ಗೆಳತಿ,
ಅದೆಷ್ಟು ದಿನಗಳಾಯಿತು ನಿನ್ನ ಜೊತೆ ಮಾತಾಡಿ. ಅದೆಷ್ಟು ದಿನಗಳಾಯಿತು ನೀ ನನ್ನ ಪಕ್ಕ ಕುಳಿತು. ಅರಿವಿದೆಯೇ ನಿನಗೆ? ಒಂದೆರಡು ದಿನಗಳಲ್ಲ ಗೆಳತಿ, ಇಂದಿಗೆ ಸರಿಯಾಗಿ ಒಂದು ವರುಷ. ನಿನ್ನ ಚಿನಕುರುಳಿ ಮಾತಿನಲೆಗಳು ನನ್ನ ಕಿವಿಗೆ ಮುತ್ತಿಕ್ಕಿ ಒಂದು ವರ್ಷವೇ ಕಳೆದುಹೋಗಿದೆ. ಇನ್ನೊಂದು ರೀತಿ ಆಲೋಚಿಸಿದರೆ ಕಳೆದದ್ದು ಕೇವಲ ಒಂದು ವರ್ಷವೇ? ಅನಿಸುತ್ತದೆ. ಏಕೆಂದರೆ ನನ್ನ ಪಾಲಿಗೆ ಇದೊಂದು ಯುಗದಂತೆ ಭಾಸವಾಗುತ್ತಿದೆ. ನಿನ್ನ ಸ್ನೇಹದ ಉಸಿರಿನ ಬಿಸಿ ತಾಕದೇ ಮನಸು ಮರಗಟ್ಟಿದೆ. ವರ್ಣಮಯವಾದ ಬದುಕಿನ ಛಾಯಾಚಿತ್ರವನ್ನು ಯಾವುದೋ ಅಗೋಚರ ಶಕ್ತಿಯೊಂದು ಎಡಿಟ್ ಮಾಡಿ ಕಪ್ಪು-ಬಿಳುಪಾಗಿಸಿದೆಯೇನೋ ಅನಿಸುತ್ತಿದೆ. ಆ ಶಕ್ತಿಗೇಕೆ ಬಣ್ಣಗಳ ಮೇಲೆ ದ್ವೇಷವೋ ಅರಿಯೆ.
ನಾನೀಗ ಎಲ್ಲಿ ಕುಳಿತಿದ್ದೇನೆ ಗೊತ್ತೇ? ಅದೇ ಕಡಲ ತಡಿಯ ಬಂಡೆಗಳ ಮೇಲೆ. ನೆನಪಿದೆಯಾ…ನಾವು ದಿನವೂ ಕುಳಿತು ದಿನದ ವಾರ್ತೆ ಓದುತ್ತಿದ್ದ ಕಡಲ ತಡಿಯಲ್ಲಿನ ಆ ಬಂಡೆಗಳು. ಹೌದು…ಅಲ್ಲಿಯೇ ಕುಳಿತಿದ್ದೇನೆ ಇವತ್ತು ಕೂಡ. ಬಹುಷಃ ನಮ್ಮಿಬ್ಬರ ಸ್ನೇಹ ಆರಂಭವಾದಾಗಿನಿಂದ ನಮ್ಮ ಜೀವನದ ಎಲ್ಲ ಬ್ರೇಕಿಂಗ್ ನ್ಯೂಸ್ ಗಳು ಇಲ್ಲಿಯೇ ಜಗಜ್ಜಾಹಿರಾಗುತ್ತಿದ್ದದ್ದು ಅಲ್ಲವೇ? ಅದೇಕೆ ಅಷ್ಟು ಮಾತನಾಡುತ್ತಿದ್ದೆವೋ ಗೊತ್ತಿಲ್ಲ. ನನಗಂತೂ ಬೇರೆಯವರ ಜೊತೆ ಇರುವಾಗ ಎಷ್ಟು ಪ್ರಯತ್ನಿಸಿದರೂ ಒಂದು ವಿಷಯವೂ ಸಿಗುತ್ತಿರಲಿಲ್ಲ. ಆದರೆ ನಿನ್ನ ಪಕ್ಕ ಕೂತಾಗ ಮಾತ್ರ ನಾನಾಡುವ ಮಾತಿನ ಮಾಲೆಯ ಉದ್ದವನ್ನು ಮೊಳದಲ್ಲಿ ಲೆಕ್ಕ ಹಾಕಲು ಆಗುತ್ತಿರಲಿಲ್ಲ. ಈಗ ಅನಿಸುತ್ತಿದೆ, ನನ್ನ ಬದುಕನ್ನು ನೀನಿರದ ಕಪ್ಪು-ಬಿಳುಪಿನ ಚಿತ್ರವಾಗಿಸಿದ ಆ ಅಗೋಚರ ಶಕ್ತಿಗೆ ಮೊದಲೇ ಅದರ ಅರಿವಿತ್ತು. ಅದಕ್ಕೆ ಒಂದಷ್ಟು ಮುಂಗಡ ಮಾತುಗಳನ್ನು ನನಗಾಗಿ ಕೊಡಿಸಿರಬೇಕು. ಆಗಲಿ, ಅಷ್ಟಾದರೂ ಕರುಣೆ ಇತ್ತಲ್ಲ. ಅದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನೋಡು, ಆ ಅಲೆಗಳು ಹೇಗೆ ಈ ಕಲ್ಲುಗಳನ್ನೇ ಪುಡಿ ಮಾಡುತ್ತೇನೆಂಬಂತೆ ಬಂದು ಅಪ್ಪಳಿಸುತ್ತಿವೆ. ನಾವಿಬ್ಬರೂ ಮೋಸ ಹೋದೆವು ಗೆಳತಿ. ದಿನವೂ ನಾವಿಲ್ಲಿ ಕುಳಿತಾಗ ಹೀಗೆಯೆ ನಮ್ಮೆಡೆಗೆ ಬರುತ್ತಿದ್ದ ಆ ಅಲೆಗಳನ್ನು ನೋಡಿ ನಮ್ಮಿಬ್ಬರನ್ನು ಮಾತನಾಡಿಸಲೋಸುಗವೇ ಬರುತ್ತಿವೆಯೇನೋ ಎಣಿಸಿದ್ದೆವು ಅಲ್ಲವೇ? ಪ್ರತಿ ಅಲೆಯ ಹನಿಗಳು ಮೈ ಮೇಲೆ ಬಿದ್ದಾಗಲೂ ಅವು ನಮ್ಮನ್ನು ಎಷ್ಟು ಪ್ರೀತಿಸುತ್ತಿವೆ, ಮುದ್ದಿಸುತ್ತಿವೆ ಅನಿಸುತ್ತಿತ್ತು. ಆದರೆ ಆ ದಿನ ಅವು ನಿನ್ನ ಮೇಲೆ ರಣಹದ್ದಿನಂತೆ ಎರಗಿದ್ದು ಏಕೆ ಎಂಬುದು ಮಾತ್ರ ನನ್ನ ಬದುಕಿನ ಯಕ್ಷ ಪ್ರಶ್ನೆಯಾಗಿ ಉಳಿದುಹೋಗಿದೆ. ಅದೇನು ಆ ಕ್ಷಣದ ಕ್ರೌರ್ಯಯೋ, ಅಥವಾ ಅತಿಯಾದ ಪ್ರೀತಿಯೋ ಅರಿಯೆ. ಆ ದಿನ ನಿನ್ನನ್ನು ಒಬ್ಬಂಟಿಯಾಗಿ ಕೂರಿಸಿ ಕಾಯಿಸಿದ ನನ್ನ ಮೇಲಿನ ಅಸಮಾಧಾನವನ್ನು ಈ ಮೂಲಕ ತೀರಿಸಿಕೊಂಡವೋ? ಏನೋ? ಹೀಗೆ…ನೂರಾರು ಉತ್ತರ ಸಿಗದ ಪ್ರಶ್ನೆಗಳು ನನ್ನ ಮನದ ಕಡಲಿನಲ್ಲಿ ಅಲೆಅಲೆಯಾಗಿ ಹುಟ್ಟಿ ಸಾಯುತ್ತಿವೆ. ಇಷ್ಟಾದರೂ ನಾನು ಈಗಲೂ ದಿನವೂ ಇಲ್ಲಿ ಬಂದು ಕೂರುತ್ತೇನೆ. ಏಕೆ ಗೊತ್ತೇ? ಅಂದು ನಿನ್ನ ಹೊತ್ತೊಯ್ದ ಆ ಅಲೆ ಮತ್ತೆಂದಾದರೂ ತಿರುಗಿ ಬರಬಹುದೇ, ನಿನ್ನನ್ನು ನನ್ನ ಬಳಿ ಮತ್ತೆ ತಲುಪಿಸಬಹುದೇ ಎಂಬ ಒಂದು ಹುಚ್ಚು ಹಂಬಲ ನನ್ನದು.
ನಿಜ. ನಾನು ನಿನ್ನನ್ನು ಬಹುಷಃ ನನಗಿಂತ ಒಂಚೂರು ಜಾಸ್ತಿಯೇ ಪ್ರೀತಿಸುತ್ತೇನೆ. ಈಗಲೂ ಕೂಡ. ಸಮಾಜ ನಮ್ಮನ್ನು, ನಮ್ಮ ಒಡನಾಟವನ್ನು ನೋಡಿ ಪ್ರೇಮಿಗಳೆಂದೇ ಭಾವಿಸಿತು. ನಾವಿಬ್ಬರು ಮಾತ್ರ ಈ ಅರ್ಧಂಬರ್ಧ ವಿಷಯ ತಿಳಿದು ಗಾಳಿ ಸುದ್ದಿ ಹಬ್ಬಿಸುವ ಸಮಾಜವನ್ನು ಕಂಡು ಒಳಗೊಳಗೇ ನಗುತ್ತಿದ್ದೆವು. ನನ್ನ ಪಾಲಿನ ಸ್ನೇಹದ ಭಾಷೆಯಲ್ಲಿ ನೀನೊಂದು ರೂಪಕಾಲಂಕಾರ ಎನ್ನುತ್ತಿದ್ದೆ ನಾ ಯಾವಾಗಲೂ. ಕಾರಣ ಸ್ನೇಹ ಅಂದರೆ ನೀನು, ನೀನು ಅಂದರೆ ಸ್ನೇಹ ಎಂಬಂತಾಗಿತ್ತು ನನಗೆ. ನಾನು ಹೀಗೆ ಹೇಳಿದಾಗೆಲ್ಲ “ದೊಡ್ಡ ಕವಿಯಾಗ್ಲಿಕ್ಕೆ ಹೋಗ್ಬೇಡ. ನಿಂಗೆ ಚಂದ ಕಾಣುದಿಲ್ಲ” ಎಂದು ರೇಗಿಸುತ್ತದ್ದೆ ನೀನು. ಎಲ್ಲೋ ದಾರಿಯಲ್ಲಿ ಒಂದು ಚಂದದ ಹುಡುಗಿಯನ್ನು ಒಂಚೂರು ನೋಡಿದರೆ ಸಾಕು, ಅವಳಿಗೊಂದು ನಿನ್ನದೇ ಕಲ್ಪನೆಯ ಹೆಸರಿಟ್ಟು ಅದನ್ನು ಬರೆದಿಟ್ಟುಕೊಳ್ಳುತ್ತಿದ್ದೆ. ಕಾರಣ ಕೇಳಿದರೆ “ಈ ಪಟ್ಟಿಯನ್ನು ನಿನ್ನ ಮದುವೆಯಾಗುವ ಹುಡುಗಿಗೆ ಕೊಟ್ಟು ನಿನ್ನ ಕಿವಿ ಹಿಂಡಿಸಬೇಕು” ಅನ್ನುತ್ತಿದ್ದೆ. ಇಂತಹ ಅತಿ ವಿಚಿತ್ರ ಆಲೋಚನೆಗಳು ನಿನಗೆ ಮಾತ್ರ ಬರಲು ಸಾಧ್ಯ. ಇದೇ ರೀತಿ ಅದೆಷ್ಟು ಹುಡುಗಿಯರಿಗೆ ನಿನ್ನದೇ ಆದ ಹೆಸರಿಟ್ಟು ಮರುನಾಮಕರಣ ಮಾಡಿದ್ದಿಯೋ?
ಗೆಳತಿ ನಿನಗೊಂದು ವಿಷಯ ಗೊತ್ತೇ, ನನ್ನ ಬಾಳಸಂಗಾತಿಯಾಗುವ ಹುಡುಗಿ ಎದೆಯ ಹೊಸಿಲಲ್ಲಿ ನಿಂತಿದ್ದಾಳೆ ಈಗ. ಇನ್ನೇನು ಸ್ವಲ್ಪ ದಿನಗಳಲ್ಲಿ ಮನದ ಮನೆಗೆ ಹೆಜ್ಜೆಯಿಡುವವಳಿದ್ದಾಳೆ. ಅವಳಿಗೂ ನಿನ್ನ ಬಗ್ಗೆ, ನನ್ನ ಬಗೆಗಿನ ನಿನ್ನ ದೂರುಗಳ ಬಗ್ಗೆ ಹೇಳಿದ್ದೇನೆ. ಅವಳೋ ನನ್ನ ಕಿವಿ ಹಿಂಡಲು ತುದಿಗಾಲಲ್ಲಿ ನಿಂತಿದ್ದಾಳೆ. ಬಾ ಗೆಳತಿ… ಕೊಡು ಆ ದೂರುಗಳ ಪಟ್ಟಿಯನ್ನು. ಒಪ್ಪಿಸು ನೀನೇ ನಾಮಕರಣ ಮಾಡಿದ ಹುಡುಗಿಯರ ಹೆಸರುಗಳನ್ನು. ಆ ನೆಪದಲ್ಲಾದರೂ ಮತ್ತೊಮ್ಮೆ ನನ್ನ ಕಂಗಳಲ್ಲಿ ನಿನ್ನ ರೂಪ ಮೂಡಲಿ.
ಅದ್ಯಾವ ಮೋಹನ ಮುರಳಿ ಕರೆಯಿತೊ ನಿನ್ನನ್ನು, ಕಾಣದ ದೂರದ ತೀರಕೆ? ಒಮ್ಮೆ ಹಿಂತಿರುಗಿ ಕೂಡ ನೋಡದೆ ಹೋಗುವಷ್ಟು ಇಂಪಾಗಿತ್ತೇ ಆ ಮುರಳಿ ಗಾನ? ಇರಬಹುದೇನೋ. ಭಾವದಲೆಗಳಿಂದ ಎಂದೂ ಹಸಿಯಾಗಿ-ಹಸಿರಾಗಿರುತ್ತಿದ್ದ ಈ ಮನದ ಧರಣಿ ನೀನಿಲ್ಲದೆ ಬರಗಾಲಕ್ಕೆ ತುತ್ತಾಗಿದೆ. ನಿನ್ನಗಲಿಕೆಯ ನೋವಿನಲ್ಲಿ ಸುಡುತ್ತಿದೆ. ಒಮ್ಮೆ ಬಾ ಗೆಳತಿ ಮುಂಗಾರಿನ ಹನಿಗಳಂತೆ, ಈ ಧರಣಿಯ ಅಪ್ಪಿ ಸಂತೈಸಲು. ಇರುವಷ್ಟು ದಿನ ನನ್ನ ಇನ್ನಿಲ್ಲದಂತೆ ನಗಿಸಿ, ಆ ನಗುವಿನ ನೆನಪನ್ನೇ ಬದುಕಾಗಿಸಿಬಿಟ್ಟೆಯಲ್ಲ; ಇದು ಸರಿಯೇ?
ಬರೆಯುತ್ತ ಹೋದರೆ ಮುಗಿಯದ ಅಳಲು ನನ್ನದು. ಮನದ ಗೊಂದಲಗಳನ್ನೆಲ್ಲ ಪ್ರಶ್ನೆಗಳಾಗಿಸಿ ಕೇಳುತ್ತ ಹೋದರೆ ಒಂದು ಪ್ರಶ್ನೆಪತ್ರಿಕೆಯೇ ಆಗಬಹುದು.
“ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ;
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ”
ಈ ಮೇಲಿನ ಸಾಲುಗಳು ನನಗಾಗೇ ಬರೆದ ಸಾಲುಗಳೇನೋ ಅನಿಸುತ್ತಿದೆ. ನಿನ್ನ ನೆನಪಾದಾಗಲೆಲ್ಲ ಏನೋ ವಿಚಿತ್ರ ಸಂಕಟ ಎದೆಯಲ್ಲಿ. ಆ ಸಂಕಟ ಕಣ್ಣ ಹನಿಗಳಲ್ಲದೇ ಬೇರೆ ಯಾವ ರೂಪದಲ್ಲೂ ಹೊರಬರಲಾರದೇನೋ. ನಿನ್ನ ಮಾತು, ನಗು, ತರಲೆ, ಪ್ರೀತಿ, ಸ್ನೇಹ ಎಲ್ಲವನ್ನು ನಿನ್ನೊಂದಿಗೇ ಕಳೆದುಕೊಂಡಿರುವ ನನಗೀಗ ನಾನು ನಿನ್ನ ಸ್ನೇಹಿತನೆಂಬ ಋಣವು ಮಾತ್ರವೇ ಉಳಿದಿದೆ. ಆ ಋಣದ ಭಾರ ಹೊತ್ತು ಮುಂದಿನ ಪಯಣ ಸಾಗಬೇಕಿದೆ. ಗೆಳತಿ, ಭೌತಿಕವಾಗಿ ನೀನಿಲ್ಲದಿರಬಹುದು. ಆದರೆ ನಿನ್ನ ಮಾನಸಿಕ ಅಸ್ತಿತ್ವಕ್ಕೆ ಖಂಡಿತ ಸಾವಿಲ್ಲ. ಅದು ಚಿರಂತನವಾದದ್ದು. ಆ ಅಸ್ತಿತ್ವದ ಇರುವಿಕೆಯ ನಂಬಿಕೆಯಲ್ಲಿ ನಿನ್ನನ್ನು ಜೀವಂತವಾಗಿರಿಸುತ್ತೇನೆ. ಆ ಮೂಲಕ ಮತ್ತೆ ಮತ್ತೆ ನೆನಪಿನ ಸವಿ ಮೆಲುಕುಗಳ ಬಣ್ಣಗಳಲ್ಲಿ ಮಿಂದೇಳುವ ಪ್ರಯತ್ನ ಮಾಡುತ್ತೇನೆ. ಅದೇ ಬಣ್ಣಗಳನ್ನು ಬದುಕಿನ ಕ್ಷಣಗಳಿಗೆ ಎರಚಿ ಆ ನೆನಪಿನ ಬಣ್ಣಗಳಲ್ಲಿ ಮತ್ತೆ ನಿನ್ನನ್ನು ಚಿತ್ರಿಸುವ ಹಂಬಲ ನನ್ನದು. ಈ ನಿನ್ನ ಗೆಳೆಯನ ಕೈ ಹಿಡಿದು ನಿನ್ನನ್ನು ನೀನೆ ಚಿತ್ರಿಸುವಾಸೆಯಾದರೆ ಮೆಲ್ಲಗೆ ಬಂದೆನ್ನ ಕೈ ಹಿಡಿದುಕೊ.
ಎಂದಿಗೂ ನಿನ್ನ ನಿರೀಕ್ಷೆಯಲ್ಲಿರುವ,
ನಿನ್ನ ಪ್ರೀತಿಯ ಸ್ನೇಹಿತ.