ಮಂಕುತಿಮ್ಮನ ಕಗ್ಗ – ಟಿಪ್ಪಣಿ -4
ಏನು ಜೀವನದರ್ಥ ? ಏನು ಪ್ರಪಂಚಾರ್ಥ ? |
ಏನು ಜೀವಪ್ರಪಂಚಗಳ ಸಂಬಂಧ ? ||
ಕಾಣದಿಲ್ಲಿರ್ಪುದೇನಾನುಮುಂಟೆ ? ಅದೇನು ? |
ಜ್ಞಾನ ಪ್ರಮಾಣವೇಂ ? – ಮಂಕುತಿಮ್ಮ ||
ನಾವೆಲ್ಲಾ ನಡೆಸಲೇಬೇಕಾದ ಈ ಜೀವನದರ್ಥವೇನು, ಉದ್ದೇಶವೇನು ? ಅದನ್ನು ನಡೆಸುವ ರಂಗವೇದಿಕೆಯಾದ ಈ ಪ್ರಪಂಚದ ಅರ್ಥವೇನು, ಉದ್ದೇಶವೇನು ? ಇವೆರಡರ ನಡುವಿನ ಸಂಬಂಧ, ನಂಟಾದರು ಎಂತದ್ದು, ಯಾವ ಉದ್ದೇಶದ್ದು? ಅದನ್ನರಿಯಲು ಪೂರಕವಾಗಬಹುದಾಗಿದ್ದ ಕಣ್ಣಿಗೆ ಕಾಣದ್ದೇನೊ ಇಲ್ಲಿರುವುದೆ – ನಾನು ಎಂಬುದರ ಇರುವಿಕೆಯ ಜತೆಯಲ್ಲೆ? ಇರುವುದಾದರೆ ಏನು ಆ ಕಾಣದ್ದು ? ಕಣ್ಣಿಗೆ ಕಾಣಿಸದ ವಸ್ತುವೆಂಬ ಜ್ಞಾನವಷ್ಟೆ ಅದನ್ನು ಪ್ರಮಾಣೀಕರಿಸುವ ದಾರಿಯೆ, ಸಾಕ್ಷ್ಯಾಧಾರವೆ ? ಎಂದು ಜಿಜ್ಞಾಸೆ , ಶೋಧನೆಗಿಳಿದಿದ್ದಾನೆ ಮಂಕುತಿಮ್ಮ.
‘ಜೀವ’ವಿರುವೆಲ್ಲಾ ಅಸ್ತಿತ್ವಗಳು ಋತುಗಳಡಿ ಬದಲಾಗುವ ‘ವನ’ದ ಹಾಗೆ ಹುಟ್ಟು ಸಾವಿನ ನಿರಂತರ ಚಕ್ರದಲ್ಲಿ ತೊಡಗಿಸಿಕೊಂಡಿರುವ ಬದುಕು ಒಂದೆಡೆ. ‘ಪಂಚ’ ಭೂತಗಳೆ ಮೂಲ ಸರಕಾಗಿ ಹುಟ್ಟಿಬಂದ ಪ್ರ’ಪಂಚ’ವೆಂಬ ಜೀವ-ನಿರ್ಜೀವಗಳ ಮೊತ್ತದ ಅಸ್ತಿತ್ವದ ಅಚ್ಚರಿ ಇನ್ನೊಂದೆಡೆ. ಇವೆರಡೂ ಹೀಗೆ ಅಸ್ತಿತ್ವದಲ್ಲಿರುವ ಉದ್ದೇಶವೇನಿರಬಹುದು ? ಯಾವುದರ ಸಂಕೇತವನ್ನು ನೀಡುತ್ತಿದೆ ಇವುಗಳ ಇರುವಿಕೆ? ಪ್ರಪಂಚವೆಂಬ ರಂಗಮಂಚದ ಮಹಾನ್ ವೇದಿಕೆಯಲ್ಲಿ ನಡೆಯುವ ಜೀವನವೆಂಬ ಮಹಾನ್ ನಾಟಕದ ಅರ್ಥವೇನು? ಅದರಲ್ಲಿ ಪಾತ್ರ ನಿರ್ವಹಿಸುವ ಸಕಲ ಜೀವರಾಶಿಗಳ ಪ್ರೇರಣೆ, ಗುರಿಯಾದರು ಏನು ? ಜೀವನದೊಲವಿನೊಡನೆ ಪ್ರಪಂಚದ ಆ ಪ್ರಾಪಂಚಿಕತೆಯನ್ನು ಬಂಧಿಸಿರುವ ಸಂಬಂಧವೇನು? ಯಾವ ರೀತಿಯ ನಂಟು ಅವೆರಡನ್ನು ಹೀಗೆ ಸಮಷ್ಟಿಯಲ್ಲಿಟ್ಟಿದೆ ? ಯಾರೂ ನಿಯಂತ್ರಿಸದಿದ್ದರು ತಂತಾನೆ ನಡೆದುಕೊಂಡು ಹೋಗುವ ಆ ‘ಸ್ವಯಂಭು – ಸ್ವಯಂಚಾಲಕತ್ವದ’ ಪರಿಯನ್ನು ಇಷ್ಟು ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ನಡೆಸುತ್ತಿರುವುದಾದರು ಯಾರು ಎನ್ನುವುದೆ ಗೊತ್ತಾಗದಲ್ಲಾ ? ನಮಗರಿವಿಲ್ಲದ, ಕಣ್ಣಿಗೆ ಕಾಣಿಸದಿರುವ ಯಾವುದೊ ಒಂದು ಅದೆಲ್ಲವನ್ನು ನಡೆಸುತ್ತಿದೆಯೆ – ಅದರಲ್ಲೆ ನಮ್ಮನ್ನೂ ಪಗಡೆಯ ಕಾಯಾಗಿ ಬಳಸಿಕೊಂಡು ? ಆ ಕಾಣದಿದ್ದರು ಇಲ್ಲಿರುವ ಅದರೊಳಗೆ, ನಮಗೇ ಕಾಣದ ‘ನಮ್ಮ’ ಅಂಶವೂ ಸೇರಿಕೊಂಡಿದೆಯೆ , ನಮ್ಮರಿವಿಲ್ಲದೆಯೆ (ನಾನುಮುಂಟೆ) ?
ಇಲ್ಲಿ ಒಂದೆಡೆ ಕಾಣದ ಆ ಅಗಾಧ ಶಕ್ತಿಯ ಕುರಿತ ಸೂಚನೆಯಿದ್ದರೆ ಮತ್ತೊಂದೆಡೆ ನಮ್ಮಲ್ಲಿದ್ದೂ ನಮಗೇ ಕಾಣದ ಕೌತುಕವು ಆ ಕಾಣದ್ದರ ಜತೆಗಿದೆಯೆ ಎಂಬ ಪ್ರಶ್ನೆಯೂ ಇದೆ. ಇದನ್ನು ಮೊದಲೆರಡು ಸಾಲಿಗೆ ಸಡಿಲವಾಗಿ ಸಮೀಕರಿಸಿದರೆ, ಜೀವ-ಪ್ರಪಂಚಗಳ ನಡುವಿನ ಸಂಬಂಧವಿರುವ ಹಾಗೆ ನಮ್ಮಲ್ಲಿನ ಅಂತರಾಳದ ಅಪರಿಚಿತ ಕೌತುಕಕ್ಕೂ ಮತ್ತು ಆ ಅಗಾಧಶಕ್ತಿಗೂ ಇರಬಹುದಾದ ಸಂಬಂಧವನ್ನು ಸಂಕೇತಿಸುತ್ತದೆ. ಒಟ್ಟಾರೆ, ಕಾಣಿಸದ್ದೇನೊ ಇಲ್ಲಿದ್ದು ಸೂತ್ರವನ್ನಾಡಿಸುತ್ತಿದೆಯೆ, ಅದರೊಳಗೆ ನನ್ನನ್ನು ಒಂದು ಸೂತ್ರದ ಗೊಂಬೆಯಾಗಿಸಿಕೊಂಡು – ಎನ್ನುವ ಪ್ರಶ್ನೆ ಕವಿಯದು. ಹಾಗೇನಾದರು ಇದ್ದಲ್ಲಿ ಅದೇನು ? ಎಂದರಿಯುವ ಕುತೂಹಲವಿದ್ದರು, ಅರಿವಾಗುತ್ತಿಲ್ಲದ, ಕಾಣಿಸುತ್ತಿಲ್ಲದ ಬೇಸರವೂ ಇದೆ. ಅದರಿಂದಾಗಿಯೆ ಕೊನೆಯ ಸಾಲಲ್ಲಿ – ಅದನ್ನು ಕಾಣಲಾಗದ ಸ್ಥಿತಿಯಿದ್ದರು, ಅದರ ಕುರಿತಾದ ವಿವರಣೆ ನೀಡುವ ವೇದ ಶಾಸ್ತ್ರಾದಿಗಳ ಜ್ಞಾನಮೂಲಕ್ಕೇನು ಕೊರತೆಯಿಲ್ಲವಾದ ಕಾರಣ, ಆ ಜ್ಞಾನ-ಪಾಂಡಿತ್ಯವನ್ನಷ್ಟೆ ಆ ಕಾಣದುದರ ಇರುವಿಕೆಗೆ ಪ್ರಮಾಣ, ಸಾಕ್ಷಿ ಎಂದಂದುಕೊಂಡು, ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳಬೇಕೆ ? ಎಂಬ ನಿರಾಶಾಪೂರ್ಣ ಹತಾಶೆಯನ್ನು ವ್ಯಕ್ತಪಡಿಸುತ್ತಾನೆ ಮಂಕುತಿಮ್ಮ.
ಸೃಷ್ಟಿರಹಸ್ಯದ ನಿಗೂಡತೆಯನ್ನು ಜೀವನ, ಪ್ರಪಂಚದಸ್ತಿತ್ವಗಳ ಮುಖೇನ ಪ್ರಶ್ನಿಸುತ್ತಲೆ ಆ ಕಾಣದ ಪರಮಾತ್ಮತ್ವದ ಜತೆ ನಾನೆಂಬ ‘ಪರಮಾತ್ಮ ಸ್ವರೂಪಿ’ ಯನ್ನು ಸಮೀಕರಿಸಿ ಅದ್ವೈತ ಸಮಷ್ಟಿತ್ವದ ಕುರುಹು ನೀಡುತ್ತಲೆ ಆಧ್ಯಾತ್ಮಿಕದ ಸಹಯೋಗವನ್ನೊದಗಿಸುವ ಈ ಸಾಲುಗಳು, ಅದೇ ವೇದಾಂತದ ಬ್ರಹ್ಮಜ್ಞಾನ ಸಾರವಾದ ‘ಅಜ್ಞಾನ’ವನ್ನು ತೊಡೆಯುವ ‘ಜ್ಞಾನ’ದ ಜೊತೆಗೂ ಜೋಡಿಸಿಕೊಳ್ಳುತ್ತ ತನ್ನ ಅಧ್ಯಾತ್ಮಿಕ ಮುಖವನ್ನು ಪರಿಪೂರ್ಣಗೊಳಿಸಿಕೊಂಡಿವೆಯೆನಿಸುತ್ತ