ಶಕುಂತಲಾ ದೇವಿಯವರು ನಿಧನರಾದಾಗ ಬರೆದ ನುಡಿನಮನ
ಬಸವನಗುಡಿಯ ನನ್ನ ಮನೆಗೆ ಕೂಗಳತೆ ಎನ್ನುವಷ್ಟು ದೂರದಲ್ಲಿ ಅಪಾರ್ಟ್’ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದ ಶಕುಂತಲಾ ದೇವಿ, 2013ರ ಎಪ್ರೀಲ್ 21ರಂದು ಭಾನುವಾರ ಸಂಜೆ, ಈ ಲೋಕದ ಎಲ್ಲ ಲೆಕ್ಕ ಚುಕ್ತಾ ಮಾಡಿ ಹೊರಟೇಹೋದರು. ಅವರು ಬದುಕಿದ್ದಾಗ ನಾನು ಎಂದೂ ಅವರನ್ನು ಭೇಟಿಯಾಗಲು, ಮಾತುಕತೆಯಾಡಲು ಪ್ರಯತ್ನಿಸಲಿಲ್ಲವಲ್ಲ ಎಂದು ಖೇದವಾಯಿತು. ನಾನು ಶಾಲೆ ಕಲಿಯುವಾಗ ಶಕುಂತಲಾ ದೇವಿ – ಒಂದು ಪವಾಡ, ಗಣಿತದ ಚಮತ್ಕಾರ, ನೂರಾರು ಅಂಕೆಗಳ ಸಂಖ್ಯೆಗಳನ್ನು ಮನಸ್ಸಿನಲ್ಲೇ ಗುಣಿಸಿ, ಭಾಗಿಸಿ, ಮೂಲಗಳನ್ನು ಕಂಡುಹಿಡಿದು ಎದುರು ಕೂತ ಕಂಪ್ಯೂಟರುಗಳನ್ನೇ ಮಂಕಾಗಿಸುತ್ತಿದ್ದ ಚತುರೆ ಎಂದೆಲ್ಲ ಕೇಳಿದ್ದೆ. ಆರನೇ ವಯಸ್ಸಿನಲ್ಲೇ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಶೋ ಕೊಟ್ಟು ಗಣಿತದ ದೊಡ್ಡ ಹೆಸರಿನ ಪ್ರೊಫೆಸರುಗಳೆಲ್ಲ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರಂತೆ. ಹದಿನೈದನೆ ವಯಸ್ಸಿಗೆ ಲಂಡನ್ನಿನ ದೊಡ್ಡ ಗಣಿತಜ್ಞರೂ ಬೆಕ್ಕಸಬೆರಗಾಗುವಂತೆ ಕೂಡುಕಳೆ ಲೆಕ್ಕಗಳನ್ನು ಮಾಡಿತೋರಿಸಿದರಂತೆ. 201 ಅಂಕೆಗಳ ಒಂದು ಬೃಹತ್ ಸಂಖ್ಯೆಯ 23ನೇ ಮೂಲ ಯಾವುದು ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಲು ಕಂಪ್ಯೂಟರು 62 ಸೆಕೆಂಡುಗಳನ್ನು ತೆಗೆದುಕೊಂಡರೆ, ಶಕುಂತಲಾ ಕೇವಲ 49 ಸೆಕೆಂಡುಗಳಲ್ಲಿ ಉತ್ತರ ಮುಂದಿಟ್ಟರಂತೆ. ಇಂತಹ ಅನೇಕ ವಿಚಿತ್ರ ಆದರೂ ಸತ್ಯ ಅನ್ನಿಸುವ ಕತೆಗಳು ಪ್ರಭಾವಳಿ ಅನ್ನುವ ರೀತಿಯಲ್ಲಿ ಅವರ ಸುತ್ತ ಚಲಾವಣೆಯಲ್ಲಿದ್ದವು.
ಶಕುಂತಲಾ ದೇವಿ ಒಂದು ದಂತಕತೆಯಾಗಿ ಹೋಗಿದ್ದರು. ಒಬ್ಬ ಮನುಷ್ಯನಿಂದ ಇಷ್ಟೆಲ್ಲ ಸಾಧನೆ ಸಾಧ್ಯವಾ ಎಂದು ನಾನು, ಹೈಸ್ಕೂಲಿನ ವಿದ್ಯಾರ್ಥಿ, ಕಣ್ಕಣ್ಣು ಬಿಡುತ್ತ ಯೋಚಿಸುತ್ತಿದ್ದೆ. ಅವರ ಹಾಗೆಯೇ ಆಗಬೇಕು ಅಂತ ಯೋಚಿಸಿಯೂ ಇದ್ದೆ ಅಂತ ಕಾಣುತ್ತದೆ!
ಅದಾಗಿ ಹಲವಾರು ವರ್ಷಗಳಾದ ಮೇಲೆ, ನಾನು ಗಣಿತ ಪದವೀಧರನಾಗಿ ಬಸವನಗುಡಿಗೆ ಬಂದು ಉದ್ಯೋಗಕ್ಕೆ ಸೇರಿಕೊಂಡಮೇಲೆ ಒಂದು ದಿನ ಗಾಂಧೀ ಬಜಾರಿನಲ್ಲಿ ಗೆಳೆಯರ ಜೊತೆ ವಾಕ್ ಹೋಗುತ್ತಿದ್ದಾಗ, ನಮ್ಮ ಮಾತುಕತೆಯಲ್ಲಿ ಶಕುಂತಲಾ ದೇವಿಯವರ ಪ್ರಸ್ತಾಪ ಬಂತು. ಅವರ ಆಫೀಸು ಇಲ್ಲೇ ಇರೋದು ಅಂತ ಒಬ್ಬ ಹೇಳಿದಾಗ ನನಗೆ ನಿಜಕ್ಕೂ ರೋಮಾಂಚನವಾಯಿತು. ಹೌದಾ! ಹಾಗಾದರೆ ಈಗಲೇ ಅಲ್ಲಿಗೆ ಹೋಗಿ ಅವರನ್ನು ಕಣ್ಣಾರೆ ನೋಡ್ಕೊಂಡು ಬರೋಣ ಎಂದೆ. ಆಗ ಗೆಳೆಯನೊಬ್ಬ, ಬೇಡ ಕಣೋ. ಅವರು ಹಾಗೆಲ್ಲ ಹಾದೀಲಿ ಹೋಗಿಬರೋರಿಗೆ ಮುಖ ತೋರಿಸೋದಿಲ್ಲ. ದೊಡ್ಡದೊಡ್ಡ ವ್ಯಕ್ತಿಗಳಿಗೆ ಮಾತ್ರ ಅಪಾಯಿಂಟ್ಮೆಂಟ್ ಕೊಡೋದು. ಹಾಗೆ ಅವರ ಬಳಿ ಮುಂಗಡವಾಗಿ ಬುಕ್ಕಿಂಗ್ ಮಾಡಿದವರು ಕೂಡ ಭೇಟಿಗಾಗಿ ವಾರಗಟ್ಟಲೆ ಕಾಯಬೇಕು. ಶಕುಂತಲಾ ದೇವಿಯವರ ಶುಲ್ಕವೂ ತುಂಬಾ ಹೆಚ್ಚು. ಎರಡು ದಿನ ಇಲ್ಲಿದ್ದರೆ ಇನ್ನೆರಡು ದಿನ ನ್ಯೂಯಾರ್ಕ್ ಅನ್ನುವಹಾಗೆ ಇಡೀ ಜಗತ್ತನ್ನೆಲ್ಲ ಎಡೆಬಿಡದೆ ಸುತ್ತುವವರು ಅವರು. ಹೋದಲ್ಲೆಲ್ಲ ಪಂಚತಾರಾ ಹೋಟೇಲುಗಳಲ್ಲೇ ಉಳಿಯುತ್ತಾರೆ, ವಿಐಪಿಗಳಿಗೆ ಮಾತ್ರವೇ ದರ್ಶನ ಕೊಡುತ್ತಾರೆ. ಜ್ಯೋತಿಷ್ಯ ಹೇಳುತ್ತಾರೆ, ನ್ಯುಮರಾಲಜಿ ಕೂಡ ಮಾಡ್ತಾರಂತೆ. ಹುಟ್ಟಿದ ದಿನ ಹೇಳಿದರೆ ಸಾಕು, ಹಿಂದಿನ ಮುಂದಿನ ಜನ್ಮಗಳ ಕತೆಯೆಲ್ಲ ಜಾಲಾಡಿ ನಮ್ಮ ಮುಂದೆ ಇಡ್ತಾರಂತೆ ಎಂದೆಲ್ಲ ಹೇಳಿದ. ನಂಬಲಿಕ್ಕೇ ಆಗಲಿಲ್ಲ! ಆದರೆ, ಮುಂದೆ ಅವರ ಜ್ಯೋತಿಷ್ಯದ ಪ್ರಚಾರ ಪತ್ರಗಳು, ಜಾಹೀರಾತುಗಳನ್ನು ಆಗಾಗ ಪತ್ರಿಕೆಗಳಲ್ಲಿ ನೋಡತೊಡಗಿದ ಮೇಲೆ ಗೆಳೆಯನ ಮಾತು ಸತ್ಯ ಇರಬಹುದು ಎನ್ನಿಸಿತು.
ಶಕುಂತಲಾ ದೇವಿಯವರದ್ದು ಸಂಪ್ರದಾಯಸ್ಥ ಬ್ರಾಹ್ಮಣ ಮನೆತನ. ತಂದೆ ಸುಂದರರಾಜ ರಾಯರಿಗೆ, ಆ ಕಾಲಕ್ಕೆ ತಕ್ಕ ಹಾಗೆ, ಒಟ್ಟು ಎಂಟು ಜನ ಮಕ್ಕಳು. ಇಬ್ಬರು ಗಂಡು, ಆರು ಜನ ಹೆಣ್ಣು. ಈ ಎಲ್ಲರಿಗೆ ಹಿರಿಯಕ್ಕ – ಶಕುಂತಲ. ತಂದೆ ಸಂಪಾದಿಸಿ ತರುತ್ತಿದ್ದ ಪುಡಿಗಾಸಿನಲ್ಲೇ ಇಡೀ ಕುಟುಂಬದ ದಿನ ಸಾಗಬೇಕು ಎನ್ನುವ ಪರಿಸ್ಥಿತಿ. ಜನಿವಾರ ಹಾಕಿ ಪಟ್ಟೆ ಪೀತಾಂಬರ ಉಟ್ಟು ದೇವರ ಪೂಜೆ ಮಾಡುವುದಕ್ಕೆ ಬಿಲ್ಕುಲ್ ಒಪ್ಪದ ಸುಂದರ ರಾಜರು, ಬ್ರಾಹ್ಮಣ್ಯವನ್ನೇ ಧಿಕ್ಕರಿಸಿ ಹೊರಬಂದು ಸರ್ಕಸ್ ಕಲಾವಿದರಾದರಂತೆ! ಇಸ್ಪೀಟು, ಗೋಲಿ ಹಿಡಿದುಕೊಂಡು ಸಣ್ಣಪುಟ್ಟ ಕಣ್ಕಟ್ಟು ಜಾದೂ ಮಾಡುತ್ತ ಹೊಟ್ಟೆ ಹೊರೆಯುತ್ತಿದ್ದ ಅವರನ್ನು ಶಾಲಾಮಕ್ಕಳು ಬೆಳ್ಳಿಕೋಲು ತಾತ ಎಂದೇ ಕರೆಯುತ್ತಿದ್ದವಂತೆ. ತಾನು ಜಾದೂ ತೋರಿಸಲು ಹೋದ ಶಾಲೆಗಳಲ್ಲಿ, ಅವರು ಮಕ್ಕಳಿಗೆ ಸಣ್ಣಪುಟ್ಟ ಗಣಿತದ ಸರಳ ಲೆಕ್ಕಗಳನ್ನು ಮಾಡಿತೋರಿಸುತ್ತಿದ್ದರು. ಸರಳವಾಗಿ ಗುಣಿಸುವುದು, ಕೂಡುವುದು ಹೇಗೆ ಎಂದೆಲ್ಲ ತನ್ನ ತಿಳಿವಿನ ನೆಲೆಯಲ್ಲಿ ಪಾಠ ಮಾಡಿ, ಮಕ್ಕಳ ಹುಬ್ಬು ಮೇಲೇರುವಂತೆ ಮಾಡುತ್ತಿದ್ದರು. ತಂದೆಯ ಜೊತೆ ಹೆಲ್ಪರ್ ಆಗಿ ಹೀಗೆ ಶಾಲೆಗಳನ್ನು ಸುತ್ತುತ್ತಿದ್ದ ಪುಟ್ಟ ಹುಡುಗಿ ಶಕುಂತಲೆಗೆ ಅದುವೆ ಗಣಿತದ ಮತ್ತು ಜೀವನದ ಮೊದಲ ಪಾಠ.
ಶಕುಂತಲಾ ದೇವಿಯವರ ಬಾಲ್ಯದ ವಿವರಗಳು ಅಸ್ಪಷ್ಟ, ಗೋಜಲುಗೋಜಲು. ತಮ್ಮ ಗಣಿತ ಪ್ರದರ್ಶನ ಮತ್ತು ಜ್ಯೋತಿಷ್ಯವನ್ನು ಬಿಟ್ಟು ಬೇರೇನನ್ನೂ ಯಾರೊಂದಿಗೂ ಚರ್ಚಿಸಲು ನಿರಾಕರಿಸುತ್ತಿದ್ದ ಅವರ ಅಂತರ್ಮುಖಿ ವ್ಯಕ್ತಿತ್ವದಿಂದಾಗಿ, ಜಗತ್ತಿಗೆ ಅವರ ವೈಯಕ್ತಿಕ ಬದುಕಿನ ವಿವರಗಳು ಸಿಕ್ಕಿರುವುದು ಅಷ್ಟಕ್ಕಷ್ಟೆ. ಶಾಲೆಯಲ್ಲಿ ಎರಡು ರೂಪಾಯಿ ಫೀಸು ಕೊಡಲಾಗದೆ ಅರ್ಧದಲ್ಲೇ ಶಾಲೆ ಬಿಟ್ಟರು ಎಂದು ಹೇಳುವವರು ಒಂದೆಡೆ, ಚಾಮರಾಜಪೇಟೆಯ ಸೈಂಟ್ ಥೆರಸಾ ಕಾನ್ವೆಂಟಿನಲ್ಲಿ ಹತ್ತನೇ ತರಗತಿ ತನಕ ಓದಿದರು ಎಂದು ಹೇಳುವವರು ಒಂದೆಡೆ. ಹೇಗೇ ಇದ್ದರೂ, ಶಕುಂತಲಾ ಅವರಿಗೆ ಸಾಂಪ್ರದಾಯಿಕ ಶಿಕ್ಷಣದ ಭಾಗ್ಯ ಇರಲಿಲ್ಲ ಎನ್ನುವುದು ಸ್ಪಷ್ಟ. ಕಾಲೇಜು ಮೆಟ್ಟಿಲು ಹತ್ತಲು ಅವರಿಗೆ ಸಾಧ್ಯವಾಗಲಿಲ್ಲ.
ಶಕುಂತಲಾ ದೇವಿಯವರ ಸ್ಮರಣಶಕ್ತಿ ಅಸಾಧಾರಣವಾಗಿತ್ತು. ಮೂರು ವರ್ಷದ ಎಳವೆಯಲ್ಲೇ ಅವರು ತಂದೆ ಮಾಡುತ್ತಿದ್ದ ಒಂದು ಕಾರ್ಡ್ ಟ್ರಿಕ್ಕನ್ನು ಅರ್ಥ ಮಾಡಿಕೊಂಡು ತಾನೂ ಮಾಡಿತೋರಿಸಿದರಂತೆ! ಈ ಅದ್ಭುತ ಸಾಮರ್ಥ್ಯವನ್ನು ಎಳವೆಯಲ್ಲೇ ಗುರುತಿಸಿದ ತಂದೆ, ಮಗಳನ್ನು ಪ್ರದರ್ಶನದ ಗೊಂಬೆಯಂತೆ ಅಲ್ಲಿ-ಇಲ್ಲಿ ಕರೆದುಕೊಂಡುಹೋಗಿ ಮ್ಯಾಜಿಕ್ ಮಾಡಿಸಿ, ದೊಡ್ಡ ದೊಡ್ಡ ಸಂಖ್ಯೆಗಳ ಕೂಡುಕಳೆ ಲೆಕ್ಕಾಚಾರಗಳನ್ನು ಮಾಡಿಸಿ ಕಾಸು ಸಂಪಾದಿಸಿದರು. ಆ ಕಾಲದ ಅವರ ಬಡತನದ ಹರಕುಗಳನ್ನು ಮುಚ್ಚಲು ಈ ಪ್ರದರ್ಶನ, ಮ್ಯಾಜಿಕ್ಕುಗಳು ಅನಿವಾರ್ಯವೂ ಆಗಿದ್ದವು. ಮಗಳು ಶಕುಂತಲೆಗೂ ಪ್ರೇಕ್ಷಕ ವೃಂದದಿಂದ ಸಿಕ್ಕಿದ ಪ್ರೋತ್ಸಾಹ, ಚಪ್ಪಾಳೆ -ಅದೇ ದಾರಿಯಲ್ಲಿ ಮುಂದುವರಿಯಲು ಪ್ರೇರಣೆಯಾಗಿರಬಹುದು. ಒಟ್ಟಾರೆ ಅವರ ಬಾಲ್ಯ – ಈ ಸಂಕಷ್ಟ ಮತ್ತು ಅಪಾರಬುದ್ಧಿಮತ್ತೆಗಳ ಅನೂಹ್ಯ ಬೆಸುಗೆಯಾಗಿತ್ತು.
ಶಕುಂತಲಾ ದೇವಿಯವರು ಗಣಿತದಲ್ಲಿ ಏನಾದರೂ ಸಾಧಿಸಿದ್ದರೇ ಎಂದು ಹುಡುಕ ಹೊರಟ ನನಗೆ ಅಂತಹ ಅಚ್ಚರಿಯೆನಿಸುವ ಫಲಿತಾಂಶವೇನೂ ದೊರೆಯಲಿಲ್ಲ. ಕಾಲೇಜು ಮಟ್ಟದ ಶಿಕ್ಷಣವನ್ನು ಸಾಂಪ್ರದಾಯಿಕವಾಗಿಯೋ ಸ್ವಾಧ್ಯಾಯದಿಂದಲೋ ದಕ್ಕಿಸಿಕೊಂಡು ಮುಂದುವರಿದಿದ್ದರೆ ಇನ್ನೊಂದು ರಾಮಾನುಜನ್ ಆಗಬಹುದಾಗಿದ್ದ ಶಕುಂತಲಾ, ಅಂತಹ ಅವಕಾಶವನ್ನು ತಾನಾಗಿಯೇ ಅಥವಾ ವಿಧಿವಿಲಾಸಕ್ಕೆ ತಲೆಕೊಟ್ಟು ತಪ್ಪಿಸಿಕೊಂಡರು ಎಂದು ನನಗನ್ನಿಸುತ್ತದೆ. ಅವರ ಜೀವನದ ಚೈತನ್ಯವೆಲ್ಲವೂ ದೊಡ್ಡದೊಡ್ಡ ಸಂಖ್ಯೆಗಳನ್ನು ಮನಸ್ಸಿನಲ್ಲೇ ಗುಣಿಸುವುದರಲ್ಲಿ, ಘನಮೂಲ ಚತುರ್ಥಮೂಲಗಳನ್ನು ತೆಗೆಯುವುದರಲ್ಲಿ – ಇತ್ಯಾದಿಯಲ್ಲೇ ಸೋರಿಹೋಯಿತು. ನನ್ನಂತೆ ಸಂಖ್ಯೆಗಳನ್ನು ಪ್ರೀತಿಸಿದರೆ, ಅವುಗಳ ಜೊತೆಗೆ ದಿನಕ್ಕಾರು ತಾಸು ಒಡನಾಡಿಕೊಂಡಿದ್ದರೆ ಯಾರಿಗಾದರೂ ಈ ಬುದ್ಧಿಮತ್ತೆ ಬೆಳೆಸಿಕೊಳ್ಳುವುದು ಸಾಧ್ಯ ಎಂದು ಆಕೆ ಹೇಳುತ್ತಿದ್ದರು. ಸಂಖ್ಯೆಗಳನ್ನು ಅದೆಷ್ಟು ಉತ್ಕಟವಾಗಿ ಪ್ರೀತಿಸುತ್ತಿದ್ದರೆಂದರೆ, ಅವುಗಳ ನಡುವೆ ಲಕ್ಷ ಕೋಟಿಗಳನ್ನು ಬೇರ್ಪಡಿಸಲು ಬಳಸುವ “ಕಾಮ”ಗಳಂಥ ಚಿಹ್ನೆಗಳನ್ನು ಕೂಡ ಅವರು ಸಹಿಸುತ್ತಿರಲಿಲ್ಲ! ಆದರೆ ಈ ಸಂಖ್ಯಾಪ್ರೀತಿಯಿಂದ ಮುಂದಿನ ಹಂತಕ್ಕೆ ಹೋಗಲು ಆಕೆ ಬಯಸಲಿಲ್ಲ. ಆರರ ಎಳವೆಯಲ್ಲಿ ತಾನು ತೋರಿಸಿದ ಪ್ರಖರವಾದ ಬುದ್ಧಿಮತ್ತೆಯನ್ನೇ ಮತ್ತೆಮತ್ತೆ ಪ್ರದರ್ಶಿಸುತ್ತ, ಜೀವನಪರ್ಯಂತ ದೇಶದೇಶಗಳನ್ನು ಸುತ್ತಿ ಹೊಸ ಪ್ರೇಕ್ಷಕರನ್ನು ಸಂಪಾದಿಸಿಕೊಂಡು ಚಪ್ಪಾಳೆ ಗಿಟ್ಟಿಸುತ್ತ ಕಳೆದ ಶಕುಂತಲಾ ದೇವಿ – ಅದಕ್ಕಿಂತ ಹೊರತಾದದ್ದನ್ನು ಸೃಜಿಸಲು, ಗಣಿತ ಲೋಕದಲ್ಲಿ ಹೊಸ ತಾರೆಗಳನ್ನು ಮುಟ್ಟಲು ಆಸೆಪಡಲಿಲ್ಲ.
ಶಕುಂತಲಾ ದೇವಿ ಒಮ್ಮೆ ತನ್ನ ಬುದ್ಧಿಮತ್ತೆಯ ಪ್ರದರ್ಶನ ಕಾರ್ಯಕ್ರಮ ನೀಡುತ್ತಿದ್ದರು. ಹೆಚ್ಚಾಗಿ ಅಂಥ ಕಾರ್ಯಕ್ರಮಗಳ ಸ್ವರೂಪ ಒಂದೇ ರೀತಿ ಇರುತ್ತಿತ್ತು. ಮೊದಲಿಗೆ ಶಕುಂತಲಾ ಅವರಿಂದ ಕೆಲವೊಂದು ಲೆಕ್ಕಗಳ ಚಮತ್ಕಾರ ಪ್ರದರ್ಶನ, ನಂತರ ಪ್ರಶ್ನೋತ್ತರ. ಇದರಲ್ಲಿ ಪ್ರೇಕ್ಷಕ ವರ್ಗದವರು ಕೇಳಿದ ಪ್ರಶ್ನೆಗಳಿಗೆ ಶಕುಂತಲಾ ಚಕಚಕನೆ ಉತ್ತರ ಹೇಳಿ ಗರಬಡಿಸುತ್ತಿದ್ದರು. ಪ್ರಶ್ನೆ ಕೇಳುವವರು ಉತ್ತರವನ್ನು ಮೊದಲೇ ಸಿದ್ಧಪಡಿಸಿಟ್ಟುಕೊಂಡಿರುತ್ತಿದ್ದರು
ಅವರು ನಿಧನರಾದ ಮರುದಿನ ಕನ್ನಡದ (ಮಾತ್ರವಲ್ಲ, ಇಂಗ್ಲೀಷಿನ) ಎಲ್ಲ ಪತ್ರಿಕೆಗಳು ಅವರ ಜೀವನದ ಒಂದು ಸಂಕ್ಷಿಪ್ತ ವಿವರಣೆ ಕೊಟ್ಟವು. ಹೆಚ್ಚುಕಡಿಮೆ ಈ ಎಲ್ಲಾ ವಿವರಣೆಗಳು ಒಂದೇ ರೀತಿಯಿದ್ದವು. ಶಕುಂತಲಾ ದೇವಿ – ಮಾನವ ಗಣಕ, ಸೂಪರ್ ಕಂಪ್ಯೂಟರ್ ಎಂದೆಲ್ಲ ಹೇಳುವುದರಲ್ಲೆ ಈ ವಿವರಗಳು ಮುಗಿದಿದ್ದವು. ಯಾರೂ ಅವರು ಬರೆದ ಪಜಲ್ ಪುಸ್ತಕಗಳ ಬಗ್ಗೆ ನಾಲ್ಕು ಸಾಲು ಬರೆಯುವ ಶ್ರಮ ತೆಗೆದುಕೊಳ್ಳಲಿಲ್ಲ. ಶಕುಂತಲಾ ದೇವಿ, ಜಾಣ್ಮೆ ಲೆಕ್ಕ ಎಂದು ಹೇಳಬಹುದಾದ (ಇಂಗ್ಲಿಷಿನಲ್ಲಿ ಪಝಲ್ಸ್ ಎಂದು ನಾವು ಕರೆಯುವ) ಗಣಿತದ ಒಂದು ವಿಶಿಷ್ಟವಾದ ಉಪವಿಭಾಗದ ಮೇಲೆ ಏಳು ಮೌಲಿಕವಾದ ಕಿರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪದವಿ ಪಡೆದು ಹೊರಬರುವ ಇಂಜಿನಿಯರುಗಳನ್ನು ತಂತ್ರಜ್ಞಾನ ಆಧಾರಿತ ಕಂಪೆನಿಗಳು ಕೆಲಸಕ್ಕೆ ಸೇರಿಸಿಕೊಳ್ಳುವ ಮೊದಲು ಕೆಲವು ಪಝಲ್’ಗಳನ್ನು ಕೇಳಿ ಬುದ್ಧಿಮತ್ತೆಯನ್ನು ಪರೀಕ್ಷಿಸುವುದು ಕ್ರಮ. ಯಾಕೆಂದರೆ, ಈ ಪಜಲ್ಗಳನ್ನು ಬಿಡಿಸಲು ದೊಡ್ಡ ಸೂತ್ರಗಳಾಗಲೀ ಪ್ರಮೇಯಗಳಾಗಲೀ ಬೇಕಾಗಿಲ್ಲ. ಆದರೆ, ಸ್ವಾಭಾವಿಕವಾದ ಗಣಿತಾಸಕ್ತಿ, ವಿಭಿನ್ನವಾಗಿ ಆಲೋಚಿಸುವ ಪ್ರತಿಭೆ ಇರಬೇಕಾಗುತ್ತದೆ. ಶಕುಂತಲಾ ದೇವಿ ಮೂಲತಃ ತಾನು ಹಾಗೆ ಇದ್ದದ್ದರಿಂದ, ಅವರಿಗೆ ಸಹಜವಾಗಿಯೇ ಇಂತಹ ಪುಸ್ತಕಗಳನ್ನು ಬರೆಯಲು ಪ್ರೇರಣೆ ಸಿಕ್ಕಿರಬಹುದು. ಈ ಪುಸ್ತಕಗಳಲ್ಲಿ ಎಷ್ಟೋ ಸಲ ಉತ್ತರಗಳನ್ನು ಕೊಡುವಾಗ, ಅವರು ಉತ್ತರಕ್ಕೆ ಪುಷ್ಟಿ ನೀಡುವ ಯಾವ ವಿವರಣೆಯನ್ನೂ ಕೊಡುತ್ತಿರಲಿಲ್ಲ! ಓದುಗನಿಗೆ, ಅರರೆ! ಈ ಉತ್ತರ ಹೇಗೆ ಬಂತು! ಎಂದು ಕುತೂಹಲ ಹುಟ್ಟಿದರೆ, ಅವನು ಬೇರೆ ಮೂಲಗಳಿಂದ ಹೆಚ್ಚಿನ ವಿವರಣೆ, ಉತ್ತರ ಪಡೆಯಬೇಕಾಗುತ್ತದೆ. ತಮಗೆ ಈಗಾಗಲೇ ತಿಳಿದಿರುವ, ತಮ್ಮ ಯೋಚನಾಕ್ರಮಕ್ಕೆ ತುಂಬ ‘ಸಿಲ್ಲಿ’ ಎನ್ನಿಸುವ ಗಣಿತದ ಉತ್ತರಗಳನ್ನು ಬೇರೆಯವರಿಗೆ ಕೂತು ವಿವರಿಸುವ ತಾಳ್ಮೆ ರಾಮಾನುಜನ್ನರಲ್ಲಿಯೂ ಇರಲಿಲ್ಲ ಎನ್ನುವುದನ್ನು ನಾವು ಗಮನಿಸಬೇಕು.
ಶಕುಂತಲಾರ ಕೆಲವೊಂದು ಪಝಲ್’ಗಳನ್ನು ಕುತೂಹಲಕ್ಕಾಗಿ ಕೊಟ್ಟಿದ್ದೇನೆ:
(1) ನಾಲ್ಕು ಜನ ಸೋದರರ ಸರಾಸರಿ ಎತ್ತರ 74 ಅಂಗುಲ. ಮೊದಲ ಮೂವರ ಎತ್ತರಗಳಲ್ಲಿರುವ ವ್ಯತ್ಯಾಸ 2 ಅಂಗುಲ. ಮೂರನೆಯವನಿಗೂ ನಾಲ್ಕನೆಯವನಿಗೂ ಇರುವ ಎತ್ತರದ ವ್ಯತ್ಯಾಸ 6 ಅಂಗುಲ. ಹಾಗಾದರೆ ಅವರೆಲ್ಲರ ಎತ್ತರಗಳೆಷ್ಟು?
(2) ಒಂದು ಕುಟುಂಬದಲ್ಲಿ ಹಲವು ಸೋದರ ಸೋದರಿಯರಿದ್ದಾರೆ. ಪ್ರತಿ ಹುಡುಗನಿಗೂ ಸೋದರರೆಷ್ಟಿದ್ದಾರೋ ಅಷ್ಟೇ ಸೋದರಿಯರಿದ್ದಾರೆ. ಪ್ರತಿ ಹುಡುಗಿಗೆ ಎಷ್ಟು ಸೋದರಿಯರಿದ್ದಾರೋ ಅದರ ಎರಡು ಪಟ್ಟು ಸೋದರರಿದ್ದಾರೆ. ಹಾಗಾದರೆ ಅಲ್ಲಿರುವ ಸೋದರ ಸೋದರಿಯರ ಸಂಖ್ಯೆ ಎಷ್ಟು?
(3) ಈ ನಾಲ್ಕು ಸಂಖ್ಯೆಗಳನ್ನು ನೋಡಿ: 9, 81, 324, 576. ಈ ನಾಲ್ಕು ಸಂಖ್ಯೆಗಳಲ್ಲಿ 1ರಿಂದ 9ರವರೆಗಿನ ಎಲ್ಲ ಅಂಕೆಗಳೂ ಬಂದಿವೆ ಮತ್ತು ಈ ನಾಲ್ಕೂ ಸಂಖ್ಯೆಗಳು ವರ್ಗ ಸಂಖ್ಯೆಗಳು! ಈಗ 1ರಿಂದ 9ವರೆಗಿನ ಎಲ್ಲ ಅಂಕೆಗಳನ್ನು ಒಂದೊಂದೇ ಬಾರಿ ಬಳಸಿ, 9 ಅಂಕೆಗಳ ಅತ್ಯಂತ ಚಿಕ್ಕ ವರ್ಗ ಸಂಖ್ಯೆ ಬರೆಯುವುದಕ್ಕೆ ಸಾಧ್ಯವಾ? ಹಾಗೆಯೇ ಅತಿ ದೊಡ್ಡ ವರ್ಗ ಸಂಖ್ಯೆ ಯಾವುದು?
(4) ನೀವು ನನ್ನ ಬಳಿ ನೌಕರಿಗಾಗಿ ಬಂದಿದ್ದೀರಿ ಅಂತಿಟ್ಟುಕೊಳ್ಳೋಣ. ನಾನು ಎರಡು ಆಯ್ಕೆಗಳನ್ನು ಕೊಡುತ್ತೇನೆ. ಒಂದೋ ನೀವು ತಿಂಗಳಿಗೆ 10 ಕೋಟಿ ರುಪಾಯಿ ಸಂಬಳ ಪಡೆಯುತ್ತೀರಿ. ಇಲ್ಲವೇ ಮೊದಲ ದಿನ 1 ರುಪಾಯಿ, ಎರಡನೇ ದಿನ 2 ರುಪಾಯಿ, 3ನೇ ದಿನ 4 ರುಪಾಯಿ, 4ನೇ ದಿನ 8 ರುಪಾಯಿ, ಹೀಗೆ ಪ್ರತಿದಿನ ಹಿಂದಿನ ದಿನದ ಸಂಬಳದ ದುಪ್ಪಟ್ಟು ಪಡೆಯುತ್ತಾ ಹೋಗುತ್ತೀರಿ. ಈ ಎರಡರಲ್ಲಿ ನಿಮ್ಮ ಆಯ್ಕೆ ಯಾವುದು?
ಜಾಣ್ಮೆ ಲೆಕ್ಕಗಳ ಪ್ರಪಂಚದಲ್ಲಿ ಮಾರ್ಟಿನ್ ಗಾರ್ಡಿನರ್ ಮಾಡಿದಷ್ಟೇ ಸಾಧನೆಯನ್ನು ಈ ಕನ್ನಡತಿ ಕೂಡ ಮಾಡಿದ್ದಾರೆಂದು ನಿಸ್ಸಂಶಯವಾಗಿ ಹೇಳಬಹುದು. ಗಣಿತದ ವಿಸ್ಮಯ ಲೋಕಕ್ಕೆ ಪ್ರವೇಶ ಪಡೆಯಲು ಕಾತರಿಸುವ ಜಾಣ ಹುಡುಗರಿಗೆ ಈ ಪುಸ್ತಿಕೆಗಳು ಒಂದು ಒಳ್ಳೆಯ ಪರಿಚಯ ಸಾಮಗ್ರಿ ಆಗಬಹುದು. ಇದಿಷ್ಟೇ ಅಲ್ಲದೆ, ವಿಚಿತ್ರ ಅನ್ನುವಂತೆ ಶಕುಂತಲಾ, ಹೋಮೋಸೆಕ್ಶುವಲ್ (ಸಲಿಂಗಿ)ಗಳ ಬಗ್ಗೆ 1977ರಷ್ಟು ಹಿಂದೆಯೇ ಒಂದು ಪುಸ್ತಕ ಕೂಡ ಬರೆದಿದ್ದಾರೆ! ಇದರ ಹಿನ್ನೆಲೆ ಕುತೂಹಲಕರವಾಗಿದೆ. ಶಕುಂತಲಾ ಮದುವೆಯಾದ ಮೇಲೆ ಅವರಿಗೆ ತನ್ನ ಪತಿ ಗೇ ಎಂದು ತಿಳಿಯಿತಂತೆ. ಆಗ ಆದ ಆಘಾತದಿಂದ ಸಲಿಂಗಿಗಳ ಕುಲದ ಮೇಲೇಯೇ ದ್ವೇಷ ಬೆಳೆಸಿಕೊಳ್ಳಬಹುದಾಗಿದ್ದ ಶಕುಂತಲಾ ದೇವಿ, ಹಾಗೆ ಮಾಡದೆ, ಇವರು ಯಾರು – ಯಾಕೆ ಈ ರೀತಿ ಆದರು ಎನ್ನುವುದನ್ನು ಅಧ್ಯಯನ ಮಾಡಲು ತೊಡಗಿದರು. ತನ್ನ ಅಧ್ಯಯನಕ್ಕೆ ಶ್ರೀರಂಗಂನ ದೇವಸ್ಥಾನದ ಅರ್ಚಕರಿಂದ ಹಿಡಿದು ಕೆನಡದ ಸಲಿಂಗಿ ದಂಪತಿಗಳವರೆಗೆ ನೂರಾರು ಜನರನ್ನು ಮಾತಾಡಿಸಿ ಅಭಿಪ್ರಾಯ ಸಂಗ್ರಹಿಸಿದರು. ಅದರ ಫಲಶ್ರುತಿಯೇ ಅವರ ಈ ಪುಸ್ತಕ! ಸಲಿಂಗಿಗಳ ಭಿನ್ನತೆಯನ್ನು ಒಪ್ಪಿಕೊಂಡು ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಇತರರಂತೆಯೇ ಬಾಳಗೊಡಬೇಕು ಎಂಬ, ಆ ಕಾಲಕ್ಕೆ ಕ್ರಾಂತಿಕಾರಕವೆನ್ನಿಸುವ ಸಾಲುಗಳು ಈ ಪುಸ್ತಕದಲ್ಲಿ ಇವೆ!
ಶಕುಂತಲಾ ದೇವಿ ತನ್ನ ಗಣಿತ ಪಝಲ್ ಪುಸ್ತಕಗಳಲ್ಲದೆ ಬರೆದ ಇನ್ನೊಂದು ವಿಚಿತ್ರ ಪುಸ್ತಕವೆಂದರೆ ಗಂಡಸರಿಗಾಗಿ ಸಸ್ಯಾಹಾರದ ಅಡುಗೆ ಪುಸ್ತಕ! ಇದರ ಹಿನ್ನೆಲೆ ಕತೆಯೂ ಸ್ವಾರಸ್ಯವಾಗಿದೆ. 1988ರಲ್ಲಿ ರೈನ್ಮ್ಯಾನ್ ಎಂಬ ಹಾಲಿವುಡ್ ಚಿತ್ರ ಬಂತು. ಮರುವರ್ಷ ಇದು ಅತ್ಯುತ್ತಮ ಚಿತ್ರ ಪ್ರಶಸ್ತಿಯೂ ಸೇರಿದಂತೆ ಒಟ್ಟು ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಅಸಾಧಾರಣ ಬುದ್ಧಿಮತ್ತೆಯ, ಆದರೆ ಹೊರಜಗತ್ತಿಗೆ ಅತ್ಯಂತ ಅಸ್ವಾಭಾವಿಕ ಅರೆಹುಚ್ಚನಂತಿದ್ದ ಕಿಮ್ ಪೀಕ್ ಎಂಬ ವ್ಯಕ್ತಿಯ ಜೀವನವನ್ನು ಆಧರಿಸಿ ತೆಗೆದ ಸಿನೆಮಾ ಇದು. ಕಿಮ್, ಎಷ್ಟೊಂದು ವಿಲಕ್ಷಣ ವ್ಯಕ್ತಿಯೆಂದರೆ, ಅರ್ಧ ತಾಸು ಅವನ ಬಳಿ ಟೆಲಿಫೋನ್ ಡೈರೆಕ್ಟರಿ ಇಟ್ಟರೂ ಸಾಕು, ಅದರ ಅಷ್ಟೂ ಜನರ ಹೆಸರು, ವಿಳಾಸ, ಟೆಲಿಫೋನ್ ಸಂಖ್ಯೆಗಳನ್ನು ಸೂಪರ್ ಕಂಪ್ಯೂಟರ್’ನ ದಕ್ಷತೆಯಲ್ಲಿ ನೆನಪಿಟ್ಟುಕೊಂಡುಬಿಡುತ್ತಿದ್ದ! ಇಂಥ ಅತಿರೇಕದ ಬುದ್ಧಿವಂತನ ಪಾತ್ರವಾಗಿ ಸಿನೆಮಾದಲ್ಲಿ ಡಸ್ಟಿನ್ ಹಾಫ್ಮನ್ನ ನಟನೆ ಅದ್ವಿತೀಯ. ಈ ನಾಯಕನಿಗೆ ಇರುವ ಹುಚ್ಚಾಟಗಳಲ್ಲಿ ಪ್ಯಾನ್ಕೇಕ್ (ದೋಸೆ) ಗಳನ್ನು ತಿನ್ನುವ ಚಟವೂ ಒಂದು. ಶಕುಂತಲಾ ದೇವಿ ತನ್ನ ಬುದ್ಧಿಮತ್ತೆಯ ಪ್ರದರ್ಶನಗಳನ್ನು ಕೊಡಲು ಆಗಾಗ ಅಮೆರಿಕಾಕ್ಕೂ ಹೋಗಿ ಬರುತ್ತಿದ್ದರು. ಹಾಗೆ ಹೋದಾಗೊಮ್ಮೆ ಆಕೆಯ ಮಿದುಳಿನ ಬಗ್ಗೆ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ ಪ್ರೊಫೆಸರ್ ಡಾ. ಆರ್ಥರ್ ಜೆನ್ಸನ್ ಸಂಶೋಧನೆ ನಡೆಸಿದರು. ಈಕೆ ಹೇಗೆ ಯೋಚಿಸುತ್ತಾರೆ, ಮಿದುಳಿನಲ್ಲೇನಾದರೂ ವಿಶೇಷತೆ ಅಥವಾ ಅಸ್ವಾಭಾವಿಕತೆ ಇದೆಯೇ, ಈಕೆಯ ವರ್ತನೆಯಲ್ಲಿ ವಿಲಕ್ಷಣತೆ ಇದೆಯೇ ಎಂದೆಲ್ಲ ಹಲವು ಕೋನಗಳಲ್ಲಿ ಜೆನ್ಸನ್’ರ ಸಂಶೋಧನೆ ಸಾಗಿತ್ತು. ಅಪ್ರತಿಮ ಬುದ್ಧಿವಂತರೆಲ್ಲ ಸ್ವಲ್ಪ ಕ್ರ್ಯಾಕ್’ಗಳೂ ಆಗಿರುತ್ತಾರೆಂಬ ಪೂರ್ವಾಗ್ರಹ ಬೇರೆ ಜಗತ್ತಿನಲ್ಲಿದೆಯಲ್ಲ! ಹಾಗಾಗಿ, ಶಕುಂತಲಾ ಅವರಲ್ಲೂ ಅಂಥ ವಿಚಿತ್ರ ಸ್ವಭಾವಗಳೇನಾದರೂ ಇವೆಯೇ ಎನ್ನುವುದನ್ನೂ ಪ್ರೊಫೆಸರ್ ಗಮನಿಸುತ್ತಿದ್ದರು. ತನ್ನ ಅಧ್ಯಯನ ಪೂರ್ತಿಯಾದ ಮೇಲೆ ಒಂದು ಸಂಶೋಧನಾ ಲೇಖನವನ್ನು ಬರೆದು ಜರ್ನಲ್ ಒಂದರಲ್ಲಿ ಪ್ರಕಟಿಸಿದರು. ಅದರಲ್ಲಿ, ಶಕುಂತಲಾ ದೇವಿ ದಿನದ ಮೂರುಹೊತ್ತೂ ಪ್ಯಾನ್ ಕೇಕ್ ತಿನ್ನುತ್ತಾರೆ. ಅದು ಬಿಟ್ಟರೆ ಬೇರೇನೂ ತಿನ್ನುವುದಿಲ್ಲ. ಈಕೆಯ ಬುದ್ಧಿಮತ್ತೆಗೂ ಈ ವಿಲಕ್ಷಣ ಅಭ್ಯಾಸಕ್ಕೂ ಏನೋ ಸಂಬಂಧ ಇದೆ ಎಂಬರ್ಥದಲ್ಲಿ ಬರೆಯಲಾಗಿತ್ತು. ಈ ಲೇಖನವನ್ನು ಓದಿ ಆಕೆ ಬಿದ್ದೂ ಬಿದ್ದೂ ನಕ್ಕರಂತೆ. ಅಯ್ಯೋ ಹುಚ್ಚಪ್ಪಗಳಿರಾ, ನಿಮ್ಮ ಅಮೆರಿಕಾದಲ್ಲಿ ಸಸ್ಯಾಹಾರಿಯಾದ ನನಗೆ ತಿನ್ನುವುದಕ್ಕೆ ಬೇರಾವ ಆಯ್ಕೆಯೂ ಇರಲೇ ಇಲ್ಲ. ಇದ್ದಿದ್ದು ಪ್ಯಾನ್ಕೇಕ್ ಒಂದೇ. ಅದು ನಮ್ಮೂರಿನ ದೋಸೆಯ ಹಾಗಿದ್ದುದರಿಂದ ಖುಷಿಖುಷಿಯಾಗಿ ತಿಂತಾ ಇದ್ದೆ ಅಷ್ಟೆ! ನೀವೋ ನಿಮ್ಮ ಸಂಶೋಧನೆಗಳೋ! ಅಂದರಂತೆ. ಶಕುಂತಲಾರ ಮೇಲೆ ಮಾಡಿದ ಈ ದೋಸೆ ಸಂಶೋಧನೆ ಅದೆಷ್ಟು ಪ್ರಸಿದ್ಧವಾಯಿತೆಂದರೆ ರೈನ್ಮ್ಯಾನ್ ನಿರ್ದೇಶಕ ಅದನ್ನು ತನ್ನ ಸಿನೆಮಾದಲ್ಲೂ ತಂದು ನಾಯಕನಟನಿಗೆ ಸಾಕುಸಾಕೆನಿಸುವಷ್ಟು ದೋಸೆ ತಿನ್ನಿಸಿಬಿಟ್ಟ! ತನಗೆ ಬಗೆಬಗೆಯ ಅಡುಗೆ ಮಾಡುವುದಕ್ಕೂ ಬರುತ್ತದೆಂಬುದನ್ನು ತೋರಿಸಲಿಕ್ಕೆಂದೇ ಶಕುಂತಲಾ ಕೊನೆಗೆ ಅಡುಗೆ ಪುಸ್ತಕ ಬರೆದರಂತೆ.
ಶಕುಂತಲಾ ದೇವಿಯವರ ವೈಯಕ್ತಿಕ ಬದುಕು ನಿಗೂಢ. ಅವರಿಗೆ ಕುಟುಂಬದಲ್ಲಿ ನೆಮ್ಮದಿಯಿರಲಿಲ್ಲವಂತೆ, ಒಳಜಗಳಗಳು ಇದ್ದವಂತೆ ಎನ್ನುವ ಮಾತನ್ನು ಆಗಾಗ ಅಲ್ಲಲ್ಲಿ ಕೇಳಿದ್ದೆ. ಒಂದು ಸಲ ಅವರ ಬಸವನಗುಡಿಯ ಮನೆಯಲ್ಲೇ ಭಾರೀ ಮೊತ್ತದ ಚಿನ್ನಾಭರಣಗಳ ಕಳ್ಳತನ ಆಯಿತು, ಕದ್ದವರು ಕುಟುಂಬದವರೇ ಅನ್ನುವ ವಾರ್ತೆ ಹರಡಿತ್ತು. ವಿಚಾರಣೆಗೆ ಬಂದ ಪೋಲೀಸರು, ಏನು ಉದ್ಯೋಗ ಮಾಡ್ತೀರಿ? ಅಂತ ಪ್ರಶ್ನಿಸಿದಾಗ, ಶಕುಂತಲಾ ದೇವಿ ತನ್ನ ಪರಿಚಯ ಹೇಳಿಕೊಂಡು, ದೊಡ್ಡ ಸಂಖ್ಯೆಗಳ ಲೆಕ್ಕಾಚಾರವನ್ನು ಮನಸ್ಸಲ್ಲೇ ಮಾಡುತ್ತೇನೆ. ಅದರಿಂದ ಬಂದ ಸಂಪಾದನೆಯಲ್ಲೇ ಜೀವನ ಎಂದರಂತೆ. ಈ ಹೆಂಗಸಿಗೆ ತಲೆ ಕೆಟ್ಟಿರಬೇಕು ಎಂದು ಪೋಲೀಸರು ಮಾತಾಡಿಕೊಂಡರಂತೆ. ಇಂತಹ ಅಂತೆಕಂತೆಗಳು ಊರ ತುಂಬ ಹರಡಿದ್ದುವು. ಯಾರಿಗೂ ಸ್ಪಷ್ಟವಾದ ನಿಜ ಸಂಗತಿಗಳು ಗೊತ್ತಿರಲಿಲ್ಲ.
ಶಕುಂತಲಾ ದೇವಿ ಬದುಕಿದ್ದಾಗ, ಆಕೆಯ ಜ್ಯೋತಿಷ್ಯದ ಜಾಹೀರಾತುಗಳು ಪತ್ರಿಕೆಯಲ್ಲಿ ಬರುತ್ತಿದ್ದವು. ಒಮ್ಮೆ ನಾಗ್ಪುರದಲ್ಲಿ ಆಕೆಯ ಪತ್ರಿಕಾ ಗೋಷ್ಠಿಯಲ್ಲಿ ಒಬ್ಬ ಪತ್ರಕರ್ತ ಇದೆಲ್ಲ ಖೊಟ್ಟಿ ವಿದ್ಯೆ ಎಂದು ಚಾಲೆಂಜ್ ಮಾಡಿದ. ದುರದೃಷ್ಟಕ್ಕೆ, ಜಿದ್ದಿಗೆ ಬಿದ್ದ ಶಕುಂತಲಾ ಸವಾಲು ಸ್ವೀಕರಿಸಿದರು. ಆತ ತೋರಿಸಿದ ವ್ಯಕ್ತಿಯ ಮೇಲೆ ಎಲ್ಲರೆದುರು ಒಂದಷ್ಟು ಭವಿಷ್ಯ ಹೇಳಿದರು. ಆದರೆ, ಆಕೆ ಹೇಳಿದ್ದಕ್ಕೂ ನಿಜಸ್ಥಿತಿಗೂ ಸ್ವಲ್ಪವೂ ತಾಳೆಯಾಗದೆ ತದ್ವಿರುದ್ಧವಾಗಿದ್ದವು. ಇದರಿಂದ ಅವಮಾನಿತರಾದ ಆಕೆ ಮುಂದೆಂದೂ ನಾಗ್ಪುರಕ್ಕೆ ಕಾಲಿಡುವುದಿಲ್ಲ ಎನ್ನುತ್ತ ಎದ್ದುಹೋದರು. ಇಂಥ ಅವಮಾನ, ಸೋಲುಗಳನ್ನು ಉಂಡರೂ ಆಕೆ ಜ್ಯೋತಿಷ್ಯ, ನ್ಯುಮರಾಲಜಿಯಂಥ ದಂಧೆಗಳಿಂದ ಹಿಂದೆ ಸರಿಯಲಿಲ್ಲ ಎನ್ನುವುದು ಬೇಸರದ ಸಂಗತಿಯೇ. ಕೊನೆಕೊನೆಗೆ ಅದೇನು ಕಾರಣವಾಯಿತೋ ಏನೋ; ಜನಸಾಮಾನ್ಯರನ್ನು, ಪತ್ರಕರ್ತರನ್ನು ಹತ್ತಿರ ಬಿಟ್ಟುಕೊಳ್ಳದ ಆಕೆ ಗಣ್ಯಾತಿಗಣ್ಯರನ್ನು ಮಾತ್ರ ಭೇಟಿಯಾಗುತ್ತಿದ್ದರು. ಅವರಿಗೆ ಜ್ಯೋತಿಷ್ಯ, ಭವಿಷ್ಯ ಹೇಳಿ ದೊಡ್ಡ ಮೊತ್ತದ ಫೀಸನ್ನು ಪಡೆಯುತ್ತಿದ್ದರು. ಆದರೆ, ಹಾಗೆ ಬಂದ ದುಡ್ಡಿನ ದೊಡ್ಡ ಪಾಲನ್ನು, ಚಾಮರಾಜಪೇಟೆಯಲ್ಲಿರುವ ತನ್ನ ಹೆಸರಿನ ಒಂದು ಶಿಕ್ಷಣ ಸಂಸ್ಥೆಗೆ ದಾನವೆಂದು ಕೊಟ್ಟುಬಿಡುತ್ತಿದ್ದರು. ಫೀಸು ಕಟ್ಟಲು ಆಗದ ಬಡವರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಒದಗಿಸುತ್ತಿದ್ದರು. ಅನೇಕ ಮಕ್ಕಳಿಗೆ ಸ್ಕಾಲರ್’ಶಿಪ್ ವ್ಯವಸ್ಥೆ ಮಾಡಿ, ಮುಂದಿನ ಓದಿಗೂ ಅನುಕೂಲ ಮಾಡಿಕೊಟ್ಟಿದ್ದರು. ಬಾಲ್ಯದಲ್ಲಿ ಮಲ್ಲಿಗೆಯ ಮೊಗ್ಗಿನಂತೆ ಅರಳುತ್ತಿದ್ದ ತನ್ನ ಕನಸುಗಳನ್ನು ಚಿವುಟಿಹಾಕಿದ ಬಡತನದ ಭಯಾನಕ ಛಾಯೆ ಅವರ ಮನಸ್ಸನ್ನು ಜೀವಮಾನವಿಡೀ ಆವರಿಸಿತ್ತು ಅಂತ ಅನ್ನಿಸುತ್ತದೆ. ಬಹುಶಃ ನಾವು ಅವರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಎಡವಿದೆವೋ ಏನೋ.
ಶಕುಂತಲಾ ದೇವಿ – ನನ್ನಂತೆ, ಗಣಿತದ ಆಸಕ್ತಿ ಇಟ್ಟುಕೊಂಡಿದ್ದ ಅದೆಷ್ಟೋ ಜನರಿಗೆ ಒಂದು ವಿಸ್ಮಯವಾಗಿದ್ದರು, ದಂತಕತೆಯಾಗಿದ್ದರು, ಸ್ಫೂರ್ತಿದೇವತೆಯಾಗಿದ್ದರು. ಅವರ ನಿಧನದೊಂದಿಗೆ, ಅವರೊಳಗಿನ ಅದೆಷ್ಟೋ ಅಪ್ರಕಟಿತ ನೋವಿನ ಕತೆಗಳೂ ಮರಳಿಬಾರದ ಲೋಕಕ್ಕೆ ಹೋಗಿಬಿಟ್ಟವು. ಒಮ್ಮೆ ಅವರನ್ನು ಭೇಟಿ ಮಾಡಿ ಮಾತಾಡಿದ್ದರೆ ನನ್ನ ಗಂಟೇನು ಹೋಗುತ್ತಿತ್ತು?