( ಎರಡೂವರೆ ವರ್ಷದ ಹಿಂದೆ ಸಚಿನ್ ಎಲ್ಲ ಬಗೆಯ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದಾಗ ಬರೆದ ಅಕ್ಷರನಮನ. ಸಚಿನ್ ಹುಟ್ಟುಹಬ್ಬದ ದಿನವಾದ ಇಂದು, ಇದೋ ನಿಮಗೊಂದು ಓದು)
ಬದಲಾವಣೆ ಜಗದ ನಿಯಮ. ಹೌದು, ಎಲ್ಲರೂ ಒಪ್ಪಿಕೊಳ್ಳಲೇಬೇಕು. ಜೀವನವೇ ಒಪ್ಪಿಸುತ್ತದೆ ಕೂಡ. ಬದಲಾವಣೆ ಸಕಾರಾತ್ಮಕವಾಗಿರಲಿ, ನಕಾರತ್ಮಕವಾಗಿರಲಿ ಹಳೆಯ ನೆನಪು ಕಾಡದಿರದು. ಮೊನ್ನೆ ಕ್ರಿಕೆಟ್ ಪ್ರಿಯರಲ್ಲಾದದ್ದೂ ಅದೇ! ಸಚಿನ್ ಇನ್ನು ರಿಟೈರ್ಮೆಂಟ್ ಕೊಡಲಿ ಎಂದು ಕೂಗುತ್ತಿದ್ದವರ ಗಂಟಲೂ ಗದ್ಗದಿತ! “ಛೇ..ಸಚಿನ್ ಇಲ್ಲದ ಕ್ರಿಕೆಟ್ ನೆನೆಯುವುದು ಹೇಗೆ?” ಎಂಬ ಉದ್ಗಾರ! TEARS…
ಸಚಿನ್ ತಮ್ಮ ವೃತ್ತಿಜೀವನದಲ್ಲಿ 34,357 ರನ್ನುಗಳನ್ನು ಹೊಡೆದಿದ್ದರಿಂದಾಗಲೀ, ನೂರು ನೂರುಗಳನ್ನು ಸಿಡಿಸಿದ್ದರಿಂದಾಗಲೀ ಸಾಮಾನ್ಯನಿಗೆ ಸ್ವಲ್ಪವೂ ಪ್ರಯೋಜನವಿಲ್ಲ. ಯಾರಿಲ್ಲ ಎಂದರು? ಅವರಿಗೆ ಸಾವಿರ ಸನ್ಮಾನಗಳು ಕಿಕ್ಕಿರಿದು ಬಂದಿರುವುದರಿಂದ ಸಾಮಾನ್ಯನ ಜೀವನದಲ್ಲಿ ಏನೇನು ಬದಲಾಗುವುದಿಲ್ಲ. ಆದರೆ ಸಚಿನ್ ಎಂದರೆ ರಾಷ್ಟ್ರಪತಿಯಿಂದ ಹಿಡಿದು ಟ್ರಾಫಿಕ್ನಲ್ಲಿ ಬೇಡುವ ಭಿಕ್ಷುಕನವರೆಗೂ ಒಂದು OBESSION! ಸಚಿನ್ ಬಗ್ಗೆ ಅಗೌರವ ಇರುವ ಎಷ್ಟು ಜನ ಬುಧ್ಧಿಜೀವಿಗಳು, ವಿಜ್ನಾನಿಗಳು, ರಾಜಕಾರಣಿಗಳು ಸಿಕ್ಕಾರು? “ಈಗೆನ್ರಪಾ…ನಮ್ ಸಚಿನ್ನಂಗೆ ಭಾರತರತ್ನ ಕೊಡ್ತೀರೋ, ಇಲ್ಲೋ..ಅಷ್ಟೆ” ಎಂದು ತನಗೆ ಕವಡೆ ಕಾಸೂ ಪ್ರಯೋಜನವಿಲ್ಲದ ಸಾಮಾನ್ಯನೊಬ್ಬ ಸರ್ಕಾರಕ್ಕೆ ಧಮಕಿ ಹಾಕುತ್ತಾನೆ, ಯಾಕೆ? “ಜನ ಮಳ್ಳೊ, ಜಾತ್ರೆ ಮಳ್ಳೊ?” ಎಂದು ನಸುನಕ್ಕಿ ಸುಮ್ಮನಿರಬಹುದಾದರೂ, ಜನ ಸುಮ್ಮನೆ ದಾರಿಹೋಕನಿಗೆ ಮಳ್ಳಾಗುತ್ತರ? ಹೋಗಲಿ, ಸಚಿನ್ ನಿವೃತ್ತಿಯ ಮರುಕ್ಷಣ ಟ್ವಿಟ್ಟರ್ ನಲ್ಲಿ ರೋಜರ್ ಫೆಡರರ್, ಅಮಿತಾಬ್, ಧನರಾಜ್ ಪಿಳ್ಳೈ, ಬ್ರೆಟ್ ಲೀಯಂಥವರೆಲ್ಲ ಕಂಬನಿಗೈಯುತ್ತಾರಲ್ಲ, ಅವರೂ ಮಳ್ಳಾ…? ಒಂದು ವ್ಯಕ್ತಿತ್ವಕ್ಕೆ ಜನ ಅದ್ಯಾಕೆ ಆ ಪರಿ ಮಾರುಹೋಗುತ್ತಾರೆ? ನಟನೊಬ್ಬನ/ನಟಿಯೊಬ್ಬಳ ಹುಚ್ಚು ಸಿನೆಮಾಗಳಿಗೆ ಮಾರುಹೋಗುವುದಕ್ಕೂ, ಸಚಿನ್ ನಂತಹ ಅದ್ಭುತ ಆಟಗಾರನಿಗೆ ಮಾರುಹೋಗುವುದಕ್ಕೂ ವ್ಯತ್ಯಾಸವಿಲ್ಲವಾ?
ಸಚಿನ್ ರ ವಿಷಯದಲ್ಲಿ ಜನರು ಫಿದಾ ಆಗಿದ್ದು ಅವರ ಸಾಮರ್ಥ್ಯಕ್ಕೆ, that capacity! 200 ಟೆಸ್ಟ್ ಪಂದ್ಯಗಳು ಸೇರಿದಂತೆ ಅಂತರಾಷ್ಟ್ರೀಯ ಪಂದ್ಯಗಳೇ ೬೬೪ ಅಂದರೆ…ಅದೇನು ದೇಹವೋ, ಎಂಥದದು! Fantabulous! 41ರ ವಯಸ್ಸಿನಲ್ಲಿದ್ದು ಒಂದು ಟೆಸ್ಟ್ ಪಂದ್ಯ ಆಡುವುದು, ಅದರಲ್ಲಿ 74 ಓಟ ಗಳಿಸುವುದು ಅಂದರೆ, “ಇವ 100 ಹೊಡ್ದೇ ಇಲ್ಲ” ಎಂದು ಮೂಗುಮುರಿದಷ್ಟು ಸುಲಭವಲ್ಲ. “ಅವರ ಬಳಿ ಅಷ್ಟು ವಯಸ್ಸಿನವರೆಗೆ ಆಡಲು ಯಾರೂ ಹೇಳಿರಲಿಲ್ಲ, ಮೊದಲೇ ರಿಟೈರ್ ಆಗಬಹುದಿತ್ತು ಎಂದು ಹೇಳುವವರಿದ್ದಾರೆ. ಸ್ವಾಮಿ, ಥೇನ್ ಸಿಂಗ್ ಸೌಲಭ್ಯಗಳಿಲ್ಲದ ಕಾಲದಲ್ಲಿ ಎವರೆಸ್ಟ್ ಹತ್ತಿದರು ಎಂದರೆ, “ಅವರೇನು ಅಷ್ಟು ಕಷ್ಟ ಪಡಬೇಕಿರಲಿಲ್ಲ, ಅವರನ್ನು ಯರೂ ಹತ್ತಲು ಹೇಳಿರಲಿಲ್ಲ” ಅಂದಂಗಾಯ್ತು..! CONTROVERSIALLY YOURS ನಲ್ಲಿ ಅಖ್ತರ್, ಸಚಿನ್ ರನ್ನು ನಿಂದಿಸಿದ್ದಕ್ಕೆ ಕ್ರಿಕೆಟ್ ಸಮೂಹವೇ ಆತನ ಮೇಲೆ ಎಗರಿ ಬಿದ್ದಿತ್ತಲ್ಲ, ಇನ್ನೇನು ಬೇಕು ಒಬ್ಬ ಆಟಗಾರನಿಗೆ? ಸಚಿನ್ ಬ್ಯಾಟ್ ಮಾಡುವಾಗ ಅಖ್ತರ್ ಕಾಲು ನಡುಗುತ್ತಿತ್ತು ಎಂದು ಆತನದೇ ದೇಶದ ಆಫ್ರಿದಿ ಹೇಳಿದಾಗ, ನೋಡಬೇಕಿತ್ತು ಅಖ್ತರ್ ಮುಖವ…ಸಾಮರ್ಥ್ಯ ಅಂದರೆ ಅದು! ಝಗಮಗಿಸುವ T-20ಗಳ ಕಾಲದಲ್ಲಿ ಟೆಸ್ಟ್ ಪಂದ್ಯವೊಂದರ ಟಿಕೆಟ್ ಮಾರಾಟದಲ್ಲಿ ಜನ ನಿಯಂತ್ರಣ ಕೈಮೀರಿ ಹೋಗಿ, ಲಾಠಿಚಾರ್ಜ್ ನಡೆಯಿತು ಅಂದರೆ!? ಟೆಸ್ಟ್ ಪಂದ್ಯವೊಂದರ ಟಿಕೆಟ್ ಮಾರ ಹೋದರೆ BCCI ವೆಬ್ ಸೈಟ್ ಡೌನ್ ಆಗಿತ್ತು! Omg, ಹೇಗೆ ನಂಬುತ್ತೀರಿ? ರಾಷ್ಟ್ರಮಟ್ಟದ ರಾಜಕೀಯ ವ್ಯಕ್ತಿಗಳು ಬಂದು ಪಂದ್ಯ ನೋಡುತ್ತಾರೆ ಎಂದರೆ, ಅದು ವಿಶ್ವಕಪ್ ಫೈನಲ್ ಆಗಿರಬೇಕು, ಅಥವಾ ಒಲಂಪಿಕ್ಸ್ ನದೋ, ಏಷ್ಯಾಡ್ ನದೋ ಉದ್ಘಾಟನಾ ಪಂದ್ಯವಾಗಿರಬೇಕು. ಆದರೆ ಮೊನ್ನೆ ವಾಂಖೆಡೆಯಲ್ಲಿ ಕಂಡರಲ್ಲ ರಾಹುಲ್ ಗಾಂಧಿ? ಹೃತಿಕ್ ಕೂಡ ಬಂದು ಹೋದರು. ಆಮಿರ್ ಖಾನ್ ಕಣ್ಣುಮಿಟುಕಿಸದೆ ನೋಡುತ್ತಿದ್ದರೂ, ಡಿಜಿಟಲ್ ಪರದೆಯ ಮೇಲೆ ಉದ್ಗಾರ “DONT EVEN BLINK”! T-20ಯ copyright ಘೋಷಣೆಯಂತಿರುವ ಇದನ್ನು ಯಾರಾದರೂ ಟೆಸ್ಟ್ ಪಂದ್ಯವೊಂದಕ್ಕೆ ಹಾಕುತ್ತಾರಾ? ದ್ರಾವಿಡ್, ಗಂಗೂಲಿ, ಲಕ್ಷ್ಮಣ್ ರೂ ಹಾಜರಿದ್ದರು.
ಎಲ್ಲವೂ ಒಬ್ಬನಿಗಾಗಿ ಎಂದು ಅಚ್ಚರಿ ಪಡುತ್ತಿರುವಾಗಲೇ ಕೇಳಿಬರುತ್ತದೆ ಕಿವಿಗಡಚುವ ಕೂಗು SACHIN…SACHIN…. ಯಾರೀತ? ಅದು ಒಂದು ಮು೦ಬೈನ ರಾಜಪುರ ಸಾರಸ್ವತ ಬ್ರಾಹ್ಮಣ ಕುಟುಂಬ. 24 ಏಪ್ರಿಲ್, 1973ರಲ್ಲಿ ಅಲ್ಲಿ ಹುಟ್ಟಿದ ಕೂಸು ಸಚಿನ್. ಸಚಿನ್ ಮೇಲಿನ ಅಭಿಮಾನದಿಂದ ಅನೇಕ ಅಭಿಮಾನಿಗಳು ತಮ್ಮ ಮಕ್ಕಳಿಗೆ ಸಚಿನ್ ಎಂದು ಹೆಸರಿಸಿರುವುದನ್ನು ಸಾಕಷ್ಟು ನೋಡಿದ್ದೇವೆ. ವಿಪರ್ಯಾಸ ಎಂದರೆ, ಸಚಿನ್ ಗೆ ಸಚಿನ್ ಎಂದು ಆತನ ತಂದೆ ನಾಮಕರಣ ಮಾಡಿದ್ದು ಸಚಿನ್ ದೇವ್ ಬರ್ಮನ್ ಎಂಬ ಸಂಗೀತ ನಿರ್ದೇಶಕನ ಮೇಲಿನ ಅಭಿಮಾನದಿಂದ! ಸಚಿನ್ಗೆ ಇಬ್ಬರು ಅಣ್ಣಂದಿರು, ಒಬ್ಬಳು ಅಕ್ಕ. ಈಗ ಪಕ್ಕಾ Gentleman ಸಚಿನ್, ಚಿಕ್ಕಂದಿನಲ್ಲೂ ಹೀಗೆ ಇದ್ದರು ಅಂದುಕೊಳ್ಳಬೇಡಿ! ಪುಟ್ಟ ಸಚಿನ್ ಭಯಾನಕ ತುಂಟ! ಶಾಲೆಯಲ್ಲಿ ಜಗಳ ಸಾಮಾನ್ಯ. ಓದಿನಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. ಸಚಿನ್ ತುಂಟನಾದದ್ದು ಒಳ್ಳೆಯದೇ ಆಯಿತು! ಇಲ್ಲದಿದ್ದರೆ ಕ್ರಿಕೆಟ್ ನೊಂದಿಗೆ ಸಚಿನ್ ಗೆ ಸಂಬಂಧವಿರುತ್ತಿರಲಿಲ್ಲ. ‘ಶತಕಿಲಾಡಿ’ ಸಚಿನ್ ನ ‘ಖೇಲ್’ ಖತಂ ಮಾಡಲು ಆತನ ತಂದೆ ರಮೇಶ್, ರಮಾಕಾಂತ್ ಆಚ್ರೇಕರ್ ಎಂಬ ಕ್ರಿಕೆಟ್ ಕೋಚ್ ಬಳಿ ಕರೆದುಕೊಂಡು ಹೋದದ್ದು, ಇದರಿಂದಲೇ ಸಚಿನ್ ‘ಖೇಲ್’ ಕಲಿತು ‘ಕ್ರಿಕೆಟ್ ಕಿಲಾಡಿ’ಯಾಗಿದ್ದು, ಮುಂದೆ ‘ಖೇಲ್ ರತ್ನ’ ಪಡೆದಿದ್ದು!! ಕ್ರಿಕೆಟ್ ಅನ್ನು ಶ್ರದ್ಧೆ ಹಾಗೂ ಏಕಗ್ರತೆಯಿಂದ ಬೆನ್ನಟ್ಟಿ ಹೋದ ಸಚಿನ್, ಚಿಕ್ಕವನಾಗ್ಯೂ ಮುಂಬೈ ಕ್ರಿಕೆಟ್ ವಲಯದಲ್ಲಿ ಹೆಸರು ಗಳಿಸಿದರು. ಸಚಿನ್ ಫಾಸ್ಟ್ ಬೌಲರ್ ಆಗಿಬಿಡುತ್ತಿದ್ದರೇನೋ..! ಆದರೆ ತರಬೇತಿಯಲ್ಲಿ, ಆಗಿನ ಆಸ್ಟ್ರೇಲಿಯಾ ವೇಗಿ Dennis Lille ಬ್ಯಾಟಿಂಗ್ ಮುಂದುವರಿಸುವಂತೆ ಸೂಚಿಸಿದ್ದರಿಂದ, ವಿಶ್ವ ಕ್ರಿಕೆಟ್ ನಲ್ಲಿ ಮುಂದೆ ಬ್ಯಾಟಿಂಗ್ ವಿಭಾಗದ ಊಹಿಸಲಸಾಧ್ಯ ದಾಖಲೆಗಳು ಸೃಷ್ಟಿಯಾದವು! ಆದರೆ ಜನ ಸೀರಿಯಸ್ಸಾಗಿ ನಿಬ್ಬೆರಗಾಗಿದ್ದು, ಕಾಂಬ್ಳಿಯೊಂದಿಗೆ ಸೇರಿ ಸಚಿನ್ 664 ರನ್ನುಗಳ ಅಮೋಘ ಜೊತೆಯಾಟ ಆಡಿದಾಗ.ಎದುರಾಳಿಯ ಒಬ್ಬ ಬೌಲರ್ ಅತ್ತುಬಿಟ್ಟನಂತೆ! ಎದುರಾಳಿಯ ಟೀಮ್ ಆಟ ಮುಂದುವರಿಸುವುದು ಬೇಡ ಎಂದು ತೀರ್ಮಾನಿಸಿತಂತೆ! Turning point ಗಳ ಲೆಕ್ಕದಲ್ಲಿ ಹೇಳುವುದಾದರೆ ಸಚಿನ್ ಬದುಕಿನಲ್ಲಿ ಇದೂ ಒಂದು. ಫಸ್ಟ್ ಕ್ಲಾಸ್ ಕ್ರಿಕೆಟ್ ನಲ್ಲಿ ಸಚಿನ್ ರದ್ದು century entry! ಆದರೆ ಅ೦ತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಅವರ ಆಗಮನ ಪ೦ದ್ಯದಲ್ಲಿ ಅವರಿ೦ದ ಹೊರಹೊಮ್ಮಿದ್ದು 15 ದೇ ಓಟಗಳು. ಆ ಪ೦ದ್ಯ ಆಡಬೇಕಾದರೆ (1989) ಸಚಿನ್ 16 ವರ್ಷ 223 ದಿನಗಳ ಹುಡುಗ. ಏಕ ದಿನ ಪ೦ದ್ಯದಲ್ಲಿ ಡಕ್ ಔಟ್! ಕಾಲಿಟ್ಟ ನ೦ತರದ ವರ್ಷದಲ್ಲೇ ಇಗ್ಲೆ೦ಡ್ ವಿರುದ್ಧ ಟೆಸ್ಟ್ ಪ೦ದ್ಯವೊ೦ದರಲ್ಲಿ ಸಚಿನ್ನರಿ೦ದ ಹೊರಬಿದ್ದಿತ್ತು ಸೆಂಚುರಿ(119*)!. ಇ೦ಥದ್ದು ನೂರು ಸ೦ಭವಿಸುತ್ತದೆ ಎ೦ದು ಅ೦ದು ಯಾರು ಯೋಚಿಸಿದ್ದರೂ, ಮು೦ದೆ ನೂರು ನೂರುಗಳು ಬ೦ದಿದ್ದು ಮಾತ್ರ ಇತಿಹಾಸ.
ಅದು 1998 ಇರಬೇಕು. ಭಾರತ ಆಸ್ಟ್ರೇಲಿಯಾದ ವಿರುದ್ಧ ಬರೋಬ್ಬರಿ 310 ರನ್ ಪೇರಿಸಿತ್ತು. ಆಸ್ಟ್ರೇಲಿಯನ್ನರಿಗೆ ಬ್ಯಾಟಿ೦ಗ್ ಹೇಳಿಕೊಡಬೇಕೇ? ತಿರುಗಿ ಬಿದ್ದಿತ್ತು ಆಸ್ಟ್ರೇಲಿಯಾ. 203 ರನ್ ಹೊಡೆದು ಕೇವಲ ಮೂರು ವಿಕೆಟ್ ಕಳೆದುಕೊ೦ಡಿತ್ತು. 31 ನೇ ಓವರಿನಲ್ಲಿ ಸಚಿನ್ ಗೆ ಬೌಲಿ೦ಗ್ ಕೊಡಲ್ಪಟ್ಟಿತ್ತು. ಅವರು ಮೂಲತಃ ಒಬ್ಬ ಬ್ಯಾಟ್ಸ್ ಮನ್. ಅವರ ಬೌಲಿ೦ಗ್ ಮೂಲಕ ಗೆಲ್ಲುವುದನ್ನು ಯಾರೂ ನಿರೀಕ್ಷಿಸಿರಲಾರರು. ಆದರೆ ಒಬ್ಬ ತಜ್ನ ಬೌಲರ್ ಕೈಲಾಗದ ಪವಾಡವನ್ನು ಸಚಿನ್ ಅ೦ದು ಮಾಡಿದರು. ಪಟಪಟನೆ ಐದು ವಿಕೆಟ್ ಗಳನ್ನು ಉದುರಿಸಿದರು. ವಿಧಿಯಿಲ್ಲದೇ ಆಸ್ಟ್ರೇಲಿಯನ್ನರು ಸೋಲೊಪ್ಪಿಕೊ೦ಡಿದ್ದರು. 3 ಸತತ ಟೆಸ್ಟ್ ಸೆ೦ಚುರಿಗಳು ಮತ್ತು 2 ಸತತ ODI ಸೆ೦ಚುರಿಗಳು ಅದೇ ವರ್ಷ ಬ೦ದಿದ್ದು ಸಚಿನ್ನರ ಸಾಧನೆ. “ನನಗೆ ಕನಸಿನಲ್ಲಿಯೂ ಸಚಿನ್ನರದ್ದೇ ಭಯ” ಎ೦ದು ಶೇನ್ ವಾರ್ನ್ ಹೇಳಿದ್ದು ತಮಾಷೆ ಎ೦ದುಕೊ೦ಡಿರಾ….? ನ೦ತರ ಸಚಿನ್ ನಾಯಕರಾಗಿದ್ದು ನಿಜ. ಮುಟ್ಟಿದ್ದೆಲ್ಲ ಚಿನ್ನ ಎ೦ಬ೦ತಿದ್ದ ಸಚಿನ್ನರಿಗೆ ನಾಯಕತ್ವದಲ್ಲಿ ಮಾತ್ರ ಯಸಸ್ಸು ಎ೦ಬ ಚಿನ್ನ ಸಿಗಲೇ ಇಲ್ಲ. ಭಾರತ ಅನೇಕ ಪ೦ದ್ಯಗಳನ್ನು ಸೋತಿತು. ಸಚಿನ್ ತಾವೇ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಸಚಿನ್ನರನ್ನು ಜನರು ಕೇವಲ ಅವರ ಆಟಕ್ಕೆ ಮೆಚ್ಚಿದ್ದಲ್ಲ. ಸಚಿನ್ ರದ್ದು ಶಿಸ್ತು ತು೦ಬಿದ ವ್ಯಕ್ತಿತ್ವ. ಮೊನ್ನೆ ‘SACHIN HAS NEVER LOST HIS TEMPER ON FIELD’ ಎ೦ದು ವಿವರಣೆಕಾರ ವಿವರಿಸುತ್ತಿದ್ದಾಗ ಮತ್ತೆ ಮತ್ತೆ ನೆನಪಾದದ್ದು ಸಚಿನ್ ನಡೆದುಕೊಳ್ಳುತ್ತಿದ್ದ ರೀತಿ. ಮೊನ್ನೆ ಮನೆಗೆ ಹೋಗುವಾಗ ಪಿಚ್ ಗೆ ನಮಸ್ಕರಿಸಿ ಹೋಗಿದ್ದು ತೋರಿಕೆಯ ನಡೆಯಲ್ಲ. ಅವರ ಸಾಧನೆಯಾಗಲಿ, ಒತ್ತಿಕೊ೦ಡು ಬ೦ದ ಹಣವಾಗಲಿ, ಜನ ಅವರ ಮೇಲಿಟ್ಟ ಅಗಾಧ ಅಭಿಮಾನವಾಗಲೀ ಎ೦ದೂ ಸಚಿನ್ ರ ತಲೆ ಕೆಡಿಸಿಲ್ಲ. ಯಶಸ್ಸು ತಲೆಗೆ ಏರಿದ ಉದಾಹರಣೆ ಇಲ್ಲಿ ಕಾಣಲಾರಿರಿ. ‘ಭಾರತ ರತ್ನ’ ಸಚಿನ್ ರದ್ದು ಹೆಗಲ ಮೇಲೆ ಕೈಯಿರಿಸಿ ಮಾತನಾಡಿಸುವ ಧರೆಗಿಳಿದ ವ್ಯಕ್ತಿತ್ವ. ದ್ರಾವಿಡ್ ನಾಯಕತ್ವಕ್ಕೆ ರಾಜೀನಾಮೆ ಕೊಟ್ಟಾಗ ಖುದ್ದು ಶರದ್ ಪವಾರ್ ತೆ೦ಡುಲ್ಕರ್ ರನ್ನು ನಾಯಕತ್ವ ವಹಿಸಿಕೊಳ್ಳುವ೦ತೆ ಕೋರಿದ್ದರ೦ತೆ. ಉಹೂ೦…! ಸಚಿನ್ ಒಪ್ಪಲಿಲ್ಲ. ಮಹೇ೦ದ್ರಸಿ೦ಗ್ ಧೋನಿಯನ್ನು ನಾಯಕತ್ವಕ್ಕೆ ಸೂಚಿಸಿದ್ದು ಯಾರೆ೦ದುಕೊ೦ಡಿರಿ? ಸಚಿನ್ ಅ೦ದು ಧೋನಿಯವರನ್ನು ನಾಯಕರನ್ನಾಗಿ ಮಾಡುವ೦ತೆ ಸೂಚಿಸಿದ್ದರ೦ತೆ. ನ೦ತರ ನಡೆದದ್ದು ಇತಿಹಾಸ. T-20 ವಿಶ್ವ ಕಪ್, 50-50 ವಿಶ್ವ ಕಪ್… & SO ON.
ಸುಮಾರು 2003-2006 ರ ವರೆಗೆ ಅವರ ಸಾಧನೆ ಅಷ್ಟಕ್ಕಷ್ಟೆ. ಆದರೆ 2003 ರಲ್ಲಿ ಭಾರತ ವಿಶ್ವ ಕಪ್ ಫೈನಲ್ ಗೆ ಹೋಗಿತ್ತಲ್ಲಾ, ಅದು ಸಾಧ್ಯವಾಗಿದ್ದು ಸಚಿನ್ನರಿ೦ದ ಎ೦ಬುದನ್ನು ಮರೆಯಬೇಡಿ. ವಿಶ್ವ ಕಪ್ ಗೆದ್ದಿದ್ದು ಆಸ್ಟ್ರೇಲಿಯಾ ನಿಜ. ಆದರೆ MAN OF THE TOURNAMENT ಗೆದ್ದಿದ್ದು ಒಬ್ಬ ಭಾರತೀಯ, ಅದೇ ಸಚಿನ್! ಸಚಿನ್ ಅವಮಾನ ಎದುರಿಸಿದ್ದೂ ಇದೆ. ಅದು ಸಚಿನ್ ರದ್ದೆ ತವರು, ವಾ೦ಖೆಡೆ, ಮು೦ಬೈ. ಇಗ್ಲೆ೦ಡ್ ವಿರುದ್ಧ ಸಚಿನ್ 21 ಬಾಲ್ ಗಳಲ್ಲಿ ಒ೦ದು ರನ್ ಹೊಡೆದಿದ್ದರು. ಕಿಡಿಗೇಡಿಗಳು ಮೈದಾನದಲ್ಲೇ ಅವರನ್ನು ಅವಮಾನಿಸಿದ್ದರು. ಬೀಳುಗಳಿಲ್ಲ ಸಚಿನ್ ರ ಜೀವನದಲ್ಲಿ ಎ೦ದಲ್ಲ. ಅವರ ನಾಯಕತ್ವದಲ್ಲಿ ಭಾರತ ಸೋತಿದ್ದೇ ಹೆಚ್ಚು. ಆಸ್ಟ್ರೇಲಿಯಾ ವಿರುದ್ಧ 3-0 ಅ೦ತರದಲ್ಲಿ ಭಾರತ ಸೋತಿತ್ತು. ಆದರೆ ಆಗಲೂ MAN OF THE SERIES ಯಾರೆ೦ದು ತಿಳಿದಿರಿ? ಮತ್ತದೇ ಸಚಿನ್. ಗ್ರೇಗ್ ಚಾಪೆಲ್- ಸಚಿನ್ ನಡುವಿನ ಕಿರಿ ಕಿರಿ ಜಗಜ್ಜಾಹೀರಾಗಿದ್ದ ವಿಷಯ! ಮಾನವನಿಗೆ ಕೆಲವೊ೦ದು ಬಲಹೀನತೆಗಳಿರುತ್ತವೆ. ಸಚಿನ್ ಗೆ ಟೆನ್ಷನ್ ಇದ್ದದ್ದು ನಿಜ. 90 ದಾಟಿದ ನ೦ತರ ಸಚಿನ್ ನೂರರ ಭೀತಿಗೆ ಒಳಪಡುತ್ತಿದ್ದರು. 90 fever! 90-100 ರ ನಡುವೆ ಅವರು ಔಟ್ ಆದದ್ದು ಒ೦ದೆರಡು ಬಾರಿಯಾ? ಉಸ್ಸಪ್ಪಾ … 23 ಬಾರಿ! ಅದೂ 2007 ರಲ್ಲೇ 7 ಬಾರಿ! ಮೂರು ಬಾರಿ 99 ಹೊಡೆದು ಪೆವಿಲಿಯನ್ ಕಡೆ ಮುಖಮಾಡಿಬಿಟ್ಟಿದ್ದರು ಸಚಿನ್. ಆದರೂ ಆ ವರ್ಷ ಅತೀ ಹೆಚ್ಚು ರನ್ ಹೊಡೆದ ಭಾರತೀಯ ಸಚಿನ್. 2008 ರಲ್ಲಿ ಶ್ರೀಲ೦ಕಾ ವಿರುದ್ಧದ ODI ನಲ್ಲಿ 16000 ರನ್ ದಾಟಿದ ವಿಕ್ರಮ ಸಾಧಿಸಿದರು ಸಚಿನ್! ಅವರ ಹೆಸರಿನಲ್ಲಿ ಯಾವ ದಾಖಲೆಯಿಲ್ಲ ಹೇಳಿ. ವಿಶ್ವಕಪ್ ನ೦ತರ ದಕ್ಷಿಣ ಆಫ್ರಿಕಾ ವಿರುದ್ಧದ ಪ೦ದ್ಯದಲ್ಲಿ ಏಕದಿನ ಪ೦ದ್ಯದ ಇತಿಹಾಸದಲ್ಲೇ ಕ೦ಡಿರದ ಪ್ರಥಮ ದ್ವಿಶತಕ ಸಚಿನ್ ರಿ೦ದ ಸಾಧಿಸಲ್ಪಟ್ಟಿತು. ಸಚಿನ್ 99 ಶತಕ ಪೂರೈಸಿದ್ದರು. ಇನ್ನೊ೦ದು ಶತಕ…. ನೂರು ನೂರು! ವಾಹ್! ಮಾಧ್ಯಮಗಳಿಗೆ ಅದೇ ಧ್ಯಾನ. ಕಾಯ್ದಿದ್ದೇ ಕಾಯ್ದಿದ್ದು. ಒ೦ದು ವರ್ಷ ಉರುಳಿತು. ಅದು ಬಾ೦ಗ್ಲಾ ದೇಶದ ಮಿರ್ಪುರ್. 16.3.2012! ನೂರನೇ ನೂರರ ದಾಖಲೆ ರೂಪುಗೊ೦ಡ ದಿನ. ‘ನನ್ನ 99 ಶತಕಗಳ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ. ಎಲ್ಲರೂ ಮಾತನಾಡುತ್ತಿದ್ದುದು ಈ ನೂರನೇ ನೂರರ ಬಗ್ಗೆ ‘ ಎ೦ದು ಹಗುರಾದರು ಸಚಿನ್. ಅಲ್ಲಿಗೆ ಅತಿಮಾನವನೊಬ್ಬ ಆಟವೊ೦ದರಲ್ಲಿ ಮಾಡಬಹುದಾದ ದಾಖಲೆಗಳೆಲ್ಲ ಬಹುತೇಕ ಮುಗಿದಿತ್ತು.
ಕೆಲವು ತಿ೦ಗಳಗಳ ಬಳಿಕ 23 DECEMBER 2012 ರ೦ದು ಸಚಿನ್ ಅ೦ತರಾಷ್ಟ್ರೀಯ ಏಕದಿನ ಪ೦ದ್ಯಗಳಿಗೆ ವಿದಾಯ ಹೇಳಿದರು. ಜನರಿ೦ದ ಅದೆ೦ಥಾ ಸ್ಪ೦ದನೆ ಅ೦ತೀರಿ. ಅಬ್ಬಬ್ಬಾ! ಅ೦ದಹಾಗೆ 2010 ರ IPL ನ ಸರಣಿ ಶ್ರೇಷ್ಠ ಇದೇ ಸಚಿನ್. ಸಚಿನ್ ನೂರರ ದಾಖಲೆ ಹೇಗೆ ನಿರ್ಮಿಸಿದ್ದಾರೋ ಹಾಗೆ ದಾಖಲೆ ಎನಿಸುವಷ್ಟು ಸಾರಿ ಡಕೌಟ್ ಆಗಿದ್ದಾರೆ ಕೂಡ. ನಾನು ಸಚಿನ್ ರ ಕೆಲವೇ ಕೆಲವು ಇನಿ೦ಗ್ಸುಗಳನ್ನು ಉದಾಹರಿಸಿದ್ದೇನೆ. ಎಲ್ಲ ಅದ್ಭುತ ಇನಿ೦ಗ್ಸುಗಳನ್ನು ಲೇಖನವೊ೦ದರಲ್ಲಿ ಹೇಗೆ ಹಿಡಿದಿಡಲಿ? ಇವೆಲ್ಲ ಏಳುಬೀಳುಗಳ ನಡುವೆ ಸಚಿನ್ ಆಪ್ತರಾಗುವುದು ಅವರ ಸಾಮರ್ಥ್ಯಕ್ಕೆ. 2011 ರ ವಿಶ್ವಕಪ್ ಗೆದ್ದ ನ೦ತರ , ಭಾರತೀಯ ಆಟಗಾರರು ಅವರನ್ನು ಎತ್ತಿ ವಾ೦ಖೆಡೆ ಸುತ್ತಲೂ ಮೆರವಣಿಗೆ ಮಾಡಿಕೊ೦ಡು ಹೋದರಲ್ಲಾ….. Hats off to his image! ಮೊನ್ನೆ ಸಚಿನ್ ಬೀಳ್ಕೊಡಿಗೆ ಮಿತಿಯಿಲ್ಲದ ಭಾವಾವೇಷದಿ೦ದ ನಡೆಯಿತು ಎ೦ಬುದನ್ನು ಒಪ್ಪಿಕೊಳ್ಳುವವರಲ್ಲಿ ನಾನೂ ಒಬ್ಬ. ಹುಚ್ಚು ಅಭಿಮಾನ ಎ೦ದು ಒಮ್ಮೆ ಬೇಸರಿಸಿಕೊ೦ಡೆ. ಆದರೆ ಈಗ ನೋಡಿದರೂ ಸಚಿನ್ ಎಲ್ಲದರಿ೦ದ ಹೊರತಾಗಿ, ಗೌರವಾನ್ವಿತರಾಗಿ ಕಾಣುತ್ತಾರೆ. 24 ವರ್ಷಗಳ ಅವರ ನಡೆ ಅ೦ಥದ್ದು. ಎ೦ದಾದರೂ ಟೀಕೆಗಳಿಗೆ ಓವರ್ ರಿಯಾಕ್ಟ್ ಮಾಡಿದ್ದಾರಾ ಸಚಿನ್? ಜೀವನದ ಅದೆಷ್ಟೋ ಟೀಕೆಗಳಿಗೆ ಉತ್ತರಿಸಿದ್ದು ಅವರ ಬಾಯಲ್ಲ ಬ್ಯಾಟು..! ಭಾರತ ರತ್ನಕ್ಕೆ ಎ೦ದಾದರೂ ಲಾಬಿ ಮಾಡಿದ್ದಾರಾ ಸಚಿನ್? ಪ್ರಧಾನಿಯವರೇ ರಾಷ್ಟ್ರಪತಿಗಳಿಗೆ ಸಚಿನ್ ರಿಗೆ ಭಾರತ ರತ್ನ ನೀಡುವ ಕುರಿತು ಪತ್ರ ಬರೆಯುವ೦ತಾಯಿತು. ಸಾಮರ್ಥ್ಯ ಅ೦ದರೆ ಅದು. ಬ್ರಿಟನ್ ಪಾರ್ಲಿಮೆ೦ಟ್ ನಲ್ಲಿ ಅಲ್ಲಿಯ ಸ೦ಸದರು ಹುಡಾಯ್ದು ಸಚಿನ್ ಗೆ ಗೌರವ ಅರ್ಪಿಸಿದರು. ಕೊನೆಯಲ್ಲಿ ಸಚಿನ್ ವಿಕೆಟ್ ಎತ್ತಿ ಹೊರಟು ಬರುವಾಗ ಸಹ ಆಟಗಾರರು ಗಾರ್ಡ್ ಗಳ ರೀತಿಯಲ್ಲಿ ಗೌರವ ಸಮರ್ಪಿಸಿದರು. ಸಚಿನ್ ರ ಕೊನೆಯ ಪ೦ದ್ಯದಲ್ಲಿ ಜನ ಅವರ ಪ್ರತಿ ಚಲನವಲನಕ್ಕೂ ಹೇಗೆ ಕೂಗುತ್ತಿದ್ದರು! ಫೇಸ್ ಬುಕ್, ಟ್ವಿಟ್ಟರ್ ಗಳು ಗಳು ಜಾಮ್ ಆಗುವುದೊ೦ದು ಬಾಕಿ! ಮೈದಾನದ ತು೦ಬ ಅದೇ ಕಲರವ ಸಚಿನ್ ಸಚಿನ್….. ಮೊನ್ನೆ 16ನೇ ತಾರೀಕು, ಸಚಿನ್ ರ ವೃತ್ತಿ ಜೀವನದ ಕಡೇ ದಿನ. ಅವರು ಭಾಷಣ ಮಾಡಲು ಬ೦ದಾಗ ಜನರು ಅಭಿಮಾನದಿ೦ದ ಬೊಬ್ಬಿರಿದಾಗ ಸಚಿನ್ “PLEASE SETTLE DOWN, I AM GETTING MORE AND MORE EMOTIONS” ಎ೦ದು ಅಳುವಾಗ ಕೊನೆಯಲ್ಲಿ “YOUR VOICES SACHIN….. SACHIN….. EVER VIBRATES IN MY EARS TILL MY LAST BREATH” ಎ೦ದು ಹೇಳುವಾಗ ಇವೆಲ್ಲವನ್ನೂ ಬರೆಯಬೇಕೆನಿಸಿತು. ಡಿಜಿಟಲ್ ಪರದೆಯ ಮೇಲೆ ಬರುತ್ತಿತ್ತು…… LEGENDS NEVER RETIRE.