ಅಂಕಣ

ಕಗ್ಗಕೊಂದು ಹಗ್ಗ ಹೊಸೆದು…

೦೦೩. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೩

ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ |
ಮಹಿಮೆಯಿಂ ಜಗವಾಗಿ ಜೀವವೇಷದಲಿ ||
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ |
ಗಹನ ತತ್ವಕೆ ಶರಣೊ – ಮಂಕುತಿಮ್ಮ ||

ಹಿಂದಿನ ಕಗ್ಗದ ಹಾಗೆ ಮತ್ತೆ ಅದೇ ಅತೀತ ಶಕ್ತಿಯ ಗುಣಗಾನ ಮಾಡುತ್ತಲೇ, ಅದರ ಬೆನ್ನಲ್ಲಡಗಿರುವ ತತ್ವ ಸಿದ್ಧಾಂತಕ್ಕೆ ಬೆರಗಾಗುವ ಪರಿಯನ್ನು ಈ ಸಾಲುಗಳಲ್ಲಿ ಕಾಣಬಹುದು. ಈ ಅತೀತವನ್ನು ಕವಿ ಎಲ್ಲಿಯೂ ತಾನಾಗಿಯೆ ದೇವರೆಂಬ ಹೆಸರಿಟ್ಟು ಕರೆಯುವುದಿಲ್ಲವೆಂದು ಗಮನಾರ್ಹ. ನಂಬುವ ನಾಸ್ತಿಕರಾಗಲಿ ನಂಬದ ಆಸ್ತಿಕರಾಗಲಿ ಇಬ್ಬರೂ ಒಪ್ಪಿಕೊಳ್ಳುವ ಅಂಶವೆಂದರೆ ನಾವಿನ್ನೂ ಅರಿಯಲಾಗದ ಅದಾವುದೊ ವಸ್ತುವೊಂದು ಕಾಣದ ರೂಪದಲ್ಲಿ ಅಸ್ತಿತ್ವದಲ್ಲಿದೆಯೆಂಬುದು. ಆದರೆ ಆ ಅವ್ಯಕ್ತ ವಸ್ತುವಿನ ಚಾಲಾಕಿತನವೆಷ್ಟೆಂದರೆ ಅದು ತಾನು ಅಸ್ತಿತ್ವದಲ್ಲಿರುವುದೊ ಅಥವಾ ಇಲ್ಲವೊ ಎಂಬ ಕಗ್ಗಂಟನ್ನು ಬಿಡಿಸಲಾಗದ ಒಗಟಾಗಿಸಿ ಇಟ್ಟುಬಿಟ್ಟಿದೆ – ಪ್ರಾಪಂಚಿಕ ದೃಷ್ಟಿಯಲ್ಲಿ. ಆ ಪರಿ ಹೇಗಿದೆಯೆಂದರೆ ‘ಇದೆ’ ಎಂದು ಖಚಿತವಾಗಿ ಹೇಳಲಾಗಲಿ, ತೋರಲಾಗಲಿ ಸಾಧ್ಯವಾಗದು;  ‘ಇಲ್ಲಾ’ ಎಂದು ಸಾಧಿಸಲಾಗಲಿ, ನಿರೂಪಿಸಲಾಗಲಿ ಬಿಡದು.

ಒಟ್ಟಾರೆ ಇದೆಯೊ, ಇಲ್ಲವೊ ಎಂಬ ಗೊಂದಲ-ದ್ವಂದ್ವದಿಂದ ಹೊರಬರಬಿಡದ ಮಾಯೆಯೆ ತನ್ನ ಇಂಗಿತವೇನೊ – ಎನ್ನುವಂತಿದೆ ಅದರ ಪ್ರವರ್ತನೆ. ಅವೆರಡರಲ್ಲಿ ಯಾವುದನ್ನು ನಿರೂಪಿಸ ಹೊರಟರು ತುದಿಯರದ ಚಕ್ರಕ್ಕೆ ಸಿಲುಕಿ ಮತ್ತೆ ಮೂಲಕ್ಕೆ ವಾಪಸ್ಸಾಗುವ ಹತಾಶ ಪರಿಸ್ಥಿತಿ. ಗೊಂದಲದಿಂದ ಹೊರಬರಲು ಬಿಡದಿದ್ದರು, ಆ ವಸ್ತು ತನ್ನ ಮಹಿಮೆಯನ್ನಂತು ಜಗಜ್ಜಾಹೀರು ಪಡಿಸುತ್ತಲೆ ಇರುತ್ತದೆ – ಒಂದಲ್ಲಾ ಒಂದು ತರದಲ್ಲಿ. ಅಂತಹ ಒಂದು ಮಹಿಮೆಯ ಸೃಷ್ಟಿಯೆ ಈ ಐಹಿಕ ಜಗ. ಐಚ್ಚಿಕವಾಗಿ ರೂಪುಗೊಂಡಿರುವ ಅದರದೆ ಸ್ವರೂಪದ ಸಾಕ್ಷಾತ್ಕಾರ – ಬರಿಯ ಜಗವಾಗಿ ಮಾತ್ರವಲ್ಲ, ಅದರೊಳಗಿನ ಜೀವದ ಮಿಗವಾಗಿಯೂ ಕೂಡ.

ಇಲ್ಲಿ ‘ವೇಷದಲಿ’ ಎನ್ನುವುದು ಮತ್ತನೇಕ ಒಳಾರ್ಥಗಳನ್ನೂ ಬಿಚ್ಚಿಡುತ್ತದೆ – ಆ ಮಹಿಮೆಯ ವಸ್ತು ತಾನೇ ವೇಷಧಾರಿಯಾಗಿ ಏಕಕಾಲದಲ್ಲಿ ಅನೇಕ ರೂಪಗಳನ್ನು ಧರಿಸಿ ಪ್ರಕಟರೂಪಿನಲ್ಲಿರುವುದೆನ್ನುವುದು ಒಂದು ಭಾವ. ಅದರ ಸರ್ವವ್ಯಾಪಕ ಶಕ್ತಿ, ಅದ್ವೈತದ ಸಮಷ್ಟಿ, ಸರ್ವಶಕ್ತ ಸ್ವರೂಪ – ಇವೆಲ್ಲವೂ ಅದರೊಡಲಿನಲ್ಲಿ ಬಂಧಿತ. ಆಧ್ಯಾತ್ಮಿಕದ ಜತೆಗೆ ಸಮೀಕರಿಸುತ್ತ ಹೊರಟರೆ ಇಲ್ಲಿ ಮತ್ತೊಂದು ವಿಶ್ವವೆ ತೆರೆದುಕೊಳ್ಳುತ್ತದೆ. ಅಂತಹ ಗಹನತೆ ಸಂಕ್ಷಿಪ್ತ ರೂಪದಲ್ಲಿ, ಸರಳವಾಗಿ ಆಡುಭಾಷೆಯ ಲಾಲಿತ್ಯದಲ್ಲಿ ನಿರೂಪಿತವಾಗಿದೆ.

ಆದರೆ ಆ ವಸ್ತುವಿನ ಮಹಿಮೆ ಅಷ್ಟಕ್ಕೆ ಸೀಮಿತವಲ್ಲ. ಅದು ತನ್ನಷ್ಟಕ್ಕೆ ತಾನೆ, ತನಗಿಷ್ಟ ಬಂದ ರೀತಿಯಲ್ಲಿ ವಿಹರಿಸಿಕೊಂಡಿದೆಯಂತೆ ಯಾರ ಅಂಕೆಗು ಒಳಗಾಗದೆ. ಅಂತಿದ್ದರು ಅದರ ಇಂಗಿತ ಮಾತ್ರ ಬರಿ ಒಳಿತಿನ ಮರ್ಮವನ್ನೊಳಗೊಂಡದ್ದು. ಬಯಸಿದ್ದಲ್ಲಿ ತನಗಿರುವ ಆ ಅಪಾರ ಮಹಿಮಾಶಕ್ತಿಯನ್ನು ಅದು ತಾಮಸ ರೀತಿಯಲ್ಲೂ ಬಳಸಬಹುದಿತ್ತು. ಆದರೆ ಸತ್ಕರ್ಮಗಳಿಗಷ್ಟೆ ಸೀಮಿತಗೊಳಿಸಿಕೊಳ್ಳುವ ಆ ವಸ್ತುವಿನ ಇಂಗಿತ ಬರಿಯ ಒಳಿತೆನ್ನುವುದೆ ಅದರ ಹೆಚ್ಚುಗಾರಿಕೆ. ತನಗಿರುವ ಶಕ್ತಿಯನ್ನು ಒಳಿತಿಗೂ ಬಳಸಬಹುದು, ಕೆಡುಕಿಗೂ ಬಳಸಬಹುದು ಎಂದರಿವಿದ್ದರೂ ಅದನ್ನು ಬರಿಯ ಒಳಿತಿಗೆ ವ್ಯಯಿಸುತ್ತಿರುವುದನ್ನು ಗಮನಿಸಿದರೆ, ಹಾಗೆ ಮಾಡಿಸುವ ಪ್ರೇರಣೆ ಯಾವುದೊ ಗಹನವಾದ ತತ್ವವೊಂದರಿಂದ ಪ್ರೇರೇಪಿತವಾದದ್ದಿರಬೇಕು. ಸತ್ಕರ್ಮವೆ ಅದರ ಸಹಜ ಗುಣ ಎನ್ನುವುದು ನಿಜವಾದರೆ ಅದನ್ನು ಆಗಗೊಡಿಸುತ್ತಿರುವ, ಆ ರೀತಿಯಿರುವಂತೆ ಪ್ರೇರೇಪಿಸುತ್ತಿರುವ ತತ್ವ ಎಷ್ಟು ಮಹತ್ತರವಿರಬೇಕು? ಶಕ್ತಿಯಿದ್ದರೂ ಅದನ್ನು ಸಮಷ್ಟಿಯ ಒಳಿತಿಗೆ ಬಳಸಬೇಕೆನ್ನುವ ಆ ಮೂಲತತ್ವ ಎಷ್ಟು ಉದಾತ್ತವಾಗಿರಬೇಕು? ಆ ಮೂಲತತ್ವದ ಆಸರೆಯಿರದಿದ್ದರೆ ನಾವೆಲ್ಲಾ ಈ ಸೃಷ್ಟಿ ಸಮಷ್ಟಿಯ ಜತೆ ಈಗಿರುವಂತೆ ನಿರಾಳವಾಗಿರಲು ಸಾಧ್ಯವಾಗುತ್ತಿತ್ತೆ?

ಒಂದೆಡೆ ತಾನಿರುವುದೊ, ಇಲ್ಲವೊ ಎಂಬುದರ ಗುಟ್ಟು ಬಿಟ್ಟುಕೊಡದೆ ಚೆಲ್ಲಾಟವಾಡಿಸುವ ಆ ಮಹಿಮಾನ್ವಿತ ವಸ್ತು ಮತ್ತೊಂದೆಡೆ ಒಳಿತಿನ ಸದುದ್ದೇಶವನ್ನು ಮಾತ್ರ ಧಾರೆಯೆರೆಯುವ ಕರುಣೆಯನ್ನು ತೋರಿಸುವುದು,  ತನ್ನ ಶಕ್ತಿಯ ದುರ್ಬಳಕೆಗೆಣಿಸದಿರುವಂತೆ ಸ್ವನಿಯಂತ್ರಣದಲ್ಲಿಟ್ಟುಕೊಳ್ಳುವ ಸಹನೆ, ಸಂಯಮವನ್ನು ಪ್ರದರ್ಶಿಸುವುದು – ಆ ಮೂಲತತ್ವದ ನೀತಿ, ನಿಜಾಯತಿಗಳ ಬಲದಿಂದಲೆ ಇರಬೇಕಲ್ಲವೆ? ಅಂತಹ ಗಹನವಾದ ಶಕ್ತಿ ಮತ್ತು ತತ್ವಕ್ಕೆ ಶರಣೆನ್ನುತ್ತ, ಬರಿಯ ಶಕ್ತಿಯನಲ್ಲದೆ ಅದರ ಹಿಂದಿನ ಮೂಲತತ್ತ್ವದ ಮೇಲೂ  ಬೆಳಕು ಚೆಲ್ಲುತ್ತಾನೆ ಮಂಕುತಿಮ್ಮ.

ಈ ಭುವಿಯಲ್ಲಿ ಬಂದು ಇದ್ದು ಹೋಗುವ ಮನುಜ ಜೀವಿಗಳಿಗೆ ತಮ್ಮ ದೈನಂದಿನ ಬದುಕಿನಲ್ಲೂ, ಅವು ಬದುಕು ಸಾಗಿಸುವ ರೀತಿಯನ್ನು ನಿರ್ದೇಶಿಸುವ ತತ್ವ ಮುಖ್ಯ ಎನ್ನುವ ಆಶಯವೂ ಇಲ್ಲಿ ಕಾಣುತ್ತದೆ. ತತ್ವದ ಇಂಗಿತ ಒಳಿತಿನದಿದ್ದರೆ ಅದರಡಿಯ ಮನುಜ ಸ್ವಭಾವವು ಸಮಾಜಕ್ಕೆ, ಸಮಷ್ಟಿಗೆ ಒಳಿತನ್ನೆ ತರುತ್ತವೆ. ಅವೆ ವ್ಯಕ್ತಿ ಮತ್ತು ವ್ಯಕ್ತಿತ್ವದಲ್ಲಿ ನೈತಿಕತೆ, ಸದ್ಗುಣ, ಮೌಲ್ಯಗಳ ಭಂಡಾರವನ್ನು ತೆರೆಯುವ ಮೂಲ ಕೀಲಿ ಕೈಯಾಗಿಬಿಡುತ್ತವೆ. ತತ್ವಾಧಾರಿತ, ಮೌಲ್ಯಾಧಾರಿತ ನೈತಿಕತೆಗಳು  ಕಾಣುವುದೆ ಅಪರೂಪವಾಗಿರುವ ಈ ಕಾಲದಲ್ಲಿ ಈ ತತ್ವಾಧಾರಿತ ಮೂಲ ಸರಕು ಅಷ್ಟೆ ಸಂಗತ ಮತ್ತು ಪ್ರಸ್ತುತವೆನ್ನುವುದು ಈ ಸಾಲುಗಳಲ್ಲಿ ಪ್ರತಿಬಿಂಬಿತ.

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!