Featured ಪರಿಸರದ ನಾಡಿ ಬಾನಾಡಿ

ಶಿಸ್ತಿಲ್ಲದ ಜೀವನ ನೀರಿಲ್ಲದ ವನಕಾನನ

ನಮ್ಮ ತೋಟದ ಮನೆಯ ಸುತ್ತಮುತ್ತ ಏನಿಲ್ಲವೆಂದರೂ 10-15 ಸಣ್ಣ ತೊಟ್ಟಿಗಳಿವೆ. ಅವುಗಳಲ್ಲಿ ನಾವು ವಿಧ ವಿಧನಾದ ತಾವರೆಗಳನ್ನು ಬೆಳೆಸಿದ್ದೇವೆ. ಅದಲ್ಲದೆ ಅಜೋಲ,ಬಜೆ, ಅಂತರ್ಗಂಗೆಯಂಥ ಹಲವು ಜಲಾಶ್ರಿತ ಬೆಳೆಗಳಿವೆ. 365ದಿನವೂ ಇದರಲ್ಲಿ ನೀರು ಭರ್ತಿ. ನನ್ನರಿವಿಗೆ ಬಂದಂತೆ ಈ ನೀರಿನ ಒಡನಾಟವನ್ನು ಪಿಕಳಾರ (Bulbul)) ಮತ್ತು ಮಡಿವಾಳ (oriental magpie robin) ಹಕ್ಕಿಗಳು ಮಾತ್ರ ಬಯಸುತ್ತಿವೆ. ಅಪರೂಪಕಷ್ಟೇ ರಾಟೇವಾಳಗಳ (munia) ಭೇಟಿ. ನಮ್ಮ ತೋಟದಲ್ಲಿ ಇದುವರೆಗೆ ನಾನು 219 ಪ್ರಭೇದದ ಪಕ್ಷಿಗಳನ್ನು ದಾಖಲಿಸಿರುವೆ. ಅದರಲ್ಲಿ 110 ಪ್ರಭೇದಗಳು ನಮ್ಮ ತೋಟದೊಳಗೇ ಇವೆ. ಮಿಕ್ಕವುಗಳು ಅಪರೂಪಕ್ಕೆ ಭೇಟಿ ಕೊಡುವವು ಅಥವ ಮನೆ ಮೇಲಿನ ಹಾರಾಟದಲ್ಲಿ ದಾಖಲಾದವು. ಹದಿನೈದು ಕಡೆಗಳಲ್ಲಿ ತೊಟ್ಟಿ ನೀರಿದ್ದರೂ ನೂರು ಪ್ರಭೇದ ಮಿಕ್ಕಿ ಇರುವ ನಮ್ಮ ತೋಟದಲ್ಲಿ, ಆ ನೀರಿಗೆ ಭೇಟಿಕೊಡುವುದು ಕೇವಲ ಎರಡು ಪ್ರಭೇದಗಳು ಮಾತ್ರ! ಹಾಗಾದರೆ ಉಳಿದ ಹಕ್ಕಿಗಳಿಗೆ ನೀರು ಬೇಡವೇ? ಅಥವಾ ಮನೆ ಮುಂದೆ ನೀರಿಡುವುದು ನಿಷ್ಪ್ರಯೋಜಕವೇ? ಇದು ಯಾಕೆ ಹೀಗೆ?

ನಮ್ಮ  ತೋಟದಲ್ಲಿ ನಾಲ್ಕು ಕೆರೆಗಳಿವೆ (borewell ಅಲ್ಲ) . ಈ ಕೆರೆಗಳು (ತೋಡುಬಾವಿ) ವರ್ಷ ಪೂರ್ತಿ ಭರ್ತಿ ಇರುತ್ತವೆ. ಬಾನಾಡಿಗಳು ಮುಂಜಾನೆ ಮತ್ತು ಸಂಜೆ ಈ ಕೆರೆಗಳ ಸುತ್ತಲೇ ಇರುತ್ತವೆ. ಯಥೇಚ್ಛ ಸಹಜ ನೀರಿನ ಲಭ್ಯತೆ ಇವುಗಳಿಗೆ ನಮ್ಮಲ್ಲಿ ಇರುವುದಾದ್ದರಿಂದ ನಮ್ಮ ಮನೆ ಸುತ್ತಲಿನ ತೊಟ್ಟಿಗಳತ್ತ ತಿರುಗಿ ಕೂಡಾ ನೋಡುವುದಿಲ್ಲ. ಸಂಜೆಯಾದಂತೆ 25-30 ಪ್ರಭೇದದ ಪಕ್ಷಿಗಳು ಆ ಕೆರೆಯಲ್ಲಿ ಜಲಕ್ರೀಡೆಯಾಡುತ್ತವೆ. ಮೇಲೆ ತಿಳಿಸಿದ ಪಿಕಳಾರ ಮತ್ತು ಮಡಿವಾಳಗಳೂ ಕೂಡ ನಮ್ಮ ತೊಟ್ಟಿ ನೀರಿನ ಗುಟುಕಿಗಿಂತ ಕೆರೆ ನೀರಿನ ವಿಹಾರವನ್ನು ಹೆಚ್ಚು ಆನಂದಿಸುತ್ತವೆ. ಸಹಜ ನೀರಿನ ಲಭ್ಯತೆ ಇದ್ದಾಗ ಬಾನಾಡಿಗಳು ಕೃತಕ ನೀರನ್ನು ತಿರಸ್ಕರಿಸುತ್ತದೆ ಎನ್ನುವುದು ಬಲು ಸ್ಪಷ್ಟ.

02

ಬೇಸಿಗೆ ಕಳೆದು ಬರುವ ಮೊದಲ ಮಳೆಗಳನ್ನು ಗಮನಿಸಿ. ಮಳೆ ನಿಂತು ಹೋದ ಮೇಲೆ ನಮ್ಮ ಮಾರ್ಗ ಮಧ್ಯೆ ಇರುವ ಗುಂಡಿಗಳಲ್ಲಿ ನೀರು ನಿಂತಿರುತ್ತದೆ. ಆ ನೀರಿನಲ್ಲಿ ಆಡಲು ಹಕ್ಕಿಗಳಿಗೆ ಮಜವೇ ಬೇರೆ. ನಟಾ ಮಧ್ಯಾಹ್ನದಲ್ಲೂ ಜಲಕ್ರೀಡೆಯಲ್ಲಿ ತೊಡಗಿರುತ್ತದೆ. ಹೀಗೆ ಎಲ್ಲಿ ಸಹಜವಾದ ನೀರಿನ ಲಭ್ಯತೆ ಇದೆಯೋ ಅಲ್ಲಿ ಬಾನಾಡಿಗಳು ಸಹಜವಾಗಿಯೇ ಹೆಚ್ಚಿರುತ್ತದೆ. ಕೇವಲ 50-100 ವರ್ಷದ ಮೊದಲು, ಅಣೆಕಟ್ಟು ಅವಲಂಬಿತ ಜೀವನ ಆರಂಭವಾಗುವುದಕ್ಕೂ ಮೊದಲು, ಕಾಂಕ್ರೀಟ್ ಕಾಡು ಆಕ್ರಮಿಸುವುದಕ್ಕೂ ಮೊದಲು, ಮಂದಿ ಕೃಷಿಯನ್ನು ಬಿಟ್ಟು, ಆ ಕಾಡನ್ನು ಬಿಟ್ಟು ಈ ಕಾಡಿನೆಡೆಗೆ ಬರುವ ಮೊದಲು ನಾವೆಲ್ಲರೂ ಇಂಥ ನೈಜ ನೀರಿನಲ್ಲಿ ಆಟ ಆಡಿದವರೇ.

03

05

ನೀರು, ಪೆಟ್ರೋಲ್  ಡೀಸಿಲ್’ನಂತಲ್ಲ. ಇದು ಪ್ರತಿವರ್ಷವೂ ಪುನರ್ನವೀಕರಣಗೊಳ್ಳುವಂಥಾದ್ದು (renewable) . ಇಂಥಾ ನೀರಿಗೂ ಇಂಥಾ ಕೊರತೆ ಈ ಪ್ರಮಾಣದಲ್ಲಿ ಕಾಡಬಹುದೆಂದು ಯಾರೂ ನೆನೆದಿರಲಿಲ್ಲ. ನೀರಿಗಾಗಿ ಯುದ್ಧ ಆರಂಭವಾದೀತೆಂದು ಊಹಿಸಿಯೂ ಇಲ್ಲ. ಆದರೆ ಈಗ? ನದನದಿಗಳ ಸಹಜ ನೀರಿನಲ್ಲಿ, ಹೆಚ್ಚೆಂದರೆ ತೋಡುಬಾವಿಯ ಮಿತಿಯಲ್ಲಿ ಮನಸೋ ಇಚ್ಛೆ ಕುಡಿಯಬೇಕಾದ, ಕುಣಿಯಬೇಕಾದ ನಾವು ಇಂದು ತೊಟ್ಟಿನೀರಿಗೂ ಹಪಹಪಿಸುವಂತಾಗಿದೆ.

ಎಲ್ಲೆಲ್ಲೂ ಲಂಗುಲಗಾಮು ಇಲ್ಲದೆ ಕೊಳವೆಬಾವಿ ಕೊರೆದ ಕಾರಣ ಅಂತರ್ಜಲ ಮಟ್ಟವನ್ನು ಇನ್ನಿಲ್ಲದಂತೆ ಬತ್ತಿಸಿದ ಕಾರಣ ಅಲ್ಲಿ ಇಲ್ಲಿ ಕಾನೂನಿನ ಮೂಲಕ ಉಳಿಸಿದ ಬಂಡೀಪುರ, ನಾಗರಹೊಳೆಯಂಥ ಅಭಯಾರಣ್ಯದಲ್ಲೂ ನೀರಿನ ಕೊರತೆ ಆರಂಭವಾಗಿದೆ. ಮತ್ತದೇ ಕೊಳವೆಬಾವಿಯಿಂದ ನೀರೆತ್ತಿ ಕಾಡಿನಲ್ಲಿರುವ ಕೊಳಗಳಿಗೆ ಟಾರ್ಪಲ್ ಹಾಕಿ, ಅದಕ್ಕೆ ನೀರು ಹಾಯಿಸಿ ಅಲ್ಲಿರುವ ಜೀವಿಗಳಿಗೆ ನೀರು ಕೊಡುತ್ತಿದ್ದೇವೆ. ಈ ಮೂಲಕ ನಮ್ಮ ಪರಿಸರ ಪ್ರೇಮ ಮೆರೆಯುತ್ತಿದ್ದೇವೆ!!! ಕಾಡಿನಲ್ಲಿ ನೀರು ಸಿಗದೆ, ಆಹಾರ ಸಿಗದೆ ವನ್ಯಜೀವಿಗಳು ನಾಡಿಗೆ ಲಗ್ಗೆ ಇಡುತ್ತಿವೆ. ಪೇಟೆಯ ಹೋಟೇಲಿಗೆ ನರಿಗಳು ಮತ್ತು ಮೊಲಗಳು ದೀನವಾಗಿ ಬಂದು ನೀರು ಕೇಳಿದ ದೃಷ್ಟಾಂತವಿದೆ. ರೈತರು ಬೆಳೆದ ಬೆಳೆ ಅಪಾರ ಪ್ರಮಾಣದಲ್ಲಿ ನಷ್ಟವಾಗುತ್ತಿದೆ. ವಿಪರ್ಯಾಸವೆಂದರೆ ಈ ನಷ್ಟ ಅನುಭವಿಸುತ್ತಿರುವವರು ಮತ್ತೆ ಮತ್ತೆ ರೈತರು. ಹಾಗಾಗಿ ಮತ್ತೆ ಮತ್ತೆ ರೈತರು ಪೇಟೆಯ ಕಡೆಗೆ ಮುಖಮಾಡುವಂತಾಗಿದೆ. ಇದು ಮತ್ತೆ ಮತ್ತೆ ಜಲಕ್ಷಾಮವನ್ನು ಹೆಚ್ಚಿಸುತ್ತಿದೆ.

ಕಳೆದ ವರ್ಷ ಸೆಪ್ಟೆಂಬರ್ (2015) ರಲ್ಲಿ ಶಿವಮೊಗ್ಗದ ಕೊಪ್ಪ ಸಮೀಪ ಇರುವ ಹಲವು ತೋಟಗಳಿಗೆ ಅಲ್ಲಿ ವಾಸವಿರುವ ನನ್ನ ಗೆಳೆಯ ಕಿರಣನೊಂದಿಗೆ ಭೇಟಿ ಕೊಟ್ಟಿದ್ದೆ. ಆಳುಗಳ ಕೊರತೆಯಿಂದಾಗಿ ಬಹುತೇಕ ಕಾಫಿ ತೋಟಗಳು ಟಿಂಬರ್ ಲಾಬಿಗೆ ಬಲಿಯಾಗಿದೆ. ದೊಡ್ಡ ದೊಡ್ಡ ಸ್ಥಳೀಯ ಮರಗಳನ್ನು ಕಡಿದು ಮುಗಿಸಿದ್ದಾರೆ. ಕೃಷಿ ಕಷ್ಟವನ್ನಷ್ಟು ಕಳೆದುಕೊಂಡಿದ್ದಾರೆ. ಸುಲಭಕ್ಕೆ ಕಟಾವು ಮಾಡಲಾಗುವ silver oak ಮರಗಳನ್ನು ಎಲ್ಲಾ ತೋಟಗಳಲ್ಲಿ ಬೆಳೆಸಲಾಗಿದೆ. ಅಲ್ಲಿ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ( ಅದು ಯಾಕೆ? ಏನು? ಹೇಗೆ? ಇನ್ನೊಮ್ಮೆ ವಿವರಿಸುವೆ. )

ನಾನು ಕೊಪ್ಪ ಸಮೀಪ ಇರುವ ನಾರ್ವೆ ಎಂಬ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೆ. ಆ ಗ್ರಾಮ ಇಂದಿನ ಪರಿಸ್ಥಿತಿಗೆ ತುಸು ಭಿನ್ನವಾಗಿತ್ತು. ಗೆಳೆಯ ಕಿರಣನಿಗೆ ನನ್ನ ತೋಟಗಾರಿಕೆ ಮತ್ತು ಪಕ್ಷಿ ಪ್ರೀತಿ ಪರಿಚಯವಿದ್ದುದರಿಂದ ಸಮಾನ ಮನಸ್ಕ ಕೃಷಿಕರನ್ನು ಪರಿಚಯಿಸಿದ. ಮತ್ತಲ್ಲೇ ವಾಸ್ತವ್ಯವನ್ನೂ ಏರ್ಪಡಿಸಿದ್ದ. ನಾರ್ವೆಯಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಒಂದು ಕಾಫಿ ತೋಟ, ಅದು  ಶೀ ವಿಜಯರಂಗ ಎಂಬವರ ತೋಟ. ಅಣ್ಣ ತಮ್ಮ ಎಲ್ಲಾ ಒಟ್ಟಿಗೇ ವಾಸಿಸುತ್ತಿರುವ ಕೃಷಿ ಕುಟುಂಬ. ಸುತ್ತಲೂ ಬೆಟ್ಟ, ಎಲ್ಲೆಲ್ಲೂ ಮರಗಳು, ಸಿಲ್ವರ್ ಓಕ್’ನ ಅಬ್ಬರ ಅಲ್ಲಿಗೆ ಮುಟ್ಟಿಲ್ಲ. ಕಣಿವೆ ಪ್ರದೇಶವಾದ್ದರಿಂದ 365ದಿನವೂ ತೊರೆಯಲ್ಲಿ ನೀರು ಲಭ್ಯ. ಆ ತೋಟಕ್ಕೆ ಸರಿಯಾದ ಮಾರ್ಗವೂ ಇಲ್ಲ. ಸ್ವಂತಕ್ಕೆಂದು ಅವರು ವಾಹನವನ್ನೂ ಇಟ್ಟುಕೊಂಡಿಲ್ಲ. ಕಾಲ್ನಡಿಗೆಯೇ ಎಲ್ಲ. 65 ವರ್ಷದ ವಿಜಯರಂಗರವರು ಎಲೆ ಮರೆಯ ಕಾಯಿ. ತಮ್ಮ ಜಮೀನಿನಲ್ಲಿ ಇದುವರೆಗೆ 500ಕ್ಕೂ ಮಿಕ್ಕಿ ಪತಂಗಗಳನ್ನು, ನೂರಕ್ಕೂ ಮಿಕ್ಕಿ ಚಿಟ್ಟೆಗಳನ್ನು, ನೂರಕ್ಕೂ ಅಧಿಕ ಪಕ್ಷಿಗಳನ್ನು,ಸುಮಾರು ನೂರು ತರಹದ ಸ್ಥಳೀಯ ಆರ್ಕಿಡ್ ಸಸ್ಯಗಳನ್ನು ಬರೆದು ದಾಖಲಿಸಿದ್ದಾರೆ. ಹಾಗೆಯೇ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.. ಯಾವುದೇ ಅಹಂ ಇಲ್ಲದೆ, ಪ್ರಚಾರದ ತವಕವಿಲ್ಲದೆ, ಅಂತರ್ಜಾಲ ಸಂಪರ್ಕವಿಲದ್ಲೆ, ಕೃಷಿಯನ್ನು ಬಿಡದೆ ತಮ್ಮಷ್ಟಕ್ಕೆ, ತಮ್ಮಿಷ್ಟಕ್ಕೆ ತಕ್ಕಂತೆ ಆ ಹಕ್ಕಿಗಳಂತೆ ಬದುಕುತ್ತಿದ್ದಾರೆ ಎಂದು ಬೇಕಾದರೂ ಹೇಳಬಹುದು.

ವಿಜಯರಂಗರವರು ಮಲೆನಾಡಿನ ಹಕ್ಕಿಗಳನ್ನು ತೀರಾ ಹತ್ತಿರದಿಂದ ಕಂಡಿದ್ದಾರೆ. ಒಂದೊಂದು ಹಕ್ಕಿಯ ದಿನಚರಿ ಅವರು ಬಲ್ಲವರಿದ್ದಾರೆ, ಹಕ್ಕಿಗಳ ಆರೋಗ್ಯಕರ ನಾಡಿಮಿಡಿತವನ್ನು ಅರಿತಿದ್ದಾರೆ. ಹಾಗಾಗಿ ಪಕ್ಷಿರಂಗದಲ್ಲವರು ವಿಜಯ ಸಾಧಿಸಿದ್ದಾರೆ.

ಅವರು ಹೇಳುವಂತೆ ಈ ಹಕ್ಕಿಗಳು ನಮ್ಮಂತೆ ಅಲ್ಲ. ಇವು ಸಮಯಕ್ಕೆ ಬಹಳ ಬೆಲೆ ಕೊಡುತ್ತವೆ, ಒಂದು ಹಕ್ಕಿ ಈ  ಸಮಯದಲ್ಲಿ ಇಲ್ಲಿ ಇದ್ದರೆ ಮರುದಿನ ಇದೇ ಸಮಯಕ್ಕೆ ಇಲ್ಲಿ ಬಂದೇ ಬರುತ್ತದೆ. ಅದು ಹಕ್ಕಿಗಳು ನೀರಿಗೆ ಭೇಟಿಕೊಡುವಾಗ ಇನ್ನಷ್ಟು ನಿಖರ. ನಿಮಿಷಗಳಷ್ಟೂ ವ್ಯತ್ಯಾಸವಾಗದು.

Vijayaranga

Vijayaranga

ಅವರು ಹೇಳುವಂತೆ ಪಕ್ಷಿಗಳ ಶಿಸ್ತು ಸಮಯಪಾಲನೆಯಲ್ಲಿ ಮಾತ್ರವಲ್ಲ, ಪ್ರಕೃತಿಗೆ ಮತ್ತು ಸಹಜೀವಿಗಳಿಗೆ ಕೊಡುಕೊಳ್ಳೂವ ವಿಷಯದಲ್ಲೂ ಅಷ್ಟೇ ಶಿಸ್ತಿನಿಂದಿರುತ್ತವಂತೆ. ಅವರ ತೋಟದ ತೊರೆಗೆ ಮುಸ್ಸಂಜೆ ಪ್ರತಿ ದಿನಾ ಅನೇಕ ಹಕ್ಕಿಗಳು ಭೇಟಿ ಕೊಡುತ್ತವಂತೆ. ಅವರ ಪ್ರಕಾರ ಆ ನೀರ ಝರಿಗೆ ಮೊದಲು ಭೇಟಿ ಕೊಡುವ ಬಾನಾಡಿ ಮುನಿಯಾ! ಅವು ಬಹು ಸಂಖ್ಯೆಯಲ್ಲಿ ಬಂದು ಸುತ್ತಲೂ ವೈರಿಗಳ ಉಪಟಳವಿಲ್ಲ ಎಂದು ಖಾತ್ರಿ ಮಾಡಿಕೊಂಡು  all is well  ಎಂದು ಸಂದೇಶ ರವಾನಿಸುವುದಂತೆ. ನಂತರದಲ್ಲಿ ಬೆಳ್ಗಣ್ಣ (White eye)ಬರುವುದಂತೆ.ಆಮೇಲೆ ಪಿಕಳಾರಗಳು. ಪಿಕಳಾರದಲ್ಲಿ ಕೆಮ್ಮೀಸೆಪಿಕಳಾರ (Red whishkered bulbul) ಮೊದಲು ಬಂದರೆ ನಂತರ ಕೆಂಪು ಕೊರಳಿನ ಪಿಕಳಾರ (Ruby throated bulbul ) ನಂತರ ಹಳದಿ ಹುಬ್ಬಿನ ಪಕಳಾರ (yellow browed bulbul) ಮತ್ತು ಕೊನೆಯದಾಗಿ ಕಪ್ಪು ಪಿಕಳಾರ (Black/square tailed bulbul) ಬರುವುದಂತೆ. ಇವುಗಳ ಸ್ನಾನವಾಗುತ್ತಿದ್ದಂತೆ ಕಂದು ಕತ್ತಿನ ಹರಟೆಮಲ್ಲ (puff throated babbler) ನಂತರದಲ್ಲಿ ಅರಶಿನ ತಲೆಯ ನೆಲಸಿಳ್ಳಾರ  (orange headed thrush) ಹೀಗೆ ಸರದಿಯಲ್ಲಿ ಸ್ನಾನ ಮಾಡುತ್ತವಂತೆ. ಸಾಲು ಮುರಿಯುವ ಕಾಲು ಹಾಕುವ ಮರ್ಚಿ ಯಾವುದಕ್ಕೂ ಇಲ್ಲವಂತೆ.

06

04

08

ಈ ಮಧ್ಯೆ  ಚಾಣದಂತ(crested goshawk) ಹಿಂಸ್ರ ಪಕ್ಷಿಗಳು ಭೇಟಿಕೊಡುವುದುಂಟಂತೆ. ಆಗ ಈ ಪುಟಾಣಿಗಳು ಹೆದರಿ ಜಾಗ ಕೊಡುವುದಂತೆ. ಹೆಚ್ಚಾಗಿ ಮುಳ್ಳಿನ ಗಿಡದ ಮಧ್ಯೆ ಅವಿತು ಕೂರುವುದಂತೆ. ಮುಳ್ಳಿನ ಗಿಡ ಇವಕ್ಕೆ ರಕ್ಷಣೆಯಂತೆ. ಹಿಂಸ್ರ ಪಕ್ಷಿ ಹೋಗುವಷ್ಟು ಹೊತ್ತು ಇತರೆ ಯಾವ ಪಕ್ಷಿಯೂ ಅಲ್ಲಿ ಸುಳಿಯುವುದಿಲ್ಲವಂತೆ. ಕೊನೆಯದಾಗಿ ಬರುವ ಪಕ್ಷಿಯು ನೊಣಹಿಡುಕಗಳು. ಅಲ್ಲಿ ಸಾಮಾನ್ಯವಾಗಿ ರಾಜಹಕ್ಕಿ(paradise flycatcher) ನೀಲಿನೊಣಹಿಡುಕ (Tickel’s blue flycatcher)ಬಿಳಿಹೊಟ್ಟೆಯ ನೀಲಿ ನೊಣಹಿಡುಕ (white bellied-blue flycatcher) ಕಾಣಿಸುವುದಂತೆ. ಬಲು ವಿರಳವಾದ ನೀಲಗಿರಿ ನೀಲಿನೊಣಹಿಡುಕ(nilagiri flycatcher)ವನ್ನು ಕೂಡಾ ಸ್ನಾನದ ವೇಳೆ ಅವರು ದಾಖಲಿಸಿರುವುದು ವಿಶೇಷ.

07

09

ಶೀ ವಿಜಯರಂಗರಿಗೆ ನೀರಿನ ಕೊರತೆ ಎಂದರೆ ಏನು ಎಂದೇ ಗೊತ್ತಿಲ್ಲ, ಅವರ ಸುತ್ತಲಿನ ಬಾನಾಡಿಗಳಿಗೆ ಯಾರೂ ನೀರಿಡುವ ಪ್ರಮೇಯವೇ ಇಲ್ಲ. ಆದರೆ ಬಹುಜನರಿಗೆ ಹಾಗಲ್ಲ. ಹಾಗಾಗಿ ನಮ್ಮ ನಮ್ಮ ಮನೆಗಳ ಮುಂದೆ ನೀರಿಡೋಣ. ಈ ಜವಾಬ್ಧಾರಿಯನ್ನು ಮತ್ತೆ ಸರಕಾರವೇ ವಹಿಸಿ ದೊಡ್ಡ ಮೊತ್ತದಲ್ಲಿ ಹಣ ಪೋಲಾಗುವುದನ್ನು ತಪ್ಪಿಸುವುದಕ್ಕಾಗಿ ನೀರಿಡೋಣ. ಹೀಗೆ ನೀರಿಡುವ ಮೂಲಕ ಅದೆಷ್ಟು ಪರಿಸರ ರಕ್ಷಣೆ ಸಾಧ್ಯವೋ? ನಾನಂತೂ ಹೇಳಲಾರೆ. ಹಾಗೆ ಹೇಳುವುದಕ್ಕೊಂದು ಅಂಕಿಅಂಶದ ಉತ್ತರ ಬೇಗ ತಯಾರಾಗುವುದಕ್ಕಾಗಿ ನೀರಿಡೋಣ! ಜೊತೆಜೊತೆಗೆ, ಆ ಹಕ್ಕಿಗಳ ಜೊತೆಜೊತೆಗೆ ನಮ್ಮ ಶಿಸ್ತು ಸಂಯಮಗಳಿಗೊಂದಷ್ಟು ಪರಿಸರದ ಆಯಾಮ ಕೊಡಲು ತವಕಿಸೋಣ. ನೀರಿಡದೆ ಬಾನಾಡಿಗಳಾಡಿ ನಲಿಯುತ್ತಿದ್ದ ಆ ಹಿಂದಿನ ದಿನ ಹಿಂತಿರುಗಲು ಅನುವಾಗೋಣ.

10(1)

ಅನ್ನ ನೀರ್ ಗಾಳಿಗಳನಲ್ಲಲ್ಲೇ ಕೊಡುತಿರಲೀ

ಪ್ರಕೃತಿಯನುಂಡು ಖಗಮೃಗಗಳೆಲ್ಲೆಲ್ಲೂ ಬೆಳೆದಿರಲು

ಅವರ ಬೆಂಬಲದೊಳಿಲ್ಲಿ ಕೊನೆಯೊಳು ಬಂದಿರಲು

ನಾವಿಂದು ವನ್ಯವನು ಉಳಿಸುವುದೇನು ತಟ್ಟೇಯಲಿ

ನೀರಿಟ್ಟು! ಎಲ್ಲ ಹಸುರನು ತಿಂದು ಮುಗಿಸಿರಲು – ವಿಜ್ಞಾನೇಶ್ವರ.

ಚಿತ್ರಗಳು : ಡಾ.ಅಭಿಜಿತ್ ಎ.ಪಿ.ಸಿ., ವಿಜಯಲಕ್ಷ್ಮಿ ರಾವ್

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!