ಕವಿತೆ

“ಸಂಜೆ”…

 

ಸಂಜೆ ಆರೇಳರ ಸಮಯ..

ತಳ್ಳುಗಾಡಿಯವನ ಚಕ್ರದ ತುಂಬೆಲ್ಲಾ

ಚಿತ್ರಿಸಿದ ಬಳ್ಳಿಗಳಿಗೆ

ಅರಳುತ್ತವಂತೆ ಹೂಗಳು;

ಅವನ ಕಾಲ್ಗಳ ಸದ್ದಿಗೆ..

ನೆರಳು ಕರಗುವ ಕ್ಷಣದಿ

ಗರಿ ಬಿಚ್ಚಲೆಂದೇ ಕಾದಿರುವ

ಕನಸುಗಳ ಸರದಿ…

ತೇಲಿ ಬಿಟ್ಟ ಹಿಟ್ಟಿನುಂಡೆ

ಮೈಬಿಚ್ಚಿಕೊಳ್ಳುತ್ತದೆ ಉಷ್ಣತೆಗೆ

ಎಣ್ಣೆಯ ಕಮಟು ವಾಸನೆಯ

ಅಭ್ಯಂಜನಕೆ

ನಾಸಿಕದ ರೋಮಗಳ ತಳಮಳ..

ಗಾಳಿಗೀಗ ತುಂಬು ಆಮಂತ್ರಣ…

ಕೋಲು ಹಿಡಿದ ಪೋರ

ಗೀಚುತ್ತಾನೆ ಮಣ್ಣಿನೆದೆಯ ತುಂಬಾ..

ಕಾಣಿಸುತ್ತದೆ ಆಗಸದಿ

ಮಂಟಪ ಕಟ್ಟುತಿಹ ಹಕ್ಕಿಹಿಂಡು;

ತಾನೂ ರೆಕ್ಕೆಗಳ ಹಚ್ಚಿಕೊಳುವಾಸೆ..

ಇನ್ನು ಕೆಲವರಿಗೆ

ಬರಲಿಷ್ಟವಿಲ್ಲ ಗೋಡೆಗಳಾಚೆ..

ತಾವಾಗಿಯೇ ಕೃತಕ ಬೆಳಕಿನಲಿ ಖೈದಿ…

ಕೊಲ್ಲುತ್ತ ಕೊಲ್ಲುತ್ತ ದಿನಗಳನ್ನು

ಹರಡಿ ಹೋಗುತ್ತಾನೆ ರಕ್ತ

ಕೊನೆಗೆ ಸೂರ್ಯ..

ಬಹುಶಃ ಅಣಕಿಸುತ್ತಿರುವವು

ಇರಬೇಕು ಅವುಗಳೇ

ಮತ್ತೊಬ್ಬನ ಅಧಿಪತ್ಯದಂಗಳದಿ

ತೂಗಿಬಿಟ್ಟ ಶ್ವೇತಾಗ್ನಿಗಳಾಗಿ..

ನಿನ್ನೆಯಷ್ಟೇ ಹೇಳಿದ್ದ ಆತ,

ಅಷ್ಟಕ್ಕೂ ಸುಳ್ಳಲ್ಲ;

ಗಡಿಯಾರಗಳು ಮಾತನಾಡುತ್ತವೆ..

ಪುಟ್ಟ ಬಟ್ಟಲಿನಲಿ ಹಚ್ಚಿಟ್ಟ ಧೂಪ

ಅಸ್ತಿತ್ತ್ವ ಪಡೆಯುತ್ತದೆ

ಗಾಳಿಯಲ್ಲೇ ಪರಿಮಳದ ಗೆರೆಗಳಾಗಿ…

Facebook ಕಾಮೆಂಟ್ಸ್

ಲೇಖಕರ ಕುರಿತು

ಶ್ರೀ ತಲಗೇರಿ

ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸ,ಆಗಾಗ ಲೇಖನಿ,ಕುಂಚಗಳ ಸಹವಾಸ..ಬದುಕಿನ ಬಣ್ಣಗಳಲ್ಲಿ ಪ್ರೀತಿಯ ಚಿತ್ರ ಬಿಡಿಸಿ ಖುಷಿಪಡುತ್ತ,ಶಬ್ದಗಳಿಗೆ ಜೀವ ಕೊಡುವ ಪ್ರಯತ್ನದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿರುವ ಕನಸು ಕಂಗಳ ಹುಡುಗ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!