ಅಂಕಣ

ಭಾರತ ಸೋತಿತ್ತು, ಕೊಹ್ಲಿಯ ಆಟ ಗೆದ್ದಿತ್ತು.

2009ರ ಮಾತು. ಕ್ರಿಕೆಟ್ ಕಾಶಿ ಈಡನ್ ಗಾರ್ಡನ್’ನಲ್ಲಿ ಭಾರತ-ಶ್ರೀಲಂಕಾ ಮಧ್ಯೆ ಮಹತ್ವದ ಹಣಾಹಣಿ ನಡೆಯುತ್ತಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ಭಾರತದ ಜಯಕ್ಕೆ 316 ರನ್ನುಗಳ ಗುರಿ ನೀಡಿತ್ತು. ಈಡನ್ ಗಾರ್ಡನ್’ನಂತಹಾ ಈಡನ್ ಗಾರ್ಡನ್’ನಲ್ಲಿ 250 ರನ್ನು ಬೆನ್ನು ಹತ್ತುವುದೇ ಸುಲಭದ ಮಾತಲ್ಲ, ಇನ್ನು 316 ಎಂದರೆ ಕೇಳಬೇಕೆ? ಸಹಜವಾಗಿಯೇ ಭಾರತದ ಮೇಲೆ ಒತ್ತಡವಿತ್ತು. ಸಚಿನ್, ಸೆಹವಾಗ್ ಮುಂತಾದ ಘಟಾನುಗಳಿದ್ದರೂ ಒಳಗೊಳಗೇ ಭಯವಿತ್ತು.  23 ರನ್ನಿಗೇ ಸೆಹವಾಗ್ ಮತ್ತು ಸಚಿನ್ ವಿಕೆಟ್ ಪತನವಾಗುವುದರೊಂದಿಗೆ ಇಡೀ ಸ್ಟೇಡಿಯಮ್ ಭಣಗುಡಲು ಶುರು ಮಾಡಿತ್ತು. 316 ಇನ್ನು ಅಸಾಧ್ಯದ ಮಾತು ಎನ್ನುವುದು ಎಲ್ಲರ ಆ ಕ್ಷಣದ ಮಾತಾಗಿತ್ತು.

ಗೌತಮ್ ಗಂಭೀರ್ ಪ್ರಬುದ್ಧವಾದ ಆಟವಾಡುತ್ತಿದ್ದ ಕಾಲ ಅದು. ಒಂದು ಕಡೆಯಲ್ಲಿ ಆತ, ಮತ್ತೊಂದು ಕಡೆಯಲ್ಲಿ ಎಳಸು ವಿರಾಟ. ದೆಹಲಿಯ ಈ ಲೆಫ್ಟ್ ರೈಟ್ ಕಾಂಬಿನೇಶನ್ ನಿಧಾನವಾಗಿ ಇನ್ನಿಂಗ್ಸ್ ಕಟ್ತುತ್ತಾ ಹೋಯ್ತು. ಗಂಭೀರ್ ಲಂಕಾ ಬೌಲರುಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಹಿಗ್ಗಾಮುಗ್ಗ ಭಾರಿಸಿದರೆ ಅನನುಭವಿ ವಿರಾಟ್ ತಾಳ್ಮೆಯ ಆಟವಾಡಿದ್ದ. ಗಂಭೀರ್ ನೂರಾ ಐವತ್ತು ಹೊಡೆದರೆ, ವಿರಾಟ್ ನೂರಾ ಏಳು ಹೊಡೆದು ಮಹತ್ವದ ಪಂದ್ಯವೊಂದರಲ್ಲಿ ಚೊಚ್ಚಲ ಶತಕ ಭಾರಿಸಿದ್ದ. ಇವರಿಬ್ಬರ ಅದ್ಭುತ ಜೊತೆಯಾಟದಿಂದ ಭಾರತ ಮೊದಲೆಷ್ಟು ವಿಕೆಟ್’ಗಳನ್ನು ಕಳೆದುಕೊಂಡಿತ್ತೋ ಅಷ್ಟೇ ವಿಕೆಟುಗಳ ನಷ್ಟಕ್ಕೆ ಗುರಿ ತಲುಪಿತ್ತು. ಗಂಭೀರ್ ಹೊಡೆದ ನೂರಾ ಐವತ್ತು ಎಷ್ಟು ಗಮನ ಸೆಳೆಯಿತೋ ಅಷ್ಟೇ ವಿರಾಟನ ಸೊಗಸಾದ  ನೂರೂ ಸಹ ಗಮನ ಸೆಳೆಯಿತು.  ಎಷ್ಟೆಂದರೆ,  ವಿರಾಟನ ಆಟಕ್ಕೆ ಮನ ಸೋತ ಗಂಭೀರ್ ತನಗೆ ಸಿಕ್ಕಿದ್ದ ಪಂದ್ಯ ಪುರುಷ ಪ್ರಶಸ್ತಿಯನ್ನು ವಿರಾಟನ ಜೊತೆಗೆ ಹಂಚಿಕೊಂಡು ಬಿಟ್ಟ.

ಮಹತ್ವದ ಪಂದ್ಯದಲ್ಲೇ ಚೊಚ್ಚಲ ಶತಕ ಭಾರಿಸಿ ಗಮನ ಸೆಳೆದ ವಿರಾಟ್ ಕೊಹ್ಲಿ ಎಂಬ ಚೇಸಿಂಗ್ ಪ್ರಚಂಡನ ಪರಿಚಯ ನಮಗಾಗಿದ್ದೇ ಆವಾಗ. ಅಂಡರ್-19 ವಿಶ್ವಕಪ್ ಜಯಿಸಿದಾಗಲೇ ಸುದ್ದಿಯಾದ ಈ ದಿಲ್ಲಿಯ ಆರೋಗ್ಯಾಂಟ್ ಹುಡುಗನ ಬಗ್ಗೆ ಜಾಸ್ತಿ ಹೈಪ್ ಕ್ರಿಯೇಟ್ ಆಗಿದ್ದೇ ಆವಾಗ. ಆ ಮೂಲಕ ತಾನು ಮುಂದಿನ ದಿನಗಳಲ್ಲಿ ಭಾರತದ ಬ್ಯಾಟಿಂಗ್’ನ ಆಧಾರ ಸ್ಥಂಭವಾಗುತ್ತೇನೆ ಎನ್ನುವ ಸುಳಿವೊಂದನ್ನು ನೀಡಿದ್ದ ಕೊಹ್ಲಿ.    ತಂಡ ಸೇರಿಕೊಳ್ಳುವಾಗಲೇ ಅತೀವ ಭರವಸೆಯನ್ನು ಗಳಿಸಿಕೊಂಡ ವಿರಾಟ್ ಇಂದಿಗೂ ಆ ಭರವಸೆಯನ್ನು ಉಳಿಸಿಕೊಂಡಿದ್ದಾನೆ. ಒಂದರ ಮೇಲೊಂದು ಮ್ಯಾಚ್ ವಿನ್ನಿಂಗ್ ಪರ್ಫಾರ್ಮೆನ್ಸ್ ನೀಡುತ್ತಾ ಭಾರತದ ಮಧ್ಯಮ ಕ್ರಮಾಂಕದ ಆಧಾರ ಸ್ಥಂಭವಾಗಿದ್ದಾನೆ.

ಕೊಹ್ಲಿಯಂತಹಾ ಮ್ಯಾಚ್ ವಿನ್ನಿಂಗ್ ಆಟಗಾರನನ್ನು ನಾವಿದೇ ಮೊದಲ ಬಾರಿಗಲ್ಲ ನೋಡುತ್ತಿರುವುದು. ಒಂದು ಕಾಲದಲ್ಲಿ ಕಪಿಲ್ ದೇವ್, ಸುನಿಲ್ ಗಾವಸ್ಕರ್ ಕೂಡಾ ಇಂತಹ ಆಟವಾಡುತ್ತಿದ್ದರು. ಸೋತೇ ಬಿಟ್ಟೆವು ಎಂದು ಇನ್ನಿಂಗ್ಸಿಗೂ  ಮೊದಲೇ  ಡಿಸೈಡ್ ಆಗಿದ್ದ ಪಂದ್ಯವನ್ನು ವೀರೇಂದ್ರ ಸೆಹವಾಗ್ ತನ್ನ ಸಿಡಿಲಬ್ಬರದ ಬ್ಯಾಂಟಿಂಗ್’ನಿಂದ ಗೆಲ್ಲಿಸಿ ಕೊಟ್ಟಿದ್ದುಂಟು. ಸಂದರ್ಭಕ್ಕೆ ತಕ್ಕ ತಾಳ್ಮೆಯ ಮತ್ತು ಅಬ್ಬರದ ಬ್ಯಾಂಟಿಂಗ್ ಮಾಡಿ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟ ದ್ರಾವಿಡ್’ರನ್ನು ನಾವು ಮರೆಯುವುದುಂಟೇ? ಫಾಲೋ ಆನ್ ಹೇರಲ್ಪಟ್ಟ ಪಂದ್ಯವನ್ನು ದಾಖಲೆಯ ಆಟವಾಡಿ ಜಯಗಳಿಸಿ ಕೊಟ್ಟ ಲಕ್ಷಣ್ ನಮ್ಮ ಮನಸ್ಸಿನಿಂದ ಮಾಸಿ ಹೋದಾರೆ? ರನ್ ಪರ್ವತ ಮತ್ತು ಸಜ್ಜನ  ನಡವಳಿಕೆಯಿಂದಾಗಿ ನಮಗೊಂದು ಹೆಸರು, ಗೌರವ ತಂದುಕೊಟ್ಟ ಭಾರತ ರತ್ನನ ಆಟ ನಮಗೆಂದೆಂದಿಗೂ ಚಿರಸ್ಮರಣೀಯವೇ. ಆದರೆ ಇವರೆಲ್ಲರೂ ಕೊಹ್ಲಿಯಷ್ಟು ಕನ್ಸಿಸ್ಟೆನ್ಸಿ ತೋರಿರಲಿಲ್ಲ ಎನ್ನುವುದು ಗಮನಾರ್ಹವಾದ ಅಂಶ. ಟೆಸ್ಟ್ ಇರಲಿ, ಟಿ-ಟ್ವೆಂಟಿ ಇರಲಿ, ಪಂದ್ಯದ ವಾತಾವರಣಕ್ಕೆ ಅನುಗುಣವಾಗಿ ಆಟವಾಡುವ ಕಲೆಯನ್ನು ವಿರಾಟ್ ಸಿದ್ಧಿಸಿಕೊಂಡಿದ್ದಾನೆ. ಎಂತದ್ದೇ ಒತ್ತಡವಾದರು, ವಿಕೆಟಗಳೆಷ್ಟೇ ಉರುಳಿದರೂ, ಅದನ್ನು ಸಮರ್ಥವಾಗಿ ನಿಭಾಯಿಸುವುದರಲ್ಲಿ ಪರಿ ಪಕ್ವವಾಗಿದ್ದಾನೆ.  ಅತಿಶಯೋಕ್ತಿ ಎಂದರೂ ಪರವಾಗಿಲ್ಲ, ಟಿ-ಟ್ವೆಂಟಿಯಲ್ಲಿ ಕ್ರೀಸ್ ಗೈಲ್, ಎಬಿಡಿ ಮುಂತಾದ ಎಷ್ಟೇ ಅತ್ಯತ್ತಮ ಬ್ಯಾಟ್ಸ್’ಮೆನ್’ಗಳಿರಬಹುದು, ಧೋನಿ ಕ್ರಿಕೇಟ್ ಜಗತ್ತಿನ ಬೆಸ್ಟ್ ಫಿನಿಶರ್ ಆಗಿರಬಹುದು, ಆದರೆ ಸದ್ಯದ ಮಟ್ಟಿಗೆ ಬೆಸ್ಟ್ ಮ್ಯಾಚ್ ವಿನ್ನರ್ ಯಾರಾದ್ರೂ ಇದ್ದರೆ ಅದು ವಿರಾಟ್ ಕೊಹ್ಲಿ ಮಾತ್ರ.

ತನ್ನ ಆಟದ ವೈಖರಿಯಿಂದಾಗಿ “ತೆಂಡುಲ್ಕರ್ ದಾಖಲೆಯನ್ನು ಮುರಿಯುವುದಾದರೆ ಅದು ಇವ ಮಾತ್ರ” ಎಂದು ಕರೆಸಿಕೊಂಡವ ವಿರಾಟ್ ಕೊಹ್ಲಿ ಮಾತ್ರ. ಆ ದಾಖಲೆಗಳ ಮಹಾ ಪರ್ವತದ ಬಳಿ ಸುಳಿಯುವುದು ಬಿಡಿ, ಹಾಗೆ ಕರೆಸಿಕೊಳ್ಳಲೂ ಜಗತ್ತಿನ ಇತರ ಯಾವ ಬ್ಯಾಟ್ಸ್’ಮನ್’ಗಳಿಗೂ ಸಾಧ್ಯವಾಗಿಲ್ಲ. ಅಂತಾದ್ದರಲ್ಲಿ ಕೊಹ್ಲಿಗೆ ಅದು ಸಾಧ್ಯವಾಗಿದೆ ಅಂತಂದ್ರೆ ಆತನ ರನ್ ಮೆಷಿನ್ ಹೇಗೆ ಓಡುತ್ತಿದೆ ಅಂತ ನೀವೇ ಊಹಿಸಿ. ಅಲ್ಲದಿದ್ದರೂ ಹೌದು, ಕ್ರಿಕೆಟಿನ ಹದಿ ಹರೆಯದ ವಯಸ್ಸಿಗೇ ಇಲ್ಲ ಸಲ್ಲದ ದಾಖಲೆಗಳನ್ನು ಬರೆಯುತ್ತಿರುವ ಕೊಹ್ಲಿ ಇನ್ನೊಂದು ಹತ್ತು ವರ್ಷ ಉತ್ತಮ ಫಿಟ್’ನೆಸ್ ಕಾಯ್ದುಕೊಂಡರೆ ತೆಂಡುಲ್ಕರ್ ದಾಖಲೆಗಳನ್ನು ಪುಡಿಗಟ್ಟುವುದರಲ್ಲಿ ಅನುಮಾನವೇ ಇಲ್ಲ.

ಆಟದ ಹೊರತಾಗಿ ನೋಡಿದರೆ, ಕೊಹ್ಲಿ ಮತ್ತೊಂದು ಕಾರಣಕ್ಕೆ ಇಷ್ಟವಾಗುತ್ತಾನೆ. ಆಟ್ಟಿಟ್ಯುಡ್..! ಬಹುಷಃ ಟೀಂ ಇಂಡಿಯಾದಲ್ಲಿ ಅವನಷ್ಟು ಆಟ್ಟಿಟ್ಯೂಡ್ ಇರವ ಆಟಗಾರ ಮತ್ತೊಬ್ಬನಿಲ್ಲ. ಆಸ್ಟ್ರೇಲಿಯಾದಲ್ಲಿ ಕೀಟಲೆ ಮಾಡಿದ ಅಭಿಮಾನಿಗಳಿಗೆ ಮಿಡಲ್ ಫಿಂಗರ್ ತೋರಿಸುವ ಮೂಲಕ ಐಸಿಸಿಯಿಂದ ಛೀಮಾರಿಗೊಳಗಾಗಿದ್ದ ಕೊಹ್ಲಿ ಆ ಬಳಿಕವೂ ತನ್ನ ಆಕ್ರಮಣಕಾರಿ ಬುದ್ದಿ ಬಿಡಲಿಲ್ಲ. ಸ್ಲೆಡ್ಜಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯನ್ನರಿಗೆ ಬ್ಯಾಟಿಂಗ್’ನ ಮೂಲಕವೇ ಉತ್ತರೆ ಕೊಟ್ಟ( ಸ್ಲೆಡ್ಜಿಂಗ್ ಮಾಡಿದ ಫಾಕ್’ನರ್’ಗೆ I have smashed you enough time in my life ಎಂದು ಹೇಳಿ ಆತನಿಗೆ ಹಿಗ್ಗಾಮುಗ್ಗ ಭಾರಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು). ಮಾಧ್ಯಮದವರು ಏನು ಗಾಸಿಪ್ ಮಾಡಬಹುದೋ ಎಂಬುದಕ್ಕೆ ಹೆದರದೆ, ಇಷ್ಟ ಪಟ್ಟ ಹುಡುಗಿಯನ್ನು ಏರ್’ಪೋರ್ಟ್’ನಿಂದ ಓಪನ್ನಾಗಿ ಕೈ ಹಿಡಿದುಕೊಂಡು ಬರುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ. ಮೈದಾನದಲ್ಲಿ ಶತಕ ಸಿಡಿಸಿದಾಗ ಆಕೆಗೆ ಫ್ಲೈಯಿಂಗ್ ಕಿಸ್ಸ್ ಕೊಡುವುದಕ್ಕೂ ಹಿಂಜರಿಯಲಿಲ್ಲ.ಬ್ರೇಕಪ್ ಆದ ಬಳಿಕವೂ ಆಕೆಯ ಮೇಲೆ ಅಭಿಮಾನಿಗಳು ವಿನಾಕಾರಣ ಮುಗಿ ಬಿದ್ದಾಗ “ಶೇಮ್ ಆನ್ ಯೂ” ಎಂದು ಟ್ವೀಟಿಸುವ ಮೂಲಕ ತಾನೊಬ್ಬ “ಪರ್ಫೆಕ್ಟ್ ಮ್ಯಾನ್” ಎಂದು ಸಾಬೀತುಪಡಿಸಿದ  ಮತ್ತು  ಬ್ರೇಕಪ್ ಆದ ಮಾತ್ರಕ್ಕೆ ಹೀನಾಮಾನವಾಗಿ ಅವಹೇಳನ ಮಾಡುವ ಫೇಕ್ ಪ್ರೇಮ ಪಕ್ಷಿಗಳಿಗೆ ಮಾದರಿಯಾದ.

ಸದ್ಯಕ್ಕಂತೂ ಕೊಹ್ಲಿ ಉತ್ತಮ ಆಟವಾಡುತ್ತಿದ್ದಾನೆ. ಕನ್ಸಿಸ್ಟೆನ್ಸಿ ಕಾಯ್ದುಕೊಳ್ಳುವ ಮೂಲಕ ಬ್ಯಾಟಿಂಗ್’ನ ಪ್ರಚಂಡ ಫಾರ್ಮ್’ನಲ್ಲಿದ್ದಾನೆ ಕೊಹ್ಲಿ. ಮೊನ್ನೆಯ ಟಿ-ಟ್ವೆಂಟಿ ವಿಶ್ವಕಪ್ಪನ್ನೇ ಗಮನಿಸಿ. ಭಾರತದ ಅಭಿಯಾನ ಸೆಮಿಫೈನಲ್’ವರೆಗೆ ಸಾಗಿತ್ತೆಂದರೆ ಅದಕ್ಕೆಹೆಚ್ಚು ಕಮ್ಮಿ  ವಿರಾಟ್  ಒಬ್ಬನೇ ಕಾರಣ. ವಿರಾಟ್ ಮೂರು ಅರ್ಧ ಶತಕಗಳನ್ನು ಭಾರಿಸಿದ್ದರೆ ಉಳಿದವರಿಗೆ ಒಂದೂ ಕೂಡಾ ಸಾಧ್ಯವಾಗಿರಲಿಲ್ಲ. ಭಾರತ ಗೆದ್ದಿದ್ದ ಅಷ್ಟೂ ಪಂದ್ಯಗಳಲ್ಲಿ ಆತನೊಬ್ಬನ ಯೋಗದಾನ ಮಹತ್ವಾದ್ದಾಗಿತ್ತು.  ದುರಾದೃಷ್ಟವಶಾತ್ ಸೆಮಿಫೈನಲ್’ನಲ್ಲಿ ಭಾರತ ಸೋತಿತ್ತು, ಆದರೆ ಟೂರ್ನಿಯುದ್ದಕೂ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿಯ ಆಟ ಗೆದ್ದಿತ್ತು.

ಕೊಹ್ಲಿ ಮತ್ತೊಬ್ಬ “ಗಾಡ್ ಆಫ್ ಕ್ರಿಕೆಟ್” ಎನ್ನುತ್ತಾ ಆತನನ್ನು ಉತ್ಸವ ಮೂರ್ತಿ ಮಾಡಿ ಮೆರವಣಿಗೆ ಮಾಡಲಾರೆ. ಗೆದ್ದಾಗ ಮೆರವಣಿಗೆ ಮಾಡಿ ಸೋತಾಗ ಕಲ್ಲು ಹೊಡೆಯುವ ಮನಸ್ಥಿತಿಯೂ ನನ್ನದಲ್ಲ.  ಕೊಹ್ಲಿ ಎಂಬ ವಿರಾಟ್ ಪ್ರತಿಭೆಯ ಆಟಗಾರನಿಂದ   ಇನ್ನೂ ಹೆಚ್ಚಿನ ಮ್ಯಾಚ್ ವಿನ್ನಿಂಗ್ ಪರ್ಫಾರ್ಮೆನ್ಸ್ ಬರಲಿ ಎನ್ನುವುದಷ್ಟೇ ನನ್ನ ಆಶಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!