ಅಂಕಣ

ಸಂಬಂಧವೊಂದರ ದುರಂತ ಕಥೆ – ೨

ಸಂಬಂಧವೊಂದರ ದುರಂತ ಕಥೆ – ೧

ಶುಭೋನ ಕಥೆ:

ರವಿಶಂಕರ್ ಹಾಗೂ ಅನ್ನಪೂರ್ಣ ದೇವಿಯವರ ನವದಾಂಪತ್ಯದಲ್ಲಿ ಶುಭೇಂದ್ರ ಶಂಕರ್ ಜನಿಸಿದ್ದು ಮಾರ್ಚ್  30,1942 ರಂದು. ಜನಿಸಿದ ಎಂಟು ವಾರದೊಳಗಾಗಿ ಮಗು ಒಂದು ವಿರಳ ಹಾಗೂ ನೋವಿನಿಂದ ಕೂಡಿದ ಕರುಳಿನ ರೋಗಕ್ಕೆ ತುತ್ತಾಗಿರುವುದು ಪತ್ತೆ ಹಚ್ಚಲ್ಪಟ್ಟಿತು. ತಿಂಗಳೊಳಗೆ ಗುಣವಾದರೂ ಕೂಡಾ ರಾತ್ರಿಯಿಡೀ ಮಗು ಅಳುವುದನ್ನು ಮುಂದುವರಿಸಿತ್ತು. ದಿನವಿಡೀ 10 ತಾಸಿಗೂ ಹೆಚ್ಚು ಸಿತಾರ್ ಕ್ಲಾಸ್ ತೆಗೆದುಕೊಂಡು ಸುಸ್ತಾಗಿರುತ್ತಿದ್ದ ದಂಪತಿಗಳು ರಾತ್ರಿಯೂ ಕೂಡ ಮಗುವಿನ ಅಳುವಿನಿಂದಾಗಿ ಎಚ್ಚರವಿರಬೇಕಾಗುತ್ತಿತ್ತು. ರವಿಶಂಕರರು ಹೇಳುವ ಪ್ರಕಾರ ಈ ಸಂಗತಿಯೇ ಅವರ ದಾಂಪತ್ಯದಲ್ಲಿ ಮೊದಲ ಬಿರುಕನ್ನು ಮೂಡಿಸಿತು.”ತೊಂದರೆಯ ಕಾರಣ ಅಳುತ್ತಿದ್ದ ಮಗು ಮುಂದೆ ಅದೇ ಚಟವನ್ನು ಬೆಳೆಸಿಕೊಂಡಿತು. ಅದರ ಅಳು ಮುಂದಿನ ಒಂದು ವರ್ಷಕ್ಕೂ ಹೆಚ್ಚುಕಾಲ ಹಾಗೇ ಮುಂದುವರೆಯಿತು. ಆಗ ನಾನು ಅನ್ನಪೂರ್ಣಳ ವ್ಯಕ್ತಿತ್ವ ಬದಲಾಗುವುದನ್ನು ಗಮನಿಸಿದೆ. ನಮ್ಮಿಬ್ಬರಿಗೂ ಅದು ಶ್ರಮದಾಯಕವಾಗಿತ್ತು. ಕೆಲಸಮಯ ಇಬ್ಬರಿಗೂ ಕೋಪ ಮಿತಿಮೀರುತ್ತಿತ್ತು. ನಾನೂ ಆಗ ಯಾವುದೇ ಬಾಲಿಶತನಗಳನ್ನು ಸಹಿಸುತ್ತಿರಲಿಲ್ಲ. ಹಾಗಾಗಿ ಒಮ್ಮೊಮ್ಮೆ ನಾವಿಬ್ಬರೂ ಜಗಳವಾಡುತ್ತಿದ್ದೆವು. ನನಗೆ ಇದರಿಂದ ಒಂದು ಸಂಗತಿ ತಿಳಿಯಿತು, ಅದೇನೆಂದರೆ ಅನ್ನಪೂರ್ಣಳಿಗೆ ಅವಳ ತಂದೆಯ ಕೋಪವಿತ್ತು. ಅವಳು ನನಗೆ ಹೇಳುವಳು ‘ನೀನು ನನ್ನನ್ನು ಪ್ರೀತಿಸುತ್ತಿಲ್ಲ. ಕೇವಲ ನನ್ನ ಸಂಗೀತಗೋಸ್ಕರ ನನ್ನನ್ನು ಮದುವೆಯಾಗಿದ್ದೀಯ. ನಿನಗೆ ಸಾಕಷ್ಟು ಸುಂದರ ಹೆಂಗಸರಿದ್ದಾರೆ, ನನಗೆ ಗೊತ್ತು’ ಎಂದು.  ಅವಳ ಅಸೂಯೆ ದಿನಕಳೆದಂತೆ ಅತಿರೇಕ ಅನ್ನಿಸುವಷ್ಟು ಹೆಚ್ಚುತ್ತಿತ್ತು. ನಾನು ಬೇರೆ ಹೆಂಗಸರ ಜೊತೆಗೆ ಮಾತನಾಡಿದರೂ , ಬೇರೆ ಊರಿನಲ್ಲಿ ಕಾರ್ಯಕ್ರಮ ನೀಡಿ ವಾಪಾಸ್ಸು ಬಂದರೂ ಸಹ ನನ್ನನ್ನು ಅನೈತಿಕ ಸಂಬಂಧದಡಿಯಲ್ಲಿ ಆರೋಪಿಸುವಳು. ಅವಳಿಗೆ ಅದೊಂದು ಗೀಳಾಗಿತ್ತು.”

ಶುಭೊ ದೊಡ್ಡವನಾದಂತೆ ಚಿತ್ರಕಲೆಯಲ್ಲಿ ಆಸಕ್ತಿ ತಾಳಿದ. ಅವನಿಗೋಸ್ಕರ ಒಬ್ಬ ಖಾಸಗಿ ಕಲಾ ಶಿಕ್ಷಕನನ್ನೂ ನೇಮಿಸಲಾಯಿತು. ತಂದೆ ಸಿತಾರ್ ವಾದನವನ್ನೂ ಅವನಿಗೆ ಕಲಿಸಿದರು. ಕುಟುಂಬವು ಬಾಂಬೆಗೆ ಸ್ಥಳಾಂತರಗೊಂಡಾಗ ಅವನು ‘ಜೆಜೆ ಸ್ಕೂಲ್ ಆಫ್ ಆರ್ಟ್ಸ್’ನ್ನು ಸೇರಿದನು, ಆದರೆ ಪದವಿಯನ್ನು ಮಾತ್ರ ಪೂರ್ಣಗೊಳಿಸಲಿಲ್ಲ. ಅವನ ಅಪ್ಪ ಆಗಲೇ ದೊಡ್ಡ ತಾರೆಯಾಗಿದ್ದರು. ಕಛೇರಿಗಳಲ್ಲೋ ಅಥವಾ ಯಾವುದೋ ಬ್ಯಾಲೆ ಅಥವ ಚಲನಚಿತ್ರಕ್ಕೆ ಸಂಗೀತ ಸಂಯೋಜಿಸುವುದರಲ್ಲಿ ಕಾರ್ಯನಿರತರಾಗಿರುತ್ತಿದ್ದ ಅವರಿಗೆ ಶುಭೋನ ಸಂಗೀತ ಶಿಕ್ಷಣದ ಬಗ್ಗೆ ಗಮನ ಹರಿಸಲು ಕ್ರಮೇಣ ಸಾಧ್ಯವಾಗಲಿಲ್ಲ. ಆ ಕಾರಣದಿಂದಾಗಿ ಅನ್ನಪೂರ್ಣದೇವಿಯವರು ಆ ಜವಾಬ್ಧಾರಿಯನ್ನು ವಹಿಸಿಕೊಂಡರು.

ಆದರೆ ಬಾಂಬೆಯಲ್ಲಿ ಅವರ ದಾಂಪತ್ಯ ಜೀವನ ಇನ್ನೂ ಕೆಟ್ಟ ತಿರುವುಗಳನ್ನು ತಗೆದುಕೊಂಡಿತು. ರವಿಶಂಕರರ ಅಣ್ಣ ಉದಯ್ ಶಂಕರರ ನಾಟಕ ಕಂಪೆನಿಯಲ್ಲಿದ್ದ ಕಮಲಾ ಶಾಸ್ತ್ರಿ ಎಂಬ ಮಹಿಳೆಯೊಡನೆ ರವಿಶಂಕರರು ಸಂಬಂಧವಿಟ್ಟುಕೊಂಡದ್ದು ಅನ್ನಪೂರ್ಣ ದೇವಿಯವರಿಗೆ ತಿಳಿಯಿತು. ಅದರಿಂದ ನೊಂದ ಅವರು 1956ರಲ್ಲಿ ಮಗ ಶುಭೋನನ್ನು ಕರೆದುಕಂಡು ತಮ್ಮ ತವರುಮನೆ ಮೈಹಾರ್’ಗೆ ವಾಪಸ್ಸಾದರು. ಎರಡು ವರ್ಷ ಕಳೆದರೂ ಅವರು ಬರಲಿಲ್ಲ. ಅವರು ಬಂದದ್ದು ಕಮಲಾ ಶಾಸ್ತ್ರಿ, ಚಲನಚಿತ್ರ ನಿರ್ದೇಶಕ ಅಮಿಯಾ ಚಕ್ರವರ್ತಿಯ ಜೊತೆ ಮದುವೆಯಾದ ಬಳಿಕವೇ! ಆದರೂ ಅವರ ದಾಂಪತ್ಯ ಸುಧಾರಿಸಲಿಲ್ಲ. 1967ರಲ್ಲಿ ದಂಪತಿಗಳಿಬ್ಬರೂ ವಿಚ್ಛೇದನ ತೆಗೆದುಕೊಂಡು ದೂರಾದರು.

ಇದೆಲ್ಲದರ ನಡುವೆ ಶುಭೋನ ತಾಲೀಮು ಅವನ ತಾಯಿಯ ಮಾರ್ಗದರ್ಶನದ ಅಡಿಯಲ್ಲಿ ಅಬಾಧಿತವಾಗಿ ಮುಂದುವರಿಯಿತು. ಅನ್ನಪೂರ್ಣ ದೇವಿಯವರ ಕಟ್ಟುನಿಟ್ಟಿನ ಮಾರ್ಗದರ್ಶನದಲ್ಲಿ ಶುಭೋ ದಿರ್ಘ ಆಲಾಪ್ ಹಾಗೂ ಬಹು ಅಂದವಾದ ‘ಮಿಂಡ್’ಗಳನ್ನು ನುಡಿಸುವ ಸಾಮರ್ಥ್ಯವನ್ನು ಗಳಿಸಿಕೊಂಡ. ಶುಭೋ ‘ಸಪ್ತಕ್ ತಾನ್’ಗಳನ್ನು ನುಡಿಸುವುದರಲ್ಲೂ ಪರಿಣಿತಿಯನ್ನು ಮೈಗೂಡಿಸಕೊಂಡ. ರವಿಶಂಕರರಿಗೆ ಈ ತಂತ್ರ ಬರುವುದಿಲ್ಲವಾಗಿತ್ತು ಎಂದು ಸಂಗೀತವಿದ್ವಾಂಸರು ಹೇಳುತ್ತಾರೆ. ರವಿಶಂಕರರು ಸಿತಾರ್ ವಾದಕ ಶುಭೋ ಬಗ್ಗೆ ತಿಳಿದುಕೊಂಡ ಕತೆಯೂ ಸ್ವಾರಸ್ಯಕರವಾಗಿದೆ. ಬಾಂಬೆಯ ಒಂದು ಸ್ಟುಡಿಯೋದಲ್ಲಿ ಸಣ್ಣದೊಂದು ರೆಕಾರ್ಡಿಂಗ್ ಕಾರ್ಯಗೋಸ್ಕರ ತೆರಳಿದ್ದ ರವಿಶಂಕರರು ಚಿಕ್ಕ ಸಿತಾರ್ ಧ್ವನಿತುಣುಕನ್ನು ಕೇಳುತ್ತಾರೆ. ತಮ್ಮ ಘರಾಣೆಯ ಸಂಗೀತವೆಂದು ಖಾತ್ರಿಯಾದ ಮೇಲೆ ಆಶ್ಚರ್ಯಚಕಿತರಾಗಿ ಆ ಸಂಗೀತಗಾರ ಯಾರೆಂದು ವಿಚಾರಿಸುತ್ತಾರೆ. ಅದನ್ನು ನುಡಿಸಿದ್ದು ನಿಖಿಲ್ ಬ್ಯಾನರ್ಜಿ ಅಥವಾ ತಾನಲ್ಲವಾದ್ದರಿಂದ ಅವರ ಕುತೂಹಲ ಕೆರಳುತ್ತದೆ. ಅವರ ಪ್ರಶ್ನೆಯನ್ನು ಕೇಳಿ ಸ್ಟುಡಿಯೋ ಮಾಲಿಕ ನಕ್ಕು ನುಡಿಯುತ್ತಾನೆ. ‘ನೀವು ತಮಾಷೆ ಮಾಡುತ್ತಿಲ್ಲ ತಾನೆ ಪಂಡಿತ್’ಜೀ? ನಿಮ್ಮ ಮಗನ ಸಿತಾರ್ ವಾದನವನ್ನೇ ನೀವು ಗುರುತಿಸಲಾರಿರಾ?’ ಅನಂತರ ರವಿಶಂಕರರು ಶುಭೋನನ್ನು ತಾನುಳಿದುಕೊಂಡಿದ್ದ  ಹೋಟಿಲ್ಲಿನ ಕೋಣೆಗೆ ಕರೆದು ಕೆಲ ಸಭಿಕರ ಮುಂದೆ ನುಡಿಸಲು ಹೇಳುತ್ತಾರೆ. ಶುಭೋ ತಾನು ಕಲಿತದ್ದನ್ನು ನುಡಿಸಿ ತೋರಿಸುತ್ತಾನೆ. ಅವನ ನುಡಿಸಾಣಿಕೆ ಮುಗಿದ ನಂತರ ರವಿಶಂಕರರು ಅವನ ಪ್ರದರ್ಶನ ಅದ್ಭುತವಾಗಿತ್ತೆಂದೂ,ಆತ ಸಾರ್ವಜನಿಕ ಕಛೇರಿಗಳನ್ನು ನೀಡಲು ಶಕ್ತನಾಗಿದ್ದಾನೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಸಭಿಕರೂ ಅವರ ಮಾತನ್ನು ಅನುಮೋದಿಸುತ್ತಾರೆ. ಅಷ್ಟೇ ಅಲ್ಲದೆ ತನ್ನೊಂದಿಗೆ ಅಮೇರಿಕಕ್ಕೆ ಬಂದು ತನ್ನ ಕಛೇರಿಗಳಲ್ಲಿ ವೇದಿಕೆ ಹಂಚಿಕೊಳ್ಳುವಂತೆ ಅವನನ್ನು ಆಹ್ವಾನಿಸುತ್ತಾರೆ. ತಂದೆಯ ಈ ಆಹ್ವಾನದಿಂದ ಶುಭೋ ದಿಗ್ಭ್ರಮೆಗೊಳಗಾಗುತ್ತಾನೆ ತಾಯಿಯ ಅತಿಯಾದ ಕಟ್ಟುನಿಟ್ಟಿನ ಮೇಲ್ವಿಚಾರಣೆ ಹಾಗೂ ಪಾಶ್ಚಾತ್ಯ ಲೋಕದ ಬಗ್ಗೆ ತೀವ್ರವಾದ ಮೋಹವನ್ನು ಹೊಂದಿದ್ದ ಆತ ತಂದೆಯ ಜೊತೆ ಅಮೆರಿಕಕ್ಕೆ ತೆರಳಲು ಉತ್ಸುಕನಾಗುತ್ತಾನೆ.

ವಿಷಯ ತಿಳಿದ ಅನ್ನಪೂರ್ಣದೇವಿಯವರು ಶುಭೋನಿಗೆ ಇನ್ನೂ ಬಾಕಿ ಉಳಿದಿರುವ ಎರಡು ವರ್ಷಕಾಲದ ತಾಲೀಮನ್ನು ಪೂರ್ತಿಗೊಳಿಸಿ ಆತ ಎಲ್ಲಿಗೆ ಬೇಕಾದರೂ ಹೋಗಬಹುದೆಂದು ಹೇಳುತ್ತಾರೆ. ಆದರೆ ಶುಭೋ ಅದಕ್ಕೆ ಒಪ್ಪುವುದಿಲ್ಲ. ಕಡೆಯ ಪ್ರಯತ್ನವೆಂಬಂತೆ ಇನ್ನೂ ಕನಿಷ್ಟ ಆರೂ ತಿಂಗಳಾದರೂ ಆತ ತನ್ನ ರಿಯಾಜನ್ನು ಮಾಡಿ ತದನಂತರ ಆತ ಹೊರಗೆ ಕಾಲಿಡಬೇಕೆಂದು ತಿಳಿ ಹೇಳುತ್ತಾರೆ. ಆದರೆ ಅಮೆರಿಕದ ಮೋಹದಲ್ಲಿ ಸಿಲುಕಿದ್ದ ಶುಭೋ ಈ ಯಾವ ಮಾತುಗಳಿಗೂ ಬಗ್ಗುವುದಿಲ್ಲ. ಈ ಸಮಯದಲ್ಲೇ ಕುಖ್ಯಾತ “ನಿದ್ರೆಗುಳಿಗೆಯ ಪ್ರಕರಣ” ನಡೆದದ್ದು.

ಆ ಪ್ರಕರಣದ ಬಗ್ಗೆ ರವಿಶಂಕರರು ತಮ್ಮ ಆತ್ಮಚರಿತ್ರೆ ರಾಗಮಾಲಾದಲ್ಲಿ ಹೀಗೆ ದಾಖಲಿಸಿದ್ದಾರೆ  ‘ಅದು 1970ನೇ ಇಸವಿಯ ಒಂದು ದಿನ. ರೆಕಾರ್ಡಿಂಗ್ ಕೆಲಸವೊಂದಿದ್ದಿದ್ದರಿಂದ ನಾನು ಬಾಂಬೆಯಲ್ಲಿದ್ದೆ. ಒಂದು ರಾತ್ರಿ ನಾನು ಹೋಟೆಲ್ಲಿನಲ್ಲಿ ಉಳಿದುಕೊಂಡಿದ್ದಾಗ ಶುಭೋನಿಂದ ತುರ್ತು ಕರೆಯೊಂದು ಬಂದಿತು. ನಾನು ಕರೆ ಸ್ವೀಕರಿಸಿ ಮಾತನಾಡಿದಾಗ ಅವನ ದನಿ ಕ್ಷೀಣವಾಗಿತ್ತು. ಮನೆಗೆ ಬಂದು ತನ್ನನ್ನು ಕರೆದುಕೊಂಡು ಹೋಗುವಂತೆ ಆತ ನನ್ನನ್ನು ಅಂಗಲಾಚಿಕೊಳ್ಳುತ್ತಿದ್ದುದು ನನ್ನನ್ನು ಬೆಚ್ಚಿಬೀಳಿಸಿತು. ನಾನು ವಿಚ್ಛೇದನ ಪಡೆದ ನಂತರದ ಮೂರೂವರೆ ವರ್ಷಗಳಲ್ಲಿ ಒಂದು ಸರ್ತಿಯೂ ಅಲ್ಲಿಗೆ ಹೋಗಿರಲಿಲ್ಲ. ಗಾಬರಿಯಿಂದಲೇ ಮಲಬಾರ್ ಹಿಲ್ಲಿನಲ್ಲಿ ಇರುವ ಅವರ ಮನೆಗೆ ಹೋದೆ. ಆತನ ಮುಖ ಬಿಳಿಚಿಕೊಂಡಿತ್ತು, ಒಂದೇ ಸಮನೆ ತನ್ನನ್ನು ಅಲ್ಲಿಂದ ಬಿಡಿಸಿ ಅಮೇರಿಕಕ್ಕೆ ಕರೆದುಕೊಂಡು ಹೋಗುವಂತೆ ನನ್ನನ್ನು ಗೋಗರೆಯುತ್ತಿದ್ದ. ಆತನಿಗೆ ತನ್ನ ತಾಯಿಯ ಕೋಪವನ್ನು ತಡೆದುಕೊಳ್ಳಲಾಗುತ್ತಿರಲಿಲ್ಲ. ಕೇವಲ ಸಂಗೀತ ಸಂಬಂಧಿ ವಿಚಾರಗಳಲ್ಲಷ್ಟೇ ಅಲ್ಲ, ಉಳಿದೆಲ್ಲ ವಿಚಾರಗಳಲ್ಲಿಯೂ ಕೂಡಾ. 28 ವರ್ಷ ವಯಸ್ಸಿನ ಗಂಡಸಿನನೊಬ್ಬನ ಆ ಕರುಣಾಜನಕ ಪರಿಸ್ಥಿತಿ ನನ್ನ ಮನಸ್ಸನ್ನು ಕರಗಿಸಿತು. ಅನ್ನಪೂರ್ಣ ಕೋಪದಿಂದ “ಅವನು ನನಗೆ ಬೇಡ. ಕರೆದುಕೊಂಡು ಹೋಗು” ಎಂದು ಕೂಗಾಡುತ್ತಿದ್ದಳು,ನನಗೂ ಕೋಪ ಬಂದಿದ್ದರೂ ನಾನು ತಾಳ್ಮೆ ಕಳೆದುಕೊಳ್ಳಲಿಲ್ಲ. ತಾಳ್ಮೆಯಿಂದ ಅವನನ್ನು ಕರೆದುಕೊಂಡು ಅಲ್ಲಿಂದ ಹೊರಬಂದೆ. ಆಮೇಲೆ ನನಗೆ ತಿಳಿದಿದ್ದೇನೆಂದರೆ ಶುಭೋ ಪ್ರಾಣ ಕಳೆದುಕೊಳ್ಳಲು ಎಂಟತ್ತು ನಿದ್ರೆಗುಳಿಗೆಗಳನ್ನು ಸೇವಿಸಿದ್ದನೆಂದು. ನಾನು ಕೂಡಲೇ ವೈದ್ಯರನ್ನು ಹೋಟೆಲ್ಲಿಗೆ ಕರೆಯಿಸಿ ಚಿಕಿತ್ಸೆ ನೀಡಿಸಿದೆ. ಅವರು ಅವನ ಹೊಟ್ಟೆಯನ್ನು ಖಾಲಿ ಮಾಡಿಸಿ ಅವನ ಪ್ರಾಣವನ್ನು ರಕ್ಷಿಸಿದರು.’

ಹಲವು ವರ್ಷಗಳ ಕಾಲ ಇದು ಅಧಿಕೃತ ಕತೆಯಾಗಿತ್ತು. ಬೇರೆ ಏನಾದರೂ ಅಭಿಪ್ರಾಯ ಕೇಳಿ ಬಂದಲ್ಲಿ ರವಿಶಂಕರರು ಅದನ್ನು ಅನ್ನಪೂರ್ಣದೇವಿಯ ಶಿಷ್ಯಂದಿರ ಸಂಚೆಂದು ಪರಿಗಣಿಸಿ ತಳ್ಳಿಹಾಕುತ್ತಿದ್ದರು. ಆದರೆ ಅನ್ನಪೂರ್ಣ ದೇವಿಯವರೇ ಸಂದರ್ಶನದಲ್ಲಿ ಇದೆಲ್ಲದರ ಕುರಿತು ಸ್ಪಷ್ಟಪಡಿಸಿದ್ದಾರೆ. ಅದರಲ್ಲೂ ರವಿಶಂಕರರ ಬಗ್ಗೆ ಅವರು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಬಗ್ಗೆ ಹಬ್ಬಿರುವ ಸುಳ್ಳಿನ ಕತೆಗಳೆಲ್ಲದರ ಬಗ್ಗೆ ನನಗೆ ಅರಿವಿದೆ. ಬಾಬಾ ಬದುಕಿದ್ದಾಗ ಅವರಿಗೆ ನೋವಾದಿತೆಂದು ನಾನು ಇದರ ಬಗ್ಗೆ ಮಾತನಾಡುತ್ತಿರಲಿಲ್ಲ. ಎಲ್ಲ ಅನ್ಯಾಯಗಳನ್ನು ಹಾಗೂ ವೇದನೆಗಳನ್ನು ಅವರಿಗಾಗಿ ನಾನು ತಡೆದುಕೊಂಡಿದ್ದೆ. ಈಗ ಅವರಿಲ್ಲವಾದ್ದರಿಂದ ಇವೆಲ್ಲದರ ಬಗ್ಗೆ ಸ್ಪಷ್ಟಪಡಿಸಲೇಬೇಕಾಗಿದೆ. ಅದರಲ್ಲೂ ಶುಭೋನ ಬಗ್ಗೆ ರವಿಶಂಕರರು ಹಬ್ಬಿಸಿರುವ ಸುಳ್ಳನ್ನು ಬಯಲಿಗೆಳೆಯಲೇಬೇಕಾಗಿದೆ. ರವಿಶಂಕರರು ಈ ಎಲ್ಲ ನಿಷ್ಪ್ರಯೋಜಕ ತಂತ್ರಗಳನ್ನು ಬಿಟ್ಟು ಆ ಸಮಯವನ್ನು ತಮ್ಮ ಶಿಷ್ಯಂದರಿಗೆ ಸಂಗೀತ ಕಲಿಸಲು ವಿನಿಯೋಗಿಸಬೇಕು. ಆಗ ಒಳ್ಳೆ ಸಂಗೀತಗಾರರಾದರೂ ಹೊರಬರುತ್ತಾರೆ ಹಾಗೂ ಈ ದೇಶ ಅವರಿಗೆ ಸದಾ ಋಣಿಯಾಗಿರುತ್ತದೆ.

ರವಿಶಂಕರರು ಬಾಂಬೆಗೆ ಬಂದಿದ್ದಾಗ ಶುಭೋನ ಸಂಗಿತವನ್ನು ಕೇಳಿದಾಗ ಶುಭೋ ಅತ್ಯುತ್ತಮವಾಗಿ ನುಡಿಸುತ್ತಿದ್ದ. ಪ್ರಾರಂಭದಲ್ಲಿ ಅವನ ಸಾಧನೆಯನ್ನು ತಗ್ಗಿಸಿ ಮಾತನಾಡಿದ ರವಿಶಂಕರರು “ನಾನು ಹಾಗೂ ನಿನ್ನ ತಾಯಿಯು ಒಂದೇ ಗುರುವಿನ ಬಳಿ ಕಲಿತದ್ದು. ಹಾಗಾಗಿ ನೀನು ನನ್ನ ಜೊತೆ ಬಂದರೆ ನಿನಗೆ ಕಲಿಸುತ್ತೇನೆ’ ಎಂದರು. ಅವರ ವೃತ್ತದಲ್ಲಿದ್ದ ಜನರು ಶುಭೋ ಆಗಲೇ ತಯಾರಾಗಿದ್ದಾನೆಂದೂ, ಆತ ತಂದೆಯ ಬಳಿ ವೇದಿಕೆಯಲ್ಲಿ ಕೂರಬೇಕೆಂದೂ ಅಭಿಪ್ರಾಯವ್ಯಕ್ತಪಡಿಸಿದರು. ನನ್ನ ಪ್ರತಿಕ್ರಿಯೆ ಹೀಗಿತ್ತು ‘ಅವರು ಕಲಿಸುತ್ತಾರೆ ನಿಜ. ಆದರೆ ಅವರಿಗೆ ಅದಕ್ಕೆ ಸಮಯವೆಲ್ಲಿದೆ? ಅವರು ಸದಾ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುತ್ತಾರೆ. ನೀನು ನನ್ನ ಬಳಿಯೇ ಇದ್ದು ಇನ್ನು ಉಳಿದಿರುವ ಒಂದೂವರೆ ವರ್ಷದ ತಾಲೀಮನ್ನು ಮುಗಿಸಿಕೊಂಡು ಹೋಗು. ಆಮೇಲೆ ಬೇಕಾದರೆ ನೀನು ಜಗತ್ತನ್ನೇ ಜಯಿಸಬಲ್ಲೆ, ಯಾರೂ ನಿನ್ನನ್ನು ನಿಲ್ಲಿಸಲಾರರು’ ಎಂದು. “ಈ ಹಂತದಲ್ಲಿಯೇ ಅವನ ನಿದ್ರೆಗುಳಿಗೆಯ ನಾಟಕ ನಡೆದದ್ದು. ಅದು ತಂದೆ ಮಗ ಮಾಡಿದ ವ್ಯವಸ್ಥಿತ ಸಂಚಾಗಿತ್ತು. ನನಗೆ ಮಸಿಮೆತ್ತಲು ಅಪ್ಪ ಹೂಡಿದ ನಾಟಕಕ್ಕೆ ಅಪ್ರಬುದ್ಧ ಮಗನೂ ಅರಿವಿಲ್ಲದಂತೆ ಪಾತ್ರಧಾರಿಯಾದ. ಅವನಿಗೆ ಅದು ನಂತರದಲ್ಲಿ ಅರಿವಾಗಿದ್ದಿರಬೆಕು. ಅನ್ಯಾಯವಾಗಿ ಸಾಯುವಕ್ಕಿಂತ ಸ್ವಲ್ಪ ತಿಂಗಳುಗಳ ಮೊದಲು ಆತ ತಂದೆಯೊಂದಿಗೆ ಮಾತು ಬಿಟ್ಟಿದ್ದ. ಆಗ ಏನಾಯಿತೆಂದು ಹೇಳುತ್ತೇನೆ.

“ಶುಭೋ ನಿದ್ರೆಗುಳಿಗೆಗಳನ್ನು ಸೇವಿಸಿದ್ದಾನೆಂದು ತಿಳಿದ ಕೂಡಲೇ ನಾನು ವೈದ್ಯರನ್ನು ಕರೆಯಿಸಿದೆ.ಅವನನ್ನು ಸಂಪೂರ್ಣವಾಗಿ ಪರೀಕ್ಷಿಸಿದ ವೈದ್ಯರು ಅವನಿಗೆ ಏನೂ ಆಗಿಲ್ಲವೆಂದು ಸ್ಪಷ್ಟಪಡಿಸಿದರು. ಇಡೀ ಮನೆಯನ್ನು ಹುಡುಕಿದರೂ ಆತ್ರ ನಿದ್ರೆಗುಳಿಗೆಯನ್ನು ಸೇವಿಸಿದ ಕುರುಹಾಗಿ ಬಾಟಲಿಯಾಗಲಿ ಅಥವಾ ಬೇರೇನೂ ಕಂಡುಬರಲಿಲ್ಲ. ಆಗ ಶುಭೋ ತಾನಾಗೇ ಅಪ್ಪನಿಗೆ ಫೋನ್ ಮಾಡಿ ತನ್ನನ್ನು ಕರೆದುಕೊಂಡು ಹೋಗುವಂತೆ ಕೇಳಿಕೊಂಡ, ರವಿಶಂಕರರಿಗೆ ನಾನು ‘ನನ್ನ ಜೀವನವನ್ನಂತೂ ಹಾಳುಮಾಡಿದಿರಿ. ನನ್ನ ಮಗನ ಜೀವನವಾನ್ನಾದರೂ ಉಳಿಸಿ. ನಿಮ್ಮ ದುರಾಸೆಗೆ ಬಲಿಕೊಡಬೇಡಿ. ಯಾಕೆ ಹೀಗೆ ಮಾಡುತ್ತಿರುವಿರಿ’ ಎಂದು ಕೈಮುಗಿದರೆ ‘ಯಾಕೆಂದರೆ ನಿನ್ನ ದೆಸೆಯಿಂದ’ ಎನ್ನುವುದಷ್ಟೇ ಅವರ ಉತ್ತರವಾಗಿತ್ತು!

“ನನಗೆ ಇವತ್ತಿನವರೆಗೂ ಪಂಡಿತ್’ಜೀ ಅವರ ಈ ನಡೆಯ ಹಿಂದಿನ ಉದ್ದೇಶ ಅರ್ಥವಾಗಿಲ್ಲ. ಶುಭೋನ ತಾಲೀಮನ್ನು ಹಾಳುಮಾಡುವ ದುರುದ್ದೇಶ ಅವರಿಗೆ ಯಾಕಿತ್ತು? ಹೆಚ್ಚಾಗಿ ಅದು ಹೀಗಿರಬೇಕು. ಶುಭೋನ ತಾಲೀಮು ಹೇಗೆ ನಡೆಯುತ್ತಿತ್ತೆಂದರೆ ಆತ ತನ್ನ ತಂದೆಯನ್ನೂ ಮೀರಿಸುತ್ತಾನೆ ಎಂಬಂತ ವದಂತಿಗಳು ಆಗ ಹರಿದಾಡುತ್ತಿದ್ದವು. ಅದು ನಾನು ರವಿಶಂಕರರ ಮೇಲೆ ತೀರಿಸಿಕೊಳ್ಲುವಂತಹ ಸೇಡು ಎಂಬ ಅಭಿಪ್ರಾಯ ಜನವಲಯದಲ್ಲಿತ್ತು. ನನಗೆ ಅದೇ ಅರ್ಥವಾಗುವುದಿಲ್ಲ.ಶುಭೋ ಒಂದುವೇಳೆ ಅತ್ಯುತ್ತಮ ಸಂಗೀತಗಾರನಾಗಿದ್ದರೂ ಅದರಿಂದ ಯಾರಿಗೆ ಏನು ತಾನೆ ನಷ್ಟವಾಗುತ್ತಿತ್ತು? ನಮ್ಮ ಸಂಗೀತ ಬಾಬಾನ ಕೊಡುಗೆ. ಎಲ್ಲ ಶ್ರೇಯಸ್ಸುಗಳು ಅವರಿಗೆ ಸಲ್ಲಬೇಕಾದದದ್ದೇ ಹೊರತು ಬೇರಾರಿಗೂ ಅಲ್ಲ”.

“ಪಂಡಿತ್’ಜೀಗೆ ಅವರ ಸಾರ್ವಜನಿಕ ಇಮೇಜ್ ಕುರಿತು ತುಸು ಹೆಚ್ಚೇ ಅನಿಸಬಹುದಾದ ಎಚ್ಚರಿಕೆಯಿದೆ. ಸದ್ಯದಲ್ಲಿ ಪ್ರಕಟವಾದ ನನ್ನ ಕುರಿತಾದ ಪುಸ್ತಕವು ಹಲವಾರು ಸತ್ಯಗಳನ್ನು ಅನಾವರಣ ಮಾಡುವ ಮೂಲಕ ಅವರ ವ್ಯಕ್ತಿತ್ವಕ್ಕೆ ಘಾಸಿ ಮಾಡಿದೆ. ಹಾಗಾಗಿ ಅವರು ತಮ್ಮೆಲ್ಲ ಲೇಖನಗಳಲ್ಲಿ ಹಾಗೂ ಇತರ ನಡೆಗಳಲ್ಲಿ ಆ ನಷ್ಟವನ್ನು ಸರಿದೂಗಿಸಿ ತನ್ನ ವ್ಯಕ್ತಿತ್ವವನ್ನು ರಕ್ಷಿಸಿಕೊಳ್ಳಲು ಹಾಗೂ ತಾನು ತನ್ನ ಮಗನಿಗೆ ಎಸಗಿದ ಒಟ್ಟು ಅನ್ಯಾಯದ ಬಗೆಗಿನ ತಪ್ಪಿತಸ್ಥ ಮನೋಭಾವವನ್ನು ಹೋಗಲಾಡಿಸಲು ಯತ್ನಿಸುತ್ತಿದ್ದಾರೆ. ಅವರು ತನಗೆ ಎಸಗಿದ ಅನ್ಯಾಯದ ಬಗ್ಗೆ ಶುಭೋವಿಗೂ ಅರಿವಾಗಿತ್ತು. ಹಾಗಾಗಿ ತನ್ನ ಜೀವಿತಾವಧಿಯ ಕೊನೆಯ ಕೆಲ ತಿಂಗಳುಗಳಲ್ಲಿ ಆತ ಅವರನ್ನು ನೋಡಲು ಹಾಗೂ ಮಾತನಾಡಿಸಲು ನಿರಾಕರಿಸಿದ್ದ. ಶುಭೋ ಆಗಲೇ ಅತ್ಯುತ್ತಮವಾಗಿ ನುಡಿಸುತ್ತಿದ್ದ. ಉಳಿದಿದ್ದ ತಾಲೀಮನ್ನು ಆತ ಪೂರ್ತಿಗೊಳಿಸಿದ್ದರೆ ಆತ ವಿಶ್ವವಿಖ್ಯಾತ ಸಂಗೀತಗಾರನಾಗುತ್ತಿದ್ದ. ಆದರೆ ಹಲವಾರು ಸಂಗತಿಗಳು ಆತ ಹಾಗಾಗುವುದನ್ನು ತಪ್ಪಿಸಿದವು.ಆತ ಅಕಾಲದಲ್ಲಿ ದುರಂತ ಸಾವನ್ನೂ ಕಾಣಬೇಕಾಯಿತು”.

ಸತ್ಯವೇನೆಂದರೆ ತನ್ನ ಅಪಾರ ಪ್ರತಿಭೆಯ ಹೊರತಾಗಿಯೂ, ಶುಭೋ ಗಳಿಸಬೇಕಾದಷ್ಟು ಮನ್ನಣೆಯನ್ನು ಗಳಿಸಲಿಲ್ಲ. ರವಿಶಂಕರರು ಅಮೆರಿಕದಲ್ಲಿ ಆತನಿಗೊಂದು ಸಣ್ಣ ಅಪಾರ್ಟ್’ಮೆಂಟ್ ಹಾಗೂ ಫೋರ್ಡ್ ಕಾರೊಂದನ್ನು ತೆಗೆಸಿಕೊಟ್ಟರು. ಅಮೆರಿಕ ಸೇರಿದ ಎರಡು ವರ್ಷದೊಳಗಾಗಿ ಆತ ವಿಶ್ವ ವಿಖ್ಯಾತ “ಕಾರ್ನಿಗಿ ಹಾಲ್”ನಲ್ಲಿ ತಂದೆಯೊಂದಿಗೆ ಕಛೇರಿ ಕೊಟ್ಟ. ಆದರೂ ಕ್ರಮೇಣ ಸಿತಾರ್ ಮೇಲೆ ಆತ ಆಸಕ್ತಿ ಕಳೆದುಕೊಂಡ. ಯಾವಾಗಲೂ ಧೃಡ ಮನೋಭಾವವನ್ನು ಹೊಂದಿರದಿದ್ದ ಆತ ಅಮೆರಿಕದಲ್ಲಿ ಕೋಕೋ ಕೋಲಾ ಹಾಗೂ ಜಂಕ್’ಫುಡ್’ನತ್ತ ಅತೀವವಾದ ಮೋಹವನ್ನು ಬೆಳೆಸಿಕೊಂಡ. ಎಂಟು ವರ್ಷಗಳ ಕಾಲ ಆತ ಸಿತಾರ್ ನುಡಿಸುವುದನ್ನೇ ಬಿಟ್ಟುಬಿಟ್ಟ! ತನ್ನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಆತ ಯಾವ್ಯಾವುದೋ ಕಡೆ ಕೆಲಸ ಮಾಡಿದ. ಕೆಲಕಾಲ ಹೆಂಡದಂಗಡಿಯಲ್ಲಿ ಕೂಡ ಗುಮಾಸ್ತನಾಗಿ ದುಡಿದ! ಆಮೇಲೆ ಅಲ್ಲಿಯೇ ಲಿಂಡಾ ಎಂಬಾಕೆಯನ್ನು ಮದುವೆಯಾಗಿ ಸೋಮ್ ಎಂಬ ಮಗನನ್ನು ಹಾಗೂ ಕಾವೇರಿ ಎಂಬ ಮಗಳನ್ನು ಪಡೆದ.

ಎಂಟು ವರ್ಷಗಳ ನಂತರ ಆತ ಮತ್ತೆ ಸಿತಾರ್ ನುಡಿಸಲು ಪ್ರಾರಂಭಿಸಿದ. ಕಛೇರಿ ನೀಡಲೆಂದು ತನ್ನ ತಂದೆಯೊಂದಿಗೆ ಭಾರತಕ್ಕೆ ಬಂದ. ಅದು ಭಾರತಕ್ಕೆ ಅವನ ಕೊನೆಯ ಭೇಟಿಯೂ ಆಗಿತ್ತು. ಆಗ ಅವನು ತನ್ನ ತಾಯಿಯನ್ನು ಭೇಟಿಯಾದ . ಅನ್ನಪೂರ್ಣದೇವಿಯ ಹಿರಿಯ ಶಿಷ್ಯರಾದ ಮದನಲಾಲ್ ವ್ಯಾಸ್’ರವರು ಹೇಳುತ್ತಾರೆ “ಈ ದೃಶ್ಯವನ್ನು ನೀವೇ ಕಲ್ಪಿಸಿಕೊಳ್ಳಿ. 20  ವರ್ಷಗಳ ಕಾಲ ಯಾವ ಸಂಪರ್ಕವೂ ಇಲ್ಲದ ತಾಯಿ ಹಾಗೂ ಮಗ ಈಗಷ್ಟೇ ಭೇಟಿಯಾಗಿದ್ದಾರೆ. ಮಗ ತಾಯಿಗೆ ನಮಸ್ಕರಿಸುತ್ತಾನೆ. ಅವರು ಮಗನನ್ನು ಹತ್ತಿರ ಕರೆದು ಪ್ರೀತಿಯಿಂದ ತಲೆಸವರುತ್ತ “ಬಾ ಬಾ ಮಗು,ಹೇಗಿದ್ದಿ? ನಿನ್ನ ಹೆಂಡತಿ ಮಕ್ಕಳು ಹೇಗಿದ್ದಾರೆ?” ಎಂದು ಕೇಳುತ್ತಾರೆ. “ಅಮ್ಮ, ನಾನು ನಿನ್ನ ಬಳಿ ಮತ್ತೆ ಕಲಿಯಬೇಕು” ಎಂದು ಆತ ಕೇಳಿಕೊಳ್ಳುತ್ತಾನೆ.”ಒಳ್ಳೆಯದು, ಆಗಲಿ, ನಿನ್ನ ಸಿತಾರ್ ಹೇಗೂ ಇದೆಯಲ್ಲ.ತೆಗೆದುಕೋ, ಕೂರು, ಕಲಿಸುತ್ತೇನೆ” ಎಂದು ಇವರು ಹೇಳುತ್ತಾರೆ. ತಾಯಿ ಹಾಗೂ ಮಗ ಇಬ್ಬರೂ ಅಷ್ಟು ವರ್ಷ ಏನೂ ಆಗದವರ ಹಾಗೆ ಕುಳಿತು ಸಂಗಿತ ತರಬೇತಿಯಲ್ಲಿ ತಲ್ಲೀನರಾಗುತ್ತಾರೆ!”

ಮದನಲಾಲ್ ವ್ಯಾಸರು ಹೇಳುತ್ತಾರೆ “ರವಿಶಂಕರ್ ಹಾಗೂ ಶುಭೋ 1990ರ ಸವಾಯಿ ಗಂಧರ್ವ ಸಂಗೀತ ಉತ್ಸವದಲ್ಲಿ ಒಟ್ಟಿಗೆ ನುಡಿಸಿದ್ದರು. ಕಾರ್ಯಕ್ರಮ ಮುಗಿದ ನಂತರ ‘ಶುಭೋ ಕಾರ್ಯಕ್ರಮದ ಪೂರ್ತಿ ಬೇಸುರ್ ನುಡಿಸಿದ’ ಎಂಬ ಸುದ್ಧಿ ಬಂದಿತು. ಕೇವಲ ಒಬ್ಬಿಬ್ಬರ ಬಾಯಲ್ಲಿ ಮಾತ್ರವಲ್ಲ, ಎಲ್ಲರ ಬಾಯಲ್ಲೂ ಕೂಡ. ನಾನು ಆಮೇಲೆ ರೆಕಾರ್ಡಿಂಗ್’ನ್ನು ಕೇಳಿದೆ. ಆ ವದಂತಿ ಅಪ್ಪಟ ಸುಳ್ಳಾಗಿತ್ತು. ಶುಭೋ ಅದ್ಭುತವಾಗಿಯೇ ನುಡಿಸಿದ್ದ. ಆದರೆ ಅಷ್ಟರಲ್ಲಾಗಲೇ ವದಂತಿಯು ಹಬ್ಬಿ ಶುಭೋನ ಇಮೇಜ್’ಗೆ ಸಾಕಷ್ಟು ಧಕ್ಕೆಯುಂಟಾಗಿತ್ತು. ಅವನ ವಿರುದ್ಧ ವ್ಯವಸ್ಥಿತ ಸಂಚನ್ನು ಹೆಣೆದಿದ್ದರು. ಅದರಿಂದ ಬಿಡಿಸಿಕೊಳ್ಳಲು ಅವನಿಗೆ ಸಾಧ್ಯವಾಗಲೇ ಇಲ್ಲ. ಅವನ ಮೈಕ್ರೋಫೋನನ್ನೂ ಕೂಡ ಟ್ಯಾಂಪರ್ ಮಾಡಿದ್ದರು ಎಂಬ ವದಂತಿಯಿದೆ. ಇವೆಲ್ಲ ಇರಲಿ, ಆತನೊಬ್ಬ ಅದ್ಭುತ ಸಿತಾರ್ ವಾದಕನಾಗಿದ್ದ. ನಾನೊಮ್ಮೆ ನೇಪಿಯರ್ ಸೀ ರೋಡ್’ನಲ್ಲಿ ಆತನ ಕಛೇರಿಯನ್ನು ಕೇಳಿದ್ದೆ. ಶುಭೋ ದೇಸ್ ರಾಗವನ್ನು ಎಷ್ಟು ಅದ್ಭುತವಾಗಿ ನುಡಿಸಿದ್ದನೆಂದರೆ ಅಷ್ಟು ಶ್ರೇಷ್ಠ ದೇಸ್ ರಾಗದ ನುಡಿಸಾಣಿಕೆಯನ್ನು ನಾನದರ ಹಿಂದೆಯೂ ಅಥವಾ ಆಮೇಲೂ ಕೇಳಿಲ್ಲ. ಕಛೇರಿಯ ನಂತರ ನಾನು ಅದರ ಬಗ್ಗೆ ಅವನ ಹತ್ತಿರ ಮಾತನಾಡಿದೆ. ಅದನ್ನು ಆತ ಆದಿನ ಬೆಳಿಗ್ಗೆಯಷ್ಟೇ ತನ್ನ ತಾಯಿಯಿಂದ ಕಲಿತಿದ್ದನಂತೆ!”

“ತನ್ನ ತಾಯಿಯನ್ನು ಭೇಟಿಯಾದಾಗ ಆತ ಜೀವನದಲ್ಲಿ ಸಾಕಷ್ಟು ಪ್ರಪಾತಕ್ಕೆ ಕುಸಿದಿದ್ದ ಹಾಗು ಸೋಲೊಪ್ಪಿಕೊಂಡಿದ್ದ” ಎಂದು ಅತುಲ್ ಮರ್ಚೆಂಟ್’ರವರು ನೆನೆಯುತ್ತಾರೆ.”ಭಾರತದಲ್ಲೇ ಇದ್ದು ಬಾಕಿ ಉಳಿದ  ಅವನ ಸಿತಾರ್ ಶಿಕ್ಷಣವನ್ನು ಪೂರ್ತಿಗೊಳಿಸುವಂತೆ ಆವನ ಮನವೊಲಿಸಲು ನಾವು ಪ್ರಯತ್ನಿಸಿದೆವು. ‘ಅದಕ್ಕೆಲ್ಲ ಈಗ ತೀರಾ ತಡವಾಗಿಬಿಟ್ಟಿದೆ’ ಎಂದು ಹೇಳಿ ಆತ ಅಮೆರಿಕಕ್ಕೆ ಹೊರಟುಹೋದ. ತನ್ನ ಜೀವನದ ಕೊನೆ ದಿನಗಳಲ್ಲಿ ಎಲ್ಲರ ಸಂಪರ್ಕವನ್ನೂ ಕಳೆದುಕೊಂಡು ಒಂಟಿಯಾದ. ಶ್ವಾಸಕೋಶದ ನ್ಯುಮೋನಿಯಾಗೆ ತುತ್ತಾಗಿ ಅಮೆರಿಕೆಯ ಒಂದು ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 15,1992 ರಂದು ಅಕಾಲ ಮರಣಕ್ಕೆ ತುತ್ತಾದ” ಅಲ್ಲಿಗೆ ವಿಶ್ವಶ್ರೇಷ್ಠ ಸಂಗೀತಗಾರನಾಗಬಹುದಾಗಿದ್ದ ಪ್ರತಿಭೆಯೊಂದನ್ನು ಜಗತ್ತು ಅನ್ಯಾಯವಾಗಿ ಕಳೆದುಕೊಂಡಿತು.

2000 ನೇ ಇಸವಿ, ಸೆಪ್ಟೆಂಬರ್ ತಿಂಗಳ “Man’s world “ ಸಂಚಿಕೆಯಿಂದ

ಲೇಖಕರು: ಆಲೀಫ್

ಕನ್ನಡಕ್ಕೆ: ಸಂದೀಪ್ ಹೆಗಡೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!