಯಾಖ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿಯ ಮಾತುಗಳು ಆಕಾಶದಲ್ಲಿ ನಡೆಯುವ ಯಾವುದೋ ವಿದ್ಯಮಾನವನ್ನು ಸೂಚಿಸುತ್ತಿರುವ ಭಾಸವಾಗುತ್ತದೆ. ಬುಗುರಿ ತಿರುಗುವಾಗ ಅದರ ತಲೆ ಸ್ಥಿರವಾಗಿರದೆ ಗಾಳಿಯಲ್ಲಿ ವೃತ್ತ ಕೊರೆದಂತೆ ಸುತ್ತುವುದನ್ನು ನೋಡಿದ್ದೀರಿ ತಾನೆ? ಭೂಮಿಯೂ ಹೀಗೆಯೇ, ತನ್ನ ಅಕ್ಷದಲ್ಲಿ ಗಿರಗಿಟ್ಲೆ ತಿರುಗುತ್ತಿರುವ ಹೊತ್ತಿನಲ್ಲಿಯೇ ಚಂದ್ರ ಮತ್ತು ಸೂರ್ಯರ ಗುರುತ್ವದೆಳೆತಕ್ಕೆ ಪಕ್ಕಾಗಿ ಅತ್ತಿತ್ತ ತಲೆಯಾಡಿಸುತ್ತಲೇ ಇರುತ್ತದೆ. ಇದರ ಕುಲುಕಾಟ ಎಷ್ಟು ತೀವ್ರವಾಗಿದೆಯೆಂದರೆ, ಅಕ್ಷವೆಂಬ ದೀರ್ಘದಂಡ ಆಕಾಶದಲ್ಲಿ ಒಂದು ದೊಡ್ಡ ಕಾಲ್ಪನಿಕ ವೃತ್ತವನ್ನೇ ಬರೆದುಬಿಡುತ್ತದೆ. ಸದ್ಯಕ್ಕೆ ನಮಗೆ ಪೊಲಾರಿಸ್ ಧ್ರುವನಕ್ಷತ್ರ. ಆದರೆ 12,881 ವರ್ಷಗಳಲ್ಲಿ ಭೂಮಿಯ ಅಕ್ಷ ಅರ್ಧವೃತ್ತಾಕಾರದಲ್ಲಿ ಚಲಿಸಿ, ಅಭಿಜಿತ್ ಎಂಬ ಇನ್ನೊಂದು ನಕ್ಷತ್ರವನ್ನು ಧ್ರುವನಕ್ಷತ್ರವಾಗಿ ಪಡೆಯುತ್ತದೆ. ಅಲ್ಲಿಂದ ಮುಂದುವರಿದು ಪೊಲಾರಿಸ್ಗೆ ಬರಲು ಅದಕ್ಕೆ ಮತ್ತೆ ಅಷ್ಟೇ ಅವಧಿ ಬೇಕು. ಭೂಮಿಯ ಈ ಅಕ್ಷ ಚಲನೆಗೂ ಪುರಾಣಗಳು ಯುಗದ ಅವಧಿ 12,000 ದೇವ ವರ್ಷಗಳೆಂದು ನಿಗದಿಪಡಿಸಿರುವುದಕ್ಕೂ ಅನೂಹ್ಯ ಸಂಬಂಧವೇನೋ ಇರಬೇಕೆಂದು ಸಂಶೋಧಕರು ಗುಮಾನಿ ಪಟ್ಟಿದ್ದಾರೆ. ಯುಗಯುಗಾದಿ ಕಳೆದರೂ ಈ ರಹಸ್ಯದ ಬೀಗ ಮಾತ್ರ ಒಡೆಯಲಾಗಿಲ್ಲ.