ಅಂಕಣ

ಮೋಸವಾಗದಿರಲಿ ಮೋದಿಗೆ..

ಸನ್ಮಾನ್ಯ ಪ್ರಧಾನ ಮಂತ್ರಿಗಳೇ,

ಅಲ್ಲಾ! ಮೋದಿ ಸಾಹೇಬರೇ ಯಾಕೆ ಸುಮ್ನೆ ಇಷ್ಟೊಂದು ಕೆಲಸ ಮಾಡ್ತೀರಾ ನೀವು?? ಅಲ್ಲಾ ಸ್ವಾಮೀ ಎರಡು ವರ್ಷದಲ್ಲಿ ಒಂದು ರಜೆ ತಗೊಳ್ದೆ! ಅದ್ಯಾಕ್ರೀ ಕೆಲಸ ಮಾಡ್ತೀರಾ? ನಿಮಗೆ ಮಾಡೋಕೆ ಬೇರೆ ಕೆಲಸಾನೇ ಇಲ್ವೇನ್ರೀ?? ಅಷ್ಟೊಂದು ಕೆಲಸ ಅದೇನ್ರೀ ಮಾಡ್ತೀರಾ ನೀವು?? ಸುಮ್ನೆ ದೇಶ ದೇಶ ಅಂದ್ಕೊಂಡು ಯಾಕ್ರೀ ಸುಮ್ನೆ ಅಷ್ಟೊಂದು ಕೆಲಸ ಮಾಡ್ತೀರಾ ನೀವು?? ನೀವು ಇದನ್ನೆಲ್ಲ ಅದೇನೋ ಸ್ಕೋಪ್ ತಗೋಳೋಕೆ ಮಾಡ್ತಿದೀರಾ ಅನ್ನೋ ಫೈನಲ್ ಚಿಂತನೆನಾ ನೀವು ಅಧಿಕಾರ ವಹಿಸಿಕೊಂಡ ದಿನನೇ ನಮ್ಮ ಜನ (ಅ)ಸಾಮಾನ್ಯ ನಿರ್ಧಾರ ಮಾಡಿಯಾಗಿದೆ. ನೀವೋ ದೇಶ ದೇಶ ಅಂದ್ಕೊಂಡು ಒಂದು ಸೆಕೆಂಡ್ ಅನ್ನೂ ಹಾಳುಗೆಡವದೇ ಕೆಲಸ ಮಾಡ್ತೀರಾ..ಅಲ್ರೀ ಯಾಕ್ರೀ ಇಷ್ಟೊಂದೆಲ್ಲಾ ಮಾಡ್ತೀರಾ, ಅದೆಂತಾ ದರ್ದು ನಿಮಗೆ ಮಾರ್ರೆ… ??

ಗುಜರಾತ್’ನಲ್ಲಿ ಅಷ್ಟೊಂದು ಕೆಲಸ ಮಾಡಿದ್ರಿ…ಭಾರತದಲ್ಲಿ ಗುಜರಾತ್ ಎಂದರೆ ಅದೇನೋ ಬ್ರಾಂಡ್ ಸೃಷ್ಟಿಸಿ ಬಿಟ್ಟಿದ್ದಿರಿ ನೀವು..ನಿಮ್ಮ ಗುಜರಾತ್ ನೋಡಿ ಕೇವಲ ಭಾರತದ ಜನ ಖುಷಿ ಪಡಲಿಲ್ಲ ಬದಲಾಗಿ ದೂರದ ಚೈನಾ, ಜಪಾನ್’ನ ಉದ್ಯಮಿಗಳು ಎಲ್ಲಾ ಬಂದು ಹೂಡಿಕೆ ಮಾಡಿ ಶಹಬ್ಬಾಸ್ ಮಾಡಿದ್ರು…ಅದೇನೋ ಮಂತ್ರ ಜಪಿಸಿದ್ದೀರಂತೆ ನೀವು..ಥೋ ಮಂತ್ರ ಅಂದ್ರೆ ನಿಮ್ಮನ್ನ ಬ್ರಾಹ್ಮಣರ ಪರ ಅಂದ್ಕೊಂಡು ನಾಳೇನೇ ಸರ್ದೀಪ್ ಸಾಹೇಬರು #IamAntiBrahmin ಅನ್ನೋ ಹ್ಯಾಶ್  ಟ್ಯಾಗ್ ಹಾಕಿ ಟ್ವಿಟರ್ ಟ್ರೆಂಡ್ ಮಾಡೋಕೆ ಶುರು ಮಾಡಿಬಿಡ್ತಾರೆ…ನೀವು ಜಪಿಸಿದ್ದು ಅಭಿವೃದ್ಧಿ ಮಂತ್ರ ಅಂದ್ರೆ ನಂಬೋಕು ತಯಾರಿರದ ಜನ ಅವ್ರು…ಬಿಡಿ..ಅಲ್ಲಾ ಪ್ರಧಾನ ಮಂತ್ರಿಗಳೇ ತೆಪ್ಪಗೆ ಗುಜರಾತ್’ನಲ್ಲಿ ಮುಖ್ಯಮಂತ್ರಿ ಆಗಿದ್ದರೆ ನಿಮ್ಮನ್ನ ವಾರಕ್ಕೊಂದ್ಸಲ ಬೈತಿದ್ರು ಈ ಆಂಟಿ ನ್ಯಾಶನಲಿಸ್ಟಗಳು (Antinationalist ಓದ್ಕಳಿ) ಆದರೆ ಅದ್ಯಾವ್ ಗಳಿಗೆಲೀ ತಗಲಾಕ್ಕೊಂಡ್ರೀ ನೀವು? ದಿನಾ ನಿಮ್ಮನ್ನ ಬೈಯ್ಯೋದೆ ಕೆಲಸ ಅವ್ರಿಗೆ ಈಗ..

ಕಳೆದ ಎರಡು ವರ್ಷದಿಂದ ಒಂದೇ ಒಂದು ಭ್ರಷ್ಟಾಚಾರ ಮಾಡಿಲ್ವಲ್ರೀ,ರಾಜಕಾರಣೀ ಅಂತ ಅನ್ನಿಸ್ಕೋಳ್ಳೋಕೆ ಲಾಯಕ್ಕಿಲ್ಲ ಬಿಡಿ ನೀವು. ಇದನ್ನೆಲ್ಲ ನಿಮಗೆ ನಿಮ್ಮ ಅಜ್ಜ,ಅಜ್ಜಿ,ಅಮ್ಮ,ಅಪ್ಪ ಯಾರೂ ಹೇಳಿಕೊಟ್ಟಿಲ್ವೇನ್ರಿ.? ಅಯ್ಯೋ!!! ನೀವು ಯಾವುದೇ ರಾಜಕೀಯ ಹಿನ್ನೆಲೇನೇ ಇಲ್ದೋರು ಅಲ್ವ..ಅದೆಲ್ಲಾ ಇಲ್ದೇ ಈ ಫೀಲ್ಡ್’ ಗೆ ಬರಬಾರದು ಕಣ್ರೀ ಪ್ರಧಾನಮಂತ್ರಿಗಳೇ. ನಮ್ಮ ದೇಶದಲ್ಲಿ ಹೆಂಗೆ ಅಂದ್ರೆ ಅಪ್ಪನೋ ಅಜ್ಜನೋ ನಿರ್ಮಿಸಿದ ಸೌಧದಲ್ಲಿ ಅಜ್ಜಂದೋ ಅಪ್ಪಂದೋ ಬೋರ್ಡ ಹಾಕ್ಕೊಂಡು ಆಡಳಿತ ಮಾಡೋರಿಗೆ ಮರ್ಯಾದೆ ಜಾಸ್ತಿ..ಅಲ್ಲಪ್ಪ ನೀನು ಒಂದು ನಿಮಿಷನೂ ಬಿಡದೇ ದೇಶದ ಬಗ್ಗೆ ಮಾತ್ರ ಯೋಚನೆ ಮಾಡ್ತೀಯಾ, ಹಿಂಗೆಲ್ಲಾ ಇರಬಾರದು ಅವಾಗಾವಾಗ ಇದ್ದಕ್ಕಿದ್ದಂಗೆ ನಾಪತ್ತೆ ಆಗ್ಬೇಕು..ಬರೆದುಕೊಟ್ಟ ಭಾಷಣನಾ ಚೂರು ಆಚೀಚೆ ಮಾಡದೇ ಓದಬೇಕು..ಅದೇನಾದ್ರು ಇರ್ಲಿ ಆ ಭಾಷಣದಲ್ಲಿ ತಲೆಕೆಡಿಸ್ಕೋಬಾರದು. ಓದ್ತಾ ಇರ್ಬೇಕು ಅಷ್ಟೇ..ಚಪ್ಪಾಳೆ ತಟ್ಟೋಕೆ, ಸೀಟಿ ಹೊಡೆಯೋಕೆ ಜನಾನಾ ಕರ್ಕೊಂಡು ಬಂದಿರ್ತಾರೆ ಬಕೆಟ್ ಹಿಡಿಯೋ ಜನ..ನೀವೋ, ಸಿಕ್ಕಾಪಟೆ ಫೀಲಿಂಗ್’ನಲ್ಲಿ ಭಾಷಣ ಮಾಡ್ತೀರಾ,ಯಾಕೆ ಸುಮ್ನೆ ಅಷ್ಟೊಂದು ಕಷ್ಟಪಡ್ತೀರಾ??

ಸ್ವಲ್ಪ ಯೋಚಿಸಿ ಅಧಿಕಾರ ಸಿಗೋದು ತೀರ ಅಪರೂಪ, ಅದು ನಿಮಗೆ ಸಿಕ್ಕಿದೆ ನೀವು ಆ ಅಧಿಕಾರನಾ ಸರಿಯಾಗಿ ಉಪಯೋಗಿಸಿಕೊಂಡು ಏನೋ ಬದಲಾವಣೆ ಮಾಡ್ತೀನಿ ಅಂತಾ ಹೊರಟ್ರೆ ನಾಳೆ ಅಧಿಕಾರ ಮುಗದ್ಮೇಲೂ ನೀವು ಬದುಕಬೇಕು ಅಲ್ವಾ? ಹಾಗಾಗಿ ಅಲ್ಪ ಸ್ವಲ್ಪ ಅಧಿಕಾರ ದುರುಪಯೋಗ ಮಾಡ್ಕೊಂಡು ಸ್ವಲ್ಪ ಕಾಸು ಮಾಡ್ಕೋಳಿ..ನಮ್ಮ ಜನಕ್ಕೆ ನೀವು ಎಷ್ಟು ಕೆಲಸ ಮಾಡಿದ್ರು ಸಾಕಾಗಲ್ಲ, ನೀವು ಈ ಜನರ ಕಣ್ಕಟ್ಟೋ ಕೆಲಸ ಮಾಡಿ ಒಂದಿಷ್ಟು ಹಣನಾ ಬಾಚ್ಕೋಬೇಕು…ಅಂದಾಗೇ ನೀವು ಆ ಮೀಡಿಯಾದವ್ರನ್ನಾ ಯಾಕೇ ಸುಮ್ನೆ ಎದುರು ಹಾಕ್ಕೋತೀರಾ..ಅವ್ರಿಗೆಲ್ಲ ಮುಂಚಿನ ಸರಕಾರ ನೀಡಿದ ಹಾಗೆ ಒಂದಿಷ್ಟು ಬಿಟ್ಟಿ ಸವಲತ್ತು ನೀಡಿ ನಿಮ್ಮ ಸುತ್ತ ಹೊಗಳು ಭಟರ ತರ  ಬಿಟ್ಕೋಳಿ..ಅವಾಗಾ ನೋಡಿ ಅವರು ನಿಮ್ಮನ್ನ ಹೊಗಳೋ ಕೆಲಸಾನೇ ಮಾಡ್ತಾರೆ.

ಮೋದಿ ಅವರೇ, ಈ ದೇಶದಲ್ಲಿ ಏನೇ ಕೆಟ್ಟದ್ದಾದ್ರೂ ಅದಕ್ಕೆ ನೀವೇ ಕಾರಣ ಅಂತ ಸೋ ಕಾಲ್ಡ್ ಜಾತ್ಯಾತೀತ ಮಾಧ್ಯಮದ ಬಂಧುಗಳು ಮತ್ತು ಮಹಾನ್ ಬುದ್ಧಿಜೀವಿಗಳು ತೀರ್ಮಾನಿಸಿ ಬಿಡುತ್ತಾರೆ. ಪಾಪ ನೀವೋ ನನ್ನ ಭಾರತ ಸಹಿಷ್ಣು ಎಂದು ವಿಶ್ವಕ್ಕೆ ಸಾರುತ್ತ ನಿಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದೀರಾ. ಇನ್ನು ಕೆಲವು ಹಿಂದೂ ಮೂಲಭೂತವಾದಿಗಳ ಹದ್ದು ಮೀರಿದ ವರ್ತನೆಗಳು, ಕೊಚ್ಚುತ್ತೇವೆ ಕಡಿಯುತ್ತೇವೆ ಎಂಬ ಹೇಳಿಕೆಗಳು..ಒಂದೋ ಎರಡೋ??ನೀವು ನಿಮ್ಮ ಮನದ ಮಾತನ್ನು, ದೇಶದ ಪ್ರಸ್ತುತ ವಿಚಾರವನ್ನು “ಮನ್ ಕೀ ಬಾತ್” ಮೂಲಕ ಹೊರಹಾಕಿದಾಗಲೆಲ್ಲ ಕಮ್ಯುನಿಸ್ಟರು, ತಲೆಹಿಡುಕ ಎಡಪಂಥೀಯರು ದೇಶದ್ರೋಹಿ ಘೋಷಣೆಯನ್ನು  ಹೆಚ್ಚಿಸಿದ್ದಾರೆಯೇ ಹೊರತು ಅವರು ಭಾರತಕ್ಕಾಗಿ ಬದಲಾಗುತ್ತಿಲ್ಲ.. ಅವರ ಮನದೊಳಗೆ ಮೋದಿ ಎಂದರೆ ನರಹಂತಕ ಎಂದು ಆಗಲೇ ತೀರ್ಮಾನಿಸಿಯಾಗಿದೆ..ನೀವೂ ಕೂಡ ದಲಿತರು, ಅಲ್ಪಸಂಖ್ಯಾತರ ಹೆಸರಲ್ಲಿ ರಾಜಕಾರಣ ಮಾಡಲು ಶುರು ಮಾಡಿ ಆಗ ನಿಮ್ಮನ್ನು ಅವರು ನೋಡುವ ನೋಟವೇ ಬೇರೆಯಾಗುತ್ತದೆ..ನೀವು ಅದೆಷ್ಟೋ ಹಳೆಯ ರಾಜಕಾರಣಿಗಳಂತೆ ಭಾಷಣ ಮಾಡಿ, ಜಾತಿ ಧರ್ಮದ ಆಧಾರದ ಮೇಲೆ ಜನರ ಮನಸ್ಸನ್ನು ಒಡೆದು ಆಳಿದರೆ ಮಾತ್ರ ಅವರೆಲ್ಲರಿಗೆ ಖುಷಿಯಾಗೋದು. ಅದರಲ್ಲೂ ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಜನಸಾಮಾನ್ಯರಿಗೆ ಬೇಕಿರುವುದೇ ಅದು. ಖಾಲಿ ಪುಕ್ಸಟ್ಟೆ ಒಂದಷ್ಟು ಸವಲತ್ತುಗಳನ್ನು ನೀವು ನೀಡಿದಷ್ಟೂ ಅವರು ನಿಮ್ಮನ್ನು ಒಪ್ಪುತ್ತಾರೆ ಮತ್ತು ಆಗ ಅವರೆಲ್ಲರಿಗೂ ಮೋದಿ ಕೆಲಸ ಮಾಡ್ತಾ ಇದಾರೆ ಅಂತ ಅನ್ನಿಸೋದು. ಆದರೆ ನಿಮ್ಮದೋ ಸ್ವಾವಲಂಭನೆಯ ಸಮೃದ್ಧ ಭಾರತವನ್ನು ಕಟ್ಟುವ ಹಂಬಲ. ಅದಕ್ಕಾಗಿ ಅದೇನೋ ಸಂಪನ್ಮೂಲಗಳ ಕ್ರೋಢಿಕರಣಕ್ಕೆ ನೀವು ವಿದೇಶ ಸುತ್ತಿದರೆ ದೇಶದಲ್ಲಿರುವ ಸ್ವಯಂ ಘೋಷಿತ ಯಶಸ್ವೀ ರಾಜಕಾರಣಿಗಳು ನಿಮ್ಮನ್ನು ಜನರ ಹಣದಲ್ಲಿ ಮಜಾ ಮಾಡ್ತೀರೊ ಪ್ರಧಾನಿ ಎಂದು ಒಂದಷ್ಟು ಅಪಪ್ರಚಾರ ಮಾಡ್ತಾರೆ…ಮೂರೊತ್ತು ದೇಶ ದೇಶ ಎನ್ನೋ ನಿಮಗೆ ಕೊನೆಯದಾಗಿ ಜನ ನೀಡೋ ಪಟ್ಟ ಕೂಡ ಇದೇ ಆಗಿಬಿಟ್ಟರೆ? ಅರವತ್ತು ವರ್ಷಗಳ ಕಾಲ ಇದ್ದು ಸತ್ತಂತಿದ್ದ ಭಾರತಕ್ಕೆ ವಿಶ್ವಮಟ್ಟದಲ್ಲಿ ಮನ್ನಣೆ ದೊರಕಿಸಿ ಕೊಡೋ ನಿಮ್ಮ ಪ್ರಯತ್ನಕ್ಕೆ ಜಯ ಸಿಗಬಹುದು ಆದರೇ ಒಡೆದು ಆಳುವ ಮತ್ತು ಭ್ರಷ್ಟ ಮನಸ್ಥಿತಿಯ ರಾಜಕಾರಣಿಯ ಅಂಶಗಳಿಲ್ಲದೇ ಮತ್ತೆ ನಿಮಗೆ ಈ ಅತೀಬುದ್ದಿವಂತ ಜನ ಮತ ಹಾಕುವುದು ಕಷ್ಟವೇ ಸರಿ. ಪ್ರಧಾನಿಗಳೇ ಇವರನ್ನು ಒಡೆದು ಆಳಿದಷ್ಟೂ ಇವರು ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ..ಇವರಿಗೆ ಬಿಟ್ಟಿ ಸವಲತ್ತು ಕೊಟ್ಟು ಸದಾ ಕಾಲ ಕೂತು ಉಣ್ಣುವ ಪರಿಸ್ಥಿತಿ ನಿರ್ಮಿಸಿಕೊಟ್ಟರೆ ನಿಮ್ಮನ್ನು ಕೊಂಡಾಡುತ್ತಾರೆ.

2014ರ ಸೆಪ್ಟೆಂಬರ್’ನಿಂದ ಈ ದೇಶದಲ್ಲಾಗುವ ಎಲ್ಲ ಕೋಮುಗಲಭೆಗೆ ನೀವೇ ಕಾರಣ ಎಂದು ಆಗಲೇ ಸೋ ಕಾಲ್ಡ್ ಪತ್ರಕರ್ತರು ತೀರ್ಮಾನಿಸಿಯಾಗಿದೆ. ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಬೀದಿಗೆ ಬಿದ್ದ ಅದೆಷ್ಟೋ ಕಾಶ್ಮೀರೀ ಪಂಡಿತರ ಕಷ್ಟಕ್ಕಿಂತ ದಾದ್ರಿಯಲ್ಲಾದ ಆ ಘಟನೆ ಇವರಿಗೆ ಪ್ರಮುಖವಾಗುತ್ತದೆ.. ರಾಷ್ಟ್ರದ ಪರ ಎಂಬ ಒಂದೇ ಕಾರಣಕ್ಕೆ  ದಿನಕ್ಕೊಂದರಂತೆ ಕೊಲೆ ಆಗುತ್ತಿರುವ ಕೇರಳದ ಸಂಘದ ಬಡ ಕಾರ್ಯಕರ್ತರ ಕೊಲೆಗಳಿಗಿಂತ ಪರಿಸ್ಥಿತಿಯ ಎದುರಿಸಲಾಗದೆ ನಿಗೂಢವಾಗಿ ಸತ್ತ ರೋಹಿತ್ ವೇಮೂಲ ಸಾವು ಈ ಮೀಡಿಯಾ ಮಂದಿಗೆ ಮತ್ತು ಬುದ್ದಿಜೀವಿಗಳಿಗೆ ಪ್ರಮುಖವಾಗುತ್ತದೆ..ದೇಶವನ್ನೇ ತನ್ನ ಸರ್ವಾಧಿಕಾರದ ಕಪಿಮುಷ್ಟಿಯಲ್ಲಿ ಹಿಡಿದುಕೊಂಡಿದ್ದ ಇಂದಿರಾಗಾಂಧಿಯ ಆ ಧೋರಣೆಗಳಿಗಿಂತ ಇನ್ನೂ ಕಾರಣವೇ ಹೊರಬಾರದೇ ಅವರ ಸರ್ಕಾರವೇ ಆಡಳಿತ ನಡೆಸುತ್ತಿರುವ ರಾಜ್ಯದಲ್ಲಿ ನಿಗೂಢವಾಗಿರುವ ಕಲ್ಬುರ್ಗೀಯವರ ಸಾವೇ ಈ ಸೋ ಕಾಲ್ಡ್ ಬರಹಗಾರರಿಗೆ ಪ್ರಮುಖವಾಗಿಬಿಡುತ್ತದೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯದ ಒಳಗೆ ನಿಂತು ಭಾರತ ವಿರೋಧಿ ಘೋಷಣೆ ಕೂಗಿದವನನ್ನು ಭಗತ್ ಸಿಂಗ್ ಮಾಡಲು ಹೋರಾಟ ಈ ಲದ್ದಿಗೇಡಿ ಜೀವಿಗಳನ್ನು ಏನೇನ್ನಬೇಕು ತಿಳಿಯುತ್ತಿಲ್ಲ. ನೋಡಿ ಪ್ರಧಾನಿಗಳೇ ದೇಶದಲ್ಲಾಗುವ ಎಲ್ಲ ಅಹಿತಕರ ಘಟನೆಗಳಿಗೆ ನೀವೊಬ್ಬರೇ ಕಾರಣ ಆದರೇ ಒಳ್ಳೆಯದೇನಾದರೂ ಆದರೇ ಅದು ಅವರ ಹೋರಾಟಕ್ಕೆ ಸಿಕ್ಕ ಜಯ ಎಂದು ಬೆನ್ನುತಟ್ಟಿಕೊಳ್ಳುತ್ತಿರುವವರ ಸಂಖ್ಯೆ ಜಾಸ್ತಿ ಆಗುತ್ತಿದೆ..ದೇಶದ ಪ್ರಧಾನಿಯೊಬ್ಬ ದಣಿವಿಲ್ಲದೇ ಇಷ್ಟೊಂದು ಕೆಲಸ ಮಾಡುತ್ತಾ ಜೊತೆಗೆ ಬೌದ್ಧಿಕ ಭಯೋತ್ಪಾದಕರ ಸುಳಿಗೆ ಸಿಲುಕಿರುವುದೂ ಕೂಡ ಇದೇ ಮೊದಲ ಬಾರಿ ಅನ್ನಿಸುತ್ತದೆ. ಒಂದೂ  ಭ್ರಷ್ಟಾಚಾರದ ಆರೋಪ ಇಲ್ಲದೇ ಎರಡು ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದೀರಾ ಅಂದರೆ ನಿಮ್ಮನ್ನ ಕೆಟ್ಟದ್ದಕ್ಕೆ ಗುರಿಯಾಗಿಸುವವರ ಸಂಖ್ಯೆಯೂ ಜಾಸ್ತಿ ಆಗುತ್ತದೆ. ಅಪ್ಪ ಕಟ್ಟಿದ ಗಾಜಿನ ಅರಮನೆಯಲ್ಲಿ ಕೂತು ನೀವು ಕಟ್ಟಿರುವ ನಿಮ್ಮದೇ ಸೌಧದ ಮೇಲೆ ಕಲ್ಲೆಸೆಯುವವರ ಸಂಖ್ಯೆಯೂ ಜಾಸ್ತಿ ಆಗಬಹುದು.

ಬಿಹಾರದಲ್ಲಿ ಅಭಿವೃದ್ದಿಯ ಮಂತ್ರ ಜಪಿಸಿದ ನಿಮಗೆ ಅಲ್ಲಿಯ ಜನ ಒಳ್ಳೆಯ ಉಡುಗೊರೆಯನ್ನೇ ನೀಡಿದ್ದಾರೆ. ಅವರಿಗೆ ಅಭಿವೃದ್ದಿ ಬೇಕಿಲ್ಲ ಸ್ವಾಮೀ !! ಅವರಿಗೆ ಬೇಕಿರುವುದು ಸರ್ವಾಧಿಕಾರಿ ಭ್ರಷ್ಟ ಆಡಳಿತಗಾರರು. ಅದಕ್ಕೇ ಅಲ್ಲಿ ಮತ್ತೆ ದೇಶ ಕಂಡ  ಮಹಾನ್ ಭ್ರಷ್ಟ ರಾಜಕಾರಣಿ ಲಾಲೂ ಯಾದವ್’ಗೆ ಅಲ್ಲಿಯ ಜನ ಮತ ನೀಡಿದ್ದು. ಹಾಗಾಗಿ ನೋಡಿ ನೀವು ಕೂಡ ಬದಲಾಗಿ, ಸ್ವಾರ್ಥಿಯಾಗಿ ಅಂದರೆ ಭ್ರಷ್ಟರಾಗಿ. ಟಿಪಿಕಲ್ ಭಾರತೀಯರ ಭ್ರಷ್ಟ ಮನಸ್ಥಿತಿಯನ್ನು ನೀವೇನಾದರೂ ಬದಲಿಸಿದರೂ ಬದಲಿಸಬಹುದು ಆದರೇ ಆಗಲೇ ಅದೇ ಭಾರತೀಯರ ಮನಸ್ಸುಗಳಲ್ಲಿ ಜಾತಿ,ಧರ್ಮ ಮತ್ತು ಪಂಥದ ವಿಷ ಬೀಜವನ್ನು ಬಿತ್ತುವ ಕೆಲಸವನ್ನು ಈಗಾಗಲೇ ಒಂದಿಷ್ಟುಜನ ಶುರು ಹಚ್ಚಿಕೊಂಡಿದ್ದಾರೆ. ಅವರುಗಳ ಕೆಲಸ ಸಮೃದ್ಧ ಭಾರತವನ್ನು ಛಿದ್ರವಾಗಿಸುವುದು.‌‌‌‌

ಮೋದಿಯವರೇ…ಅದೇನೋ ವಿಪರೀತ ಕನಸು, ಹಂಬಲ ಮತ್ತು ಆಸೆಯೊಂದಿಗೆ ನಿಮ್ಮನ್ನು ಆ ಜಾಗದಲ್ಲಿ ಕೂರಿಸುದ್ದೇವೆ. ಜೊತೆಗೆ ಕಳೆದೆರೆಡು ವರ್ಷದಲ್ಲಿ ಆ ಕನಸುಗಳಿಗೆ ಜೀವ ಬಂದ ಅನುಭವವೂ ನಮಗೆ ಆಗಿದೆ. ಆದರೆ ದೇಶದ ಹಿತಕ್ಕಾಗಿ ಹಗಲಿರುಳು ದುಡಿಯುತ್ತಿರುವ ಈ ಪ್ರಧಾನಿಗೂ ಜನ ಮೋಸ ಮಾಡಿಬಿಟ್ಟರೇ ಎಂಬ ಭಯದಿಂದ ಹೀಗೆ ಬರೆದಿದ್ದೇನೆ..ವಿಶ್ವಕ್ಕೇ ಭಾರತದ ಮಹತ್ವವೇನು ಎಂದು ಸಾರಿ ಹೇಳುತ್ತಿರುವ ಪ್ರಧಾನಿ ಇಡುವ ಪ್ರತೀ ಹೆಜ್ಜೆಯಲ್ಲೂ ಜೊತೆಯಾಗಬೇಕೆಂಬುದು ದೇಶ ಪ್ರೀತಿಸುವ ಸಾಮಾನ್ಯ ನಾಗರಿಕನಾದ ನನ್ನ ಆಸೆ‌..ಜಾತಿ, ಧರ್ಮಗಳನ್ನು ಮೀರಿದ್ದು ನನ್ನ ದೇಶ. ಒಡೆದು ಆಳುವವರ ಹುಟ್ಟಡಗಿಸುವ ಪಣ ತೊಟ್ಟು ನಡೆಯಬೇಕಿರುವ ಸಮಯ ಇದು.. “ಭಾರತ್ ಮಾತಾ ಕೀ ಜೈ” ಎನ್ನಲೂ ಆಗದ ಮನಸ್ಥಿತಿಯ ನಿರ್ಮಾಣ ಆಗಿದೆ ಅಂದರೆ ಅರವತ್ತು ವರ್ಷ ಆಳಿದವರ ಮೂಲ ಸಿದ್ಧಾಂತವೇ ಅದು ಎಂದಾಯಿತು.. ಇತಿಹಾಸ ನಿರ್ಮಿಸುತ್ತಿರುವ ಈ ಕಾಲದಲ್ಲಿ ನಾನಿದ್ದೆ ಎಂದು ಹೆಮ್ಮೆಯಿಂದ ಮುಂದೊಂದು ದಿನ ನಾ ಹೇಳುತ್ತೇನೆ ಎಂದು ನ‌ನಗನ್ನಿಸುತ್ತಿದೆ..ಒಂದೇ ಮನಸ್ಸು ಅದು ನಾನು “ಭಾರತೀಯ”..

ಜೈ ಹಿಂದ್.

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!