ಆಗತಾನೆ ಬ್ಲಡ್’ಟೆಸ್ಟ್ ಮುಗಿಸಿ ಖುರ್ಚಿಯಲ್ಲಿ ಕುಳಿತು ನನ್ನ ಸರದಿಗಾಗಿ ಕಾಯುತ್ತಿದ್ದೆ. ೪ನೇ ಕೀಮೋಗಾಗಿ ಆಸ್ಪತ್ರೆಗೆ ಬಂದಿದ್ದ ನಾನು, ಅಡ್ಮಿಷನ್ ಆಗಿ ವೀಲ್ಚೇರ್ ಬರುವವರೆಗೂ ಅಲ್ಲೇ ಕಾಯಬೇಕಿತ್ತು. ಸುತ್ತಲೂ ಕಣ್ಣಾಡಿಸುತ್ತಾ ಉಳಿದ ಪೇಷೆಂಟ್’ಗಳನ್ನು ನೋಡುತ್ತಿದ್ದವಳಿಗೆ ಕಣ್ಣಿಗೆಬಿದ್ದದ್ದು ಸುಮಾರು ೩-೪ ವರ್ಷದ ಸುಂದರವಾದ ಪುಟ್ಟಮಗು. ತನ್ನ ತಾಯಿಯ ಮಡಿಲಲ್ಲಿದ್ದ ಮಗುವಿನ ಒಂದು ಕಾಲಿಗೆ ಬ್ಯಾಂಡೇಜ್ ಹಾಕಲಾಗಿತ್ತು. ನನಗೆ ಆಘಾತವಾಗಿದ್ದ ವಿಷಯ ಆ ಮಗು ಆಂಕಾಲಜಿ ವಿಭಾಗದಲ್ಲಿದ್ದುದು!!
ಸುಮಾರು ೩ ಕೀಮೋ ತೆಗೆದುಕೊಂಡ ನನಗೆ ಅದಾಗಲೇ ಕೀಮೋವಿನ ತೀವ್ರತೆ ಅರ್ಥವಾಗಿತ್ತು. ಆದರೆ ಆ ಮುಗ್ಧ ಮಗು ಯಾವುದರ ಪರಿವೆ ಇಲ್ಲದೆ ಆರಾಮಾಗಿ ಇದ್ದದ್ದನ್ನು ನೋಡಿದಾಗ ಕಣ್ಣಂಚಲ್ಲಿ ನೀರು ಬಂದಿತ್ತು. ಕೀಮೋವಿನ ತೀವ್ರತೆಯನ್ನು ಆ ಪುಟ್ಟ ಮಗು ಹೇಗೆ ತಡೆದುಕೊಂಡೀತು ಎಂದು ನೆನೆಸಿಕೊಂಡೇ ಜೀವ ನಡುಗಿತ್ತು.
ನಾನು ಮಣಿಪಾಲಿನ ಆರ್-೪ ವಾರ್ಡಿನಲ್ಲಿದ್ದಾಗ, ನನ್ನ ಪಕ್ಕದ ಬೆಡ್’ನಲ್ಲಿ ಸುಮಾರು ೫-೬ ವರ್ಷದ ಮಗು ಇತ್ತು. ಆ ಮಗುವಿನ ಮೆದುಳಲ್ಲಿ ಟ್ಯೂಮರ್ ಆಗಿತ್ತು. ಆದರೆ ಆ ಮಗು ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ತನ್ನ ಪಾಡಿಗೆ ತಾನು ಆಟ ಆಡಿಕೊಂಡು ಕಾಲಕಳೆಯುತ್ತಿತ್ತು. ತಾನು ಚಾಕಲೇಟ್ ತಿನ್ನುತ್ತಾ ಪಕ್ಕದಲ್ಲಿದ್ದವರ ಬಳಿ ಹೋಗಿ “ನಿಮಗೆ ಬೇಕಾ?” ಎಂದು ಕೇಳುತ್ತಾ, ನಗು ನಗುತ್ತಾ ಓಡಾಡಿಕೊಂಡಿತ್ತು. ಆ ಮಗುವಿನ ತಾಯಿ, “ನನ್ನ ಮಗಳು ಕೀಮೋ ಅನ್ನು ಹೇಗೆ ತಡೆದುಕೊಳ್ಳಬಹುದು?! ನಾವು ಯಾವುದಾದರೂ ಆಯುರ್ವೇದಿಕ್ ಅಥವಾ ಬೇರೆಯ ಯಾವುದಾದ್ರೂ ಚಿಕಿತ್ಸೆ ಕೊಡಿಸ್ತೀವಿ. ಮಗಳಿಗೆ ಹೆಚ್ಚು ನೋವಾಗದಿದ್ದರೆ ಸಾಕು” ಎನ್ನುತ್ತಿದ್ದರು. ನಿಜವೇ, ಆ ಪುಟ್ಟ ಹುಡುಗಿಗೆ ಕೀಮೋ ಅನ್ನು ತಡೆದುಕೊಳ್ಳುವುದು ಸುಲಭ ಆಗಿರಲಿಲ್ಲ. ಆ ತಾಯಿಯ ಆತಂಕವೂ ಸಹಜವೇ ಆಗಿತ್ತು. ಜೊತೆಗೆ ಅವರ ನಿರ್ಧಾರ ಕೂಡ ಸರಳವಾಗಿ ಇರಲು ಸಾಧ್ಯವಾಗಿರಲಿಕ್ಕಿಲ್ಲ. ಎಷ್ಟೋ ಗೊಂದಲಗಳ, ಕಳವಳಗಳ ನಂತರವೇ ಅಂತಹ ಒಂದು ನಿರ್ಧಾರ ಬಂದಿರಬಹುದು?!
ಆ ಹುಡುಗಿಯನ್ನು ನೋಡಿದಾಗಲೆಲ್ಲಾ, ನಾನು ಅಷ್ಟೇ ಸಣ್ಣಕ್ಕಿದ್ದಿದ್ದರೆ ಎಂದೆನಿಸುತ್ತಿತ್ತು. ಕೊನೆಪಕ್ಷ ಸಾವು ಅಂದರೇನು ಅಂತ ಗೊತ್ತಿರುತ್ತಿರಲಿಲ್ಲ, ಬದುಕು ಹೇಗಿರುವುದೋ ಎಂಬ ಕಳವಳ ಇರುತ್ತಿರಲಿಲ್ಲ, ನಮ್ಮ ಪ್ರೀತಿಪಾತ್ರರನ್ನು ಅಗಲಿ ಹೋಗುವ ಭಯವೂ ಇರುತ್ತಿರಲಿಲ್ಲ. ತನಗೇನಾಗುತ್ತಿದೆ, ಕ್ಯಾನ್ಸರ್ ಅಂದರೇನು, ಮುಂದೇನಾಗಬಹುದು ಎಂಬ ಪ್ರಶ್ನೆಗಳೂ ಇರುತ್ತಿರಲಿಲ್ಲ. ದೇಹಕ್ಕೆ ನೋವಾದಾಗ ಜೋರಾಗಿ ಅತ್ತು ಸುಮ್ಮನಾಗಬಹುದಿತ್ತು. ಅಪ್ಪ ಅಮ್ಮ ದುಃಖದಲ್ಲಿದ್ದಾರಾ ಎಂಬ ಯಾವ ಪರಿವಿಲ್ಲದೆ ಒಂದಿಷ್ಟು ಹಠ ಮಾಡಬಹುದಿತ್ತು. ಚಾಕಲೇಟ್ ಸಿಕ್ಕಿದಾಕ್ಷಣ ಎಲ್ಲ ನೋವು ಮರೆತು, ಅದರಲ್ಲೇ ಜಗತ್ತಿನ ಪರಮಾನಂದ ಪಡೆಯಬಹುದಿತ್ತು. ಆದರೆ ಏನ್ ಮಾಡೋದು ಬೇಡ ಅಂದರೂ ದೊಡ್ಡವರಾಗಿಯೇ ಬಿಡುತ್ತೇವೆ.!!!
ಇತ್ತೀಚೆಗೆ ಮಾರಿಯಾ ಎಂಬ ಹುಡುಗಿಯ ಬಗ್ಗೆ ತಿಳಿದುಬಂತು. ಮಾರಿಯಾ ಕೂಡ ಆಸ್ಟಿಯೋ ಸರ್ಕೋಮಾ ಸರ್ವೈವರ್. ಮಾರಿಯಾ ಹಾಗೂ ಆಕೆಯ ತಾಯಿ ಲಾರ್ರಿ ಅವರಿಬ್ಬರ ಸಾಧನೆ ನಿಜಕ್ಕೂ ಶ್ಲಾಘನೀಯ. ಕ್ಯಾನ್ಸರ್’ನ ನಂತರ ಮಗಳ ಬದುಕನ್ನು ಸಾಮಾನ್ಯ ಸ್ಥಿತಿಗೆ ತರಲು ತಾಯಿ ಲಾರ್ರಿ ಮಾಡಿದ ಪ್ರಯತ್ನಗಳೂ ಕೂಡ ನಿಜಕ್ಕೂ ಅದ್ಭುತವಾದದ್ದು.
ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಉಂಟಾದ ವೈಮನಸ್ಸಿನ ನಂತರ ಗಂಡನಿಂದ ವಿಚ್ಛೇದನ ಪಡೆದ ಲಾರ್ರಿಗೆ ಮಕ್ಕಳನ್ನ ಪಡೆಯುವ ಹಂಬಲ ಕಡಿಮೆಯಾಗಿರಲಿಲ್ಲ. ಚೀನಾಗೆ ಬಂದಿದ್ದ ಲಾರ್ರಿ ಅಲ್ಲಿನ ಒಂದು ಅನಾಥಾಶ್ರಮದಿಂದ ಹೆಣ್ಣುಮಗುವೊಂದನ್ನು ದತ್ತು ಪಡೆದು ತನ್ನೂರಿಗೆ ಹಿಂದಿರುಗಿದಳು. ಸುಮಾರು ೧೧ ತಿಂಗಳ ನಂತರ ಕೋರ್ಟ್’ನಲ್ಲಿ ಅಧಿಕೃತವಾಗಿ ಅವಳನ್ನು ದತ್ತು ಪಡೆಯಲಾಯಿತು. ಆದರೆ ದುರಾದೃಷ್ಟವೆಂಬಂತೆ, ಅದೇ ದಿನ ಮಾರಿಯಾಳ ಎಡಗಾಲಿನಲ್ಲಿ ಕೆಲ ಸಮಯದ ಹಿಂದಿನಿಂದ ಉಂಟಾಗಿದ್ದ ಬಾವು, ಟ್ಯೂಮರ್ ಎಂದು ತಿಳಿದುಬಂತು. ಆಗಿನ್ನೂ ಮಾರಿಯಾ ಕೇವಲ ೨ ವರ್ಷದ ಪುಟ್ಟ ಹುಡುಗಿ!!
ಆಸ್ಟಿಯೋ ಸರ್ಕೋಮಾಗೆ ಒಳಗಾಗಿದ್ದ ಮಾರಿಯಾಗೆ ಕೀಮೋ ಅನಿವಾರ್ಯವೇ ಆಗಿತ್ತು. ಆದರೆ ಡಾಕ್ಟರ್ ಹೇಳಿದ್ದು, ಅಕೆಯ ಎಡಗಾಲನ್ನು ಕತ್ತರಿಸಬೇಕು ಎಂದು! ಆಗಿನ್ನೂ ೨ ವರ್ಷದ ಹುಡುಗಿ ಆಕೆ. ಆಕೆ ಹೆಜ್ಜೆ ಇಡಲಾರಂಭಿಸಿ ಬಹುಶಃ ವರ್ಷವಾಗಿತ್ತೇನೋ ಅಷ್ಟೇ!! ಲಾರ್ರಿಗೆ ಕೂಡ ಇದು ದೊಡ್ಡ ಆಘಾತವೇ ಆಗಿತ್ತು. ಮಕ್ಕಳಿಗಾಗಿ ವರ್ಷಗಳವರೆಗೆ ಹಂಬಲಿಸಿ ಕೊನೆಗೆ ಮಗುವನ್ನು ದತ್ತು ಪಡೆದು, ಇನ್ನು ತನ್ನ ಬದುಕಲ್ಲಿ ಸಂತೋಷವೇ ಇರುತ್ತದೆ ಎಂದು ಭಾವಿಸಿದ್ದವಳಿಗೆ, ಈ ಸುದ್ದಿ ನುಂಗಲಾರದ ತುತ್ತಾಗಿತ್ತು.!
ಕೀಮೋ ಹಾಗೂ ಸರ್ಜರಿಯ ನಂತರ ಮಾರಿಯಗೆ ಕೃತಕ ಕಾಲನ್ನು ಅಳವಡಿಸಲಾಗಿದೆ. ಸದ್ಯ, ಆಕೆ ತನ್ನ ಐದನೇ ಕೃತಕ ಕಾಲನ್ನು ಬಳಸುತ್ತಿದ್ದಾಳೆ. ಅಂದರೆ ಐದು ಬಾರಿ ಅದನ್ನು ಬದಲಾಯಿಸಲಾಗಿದೆ. ದೊಡ್ಡವಳಾದಂತೆಲ್ಲಾ ಇನ್ನೂ ಹೆಚ್ಚು ಬದಲಾಯಿಸಬೇಕಾಗುತ್ತದೆ.
ಮಾರಿಯಳ ಶಾಲಾ ಬದುಕು ಮೊದಲು ಸುಲಭವಾಗಿರಲಿಲ್ಲ. ಇತರ ಮಕ್ಕಳು ಮಾರಿಯಾಳನ್ನು, ‘ಈಕೆ ತಮಗಿಂತ ಭಿನ್ನ’ ಎಂದು ನೋಡಲಾರಂಭಿಸಿದಾಗ, ಮಾರಿಯಾಳೊಂದಿಗೆ ನಿಂತಿದ್ದು ಆಕೆಯ ತಾಯಿ ಲಾರ್ರಿ. ಮಾರಿಯಾಗೆ ಧೈರ್ಯ ಹೇಳಿ ಸುಮ್ಮನಾಗಲಿಲ್ಲ ಆಕೆ. ಬದಲಾಗಿ ಆಕೆ ಶಾಲೆಗೆ ಬಂದು ಇತರ ಮಕ್ಕಳನ್ನೆಲ್ಲಾ ಕೂರಿಸಿಕೊಂಡು ಸೆಮಿನಾರ್ ನೀಡಿದ್ದಳು. ಬ್ಲ್ಯಾಕ್’ಬೋರ್ಡ್ ಮೇಲೆ ಚಿತ್ರಗಳನ್ನು ಬಿಡಿಸಿ, ಕ್ಯಾನ್ಸರ್ ಸೆಲ್ ಎಂದರೇನು? ಟ್ಯೂಮರ್ ಹೇಗಾಗಿತ್ತು, ಮಾರಿಯಾಳ ಕಾಲನ್ನು ಏಕೆ ತೆಗೆಯಲಾಯಿತು ಅಂತೆಲ್ಲಾ ವಿವರಿಸಿದ್ದಳು. “ಟ್ಯೂಮರ್ ಹೋಗಬೇಕೆಂದರೆ ಕಾಲನ್ನು ತೆಗೆಯಲೇಬೇಕಿತ್ತು” ಎಂದು ವಿವರಿಸಿದ್ದಳು. ನಂತರ ಮಾರಿಯಾ ತನ್ನ ಕೃತಕ ಕಾಲನ್ನು ತೆಗೆದು ತೋರಿಸಿದ್ದಳು. ಮಾರಿಯಾ ತಮಗಿಂತ ಭಿನ್ನ ಅಲ್ಲ ಎಂಬ ಭಾವವನ್ನ ಆ ಇತರ ಮಕ್ಕಳಲ್ಲಿ ಮೂಡಿಸಿದ್ದಳು.
ಎಷ್ಟೋ ಸರ್ಜರಿಗಳ ನಂತರವೂ ಮಾರಿಯಾ ತನ್ನ ಶಾಲಾ ಚಟುವಟಿಕೆಗಳಲ್ಲಿ ಹಿಂದುಳಿದಿಲ್ಲ. ಬೈಕ್ ರೈಡಿಂಗ್, ಜಿಮ್ನಾಸ್ಟಿಕ್, ವಾಲ್ ಕ್ಲೈಂಬಿಂಗ್’ನಲ್ಲಿ ಆಕೆ ಯಾವಾಗಲೂ ಮುಂದೆ. ಮಾರಿಯಾ ‘ನಾನೂ ನಿಮ್ಮಂತೆಯೇ.. ನೀವು ಮಾಡಬಲ್ಲಿರಿ ಎಂದರೆ ನಾನೂ ಕೂಡ” ಎಂಬ ಮನೋಭಾವ ಹೊಂದಿದವಳು.
ಈಗ ಸುಮಾರು ೧೦-೧೨ ವರ್ಷಗಳೇ ಕಳೆದಿದೆ. ಮಾರಿಯಾ ತನ್ನ ಜೀವನಸ್ಪೂರ್ತಿಯೊಂದಿಗೆ ಮುಂದೆ ಸಾಗುತ್ತಲೇ ಇದ್ದಾಳೆ. ಆಕೆಯ ತಾಯಿ ಹೇಳುವಂತೆ ಮಾರಿಯಾ ದೊಡ್ಡವಳಾದಂತೆಲ್ಲಾ ಇನ್ನೂ ಅನೇಕ ಸವಾಲುಗಳು ಬರಬಹುದು. ಆದರೆ ಕ್ಯಾನ್ಸರಿಗೆ ಹೋಲಿಸಿದರೆ, ಅದರ ಮುಂದೆ ಉಳಿದ ಸವಾಲುಗಳು ನಗಣ್ಯ!
ನಿಜವೇ! ಕ್ಯಾನ್ಸರಿನ ನಂತರ ನಾವು ಬರುವ ಎಲ್ಲ ಸಮಸ್ಯೆಗಳನ್ನು ಅದರೊಂದಿಗೆ ತುಲನೆ ಮಾಡುತ್ತೇವೆ. ಅದಕ್ಕೆ ಹೋಲಿಸಿ ನೋಡಿದಾಗ ಸಮಸ್ಯೆಗಳು, ಸಮಸ್ಯೆಗಳೆಂದೇ ಎನಿಸುವುದಿಲ್ಲ. ಅದರ ಜೊತೆಗೆ ಅವರುಗಳು ನಮಗಿಂತ ಭಿನ್ನ ಅಲ್ಲ, ನಮ್ಮಂತೆಯೇ ಎಂದು ತಿಳಿದುಕೊಂಡು ಅವರೊಂದಿಗೆ ಒಡನಾಡಿದರೆ ಸ್ವಲ್ಪ ಮಟ್ಟಿಗಾದರೂ ಅವರ ಬದುಕನ್ನ ಸರಳಗೊಳಿಸಬಹುದು. ಮಾರಿಯಾಳ ಬದುಕು ಎಲ್ಲರಿಗೂ ಮಾದರಿಯಾಗಲಿ, ಆಕೆಯ ಬದುಕು ಸುಗಮವಾಗಲಿ ಎಂಬುದೇ ನನ್ನ ಆಶಯ.